ವಿಷಯಕ್ಕೆ ಹೋಗು

ಮುಟ್ಟಿದರೆ ಮುನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಟ್ಟಿದರೆ ಮುನಿ
('ಮುಟ್ಟಿದರೆ ಮುನಿ (Touch me not))
Flower-head
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
'ಎಂ.ಪುಡಿಕಾ
Binomial name
ಮಿಮೋಸ ಪುಡಿಕಾ
ಮುಟ್ಟಿದರೆ ಮುನಿ
Mimosa pudica

ಮುಟ್ಟಿದರೆ ಮುನಿ ಅಮೋಘವಾದ ಔಷಧೀಯ ಗುಣವುಳ್ಳ ಗಿಡ. ಆಡುಭಾಷೆಯಲ್ಲಿ ನಾಚಿಕೆಗಿಡ, ಮುಡುಗುದಾವರೆ, ಮುಟ್ಟಲ ಮುರುಕ, ಗಂಡಕಾಲೆ, ನಮಸ್ಕಾರಿ, ನಾಚಿಗೆ ಮುಳ್ಳು, ಮುಟ್ಟಿದರೆ ಮುಚಕ, ಮುಚ್ಗನ್ ಮುಳ್ಳು, ಪತಿವ್ರತೆ, ಲಜ್ಜಾವತಿ ಎಂಬ ಹೆಸರಿದೆ. ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ", ಆಂಗ್ಲದಲ್ಲಿ ಟಚ್ ಮಿ ನಾಟ್,[೨] ಹಿಂದಿಯಲ್ಲಿ ಚುಯ್ ಮುಯ್ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ‘ಮಿಮೋಸ ಪುಡಿಕಾ’ (Mimosa Pudica). ಇದರ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ, ಪ್ರಮುಖವಾಗಿ ಬ್ರೆಜ಼ಿಲ್ ಎಂದು ಬಗೆಯಗಾಲಿದೆ. ಭಾರತದ ಉಷ್ಣಪ್ರಾಂತ್ಯಗಳೆಲ್ಲೆಲ್ಲ ವ್ಯಾಪಕವಾಗಿ ಕಾಣಸಿಕ್ಕುತ್ತದೆ.

ಹೆಸರಿನ ವಿಶೇಷ

[ಬದಲಾಯಿಸಿ]

"ಅಂಜಲೀ ಕಾರಿಕೆ" ಎಂದು ಕರೆಯುವುದು ಏಕೆಂದರೆ ಈ ಗಿಡದ ಎಲೆಗಳನ್ನು ಗಮನಿಸಿದರೆ ಅದು ಬೊಗಸೆಯನ್ನೇ ಹೋಲುತ್ತದೆ. ಜೊತೆಗೆ ಕೈ ಮುಗಿಯುವ ಭಂಗಿಯಲ್ಲಿರುವ ವಿಗ್ರಹಕ್ಕೆ ಶಿಲ್ಪ ಶಾಸ್ತ್ರದಲ್ಲಿ ಅಂಜಲಿಕಾರಿಕೆ ಎಂದೇ ಹೆಸರಿದೆ.

"ಮುಟ್ಟಿದರೆ ಮುನಿ" ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿದ್ದು, ಕಿಂಚಿತ್ ಒತ್ತಡ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತೆ. ಸಸ್ಯಶಾಸ್ತ್ರಜ್ಞರು ಇದನ್ನು ರಕ್ಷಣಾ ಪ್ರಕ್ರಿಯೆ ಎಂದೂ ಶಂಕಿಸುತ್ತಾರೆ. ಹುಳು ಹುಪ್ಪಟೆಗಳಿಂದ, ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗಳನ್ನು ಮಡಚಿಕೊಂಡರೆ ತನ್ನಲ್ಲಿರುವ ಮುಳ್ಳು ಆ ಪ್ರಾಣಿಗೆ ಚುಚ್ಚಿ ಪಾರಾಗಬಹುದು. ಇದೊಂದು ಸಸ್ಯಲೋಕದ ವಿಸ್ಮಯ ಜೀವಿ.

ಸಸ್ಯ ವಿವರಣೆ

[ಬದಲಾಯಿಸಿ]

ಇದು 50-90 ಸೆಂಮೀ ಎತ್ತರಕ್ಕೆ ಕುಳ್ಳುಪೊದೆಯಾಗಿ ಬೆಳೆಯುತ್ತದೆ. ಎಲೆಗಳು ದ್ವಿಪಿಚ್ಛಕ ಮಾದರಿಯವು: ಪ್ರತಿಯೊಂದು ಎಲೆಯಲ್ಲಿ 2-4 ವರ್ಣಕಗಳೂ ಇವುಗಳಲ್ಲಿ ತಲಾ 10-20 ಕಿರು ಎಲೆಗಳೂ ಇವೆ.

ಮುದುಡುವುದಕ್ಕೆ ವೈಜ್ಞಾನಿಕ ವಿವರಣೆ: ಎಲೆಗಳ ಬೆಳಕು,[೩] ಕಂಪನ ಹಾಗೂ ಸ್ಪರ್ಶ ಮುಂತಾದ ಚೋದಕಗಳಿಗೆ ಸಂವೇದನವನ್ನು (ರೆಸ್ಪಾನ್ಸ್) ವ್ಯಕ್ತಪಡಿಸುತ್ತವೆ. ಚೋದಕಗಳಿಗೆ ಒಡ್ಡಿದಾಗ ಮೊದಲು ಕಿರುಎಲೆಗಳು ಮೇಲ್ಮುಖವಾಗಿ ಮುದುಡಿಕೊಂಡು ಒಂದನ್ನೊಂದು ಕೂಡಿಕೊಳ್ಳುತ್ತವೆ.[೪] ಅನಂತರ ಈ ಮುದುಡು ಚಲನೆ ಕೇಂದ್ರಾಭಿಗಾಮಿಯಾಗಿ ಮುಂದುವರಿದು ಎಲೆಯ ತೊಟ್ಟು ಹಾಗೂ ಕೊಂಬೆಗಳಿಗೆ ತಲಪಿ ಅವು ಕೂಡ ಶೀಘ್ರಗತಿಯಲ್ಲೆ ಕೆಳಮುಖವಾಗಿ ಬಾಗುವಂತಾಗುತ್ತದೆ. ಈ ಎಲ್ಲ ಚಲನೆಯ ತೀವ್ರತೆ ಚೋದಕದ ತೀಕ್ಷ್ಣತೆಯನ್ನು ಅನುಸರಿಸಿ ಶೀಘ್ರ ಇಲ್ಲವೆ ಮಂದಗತಿಯಾದಾಗಿರುತ್ತದೆ. ಮತ್ತೆ ಎಲೆಗಳು ಮುಂಚಿನ ಸ್ಥಿತಿಗೆ ಬರಲು ಸಾಕಷ್ಟು ಕಾಲಾವಕಾಶ ಬೇಕು. ಈ ವಿದ್ಯಮಾನಕ್ಕೆ ಸ್ಪರ್ಶಾನುಕುಂಚನ ಅಥವಾ ಕಂಪಾನಾನುಕುಂಚನ ಎಂದು ಹೆಸರಿದ್ದು ಇದಕ್ಕೆ ಕಾರಣ ಎಲೆಗಳ ತೊಟ್ಟಿನ ಉಬ್ಬಿದ ಬುಡದಲ್ಲಿ (ಪಲ್ವೈನಸ್) ಇರುವ ಕೋಶಗಳ ಆರ್ದ್ರತಾ ಸಂವೇದನಾಶೀಲತೆ.

ಇದರ ಮೈತುಂಬ ಮುಳ್ಳು, ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುತ್ತದೆ. ಇದೊಂದು ಪ್ರಕೃತಿಯ ರಹಸ್ಯವಾಗಿದ್ದು ಸಸ್ಯವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ತಂತ್ರವಿದು. ಈ ಸಸ್ಯವು ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದೆ. ಎಲೆಗಳು ಮುದುಡಿದಾಗ ಮೇಯುವ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳಂತೆ ಕಂಡುಬರುತ್ತದೆ.

ದೀರ್ಘಾವಧಿ ಕಳೆ ಗಿಡವಾಗಿರುವ ಇದು ಬೇರುಗಳಿಂದ ಅಭಿವೃದ್ದಿ ಹೊಂದುವುದರಿಂದ ಕಳೆನಾಶಕಗಳನ್ನು ಸಿಂಪಡಿಸಿದರೂ ಮೇಲಿನ ಭಾಗ ಒಣಗಿದಂತಾಗಿ ಮತ್ತೆ ಹದ ಸಿಕ್ಕಿದ ಕೂಡಲೇ ಬೆಳೆಯುತ್ತವೆ. ಒಂದು ಗಿಡದಿಂದ ಒಂದು ವರ್ಷಕ್ಕೆ ಸುಮಾರು ಒಂದು ಲಕ್ಷ ಬೀಜ ಉತ್ಪತ್ತಿಯಾಗುತ್ತವೆ. ಬೀಜವೇ ಇಲ್ಲದೆ ಭೂಮಿಯೊಳಗೆ ಬೇರುಗಳು ಹಬ್ಬಿ ಬೆಳೆಯುತ್ತವೆ.

Mimosa pudica folding leaflets inward ಒಳಮುಚುಗ
ಮುಟ್ಟಿದರೆ ಮುನಿ ೨

ಗಿಡವು ತಿಳಿ ನೇರಳೆ ಬಣ್ಣದ ಆಕರ್ಷಕ ಹೂವು ಬಿಡುತ್ತದೆ. ಹೂವು ಗಿಡದ ತುದಿಯಲ್ಲಿರುತ್ತದೆ, ಸಾಮಾನ್ಯವಾಗಿ ಈ ಹೂವಿನ ವ್ಯಾಸ ೧-೨ ಸೆಂಟಿಮೀಟರ್ ಗಳಷ್ಟೆ. ಹೂಗಳು ಗುಂಡನೆಯ ಚಂಡಿನಂಥ ಮಂಜರಿಗಳಲ್ಲಿ ಅಡಕಗೊಂಡಿವೆ. ಕಾಯಿಗಳು ಚಪ್ಪಟೆಯಾದ ಪಾಡ್ ಮಾದರಿಯವು. ಇವುಗಳ ಮೇಲೆಲ್ಲ ಕಿರುಮುಳ್ಳುಗಳುಂಟು. ಬೀಜಗಳ ಸಂಖ್ಯೆ 3-5.

ಸಸ್ಯದ ವಿಧಗಳು

[ಬದಲಾಯಿಸಿ]

ಈ ಸಸ್ಯದಲ್ಲಿ ಎರಡು ವಿಧಗಳಿದ್ದು ಒಂದು ಹೊರ ಮುದುಡುವಿಕೆ - ಹೊರಮುಚಗ ಹಾಗೂ ಎರಡನೆಯದಾಗಿ ಒಳ ಮುದುಡುವಿಕೆ - ಒಳಮುಚುಗ ಎಂಬ ಭೇದಗಳಿವೆ.

ಉಪಯೋಗಗಳು

[ಬದಲಾಯಿಸಿ]

ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯ ಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾಧಿ (Piles) ಗುಣಮುಖವಾಗುತ್ತದೆ. ಮೂತ್ರ ಕೋಶದ ಕಲ್ಲು ನಿವಾರಣೆಯಲ್ಲಿ, ಮಹಿಳೆಯರ ಋತುಚಕ್ರ ಸರಾಗವಾಗಿ ಆಗುವಲ್ಲಿ, ಹಲ್ಲು ನೋವಿನ ನಿವಾರಣೆಯಲ್ಲಿ ಈ ಸಸ್ಯದ ಪಾತ್ರ ದೊಡ್ಡದು. ಈ ಸಸ್ಯದ ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.

ಹಸುರುಗೊಬ್ಬರವಾಗಿ ಕೂಡ ಇದನ್ನು ಉಪಯೋಗಿಸಲಾಗಿದೆ. ಮುಟ್ಟಿದರೆ ಮುನಿ ಆಯುರ್ವೇದ ವೈದ್ಯಪದ್ಧತಿಯಲ್ಲಿ ಒಳ್ಳೆಯ ಔಷಧಿಸಸ್ಯವೆಂದು ಪ್ರಸಿದ್ಧವಾಗಿದೆ. ಕಫ ಪಿತ್ತವಿಕಾರಗಳನ್ನು ದೂರ ಮಾಡುವುದಲ್ಲದೆ ರಕ್ತಪಿತ್ತ, ಭೇದಿ, ಯೋನಿರೋಗಗಳನ್ನು ನಿವಾರಿಸುತ್ತದೆ. ಮೂತ್ರವಿಸರ್ಜನೆಯಾಗುವಾಗ ಉರಿ ಕಾಣಿಸಿಕೊಂಡರೆ, ರಕ್ತಹೋಗುತ್ತಿದ್ದರೆ, ಇದರ ಒಣಬೇರಿನ ಕಷಾಯ ಸೇವನೆ ಉಪಯುಕ್ತವೆನ್ನಲಾಗಿದೆ. ಭಗಂದರ, ಅಂಡವಾಯು, ಬಿಳಿ ಹಾಗೂ ಕೆಂಪುಸೆರಗು ಮುಂತಾದವಕ್ಕೆ ಇದರ ಎಲೆ ಮತ್ತು ಬೇರಿನ ಕಷಾಯ ಪರಿಣಾಮಕಾರಿ ಔಷಧ. ಗ್ರಂಥಿಗಳ ಊತ, ಮೂತ್ರಪಿಂಡಗಳ ಊತ ಮುಂತಾದ ಹಲವಾರು ಬೇನೆಗಳಿಗೆ ಇದರ ಎಲೆ ಮತ್ತು ಬೇರು ಕಷಾಯ ಒಳ್ಳೆಯ ಮದ್ದು ಎನಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Mimosa pudica information from NPGS/GRIN". www.ars-grin.gov. Archived from the original on 2009-02-11. Retrieved 2008-03-27.
  2. "Mimosa pudica". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 2008-03-27.
  3. Raven, Peter H.; Evert, Ray F.; Eichhorn, Susan E. (January 2005). "Section 6. Physiology of Seed Plants: 29. Plant Nutrition and Soils". Biology of Plants (7th ed.). New York: W. H. Freeman and Company. p. 639. ISBN 978-0-7167-1007-3. LCCN 2004053303. OCLC 56051064.
  4. Chamovitz, Daniel (6 October 2020). What a Plant Knows: A Field Guide to the Senses. ISBN 978-0-374-60000-6. OCLC 1292740991.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: