ವಿಷಯಕ್ಕೆ ಹೋಗು

ಮಾನ್ಸೂನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಗರಕೊಯಿಲಿನ ಹತ್ತಿರ ಬರುತ್ತಿರುವ ಮಾನ್ಸೂನ್ ಮೋಡಗಳು

ಮಾನ್‍ಸೂನ್ ಎಂದರೆ ವಿಶೇಷತಃ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಏಷ್ಯಗಳ ಮೇಲೆ ಶ್ರಾಯಿಕವಾಗಿ ಬೀಸುವ ಕ್ಲುಪ್ತ ಮಾರುತ, ಋತು ಎಂದು ಅರ್ಥ ನೀಡುವ "ಮೌಸಿಮ್" ಎಂಬ ಅರಬ್ಬೀ ಭಾಷೆಯ ಪದದಿಂದ ಮಾನ್‍ಸೂನ್ ಬಂದಿದೆ. ಅರೇಬಿಯನ್ ಸಮುದ್ರದ ಮೇಲೆ ಬೀಸುವ ವಿಪರ್ಯಯ ಮಾರುತಗಳ ವ್ಯವಸ್ಥೆಯನ್ನು ವಿವರಿಸಲು ನಾವಿಕರು ಹಲವು ಶತಮಾನಗಳಿಂದ ಈ ಪದವನ್ನು ಬಳಸುತ್ತಿದ್ದರು. ಈ ಮಾರುತಗಳು ವರ್ಷದಲ್ಲಿ ಆರು ತಿಂಗಳ ಕಾಲ ಈಶಾನ್ಯದಿಂದಲೂ ಉಳಿದ ಆರು ತಿಂಗಳಕಾಲ ನೈರುತ್ಯದಿಂದಲೂ ಬೀಸುವುವು. ಮಾನ್‍ಸೂನಿನ ಕರಾರುವಾಕ್ಕಾದ ವ್ಯಾಖ್ಯೆಯ ಬಗ್ಗೆ ಅಭಿಪ್ರಾಯ ಭೇದವಿದೆಯಾದರೂ ವರ್ಷದ ಒಂದು ಭಾಗದಲ್ಲಿ ಕ್ಲುಪ್ತವಾಗಿ ಹಾಗೂ ನಿಯತವಾಗಿ ಬೀಸುವಂಥ ಮಾರುತವನ್ನು ಸೂಚಿಸಲು ಈ ಪದವನ್ನು ಬಳಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಋತುಗಳೊಡನೆ ವ್ಯತ್ಯಯಗೊಳ್ಳುವ ಬೃಹತ್ ಪ್ರಮಾಣದಲ್ಲಿ ಭೂಮಿ ಹಾಗೂ ಸಾಗರ ಪ್ರದೇಶಗಳು ಭೇದಾತ್ಮಕವಾಗಿ ಬಿಸಿಯಾಗುವುದೇ ಆಗಿದೆ. ಸೌರಶಕ್ತಿಯಲ್ಲಿಯ ಋತು ಸಂಬಂಧಿಸಿದಂತೆ ಖಂಡಗಳು ಹಾಗೂ ಸಾಗರಗಳು ಗಮನಾರ್ಹ ವ್ಯತ್ಯಾಸ ಪ್ರದರ್ಶಿಸುತ್ತವೆ. ಭೂಮಿಯ ರಾಸಾಯನಿಕ ಸಂಯೋಜನೆ ಹಾಗೂ ಅದರ ಮಣ್ಣಿನ ಗುಣ ಲಕ್ಷಣದ ಪರಿಣಾಮವಾಗಿ ಭೂಮಿಗೆ ಉಷ್ಣ ದಹನ ಗಮನೀಯವಾಗಿ ಮಂದಪ್ರಕ್ರಿಯೆಯಾಗಿದೆ. ಉದಾಹರಣೆಗೆ ಬೇಸಗೆಯಲ್ಲಿ ಖಂಡಗಳು ಪಡೆಯುವ ಸೌರ ಶಕ್ತಿಯಿಂದ ಕೆಲವೇ ಮೀಟರುಗಳಷ್ಟು ಮಂದದ ಭೂಮಿಯ ಪದರ ಕಾಯುವುದು; ಹಾಗಾಗಿ ಖಂಡಗಳ ಮೇಲ್ಮೈಯನ್ನು ತಲಪುವ ಸೌರಶಕ್ತಿಯ ಹೆಚ್ಚಿನ ಭಾಗ ಭೂಮಿಯ ಮೇಲ್ಮೈಯನ್ನು ಬಿಸಿಮಾಡುವುದಕ್ಕಿಂತ ಅಲ್ಲಿಯ ಗಾಳಿಯನ್ನು ಬಿಸಿಮಾಡುವುದರಲ್ಲಿಯೇ ಉಪಯೋಗವಾಗಿ ಬಿಡುತ್ತದೆ. ಗಾಳಿಯ ಚಟುವಟಿಕೆಯಿಂದ ಉಂಟಾಗುವ ನೀರಿನ ಕಲಕುವಿಕೆಯಿಂದ ಸಾಗರದಲ್ಲಿ ಹೆಚ್ಚು ಆಳಕ್ಕೆ ಇದು ಪ್ರವೇಶಿಸಬಲ್ಲುದು, ಇದರಿಂದ ಸೌರಶಾಖದ ಸ್ವಲ್ಪ ಭಾಗ ಮಾತ್ರ ಗಾಳಿಯನ್ನು ಬಿಸಿಮಾಡಲು ಲಭ್ಯವಾಗುತ್ತದೆ. ಇದರ ಒಟ್ಟು ಪರಿಣಾಮವೆಂದರೆ, ಬೇಸಗೆಯಲ್ಲಿ ಉಷ್ಣತೆಯ ಹೆಚ್ಚಳ ಖಂಡಗಳಿಗಿಂತ ಸಾಗರಗಳ ಮೇಲೆ ತುಂಬ ಕಡಿಮೆಯಾಗಿರುವುದು. ಒಂದೇ ಅಕ್ಷಾಂಶದಲ್ಲಿರುವ ಪ್ರದೇಶಗಳಲ್ಲಿ ಬೇಸಗೆಯ ಮಾಧ್ಯ ಉಷ್ಣತೆ ಅದೇ ಅಕ್ಷಾಂಶದಲ್ಲಿರುವ ಪ್ರದೇಶಗಳಲ್ಲಿ ಬೇಸಗೆಯ ಮಾಧ್ಯ ಉಷ್ಣತೆ ಅದೇ ಅಕ್ಷಾಂಶದಲ್ಲಿರುವ ಸಾಗರಗಳದ್ದಕ್ಕಿಂತ 5 ರಿಂದ 100ಅ ಅಧಿಕವಾಗಿರುತ್ತದೆ. ಚಳಿಗಾಲದಲ್ಲಿ ಈ ಪರಿಸ್ಥಿತಿ ವಿಪರ್ಯಯಗೊಳ್ಳುತ್ತದೆ. ಮತ್ತು ಸಾಗರಗಳ ಹೆಚ್ಚುವರಿ ಶಾಖ ಸಂಗ್ರಹಣೆಯಿಂದಾಗಿ ಭೂಮಿಯ ಮೇಲಿರುವುದಕ್ಕಿಂತ ಸಾಗರದ ಮೇಲೆ ಹೆಚ್ಚು ಉಷ್ಣತೆಗೆ ಕಾರಣವಾಗುತ್ತದೆ. ಭೂಮಿ ಹಾಗೂ ಅಕ್ಕ ಪಕ್ಕದ ಸಮುದ್ರ ಭೇದಾತ್ಮಕ ಕಾಯುವಿಕೆಯಿಂದಾಗಿ ಕಾಲ ಮತ್ತು ಸ್ಥಳಗಳ ಅಲ್ಪ ಅಂತರದಲ್ಲಿಯೂ ಭೂ ಹಾಗೂ ಸಮುದ್ರ ಮಂದ ಮಾರತಗಳುಂಟಾಗುತ್ತವೆ ಎಂಬುದು ಸುಪರಿಚಿತ. ಭೂಮಿಯ ಪರಿಭ್ರಮಣದಿಂದ ಭೂಮಿ ಹಾಗೂ ಸಮುದ್ರ ಮಂದ ಮಾರುತಗಳು ಪ್ರಭಾವಿತಗೊಳ್ಳುವುದಿಲ್ಲವಾದರೂ ಅವುಗಳಿಗೂ ಮಾನ್‍ಸೂನ್ ಮಾರುತಗಳಿಗೂ ಹೆಚ್ಚಿನ ಸಾಮ್ಯವಿದೆ. ಸೂರ್ಯ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲಿರುವಂಥ ಔತ್ತರೇಯ ಬೇಸಗೆಯಲ್ಲಿ ಮಾನ್‍ಸೂನ್ ಮಾರುತಗಳು ಸಾಗರ ಮಂದ ಮಾರುತಗಳ ದೈನಿಕ ಆವರ್ತದಂತೆ ಸಾಗರದಿಂದ ಭೂ ಪ್ರದೇಶಕ್ಕೆ ಬೀಸುತ್ತವೆ; ಆದರೆ ಔತ್ತರೇಯ ಚಳಿಗಾಲದಲ್ಲಿ, ಸೂರ್ಯ ದಕ್ಷಿಣಾರ್ಧ ಗೋಳಕ್ಕೆ ಚಲಿಸಿ, ಮಕರ ಸಂಕ್ರಾಂತಿ ವೃತ್ತದಲ್ಲಿರುವಾಗ, ಭೂಮಂದಾನಿಲದ ರಾತ್ರಿ ಆವರ್ತದಂತೆ ಮಾರುತಗಳು ಭೂಮಿಯಿಂದ ಸಾಗರಕ್ಕೆ ಬೀಸುತ್ತವೆ.

ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಉತ್ತರಾರ್ಧಗೋಳದಲ್ಲಿ ಹಾಗೂ ಜನವರಿ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ದಕ್ಷಿಣಾರ್ಧ ಗೋಳದಲ್ಲಿ-ಹೀಗೆ ಎರಡು ಗೋಳದಲ್ಲಿಯೂ ಬೇಸಗೆಯಲ್ಲಿ ಮಾನ್‍ಸೂನ್ ಮಾರುತಗಳು ಬಲವಾಗಿರುತ್ತವೆ. ಬಾಂಗ್ಲಾದೇಶ, ಬರ್ಮ, ಥಾಯ್ಲೆಂಡ್, ಕಾಂಬೋಡಿಯ, ಲಾವೋಸ್, ಮಲಯ, ವಿಯಟ್ನಾಮ್, ಸಿಂಗಪುರ, ಚೀನ ಮತ್ತು ಜಪಾನ್ ಹಾಗೂ ಸ್ವಲ್ಪಮಟ್ಟಿಗೆ ಆಫ್ರಿಕದತ್ತ ಉತ್ತರಾರ್ಧಗೋಳದಲ್ಲಿ ಆಳವಾಗಿ ಭೇದಿಸುತ್ತವೆ.

ಅದೇ ಮತ್ತೊಂದು ಕಡೆ, ಜನವರಿಯಲ್ಲಿ ಈಶಾನ್ಯ ವಾಣಿಜ್ಯ ಮಾರುತಗಳು ದಕ್ಷಿಣಾಭಿಮುಖವಾಗಿ ದಕ್ಷಿಣ-ಅಮೆರಿಕ, ಪೂರ್ವ-ಆಫ್ರಿಕ, ಈಶಾನ್ಯ-ಆಸ್ಟ್ರೇಲಿಯಗಳತ್ತ ಚಲಿಸುತ್ತವೆ. ಈ ಅವಧಿಯಲ್ಲಿ ಈಶಾನ್ಯ ವಾಣಿಜ್ಯಮಾರುತಗಳ ಒಂದು ಭಾಗ ಬಂಗಾಳಕೊಲ್ಲಿಯ ದಕ್ಷಿಣದಲ್ಲಿ ಹಾದು ಭಾರತ ಪರ್ಯಾಯ ದ್ವೀಪದ ದಕ್ಷಿಣಾರ್ಧದಲ್ಲಿ ಆಲಿಕಲ್ಲು ಕೂಡಿದ ಮಳೆಯನ್ನುಂಟುಮಾಡುತ್ತದೆ. ಇದು ಭಾತರದ ಈಶಾನ್ಯ ಮಾನ್‍ಸೂನ್ ಎಂದು ಸುಪಮರಿಚಿತವಾಗಿದೆ. ಸಾಮಾನ್ಯವಾಗಿ ಹೇಳುವುದಾದರೆ ತಂಪಿನಿಂದ ಬೆಚ್ಚನೆಯ ಗೋಳಾರ್ಧಗಳಿಗೆ ಬೃಹತ್ ಪ್ರಮಾಣದ ವಾಯುಚಲನೆಯಿಂದ ಪ್ರಭಾವಿತವಾಗುವ ಭೂಮಿಯ ಪ್ರದೇಶಗಳು ಪ್ರಪಂಚದ ಮುಖ್ಯ ಮಾನ್‍ಸೂನ್ ಪ್ರದೇಶಗಳಾಗಿವೆ.

ಉತ್ತರ ಆಸ್ಟ್ರೇಲಿಯ, ಆಫ್ರಿಕ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಭಾಗಗಳಲ್ಲಿ ಋತು ಸಂಬಂಧ ಮಾರುತ ಬದಲಾವಣೆಗಳುಂಟಾಗುವ ಅಂತ ತಿಳಿದು ಬಂದಿದ್ದರೂ ಇತರ ಖಂಡಾಂತರ ಪ್ರದೇಶಗಳೊಡನೆ ಸಂಬಂಧಿಸಿದ ಮಾನ್ ಸೂನ್ ಚಲನೆಗಳು ಭಾರತದ ಮಾನ್‍ಸೂನ್ ಮಾರುತಗಳಷ್ಟು ಗಮನಾರ್ಹವಾಗಿಲ್ಲ. ಜೂನ್-ಜುಲೈ ಬೇಸಗೆಯ ತಿಂಗಳುಗಳಲ್ಲಿ ಅಟ್ಲಾಂಟಿಕ್‍ನಿಂದ ಯೂರೊಪಿಗೆ ಬೀಸುವ ವಾಯವ್ಯ ಮಾರುತಗಳ ಪ್ರವೃತ್ತಿಯನ್ನು ಯೂರೋಪಿಯನ್ ಮಾನ್‍ಸೂನ್ ಎಂದು ಕೆಲವೊಮ್ಮೆ ಕರೆಯಲಾಗುವುದು.

ಜನವರಿ ಮತ್ತು ಜುಲೈಗಳಿಗೆ ಅಂತರ ಉಷ್ಣತೆ ಮುಂಚೂಣೆ (ಐ.ಟಿ.ಎಫ್. ಇದು ಅಂತರ ಉಷ್ಣತೆ ಸಂಗಮ ವಲಯ, ಐಟಿಸಿಜಡ್ ಎಂದು ಕೂಡ ಪರಿಚಿತವಾಗಿದೆ) ಮತ್ತು ಪ್ರಮುಖ ವಾಯು ಮೇಲ್ಮೈ ಪ್ರವಾಹಗಳ ಚಿತ್ರಣವನ್ನು ಚಿತ್ರ 1 ಮತ್ತು 2 ರಲ್ಲಿ ತೋರಿಸಿದೆ. ಉತ್ತರ ಮತ್ತು ದಕ್ಷಿಣ ಗೋಳಾರ್ಧಗಳ ವಾಣಿಜ್ಯ ಮಾರುತಗಳ ನಡುವಣ ಎಲ್ಲೆ ಗೆರೆಯೇ ಐ.ಟಿ.ಎಫ್. ಆಗಿದೆ. ಕೆಲವು ವಲಯಗಳಲ್ಲಿ ಇದು ಗಣನೀಯವಾಗಿ ಮೋಡಗಳಿಂದಾವೃತವಾದ ಹಾಗೂ ಮಳೆ ಬೀಳುವ ಪ್ರದೇಶವಾಗಿದೆ. ಆದರೆ ಬೇರೆ ಕೆಲವು ವಲಯಗಳಲ್ಲಿ ಐ.ಟಿ.ಎಫ್.ನ ಹವಾಗುಣ ಗಮನಾರ್ಹ ಬದಲಾವಣೆಯಿಲ್ಲದ, ವ್ಯಾಪಕ ಮುಂಚೂಣೆಯಾಗಿರುವಂತೆ ತೋರುತ್ತದೆ. ವಾಯು ಪ್ರವಾಹಗಳು ದಕ್ಷಿಣದಿಂದ ಭೂಮಧ್ಯ ರೇಖೆಯನ್ನು ದಾಟಿದಂತೆ ಬಲಕ್ಕೆ ಹೇಗೆ ಪಸರಣಗೊಳ್ಳುವುದೆಂಬುದನ್ನು ಗಮನಿಸಿ; ಇದು ಪಶ್ಚಿಮದಿಂದ ಪೂರ್ವಕ್ಕೆ ಭೂಮಿಯ ಪರಿಭ್ರಮಣದ ಫಲಿತಾಂಶವಾಗಿದೆ.

ಮಾನ್‍ಸೂನ್ ಮಾರುತಗಳನ್ನು ಮಾರುತಗಳ ವಿಪರ್ಯಯತೆಯಿಂದ ಗುರುತಿಸಲಾಗುವುದಾದರೂ ಬಹುಮಟ್ಟಿಗೆ ಮಳೆ ಬೀಳುವಿಕೆಯಿಂದಲೇ ಅವುಗಳಿಗೆ ಪ್ರಾಮುಖ್ಯ ಉಂಟಾಗಿದೆ. ಮಾನ್‍ಸೂನ್ ಮಾರುತಗಳ ಪ್ರಮುಖ ಪ್ರದೇಶಗಳು ಇಂತಿವೆ: (ಅ) ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ: ಈ ದೇಶಗಳು ಈಶಾನ್ಯ ಮತ್ತು ನೈಋತ್ಯ ಎರಡೂ ಮಾನ್‍ಸೂನ್ ಮಾರುತಗಳಿಂದ ಪ್ರಭಾವಿತವಾಗುತ್ತವೆ. ಇವುಗಳ ಅವಧಿ ಕ್ರಮವಾಗಿ ಜೂನ್‍ನಿಂದ ಸೆಪ್ಟೆಂಬರ್ ಮತ್ತು ಡಿಸೆಂಬರ್‍ನಿಂದ ಮಾರ್ಚ್ ಆಗಿರುತ್ತದೆ.

(ಆ) ಇಂಡೋಚೀನ, ಮಲಯ ಮತ್ತು ಫಿಲಿಪೀನ್ಸ್: ಇಲ್ಲಿಯ ಮಾನ್‍ಸೂನ್ ಲಕ್ಷಣಗಳು ಭಾರತದಲ್ಲಿರುವಂತೆಯೇ ಇವೆ. ಆದಾಗ್ಯೂ ಮಳೆಯ ಮೊತ್ತ ಕಡಿಮೆ ಮತ್ತು ಸ್ಥಲಸ್ವರೂಪ ಗಮನಾರ್ಹ ಪಾತ್ರ ವಹಿಸದಿರುವುದರಿಂದ ಮಳೆ ಹೆಚ್ಚು ಸಮನಾಗಿ ಹಂಚಿಹೋಗಿರುತ್ತದೆ.

(ಇ) ಪೂರ್ವ ಆಫ್ರಿಕ ಮತ್ತು ಅಕ್ಕಪಕ್ಕದ ಪ್ರದೇಶಗಳು: ಪರ್ವತಜನಿತ ಪರಿಣಾಮದಿಂದಾಗಿ ಯೆಮೆನ್ ಮತ್ತು ಇಥಿಯೋಪಿಯಗಳಲ್ಲಿ ಹೆಚ್ಚು ಮಳೆ ಬೀಳುತ್ತದೆ. ಈ ಮಾನ್‍ಸೂನ್ ಸ್ಥಿತಿಗೂ ಭಾರತೀಯ ಮಾನ್‍ಸೂನ್ ಸ್ಥಿತಿಗೂ ಸಂಬಂಧವಿದೆ. (ಈ) ಪಶ್ಚಿಮ ಆಫ್ರಿಕ: ಗಿನಿ ಕರಾವಳಿ ಮಾನ್‍ಸೂನ್ ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಮಾರುತಗಳು ನೈಋತ್ಯ ಮತ್ತು ಈಶಾನ್ಯದವಾಗಿವೆ.

(ಉ) ಉತ್ತರ ಆಸ್ಟ್ರೇಲಿಯ: ಮಾನ್‍ಸೂನ್‍ಗಳು ವರ್ಷವಾತ ಮತ್ತು ಶುಷ್ಕವಾತ ಎಂದು ಎರಡು ಋತುಗಳಲ್ಲಿವೆ. ಭಾರತದಲ್ಲಿರುವಂತೆ ಥಟ್ಟನೆ ಮಳೆ ಬರುವುದಿಲ್ಲ, ಮಳೆಯ ಪರಿಮಾಣ ಕೂಡ ಕಡಿಮೆ.

(ಊ) ಅಮೆರಿಕ ಸಂಯುಕ್ತ ಸಂಸ್ಥಾನಗಳು (ಗಲ್ಫ್ ಸ್ಟೇಟ್ಸ್): ಬೇಸಗೆಯಲ್ಲಿ ಖಂಡಾಂತರ ಬಿಸಿಯಾಗುವಿಕೆಯಿಂದಾಗಿ ಕಡಿಮೆ ಒತ್ತಡ ಪ್ರದೇಶ ರೂಪುಗೊಳ್ಳುವುದು ಹಾಗೂ ಕ್ಲುಪ್ತ ಮಾರುತ ಪರಿಣಾಮವುಂಟಾಗುವುದು. ಒತ್ತಡ ಪ್ರವಣತೆ ಏಷ್ಯದಲ್ಲಿರುವಷ್ಟು ಕಡಿದಾಗಿಲ್ಲ ಹಾಗೂ ಮಾರುತಗಳ ವಿಪರ್ಯ ಪೂರ್ಣವಾಗಿಲ್ಲ.

(ಋ) ಪೂರ್ವ ಏಷ್ಯದ ಸಮಶೀತೋಷ್ಣ ಅಕ್ಷಾಂಶಗಳು: ಚಳಿಗಾಲದಲ್ಲಿ ಮಧ್ಯೆ ಉತ್ತರ ಏಷ್ಯದಿಂದ ಗಾಳಿಯ ಬೀಸುವಿಕೆಯಿಂದಾಗಿ ಶುಷ್ಕ ಹಾಗೂ ಶೀತಹವೆ ಉಂಟಾಗುತ್ತದೆ. ವಾಯು ಪ್ರಕ್ಷುಬ್ಧತೆಯಿಂದಾಗಿ ಕೆಲವೊಮ್ಮೆ ಮಳೆ ಬರುತ್ತದೆ. ಬೇಸಗೆಯಲ್ಲಿ ಉತ್ತರ ಚೀನದಲ್ಲಿ ಉಷ್ಣತೆ ಅಧಿಕವಾಗಿರುತ್ತದೆ. ಏಷಿಯಾಟಿಕ್ ತಗ್ಗು ಸಾಗರಿಕ ವಾಯುವನ್ನು ಸೆಳೆದು ಮಳೆ ಉಂಟುಮಾಡುತ್ತದೆ.

ಮಾನ್‍ಸೂನ್‍ಗಳ ಬಗ್ಗೆ ಇತ್ತೀಚಿನ ಅಧ್ಯಯನಗಳಿಗೆ ಅಂತಾರಾಷ್ಟ್ರೀಯ ಅನ್ವೇಷಣಾಯಾತ್ರೆಗಳಿಂದ ಹೆಚ್ಚಿನ ಪ್ರೋತ್ಸಾಹ ದೊರೆತಿದೆ. ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂ.ಎಂ.ಒ.) ಮತ್ತು ವೈಜ್ಞಾನಿಕ ಸಂಘಗಳ ಅಂತಾರಾಷ್ಟ್ರೀಯ ಮಂಡಳಿ (ಐ.ಸಿ.ಎಸ್.ಯು) 1967ರಲ್ಲಿ ಎರಡು ಪ್ರಮುಖ ಉದ್ದೇಶಗಳಿಂದ ಗೋಳವಾಯುಮಂಡಲ ಸಂಶೋಧನ ಕಾರ್ಯಕ್ರಮವನ್ನು (ಗ್ಲೋಬಲ್ ಅಟ್ಮಾಸ್‍ಫಿರಿಕ್ ರಿಸಚ್ ಪ್ರೋಗ್ರಾಮ್-ಜಿ.ಎ.ಆರ್.ಪಿ.) ವ್ಯವಸ್ಥೆಗೊಳಿಸಿತು.

(ಅ) ವಾಯುಗುಣದ ಬದಲಾವಣೆಗಳನ್ನು ನಿಯಂತ್ರಿಸುವ ವಾತಾವರಣದಲ್ಲಿಯ ಬೃಹತ್ ಪ್ರಮಾಣದ ವ್ಯತ್ಯಯಗಳ ಅಧ್ಯಯನ. (ಆ) ವಾಯುಗುಣದ ಭೌತಿಕ ಆಧಾರಗಳ ಪರಿಶೀಲನೆ. ಈ ಕಾರ್ಯಕ್ರಮದ ಅನ್ವಯ 1978ರ ಡಿಸೆಂಬರ್ 1ರಿಂದ ಪ್ರಾರಂಭವಾಗಿ ಒಂದು ವರ್ಷಪೂರ್ತ ಮಾನ್‍ಸೂನ್ ಅಧ್ಯಯನಕ್ಕಾಗಿ ಮಾನ್‍ಸೂನ್ ಪ್ರಯೋಗ (ಮಾನೆಕ್ಸ್) ಕೈಗೊಳ್ಳಲಾಯಿತು. `ಮಾನೆಕ್ಸ್ ಕಾರ್ಯಕ್ರಮಕ್ಕೆ ಮುಂಚಿತವಾಗಿ ಮೂರು ಪ್ರಯೋಗಗಳು ನಡೆದಿದ್ದವು. ಆ ಪ್ರಯೋಗಗಳು: 1963-66ರ ಅಂತಾರಾಷ್ಟ್ರೀಯ ಹಿಂದೂ ಮಹಾಸಾಗರ ಅನ್ವೇಷಣೆ (ಐ.ಐ.ಓ.ಇ.) ಮತ್ತು 1973ರ ಭಾರತ ಇಂಡೊಸೋವಿಯೆತ್ ಪ್ರಯೋಗಗಳು (ಐ.ಎಸ್.ಎಂ.ಇ.ಎಕ್ಸ್) ಹಾಗೂ ಮಾನ್‍ಸೂನ್ 1977. 1979ರ ಮಾನ್‍ಸೂನ್ ಪ್ರಯೋಗಗಳು ದೊಡ್ಡ ಪ್ರಮಾಣದವಾಗಿದ್ದು, ಅದರಲ್ಲಿ (1) ಬೇಸಗೆ ಮಾನ್‍ಸೂನ್ (2) ಚಳಿಗಾಲದ ಮಾನ್‍ಸೂನ್ ಮತ್ತು (3) ಪಶ್ಚಿಮ ಆಫ್ರಿಕದ ಮಾನ್‍ಸೂನ್ (ಡಬ್ಲ್ಯು.ಎ.ಎಂ.ಇ.ಎಕ್ಸ್.) ಎಂಬ ಮೂರು ಪ್ರಾದೇಶಿಕ ಘಟಕಗಳಿದ್ದುವು.

ಪರಂಪರಾಗತವಾದ ಹವಾಮಾನಸಂಬಂಧಿ ದತ್ತಾಂಶಗಳನ್ನು ಸಂಗ್ರಹಿಸಲು ವೀಕ್ಷಣಾಕಾರ್ಯಕ್ರಮಗಳನ್ನು ತೀವ್ರತರಗೊಳಿಸುವುದರ ಜೊತೆಗೆ ಹೆಚ್ಚುವರಿ ವೇದಿಕೆಗಳನ್ನು-ಭೂ ಅಥವಾ ಸಾಗರಾಧಾರಿತ ಮತ್ತು ಆಕಾಶದಲ್ಲಿ ನೆಲೆಗೊಳಿಸಲಾಗಿರುವುವು-ಬಳಸಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ರಷ್ಯದ ಐದು. ಭಾರತದ ನಾಲ್ಕು ಮತ್ತು ಫ್ರಾನ್ಸಿನ ಒಂದು ಸಂಶೋಧನ ನೌಕೆಗಳು ಪಾಲ್ಗೊಂಡಿದ್ದುವು. ಅಮೆರಿಕದ ಮೂರು ಸಂಶೋಧನ ವಿಮಾನಗಳು ಬೇಸಗೆ ಹಾಗೂ ಚಳಿಗಾಲದ ಮಾನ್‍ಸೂನ್‍ಗಳೆರಡರಲ್ಲೂ ಕಾರ್ಯಪ್ರವೃತ್ತವಾಗಿದ್ದುವು. ಚಳಿಗಾಲದ ಮಾನ್‍ಸೂನ್ ವಲಯದ ಮೇಲೆ ಸಂವಹನದ ಅಧ್ಯಯನಕ್ಕಾಗಿ ವಿಶೇಷ ರೇಡಾರ್ ವೀಕ್ಷಣೆಗಳನ್ನು ಮಾಡಲಾಯಿತು. ವಿಮಾನದಲ್ಲಿ ಡ್ರಾಪ್ ವಿಂಡ್‍ಸೊಂಡ್ ಉಪಕರಣಗಳನ್ನು ಅಳವಡಿಸಲಾಗಿತ್ತು. ಗಗನದಲ್ಲಿ ನೆಲೆಗೊಳಿಸಲಾದ ವೇದಿಕೆಗಳಲ್ಲಿ ಅಮೆರಿಕದ ಭೂಸ್ಥಿರ ಉಪಗ್ರಹದಿಂದ (ಜಿ.ಓ.ಇ.ಎಸ್. ಹಿಂದೂ ಮಹಾಸಾಗರ) ಮೋಡಛಾಯೆಗಳ ಸ್ವೀಕೃತಿಯನ್ನು ನೈಜಕಾಲಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ಉಪಗ್ರಹದಿಂದ ಮೋಡಛಾಯೆಗಳನ್ನು ಯೂರೊಪಿಯನ್ ಸ್ಪೇಸ್ ಏಜೆನ್ಸಿ ಉಡಾಯಿಸಿದ್ದ ಭೂಸ್ಥಿರ ಉಪಗ್ರಹ ಮೀಟಯೊಸ್ಟಾಟ್ ಮೂಲಕ ರವಾನಿಸಲಾಗುತ್ತಿತ್ತು. ಈ ಸ್ವೀಕರಣ ಸೌಲಭ್ಯಗಳ ಜೊತೆಗೆ, ಮೋಡಗಳು ಹಾಗೂ ಮಾರುತಗಳ ಬಗ್ಗೆ ದತ್ತಾಂಶಗಳನ್ನು ಜಪಾನು ಉಡಾಯಿಸಿದ್ದ ಮತ್ತೊಂದು ಭೂಸ್ಥಿರ ಉಪಗ್ರಹ (ಜೆ.ಎಂ.ಎಸ್.) ಒದಗಿಸುತ್ತಿತ್ತು.

ಮಾನೆಕ್ಸ್ ದತ್ತಾಂಶಗಳನ್ನು ಈಗ ಸಂಗ್ರಹಿಸಿಡಲಾಗಿದೆ ಮತ್ತು ಮಾನ್ ಸೂನ್ ಪದ್ಧತಿಯ ಗಣಶೀಲತೆಯಲ್ಲಿ ಈ ತನಕ ವಿವರಿಸಲಾಗದಿರುವ ಹಲವಾರು ಅಂಶಗಳ ಬಗ್ಗೆ ಬೆಳಕು ಬೀರಲು ತೀವ್ರವಾದ ಅಧ್ಯಯನಕ್ಕೆ ಬಳಸಿಕೊಳ್ಳಲು ವಿವಿಧ ಅಂತಾರಾಷ್ಟ್ರೀಯ ಪತ್ರಾಗಾರ ಕೇಂದ್ರಗಳಲ್ಲಿ ಇವು ಲಭ್ಯವಿದೆ. ಮಾನ್‍ಸೂನ್ ಪ್ರಸರಣಕ್ಕೆ ಗಣಿತೀಯ ಮಾದರಿಯನ್ನು ರೂಪಿಸುವುದು ಈ ತನಕ ಸಾಧ್ಯವಾಗಿಲ್ಲ.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • International Committee of the Third Workshop on Monsoons. The Global Monsoon System: Research and Forecast.
  • Chang, C.P., Wang, Z., Hendon, H., 2006, The Asian Winter Monsoon. The Asian Monsoon, Wang, B. (ed.), Praxis, Berlin, pp. 89–127.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: