ವಿಷಯಕ್ಕೆ ಹೋಗು

ಮುಲ್ಕ್‌ ರಾಜ್‌ ಆನಂದ್‌‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಲ್ಕ್‌ ರಾಜ್‌ ಆನಂದ್‌‌
ಜನನ(೧೯೦೫-೧೨-೧೨)೧೨ ಡಿಸೆಂಬರ್ ೧೯೦೫
ಪೇಷಾವರ, ಬ್ರಿಟಿಷ್ ಭಾರತ (ಈಗ ಪಾಕಿಸ್ತಾನ)
ಮರಣ28 September 2004(2004-09-28) (aged 98)
ಪುಣೆ, ಭಾರತ
ವೃತ್ತಿಬರಹಗಾರ
ಕಾಲ೨೦ನೆಯ ಶತಮಾನ

ಸಹಿ

ಮುಲ್ಕ್‌ ರಾಜ್‌ ಆನಂದ್‌‌ (೧೨ ಡಿಸೆಂಬರ್‌‌ ೧೯೦೫ – ೨೮ ಸೆಪ್ಟೆಂಬರ್‌‌ ೨೦೦೪) ಇಂಗ್ಲಿಷ್‌ ಭಾಷೆಯಲ್ಲಿನ ಓರ್ವ ಭಾರತೀಯ ಬರಹಗಾರರಾಗಿದ್ದರು; ಭಾರತದ ಸಾಂಪ್ರದಾಯಿಕ ಸಮಾಜದಲ್ಲಿನ ಅತೀವ ಬಡತನದಿಂದ ಕೂಡಿದ ಜಾತಿಗಳ ಜನರ ಜೀವನಗಳನ್ನು ಚಿತ್ರಿಸುವುದಕ್ಕೆ ಸಂಬಂಧಿಸಿದಂತೆ ಅವರು ಗಮನಾರ್ಹರಾಗಿದ್ದರು. ಇಂಡೋ-ಆಂಗ್ಲಿಯನ್‌‌ ಕಾದಂಬರಿ ಪ್ರಕಾರದ ಪಥ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಅವರು, R.K. ನಾರಾಯಣ್‌ ಮತ್ತು ಅಹ್ಮದ್‌ ಆಲಿಯವರ ಒಡಗೂಡಿ ಒಂದು ಅಂತರರಾಷ್ಟ್ರೀಯ ವಾಚಕವರ್ಗವನ್ನು[೧][೨] ಗಳಿಸುವಲ್ಲಿನ ಭಾರತ-ಮೂಲದ ಮೊದಲ ಇಂಗ್ಲಿಷ್‌ ಬರಹಗಾರರ ಪೈಕಿ ಒಬ್ಬರೆನಿಸಿಕೊಂಡಿದ್ದರು.

ಪೆಶಾವರ್‌‌‌ನಲ್ಲಿ ಜನಿಸಿದ ಅವರು ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು; ನಂತರ ಇಂಗ್ಲೆಂಡ್‌ಗೆ ತೆರಳಿದ ಅವರು ಲಂಡನ್‌‌ ವಿಶ್ವವಿದ್ಯಾಲಯದ ಕಾಲೇಜಿಗೆ ಸ್ನಾತಕಪೂರ್ವ ವಿದ್ಯಾರ್ಥಿಯಾಗಿ ಸೇರಿಕೊಂಡರು ಮತ್ತು ನಂತರದಲ್ಲಿ ಕೇಂಬ್ರಿಜ್‌ ವಿಶ್ವವಿದ್ಯಾಲಯವನ್ನು ಸೇರಿಕೊಂಡು, ೧೯೨೯ರಲ್ಲಿ ಒಂದು PhD ಪದವಿಯೊಂದಿಗೆ ತೇರ್ಗಡೆಯಾದರು. ಈ ಕಾಲಾವಧಿಯಲ್ಲಿ ಬ್ಲೂಮ್ಸ್‌ಬರಿ ಗ್ರೂಪ್‌ನ ಸದಸ್ಯರ ಜೊತೆಗಿನ ಸ್ನೇಹ-ಸಂಬಂಧಗಳಿಗೆ ಅವರು ಆಕಾರ ಕೊಟ್ಟರು. ಜಿನಿವಾದಲ್ಲಿ ಕೆಲ ಕಾಲವನ್ನು ಕಳೆದ ಅವರು, ಈ ಅವಧಿಯಲ್ಲಿ ರಾಷ್ಟ್ರಗಳ ಸಂಘದ (ಲೀಗ್‌ ಆಫ್‌ ನೇಷನ್ಸ್‌ನ) ಸ್ಕೂಲ್‌ ಆಫ್‌ ಇಂಟೆಲೆಕ್ಚುಯಲ್‌ ಕೋ-ಆಪರೇಷನ್ ಎಂಬಲ್ಲಿ ಉಪನ್ಯಾಸ ನೀಡಿದರು.

ಜಾತಿ ಪದ್ಧತಿಯ ಕಟ್ಟುನಿಟ್ಟು ಅಥವಾ ನಿಷ್ಠುರತೆಯಿಂದ ಪ್ರಚೋದಿಸಲ್ಪಟ್ಟ ಕುಟುಂಬ ದುರಂತದಿಂದ ಆನಂದ್‌‌ರವರ ಸಾಹಿತ್ಯಿಕ ವೃತ್ತಿಜೀವನವು ಪ್ರಾರಂಭಿಸಲ್ಪಟ್ಟಿತು. ಓರ್ವ ಮುಸ್ಲಿಂ ಜೊತೆಯಲ್ಲಿ ಒಂದು ಊಟವನ್ನು ಹಂಚಿಕೊಂಡಿದ್ದಕ್ಕಾಗಿ ತಮ್ಮ ಕುಟುಂಬದ ವತಿಯಿಂದ ಜಾತಿಯಿಂದಲೇ ಹೊರಹಾಕಲ್ಪಟ್ಟಿದ್ದ ಓರ್ವ ಚಿಕ್ಕಮ್ಮನ ಆತ್ಮಹತ್ಯೆಗೆ ಒಂದು ಪ್ರತಿಸ್ಪಂದನೆಯ ಸ್ವರೂಪದಲ್ಲಿ ಅವರ ಮೊದಲ ಗದ್ಯ ಪ್ರಬಂಧವು ಹೊರಹೊಮ್ಮಿತು. ಅವರ ಮೊದಲ ಪ್ರಮುಖ ಕಾದಂಬರಿಯಾದ ಅನ್‌ಟಚಬಲ್‌ ೧೯೩೫ರಲ್ಲಿ ಪ್ರಕಟಿಸಲ್ಪಟ್ಟಿತು; ಇದು ಭಾರತದ ಅಸ್ಪೃಶ್ಯ‌ ಜಾತಿಯ ಸದಸ್ಯನೋರ್ವನ ದೈನಂದಿನ ಜೀವನದ ಒಂದು ನಿರ್ಭಾವದಿಂದ ಕೂಡಿದ ಅನಾವರಣವಾಗಿತ್ತು. ಶೌಚಾಲಯವನ್ನು-ಶುದ್ಧಿಗೊಳಿಸುವ ಓರ್ವ ವ್ಯಕ್ತಿಯಾದ ಬಖಾ ಎಂಬುವವನ ಜೀವನದಲ್ಲಿನ ಒಂದು ಏಕದಿನದ ಕಥೆಯನ್ನು ಇದು ಒಳಗೊಂಡಿದ್ದು, ಈತ ಮೇಲ್ವರ್ಗದ ಜಾತಿಯೊಂದರ ಓರ್ವ ಸದಸ್ಯನನ್ನು ಅಕಸ್ಮಾತ್ತಾಗಿ ಸಂಧಿಸುತ್ತಾನೆ.

ಓರ್ವ ಕ್ರೈಸ್ತ ಧರ್ಮಪ್ರಚಾರಕನೊಂದಿಗೆ ಮಾತನಾಡುತ್ತಾ, ಅಸ್ಪೃಶ್ಯತೆಯ ಕುರಿತಾಗಿ ಮಹಾತ್ಮ ಗಾಂಧಿಯವರು ಮಾಡಿದ ಭಾಷಣವೊಂದನ್ನು ಕೇಳುತ್ತಾ ಮತ್ತು ತರುವಾಯದಲ್ಲಿ ಇಬ್ಬರು ವಿದ್ಯಾವಂತ ಭಾರತೀಯರು ನಡೆಸುವ ಸಂಭಾಷಣೆಯನ್ನು ಕೇಳಿಸಿಕೊಳ್ಳುವ ಬಖಾ, ತನ್ನ ಹಣೆಬರಹದ ದುರಂತಕ್ಕೆ ಒಂದು ಸಾಂತ್ವನಕಾರಿಯಾಗಿ ಪರಿಣಮಿಸಬಲ್ಲ ಶಕ್ತಿಗಾಗಿ ಹುಡುಕುತ್ತಾನೆ; ಆದರೆ ಪುಸ್ತಕದ ಕೊನೆಯಲ್ಲಿ ಆನಂದ್‌‌ ತಂತ್ರಜ್ಞಾನವೇ ಇದಕ್ಕೊಂದು ಪರಿಹಾರವೆಂದು ಸೂಚಿಸುತ್ತಾರೆ: ಅಂದರೆ, ಹೊಸದಾಗಿ ಪರಿಚಯಿಸಲ್ಪಟ್ಟ ರಭಸದ ನೀರುಚಿಮ್ಮುವಿಕೆಯ ಶೌಚಾಲಯದ ಸ್ವರೂಪದಲ್ಲಿರುವ ತಂತ್ರಜ್ಞಾನವು ಶೌಚಾಲಯವನ್ನು ಶುದ್ಧಿಗೊಳಿಸುವವರ ಜಾತಿಯೊಂದಕ್ಕೆ ಸಂಬಂಧಿಸಿದ ಅಗತ್ಯವನ್ನು ತೊಡೆದುಹಾಕುವ ಮೂಲಕ, ಅವನ ವಿಮೋಚಕನ ಪಾತ್ರವನ್ನು ವಹಿಸಬಹುದು ಎಂಬುದು ಅವರು ಸೂಚಿಸಿದ ಪರಿಹಾರವಾಗಿರುತ್ತದೆ.

ಪಂಜಾಬಿ ಮತ್ತು ಹಿಂದಿ ಭಾಷಾವೈಶಿಷ್ಟ್ಯದ ಅಪಾರ ಸಾಮರ್ಥ್ಯವನ್ನು ಇಂಗ್ಲಿಷ್‌ನಲ್ಲಿ ಸೆರೆಹಿಡಿದ ಈ ಸರಳ ಪುಸ್ತಕವು ವ್ಯಾಪಕವಾಗಿ ಮೆಚ್ಚುಗೆಯನ್ನು ಪಡೆಯಿತು ಮತ್ತು ಭಾರತದ ಚಾರ್ಲ್ಸ್‌ ಡಿಕನ್ಸ್‌ ಎಂಬ ಪ್ರಸಿದ್ಧಿ-ಕೀರ್ತಿಯನ್ನು ಆನಂದ್‌‌ ಗೆದ್ದುಕೊಂಡರು. ಈ ಕೃತಿಯ ಪೀಠಿಕೆಯು ಅವರ ಸ್ನೇಹಿತನಾದ E. M. ಫಾಸ್ಟರ್‌‌ನಿಂದ ಬರೆಯಲ್ಪಟ್ಟಿತು. T. S. ಎಲಿಯಟ್‌‌ನ ಕ್ರೈಟೀರಿಯನ್‌ ಎಂಬ ನಿಯತಕಾಲಿಕದಲ್ಲಿ ಕೆಲಸ ಮಾಡುತ್ತಿದ್ದಾಗ ಫಾಸ್ಟರ್‌‌ನನ್ನು ಆನಂದ್‌ ಭೇಟಿಯಾಗಿದ್ದರು. ಸದರಿ ಪೀಠಿಕೆಯಲ್ಲಿ ಫಾಸ್ಟರ್‌‌ ಹೀಗೆ ಬರೆಯುತ್ತಾನೆ: "ಆಕರ್ಷಕ ಭಾಷಾಶೈಲಿ ಮತ್ತು ಸುತ್ತಿ-ಬಳಸಿ ಹೇಳುವ ಶೈಲಿಯನ್ನು ಕೈಬಿಟ್ಟಿರುವ ಈ ಕೃತಿಯು, ಅದರ ವಸ್ತು-ವಿಷಯದ ಹೃದಯಕ್ಕೆ ನೇರವಾಗಿ ಮುಟ್ಟಿದೆ ಮತ್ತು ಅದನ್ನು ಪರಿಶುದ್ಧಗೊಳಿಸಿದೆ".

ತಮ್ಮ ಕಾಲಾವಧಿಯಲ್ಲಿನ ಅರ್ಧಭಾಗವನ್ನು ಲಂಡನ್‌‌ನಲ್ಲಿಯೂ ಮತ್ತು ಉಳಿದರ್ಧ ಭಾಗವನ್ನು ಭಾರತದಲ್ಲಿಯೂ ಕಳೆದ ಆನಂದ್‌‌, ಅನಿವಾರ್ಯವಾಗಿ ಭಾರತದ ಸ್ವಾತಂತ್ರ್ಯ ಆಂದೋಲನದೆಡೆಗೆ ಸೆಳೆಯಲ್ಪಟ್ಟರು. ಅದೇ ವೇಳೆಗೆ, ಭೂಮಂಡಲದ ಎಲ್ಲೆಡೆಗಳಲ್ಲಿನ ಸ್ವಾತಂತ್ರ್ಯವನ್ನೂ ಅವರು ಬೆಂಬಲಿಸಿದರು ಮತ್ತು ಸ್ಪೇನಿನ ನಾಗರಿಕ ಯುದ್ಧದಲ್ಲಿ ಸ್ವಯಂಸೇವೆ ಮಾಡಲೆಂದು ಸ್ಪೇನ್‌‌ಗೂ ಸಹ ಪರ್ಯಟನೆ ಮಾಡಿದರು. ಲಂಡನ್‌ನಲ್ಲಿನ BBCಗಾಗಿ ಓರ್ವ ಕಥಾಲೇಖಕನಾಗಿ ಕೆಲಸ ಮಾಡುವ ಮೂಲಕ ಅವರು IIನೇ ಜಾಗತಿಕ ಸಮರದ ಸಂದರ್ಭದಲ್ಲಿನ ತಮ್ಮ ಅವಧಿಯನ್ನು ಕಳೆದರು; ಇಲ್ಲಿಯೇ ಅವರಿಗೆ ಜಾರ್ಜ್‌ ಆರ್ವೆಲ್‌ ಜೊತೆಗೆ ಸ್ನೇಹ ಬೆಳೆಯಿತು. ಆತ ಪಿಕಾಸೊನ ಓರ್ವ ಸ್ನೇಹಿತನಾಗಿದ್ದ ಮತ್ತು ತನ್ನ ಸಂಗ್ರಹದಲ್ಲಿ ಪಿಕಾಸೊ ರಚಿಸಿದ್ದ ಚಿತ್ರ-ಕಲಾಕೃತಿಗಳನ್ನು ಹೊಂದಿದ್ದ.

೧೯೪೬ರಲ್ಲಿ ಆನಂದ್‌‌ ಭಾರತಕ್ಕೆ ಹಿಂದಿರುಗಿದರು, ಮತ್ತು ತಮ್ಮ ವಿಸ್ಮಯಕಾರಕ ಸಾಹಿತ್ಯಿಕ ಸೃಷ್ಟಿಯನ್ನು ಇಲ್ಲಿ ಮುಂದುವರಿಸಿದರು. ಒಂದು ವ್ಯಾಪಕ ಶ್ರೇಣಿಯ ವಸ್ತು-ವಿಷಯಗಳ ಕುರಿತಾದ ಕಾವ್ಯ ಮತ್ತು ಪ್ರಬಂಧಗಳೇ ಅಲ್ಲದೇ, ಆತ್ಮಕಥೆಗಳು ಹಾಗೂ ಕಾದಂಬರಿಗಳೂ ಸಹ ಅವರ ಕೃತಿಗಳಲ್ಲಿ ಸೇರಿವೆ. ಅವರ ಕಾದಂಬರಿಗಳ ಪೈಕಿ ಗಮನ ಸೆಳೆಯುವಂಥವುಗಳೆಂದರೆ: ಇಂಗ್ಲೆಂಡ್‌ನಲ್ಲಿ ಬರೆಯಲ್ಪಟ್ಟ ದಿ ವಿಲೇಜ್‌ (೧೯೩೯), ಅಕ್ರಾಸ್‌ ದಿ ಬ್ಲ್ಯಾಕ್‌ ವಾಟರ್ಸ್‌ (೧೯೪೦), ದಿ ಸ್ವೋರ್ಡ್‌ ಅಂಡ್‌ ದಿ ಸಿಕಲ್‌ (೧೯೪೨), ಮತ್ತು ಭಾರತದಲ್ಲಿ ಅವರಿಂದ ಬರೆಯಲ್ಪಟ್ಟ ಕೃತಿಗಳ ಪೈಕಿ ಪ್ರಾಯಶಃ ಅತ್ಯಂತ ಪ್ರಮುಖವಾದವು ಎನಿಸಿದ ಕೂಲೀ (೧೯೩೬), ದಿ ಪ್ರೈವೇಟ್‌ ಲೈಫ್‌ ಆಫ್‌ ಆನ್ ಇಂಡಿಯನ್‌ ಪ್ರಿನ್ಸ್‌ (೧೯೫೩). ಮಾರ್ಗ್‌ ಎಂಬ ಹೆಸರಿನ ಒಂದು ಸಾಹಿತ್ಯಿಕ ನಿಯತಕಾಲಿಕವನ್ನೂ ಅವರು ಪ್ರಾರಂಭಿಸಿದರು, ಮತ್ತು ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದರು. ೧೯೭೦ರ ದಶಕದಲ್ಲಿ, ರಾಷ್ಟ್ರಗಳ ಸಾಂಸ್ಕೃತಿಕ ಸ್ವಯಂ-ಗ್ರಹಿಕೆ ಅಥವಾ ಸ್ವಯಂ-ಒಳಗೊಳ್ಳುವಿಕೆಯ ವಿಷಯದ ಕುರಿತಾದ ಇಂಟರ್‌‌ನ್ಯಾಷನಲ್‌ ಪ್ರೋಗ್ರೆಸ್‌ ಆರ್ಗನೈಸೇಷನ್‌ (I.P.O.) ಎಂಬ ಸಂಸ್ಥೆಯೊಂದಿಗೆ ಅವರು ಕೆಲಸ ಮಾಡಿದರು. ೧೯೭೪ರಲ್ಲಿ ಇನ್ಸ್‌ಬ್ರೂಕ್‌‌‌ನಲ್ಲಿ (ಆಸ್ಟ್ರಿಯಾ) ನಡೆದ I.P.O. ಸಮ್ಮೇಳನಕ್ಕೆ ಅವರು ನೀಡಿದ ಕೊಡುಗೆಯು, 'ನಾಗರಿಕತೆಗಳ ನಡುವಿನ ಸಂಭಾಷಣೆ' (ಡೈಲಾಗ್‌ ಅಮಾಂಗ್‌ ಸಿವಿಲೈಸೇಷನ್ಸ್‌) ಎಂಬ ನುಡಿಗಟ್ಟಿನ ಅಡಿಯಲ್ಲಿ ನಂತರದಲ್ಲಿ ಹೆಸರಾದ ಚರ್ಚೆಗಳ ಮೇಲೆ ಒಂದು ವಿಶೇಷ ಪ್ರಭಾವವನ್ನು ಬೀರಿತ್ತು.

ಪ್ರೈವೇಟ್‌ ಲೈಫ್‌ ಆಫ್‌ ಆನ್‌ ಇಂಡಿಯನ್‌ ಪ್ರಿನ್ಸ್‌ ಕೃತಿಯು ಹೆಚ್ಚಿನ ರೀತಿಯಲ್ಲಿ ಆತ್ಮಕಥೆಯ ರೀತಿಯ ಸ್ವರೂಪವನ್ನು ಹೊಂದಿತ್ತು, ಮತ್ತು ೧೯೫೦ರಲ್ಲಿ ಸೆವೆನ್‌ ಸಮ್ಮರ್ಸ್‌ ಎಂಬ ಶೀರ್ಷಿಕೆಯೊಂದಿಗೆ ಆರಂಭವಾಗುವ, ಏಳು-ಭಾಗವನ್ನೊಳಗೊಂಡ ಆತ್ಮಕಥೆಯೊಂದನ್ನು ಬರೆಯುವ ಯೋಜನೆಯೊಂದರ ಕುರಿತಾಗಿ ಆನಂದ್‌‌ ತಮ್ಮನ್ನು ತೊಡಗಿಸಿಕೊಂಡರು. ಸದರಿ ಕೃತಿಯ ಮಾರ್ನಿಂಗ್‌ ಫೇಸ್‌ (೧೯೬೮) ಎಂಬ ಒಂದು ಭಾಗವು ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು[೩] ಗೆದ್ದುಕೊಟ್ಟಿತು. ಅವರ ನಂತರದ ಅನೇಕ ಕೃತಿಗಳಲ್ಲಿರುವಂತೆ, ಇದು ಅವರ ಆಧ್ಯಾತ್ಮಿಕ ಪ್ರಯಾಣದ ಅಂಶಗಳನ್ನು ಒಳಗೊಂಡಿದೆ; ಆತ್ಮಪ್ರಜ್ಞೆಯ ಒಂದು ಉನ್ನತ ಅರಿವನ್ನು ತಲುಪಲು ಅವರು ಹೆಣಗಾಡುತ್ತಿದ್ದುದರ ಅಂಶಗಳು ಇದರಲ್ಲಿ ವ್ಯಕ್ತವಾಗಿವೆ.

೨೦೦೪ರ ಸೆಪ್ಟೆಂಬರ್‌‌ ೨೮ರಂದು ತಮ್ಮ ೯೮ನೇ ವಯಸ್ಸಿನಲ್ಲಿ ಪುಣೆಯಲ್ಲಿ ಅವರು ಮರಣಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. "Very English, more Indian". The Indian Express. Sep 29, 2004.; "...ಆಧುನಿಕ ಭಾರತವನ್ನು ಸ್ವತಃ ಭಾರತಕ್ಕೆ ಮತ್ತು ಪ್ರಪಂಚಕ್ಕೆ ಅಥೈಸುವ ಕಾರ್ಯಭಾರವನ್ನು E.M. ಫಾಸ್ಟರ್‌‌ & ಎಡ್ವರ್ಡ್‌ ಥಾಮ್ಸನ್‌ರಂಥ ಬ್ರಿಟಿಷ್‌ ಬರಹಗಾರರಿಂದ ಅವರು ವಹಿಸಿಕೊಂಡಿದ್ದಾರೆ ಎಂದು ಹೇಳಬಹುದು", ದಿ ಆಕ್ಸ್‌ಫರ್ಡ್‌ ಹಿಸ್ಟರಿ ಆಫ್‌ ಇಂಡಿಯಾ, ವಿನ್ಸೆಂಟ್‌ A. ಸ್ಮಿತ್‌‌ (ಮೂರನೇ ಆವೃತ್ತಿ, ಪರ್ಸಿವಲ್‌ ಸ್ಪಿಯರ್‌‌ನಿಂದ ‌‌ಸಂಪಾದಿತ), ಆಕ್ಸ್‌ಫರ್ಡ್‌, ೧೯೬೭, ಪುಟ ೮೩೮.
  2. Ranjit Hoskote (Sep 29, 2004). "The last of Indian English fiction's grand troika: Encyclopaedia of arts". ದಿ ಹಿಂದೂ. Archived from the original on ಡಿಸೆಂಬರ್ 17, 2004. Retrieved ಜನವರಿ 6, 2011.
  3. "ಇಂಗ್ಲಿಷ್‌ ಸಾಹಿತ್ಯದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು". Archived from the original on 2007-07-13. Retrieved 2011-01-06.

ಬಾಹ್ಯ ಕೊಂಡಿಗಳು[ಬದಲಾಯಿಸಿ]