ಪ್ರಮೋದ್ ಮಹಾಜನ್
ಪ್ರಮೋದ್ ಮಹಾಜನ್ (೧೯೪೯- ೨೦೦೬) ಭಾರತದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಭಾರತೀಯ ಜನತಾಪಕ್ಷದ ಮುಖಂಡರಾಗಿದ್ದರು.
ಜೀವನ
[ಬದಲಾಯಿಸಿ]ಆಂಧ್ರ ಪ್ರದೇಶ ರಾಜ್ಯದ ಮೆಹಬೂಬ್ ನಗರದಲ್ಲಿ ೧೯೪೯, ಅಕ್ಟೋಬರ್ ೩೦ರಂದು ಜನಿಸಿದರು. ತಂದೆ ವೆಂಕಟೇಶ್ ದೇವಿದಾಸ್ ಮಹಾಜನ್ ಮತ್ತು ತಾಯಿ ಪ್ರಭಾವತಿ ವೆಂಕಟೇಶ್ ಮಹಾಜನ್. ಪ್ರಮೋದ್ ಮಹಾಜನ್ ಅವರು ರಾಜ್ಯಶಾಸ್ತ್ರ, ಭೌತಶಾಸ್ತ್ರ ಮತ್ತು ಪತ್ರಿಕೋದ್ಯಮ ಪದವೀಧರಾಗಿದ್ದರು.
ರಾಜಕಾರಣ
[ಬದಲಾಯಿಸಿ]೧೯೭೮ರಲ್ಲಿ ರಾರ್ಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. ೧೯೮೬ರಲ್ಲಿ ಅಖಿಲ ಭಾರತ ಭಾರತೀಯ ಜನತಾ ಪಕ್ಷದ ಯುವಮೋರ್ಚಾದ ಅಧ್ಯಕ್ಷರಾಗಿದ್ದರು. ದೇಶದಲ್ಲಿ ಎನ್.ಡಿ.ಎ. ನೇತೃತ್ವದಲ್ಲಿ, ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲ ಪಕ್ಷಗಳಲ್ಲೂ ಮಿತ್ರರನ್ನು ಹೊಂದಿದ್ದ ಅಪರೂಪದ ರಾಜಕಾರಣಿ ಇವರಾಗಿದ್ದರು.
೧೯೮೬, ೧೯೯೨, ೧೯೯೮ ಮತ್ತು ೨೦೦೪ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಭಾರತದ ಮತ್ತೊಬ್ಬ ಪ್ರಮುಖ ರಾಜಕಾರಣಿ ಹಾಗೂ ಮಾಜಿ ಪ್ರಧಾನಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಯವರು ಪ್ರಮೋದ್ ಮಹಾಜನ್ ಅವರನ್ನು ಬಿಜೆಪಿಯ ಲಕ್ಷ್ಮಣ ಎಂದು ಬಣ್ಣಿಸಿದ್ದರು. ೨೦೦೪ರ ಲೋಕಸಭಾ ಚುನಾವಣಿಯಲ್ಲಿ ಬಿಜೆಪಿಯ ಭಾರತ ಪ್ರಕಾಶಿಸುತ್ತಿದೆ ಪ್ರಚಾರತಂತ್ರದ ಕಾರಣಕರ್ತರಾಗಿದ್ದರು.
ಪ್ರಧಾನಿ ವಾಜಪೇಯಿ ನೇತ್ರತ್ವದ ಕೇಂದ್ರ ಸರ್ಕಾರದ ಸಚಿವರಾಗಿದ್ದಾಗ ಕರ್ನಾಟಕದ ಹುಬ್ಬಳ್ಳಿಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆ ಮತ್ತು ಉದ್ಘಾಟನೆಯನ್ನು ಪ್ರಮೋದ ಮಹಾಜನ್ ಮಾಡಿ, ಉತ್ತರ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಸ್ಥಾಪನೆಗೆ ಕಾರಣರಾಗಿದ್ದರು.
ಸಾವು
[ಬದಲಾಯಿಸಿ]೨೦೦೬ ಏಪ್ರಿಲ್ ೨೨ರಂದು, ಸ್ವಂತ ಸಹೋದರ ಪ್ರವೀಣ್ ಮಹಾಜನ್ ಅವರ ಗುಂಡೇಟಿನಿಂದ ತೀವ್ರ ಅಸ್ವಸ್ಥರಾಗಿ, ಹನ್ನೆರಡು ದಿನಗಳ ಸಾವು-ಬದುಕಿನ ಹೋರಾಟದ ನಂತರ ಮೇ ೩ ರಂದು, ಮುಂಬಯಿಯ ಹಿಂದುಜಾ ಆಸ್ಪತ್ರೆಯಲ್ಲಿ ನಿಧನರಾದರು.