ಮಂಜೂಷಾ ವಸ್ತು ಸಂಗ್ರಹಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Manjusha Museum In Dharmasthala

ಬೆಳ್ತಂಗಡಿ ತಾಲೂಕು ಪ್ರಾಕೃತಿಕವಾಗಿ,ಸಾಮಾಜಿಕವಾಗಿ,ಐತಿಹಾಸಿಕವಾಗಿ, ಆರ್ಥಿಕವಾಗಿ, ಸಾಂಸ್ಕ್ರತಿಕವಾಗಿ, ಚಾರಿತ್ರಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಗುರುತಿಸಲ್ಪಟ್ಟ ಪ್ರದೇಶವಾಗಿದೆ. ಧಾರ್ಮಿಕವಾಗಿ ಅತ್ಯಂತ ಪ್ರಸಿದ್ಧಿ ಪಡೆದ ಮಂಜುನಾಥ ದೇವಾಲಯ ಇರುವುದು ಕೂಡ ಈ ತಾಲೂಕಿನ ಭಾಗವಾದ ಧರ್ಮಸ್ಥಳದಲ್ಲಿ. ಇದೆಲ್ಲದರ ಜೊತೆಗೆ ಯಾತ್ರಿಕರನ್ನು ತನ್ನತ್ತ ಸೆಳೆಯುವ ಪ್ರಸಿದ್ಧ ಸಾಂಸ್ಕ್ರತಿಕ ವಸ್ತುಸಂಗ್ರಹಾಲಯವೂ ಇದೆ. ಅದುವೇ ಮಂಜೂಷಾ ವಸ್ತುಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯಕ್ಕೆ ಅದರದೇ ಆದ ವೈಶಿಷ್ಟ್ಯವಿದೆ. ಮಂಜೂಷಾ ಎಂದರೆ ಅಮೂಲ್ಯ ಆಭರಣಗಳ ಪೆಟ್ಟಿಗೆ. ಇದು ಹೆಗ್ಗಡೆಯವರ ಕನಸಿನ ಕೂಸು. ಸುಮಾರು ಮೂರು ದಶಕಗಳ ಸತತ ಪ್ರಯತ್ನ, ಪರಿಶ್ರಮದ ಹೆಮ್ಮರ. ವಿಶೇಷ ಆಸಕ್ತಿ, ಶ್ರದ್ಧೆ, ಅಪಾರ ಶ್ರಮದ ಜೊತೆಗೆ ವೈಜ್ಞಾನಿಕ ದೃಷ್ಟಿಕೋನದಿಂದ ಆವಿಷ್ಕಾರಗೊಂಡ ನೂತನ ಪಳೆಯುಳಿಕೆ. ಇದರಲ್ಲಿ ಐತಿಹಾಸಿಕ, ಸಾಮಾಜಿಕ, ಜಾನಪದ ಹಾಗೂ ಸಮಕಾಲೀನ ಸರ್ವಾಂಗ ಕುರುಹುಗಳ ದಾಖಲೆ ಇದೆ. ಹೀಗೆ ಕಲಾತ್ಮಕವಾಗಿ ರೂಪುಗೊಂಡ ಅಪೂರ್ವ ವಸ್ತುಗಳ ಸಂಗ್ರಹಾಲಯ ಮಂಜೂಷಾ ಲಕ್ಷಾಂತರ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಮಂಜೂಷಾಕ್ಕೆ ಪ್ರೇರಣೆ[ಬದಲಾಯಿಸಿ]

ಮಾನ್ಯ ಶ್ರೀ ಮಂಜಯ್ಯ ಹೆಗ್ಗಡೆಯವರು ದೂರ ದೃಷ್ಟಿಯುಳ್ಳ ವ್ಯಕ್ತಿ, ಸ್ವತಃ ಚಿತ್ರಕಾರ, ಕಲಾವಿದ, ಮಂಜುನಾಥನ ಸನ್ನಿಧಿಗೆ ಇದಿರಾದ ವಸಂತ ಮಹಲ್ ಕಲಾ ಮಂದಿರವನ್ನು ನಿರ್ಮಿಸಿ ಅದರಲ್ಲಿ ತಮ್ಮ ಕಲಾ ಕೌಶಲ್ಯಗಳ ಪ್ರದರ್ಶನ ಮಾಡಲು ಬಯಸಿದರು. ತಮ್ಮ ತೀರ್ಥರೂಪರ ಕೌಶಲ್ಯದತ್ತ ಆಕರ್ಷಿತರಾದ ವೀರೇಂದ್ರ ಹೆಗ್ಗಡೆಯವರು ತಮ್ಮ ಕೆರಳಿದ ಆಸಕ್ತಿಯೊಂದಿಗೆ ಪ್ರಾಚೀನ ವಸ್ತುಗಳ ಮೇಲಿರುವ ವ್ಯಾಮೋಹವನ್ನು ಸೇರಿಸಿದರು. ಹೀಗೆ ದಿಗ್ಧರ್ಶಿಗಳ ಹಸ್ತದಿಂದ ಮಂಜೂಷಾ ಚಿಗುರೊಡೆಯಿತು. ಇವರ ಆಸಕ್ತಿಯಿಂದ ಹರಿದು ಬಂದ ಪ್ರಾಚೀನ ಪ್ರಾತ್ಯಕ್ಷಿಕೆಗಳಿಗೆ ಬೂಡಿನ ಮೇಲ್ಭಾಗದ ಗಾಜಿನ ಮನೆ ಆಶ್ರಯವಾಯಿತು. ಹೀಗೆ ಪ್ರಥಮ ಬಾರಿಗೆ ವಸ್ತುಸಂಗ್ರಹಾಲಯವು ರೂಪುಗೊಂಡು ಧರ್ಮಸ್ಥಳವು ಕೇವಲ ಧಾರ್ಮಿಕ ಪುಣ್ಯಕ್ಷೇತ್ರವಾಗುವುದರ ಜೊತೆಗೆ ಅದೊಂದು ಆಕರ್ಷಕ ಪ್ರವಾಸಿ ಕೇಂದ್ರವಾಗಿಯೂ ಬೆಳೆಯುವಂತಾಯಿತು.

ಮಂಜೂಷಾದ ಬೆಳವಣಿಗೆ[ಬದಲಾಯಿಸಿ]

ಗಾಜಿನ ಮನೆ ಕಲಾ ಸಂಗ್ರಹಾಲಯ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿ ತೆರೆದಾಗ ಹರಿದು ಬರುವ ಜನಸಾಗರದೊಂದಿಗೆ ಉತ್ತಮ ಪ್ರತಿಕ್ರಿಯೆಗಳು ಪ್ರೇರಣೆಯಾಯಿತು. ಆದರೆ ದಶದಿಕ್ಕುಗಳಿಂದ ಹರಿದು ಬಂದ ವಸ್ತುಗಳ ಜೋಡಣೆ ಸಮರ್ಪಕವಾಗದೆ ಹಾಗೂ ಸ್ಥಳಾವಕಾಶದ ಕೊರತೆಯಿಂದ ಸಮಸ್ಯೆ ಬಗೆಹರಿಸಲು ವಸಂತ ಮಹಲಿನ ಪಕ್ಕದ ದೊಡ್ಡ ಕಟ್ಟಡದ ಮೇಲಂತಸ್ತನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಿದರು. ದೇಶ-ವಿದೇಶಗಳ ವಸ್ತುಸಂಗ್ರಹಾಲಯವನ್ನು ಸುತ್ತಿ, ಅನುಭವಿ ತಜ್ಞರನ್ನು ಸಂಪರ್ಕಿಸಿ, ಜೊತೆಗೆ ಸ್ವವಿಚಾರಧಾರೆಗಳನ್ನು ಸೇರಿಸಿ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಸೂಕ್ತ ವಿನ್ಯಾಸದಿಂದ ಮಂಜೂಷಾ ಬೆಳಕಿಗೆ ಬಂತು.

ವಸ್ತುಸಂಗ್ರಹಣಾ ಕಾರ್ಯ[ಬದಲಾಯಿಸಿ]

ಮಂಜೂಷಾ ನಿರ್ಮಾಣವಾಗುತ್ತಿದ್ದಂತೆ ವೀರೇಂದ್ರ ಹೆಗ್ಗಡೆಯವರ ವಿಚಾರಧಾರೆ ದ್ವಿಮುಖವಾಗಿ ಹರಿಯಲಾರಂಭಿಸಿತು. ವಸ್ತುಗಳ ಸಂಗ್ರಹಣೆಗಿಂತ ಸಂರಕ್ಷಿಸುವುದು ತುಂಬಾ ಜವಾಬ್ದಾರಿಯುತ ಕೆಲಸ . ಒಂದೆಡೆ ವ್ಯವಸ್ಥಿತ ಜೋಡಣೆ ಕ್ರಿಮಿಕೀಟಗಳಿಂದ ರಕ್ಷಣೆ, ವಸ್ತುಗಳ ಬಾಳಿಕೆಗೆ ವೈಜ್ಞಾನಿಕ ಲೇಖನಗಳು ಮಾಸಿದ ಬರಹಗಳ ಪುನರ್ ನಿರ್ಮಾಣ, ಇವೆಲ್ಲ ಜಟಿಲ ಕೆಲಸಗಳು. ಇನ್ನೊಂದಡೆ, ವಸ್ತುಗಳ ಶಾಸ್ತ್ರೀಯ ವರ್ಗೀಕರಣ, ಅದರ ಚರಿತ್ರೆಯನ್ನು ದಾಖಲಿಸಬೇಕಾದ ಅಪಾರ ಶ್ರಮ. ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಮಂಜೂಷಾ ವಸ್ತು ಸಂಗ್ರಹಾಲಯ ತನ್ನದೇ ಆದ ವೈಶಿಷ್ಠ್ಯವನ್ನು ಉಳಿಸಿಕೊಂಡು ಒಂದು ಮಾದರಿಯಾದ ವಸ್ತುಸಂಗ್ರಹಾಲಯವಾಗಿ ರೂಪುಗೂಳ್ಳಲು ಸಾಧ್ಯವಾಯಿತು.

ಮಂಜೂಷಾದ ಸ್ಥಾಪನೆ[ಬದಲಾಯಿಸಿ]

[[ಭಾರತ ದ ಸರ್ವೋಚ್ಚ ನ್ಯಾಯಾಲಯ]]ದ ಮುಖ್ಯ ನ್ಯಾಯಾಧೀಶರಾಗಿದ್ಧ ಶ್ರೀ ಇ.ಎಸ್. ವೆಂಕಟರಾಮಯ್ಯನವರಿಂದ ೧೯೮೯ರ ನವೆಂಬರ್ ೯ರಂದು ವಿದ್ಯುಕ್ತವಾಗಿ ಉದ್ಘಾಟಿಸಲ್ಪಟ್ಟ ಮಂಜೂಷಾದಲ್ಲಿ ಕರ್ನಾಟಕದ ಎಲ್ಲಾ ಭಾಗದ ವಸ್ತುಗಳೂ ಸೇರಿದೆ. ಅಷ್ಟೇ ಎಕೆ? ದೇಶ ವಿದೇಶಿಯ ವಸ್ತುಗಳನ್ನು ಕಲೆ ಹಾಕಲಾಗಿದೆ. ಪೂರ್ವ ಪಶ್ಚಿಮ ಜರ್ಮನಿಗಳ ಏಕೀಕರಣಗೊಂಡಾಗ ಒಡೆದು ಹಾಕಲಾದ 'ಬರ್ಲಿನ್' ಗೋಡೆಯ ಭಾಗದ ಸಂಗ್ರಹಣೆ ಹಾಗೂ ೧೯೯೦ರ ಇರಾಕ್ ಕದನದಲ್ಲಿ ರಾಸಾಯಿನಿಕ ಹಾಗೂ ವಿಷ ಅನಿಲಗಳಿಂದ ರಕ್ಷಣೆ ಪಡೆಯಲು ಉಪಯೋಗಿಸುತ್ತಿದ್ದ ಮಾಸ್ಕ್ ನ ಸಂಗ್ರಹವಿದೆ.

ವಸ್ತುಗಳು ವರ್ಗೀಕರಣಗೊಂಡಾಗ[ಬದಲಾಯಿಸಿ]

ಮಿಲಿಯಾಂತರ ವರ್ಷಗಳನ್ನು ಮೀರಿಸಿ ಇತಿಹಾಸದಲ್ಲಿ ಇಂಗಿಹೋದ ಮನುಕುಲದ ಸಂಸ್ಕ್ರತಿ ಶಿಲಾಯುಗದ ಅಧ್ಯಯನಕ್ಕೆ ಹಾಗೂ ಕಾಲ ನಿರ್ಣಯಕ್ಕೆ ಸಹಕಾರಿ ಅಂಶಗಳೆಂದರೆ -ಪೊಟಾಷಿಯಂ - ಆರ್ಗಾನ್ ಗಳಿಂದ ಕೃಷ್ಣ ಘಟಪ್ರಭಾದ ಕಿನಾರೆಯಿಂದ ಹಿಡಿದು ಹಂಪೆ ಚಿತ್ರದುರ್ಗದ ಕಲಾ ವೈಭವಗಳವರೆಗಿನ ಪ್ರಾಚ್ಯ ವಸ್ತುಗಳು ಇಲ್ಲಿ ಸೇರಿ ಹೋಗಿವೆ . ಶಿಲಾಯುಗದಿಂದ ಬೆಳೆದು ಲೋಹಯುಗದವರೆಗಿನ ಸೂಕ್ಷ್ಮ ಸಂವೇದನೆಗಳನ್ನು ಆಳವಾಗಿ ಆಭ್ಯಸಿಸಿ ವಸ್ತುಗಳನ್ನು ಕಲೆ ಹಾಕಲಾಗಿದೆ. ಸಂಕ್ಷಿಪ್ತವಾಗಿ ನೋಡುವುದಾದರೆ...

  • ಮೂರ್ತಿಶಿಲ್ಪಗಳು

ಮಂಜೂಷಾದ ಬಹುದೊಡ್ಡ ಹಾಗೂ ಬೆಳೆಬಾಳುವ ಸಂಗ್ರಹ ಮೂರ್ತಿಶಿಲ್ಪ ವಸ್ತು ಸಂಗ್ರಹಾಲಯಯಕ್ಕೆ ಮೌಲಿಕತೆಯನ್ನು ತಂದುಕೊಡುವಲ್ಲಿ ಇವುಗಳ ಪಾತ್ರ ಹಿರಿದು. ಶಿಲ್ಪರಚನೆ , ನಿಂತಭಂಗಿ, ಶೈಲಿ, ಅಂಗವಿನ್ಯಾಸ ಅಲಂಕಾರದ ಕುಸುರಿ ಕಲೆಗಳನ್ನು ಆಧಾರವಾಗಿರಿಸಿ ಕಾಲಮಾಪನ ಮಾಡಲು ಸಾಧ್ಯ. ಇಲ್ಲಿನ ಒಂದು ವಿಗ್ರಹ ಪಾಣಿಪೀಠದ ಆಕಾರದಲ್ಲಿದ್ದು, ಮೂಲ ರೂಪ ಯಾವುದೆಂದು ನಿರ್ಧರಿಸಲು ಸಾಧ್ಯವಾಗಿಲ್ಲ. ಚಾಲುಕ್ಯ ರಾಣಿ ಸಿರಿಯಾಳ ದೇವಿಯದೆಂದು ಉಲ್ಲೇಕಿಸಲ್ಪಟ್ಟ ಶಿಲ್ಪ ಉತ್ಕ್ರಷ್ಠ ಕಲಾ ವಲ್ಲಭರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಮಂದಹಾಸ ಬೀರುವ ಮುಖ, ಗಂಗುರು ತಲೆಕೂದಲು ಆಭರಣಗಳ ಕುಸುರಿ ಕೆತ್ತನೆಗಳು ನಮ್ಮ ಶ್ರೀಮಂತ ಕಲಾವೈಭವವನ್ನು ಸಾರಿ ಹೆಳುತ್ತದೆ. ಮಂಜೂಷಾದಲ್ಲಿ ಸಂಗ್ರಹಿಸಿರುವ ಎಲ್ಲಾ ಸಂಪ್ರದಾಯದ ವಿಗ್ರಹಗಳಲ್ಲಿ ಅನೇಕ ಅಂತರ್ಬೇಧಗಳನ್ನು ಕಾಣಬಹುದು. ಇವುಗಳಲ್ಲಿ ಲೋಹವನ್ನು ಬಡಿದು ತಯಾರಿಸಿದ ವಿಗ್ರಹಗಳಿಗಿಂತಲೂ, ಅಚ್ಚಲ್ಲಿ ಎರಕ ಹೊಯ್ದು ತಯಾರಿಸಿದ ವಿಗ್ರಹಗಳು ನೋಡುಗರ ಕಣ್ಮನ ಸೆಳೆಯುತ್ತದೆ.

  • ನಾಣ್ಯಗಳು

ಐತಿಹಾಸಿಕ ಒಗಟುಗಳಿಗೆ ಸವಾಲಾಗಿ ನಿಂತಿವೆ ನಾಣ್ಯಗಳು. ನಾಣ್ಯದ ವಿನ್ಯಾಸ, ಬಳಸಿಕೊಂಡ ಲೋಹ, ಮುದ್ರಿಸಲ್ಪಟ್ಟ ಇಸವಿ, ಯಾವ ರಾಜನ ಕಾಲದಲ್ಲಿ ಬಿಡುಗಡೆಯಾಗಿದೆ ಎಂಬುದನ್ನು ನಾಣ್ಯದ ಮುಖಗಳು ಸವಿವರವಾಗಿ ತಿಳಿಸುತ್ತವೆ. ಭರತ ಖಂಡದ ಕ್ರಿ.ಪೂ. ಕಾಲದಲ್ಲಿ ಬಳಕೆಯಲ್ಲಿದ್ದ ಒತ್ತು ಮುದ್ರಾಂಕಿತ ನಾಣ್ಯಗಳಿಂದ ಆರಂಭವಾಗಿ, ಬ್ರಾಹ್ಮಿ ಲಿಪಿ, ಪ್ರಾಕೃತ ಭಾಷೆಯ ಆಲೇಖ್ಯವುಳ್ಳ ಹಾಗೂ ಹತ್ತು ಹಲವು ನಾಣ್ಯಗಳನ್ನು ಸಂಗ್ರಹಿಸಿ ಇಡಲಾಗಿದೆ. ಕ್ರಿ.ಶ. ೧ನೇ ಶತಮಾನದಿಂದ ಕ್ರಿ.ಪೂ. ೧ನೇ ಶತಮಾನದವರೆಗಿನ ಕುಶಾಣ, ಇಂಡೋನೇಷಿಯಾ, ಕ್ಷತ್ರಪ, ಗುಪ್ತ, ಗಾಜಿಯಾ, ಕುಣಿಂದ ಮೊದಲಾದ ನಾಣ್ಯಗಳನ್ನು ಇಲ್ಲಿ ಕಾಣಬಹುದು. ವಿಶೇಷವೆಂದರೆ ಮಹಮ್ಮದ್ ತುಘಲಕನ ಚರ್ಮದ ನಾಣ್ಯ ಹಾಗೂ ರೋಮನರ ಅಪೂರ್ವ ದಿನಾರ್ ಗಳನ್ನು ಇಲ್ಲಿ ಜತನದಿಂದ ಸಂಗ್ರಹಿಸಿದ್ದು ಮೌಲ್ಯವನ್ನು ಹೆಚ್ಚಿಸಿದೆ.

  • ಶಾಸನಗಳು

ಕಾಲಗರ್ಭದಲ್ಲಿ ಕರಗಿ ಹೋದ ಶತ ಶತಮಾನದ ಇತಿಹಾಸಗಳನ್ನು ಕೆದಕಿ ಪುನರ್ ರಚಿಸುವಲ್ಲಿ ಶಾಸನಗಳ ಪಾತ್ರ ಅಗ್ರ, ಜೊತೆಗೆ ಉತ್ಕ್ರಷ್ಟ. ಐತಿಹಾಸಿಕ ದಾಖಲೆಯಾಗಿ ಉಳಿದ ಅನೇಕಾನೇಕ ಶಾಸನಗಳು ನಿಖರವಾದ ಕಾಲ, ಭಾಷೆ, ಲಿಪಿ, ಐತಿಹಾಸಿಕ ಘಟನೆ, ಸಾಹಿತ್ಯ ಮತ್ತು ಭೌಗೋಳಿಕ ಚರಿತ್ರೆಗಳನ್ನು ಸವಿವರವಾಗಿ ತಿಳಿಸುತದತ್ತವೆಯಾದರಿಂದ ಸಂಶೋದಕರಿಗೆ ಶಾಸನದಷ್ಟು ಪ್ರಾಮಾಣಿಕವಾದ ಆಧಾರ ಬೇರೊಂದಿಲ್ಲ. ಮುಖ್ಯವಾಗಿ ಕಾಗದದ ಬಳಕೆಯಿರದ ಕಅಲದಲ್ಲಿ ಕಂಚು, ತಾಮ್ರ, ಹಿತ್ತಾಳೆ ಮತ್ತಿತರ ಲೋಹಗಳ ಮೇಲೆ ಶಾಸನಗಳು ಮಂಜೂಷಾದಲ್ಲಿವೆ. ಕಾನೂರ್ಗಣದ ಶ್ರೀ ಭಾನು ಕೀರ್ತಿ ಮಲರಾರಿ ದೇವರ ಶಿಷ್ಯನು ಸಮಾಧಿ ವಿಧಿಯಿಂದ ಸ್ವರ್ಗಸ್ಥನಾದ ಎಂದು ವರ್ಣಿಸುವ ಕ್ರಿ.ಶ ೧೩೪೦ರ 'ನೀಷಧಿ' ಶಾಸನ, ನಗಿರೆಯ ಜೈನಗುರು ಸಂಪ್ರದಾಯವನ್ನು ವರ್ಣಿಸುವ ೧೫ನೇ ಶತಮಾನದ 'ಸ್ತಂಭ ಶಾಸನ' , ದ್ವಾರ ಸಮುದ್ರದ ಹೊಯ್ಸಳ ವೀರ ಬಲ್ಲಾಳನು (ಕ್ರಿ.ಪೂ.೧೧೭೩-೧೨೨೦) ಶಿರಿಯಾರಿನ ಪಾರ್ಶ್ವನಾಥನಿಗೆ ದಾನ ಮಾಡಿದನೆಂದು ಉಲ್ಲೇಖಿತವಾದ 'ದಾನ ಶಾಸನ' ಹಾಗೂ ೧೦ನೇ ಶತಮಾನದ ಕೆಲವು ವೀರಗಲ್ಲುಗಳನ್ನು ಇಲ್ಲಿ ವಿಶೇಷವಾಗಿ ಸ್ಮರಿಸಬಹುದು.

  • ಜಾನಪದರ ಗೃಹಪಯೋಗಿ ವಸ್ತುಗಳು

ಜಾನಪದ ವಸ್ತುಗಳು ಇತಿಹಾಸದಿಂದ ನಡೆದು ಬಂದ ಬದುಕಿನ ದಾರಿಯನ್ನು ಅವಲೋಕಿಸುತ್ತವೆ. ಮಂಜೂಷಾದಲ್ಲಿ ಸೇರಿರುವ ಇಂತಹ ವಸ್ತುಗಳೆಂದರೆ ಮರದ ಹಾಗೂ ಕಲ್ಲಿನ ಬೀಸುವ ಕಲ್ಲು, ಚಕ್ಕುಲಿಯ ಒರಳು ,ಅಕ್ಕಿ ಬೇಯಿಸುವ ಮಡಕೆ ,ಘಂಟೆಗಳು ಭಸ್ಮದ ಪಟ್ಟಿಗೆ, ಪೂಜಾರಾಧನೆಯ ವಿವಿಧ ಬಗೆಯ ಆರತಿಗಳು. ಇವುಗಳ ಮೇಲೆ ಕೆತ್ತಲಾಗಿರುವ ಕೆತ್ತನೆಗಳು ಅದ್ಭುತವಾಗಿವೆ.

  • ಜಾನಪದ ದೇವತೆಗಳು ಮತ್ತು ಆಯುಧಗಳು

ಕರ್ನಾಟಕವಂತು ದೇವತಾರಾಧನೆಯಲ್ಲಿ ಎತ್ತಿದ ಕೈ. ಜಾನಪದರ ಕಲೆಗಳಲ್ಲಿ ಮುಖ್ಯವಾಗಿ ದಕ್ಷಿಣ ಕನ್ನಡದ ಭೂತಾರಾಧನೆಯ ಸಮಗ್ರ ಚಿತ್ರಣವನ್ನು ಇಲ್ಲಿ ಕಾಣಬಹುದು. ಇಲ್ಲಿ ಮುಖ್ಯವಾಗಿ ಪ್ರಾಣಿ ಸ್ವರೂಪದ ದೈವಗಳಾದ ಪಂಜುರ್ಲಿ, ಪಿಲಿ ಚಾಮುಂಡಿ, ಕಲ್ಲುರ್ಟಿ, ಕಲ್ಕುಡಗಳ ವಿಗ್ರಹಗಳನ್ನು ಹಾಗೂ ಅವುಗಳ ಆಭರಣಗಳಾದ ಗಗ್ಗರ, ಕಡತ್ತಲೆ, ಖಡ್ಗಗಳನ್ನು ಇಲ್ಲಿ ಕಾಣಲು ಸಾಧ್ಯವಿದೆ. ನೂರಾರು ವರ್ಷಗಳ ಇತಿಹಾಸವಿರುವ ಕೊಡಮಣಿತ್ತಾಯನ ಸಮಗ್ರ ವೇಷಭೂಷಣಗಳನ್ನು ಹೊಂದಿರುವ ಬೆಳ್ಳಿಯ ವಿಗ್ರಹವು ಇಲ್ಲಿ ಕಲಾತ್ಮಕವಾಗಿ ಪ್ರದರ್ಶಿಸಲ್ಪಡುತ್ತದೆ. ಇಷ್ಟೇ ಅಲ್ಲದೆ ವಿದೇಶಿಯರಿಂದ ಲಗ್ಗೆ ಇಟ್ಟ ಸಾವಿರಾರು ಬಳವಳಿಗಳು ಜಾನಪದ ವಸ್ತಗಳು ಬೆರೆತು ಹೋಗಿವೆ ಬಿಲ್ಲು ಬಾಣಗಳು, ಈಟಿಗಳು , ಬೇರೆ ಬೇರೆ ವಿನ್ಯಾಸದ ಕಠಾರಿಗಳು. ತಲವಾರಗಳು, ಪರಶುಗಳು,ಗ್ರಾಮೀಣ ಜನರ ಬಿಲ್ಲು ಬಾಣಗಳನ್ನು ಸಂಗ್ರಹಿಸಲಾಗಿದೆ. ಅತೀ ಚಿಕ್ಕ ೩ ಇಂಚಿನ ಪಿಸ್ತೂಲು ಆಕರ್ಷಕ ಆಯುಧವಾಗಿದೆ. ಗಂಗ, ಕದಂಬ, ಕುಶಾಣರ ಕಾಲದಲ್ಲಿದ್ದ ಕಠಾರಗಳನ್ನು ಕಾಣಬಹುದಾಗಿದೆ.

ಸುಮಾರು ೩ ಸಾವಿರ ವರ್ಷಗಳ ಇತಿಹಾಸವಿರುವ ಆಭರಣಗಳು ಇಲ್ಲಿರುವುದು ಮಂಜೂಷಾಕ್ಕೆ ಒಂದು ಕಳೆ. ಭುಜಗಳಿಗೆ ತೊಡುವ ತೋಳ್ಬಂದಿ, ಆಭರಣ ಅಂಗೂಲಕ, ಕಾಲುಡುಗೆಯ ಕಾಂಚೀಧಾಮ, ನೂಪುರಗಳು ಸೇರುತ್ತವೆ. ಬಾಹುಪುರಿ ನಕ್ಷೆಯ ಸೊಂಟಪಟ್ಟಿ, ತಾಯತಗಳು, ಕಂಠಿಕೆಗಳು ಬಂದಿ, ಜಡೆಬಿಲ್ಲೆ, ಮೂಗುತಿ, ಕಿವಿಯೋಲೆ ನೇವಳ ಇತ್ಯಾದಿಗಳಿವೆ.

  • ಇಷ್ಟೇ ಅಲ್ಲದೆ ವಿವಿಧ ಬಗೆಯ ಕ್ಯಾಮಾರಗಳು, ತಾಳೆಗರಿ ಗ್ರಂಥಗಳು, ವಿವಿಧ ದಂತಗಳಿಂದ ಕೆತ್ತಿದ ವಿವಿಧ ಆಕೃತಿಗಳು ಗುಲಗಂಜಿ ಪೆಟ್ಟಗೆಯೊಳಗೆ ನೂರು ಆನೆ ತೈಲಚಿತ್ರಗಳು ಬಾಹ್ಯಾಕಾಶದ ಉಪಗೃಹದ ಮಾದರಿಗಳನ್ನು ಕಾಣಬಹುದು. ಇದು ಮುಖ್ಯವಾಗಿ ಇತಿಹಾಸ, ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉಪಯೋಗವಾಗಲಿದೆ.