ವಿಷಯಕ್ಕೆ ಹೋಗು

ಬಂಧನ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಧನ (ಚಲನಚಿತ್ರ)
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಎಸ್.ವಿ.ರಾಜೇಂದ್ರಸಿಂಗ್ ಬಾಬು
ಕಥೆಉಷಾ ನವರತ್ನರಾಂ
ಪಾತ್ರವರ್ಗವಿಷ್ಣುವರ್ಧನ್ ಸುಹಾಸಿನಿ ಜೈಜಗದೀಶ್, ರೂಪಾದೇವಿ, ದಿನೇಶ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೪
ಅವಧಿ೧೫೩ ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಚಿತ್ರ ನಿರ್ಮಾಣ ಸಂಸ್ಥೆರೋಹಿಣಿ ಪಿಕ್ಚರ್ಸ್
ಸಾಹಿತ್ಯಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಕೆ.ಜೆ.ಯೇಸುದಾಸ್
ಇತರೆ ಮಾಹಿತಿಉಷಾ ನವರತ್ನರಾಂ ಆವರ ಕಾದಂಬರಿ ಆಧಾರಿತ.


ಬಂಧನ ೧೯೮೪ ರ ಭಾರತೀಯ ಕನ್ನಡ ಭಾಷೆಯ ರೋಮ್ಯಾಂಟಿಕ್ ಡ್ರಾಮಾ ಚಲನಚಿತ್ರವಾಗಿದ್ದು, ಇದನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದಾರೆ. ಚಿತ್ರದ ಚಿತ್ರಕಥೆಯನ್ನು ಎಚ್. ವಿ. ಸುಬ್ಬರಾವ್ ಮತ್ತು ರಾಜೇಂದ್ರ ಸಿಂಗ್ ಬಾಬು ಬರೆದಿದ್ದಾರೆ. ಇದು ಉಷಾ ನವರತ್ನರಾಮ್ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ.[] ಈ ಚಲನಚಿತ್ರವು ಸರ್ಜನ್ ಹರೀಶ್ ಮತ್ತು ಅವನ ವಿದ್ಯಾರ್ಥಿನಿ ನಂದಿನಿ ನಡುವಿನ ಸಂಬಂಧದ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ವಿಷ್ಣುವರ್ಧನ್ ಡಾ. ಹರೀಶ್ ಪಾತ್ರದಲ್ಲಿ ಮತ್ತು ಸುಹಾಸಿನಿ ಅವರ ಶಿಷ್ಯೆ ನಂದಿನಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಜೈ ಜಗದೀಶ್, ರೂಪಾದೇವಿ ಮತ್ತು ಜಿ. ಕೆ. ಗೋವಿಂದ ರಾವ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.[]

೩೨ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಈ ಚಿತ್ರವು ಅತ್ಯುತ್ತಮ ಕನ್ನಡ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ೧೯೮೪-೮೫ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಚಿತ್ರವು ಎರಡು ಪ್ರಶಸ್ತಿಗಳನ್ನು ಗೆದ್ದಿದೆ: ವಿಷ್ಣುವರ್ಧನ್‌ಗೆ ಅತ್ಯುತ್ತಮ ನಟ ಮತ್ತು ಎಂ. ರಂಗರಾವ್‌ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಇದಲ್ಲದೆ, ಚಿತ್ರವು ಎರಡು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಹ ಗೆದ್ದುಕೊಂಡಿತು: ವಿಷ್ಣುವರ್ಧನ್‌ಗೆ ಅತ್ಯುತ್ತಮ ನಟ ಮತ್ತು ಸುಹಾಸಿನಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಚಲನಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ಸನ್ನು ಕಂಡಿತು ಮತ್ತು ಇದನ್ನು ಕನ್ನಡ ಚಿತ್ರರಂಗದ ಶ್ರೇಷ್ಠ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.[] ಈ ಚಿತ್ರವು ೧೯೮೫ ರಲ್ಲಿ ತಮಿಳಿನಲ್ಲಿ ಪ್ರೇಮ ಪಾಶಂ ಎಂದು ರೀಮೇಕ್ ಆಗಿದ್ದು, ತೆಲುಗಿನಲ್ಲಿ ಡಾ. ನಂದಿನಿ ಎಂದು ಡಬ್ ಮಾಡಲಾಯಿತು.[] ಇದು ಮಲಯಾಳಂ ಭಾಷೆಗೂ ಡಬ್ ಆಗಿದೆ.[]

ಕಥಾ ಹಂದರ

[ಬದಲಾಯಿಸಿ]

ಹರೀಶ್ ಒಬ್ಬ ವೈದ್ಯನಾಗಿದ್ದು, ಅವನು ತನ್ನ ವಿದ್ಯಾರ್ಥಿನಿ ನಂದಿನಿಯನ್ನು ಪ್ರೀತಿಸುತ್ತಾನೆ, ಆದರೆ ಅವಳ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಸಂಕೋಚ ಪಡುತ್ತಾನೆ. ಅಂತಿಮವಾಗಿ ಧೈರ್ಯಮಾಡಿ ತಾನು ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ, ಅವಳು ತಾನು ಅವನನ್ನು ಗುರುವಿನ ಸ್ಥಾನದಲ್ಲಿಟ್ಟು ಗೌರವಿಸುವುದಾಗಿ ಮತ್ತು ಅವನ ಪ್ರೀತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

ನಂದಿನಿ ಎಂಜಿನಿಯರ್ ಆಗಿರುವ ಬಾಲು ಅವರನ್ನು ಮದುವೆಯಾಗುತ್ತಾಳೆ. ಕಾಕತಾಳೀಯವಾಗಿ ಬಾಲು ಹರೀಶ್ ಅವರ ಶಾಲಾ ದಿನಗಳ ಸ್ನೇಹಿತನಾಗಿರುತ್ತಾನೆ. ವೈದ್ಯ ವೃತ್ತಿಯ ಮೇಲಿನ ನಂದಿನಿಯ ಸಮರ್ಪಣಾಭಾವದಿಂದಾಗಿ, ಶೀಘ್ರದಲ್ಲೇ ನಂದಿನಿ ಮತ್ತು ಬಾಲು ನಡುವೆ ದಾಂಪತ್ಯದ ಸಮಸ್ಯೆಗಳು ಉದ್ಭವಿಸುತ್ತವೆ. ಹರೀಶ್ ಒಂಟಿತನಕ್ಕೆ ಜಾರುತ್ತಾನೆ ಮತ್ತು ಹೃದಯ ಹಿಗ್ಗುವಿಕೆಯ (heart enlargement) ಕಾಯಿಲೆಯಿಂದ ಬಳಲುತ್ತಾನೆ, ಇದು ನಂದಿನಿಯನ್ನು ಅವನ ಹತ್ತಿರವಾಗಿಸುತ್ತದೆ. ಇದು ಬಾಲುವನ್ನು ಮತ್ತಷ್ಟು ಕೆರಳಿಸುತ್ತದೆ ಮತ್ತು ಅವನು ನಂದಿನಿಗೆ ಹರೀಶ್‌ನೊಂದಿಗೆ ಸಂಬಂಧವಿದೆ ಎಂದು ಆರೋಪಿಸುತ್ತಾನೆ. ನಂದಿನಿಯೊಂದಿಗಿನ ತನ್ನ ಸಂಬಂಧವು ಸ್ನೇಹಪರವಾದುದು ಎಂದು ಹರೀಶ್ ಬಾಲುವಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾನೆ ಆದರೆ ಬಾಲು ಅವನನ್ನು ಅನುಮಾನದಿಂದಲೇ ನಡೆಸಿಕೊಳ್ಳುತ್ತಾನೆ.

ಗರ್ಭಿಣಿಯಾದ ನಂದಿನಿ, ಬಾಲು ತಮ್ಮ ಮನೆಯ ಕೆಲಸದಾಕೆಯ ಮೇಲೆ ಹಲ್ಲೆ ನಡೆಸಿರುವುದನ್ನು ತಿಳಿದಾಗ, ಅವಳು ಅವನನ್ನು ಬಿಡಲು ನಿರ್ಧರಿಸುತ್ತಾಳೆ. ಹರೀಶ್ ನಂದಿನಿಯ ಮಗುವಿಗೆ ಜನ್ಮ ನೀಡಲು ಸಹಾಯ ಮಾಡುತ್ತಾನೆ ಮತ್ತು ತನ್ನ ಮುಂದುವರಿದ ಹೃದಯ ಕಾಯಿಲೆಯಿಂದ ಸಾವನ್ನಪ್ಪುತ್ತಾನೆ. ನಂದಿನಿ ತನ್ನ ಪತಿಯಿಂದ ವಿಚ್ಛೇದನ ಪಡೆದು ತನ್ನ ನವಜಾತ ಮಗುವಿನೊಂದಿಗೆ ಹೊಸ ಬದುಕನ್ನು ಆರಂಭಿಸುತ್ತಾಳೆ.

ಪಾತ್ರವರ್ಗ

[ಬದಲಾಯಿಸಿ]

ನಿರ್ಮಾಣ

[ಬದಲಾಯಿಸಿ]

ಬೆಳವಣಿಗೆ

[ಬದಲಾಯಿಸಿ]

ಉಷಾ ನವರತ್ನರಾಮ್ ಅವರ ಕಾದಂಬರಿಯು ಪ್ರಮುಖ ಪಾತ್ರಗಳ ಆಂತರಿಕ ಭಾವನೆಗಳನ್ನು ವ್ಯವಹರಿಸುವ ಸಾಹಿತ್ಯಿಕ ಪ್ರಣಯ ಕಥೆಯಾಗಿತ್ತು. ಚಿತ್ರದ ನಿರ್ದೇಶಕರು ಕಾದಂಬರಿಯನ್ನು ಓದಿದಾಗ ಕಥೆಯಲ್ಲಿ ಉತ್ತಮ ಸಾಮರ್ಥ್ಯವನ್ನು ಕಂಡರು ಮತ್ತು ಅದನ್ನು ಚಲನಚಿತ್ರವನ್ನಾಗಿ ಮಾಡಲು ಬಯಸಿದರು.

ಪಾತ್ರವರ್ಗ ಆಯ್ಕೆ

[ಬದಲಾಯಿಸಿ]

ಜನಪ್ರಿಯ ಜೋಡಿಯಾದ ಅನಂತ್ ನಾಗ್ ಮತ್ತು ಲಕ್ಷ್ಮಿ ಅವರನ್ನು ಆರಂಭದಲ್ಲಿ ಪ್ರಮುಖ ಪಾತ್ರಗಳಿಗೆ ಪರಿಗಣಿಸಲಾಗಿತ್ತು. ಬಾಬು ಅವರು ಆರಂಭದಲ್ಲಿ ಅಂಬರೀಶ್ ಅವರನ್ನು ಪ್ರಮುಖ ಪಾತ್ರಕ್ಕೆ ಪರಿಗಣಿಸಿದ್ದರು ಆದರೆ ಅವರ ದಿನಾಂಕಗಳು ಲಭ್ಯವಿರಲಿಲ್ಲ.[] ರಾಜೇಂದ್ರ ಸಿಂಗ್ ಬಾಬು ಅವರು ದೇವದಾಸ್ ಮಾದರಿಯ ಪಾತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಹಾಕಲು ನಿರ್ಧರಿಸಿದರು, ಇದನ್ನು ಕನ್ನಡ ಚಲನಚಿತ್ರಗಳಲ್ಲಿ ಮೊದಲು ಮಾಡಿರಲಿಲ್ಲ.[] ಆಕ್ಷನ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ವಿಷ್ಣುವರ್ಧನ್ ಬಂಧನದಂತಹ ಪ್ರೇಮಕಥೆಗೆ ನಾಯಕರಾಗುತ್ತಿರುವುದರ ಬಗ್ಗೆ ಚಿತ್ರರಂಗದಲ್ಲಿ ಮೊದಲು ಸಂದೇಹವಿತ್ತು. ನಿರ್ದೇಶಕರ ನಂಬಿಕೆ ಮತ್ತು ವಿಷ್ಣುವರ್ಧನ್ ಡಾ. ಹರೀಶ್ ಪಾತ್ರವನ್ನು ನಿರ್ವಹಿಸಿದ ರೀತಿ ಅವರ ಇಮೇಜ್ ಅನ್ನು ಬದಲಾಯಿಸಿತು ಮತ್ತು ಅವರನ್ನು ಸೂಪರ್‌ಸ್ಟಾರ್ ಆಗಿ ಸ್ಥಾಪಿಸಿತು.[] ಶೀರ್ಷಿಕೆ ಕಾರ್ಡ್‌ನಲ್ಲಿ, ಡಾ. ನಂದಿನಿ ಪಾತ್ರವನ್ನು ನಿರ್ವಹಿಸಲು ಬಯಸಿದ್ದ ನಟಿ ಕಲ್ಪನಾ ಅವರಿಗೆ ಗೌರವ ಸಲ್ಲಿಸಲಾಗಿದೆ.[] ಬಾಬು ಅವರು ನಾಯಕಿಯ ಪಾತ್ರಕ್ಕೆ ಆರತಿ ಅವರನ್ನು ಸಹ ಪರಿಗಣಿಸಿದ್ದರು, ಆದರೆ ಅವರ ದಿನಾಂಕಗಳು ಖಾಲಿ ಇರಲಿಲ್ಲ. ಬಾಬು ಅವರು ತಮ್ಮ ಸಹೋದರಿ ವಿಜಯಲಕ್ಷ್ಮಿ ಸಿಂಗ್ ಅವರು ನಟಿಸುತ್ತಿದ್ದ ಚಲನಚಿತ್ರದ ಸೆಟ್‌ನಲ್ಲಿ (ಬೆಂಕಿಯಲ್ಲಿ ಅರಳಿದ ಹೂವು) ಸುಹಾಸಿನಿಯನ್ನು ಭೇಟಿಯಾದಾಗ, ಅವರೇ ಡಾ. ನಂದಿನಿಯಾಗಬೇಕೆಂದು ತಕ್ಷಣ ನಿರ್ಧರಿಸಿದರು.[] ಜೈ ಜಗದೀಶ್ ನಿರ್ವಹಿಸಿದ ನೆಗೆಟಿವ್ ಪಾತ್ರವನ್ನು ಮೊದಲು ಹಿರಿಯ ನಟ ಅಂಬರೀಶ್ ಅವರಿಗೆ ನೀಡಲಾಯಿತು, ಅವರು ಆ ಪಾತ್ರವನ್ನು ನಿರಾಕರಿಸಿದರು.

ಚಿತ್ರೀಕರಣ

[ಬದಲಾಯಿಸಿ]

ಲಕ್ಕವಳ್ಳಿ ಆಣೆಕಟ್ಟು (ಲಕ್ಕ ರಿಸರ್ವಾಯರ್), ಹನುಮನಗುಂಡಿ ಜಲಪಾತ, ಲಲಿತ ಮಹಲ್ ಪ್ಯಾಲೇಸ್, ಕೃಷ್ಣರಾಜ ಸಾಗರ ಆಣೆಕಟ್ಟು, ಹಾರಂಗಿ ಆಣೆಕಟ್ಟು ಮತ್ತು ಬೆಂಗಳೂರಿನ ಗ್ರ್ಯಾಂಡ್ ಅಶೋಕ್ ಹೋಟೆಲ್‌ನಂತಹ ಹಲವಾರು ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.[] ಬಾಬು ಅವರು ಹೋಳಿ ಹಬ್ಬದ ಹಾಡನ್ನು ಸಹ ಸೇರಿಸಿದರು - ಇದು ಕನ್ನಡ ಚಲನಚಿತ್ರದಲ್ಲಿ ಮೊದಲನೆಯದಾಗಿದೆ ಮತ್ತು ಚಲನಚಿತ್ರದಲ್ಲಿ ಗ್ರ್ಯಾಂಡ್ ಪಿಯಾನೋ ಹಾಡನ್ನು ಅಳವಡಿಸಲಾಗಿತ್ತು.

ಹಿನ್ನೆಲೆ ಸಂಗೀತ

[ಬದಲಾಯಿಸಿ]
ಬಂಧನ
Soundtrack album by
ಎಂ. ರಂಗರಾವ್
Released೧೯೮೪
Recordedಪ್ರಸಾದ್ ಸ್ಟುಡಿಯೋಸ್
Genreಚಲನಚಿತ್ರ ಸಂಗೀತ
Labelಸಂಗೀತ
Producerಎಂ. ರಂಗರಾವ್
ಎಂ. ರಂಗರಾವ್ chronology
ಬೆಂಕಿ ಬಿರುಗಾಳಿ
(೧೯೮೪)
ಬಂಧನ
(೧೯೮೪)
ಬೆದರು ಬೊಂಬೆ
(೧೯೮೪)

ಎಂ. ರಂಗರಾವ್ ಅವರು ಸಂಗೀತ ಸಂಯೋಜಿಸಿದ್ದಾರೆ ಮತ್ತು ಸಾಹಿತ್ಯವನ್ನು ಆರ್. ಎನ್. ಜಯಗೋಪಾಲ್ ಬರೆದಿದ್ದಾರೆ. ಆಲ್ಬಮ್ ನಾಲ್ಕು ಹಾಡುಗಳನ್ನು ಒಳಗೊಂಡಿದೆ. ಬಣ್ಣ ನನ್ನ ಒಲವಿನ ಬಣ್ಣ ಹಾಡಿನ ಟ್ರ್ಯಾಕ್ ೧೯೬೫ ರ ಇಂಗ್ಲಿಷ್ ಭಾಷೆಯ ಚಲನಚಿತ್ರ ಫಾರ್ ಎ ಫ್ಯೂ ಡಾಲರ್ಸ್ ಮೋರ್ಪರ್ ಕ್ವಾಲ್ಚೆ ಡೊಲಾರೊ ಇನ್ ಪಿಯು - ಸ್ಪ್ಯಾನಿಷ್ ಇಂಟ್ರೊ ಓಪನಿಂಗ್ ಥೀಮ್ ರಾಗವನ್ನು ಆಧರಿಸಿದೆ.[೧೦] ಚಿತ್ರದ ಹಾಡುಗಳು ಚಾರ್ಟ್‌ಬಸ್ಟರ್‌ಗಳಾಗಿದ್ದವು.[೧೧]

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಗಾಯಕರುಸಮಯ
1."ಬಣ್ಣ ನನ್ನ ಒಲವಿನ"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ಕೋರಸ್ 
2."ಈ ಬಂಧನ"ಆರ್. ಎನ್. ಜಯಗೋಪಾಲ್ಕೆ. ಜೆ. ಏಸುದಾಸ್, ಎಸ್. ಜಾನಕಿ 
3."ನೂರೊಂದು ನೆನಪು"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ 
4."ಪ್ರೇಮದ ಕಾದಂಬರಿ"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ 

ಬಿಡುಗಡೆ ಮತ್ತು ವಿಮರ್ಶೆ

[ಬದಲಾಯಿಸಿ]

ಚಿತ್ರವು ಯಾವುದೇ ಕಟ್‌ಗಳಿಲ್ಲದೆ ೨೬ ಜುಲೈ ೧೯೮೪ ರಂದು 'ಯು' ಪ್ರಮಾಣಪತ್ರವನ್ನು ಪಡೆಯಿತು ಮತ್ತು ಅದೇ ವರ್ಷ ಆಗಸ್ಟ್ ೨೪ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ವಿಮರ್ಶಾತ್ಮಕ ಪ್ರತಿಕ್ರಿಯೆ

[ಬದಲಾಯಿಸಿ]

ಚಿತ್ರವು ವ್ಯಾಪಕವಾದ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ಹಿನ್ನೆಲೆ ಸಂಗೀತಕ್ಕಾಗಿ ಚಿತ್ರವು ಪ್ರಶಂಸೆಗೆ ಪಾತ್ರವಾಯಿತು. ಚಿತ್ರದ ಹಾಡುಗಳು ಕನ್ನಡ ಚಿತ್ರರಂಗದ ಶ್ರೇಷ್ಠ ಸಂಗೀತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರಮುಖ ಕಲಾವಿದರ ಅಭಿನಯವನ್ನೂ ಪ್ರಶಂಸಿಸಲಾಯಿತು. ಸ್ಕ್ರೀನ್ (ಮ್ಯಾಗಜೀನ್) ನ ಚಲನಚಿತ್ರ ವಿಮರ್ಶಕರೊಬ್ಬರು ಹೀಗೆ ಬರೆಯುತ್ತಾರೆ: "ಬಾಬು ಅವರು ಚಲನಚಿತ್ರ ನಿರ್ಮಾಣ ತಂತ್ರಗಳ ಮೇಲಿನ ಬಲವಾದ ಹಿಡಿತದಿಂದ, ಕಾದಂಬರಿಯನ್ನು ದೃಶ್ಯಗಳು ಮತ್ತು ಬಾಹ್ಯ ನಾಟಕಗಳಲ್ಲಿ ಸಮೃದ್ಧವಾಗಿರುವ ಚಿತ್ರಕಥೆಗೆ ಪರಿಣಾಮಕಾರಿಯಾಗಿ ಅಳವಡಿಸಿಕೊಂಡರು, ಇದು ಸಿನಿಮಾ ಮಾಧ್ಯಮಕ್ಕೆ ಅಗತ್ಯವಾಗಿತ್ತು. ಆ ಕಾಲದ ಹಿಂದಿ ಚಲನಚಿತ್ರಗಳಂತೆ ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಿಸುವ ಹವ್ಯಾಸವನ್ನೂ ಅವರು ತೋರಿಸಿದರು - ಅದು ಹೋಳಿ ಹಾಡು ಆಗಿರಲಿ ಅಥವಾ ಮದುವೆಯ ಹಾಡಿನಲ್ಲಿ ಗ್ರ್ಯಾಂಡ್ ಪಿಯಾನೋದ ಪ್ರಮುಖ ಉಪಸ್ಥಿತಿಯಾಗಿರಲಿ." ವಿಷ್ಣುವರ್ಧನ್ ಅವರ ಡಾ. ಹರೀಶ್ ಪಾತ್ರವನ್ನು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭಾರತೀಯ ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯ (NFAI) ಟ್ವೀಟ್‌ನಲ್ಲಿ ಹೀಗೆ ಬರೆಯುತ್ತದೆ: "ವಿಷ್ಣುವರ್ಧನ್ ಅವರ ಪಥ-ನಿರ್ಮಾಣದ ಪ್ರದರ್ಶನಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಅವರು ತ್ಯಾಗಮಯಿ ಪ್ರೇಮಿಯ ಪಾತ್ರದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು."[೧೨]

ಗಲ್ಲಾಪೆಟ್ಟಿಗೆ

[ಬದಲಾಯಿಸಿ]

ಚಿತ್ರವು ೧೮ ಚಿತ್ರಮಂದಿರಗಳಲ್ಲಿ ೧೦೦ ದಿನಗಳು ಮತ್ತು ಅನೇಕ ಪ್ರಥಮ ದರ್ಜೆ ಚಿತ್ರಮಂದಿರಗಳಲ್ಲಿ ೨೫ ವಾರಗಳ ಕಾಲ ಪ್ರದರ್ಶನಗೊಂಡಿತು. ಚಲನಚಿತ್ರವು ಎರಡು ಥಿಯೇಟರ್‌ಗಳಲ್ಲಿ ೩೦ ವಾರಗಳ ಪ್ರದರ್ಶನವನ್ನು ಕಂಡಿತು (ಆ ಸಮಯದಲ್ಲಿ ಇದು ದಾಖಲೆಯಾಗಿತ್ತು) ಮತ್ತು ಒಂದು ಥಿಯೇಟರ್‌ನಲ್ಲಿ ೪೬೯ ದಿನಗಳ ಪ್ರದರ್ಶನವನ್ನು ಪೂರೈಸಿತು, ಇದು ಆ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಎರಡನೇ ಅತಿ ಹೆಚ್ಚು ಕಾಲ ಓಡಿದ ಕನ್ನಡ ಚಲನಚಿತ್ರವಾಗಿದೆ. ಬಂಧನ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಯಿತು ಮತ್ತು 'ಇಂಡಸ್ಟ್ರಿ ಹಿಟ್' ಎಂದು ಘೋಷಿಸಲಾಯಿತು.[೧೩]

ರೀಮೇಕ್

[ಬದಲಾಯಿಸಿ]

ಈ ಚಿತ್ರವು ತಮಿಳಿನಲ್ಲಿ ಪ್ರೇಮಪಾಶಂ ಎಂದು ರೀಮೇಕ್ ಆಯಿತು. ತಮಿಳು ಆವೃತ್ತಿಯು ೧೯೮೫ ರಲ್ಲಿ ಬಿಡುಗಡೆಯಾಯಿತು ಮತ್ತು ಶಿವಕುಮಾರ್ ಮತ್ತು ರೇವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ಚಿತ್ರವನ್ನು ಕೆ. ವಿಜಯನ್ ನಿರ್ದೇಶಿಸಿದ್ದು, ಗಂಗೈ ಅಮರನ್ ಅವರ ಸಂಗೀತವಿದೆ.[೧೪]

ಪ್ರಶಸ್ತಿಗಳು

[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಅತ್ಯುತ್ತಮ ಕನ್ನಡ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ - ರಾಜೇಂದ್ರ ಸಿಂಗ್ ಬಾಬು (ರೋಹಿಣಿ ಪಿಕ್ಚರ್ಸ್)[೧೫]

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

  • ಅತ್ಯುತ್ತಮ ನಟ - ವಿಷ್ಣುವರ್ಧನ್
  • ಅತ್ಯುತ್ತಮ ಸಂಗೀತ ನಿರ್ದೇಶಕ - ಎಂ. ರಂಗರಾವ್

ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿ - ವಿಷ್ಣುವರ್ಧನ್[೧೬]
  • ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ - ಸುಹಾಸಿನಿ ಮಣಿರತ್ನಂ

ಪರಂಪರೆ

[ಬದಲಾಯಿಸಿ]

ಬಂಧನ ಚಿತ್ರದಲ್ಲಿ, ವಿಷ್ಣುವರ್ಧನ್ ಅವರು ಹುಡುಗಿಯೊಬ್ಬಳಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ವಿಫಲನಾಗಿ, ಅಂತಿಮವಾಗಿ ಮಾರಣಾಂತಿಕ ಹೃದಯ ಕಾಯಿಲೆಯಿಂದ ದುರಂತ ನಾಯಕನಾಗಿ ಕೊನೆಗೊಳ್ಳುವ ನಾಚಿಕೆ ಸ್ವಭಾವದ ವೈದ್ಯನ ಪಾತ್ರವನ್ನು ನಿರ್ವಹಿಸಿದರು. ಡಾ. ಹರೀಶ್ ಪಾತ್ರವು ಅವರಿಗೆ ವಿಮರ್ಶಾತ್ಮಕ ಮೆಚ್ಚುಗೆಯನ್ನು ತಂದುಕೊಟ್ಟಿತು. ಬಂಧನದ ಯಶಸ್ಸು ವಿಷ್ಣುವರ್ಧನ್ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವಾಯಿತು. ಅವರು ಕೃಷ್ಣ ನೀ ಬೇಗನೆ ಬಾರೋ, ಕರುಣಾಮಯಿ, ಸೌಭಾಗ್ಯ ಲಕ್ಷ್ಮಿ, ಸುಪ್ರಭಾತ ದಂತಹ ಕೌಟುಂಬಿಕ ಆಧಾರಿತ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು ಮತ್ತು ಕುಟುಂಬ ಪ್ರೇಕ್ಷಕರಲ್ಲಿ ಮತ್ತೊಂದು ಸ್ಥಾನವನ್ನು ಪಡೆದರು. ಈ ಚಲನಚಿತ್ರವು ಡಾ. ವಿಷ್ಣುವರ್ಧನ್ - ಸುಹಾಸಿನಿ ಜೋಡಿಯನ್ನು ತೆರೆಯ ಮೇಲೆ ಹೆಚ್ಚು ಆಚರಿಸಲ್ಪಡುವ ಜೋಡಿಯನ್ನಾಗಿ ಮಾಡಿತು. ಬಂಧನದ ಅಪಾರ ಯಶಸ್ಸಿನ ನಂತರ ಅವರು ಸುಪ್ರಭಾತ, ಮುತ್ತಿನ ಹಾರ ಮತ್ತು ಹಿಮಪಾತದಂತಹ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದರು. ಈ ಚಿತ್ರದ ನೂರೊಂದು ನೆನಪು ಹಾಡು ಈಗಲೂ ಎವರ್‌ಗ್ರೀನ್ ಹಾಡು ಎಂದು ಪರಿಗಣಿಸಲ್ಪಟ್ಟಿದೆ ಮತ್ತು ನಂತರ ೨೦೧೭ ರ ಚಲನಚಿತ್ರದ ಶೀರ್ಷಿಕೆಗೆ ಸ್ಫೂರ್ತಿಯಾಯಿತು.[೧೭]

ಉಲ್ಲೇಖಗಳು

[ಬದಲಾಯಿಸಿ]
  1. "Bandhana (1984) - IMDb". Archived from the original on 5 September 2021. Retrieved 5 September 2021 – via m.imdb.com.
  2. "Bandhana (1984) | Bandhana Movie | Bandhana Kannada Movie Cast & Crew, Release Date, Review, Photos, Videos". FilmiBeat. Archived from the original on 4 July 2019. Retrieved 4 July 2019.
  3. "Politics likely to 'caste' a role in film body polls". The Hindu. 29 September 2012. Archived from the original on 11 November 2023. Retrieved 8 October 2014.
  4. "DR.NANDINI (Bandhana) songs || MAATA IDI VANNELA PATA || SPB P.Susheela RAJASRI". YouTube. 4 November 2022. Archived from the original on 11 November 2023. Retrieved 5 November 2022.
  5. "Surprise🙌🙌 || Vishnuvardhan Suhashini || VaniJairam K.j.Yesudas || Poovanchal khadar || M.Ranga Rao - YouTube". YouTube. 23 August 2023. Archived from the original on 11 November 2023. Retrieved 29 August 2023.
  6. ೬.೦ ೬.೧ ೬.೨ "Rajendra Singh Babu: I gave Kannada many firsts". Deccan Herald. 17 August 2021. Archived from the original on 6 June 2024. Retrieved 8 June 2024.
  7. "10 Interesting Facts about Vishnuvardhan – DADA of Kannada Cinema". 18 September 2018. Archived from the original on 5 September 2021. Retrieved 5 September 2021.
  8. https://m.youtube.com/watch?v=wK2ZP-Zj0Zee
  9. "Bandana Movie Shooting Locations | Filmapia – reel sites . real sights". www.filmapia.com. Archived from the original on 5 September 2021. Retrieved 5 September 2021.
  10. "For a few Dollars more Spanish Intro Opening Theme". 7 July 2009. Archived from the original on 2021-12-21 – via www.youtube.com.
  11. "Dr Nandini Jukebox | Dr. Nandini Telugu Movie Songs | S.P. Balasubrahmanyam, P.Susheela | MRT Music". YouTube. 4 July 2022. Archived from the original on 11 November 2023. Retrieved 7 November 2022.
  12. "A beautiful frame from National Award-winning #Kannada film #Bandhana (1984), featuring #FaceOfTheWeek #Vishnuvardhan and #Suhasini". Twitter (in ಇಂಗ್ಲಿಷ್). Archived from the original on 12 June 2022. Retrieved 2022-06-12.
  13. "HIT Percentage / HIT Quotient of Actors". Shivu aDDa Forum - Kannada Movie Discussion. Archived from the original on 5 September 2021. Retrieved 4 July 2019.
  14. "Prema Paasam (1985)". Archived from the original on 4 July 2019. Retrieved 4 July 2019 – via www.tamilmdb.com.
  15. ಉಲ್ಲೇಖ ದೋಷ: Invalid <ref> tag; no text was provided for refs named auto
  16. "The Winner: 50th Manikchand Filmfare Awards 2002 - Filmfare - Indiatimes". filmfaremagazine.indiatimes.com. Archived from the original on 28 August 2004. Retrieved 1 August 2022.
  17. Desai, Dhwani. "Recreating the Bandhana magic". The Times of India. Archived from the original on 5 September 2021. Retrieved 5 September 2021.

ಬಾಹ್ಯ ಕೊಂಡಿಗಳು

[ಬದಲಾಯಿಸಿ]