ಬೂದುಗುಂಬಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೂದುಗುಂಬಳ ಬಲಿತಾಗ ಒಂದು ತರಕಾರಿಯಾಗಿ ತಿನ್ನಲಾದ ಅದರ ಬಹಳ ದೊಡ್ಡ ಹಣ್ಣಿಗಾಗಿ ಬೆಳೆಯಲಾಗುವ ಒಂದು ಹಂಬು. ಅದು ಬೆನಿನ್‍ಕಾಸಾ ಪಂಗಡದ ಏಕೈಕ ಸದಸ್ಯ. ಎಳೆಯದಾಗಿದ್ದಾಗ ಹಣ್ಣು ಜಾಳುಜಾಳಾಗಿ ಇರುತ್ತದೆ. ಅಪಕ್ವ ಕುಂಬಳವು ದಪ್ಪ ಬಿಳಿ ತಿರುಳನ್ನು ಹೊಂದಿದ್ದು ತಿಂದಾಗ ಸಿಹಿಯಿರುತ್ತದೆ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಕುಕರ್ಬಿಟೀಸೀ ಕುಟುಂಬಕ್ಕೆ ಸೇರಿದ ಕುಕರ್ಬಿಟ ಮೊಕ್ಚಾಟಾ ಎಂಬ ವ್ಶೆಜ್ಞಾನಿಕ ಹೆಸರಿನ ಏಕವಾರ್ಷಿಕ ಹರಡು ಬಳ್ಳಿ.

ಪ್ರಾಚೀನತೆ[ಬದಲಾಯಿಸಿ]

ಗ್ವಾಟೆಮಾಲ, ಕೊಲಂಬಿಯ, ಮೆಕ್ಸಿಕೊ ಮುಂತಾದ ಅಮೆರಿಕದ ಉಷ್ಣವಲಯದ ಪ್ರದೇಶ ಇದರ ಉಗಮಸ್ಥಾನ. ಮಾನವನಿಗೆ ಇದರ ಪರಿಚಯ ನಾಲ್ಕು ಸಹಸ್ರವರ್ಷಗಳಿಂದಲೂ ಇರುವುದು ಕಂಡು ಬಂದಿದೆ.

ಪ್ರಭೇದಗಳು[ಬದಲಾಯಿಸಿ]

ಈ ಜಾತಿಯಲ್ಲಿ ಕುಕರ್ಬಿಟ ಮ್ಯಾಕ್ಸಿಮ ಮತ್ತು ಕುಕರ್ಬಿಟ ಪಿಪೋ ಎಂಬ ಇನ್ನೆರಡು ಪ್ರಭೇದಗಳು ಇವೆ. ಭಾರತದಲ್ಲಿ ಮೇಲಿನ ಮೂರು ಪ್ರಭೇದಗಳನ್ನೂ ಕುಂಬಳ ಎಂಬ ಒಂದೇ ಹೆಸರಿನಿಂದ ಕರೆಯಲಾಗುತ್ತಿದೆ. ಇವುಗಳ ಬೇಸಾಯ ಮತ್ತು ಉಪಯೋಗ ಒಂದೇ ರೀತಿಯವಾಗಿವೆ. ಬಹುತೇಕ ಬಗೆಗಳು ಕುಕರ್ಬಿಟ ಮಾಸ್ಕೇಟಕ್ಕೆ ಸೇರಿದವಾಗಿವೆ.

ಲಕ್ಷಣಗಳು[ಬದಲಾಯಿಸಿ]

ಕುಂಬಳದ ಹಂಬು ಮತ್ತು ಎಲೆಗಳ ಮೇಲೆ ಒರಟಾದ ಬಿಳಿಯ ರೋಮಗಳಿವೆ. ನಾಲ್ಕು ಮುಖದ (ಕ್ವಾಡ್ರ್ಯುಂಗ್ಯುಲರ್) ಕಾಂಡ ಬುಡದಲ್ಲಿ ಕವಲೊಡೆದು ವಿಶಾಲವಾಗಿ ಹರಡಿಕೊಂಡಿದೆ. ಗೆಣ್ಣುಗಳಲ್ಲಿ ತೊಟ್ಟಿರುವ ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ. ಎಲೆ ಸರಳ, ಅಂಚು ಬಾಗಿದೆ. ಬಣ್ಣ ಹಸಿರು, ಹೂ ಎಲೆಗಳ ಕಂಕುಳಲ್ಲಿವೆ. ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕವಾಗಿವೆ. ಗಂಡು ಹೂವಿಗೆ ಉದ್ದವಾದ ತೊಟ್ಟೂ ಹೆಣ್ಣು ಹೂವಿಗೆ ಚಿಕ್ಕದಾದ ತೊಟ್ಟೂ ಇವೆ. ಪುಷ್ಪಪತ್ರ ಸಂಯುಕ್ತವಾಗಿದ್ದು ತುದಿಯಲ್ಲಿ 5 ಭಾಗವಾಗಿದೆ; ದಳಗಳು ಕೂಡಿಕೊಂಡಿದ್ದು ತುದಿಯಲ್ಲಿ 5 ಭಾಗವಾಗಿದ್ದು ಚಕ್ರಾಕಾರವಾಗಿ ವಿಸ್ತರಿಸಿವೆ. ಎರಡು ಕೇಸರಗಳಿರುವ ಎರಡು ಗುಂಪು ಮತ್ತು ಒಂದು ಬಿಡಿ ಕೇಸರ-ಒಟ್ಟು 5 ಕೇಸರಗಳು ಇವೆ. ಪರಾಗಕೋಶ ಎರಡು ಕೋಶಗಳಿಂದ ಕೂಡಿದೆ. ಎರಡು ಭಾಗವಾಗಿರುವ ಶಲಾಕಾಗ್ರ 3ರಿಂದ 5 ಉಪಭಾಗಗಳಿಂದ ಕೂಡಿರುತ್ತದೆ. ಬಹು ಅಂಡಕಗಳನ್ನೊಳಗೊಂಡ ನೀಚಸ್ಥಾನದ ಅಂಡಾಶಯವಿದೆ. ಹೆಣ್ಣು ಬಹುಬೀಜವಿರುವ, ಒಡೆಯದ ಪೆಪೊ ಮಾದರಿಯದು.

ಉಪಯೋಗಗಳು[ಬದಲಾಯಿಸಿ]

ಕುಂಬಳಕಾಯಿ ಎಲ್ಲರಿಗೂ ಪರಿಚಿತವಾಗಿರುವ ತರಕಾರಿ. ಇದನ್ನು ಹುಳಿ, ಪಲ್ಯ ಮತ್ತು ಸಿಹಿತಿಂಡಿಗಳಲ್ಲಿ ಉಪಯೋಗಿಸುತ್ತಾರೆ. ಸುಲಭವಾಗಿ ಬೆಳೆದು, ಹೆಚ್ಚು ದಿವಸಗಳ ಕಾಲ ಇಟ್ಟು ಉಪಯೋಗಿಸಬಹುದಾದುದರಿಂದ ಇದು ಹೆಚ್ಚಿನ ಜನ ಪ್ರಿಯತೆಯನ್ನು ಗಳಿಸಿದೆ. ಬೂದುಗುಂಬಳದ ಬೀಜಗಳಿಗೆ ಜಂತುಹುಳುನಾಶಕ ಗುಣವಿದೆ. ಕಾಯಿ ಬಹಳ ಪುಷ್ಟಿದಾಯಕವೆಂದೂ ಮೂತ್ರೋತ್ತೇಜಕವೆಂದೂ ಹೇಳಲಾಗಿದೆ. ಕಾಯಿಯಿಂದ ಅದೇ ತಾನೇ ತೆಗೆದು ರಸವನ್ನು ಅಂತರ್ ರಕ್ತಸ್ರಾವವನ್ನು ತಡೆಯಲು ಬಳಸುವುದುಂಟು. ಇದು ಪ್ರತಿವಿಷವೂ ಹೌದು. ಕ್ಷಯರೋಗ ಮುಂತಾದ ರೋಗಗಳಲ್ಲಿ ಇದನ್ನು ಶಕ್ತಿದಾಯಕವಾಗಿ ಉಪಯೋಗಿಸುತ್ತಾರೆ. ಬಲಿತ ಬೂದಗುಂಬಳ ಇತರ ಕುಂಬಳಗಳಂತೆ ನಾಲ್ಕಾರು ತಿಂಗಳು ನಿಲ್ಲುತ್ತದೆ. ಇದನ್ನು ತರಕಾರಿಯಾಗಿ ಬಳಸುತ್ತಾರೆ. ಕೊದ್ದಲು, ಕಾಯಿ ಹುಳಿಗೆ ಇದು ಪ್ರಶಸ್ತ. ಇದರ ತಿರುಳಿನಿಂದ ರುಚಿಕರವಾದ ದಂರೋಟನ್ನು ಮಾಡುತ್ತಾರೆ. ಅರಳು ಸಂಡಿಗೆಗೆ ಇದರ ತಿರುಳು ಮತ್ತು ಹೋಳು ಒದಗುತ್ತವೆ. ಇದರ ತ್ವಚೆಯನ್ನು ದಪ್ಪಗೆ ತೆಗೆದು ಒಣಗಿಸಿ ಬಾಳಕ ಮಾಡುತ್ತಾರೆ.

ಪೌಷ್ಟಿಕಾಂಶಗಳು[ಬದಲಾಯಿಸಿ]

ಕುಂಬಳಕಾಯಿ ರುಚಿಕರವಾದ ತರಕಾರಿ ಮಾತ್ರವಲ್ಲದೆ ಮನುಷ್ಯನಿಗೆ ಪುಷ್ಟಿಕರವಾದ ಆಹಾರಾಂಶಗಳನ್ನೂ ಒಳಗೊಂಡಿದೆ. ನೂರುಗ್ರಾಂ ಕುಂಬಳ ಕಾಯಿಯಲ್ಲಿರುವ ಆಹಾರ ಅಂಶಗಳು ಹೀಗಿವೆ: ತೇವಾಂಶ 92.6 ಗ್ರಾಂ; ಕಾರ್ಬೊಹೈಡ್ರೇಟ್ 4.6 ಗ್ರಾಂ; ವಿಟಮಿನ್‍ಗಳು 1.4 ಗ್ರಾಂ; ಕೊಬ್ಬು 0.1 ಗ್ರಾಂ; ಲವಣ 0.6 ಗ್ರಾಂ; ನಾರು 0.7 ಗ್ರಾಂ ಅಲ್ಲದೆ ಶಕ್ತಿ 25 ಕೆಲೋರಿಗಳು, ಮೆಗ್ನೀಸಿಯಂ 14 ಮಿಗ್ರಾಂ; ರಂಜಕ 30 ಮಿಗ್ರಾಂ; ಕಬ್ಬಿಣ 0.7 ಮಿಗ್ರಾಂ; ಸೋಡಿಯಮ್ 5.6 ಮಿಗ್ರಾಂ; ಪೊಟ್ಯಾಸಿಯಂ 139.0 ಮಿಗ್ರಾಂ; ತಾಮ್ರ 0.20 ಮಿಗ್ರಾಂ; ಗಂಧಕ 1.6 ಮಿಗ್ರಾಂ; ಕ್ಲೋರಿನ್ 4.0 ಮಿಗ್ರಾಂ; ಥಯಾಮಿನ್ 0.06 ಮಿಗ್ರಾಂ; ರಿಬೋಫ್ಲೇವಿನ್ 0.04 ಮಿಗ್ರಾಂ; ನಿಕೊಟಿನಿಕ್ ಅಮ್ಲ 0.5 ಮಿಗ್ರಾಂ; ಸಿ ವಿಟಮಿನ್ 2.0 ಮಿಗ್ರಾಂ; ಎ ವಿಟಮಿನ್ 84 ಐಯು-ಇವನ್ನು ಸಹ ವಿಶ್ಲೇಷಣೆಯಿಂದ ಶೋಧಿಸಲಾಗಿದೆ.

ಬೇಸಾಯ[ಬದಲಾಯಿಸಿ]

ಕುಂಬಳ ಬೇಸಾಯಕ್ಕೆ ಕಡಿಮೆ ಉಷ್ಣತೆ ಮತ್ತು ಹೆಚ್ಚು ತೇವಾಂಶವಿರುವ ಹವಾಗುಣ ಶ್ರೇಷ್ಠವಾದದ್ದು. ಇದು ಅಧಿಕ ಚಳಿಯನ್ನು ಸಹಿಸದು; ಚಳಿ ವಾತಾವರಣದಲ್ಲಿ ಬೆಳೆದ ಕುಂಬಳ ಸಸ್ಯ ಫಲ ಕೊಡಲು ಹೆಚ್ಚು ಕಾಲ ತೆಗೆದುಕೊಳ್ಳುತ್ತದಲ್ಲದೆ ಇಳುವರಿ ಕಡಿಮೆ. ಅಂತೆಯೇ ಈ ಸಸ್ಯ ಹೆಚ್ಚು ಉಷ್ಣವನ್ನೂ ಸಹಿಸುವುದಿಲ್ಲ; ಹೆಚ್ಚು ಉಷ್ಣದ ವಾತಾವರಣದಲ್ಲಿ ಬೆಳೆದ ಸಸ್ಯದಲ್ಲಿ ಹೂ ಮತ್ತು ಹೀಚುಗಳು ಉದುರಿಹೋಗುತ್ತವೆ. ಗುಡ್ಡಗಾಡು ಪ್ರದೇಶಗಳಲ್ಲಿ ಬೇಸುಗೆ ಕಾಲ ಕುಂಬಳ ಬೇಸಾಯಕ್ಕೆ ಯೋಗ್ಯ. ಮೈದಾನ ಪ್ರದೇಶಗಳಲ್ಲಿ ಇದರ ಬೇಸಾಯವನ್ನು ವರ್ಷಪೂರ್ತಿ ಮಾಡಬಹುದು. ಜೌಗಿಲ್ಲದ ಮತ್ತು ಫಲವತ್ತಾದ ಎಲ್ಲ ವಿಧವಾದ ಮಣ್ನುಗಳಲ್ಲಿ ಕುಂಬಳ ಬೇಸಾಯವನ್ನು ಮಾಡಬಹುದು. ಜಿಗಟಾದ ಕಪ್ಪು ಮಣ್ನೂ ಬೇರು ಬಿಡಲು ಎಡೆ ಕೊಡುವಿದಿಲ್ಲವಾದ್ದರಿಂದ ಕುಂಬಳ ಬೇಸಾಯಕ್ಕೆ ಅದು ಯೋಗ್ಯವಲ್ಲ. ಫಲವತ್ತಾಗಿರುವ ಮತ್ತು ಸಡಿಲವಾಗಿರುವ ಮರಳುಗೋಡು ಮಣ್ಣು ಇದಕ್ಕೆ ಶ್ರೇಷ್ಠವಾದದ್ದು. ಹೆಚ್ಚು ಫಲವತ್ತಾದ ಮಣ್ಣಿನಲ್ಲಿ ಈ ಸಸ್ಯವನ್ನು ಬೆಳೆಸಿದರೆ ಹೆಚ್ಚಿನ ಹಸಿರು ಭಾಗ ಬೆಳೆದು ಫಲದ ಇಳುವರಿ ತೀರ ಕಡಿಮೆಯಾಗುತ್ತದೆ. ಮಧ್ಯಮ ಅಮ್ಲತೆ ಇರುವ ಮಣ್ಣಿನಲ್ಲಿ ಇದರ ಬೇಸಾಯ ಸಾಧ್ಯವಿದ್ದರೂ ಕ್ಷಾರತೆಯನ್ನಿದು ಸಹಿಸುವುದಿಲ್ಲ. ಕುಂಬಳ ಬೇಸಾಯಕ್ಕೆ ಮಣ್ಣಿನಲ್ಲಿ 6.0ರಿಂದ 6.5 ಠಿಊ ಅಂತರ ಸೂಕ್ತವಾದದ್ದು.

ಕರ್ನಾಟಕ ರಾಜ್ಯದಲ್ಲಿ ಕುಂಬಳವನ್ನು ಸಾಮನ್ಯವಾಗಿ ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ. ಶುದ್ಧ ಬೆ¼ಯಾಗಿ ಬೆಳೆಸುವುದು ತೀರ ಕಡಿಮೆ. ಆಲೂಗೆಡ್ಡೆ, ಮೆಣಸಿನಕಾಯಿ ಮತ್ತು ಇತರ ಬೆಳೆಗಳ ಸುತ್ತಲೂ ಇದನ್ನು ಬೆಳೆಸುತ್ತಾರೆ. ವಾಣಿಜ್ಯ ದೃಷ್ಟಿಯಿಂದ ಕುಂಬಳ ಬೇಸಾಯವನ್ನು ಮಾಡುವಾಗ ಮಾತ್ರ ಇದನ್ನು ಶುದ್ಧ ಬೆಳೆಯಾಗಿ ಬೆಳಿಸುತ್ತಾರೆ. ಇದರ ಬೆಳೆಯನ್ನು ಇತರ ತರಕಾರಿಗಳೊಡನೆ ಪರ್ಯಾಯವಾಗಿಯೂ ಬೆಳೆಸಬಹುದು. ಯೋಗ್ಯ ನೀರಾವರಿ ವಸತಿ ಇರುವ ಕಡೆಗಳಲ್ಲಿ ಕುಂಬಳ ಬೇಸಾಯವನ್ನು ವರ್ಷದ ಎಲ್ಲ ಕಾಲಗಳಲ್ಲೂ ಮಾಡಬಹುದು. ಮಳೆಗಾಲದಲ್ಲಿ ಈ ಬೆಳೆಗೆ ನೀರಾವರಿ ಅಗತ್ಯ ಕಡಿಮೆ ಇರುವುದರಿಂದ ಆ ಕಾಲದಲ್ಲಿ ಬೆಳೆಸುವುದೇ ವಾಡಿಕೆ.

ತಳಿಗಳು[ಬದಲಾಯಿಸಿ]

ಕುಂಬಳದ ಒಂದೊಂದು ಪ್ರಭೇದದಲ್ಲೂ ಅನೇಕ ತಳಿಗಳಿವೆ. ಕಾಯಿಯ ಆಕಾರ ಮತ್ತು ಬಣ್ಣದ ಆಧಾರದ ಮೇಲೆ ಗುಂಡು ಮತ್ತು ಉದ್ದ, ಹಸಿರು, ಬಿಳುಪು ಮತ್ತು ಕೆಂಪು ಎಂದು ವಿಂಗಡಣೆಮಾಡಲಾಗಿದೆ. ಬೇಸಾಯದಲ್ಲಿರುವ ಸಾಮಾನ್ಯ ತಳಿಗಳಲ್ಲಿ ಲಾರ್ಜ್‍ರೆಡ್, ರೌಂಡ್, ಎಲ್ಲೋಪ್ಲೇಸ್, ಅರ್ಲಿಎಲ್ಲೊ ಪ್ರೋಲಿಫಿಕ್ ಅಸ್ಟ್ರೇಲಿಯನ್ ಗ್ರೀನ್, ಬಟರ್‍ನಟ್, ಗ್ರೀನ್ ಹಬರ್ಡ್, ಗೋಲ್ಡನ್ ಹಬರ್ಡ್ ಇವು ಮುಖ್ಯವಾದವು.

ಬೀಜ ಪ್ರಮಾಣ[ಬದಲಾಯಿಸಿ]

ಕುಂಬಳದ ಎಕರೆಯ ಬೀಜ ಪ್ರಮಾಣ ಬೆಳೆಯ ಅಂತರವನ್ನು ಅನುಸರಿಸುತ್ತದೆ. ಹೆಕ್ಟೇರಿಗೆ 3.5ರಿಂದ 4.5 ಕೆಜಿಯಷ್ಟು ಬೀಜ ಬೇಕಾಗುತ್ತದೆ. ಉತ್ತಮ ದರ್ಜೆಯ ಬೀಜ 75%ರಷ್ಟು ಮೊಳೆಯುತ್ತದೆ. ಚೆನ್ನಾಗಿ ಬಲಿತ ಕುಂಬಳ ಕಾಯಿಗಳ ಬೀಜಗಳನ್ನು ಮಾತ್ರ ಬಿತ್ತನೆಗೆ ಉಪಯೋಗಿಸಬೇಕು. ಯೋಗ್ಯ ರೀತಿಯಲ್ಲಿ ಶೇಖರಣೆ ಮಾಡಿದ ಬಿತ್ತನೆ ಬೀಜಗಳು ಸುಮಾರು ನಾಲ್ಕು ವರ್ಷಗಳ ಕಾಲ ತಮ್ಮ ಮೊಳೆಯುವ ಸಾಮಥ್ರ್ಯವನ್ನು ಉಳಿಸಿಕೊಂಡಿರುತ್ತವೆ.

ಬೇಸಾಯ ವಿಧಾನ[ಬದಲಾಯಿಸಿ]

ಕುಂಬಳ ಬೇಸಾಯ ಮಾಡುವ ತೋಟವನ್ನು 3-4 ಸಾರಿ ಉಳುಮೆ ಅಥವಾ ಅಗೆತ ಮಾಡಿ ಕಳೆ, ಕಸ ಇತ್ಯಾದಿಗಳನ್ನು ತೆಗೆದು ಹೆಂಟೆ ಪುಡಿಮಾಡಿ ಮಟ್ಟಸ ಮಾಡಬೇಕು. ಅನಂತರ ಎಕರೆಗೆ 25 ರಿಂದ 30 ಗಾಡಿ ಚೆನ್ನಾಗಿ ಕೊಳೆತಿರುವ ಕೊಟ್ಟಿಗೆ ಗೊಬ್ಬರವನ್ನು ಮಿಶ್ರ ಮಾಡಬೇಕು. ಬೀಜವನ್ನು ಎರಡು ರೀತಿಯಲ್ಲಿ ಬಿತ್ತಬಹುದು. 10' ಸಾಲುಗಳಲ್ಲಿ 8' ಅಂತರದಲ್ಲಿ 2' ಅಗಲದ ಗುಂಡಿಗಳನ್ನು ಮಾಡಿ ಬೀಜ ಬಿತ್ತಬೇಕು. 8' ಅಂತರದಲ್ಲಿ 1' ಎತ್ತರದ ದಿಂಡುಗಳನ್ನು ಮಾಡಿ, ಅವುಗಳ ಮೇಲೆ ಬಿತ್ತುವುದೊಳ್ಳೆಯದು. ಗುಂಡಿಗಳಲ್ಲಿ 4-5 ಬೀಜಗಳನ್ನು ದಿಂಡುಗಳ ಮೇಲೆ 1 ಅಂತರದಲ್ಲಿ ಆಳವಾಗಿ ಬಿತ್ತಬೇಕು. ಹೆಚ್ಚು ಆಳದಲ್ಲಿ ಬಿತ್ತಿದ ಬೀಜಗಳು ಮೊಳೆಯುವುದಿಲ್ಲ. ಬಿತ್ತಿದ 1 ವಾರದಲ್ಲಿ ಅವು ಮೊಳೆಯುತ್ತವೆ; ನಾಲ್ಕು ವಾರಗಳ ಅನಂತರ ಸಸಿಗಳು ದಾಂಗುಡಿಯಿಡಲು ಮೊದಲು ಮಾಡುತ್ತವೆ. ಆಗ ಸಸಿಗಳ ಸುತ್ತಲೂ ಕಳೆ ತೆಗೆದು ವಿಶಾಲವಾಗಿ ಪಾತಿ ಮಾಡಿ, ಮಣ್ಣನ್ನು ಸಸಿಗಳ ಬುಡಕ್ಕೆ ಏರು ಹಾಕಬೇಕು. ಕುಂಬಳ ಹಂಬುಗಳ ಬೇರು ಮೇಲಿನ ಆರು ಅಂಗುಲ ಮಣ್ಣಿನಲ್ಲಿರುವುದರಿಂದ, ಬೀಜ ಬಿತ್ತಿದ ಒಂದು ತಿಂಗಳ ಅನಂತರ ಮೇಲಿನ ಮಣ್ಣು ಬೇಸಾಯ ಮಾಡಬಹುದು. ಬೆಳೆಗೆ ಮಳೆಗಾಲದಲ್ಲಿ ಹೆಚ್ಚಿನ ನೀರಾವರಿ ಅವಶ್ಯಕತೆ ಇರುವುದಿಲ್ಲ. ಬೇಸುಗೆಯಲ್ಲಿ ದಿನ ಬಿಟ್ಟು ದಿನ ನೀರು ಹಾಯಿಸಬೇಕು. ಎರಡು ತಿಂಗಳ ಅನಂತರ ಸಸಿ ಹೂ ಬಿಡುತ್ತದೆ. 4-5 ವಾರಗಳಲ್ಲಿ ಕಾಯಿಗಟ್ಟುತ್ತದೆ. ಅನಂತರ ಕಾಯಿ ಬಲಿತು ಹಣ್ಣಾಗಲು ಒಂದು ತಿಂಗಳು ಬೇಕು. ಬಲಿತ ಕಾಯ ಮೇಲುಸಿಪ್ಪೆ ಒರಟಾಗಿ ಗಟ್ಟಿಯಾಗಿ ಬಣ್ಣ ಬದಲಾಗುತ್ತದೆ. ಕಾಯಿಗಳನ್ನು ಕೀಳುವಾಗ ಹರಿತವಾದ ಚಾಕುವಿನಿಂದ ಕತ್ತರಿಸಿ ತೆಗೆಯಬೇಕಾಗುತ್ತದೆ. ಇಲ್ಲದಲ್ಲಿ ಹಂಬಿಗೆ ನೋವಾಗುವ ಸಂಭವ ಉಂಟು. ಕುಂಬಳದ ಇಳುವರಿ ತಳಿಗಳನ್ನು ಅನುಸರಿಸುತ್ತದೆ. ಎಕರಿಗೆ 30 ರಿಂದ 85 ಕ್ವಿಂಟಾಲಿನ ವರೆಗೆ ಕಾಯಿ ದೊರೆಯಬಹುದು. ಬೇಸಗೆ ಬೆಳೆಯ ಇಳುವರಿ ಇತರ ಕಾಲದ ಬೆಳೆಗಿಂತ ಕಡಿಮೆ. ಚೆನ್ನಾಗಿ ಬಲಿತ ಕುಂಬಳಕಾಯಿಯನ್ನು ಸುಮಾರು ಆರು ತಿಂಗಳವರೆಗೆ ಶೇಖರಿಸಿಡಬಹುದು.

ಕೀಟಗಳು[ಬದಲಾಯಿಸಿ]

ಒಂದು ಬಗೆಯ ಕೆಂಪು ಚಿಪ್ಪಿನ ಹುಳುಗಳು ಕುಂಬಳದ ಎಲೆಗಳಲ್ಲಿರುವ ನಾಳಗಳ ಮಧ್ಯ ಭಾಗದ ಹಸಿರು ಭಾಗವನ್ನು ಕಡಿದು ತಿನ್ನುತ್ತವೆ. ಕೀಟಗಳ ಸಂಖ್ಯೆ ಕಡಿಮೆ ಇದ್ದಲ್ಲಿ, ಅವನ್ನು ಕೈಯಿಂದಲೇ ನಾಶಮಾಡಬಹುದು. ಅಥವಾ 1% ಲಿಂಡನ್ 2% ಬಿ.ಎಚ್.ಸಿ. ಅಥವಾ ಡಿ.ಡಿ.ಟಿ. ಪುಡಿಯನ್ನು ಎರಚಿ ನಿವಾರಿಸಬಹುದು. ಹಸಿರು ಬಣ್ಣದ ಸಣ್ಣ ಹೇನುಗಳು ಗಿಡಕ್ಕೆ ಹತ್ತುವುದುಂಟು. ಅವು ಸಸ್ಯದ ತುದಿ ಭಾಗದಲ್ಲಿ ಅಗಾಧ ಸಂಖ್ಯೆಯಲ್ಲಿದ್ದು ಸಸ್ಯರಸವನ್ನು ಹೀರಿ ತೊಂದರೆ ಪಡಿಸುತ್ತೆವೆ. ಈ ಪಿಡುಗನ್ನು ನಿವಾರಿಸಲು 0.025% ಮ್ಯಾಲಥಿಯಾನ್ ಅಥವಾ ಫಾಲಿಡಾಲ್ ದ್ರಾವಣವನ್ನು ಸಿಂಪಡಿಸಬೇಕು. ಹಣ್ಣಿನ ನೊಣಗಳೂ ಕುಂಬಳಕಾಯಿಗಳ ಮೇಲೆ ಮೊಟ್ಟೆ ಇಡುತ್ತವೆ. ಈ ಮೊಟ್ಟೆಗಳಿಂದ ಹೊರ ಬಂದ ಕೀಟದ ಡಿಂಭಗಳು ಎಳೆಯ ಕಾಯಿಗಳನ್ನು ಕೊರೆದು ತಿಂದುಹಾಕುತ್ತವೆ. ಕುಂಬಳ ಹಂಬು ಹೂ ಬಿಡುವುದಕ್ಕೆ ಪ್ರಾರಂಭಿಸುತ್ತಲೆ ಬೆಳೆಗೆ 0.025% ಮ್ಯಾಲಥಿಯಾನ್ ದ್ರಾವಣ ಸಿಂಪಡಿಸಿ, ಅನಂತರ ಪ್ರತಿ ಎರಡು ವಾರಗಳಿಗೆ ಒಂದು ಸಾರಿ ಕ್ರಮವಾಗಿ ಸಂಪಡಿಕೆಯನ್ನು ಮುಂದುವರಿಸುವುದರಿಂದ ಈ ಪಿಡುಗನ್ನು ತಡೆಗಟ್ಟಬಹುದು.

ರೋಗಗಳು[ಬದಲಾಯಿಸಿ]

ಕುಂಬಳ ಬೆಳೆಗೆ ಬ್ಯಾಕ್ಟೀರಿಯಲ್ ವಿಲ್ಟ್, ಆಂತ್ರಕ್ನೋಸ್, ಡ್ಣನಿಮಿಲ್ಡ್ಯೂ, ಪೌಡರಿಮಿಲ್ದ್ಯೂ ಮುಂತಾದವು ಸಾಮಾನ್ಯವಾಗಿ ಬರುವ ರೋಗಗಳು. ಎರಡು ವಾರಗಳಿಗೆ ಒಂದು ಸಾರಿ 1% ಬೋರ್ಡೊ ದ್ರಾವಣವನ್ನು ಕ್ರಮವಾಗಿ ಸಿಂಪಡಿಸುವುದರಿಂದ ಅವನ್ನು ತಡೆಯಬಹುದು. ಕುಂಬಳವನ್ನೇ ಹೋಲುವ ಬೂದುಗುಂಬಳಕ್ಕೂ (ಬೆನಿನ್‍ಕಾಸ ಸೆರಿಫರ) ಕುಂಬಳಕ್ಕೂ ಅವುಗಳ ಹೊರ ಒಳರಚನೆಗಳಲ್ಲಿ ಕೆಲವು ಮುಖ್ಯ ವ್ಯತ್ಯಾಸಗಳಿವೆ. ಬೂದುಗುಂಬಳದ ಕುಡಿಬಳ್ಳಿಗಳು (ಟೆಂಡ್ರಿಲ್ಸ್) ತುದಿಯಲ್ಲಿ ಕೇವಲ ಎರಡು ಭಾಗಗಳಾಗಿ ಕವಲೊಡೆದಿವೆ. ಆದರೆ ಕುಂಬಳದಲ್ಲಿ 3-5 ಭಾಗಗಳಾಗಿವೆ. ಬೂದುಗುಂಬಳದ ಕಾಂಡದಲ್ಲಿನ ನಾಳಕೂರ್ಚಗಳ ಸಂಖ್ಯೆ ಕೇವಲ 4 (ಕುಂಬಳದಲ್ಲಿ 7-9). ಬೂದುಗುಂಬಳದ ಕಾಯಿಯ ಹೊರಮೈ ನಯವಾಗಿದ್ದು ಬಿಳಿಯ ಮೇಣದಂಥ ವಸ್ತುವಿನಿಂದ ಅವೃತವಾಗಿದೆ. ತಿರುಳು ಬಿಳಿ. ಕುಂಬಳದಲ್ಲಿ ಕಾಯಿ ಹಲವಾರು ಏಣುಗಳಿಂದ ಕೂಡಿದೆ. ಅದರ ಮೇಲೆ ಮೇಣದ ಲೇಪವಿಲ್ಲ. ತಿರುಳಿನ ಬಣ್ಣ ಗಾಢ ಹಳದಿ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: