ಪ್ರಾತಃಕಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾತಃಕಾಲವು (ಉಷಃಕಾಲ, ಉಷೆ) ಸೂರ್ಯೋದಯಕ್ಕೆ ಮುಂಚೆ ಮಂದಪ್ರಕಾಶದ ಆರಂಭವನ್ನು ಗುರುತಿಸುವ ಸಮಯ. ಸೂರ್ಯ ಬಿಂಬದ ಕೇಂದ್ರವು ದಿಗಂತದ ಕೆಳಗೆ 18° ಮುಟ್ಟಿದಾಗ, ವಾತಾವರಣದಲ್ಲಿ ಹರಡಿದ ಪರೋಕ್ಷ ಬೆಳಕಿನ ಗೋಚರವಾಗುವಿಕೆಯಿಂದ ಇದನ್ನು ಗುರುತಿಸಲಾಗುತ್ತದೆ. ಪ್ರಾತಃಕಾಲದ ಈ ಮಂದಪ್ರಕಾಶದ ಅವಧಿಯು ಸೂರ್ಯೋದಯದವರೆಗೆ ಇರುತ್ತದೆ (ಸೂರ್ಯನ ಮೇಲಿನ ಅವಯವವು ದಿಗಂತವನ್ನು ದಾಟಿ ಹೊರಬಂದಾಗ). ಆಗ ಚೆದುರಿದ ಬೆಳಕು ನೇರ ಬೆಳಕಾಗುತ್ತದೆ.

ಹಿಂದೂ ಪ್ರಾತಃಕಾಲದ ದೇವತೆಯಾದ ಉಷಸ್ ಹೆಣ್ಣು ದೇವತೆಯಾಗಿದ್ದಾಳೆ. ಹಾಗೆ, ಸೂರ್ಯ ಮತ್ತು ಸೂರ್ಯನ ಸಾರಥಿಯಾದ ಅರುಣ ಗಂಡು ದೇವತೆಗಳಾಗಿದ್ದಾರೆ. ಉಷಸ್ಸು ಅತ್ಯಂತ ಪ್ರಮುಖ ಋಗ್ವೈದಿಕ ದೇವತೆಗಳಲ್ಲಿ ಒಬ್ಬಳು. ಪ್ರಾತಃಕಾಲದ ಸಮಯವನ್ನು ಬ್ರಹ್ಮಮುಹೂರ್ತ (ಅಥವಾ ಬ್ರಾಹ್ಮಿಮುಹೂರ್ತ) ಎಂದೂ ಸೂಚಿಸಲಾಗುತ್ತದೆ. ಇದು ಧ್ಯಾನ ಮತ್ತು ಯೋಗ ಸೇರಿದಂತೆ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಲು ಉತ್ಕೃಷ್ಟ ಸಮಯ ಎಂದು ಪರಿಗಣಿಸಲಾಗುತ್ತದೆ. ಭಾರತದ ಕೆಲವು ಭಾಗಗಳಲ್ಲಿ, ಛಠ್ ಹಬ್ಬದ ಸಂದರ್ಭದಲ್ಲಿ, ಸೂರ್ಯನ ಜೊತೆಗೆ ಉಷಾ ಮತ್ತು ಪ್ರತ್ಯುಷಾ ಇಬ್ಬರನ್ನೂ ಪೂಜಿಸಲಾಗುತ್ತದೆ.

ಮಂದಪ್ರಕಾಶದ ಅವಧಿಯು ವೀಕ್ಷಕನ ಅಕ್ಷಾಂಶವನ್ನು ಆಧರಿಸಿ ಬಹಳವಾಗಿ ಬದಲಾಗುತ್ತದೆ: ವಿಷುವದ್ರೇಖೆಯಲ್ಲಿ ೭೦ ನಿಮಿಷಕ್ಕಿಂತ ಸ್ವಲ್ಪ ಹೆಚ್ಚು ಇರುತ್ತದೆ, ಧ್ರುವ ಪ್ರದೇಶಗಳಲ್ಲಿ ಅನೇಕ ಗಂಟೆಗಳವರೆಗೆ ಇರುತ್ತದೆ, ಮತ್ತು ಧ್ರುವಗಳಲ್ಲಿ ಹಲವಾರು ವಾರಗಳವರೆಗೆ ಇರುತ್ತದೆ.

ವಿಷುವತ್ಸಂಕ್ರಾಂತಿ ಸೂರ್ಯನು ಪೂರ್ವದ ಕಡೆಯಿಂದ ಉದಯಿಸಿ ಪಶ್ಚಿಮದ ಕಡೆಗೆ ಅಸ್ತಂಗತನಾಗುವ ಮತ್ತು ದಿಗಂತಕ್ಕೆ ಸಮಕೋಣದಲ್ಲಿರುವ ವಿಷುವದ್ರೇಖೆಯ ಮೇಲೆ ಮಂದಪ್ರಕಾಶದ ಅವಧಿಯು ಅತಿ ಕಡಿಮೆಯಿರುತ್ತದೆ. ಮಂದಪ್ರಕಾಶ ಅವಧಿಯ ಪ್ರತಿ ಹಂತವು ಕೇವಲ 24 ನಿಮಿಷ ಇರುತ್ತದೆ. ಭೂಮಿಯ ಎಲ್ಲಿಂದಾದರೂ, ಮಂದಪ್ರಕಾಶದ ಅವಧಿಯು ವಿಷುವತ್ಸಂಕ್ರಾಂತಿಯ ಸುತ್ತ ಅತ್ಯಂತ ಕಡಿಮೆಯಿರುತ್ತದೆ ಮತ್ತು ಅಯನ ಸಂಕ್ರಾಂತಿಗಳ ಮೇಲೆ ಅತ್ಯಂತ ದೀರ್ಘವಾಗಿರುತ್ತದೆ.

ಬೇಸಿಗೆಯ ಅಯನಸಂಕ್ರಾಂತಿಯು ಸಮೀಪಿಸಿದಂತೆ ಹಗಲು ದೀರ್ಘವಾಗುತ್ತದೆ, ಮತ್ತು ಚಳಿಗಾಲದ ಅಯನಸಂಕ್ರಾಂತಿಯು ಸಮೀಪಿಸಿದಂತೆ ರಾತ್ರಿಯು ದೀರ್ಘವಾಗುತ್ತದೆ. ಇದು ಪ್ರಾತಃಕಾಲ ಮತ್ತು ಮುಸ್ಸಂಜೆಯ ಸಮಯ ಮತ್ತು ಅವಧಿಗಳ ಮೇಲೆ ಸಂಭಾವ್ಯ ಪ್ರಭಾವಬೀರಬಹುದು. ಈ ಪ್ರಭಾವವು ಧ್ರುವಗಳ ಹತ್ತಿರ ಹೆಚ್ಚು ಎದ್ದುಕಾಣುತ್ತದೆ, ಏಕೆಂದರೆ ಇಲ್ಲಿ ಸೂರ್ಯನು ಮೇಷ ಸಂಕ್ರಾಂತಿಯಲ್ಲಿ ಉದಯಿಸಿ ಶರತ್ಕಾಲದ ವಿಷುವತ್ಸಂಕ್ರಾಂತಿಯಲ್ಲಿ ಅಸ್ತಂಗತನಾಗುತ್ತಾನೆ. ಹಾಗಾಗಿ ಮಂದಪ್ರಕಾಶದ ಅವಧಿ ದೀರ್ಘವಾಗಿರುತ್ತದೆ, ಮತ್ತು ಕೆಲವು ವಾರಗಳವರೆಗೆ ಇರುತ್ತದೆ.