ಮಾಗಳಿ ಬೇರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Decalepis hamiltonii.jpg

ಮಾಗಳಿ ಬೇರು ಆಸ್‍ಕ್ಲಿಪಿಯಡೇಸೀ ಕುಟುಂಬಕ್ಕೆ ಸೇರಿದ ವನ್ಯಸಸ್ಯ. ಮಾಕಳಿ ಬೇರು ಪರ್ಯಾಯ ನಾಮ. ಇದರ ಶಾಸ್ತ್ರೀಯ ನಾಮ ಡೆಕಾಲೆಪಿಸ್ ಹ್ಯಾಮಿಲ್‍ಟೋನಿಯೈ.

ದಕ್ಷಿಣ ಭಾರತದಲ್ಲೆಲ್ಲ ವ್ಯಾಪಕವಾಗಿ ಬೆಳೆಯುವ ಇದು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಬಲು ಸಾಮಾನ್ಯ. ಇದು ಬಳ್ಳಿಯಂತೆ ಹಬ್ಬುವ ಪೊದೆ; ಜಂಟಿಜಂಟಿಯಾಗಿರುವಂತೆ ತೋರುವ ಕಾಂಡವನ್ನೂ ಉದ್ದದ್ದ ಅಂಡಾಕಾರದ ಎಲೆಗಳನ್ನೂ ಪಡೆದಿದೆ. ಈ ಗಿಡದ ಪ್ರಧಾನ ಹಾಗೂ ಉಪಯುಕ್ತ ಅಂಗವೆನಿಸಿರುವ ಬೇರು ಉರುಳಿಯಾಕಾರದ್ದು ಮಾಂಸಲವಾದ್ದು. ಇದಕ್ಕೆ ಸೊಗದೆ ಬೇರಿಗಿರುವಂಥ ಸಿಹಿರುಚಿಯೂ ತೀವ್ರತೆರನ ಸುವಾಸನೆಯೂ ಇವೆ. ಇದಕ್ಕೆ ಕಾರಣ ಬೇರಿನಲ್ಲಿರುವ 4-0-ಮೀಥೈಲ್-ರೆಸಾರ್ಸೈಲ್ ಆಲ್ಡಿಹೈಡ್ ಎಂಬ ರಾಸಾಯನಿಕ. ಇದಕ್ಕೆ ಬ್ಯಾಕ್ಟೀರಿಯ ನಾಶಕ ಗುಣವೂ ಮೀನು ಮುಂತಾದವುಗಳನ್ನು ಕೊಲ್ಲುವ ಗುಣವೂ ಇವೆ. ಇದರಿಂದಾಗಿ ಮಾಗಳೀ ಬೇರನ್ನು ದೀರ್ಘಕಾಲ ಸಂಗ್ರಹಿಸಿಡಬಹುದು. ಸೂಕ್ಷ್ಮಜೀವಿಗಳಾಗಲಿ ಕೀಟಗಳಾಗಲಿ ಇದಕ್ಕೆ ತಗಲುವುದಿಲ್ಲ. ಈ ರಾಸಾಯನಿಕವನ್ನು ಆವಿಆಸವೀಕರಣದಿಂದ ಬೇರ್ಪಡಿಸಿ, ಆಹಾರ ಸಂರಕ್ಷಣೆಯಲ್ಲಿ ಬಳಸಬಹುದಾಗಿದೆ.

ಮಾಗಳೀ ಬೇರು ಹಸಿವುಕಾರಕವೆಂದೂ ರಕ್ತಶುದ್ಧಿಕಾರಕವೆಂದೂ ಹೆಸರಾಗಿದೆ. ನಿಂಬೆ ಮಾವು ಮುಂತಾದವುಗಳೊಂದಿಗೆ ಸೇರಿಸಿ ಇಲ್ಲವೆ ಇದನ್ನು ನೇರವಾಗಿ ಉಪ್ಪಿನಕಾಯಿ ಹಾಕುವುದಿದೆ.[೧] ಇದರ ಬೇರನ್ನು ನನ್ನಾರಿ ಬೇರಿಗೆ(ಸೊಗದೇಬೇರು) ಬದಲಾಗಿ, ಕಲಬೆರಕೆ ಮಾಡಿ ಬಳಸುವುದೂ ಉಂಟು.

ಉಲ್ಲೇಖಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: