ಫ್ಲಾರೆನ್ಸ್ ನೈಟಿಂಗೇಲ್

ವಿಕಿಪೀಡಿಯ ಇಂದ
Jump to navigation Jump to search
ಫ್ಲಾರೆನ್ಸ್ ನೈಟಿಂಗೇಲ್
Florence Nightingale CDV by H Lenthall.jpg
ಜನ್ಮನಾಮ(೧೮೨೦-೦೫-೧೨)೧೨ ಮೇ ೧೮೨೦
ಮರಣ೧೩ ಆಗಸ್ಟ್ ೧೯೧೦(1910-08-13) (aged ೯೦)
Park Lane, London, England, United Kingdom
ಹೆಸರುವಾಸಿಯಾದದ್ದುPioneering modern nursing
Medical career
Professionದಾದಿ ಮತ್ತು ಸಂಖ್ಯಾ ಶಾಸ್ತ್ರಜ್ಞೆ
InstitutionsSelimiye Barracks, Scutari
SpecialismHospital hygiene and sanitation
ಸಹಿ
Florence Nightingale Signature.svg


ಫ್ಲಾರೆನ್ಸ್ ನೈಟಿಂಗೇಲ್ - "ಲೇಡಿ ವಿತ್ ದಿ ಲ್ಯಾಂಪ್" ಎಂದೇ ಪ್ರಖ್ಯಾತರಾಗಿದ್ದ ಮಹಿಳೆ.ಜನನ ಇಟಲಿಯಲ್ಲಿ ೧೮೨೦ಮೇ ೧೨ ರಂದು.ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ,ತಮ್ಮ ೧೭ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು.ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು.೧೮೫೪ರ ಅಕ್ಟೋಬರ್ ೨೧ರಂದು ತಮ್ಮ ೩೮ ನರ್ಸ್ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಶುಶ್ರೂಷೆ ಮಾಡಿದರು.ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಳು. ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು. ಇಂದಿಗೂ ಈಕೆ ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲ ಆಸ್ಪತ್ರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ. ಈ 'ದೀಪ ಧಾರಿಣಿ' ಇಟಲಿಯ ಫ್ಲಾರೆನ್ಸ್ ನಗರದಲ್ಲಿ ಹುಟ್ಟಿದ ಪ್ಲಾರೆನ್ಸ್ ನೈಟಿಂಗೇಲ್. ಇವರ ನೆನಪಿಗಾಗಿ ಲಂಡನ್‌ನ ವಾಟರ್‌ಲೂ ಅರಮನೆಯಲ್ಲಿ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ.

ನೈಟಿಂಗೇಲ್ ಮನೋಜ್ಞ ಸೇವೆ[ಬದಲಾಯಿಸಿ]

ತನ್ನ ಮನೆತನದ ವಿರೋಧದ ನಡುವೆಯು ತನ್ನ ಸಮಸ್ತ ಪ್ರತಿಷ್ಠೆ ಗೌರವ ಸಿರಿತನ ಹಾಗೂ ತನ್ನ ವೈಯಕ್ತಿಕ ಸುಖ ಸಂತೋಷವನ್ನು ಧಾರೆಯೆರೆದು ಇಂಗ್ಲೆಂಡಿನ ಹೈಸರ್‌ವರ್ಥ್ ನಗರದ ಲೂಥರನ್‌ ಆಸ್ಪತ್ರೆಯಲ್ಲಿ ದಾದಿಯರ ಶುಶ್ರೂಷೆ ಶಿಕ್ಷಣ ಶಾಲೆಗೆ ವಿದ್ಯಾರ್ಥಿನಿಯಾಗಿ ಸೇರ್ಪಡೆಗೊಂಡಳು. ತನ್ನ ಶ್ರದ್ಧೆ ಮತ್ತು ಅನುಪಮ ಸೇವೆಯಿಂದ ಶಿಕ್ಷಕರ ಪ್ರಶಂಸೆಗೆ ಪಾತ್ರಳಾದಳು. ತನ್ನ ಮನದಭಿಲಾಷೆಯಂತೆ ರೋಗಿಗಳ ಆರೈಕೆಯ ಸೇವೆಗೆ ಧುಮುಕಿದಳು. ಆ ಕಾಲದಲ್ಲಿ ಮಹಿಳೆಯರಿಗೆ ಸೇವೆ ಸಲ್ಲಿಸುವ ಅನುಮತಿ ಇರಲಿಲ್ಲ.ಪುರುಷ ಪ್ರಾಧಾನ್ಯತೆ ಹೊಂದಿದಂತಹ ಆ ಸಮಯದಲ್ಲಿ ನೈಟಿಂಗೇಲ್‌ ತನ್ನ ಮಾನವೀಯತೆಯ ಮಾತೃತ್ವದ ಅಮೋಘ ಸೇವೆಯಿಂದ ಮನಗೆದ್ದು ಮಹಿಳೆಯರಿಗೆ ದಾದಿಯ ವೃತ್ತಿಗೆ ಅಡಿಪಾಯ ಹಾಕಿದಳು. ನೈಟಿಂಗೇಲ್‌ ಒಬ್ಬಂಟಿ ಮಹಿಳೆಯಾದರೂ ಧೃತಿಗೆಡದೆ ಯುದ್ಧ ಶಿಬಿರದಲ್ಲಿ ಸಲ್ಲಿಸಿದ ಸೇವೆಯಲ್ಲಿ ಇಡೀ ಸೈನಿಕರಿಗೆ ದೇವತೆಯಂತೆ ಕಂಡಳು. ಅಂದಿನ ಅಧಿಕಾರಷಾಹಿಗಳಿಗೆ ಯುದ್ಧದಲ್ಲಿ ಮತ್ತೊಂದು ಸಾಮ್ರ್ಯಾಜ್ಯವನ್ನು ಕಸಿದು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಗುಣವಿತ್ತೇ ವಿನಃ ತಮಗಾಗಿ ಯುದ್ಧ ಮಾಡುವವನಿಗೆ ಏನಾಗಿದೆ ಆತನಿಗೆ ಪೆಟ್ಟು ಬಿದ್ದಾಗ ಏನು ಮಾಡಬೇಕೆಂಬುದರ ಖಾಳಜಿ ಇರಲಿಲ್ಲ. ರೋಗಿಗಳಲ್ಲಿ ತುಂಬಾ ಗಂಭೀರರಾದವರನ್ನು ಸಮುದ್ರದಲ್ಲಿ ಎಸೆದರೆ, ಸ್ವಲ್ಪ ತ್ರಾಣವಿರುವವರನ್ನು ತಿಂಗಳಾನುಗಟ್ಟಲೆ ಹಡಗಿನ ಪ್ರಯಾಣದಲ್ಲಿ ಸಾಗಿಸಿ ಪ್ರಾಣಿಗಳಿಗೂ ಸಹ್ಯವೆನಿಸದ ಅಮಾನುಷ ಸ್ಥಳಗಳಲ್ಲಿ ಯಾವುದೇ ಶುಶ್ರೂಷಾ ವ್ಯವಸ್ಥೆಯಿಲ್ಲದ ಸ್ಥಳಗಳಿಗೆ ದಬ್ಬುತ್ತಿದ್ದರು. ಸಾವಿರಾರು ಜನರಿಗೆ ಒಬ್ಬನೋ ಇಬ್ಬರೋ ವೈದ್ಯರಿದ್ದರೆ ಉಂಟು ಇಲ್ಲದಿದ್ದರಿಲ್ಲ. ಅಂಥಹ ಒಂದು ಯುದ್ಧದಲ್ಲಿ ಸ್ಕುಟಾರ್ ಎಂಬ ಸ್ಥಳದಲ್ಲಿ ಯುದ್ಧ ಗಾಯಾಳುಗಳನ್ನು ತುಂಬಿದ್ದ ಕೊಟ್ಟಿಗೆಗೆ ಸಿಡ್ನಿ ಹರ್ಬರ್ಟ್ ಎಂಬ ಬ್ರಿಟಿಶ್ ಮಂತ್ರಿಮಂಡಲದ ಅಧಿಕಾರಿಯ ಮನವಿಯ ಮೇರೆಗೆ ಆಗಮಿಸಿದ ಫ್ಲಾರೆನ್ಸ್ ಮಾಡಿದ ಸುಧಾರಣೆ ಮನೋಜ್ಞ ಸೇವೆ ಚರಿತ್ರಾರ್ಹವಾದದ್ದು. ಭಾರತದಲ್ಲಿ ಸಿಪಾಯಿ ದಂಗೆಯ ಸಮಯದಲ್ಲೂ ಆಕೆ ಮಾಡಿದ ಸೇವೆ ಅಭೂತಪೂರ್ವವಾದದ್ದು. ಯಾವುದೇ ವ್ಯವಸ್ಥೆಗಳಿಲ್ಲದ, ಬೇಜವಾಬ್ದಾರಿಗಳ ಸರ್ಕಾರಿ ವ್ಯವಸ್ಥೆ, ಅಪಹಾಸ್ಯಗಳನ್ನು ಎದುರಿಸಿ ಕೂಡಾ, ಮಾನವೀಯ ಅನುಕಂಪ, ಸೇವಾ ಮನೋಭಾವನೆಗಳ ಹಾದಿಯಲ್ಲಿ ಬಂದ ಅಡೆತಡೆಗಳನ್ನೆಲ್ಲಾ ನಿವಾರಿಸಿ ಮಾನವ ಕುಲಕ್ಕೆ ಈಕೆ ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು. ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲಹುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾಳೆ."ನಮನ"

ದೀಪಧಾರಿಣಿ[ಬದಲಾಯಿಸಿ]

ಬೃಹದಾಕಾರದ ಮಿಲಿಟರಿ ಆಸ್ಪತ್ರೆ. ಕಟ್ಟಡವು ದೊಡ್ಡದಾಗಿತ್ತು. ಆದರೆ ಕನಿಷ್ಠ ಸೌಕರ್ಯವೂ ಇಲ್ಲದ ಆಸ್ಪತ್ರೆ. ಆಸ್ಪತ್ರೆಯ ಉದ್ದ ಸುಮಾರು ೬.೫ ಕಿಲೋಮೀಟರು. ಆಸ್ಪತ್ರೆಯಲ್ಲಿ ಸಾವಿರಾರು ಹಾಸಿಗೆಗಳು, ಆದರೆ ಒಬ್ಬ ರೋಗಿಯ ಹಾಸಿಗೆಗೂ, ಇನ್ನೊಬ್ಬ ರೋಗಿಯ ಹಾಸಿಗೆಗೂ ಇದ್ದ ಅಂತರ ಕೇವಲ ೪೫ ಸೆಂಟಿಮೀಟರುಗಳು. ಇಂಥಹ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರಾತ್ರಿಯ ಹೊತ್ತು ಆಕೆ ಕೈಯಲ್ಲಿ ದೀಪ ಹಿಡಿದು ಪ್ರತಿಯೊಂದು ಹಾಸಿಗೆಯ ಬಳಿ ಹೋಗುತ್ತಾಳೆ. ಪ್ರತಿಯೊಬ್ಬ ರೋಗಿಯನ್ನೂ ವಿಚಾರಿಸುತ್ತಾಳೆ. ಅವರಿಗೆ ಅಗತ್ಯವಾದ ಔಷದ ಮತ್ತು ಇತರ ವಸ್ತುಗಳನ್ನು ನೀಡುತ್ತಾಳೆ. ಮೆಲುದನಿಯಲ್ಲಿ ಅವರನ್ನು ಉಪಚರಿಸುತ್ತಾಳೆ, ಅವರಿಗೆ ಧೈರ್ಯ ತುಂಬುತ್ತಾಳೆ. ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಗೆ, ಆಗತಾನೇ ಚೇತರಿಸಿಕೊಳ್ಳುತ್ತಿರುವ ರೋಗಿಗೆ ಅವಳು ಮಾಡುತ್ತಿದ್ದ ಸೇವೆಯಿಂದ 'ಅವಳೊಬ್ಬ ದೇವತೆ' ಎನಿಸಿದ್ದರೆ ಆಶ್ಚರ್ಯವಿಲ್ಲ. ಪ್ರತಿದಿನ ಕತ್ತಲಾದೊಡನೆ ದೀಪವನ್ನು ಹಿಡಿದು ರೋಗಿಗಳನ್ನು ವಿಚಾರಿಸಲು ಬರುತ್ತಿದ್ದ ಈಕೆಯನ್ನು 'ದೀಪಧಾರಿಣಿ' ಎಂದೇ ಕರೆಯುತ್ತಿದ್ದರು. [೧]

ನೈಟೀಂಗೇಲ್ ಪ್ರತಿಜ್ಞೆ[ಬದಲಾಯಿಸಿ]

  • ವೈದ್ಯರು ಪದವಿಧರರಾಗಿ ವೃತ್ತಿ ಕೈಗೊಳ್ಳುವ ಮುಂಚೆ ಮಾಡುವಂತೆಯೇ ದಾದಿಯರೂ ಮಾಡಬೇಕಾದ ಪ್ರತಿಜ್ಞೆ ಈ ಮುಂದಿನಂತಿದೆ;
  • ದೇವರ ಮುಂದೆ, ಇಲ್ಲಿ ನೆರೆದಿರುವವರ ಸಮಕ್ಷಮದಲ್ಲಿ ನಾನು ವಿಧಿವಿಹಿತವಾಗಿ ಹೀಗೆ ವಾಗ್ದಾನ ಮಾಡುತ್ತೇನೆ:
  • ನನ್ನ ಜೀವನವನ್ನು ನಿಷ್ಕಳಂಕವಾಗಿಟ್ಟುಕೊಂಡು ನನ್ನ ಕಸಬನ್ನು ಶ್ರದ್ಧಾಭಕ್ತಿಯಿಂದ ನಡೆಸುವೆನು.
  • ದೇಹಕ್ಕೆ ಹಾನಿ ಮತ್ತು ಕೇಡು ತರುವ ಎಲ್ಲದರಿಂದಲೂ ನಾನು ದೂರವಿರುವೆನು. ಯಾವ ಕೆಟ್ಟ ಮದ್ದನ್ನೂ ಸೇವಿಸುವುದಿಲ್ಲ. ಗೊತ್ತಿದ್ದು ಇನ್ನೊಬ್ಬರಿಗೆ ಕೊಡುವುದೂ ಇಲ್ಲ.
  • ನನ್ನ ಕಸಬಿನ ಗುಣಮಟ್ಟವನ್ನು ಉನ್ನತೀಕರಿಸಲು ನನ್ನ ಕೈಲಾದುದನ್ನೆಲ್ಲ ಮಾಡುವೆನು. ಕಸಬಿನಲ್ಲಿ ನನ್ನ ಗಮನಕ್ಕೆ ಬರುವ ಕುಟುಂಬ ವ್ಯವಹಾರಗಳನ್ನೂ ನನಗೆ ಹೇಳಿದ ಸ್ವಂತ ವಿಷಯಗಳನ್ನೂ ಗುಟ್ಟಾಗಿರಿಸುವೆನು.
  • ವೈದ್ಯನಿಗೆ ಅವನ ಕೆಲಸದಲ್ಲಿ ನೆರವಾಗಲು ಯತ್ನಿಸಿ, ನನ್ನ ಪೋಷಣೆಗೊಳಪಟ್ಟು ಬರುವವರ ಹಿತಕ್ಕಾಗಿ ಶ್ರದ್ಧೆ ವಹಿಸುವೆನು. [೨]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. REDIRECT Template:MacTutor

ಉಲ್ಲೇಖ[ಬದಲಾಯಿಸಿ]

  1. 1911 Encyclopædia Britannica article Florence Nightingale
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಟಿಂಗೇಲ್, ಫ್ಲಾರೆನ್ಸ್‌