ವಿಷಯಕ್ಕೆ ಹೋಗು

ಗಾಜಿನ ಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಜಿನ ಮನೆ

[ಬದಲಾಯಿಸಿ]

ನಿಯಂತ್ರಿತ ಹವೆಯಲ್ಲಿ ಸಸ್ಯಗಳನ್ನು ಬೆಳೆಸಲು ಕಟ್ಟಿರುವ ಮನೆ. ಈ ಮನೆಯ ಛಾವಣಿ ಮತ್ತು ಗೋಡೆಗಳೆಲ್ಲವೂ ಗಾಜಿನವೆ. ಚಳಿ, ಗಾಳಿ ಮತ್ತು ಮಳೆಯ ಹೊಡೆತದಿಂದ ರಕ್ಷಣೆ ನೀಡಿ ಸಾಕಷ್ಟು ಬೆಳಕು ಬೀಳುವಂತೆ ರೂಪಿಸಿರುವ ಮನೆಯಿದು. ಚಳಿ ಗಾಳಿಯನ್ನು ಸಹಿಸಿಕೊಂಡು ಬಯಲಿನಲ್ಲೂ ಬೆಳೆಯಬಲ್ಲ ಕೆಲವು ದೃಢಕಾಯ ಸಸ್ಯಗಳುಂಟು. ಅವು ಬೆಳೆಯುವುದು ನಿಧಾನ. ಗಾಜಿನ ಮನೆಯಲ್ಲಾದರೆ ಅವುಗಳ ಬೆಳೆವಣಿಗೆಯನ್ನು ಚುರುಕುಗೊಳಿಸಬಹುದು. ಆದರೆ ಕೋಮಲ ಪ್ರಕೃತಿಯ ಸಸ್ಯಗಳನ್ನು ಮತ್ತು ಪರದೇಶದಿಂದ ತಂದ ಗಿಡಗಳನ್ನು ಪೋಷಿಸಲು ಇಂಥ ಗಾಜಿನ ಮನೆಗಳು ಅತ್ಯಾವಶ್ಯಕ. ಅಕಾಲದಲ್ಲಿ ಶೀತ ಹವೆಯಲ್ಲಿ ಮತ್ತು ಚಳಿದೇಶಗಳಲ್ಲಿ ಸಸ್ಯಗಳನ್ನು ಬೆಳೆಸಲು ಉಷ್ಣವನ್ನು ಕೃತಕವಾಗಿ ಒದಗಿಸಬೇಕು. ಅದಕ್ಕಾಗಿ ಗಾಜಿನ ಮನೆಯೊಳಗೆ ಒಂದು ಒಲೆಯನ್ನು ಉರಿಸಿ ಬೆಚ್ಚಿನ ವಾತಾವರಣ ಕಲ್ಪಿಸುವುದು ರೂಢಿ. ಹಾಗೆ ಮಾಡಿದಾಗ ಅದಕ್ಕೆ ಕಾವು ಮನೆ ಎಂದು ಹೆಸರು. ಖಾಸಗಿ ತೋಟಗಳಿಗೆ ಮತ್ತು ವಾಸಗೃಹಗಳಿಗೆ ಸೇರಿದಂತಿರುವ ಗಾಜಿನ ಮನೆಗಳನ್ನು ಹಸಿರು ಮನೆ ಎನ್ನುತ್ತಾರೆ. ಅವು ಕಾವು ಮನೆಗಳೂ ಆಗಿದ್ದರೆ ರಕ್ಷಣಾಗೃಹಗಳು ಎನಿಸಿಕೊಳ್ಳುತ್ತವೆ. ಇಂಥ ಗಾಜಿನ ಮನೆಗಳ ವಿಸ್ತೀರ್ಣ ಒಂದು ಸಣ್ಣ ಕೊಠಡಿಯಷ್ಟು. ಆದರೆ ಭೂರಿಗಾತ್ರದಲ್ಲಿ ಟೊಮ್ಯಾಟೊ, ಸೌತೆಕಾಯಿ ಮುಂತಾದ ಕಾಯಿಪಲ್ಯಗಳನ್ನು ವಿದೇಶೀಯ ಪುಷ್ಪಗಳನ್ನು ಬೆಳೆಸಬೇಕಾದರೆ ಗಾಜಿನ ಮನೆಯ ವಿಸ್ತೀರ್ಣ ಸಹಸ್ರಾರು ಚದರಡಿಗಳಷ್ಟಿರುವುದು ಅಗತ್ಯ. ಮೋಡ ಕವಿದ ವಾತಾವರಣದಲ್ಲಿ ಬೆಳಕು ಸಾಲದೆ ಸಸ್ಯದ ಬೆಳೆವಣಿಗೆ ಕುಂಠಿತವಾಗದಿರಲೆಂದು ಗಾಜಿನ ಮನೆಗಳಲ್ಲಿ ಕೃತಕ ಬೆಳಕಿನ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಗಾಜಿನ ಮನೆಯನ್ನು ಪುರ್ವಪಶ್ಚಿಮವಾಗಿ ಕಟ್ಟಿದ್ದರೆ ಅದರ ಛಾವಣಿ ಒಂದೇ ಹಾಸಿನದು. ದಕ್ಷಿಣಾಭಿಮುಖವಾಗಿ ಇಳಿಜಾರಾಗಿರುತ್ತದೆ. ದಕ್ಷಿಣೋತ್ತರವಾಗಿ ಕಟ್ಟಿರುವ ಗಾಜಿನ ಮನೆಗಳ ಛಾವಣಿಯಲ್ಲಿ ಅನೇಕ ಉಬ್ಬುತಗ್ಗುಗಳಿರುವುವು. ಛಾವಣಿಯ ಪುರ್ವಕ್ಕೂ , ಪಶ್ಚಿಮಕ್ಕೂ ಇಳಿಜಾರಾಗಿರುತ್ತದೆ. ಇಂಥ ನಿರಿಗೆ ಚಾವಣಿಗಳ ಮೂಲಕ ಸಸ್ಯಗಳಿಗೆ ಇಡೀ ಹಗಲು ಸೂರ್ಯಸ್ನಾನದ ಲಾಭ ದೊರೆಯುವುದು. ಸಾಮಾನ್ಯವಾಗಿ ಗಾಜಿನ ಮನೆಯ ಗೋಡೆಗಳು ಮೊಗಸಾಲೆಯ ಗೋಡೆಗಳಂತೆ ಮೋಟು. ಎತ್ತರ 50-60 ಸೆಂಮೀ. ಅವನ್ನು ಇಟ್ಟಿಗೆ ಅಥವಾ ಸಿಮೆಂಟ್ ಕಾಂಕ್ರೀಟಿನಿಂದ ಕಟ್ಟುವುದು ರೂಢಿ. ಗೋಡೆಯ ಮೇಲೆ ನಿಲ್ಲಿಸಲಾಗಿರುವ ಮರದ ಅಥವಾ ಉಕ್ಕಿನ ಚೌಕಟ್ಟುಗಳಲ್ಲಿ ಗಾಜಿನ ಹಲಗೆಗಳನ್ನು ಅಳವಡಿಸಿರುತ್ತಾರೆ. ಕೆಲವು ಗಾಜಿನ ಮನೆಗಳಿಗೆ ಗೋಡೆಗಳೇ ಇರುವುದಿಲ್ಲ. ಇಳಿಜಾರಾದ ಛಾವಣಿ ನೆಲಗಟ್ಟಿಗೇ ಹೊಂದಿಕೊಂಡಿರುವುದು. ಗರಿಷ್ಠ ಬೆಳಕು ಬೀಳಲು ಈ ರಚನೆ ಬಲು ಅನುಕೂಲ. ಗಾಜಿನ ಮನೆಯ ವಿನ್ಯಾಸ ಹೇಗಿದ್ದರೂ ಧಾರಾಳ ಗಾಳಿ ಸಂಚಾರಕ್ಕೂ ಬಿಸಿಲಿನ ಝಳದಿಂದ ರಕ್ಷಣೆಗೂ ಸೂಕ್ತ ವ್ಯವಸ್ಥೆ ಅಲ್ಲಿ ಇರಬೇಕು. ಗಾಳಿಸಂಚಾರಕ್ಕೆ ಬೇಕಾದ ವಾತಾಯನಗಳು ಬಾಗಿಲುಗಳ ಮೇಲಿರಬಹುದು. ಇಲ್ಲವೆ ಅವು ಮೇಲ್ಗೀಲಿನ ಕಿಟಿಕಿಗಳಾಗಿಬಹುದು. ಆಗ ಕಿಟಕಿಗಳನ್ನು ಅಗತ್ಯವಿದ್ದಷ್ಟು ಮೇಲೆತ್ತಿದರೆ ಗಾಳಿ ಒಳಗೆ ಬರಬಹುದೇ ವಿನಾ ಮಳೆಯ ಎರಿಚಲು ಬಡಿಯಲು ಅವಕಾಶವಿರದು. ಬಿಸಿಲಿನ ಝಳ ಅತಿಯೆನಿಸಿದಾಗ ಗಾಜಿನ ಮನೆಯ ಹೊರಗೆ ಅಥವಾ ಒಳಗೆ ಚಾಪೆಗಳನ್ನೋ ಪರದೆಗಳನ್ನೋ ಇಳಿಬಿಡಬಹುದು. ಇಲ್ಲದಿದ್ದರೆ ಗಾಜಿಗೆ ಸುಣ್ಣ ಬಳಿದರೂ ಸಾಕು. ಗಾಜಿನ ಮನೆಯೊಳಗೆ ಪರಿಚಲನೆಯಲ್ಲಿರುವ ಗಾಳಿಯ ಉಷ್ಣತೆ ಹಾಗು ಆರ್ದ್ರತೆಯ ನಿಯಂತ್ರಣವೂ ಒಂದು ಪ್ರಮುಖ ಸಮಸ್ಯೆ. ಕಾವು ಮನೆಗಳಲ್ಲಾದರೆ ಬಿಸಿನೀರಿನ ಕೊಳಾಯಿಗಳಿಂದ ಉಷ್ಣತಾನಿಯಂತ್ರಣ ಸಾಧ್ಯ. ಆರ್ದ್ರತೆಯ ನಿಯಂತ್ರಣಕ್ಕೆ ಗಾಜಿನ ಮನೆಯಲ್ಲಿರುವ ನೀರಿನ ತೊಟ್ಟಿಗಳನ್ನು ನಿರ್ದಿಷ್ಟ ಕಾಲ ತೆರೆದಿಡುವುದು ಅಥವಾ ಮುಚ್ಚುವುದು ಪದ್ಧತಿ. ಉಷ್ಣದೇಶಗಳಲ್ಲಾದರೆ ನೀರನ್ನು ಸಿಂಪಡಿಸಿ ಗಾಳಿಯ ಆರ್ದ್ರತೆಯನ್ನು ನಿಯಂತ್ರಿಸುತ್ತಾರೆ. ಪ್ರತಿಯೊಂದು ಗಾಜಿನ ಮನೆಯೂ ಗರಿಷ್ಠ ಮತ್ತು ಕನಿಷ್ಠ. ಒದ್ದೆ ಮತ್ತು ಒಣಬುರುಡೆ ಉಷ್ಣತಾಮಾಪಕಗಳಿಂದ ಸಜ್ಜಾಗಿರುವುದು. ಚಳಿಗಾಲದಲ್ಲಿ ಗಾಜಿನ ಮನೆಯ ಒಳಾಂಗಣವನ್ನು ಬೆಚ್ಚಗಿಡಲು ಅಲ್ಲಲ್ಲೆ ತೈಲ ಒಲೆಗಳನ್ನು ಹೂಡಿರುತ್ತಾರೆ.

ಗಾಜಿನ ಮನೆಯ ಒಳರಚನೆ ಅದರಲ್ಲಿ ಬೆಳೆಸುವ ಸಸ್ಯಗಳ ಸ್ವಭಾವಕ್ಕೆ ಅನುಗುಣವಾಗಿರುವುದು ಸಹಜ. ಗಿಡ್ಡಗೋಡೆಗಳಾಗಿದ್ದರೆ ಅವುಗಳ ಮೇಲ್ಮಟ್ಟಕ್ಕೆ ಹೊಂದಿಕೊಂಡಂತೆ ಮನೆಯ ಒಳಸುತ್ತ ಏಕವಾಗಿ ಬಡುವಿರುತ್ತದೆ. ಇದರ ಮೇಲೆ ಕುಂಡಗಳು ಮತ್ತು ಬೀಜದ ಪೆಟ್ಟಗೆಗಳನ್ನು ಪೇರಿಸಬಹುದು. ಅವುಗಳ ಮೇಲೆ ಧಾರಾಳವಾಗಿ ಬೆಳಕೂ ಬೀಳುತ್ತದೆ. ಬಡುವಿನ ಕೆಳಗೆಲ್ಲ ಮರಳು, ಫಲವತ್ತಾದ ಮಣ್ಣು ಮತ್ತು ಸಸ್ಯಶೇಷಮಿಶ್ರಿತ ಮೃತ್ತಿಕೆಗಳನ್ನು ದಾಸ್ತಾನು ಮಾಡಬಹುದು. ಛಾವಣಿ ನೆಲಗಟ್ಟನ್ನು ಸೋಕುವ ಗಾಜಿನ ಮನೆಗಳಲ್ಲಿ ಇಂಥ ಬಡುಗಳಿಗೆ ಅವಕಾಶವಿಲ್ಲ. ಬಹುತೇಕ ಹಸಿರುಮನೆ ಮತ್ತು ಕಿತ್ತಳೆಗಿಡಗಳಿಗೆ ಉಷ್ಣತೆ ಚಳಿಗಾಲದಲ್ಲಿ 450-550 ಫ್ಯಾ., ಮಾರ್ಚಿಯಿಂದ ಸೆಪ್ಟೆಂಬರ್ವರೆಗೆ 550-650 ಫ್ಯಾ. ಮಿತಿಯಲ್ಲಿರಬೇಕು. ದ್ರಾಕ್ಷಿ ಬೆಳೆಗಂತೂ ಉಷ್ಣತಾನಿಯಂತ್ರಣ ಅತ್ಯಗತ್ಯ. ನವೆಂಬರಿನಿಂದ ಫೆಬ್ರುವರಿವರೆಗೆ 600 ಫ್ಯಾ; ಮೊಗ್ಗುಗಳು ಬಿರಿಯುವಾಗ 650 ಫ್ಯಾ.; ಹೂವಿರುವ ತನಕ 750 ಫ್ಯಾ.; ಬೀಜರೂಪಣೆಯ ಕಾಲದಲ್ಲಿ 680 ಫ್ಯಾ.; ಮತ್ತು ಹಣ್ಣು ಮಾಗುವಾಗ 700 ಫ್ಯಾ. ಬಾಳೆಹಣ್ಣಿಗೆ ಚಳಿಗಾಲದಲ್ಲಿ 600-700 ಫ್ಯಾ. ಮತ್ತು ಬೇಸಿಗೆಯಲ್ಲಿ 700_850 ಫ್ಯಾ. ಅನಾನಾಸ್ ಹಣ್ಣಿಗೆ ಚಳಿಗಾಲದಲ್ಲಿ 650-750 ಫ್ಯಾ. ಮತ್ತು ಬೇಸಿಗೆಯಲ್ಲಿ 700-900 ಫ್ಯಾ. ಇವುಗಳ ಸಮೃದ್ಧ ಬೆಳೆಗೆ ಇಷ್ಟು ಸೂಕ್ಷ್ಮವಾದ ಉಷ್ಣತಾನಿಯಂತ್ರಣ ಅವಶ್ಯಕ. ಇದು ಗಾಜಿನ ಮನೆಯಲ್ಲಿ ಸಾಧ್ಯವೇ ವಿನಾ ಬಯಲಿನಲ್ಲಲ್ಲ. ಇಂಗ್ಲೆಂಡ್ ಮತ್ತು ವೇಲ್ಸ್ ದೇಶಗಳೂ ಸೇರಿದಂತೆ ಅಲ್ಲಿ ಗಾಜಿನ ಮನೆಗಳು ಒಳಗೊಂಡಿರುವ ಪ್ರದೇಶದ ವಿಸ್ತೀರ್ಣ ಸುಮಾರು 4,000 ಎಕರೆಗಳು. ಜುಲೈ ತಿಂಗಳಿನಲ್ಲಿ ಈ ಪ್ರದೇಶದ ಅರ್ಧದಷ್ಟು ಭಾಗದಲ್ಲಿ ಟೊಮ್ಯಾಟೊ, 1/5 ಭಾಗದಲ್ಲಿ ಪುಷ್ಪಗಳು ಮತ್ತು 1/8 ಭಾಗದಲ್ಲಿ ಸೌತೆಯನ್ನು ಬೆಳೆಸಲಾಗುವುದೆಂದು ಒಂದು ಅಂದಾಜು. ಇದರಿಂದ ಸಸ್ಯಪೋಷಣೆಯಲ್ಲಿ ಗಾಜಿನ ಮನೆಯ ಮಹತ್ತ್ವಪಾತ್ರ ಅರಿವಾಯಿತು. ಬೆಂಗಳೂರಿನ ಸುಪ್ರಸಿದ್ಧ ಲಾಲ್ಬಾಗಿನಲ್ಲೂ ಒಂದು ಗಾಜಿನ ಮನೆಯಿರುವುದನ್ನು ನೆನೆಯಬಹುದು. ಹಾಗೆಯೇ ಹುಬ್ಬಳ್ಳಿಯಲ್ಲಿ ಒಂದು ಗಾಜಿನ ಮನೆಯಿದೆ. ಬೆಂಗಳೂರಿನಲ್ಲಿ ರಾಜ್ಯಪಾಲರು ವಾಸಿಸುವ ರಾಜಭವನ ಉದ್ಯಾನದಲ್ಲಿ ಒಂದು ಗಾಜಿನ ಮನೆ ನಿರ್ಮಾಣವಾಗಿದೆ.