ಮಹದೇವ ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಚ್. ಎಸ್. ಮಹದೇವ ಪ್ರಸಾದ್ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.[೧]

ಜನನ[ಬದಲಾಯಿಸಿ]

ಮಹದೇವಪ್ರಸಾದ್‌ ಅವರದು ಮೂಲತಃ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿ. ಜಮೀನ್ದಾರರಾಗಿದ್ದ ಎಚ್‌.ಎಸ್‌. ಶ್ರೀಕಂಠಶೆಟ್ಟಿ ಮತ್ತು ವೈ.ಬಿ. ವೀರಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಮಹದೇವಪ್ರಸಾದ್‌ ಅವರೇ ಹಿರಿಯ ಪುತ್ರ. ಅವರು ಹುಟ್ಟಿದ್ದು 1958ರ ಆಗಸ್ಟ್‌ 5ರಂದು.

ಶಿಕ್ಷಣ[ಬದಲಾಯಿಸಿ]

ತನ್ನ ತಾಯಿಯ ಮನೆಯಾದ ಕೆ.ಆರ್. ನಗರದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದಲ್ಲಿ ಪ್ರೌಢಶಿಕ್ಷಣ ಪಡೆದರು. ಬಳಿಕ ಜೆಎಸ್‌ಎಸ್‌ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ವೈವಾಹಿಕ ಜೀವನ[ಬದಲಾಯಿಸಿ]

1983ರ ಅ. 28ರಂದು ಡಾ.ಎಂ.ಸಿ. ಮೋಹನ್‌ಕುಮಾರಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಪುತ್ರ ಎಚ್‌.ಎಂ. ಗಣೇಶ್‌ಪ್ರಸಾದ್‌ ಇದ್ದಾರೆ.

ಸಾರ್ವಜನಿಕ ಜೀವನ[ಬದಲಾಯಿಸಿ]

ರಾಜ್ಯದ ರಾಜಕೀಯ ಚರಿತ್ರೆಯಲ್ಲಿ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನವಿದೆ. ಮೊದಲ ಮಹಿಳಾ ಸ್ಪೀಕರ್‌ ಕೆ.ಎಸ್‌. ನಾಗರತ್ನಮ್ಮ ಮತ್ತು ಅಬ್ದುಲ್‌ ನಜೀರ್‌ ಸಾಬ್‌ ಅವರನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದು, ಈ ಕ್ಷೇತ್ರದ ಹೆಗ್ಗಳಿಕೆ. ಪ್ರಬುದ್ಧ ಚಿಂತನೆಯ ರಾಜಕಾರಣಿಯಾದ ಎಚ್‌.ಎಸ್‌. ಮಹದೇವಪ್ರಸಾದ್‌ ಕೂಡ ಈ ಕ್ಷೇತ್ರದವರು.

ತಂದೆ ಶ್ರೀಕಂಠಶೆಟ್ಟಿ ಸ್ವಾತಂತ್ರ್ಯ ಹೋರಾಟಗಾರರು. ಅವರು ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1983ರಲ್ಲಿ ಜನತಾ ಪಕ್ಷದಿಂದ ಶ್ರೀಕಂಠಶೆಟ್ಟಿ ಅವರು ನಾಗರತ್ನಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಸೋಲುಂಡರು. ಅವರಿಗೆ ರಾಜಕೀಯದಲ್ಲಿ ಯಶಸ್ಸು ಗೌಣವಾಯಿತು. ಅವರ ಪುತ್ರ ರಾಜಕೀಯ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದರು. ಮಹದೇವಪ್ರಸಾದ್‌ ಸತತ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇ ಇದಕ್ಕೆ ಸಾಕ್ಷಿ. ಮಹದೇವಪ್ರಸಾದ್‌ ವಿದ್ಯಾರ್ಥಿ ದಿಸೆಯಲ್ಲಿಯೇ ಡಿ. ದೇವರಾಜ ಅರಸು ಅವರ ಸಿದ್ಧಾಂತಕ್ಕೆ ಮಾರುಹೋದರು. ಅವರ ಪ್ರಭಾವದಿಂದ 1975ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಮೈಸೂರು ಜಿಲ್ಲಾ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಮಹದೇವಪ್ರಸಾದ್‌ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಲೋಹಿಯಾ, ಜಯಪ್ರಕಾಶ್‌ ನಾರಾಯಣ, ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು ಅವರ ಚಿಂತನೆಗಳ ಬಗ್ಗೆ ಅವರಿಗೆ ಅಪಾರ ಒಲವಿತ್ತು. ದಿ.ಜೆ.ಎಚ್. ಪಟೇಲ್‌ ಮತ್ತು ದಿ.ಎಂ. ಪಿ. ಪ್ರಕಾಶ್ ಅವರೊಂದಿಗೆ ಒಡನಾಟ ಹೆಚ್ಚಿತ್ತು.

ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಅನುಭವವಿದ್ದ ಮಹದೇವಪ್ರಸಾದ್‌ 1985ರಲ್ಲಿ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ನಾಗರತ್ನಮ್ಮ ಅವರ ಅಬ್ಬರದ ಮುಂದೆ ಗೆಲುವು ಮಂಕಾಯಿತು. 1989ರ ಚುನಾವಣೆಯಲ್ಲೂ ಅವರಿಗೆ ಸೋಲು ಕಾಡಿತು.

ಮೂರುವರೆ ದಶಕಗಳ ಕಾಲ ಜನಪ್ರಿಯ ರಾಜಕಾರಣಿಯಾಗಿದ್ದ ನಾಗರತ್ನಮ್ಮ 1993ರಲ್ಲಿ ನಿಧನರಾದರು. ಆ ನಂತರ ಗುಂಡ್ಲುಪೇಟೆ ಕ್ಷೇತ್ರದ ರಾಜಕೀಯ ಚಿತ್ರಣವೂ ಬದಲಾವಣೆ ಕಂಡಿತು.

1994ರಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಹಿಂದಿನ ಎರಡು ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದ ಮಹದೇವಪ್ರಸಾದ್‌ ಜನತಾದಳದಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದು ಜಯಭೇರಿ ಬಾರಿಸಿದರು.

1999ರ ಚುನಾವಣೆ ವೇಳೆಗೆ ಜನತಾದಳವು ರಾಜಕೀಯವಾಗಿ ಸ್ಥಿತ್ಯಂತರ ಕಂಡಿತು. ಜೆಡಿ(ಯು)ನಿಂದ ಅಖಾಡಕ್ಕೆ ಇಳಿದ ಮಹದೇವಪ್ರಸಾದ್‌ ಪುನರಾಯ್ಕೆಯಾದರು. 2004ರ ಚುನಾವಣೆ ವೇಳೆಗೆ ಮಹದೇವಪ್ರಸಾದ್‌ ಜೆಡಿಎಸ್‌ ಬಾಗಿಲು ತಟ್ಟಿದರು. ಆ ಚುನಾವಣೆಯಲ್ಲೂ ಕ್ಷೇತ್ರದ ಮತದಾರರು ಅವರನ್ನು ಕೈಬಿಡಲಿಲ್ಲ.

ಮಹದೇವಪ್ರಸಾದ್‌ಗೆ ಬದಲಾದ ರಾಜಕೀಯದ ಸ್ಥಿತಿಗತಿಗೆ ಹೊಂದಿಕೊಳ್ಳುವ ವಿಶಿಷ್ಟ ಗುಣ ಕರಗತವಾಗಿತ್ತು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆ ಚುನಾವಣೆಯಲ್ಲೂ ಜಯಗಳಿಸಿದರು. 2013ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದರು.

ಮೂರುವರೆ ದಶಕದ ರಾಜಕೀಯ ಜೀವನದಲ್ಲಿ ಮಹದೇವಪ್ರಸಾದ್‌ 3 ಬಾರಿ ಸಚಿವರಾಗಿದ್ದರು. 2004ರಲ್ಲಿ ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನಿರ್ವಹಿಸಿದ್ದರು. 2007ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು.

ಮೈಸೂರು ಭಾಗದಲ್ಲಿ ಜಯಗಳಿಸಿದ ಏಕೈಕ ಲಿಂಗಾಯತ ಸಮುದಾಯ ಪ್ರತಿನಿಧಿಸುವ ಶಾಸಕರಾಗಿದ್ದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರು. ಇದು ಅವರಿಗೆ ಸಹಕಾರ ಮತ್ತು ಸಕ್ಕರೆ ಸಚಿವ ಖಾತೆ ಲಭಿಸಲು ವರದಾನವಾಗಿತ್ತು.

ಜಿಲ್ಲೆಯ ಅಭಿವೃದ್ಧಿಗೆ ನಾಂದಿ ಹಾಡಿದ್ದು, ಅವರ ಹೆಗ್ಗಳಿಕೆ. 2007ರ ವೇಳೆ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪಿಸಿದರು. ಪ್ರಸಕ್ತ ವರ್ಷ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೂ ಮುನ್ನುಡಿ ಬರೆದರು. ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಮಹದೇಶ್ವರ ಬೆಟ್ಟದ ಅಭಿವೃದ್ಧಿಗೆ ಒತ್ತು ನೀಡಿದರು.

ವ್ಯಕ್ತಿತ್ವ[ಬದಲಾಯಿಸಿ]

ಹೊಂದಾಣಿಕೆಯ ರಾಜಕಾರಣದಲ್ಲಿ ಅವರು ಸಿದ್ಧಹಸ್ತರು. ಯಾರೊಂದಿಗೂ ಹಗೆತನ ಬೆಳೆಸಿಕೊಂಡ ನಿದರ್ಶನವಿಲ್ಲ. ಅವರು ಅಜಾತಶತ್ರುವಾಗಿದ್ದರು.

ಸೇವೆ[ಬದಲಾಯಿಸಿ]

1990ರಿಂದ 1994ರವರೆಗೆ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1994ರಿಂದ 1999ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯರಾಗಿ ಸೇವೆ ಸಲ್ಲಿಸಿದರು. ಒಂದೂವರೆ ದಶಕದಿಂದ ಮೈಸೂರಿನ ಜ್ಞಾನಬುತ್ತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಅಧ್ಯಕ್ಷರಾಗಿದ್ದಾರೆ.

ಗುಂಡ್ಲುಪೇಟೆಯಲ್ಲಿ ಸಂಗಮ ಟ್ರಸ್ಟ್‌ ಎಂಬ ದತ್ತಿ ಸಂಸ್ಥೆ ಸ್ಥಾಪಿಸಿದ್ದಾರೆ. ಆರೋಗ್ಯ ಸೇವೆ, ಸಾಮೂಹಿಕ ವಿವಾಹ ಸೇರಿದಂತೆ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲು ಈ ಟ್ರಸ್ಟ್‌ ಉದ್ಯೋಗ ಮೇಳ ಆಯೋಜಿಸುತ್ತಿದೆ.

ವಿವಾದ[ಬದಲಾಯಿಸಿ]

ಸಂವೇದನಾಶೀಲರಾಗಿದ್ದ ಅವರು ಆರೋಪಗಳಿಂದ ಹೊರತಾಗಿರಲಿಲ್ಲ. ಕರ್ನಾಟಕ ಗೃಹ ಮಂಡಳಿಯಿಂದ ಅಕ್ರಮವಾಗಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಅವರಿಗೆ ಅಂಟಿಕೊಂಡಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಕೊನೆಗೆ, ದೂರುದಾರ ಹಿರೇಬೇಗೂರು ನಂದೀಶ್‌ ಕೋರ್ಟ್‌ನಿಂದ ಅರ್ಜಿ ಹಿಂಪಡೆದಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಆಸ್ತಿ ಸಂಬಂಧ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಪ್ರಕರಣವು ಗುಂಡ್ಲುಪೇಟೆ ಜೆಎಂಎಫ್‌ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ವಿದಾಯ[ಬದಲಾಯಿಸಿ]

ಮಹದೇವ ಪ್ರಸಾಧ್ ಅವರು 2017 ಜನವರಿ 3 ಮಂಗಳವಾರ ಬೆಳಗಿನ ಜಾವ ಚಿಕ್ಕಮಗಳೂರು ಬಳಿಯ ರೆಸಾರ್ಟ್ ಒಂದರಲ್ಲಿ ಹೃದಯಾಘಾತದಿಂದ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. "Karnataka Minister Mahadeva Prasad dies". ದಿ ಹಿಂದೂ. 3 January 2017.