ಮೇಕೆ ದಾಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೇಕೆದಾಟು ಸಂಗಮ

ಮೇಕೆದಾಟು - ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯದ ನಡುವೆ ಕಾವೇರಿ ನದೀ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ವಿಹಾರಸ್ಥಳ, ಬೆಂಗಳೂರಿನಿಂದ ೯೦ ಕಿ. ಮೀ. ದೂರದಲ್ಲಿದೆ. ಬೆಂಗಳೂರಿನ ದಕ್ಷಿಣಕ್ಕೆ ಸಾತನೂರು ಮಾರ್ಗವಾಗಿ 113 ಕಿಮೀ. ಕನಕಪುರದಿಂದ ಸಾತನೂರು, ಆಲಹಳ್ಳಿ, ಉಯ್ಯಂಬಳ್ಳಿಗಳ ಮಾರ್ಗವಾಗಿ ದಕ್ಷಿಣದಲ್ಲಿ ಸುಮಾರು 40 ಕಿಮೀ ದೂರದಲ್ಲಿದೆ.

ಕನ್ನಡ ಭಾಷೆಯಲ್ಲಿ ಅದರ ಅರ್ಥ ಮೇಕೆ ಹಾರುವಷ್ಟು ಸ್ಥಳ. ಇಲ್ಲಿ ಕಾವೇರಿನದಿ, ಆಳವಾದ ಕಂದರಕ್ಕೆ ಧುಮುಕುತ್ತದೆ. ಅದರ ಅಗಲ ಅಷ್ಟೇನು ಹೆಚ್ಚಾಗಿಲ್ಲ. ಕೇವಲ ಮೇಕೆ ಹಾರಿದಾಟುವಷ್ಟು ಜಾಗಮಾತ್ರ.

ಕಾವೇರಿ-ಅರ್ಕಾವತಿ ನದಿಯ ಸಂಗಮದ ಹತ್ತಿರದ ವರೆಗೆ ಕಾರ್-ಡ್ರೈವ್ ಮಾಡಿಹೋಗಬಹುದು. ಇದರ ನಂತರ, ನದಿಯನ್ನು 'ತೆಪ್ಪ,' ದಲ್ಲಿ ದಾಟಬಹುದು. ನೀರು ಆಳವಿಲ್ಲದಿದ್ದರೆ ನಡೆದೇ ಹೋಗಬಹುದು. ಇಲ್ಲಿಂದ ಮೇಕೆದಾಟು ೪ ಕಿ. ಮೀ ದೂರವಿದೆ. ಮೇಕೆದಾಟು ನ ವರೆಗೆ, ಹೋಗಲು ಕೇವಲ ೧ ಬಸ್ ಇದೆ. 'ಮಾನ್ಸೂನ್,' ಸಮಯದಲ್ಲಿ ಅಲ್ಲಿನ ಬಂಡೆಗಳಮೇಲೆ ಹತ್ತಲು ಬಹಳ ಕಷ್ಟ. ಜಾರುತ್ತವೆ. ಮತ್ತೊಂದು ಫಾಲ್ಸ್ 'ಚುಂಚಿ ಜಲಪಾತ,' ಹತ್ತಿರದಲ್ಲಿದೆ. ಸಂಗಮದ ಹತ್ತಿರದಿಂದ ಸ್ವಲ್ಪ ಬೇರೆದಿಕ್ಕಿಗೆ, ಹೋಗಬೇಕು.

ಪ್ರವಾಸೀ ಆಕರ್ಷಣೆ[ಬದಲಾಯಿಸಿ]

ಕನಕಪುರದ ಮಾರ್ಗವಾಗಿ ಅರ್ಕಾವತಿ ನದಿ ಸುಮಾರು 32 ಕಿಮೀ ಮೈದಾನ ಪ್ರದೇಶದಲ್ಲಿ ಹರಿದು ಕಡೆಗೆ ತಾಲ್ಲೂಕಿನ ದಕ್ಷಿಣದ ಪ್ರದೇಶವಾದ ಅರಣ್ಯವನ್ನು ಹೊಕ್ಕು ಕಾವೇರಿಯನ್ನು ಸಂಗಮ ಎನ್ನುವೆಡೆ ಸೇರುತ್ತದೆ. ಅಲ್ಲಿ ಸಂಗಮೇಶ್ವರನ ದೇವಾಲಯ ಮತ್ತು ಒಂದು ಪ್ರವಾಸಿ ಮಂದಿರ ಇವೆ. ಇಲ್ಲಿಂದ ಅರ್ಕಾವತಿಯನ್ನು ದಾಟಿ ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿಮೀ ದೂರದಲ್ಲಿ ಮೇಕೆದಾಟು ಸಿಕ್ಕುತ್ತದೆ. ಪ್ರವಾಸಿಗರಿಗೆ ಮುಖ್ಯ ಆಕರ್ಷಣೀಯ ಕೇಂದ್ರ ಮೇಕೆದಾಟು ಎಂದು ಪ್ರಸಿದ್ಧವಾಗಿದ್ದರೂ ಆ ಆಕರ್ಷಣೀಯ ಪೂರ್ವ ಸಿದ್ಧತೆ ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿಯಿಂದ ಕಾವೇರಿ ದಟ್ಟವಾದ ಅರಣ್ಯದ ನಡುವೆ ಮುಂದೆ ಪ್ರವಹಿಸಿದಂತೆ ಅದರ ಪಾತ್ರ ಕ್ರಮಕ್ರಮವಾಗಿ ಕಿರಿದಾಗುತ್ತ ಬರುತ್ತದೆ. ಅಲ್ಲಿಂದ ಇಳಿಜಾರು ಹೆಚ್ಚುತ್ತ ಹೋಗುವುದರಿಂದ ನೀರಿನ ಪ್ರವಾಹ ಭೀರ್ಗರೆಯುತ್ತ ವನಾಂತರ ಪ್ರದೇಶವೆಲ್ಲ ಗಂಭೀರ ಸ್ವರದಿಂದ ತುಂಬಿರುತ್ತದೆ. ಶತಮಾನಗಳ ಪ್ರವಾಹದ ಹೊಡೆತಕ್ಕೆ ಸಿಕ್ಕಿದ ಇಕ್ಕೆಲಗಳ ಬೆಟ್ಟಗಳ ಬಂಡೆಗಳು, ಚಿತ್ರ ವಿಚಿತ್ರವಾಗಿ ಕೊರೆದು ಹೋಗಿ ನಿಸರ್ಗ ನಿರ್ಮಿಸಿರುವ ಮಹೋನ್ನತ ಶಿಲ್ಪಕಲಾ ಕೃತಿಗಳಿಂದ ಕಂಗೊಳಿಸುತ್ತಿರುತ್ತವೆ. ಪಾತಾಳದಲ್ಲಿ ಡುಮಡುಮನೆ ಇಳಿದೋಡುತ್ತಿರುವ ನದಿಯ ಎತ್ತರವಾದ ಎರಡು ಪಾಶ್ರ್ವಗಳಲ್ಲೂ ಮರಗಳ ಸಾಲಿನ ಹಸುರಿನ ಸಾಂದ್ರತೆ ಪ್ರಪಾತದ ಪ್ರವಾಹದ ಮೇಲೆ ಕತ್ತಲು ಗರೆಯುತ್ತ ಅದರ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಂಥ ಗಂಭೀರತೆಯ ನಡುವೆ ಮುಂದೆ ಪ್ರವಹಿಸಿದಂತೆ ನದಿಯ ಪಾತ್ರ ತೀರ ಇಕ್ಕಟ್ಟಾಗುತ್ತ ಬಂದು ಕೊನೆಗೆ ಮೇಕೆದಾಟನ್ನು ಸೇರುತ್ತದೆ. ಇಲ್ಲಿ ನದಿಯ ಪಾತ್ರ ಮೇಕೆ ದಾಟಬಲ್ಲಷ್ಟು ಕಿರಿದಾಗಿದೆ ಎಂದು ಉತ್ಪ್ರೇಕ್ಷೆಯಿಂದ ಹೇಳುವಷ್ಟು ಕಿರಿದಾಗಿದೆ ಎಂದೇ ಇಲ್ಲಿಗೆ ಮೇಕೆದಾಟು ಎಂಬ ಹೆಸರು. ನದಿಯ ಎಡದಡದಲ್ಲಿ ಧುಮ್ಮಿಕ್ಕುವ ನೀರಿಗೆ ಸೋಂಕುವಂತೆ ಪಕ್ಕದಲ್ಲಿ ಅಗಲವಾದ ಚಪ್ಪಟೆ ಬಂಡೆಕಲ್ಲೊಂದಿದೆ. ಇದಕ್ಕೆ ಟೇಬಲ್‍ರಾಕ್ ಎಂದು ಹೆಸರು. ಪ್ರವಾಸಿಗರು ಇದರ ಮೇಲೆ ನಿಂತು ನಿಸರ್ಗದ ರಮ್ಯ ಸೊಬಗನ್ನು ವೀಕ್ಷಿಸುವುದು ವಾಡಿಕೆ. ನದಿ ಮುಂದಕ್ಕೆ ಪ್ರವಹಿಸಿದಂತೆ ಅದರ ಪಾತ್ರ ವಿಸ್ತರಿಸುತ್ತ ಹೋಗುತ್ತದೆ. ಜಲರಾಶಿ ಹರಡಿಕೊಂಡು ಹೆಚ್ಚು ಇಳಿ ಜಾರಿಲ್ಲದ ಬಯಲಿನಲ್ಲಿ ನಿಧಾನವಾಗಿ ಮುಂದೆ ಸಾಗುತ್ತ ಕೊಳ್ಳೇಗಾಲ ತಾಲ್ಲೂಕಿನ ಪೂರ್ವ ಮತ್ತು ದಕ್ಷಿಣದ ಗಡಿಗಳನ್ನೂ ಆವರಿಸಿದಂತೆ ಹರಿದು ತಮಿಳುನಾಡನ್ನು ಸೇರುತ್ತದೆ.

ಬೆಂಗಳೂರು ಸಿಟಿಮಾರ್ಕೆಟ್ ನಿಂದ, ಕನಕಪುರಕ್ಕೆ ಬಸ್ ಸೌಕರ್ಯವಿದೆ[ಬದಲಾಯಿಸಿ]

'ರೂಟ್ ನಂಬರ್- ೧,' ರಲ್ಲಿ, ರಸ್ತೆಯಲ್ಲಿ ಬರುವ, ಸ್ಥಳಗಳು : 'ಕನಕಪುರ,', 'ಸಾಥನೂರು', 'ಚುಂಚಿ ಫಾಲ್ಸ್', 'ಸಂಗಮ', 'ಮೇಕೆದಾಟು,' ಸರಕಾರಿ ಕೆ. ಎಸ್. ಆರ್. ಟಿ. ಸಿ ಬಸ್ ಗಳು ಮತ್ತು ಖಾಸಗೀ ಬಸ್ ಗಳೂ ಸಿಗುತ್ತವೆ. ಸಿಟಿಮಾರ್ಕೆಟ್ ನಿಂದ ಕನಕಪುರದ ವರೆಗಿದೆ. ಆದರೆ, ಕನಕಪುರದಿಂದ ಸಂಗಮಕ್ಕೆ ಕೆಲವೇ ಬಸ್ ಗಳಿವೆ. ಈ ಜಾಗಕ್ಕೆ ಹೋಗಿಬರಲು ಸರಿಯಾದ ಸಮಯ, ಮಳೆಗಾಲದ ನಂತರವೇ.

ರಾಜ್ಯಸರ್ಕಾರ, 'ಪ್ರವಾಸೋದ್ಯಮ,' ಕ್ಕೆ ಹೆಚ್ಚು ಒತ್ತುನೀಡಬೇಕು[ಬದಲಾಯಿಸಿ]

ಮಳೆಗಾಲದ ಬಳಿಕ, ಆಗಸ್ಟ್ ನಿಂದ ಜನವರಿ ತಿಂಗಳಿನಲ್ಲಿ ಅತ್ಯಂತ ಸರಿಯಾದ ಸಮಯ. ಊಟ ಮತ್ತು ವಸತಿಯ ವ್ಯವಸ್ಥೆಗಳಿಲ್ಲ. ಬೆಳಿಗ್ಯೆ ಬಂದು ರಾತ್ರಿಯವರೆಗಿದ್ದು ಮತ್ತೆ ವಾಪಸ್ ಹೋಗಬೇಕು. ಊಟವನ್ನು ಕಟ್ಟಿಸಿಕೊಂಡು ಬರುವುದು ಒಳ್ಳೆಯದು. ಯಾವ 'ರೆಸ್ಟೋರೆಂಟ್,' ಅಥವಾ 'ಖಾನಾವಳಿ,' ಗಳಿಲ್ಲ. ಕೆಲವು ಅಂಗಡಿಗಳು, ಕೇವಲ 'ಕೂಲ್ ಡ್ರಿಂಕ್ಸ್' ಮತ್ತು 'ಸ್ನಾಕ್ಸ್,' ಗಳನ್ನು ಮಾತ್ರ, ಸರಬರಾಜು ಮಾಡುತ್ತವೆ. ಅದ್ದರಿಂದ ಪರ್ಯಟಕರು ತಮ್ಮ ಊಟವನ್ನು ತಾವೇ ತೆಗೆದುಕೊಂಡು ಹೋಗಿ, ಅದೇ ದಿನದ ರಾತ್ರಿ ವಾಪಸ್ ಆಗಬೇಕಾಗುತ್ತದೆ.