ಉಷಾ(ದೇವತೆ)

ವಿಕಿಪೀಡಿಯ ಇಂದ
Jump to navigation Jump to search
ಕೃಷ್ಣನ ಮೊಮ್ಮಗ ಅನಿರುದ್ಧನ ಹೆಂಡತಿ , ಬಾಣಾಸುರನ ಮಗಳ ಕುರಿತ ಮಾಹಿತಿಗಾಗಿ ಉಷೆ ‎ ನೋಡಿರಿ.
'ಉಷಾ' ಕನ್ನಡ ಚಲನಚಿತ್ರ ಕ್ಕಾಗಿ ಉಷಾ ನೋಡಿರಿ.

ಉಷಸ್ , ಉಷೆ, ಉಷಾದೇವಿ ಎಂದು ಪ್ರಸಿದ್ಧಳಾಗಿರುವ ವೈದಿಕ ದೇವತೆ. ಮುಂಬೆಳಗಿನ ಸಾಮ್ರಾಜ್ಞಿ[೧]. ಜ್ಯೋತಿರ್ಮಂಡಲಗಳಲ್ಲೆಲ್ಲ ಅತ್ಯಧಿಕವಾದ ತೇಜಸ್ಸುಳ್ಳವಳು. ದೇವಮಾತೆಯಾದ್ದರಿಂದ ದೇವತೆಗಳಿಗೂ ಪೂಜ್ಯಳು. ಇವಳ ಸ್ವರೂಪ ಎರಡು ವಿಧ. ಜಗತ್ತನ್ನು ಆಕರ್ಷಿಸುವ ಭವ್ಯವಾದ ಲೌಕಿಕ ಸ್ವರೂಪ ಒಂದಾದರೆ. ಗುಹ್ಯವೂ ಸತ್ಯಾತ್ಮಕವೂ ಆದ ದಿವ್ಯಸ್ವರೂಪ ಮತ್ತೊಂದು.[೨]

ಋಗ್ವೇದದಲ್ಲಿ ಬಣ್ಣನೆ[ಬದಲಾಯಿಸಿ]

ಋಗ್ವೇದದಲ್ಲಿ ಉಷಸ್‍ನ್ನು ಹಲವಾರು ಮಂತ್ರಗಳಲ್ಲಿ ಬಣ್ಣಿಸಲಾಗಿದೆ. ವಸ್ತ್ರಾಲಂಕಾರಗಳಿಂದ ಭೂಷಿತಳಾದ ಪತ್ನಿ ಪತಿಯ ಆಗಮನವನ್ನು ನಿರೀಕ್ಷಿಸುವಂತೆ ಉಷೆ ನಾನಾ ವರ್ಣಾತ್ಮಕವಾದ ದಿವ್ಯ ಪ್ರತಿಭೆಯಿಂದ ಶೋಭಿಸುತ್ತ ಪತಿಯಾದ ಆದಿತ್ಯನನ್ನು ನಿರೀಕ್ಷಿಸುತ್ತಿದ್ದಾಳೆ. ಸ್ನಾನಮಾಡಲಿಳಿದ ಸುಂದರ ತರುಣಿ ಲಜ್ಜೆಯಿಂದ ಬಳುಕುತ್ತ ಮೇಲೆದ್ದು ಬರುವಂತೆ ಆಕರ್ಷಕವಾದ ರೂಪವುಳ್ಳ ಈಕೆ ತನ್ನ ದಿವ್ಯ ಸೌಂದರ್ಯವನ್ನು ಪ್ರಕಾಶಪಡಿಸುತ್ತ ಅಂತರಿಕ್ಷದಲ್ಲಿ ಅವಿರ್ಭವಿಸುತ್ತಾಳೆ. ನರ್ತನಮಾಡುವ ಸ್ತ್ರೀಯಂತೆ ರೂಪುಲಾವಣ್ಯಗಳನ್ನು ತೋರಿಸುತ್ತಾಳೆ. ಹೀಗೆಂದು ಉಷೆಯನ್ನು ಬಣ್ಣಿಸಲಾಗಿದೆ. ಕೇವಲ ಚಿತ್ತಾಕರ್ಷಕವಾದ ಸೌಂದರ್ಯ ಮಾತ್ರವಲ್ಲದೆ ಜಗದುಪಕಾರಕವಾದ ತೇಜಸ್ಸನ್ನೂ ಈಕೆ ಹೊಂದಿದ್ದಾಳೆ. ತಾಯಿ ಮಕ್ಕಳನ್ನು ಆದರದಿಂದ ಭೋಜನಕ್ಕೆ ಎಬ್ಬಿಸುವಂತೆ ಜಗತ್ತನ್ನು ಎಚ್ಚರಗೊಳಿಸಿ ಕಾರ್ಯನಿರತವಾಗುವಂತೆ ಮಾಡುತ್ತಾಳೆ. ಅಜ್ಞಾನನಾಶಕಳಾಗಿ ಜ್ಞಾನಪ್ರೇರಕಳಾಗುತ್ತಾಳೆ. ಋತುಮಾರ್ಗವನ್ನನುಸರಿಸಿ ದಿವ್ಯ ನಿಯಮವನ್ನು ಪಾಲಿಸಿ ದೇವಮಾನವಾದಿಗಳಿಗೆಲ್ಲ ಮಾರ್ಗದರ್ಶಕಳಾಗಿದ್ದಾಳೆ. ಆದರೆ, ಲೋಕಕ್ಕೆಲ್ಲ ಚೈತನ್ಯವನ್ನೂ ಬೆಳಕನ್ನೂ ಕೊಟ್ಟು ಜೀವಕಳೆಯನ್ನು ತುಂಬತಕ್ಕ ಉಷೆ ತಾನು ಮಾತ್ರ ನಿತ್ಯತಾರುಣ್ಯವನ್ನು ಹೊಂದಿ ತನ್ನೆದುರಿಗೆ ಹುಟ್ಟಿ ಬೆಳೆದ ಸಕಲ ಜಂತುಗಳಿಗೂ ಮುಪ್ಪನ್ನುಂಟುಮಾಡಿ ಮೃತರಾಗುವಂತೆ ಮಾಡುತ್ತಾಳೆ. ಈ ವಿಷಯದಲ್ಲಿ ಇವಳಿಗೆ ಕರುಣೆಯೇ ಇಲ್ಲ. ಶಾಶ್ವತಳಾದ ಈ ಉಷಸ್ಸಿನ ಸೊಬಗನ್ನು ನೋಡಿ ಆನಂದಿಸಿದ ಹಿಂದಿನವರೆಲ್ಲ ಕಣ್ಮರೆಯಾದರು. ಮುಂದಿನವರ ಗತಿಯೂ ಇಷ್ಟೆ.. ಆದರೆ, ಈಕೆ ಮಾತ್ರ ನಿತ್ಯಳು ನಿತ್ಯತಾರುಣ್ಯ ಸೌಂದರ್ಯವುಳ್ಳವಳು ಆಗಿದ್ದು, ಲೋಕಯಾತ್ರೆಯಲ್ಲಿ ನಿತ್ಯ ಮತ್ತು ಅನಿತ್ಯ ತತ್ತ್ವಗಳೆರಡಕ್ಕೂ ಸಂಬಂಧಿಸಿದ್ದಾಳೆ. ಉಷಸ್ಸಿನ ಭೌತಿಕಸ್ವರೂಪವನ್ನು ತಕ್ಕಮಟ್ಟಿಗೆ ಎಲ್ಲರೂ ಅರಿಯಬಹುದು. ಆದರೆ ಇವಳ ಅಲೌಕಿಕವಾದ ದಿವ್ಯತ್ತ್ವವನ್ನರಿಯಲು ಸತ್ಯವಂತರೂ ಮೇಧಾವಿಗಳು ಮಂತ್ರ ತತ್ತ್ವವನ್ನರಿತವರೂ ಆದ ಆಂಗಿರಸರಂತಹ ಋಷಿಗಳಿಂದ ಮಾತ್ರ ಸಾಧ್ಯ. ಆದಿತ್ಯನ ಸ್ವರೂಪವೆಷ್ಟು ಗಂಭೀರವೋ ಉಷಸ್ಸಿನ ಸ್ವರೂಪವೂ ಅಷ್ಟೇ ಗಂಭೀರ. ಜಗತ್ತ್ಪೂಜ್ಯವಾದ ದಿವ್ಯತತ್ತ್ವದ ಪ್ರತೀಕವಾದ್ದರಿಂದ ಇದಂ ಶ್ರೇಷ್ಠಂ ಜ್ಯೋತಿಷಾಂ ಜ್ಯೋತಿ; ಎಂದು ಈಕೆಯನ್ನು ಪ್ರಶಂಸಿಸಲಾಗಿದೆ. ಈ ವರ್ಣನೆಗಳೆಲ್ಲವನ್ನೂ ವೇದಾದಿ ಪ್ರಮಾಣ ಗ್ರಂಥಗಳಲ್ಲಿವೆ.

ಸಂಸ್ಕೃತಿಯಲ್ಲಿ ಉಷೆ[ಬದಲಾಯಿಸಿ]

ಉಷೆಯನ್ನು ಉತ್ತರಭಾರತದಲ್ಲಿ ಮುಖ್ಯವಾಗಿ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಈಗಲೂ ಪೂಜಿಸುತ್ತಾರೆ.ಅಂತೆಯೇ ನೇಪಾಳದಲ್ಲಿ ಕೂಡಾ ಉತ್ಸವಾದಿಗಳಲ್ಲಿ ಪೂಜಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Apte, Vaman Shivram (1965), The Practical Sanskrit Dictionary (4th ed.), New Delhi: Motilal Banarsidass, ISBN 81-208-0567-4, p. 304.
  2. http://www.yogamag.net/archives/1991/ajan91/vedgod.shtml

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Dallapiccola, Anna (2002), Dictionary of Hindu Lore and Legend, New York: Thames & Hudson, ISBN 0-500-51088-1
  • Kinsley, David (1987), Hindu Goddesses: Vision of the Divine Feminine in the Hindu Religious Traditions, New Delhi: Motilal Banarsidass, ISBN 81-208-0379-5
Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: