ವಿಷಯಕ್ಕೆ ಹೋಗು

ಮೇಷರಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಷರಾಶಿ ರಾಶಿಚಕ್ರದ (ಝೋಡಿಯಾಕ್) ಹನ್ನೆರಡು ರಾಶಿಗಳ ಪೈಕಿ ಮೊದಲನೆಯದು (ಏರಿಸ್). ಇದನ್ನು ವೃಷಭ (ಟಾರಸ್), ಪರ್ಸಿಯಸ್, ಟ್ರಯಾಂಗ್ಯುಲಮ್, ಮೀನ (ಪಿಸೀಸ್) ಮತ್ತು ಸೀಟ್ ನಕ್ಷತ್ರಪುಂಜಗಳು ಸುತ್ತುವರಿದಿವೆ. ಇದೊಂದು ಸಾಧಾರಣ ಗಮನ ಸೆಳೆಯುವ ನಕ್ಷತ್ರಪುಂಜ ಮಾತ್ರ. ನಾಲ್ಕನೆಯ ಕಾಂತಿಮಾನಕ್ಕಿಂತಲೂ ಹೆಚ್ಚಿನದಾದ ನಾಲ್ಕು ನಕ್ಷತ್ರಗಳಿವೆ. ಇವುಗಳ ಪೈಕಿ ( ಅತ್ಯುತ್ತಮ ದ್ವಿತಾರೆ (ಡಬಲ್); ಎರಡು ಸಮಘಟಕಗಳನ್ನು ಹೊಂದಿರುವಂಥದು. ಈ ನಕ್ಷತ್ರ ದೃಗ್ಜೋಡಿಯೇ ವಿನಾ ಯಮಳತಾರೆ ಅಲ್ಲ. ಇವಲ್ಲದೆ ಕೆಲವೊಂದು ಚರಕಾಂತೀಯ ನಕ್ಷತ್ರಗಳೂ ( V, R, T, U) ನೀಹಾರಿಕೆಗಳೂ (NGC 772, NGC 821, NGC 877, NGC 976, NGC 972, NGC 1156 ) ಇವೆ.

ಪುರಾಣೇತಿಹಾಸ

[ಬದಲಾಯಿಸಿ]

ಈ ರಾಶಿಯನ್ನು ಬ್ಯಾಬಿಲೋನಿಯನ್ನರು, ಹೀಬ್ರೂಗಳು, ಪರ್ಷಿಯನ್ನರು ಮತ್ತು ಅರಬ್ಬರು ಟಗರು ಎಂಬ ಹೆಸರಿನಿಂದ ಕರೆದಿದ್ದರು. ಚಿನ್ನದ ತುಪ್ಪಳಕ್ಕೆ ಸಂಬಂಧಿಸಿದ ಗ್ರೀಕ್ ಪುರಾಣ ಕಥೆಯೊಂದು ಈ ರಾಶಿಯ ಉಗಮ ಕುರಿತಂತೆ ವಿವರ ನೀಡುತ್ತದೆ. ತಿಸಾಲೆಯ ರಾಜಕುಮಾರರಾದ ಫಿರ್ಕ್‍ಸಿಸ್ ಮತ್ತು ಹೆಲ್ಲಿ ಎಂಬವರನ್ನು ಅವರ ಮಲತಾಯಿ ಹಿಂಸಿಸುತ್ತಿರುತ್ತಾಳೆ. ವಾಗ್ಮಿತೆ, ಚಾತುರ್ಯ, ಚೌರ್ಯ ಮೊದಲಾದವುಗಳ ಅಧಿದೇವತೆಯೂ ದೇವತೆಗಳ ದೂತನೂ ಆದ ಮಕ್ರ್ಯುರಿಗೆ ಈ ರಾಜಕುಮಾರರ ಬಗ್ಗೆ ಕನಿಕರ ಹುಟ್ಟಿ ಅವರು ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಚಿನ್ನದ ತುಪ್ಪಳವನ್ನು ಹೊಂದಿದ್ದ ಟಗರನ್ನು ಕಳುಹಿಸುತ್ತಾನೆ. ಅದು ಆ ರಾಜಕುಮಾರನನ್ನು ತನ್ನ ಬೆನ್ನಿನ ಮೇಲೆ ಕುಳ್ಳಿರಿಸಿಕೊಂಡು, ಭೂಮಿಯಿಂದ ಮೇಲೆ ಇರುವಂತೆ ಚಲಿಸುತ್ತ, ಯುರೋಪ್ ಮತ್ತು ಏಷ್ಯಗಳ ನಡುವೆ ಇರುವ ದಾರಿಯನ್ನು ಅಡ್ಡಹಾಯುವವರೆಗೂ ಮುಂದೆ ಹೋಗುತ್ತದೆ. ಟಗರಿನ ಕೂದಲನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ಹೆಲ್ಲಿಯ ಕೈಹಿಡಿತ ತಪ್ಪುತ್ತದೆ. ಇದರಿಂದ ಆಳ ಸಮುದ್ರದ ಒಳಗೆ ಬೀಳುತ್ತಾನೆ. ಈಗಲೂ ಆ ಸಮುದ್ರಕ್ಕೆ ಹೆಲೀಸ್‍ಪಾಂಟ್ ಎಂದೇ ಹೆಸರು. ಸುರಕ್ಷಿತವಾಗಿ ತಪ್ಪಿಸಿಕೊಂಡಿದ್ದ ಕೃತಜ್ಞತೆಯನ್ನು ದೈವಗಳಿಗೆ ಸೂಚಿಸುವ ಸಲುವಾಗಿ ಫಿರ್ಕ್‍ಸಿಸ್ ಕಾಲ್ಚಿಸ್ ಪಟ್ಟಣದ ಬ್ಲ್ಯಾಕ್ ಸೀ ಎಂಬಲ್ಲಿಗೆ ಬಂದು ಟಗರನ್ನು ಬಲಿಕೊಡುತ್ತಾನೆ. ಚಿನ್ನದ ತುಪ್ಪಳವನ್ನು ಆ ದೇಶದ ರಾಜನಿಗೆ ಬಹುಮಾನವಾಗಿ ನೀಡುತ್ತಾನೆ. ಮುಂದೆ ಅದನ್ನು ಜ್ಯೂಸ್ ಮತ್ತು ಹೀರಾಳ ಮಗನಾದ ಆರೀಸನ್ ತೋಪಿನಲ್ಲಿ ನೇತುಹಾಕಲಾಗಿರುತ್ತದೆ. ಅನಂತರ ಜೀಸನ್ ಮತ್ತು ಅವನ ಆಗೊನಾಟ್ ಅದನ್ನು ಅಪಹರಿಸುತ್ತಾರೆ. ಫಿರ್ಕ್‍ಸಿಸನಿಗೆ ಸಲ್ಲಿಸಿದ ಸೇವೆಗಾಗಿ ಜ್ಯೂಪಿಟರ್ ಟಗರಿಗೆ ನಕ್ಷತ್ರಪದವಿಯನ್ನು ಕರುಣಿಸುತ್ತಾನೆ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಮೇಷರಾಶಿ&oldid=829331" ಇಂದ ಪಡೆಯಲ್ಪಟ್ಟಿದೆ