ವಿಷಯಕ್ಕೆ ಹೋಗು

ನಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪಲ್ಸ್ ಇಂದ ಪುನರ್ನಿರ್ದೇಶಿತ)
ಅರೀಯ ಅಪಧಮನಿಯಿರುವಲ್ಲಿ ನಾಡಿ ಮೌಲ್ಯಮಾಪನ

ವೈದ್ಯಶಾಸ್ತ್ರದಲ್ಲಿ, ಒಬ್ಬ ವ್ಯಕ್ತಿಯ ನಾಡಿಯು ಹೃದಯದ ಬಡಿತದ ಅಪಧಮನೀಯ ಸ್ಪರ್ಶಪರೀಕ್ಷೆ. ಅದನ್ನು, ಕತ್ತಿನಲ್ಲಿ (ಶೀರ್ಷ ಅಪಧಮನಿ), ಮಣಿಕಟ್ಟಿನಲ್ಲಿ (ಅರೀಯ ಅಪಧಮನಿ), ಮಂಡಿಯ ಹಿಂಭಾಗದಲ್ಲಿ (ಜಾನುಸಂಧಿಯ ಅಪಧಮನಿ), ಮೊಣಕೈಯ ಒಳಭಾಗದಲ್ಲಿ (ಬಾಹು ಅಪಧಮನಿ), ಮತ್ತು ಗುಲ್ಫದ ಹತ್ತಿರ, ಒಟ್ಟಿನಲ್ಲಿ ಒಂದು ಅಪಧಮನಿಯನ್ನು ಒಂದು ಮೂಳೆಗೆ ಮುಟ್ಟುವಂತೆ ಒತ್ತಲು ಆಸ್ಪದನೀಡುವ ಯಾವ ಭಾಗದಲ್ಲಿಯಾದರೂ ಸ್ಪರ್ಶಿಸಿ ತಿಳಿಯಬಹುದು. ನಾಡಿಯ ಪ್ರಮಾಣವನ್ನು ಹೃದಯದ ಬಡಿತವನ್ನು ನೇರವಾಗಿ ಅಳೆದೂ (ಆಲಿಕೆ), ಸಾಮಾನ್ಯವಾಗಿ ಒಂದು ಆಕರ್ಣಕವನ್ನು ಬಳಸಿ, ಅಳೆಯಬಹುದು.

ಇತಿಹಾಸ

[ಬದಲಾಯಿಸಿ]

ಮುಂಗೈಯ ಮಣಿಕಟ್ಟಿನ ಬಳಿಯ ಅಪಧಮನಿಯನ್ನು ಅದುಮಿ ಹಿಡಿದು ಪರೀಕ್ಷಿಸುವ ನಾಡಿಯ ಬಗ್ಗೆ ಪ್ರಾಚೀನ ಕಾಲದಿಂದಲೂ ಆಸಕ್ತಿ ತೋರಿಸಲಾಗಿದೆ. ನಾಡಿ ಪರೀಕ್ಷಣ ಕಲೆ ಮೊದಲಿಗೆ ಈಜಿಪ್ಟ್‍ನಲ್ಲಿ ರೂಪುಗೊಂಡು ಅನಂತರ ಚೀನಿ ಮತ್ತು ಗ್ರೀಸ್ ದೇಶಗಳಲ್ಲಿ ವಿಸ್ತøತವಾಗಿ ಬೆಳೆಯಿತು. ಪರೀಕ್ಷಕ ತನ್ನ ಬೆರಳುಗಳನ್ನು ವ್ಯಕ್ತಿಯ ತಲೆ, ಕತ್ತು, ತೋಳು, ಮುಂಗೈ, ಪಾದ ಮೊದಲಾದ ದೇಹ ಭಾಗಗಳ ಮೇಲಿರಿಸಿದರೆ ಎಲ್ಲ ಕಡೆಯೂ ನಾಡಿಯು ರೂಪದಲ್ಲಿ ಹೃದಯಕ್ರಿಯೆ ವೇದ್ಯವಾಗುತ್ತದೆ ಎಂದು ಪ್ರಾಚೀನ ಕಾಲದಲ್ಲಿ ನಂಬಿದ್ದುದನ್ನು ಆಗಿನ ಬರೆಹಗಳು ದೃಢಪಡಿಸಿವೆ. ಭಾರತದಲ್ಲಿ ನಾಡಿಪರೀಕ್ಷೆ ರೋಗನಿದಾನದಲ್ಲಿ ಬಲು ಮುಖ್ಯ ಪಾತ್ರವಹಿಸಿದ್ದನ್ನು ಪ್ರಾಚೀನ ಆಯುರ್ವೇದ ಗ್ರಂಥಗಳು ಶ್ರುತಪಡಿಸಿವೆ.

ಬೇರೆಬೇರೆ ಸನ್ನಿವೇಶ ಹಾಗೂ ಸ್ಥಿತಿಗಳಲ್ಲಿ ವ್ಯಕ್ತಿಯನ್ನಿರಿಸಿ ಬೆರಳುಗಳಿಂದ ಬೇರೆ ಬೇರೆ ಪ್ರಮಾಣದಲ್ಲಿ ಒತ್ತಡವನ್ನು ಹಾಕಿ ಸ್ಪರ್ಶಿಸಿ 23 ಬೇರೆ ಬೇರೆ ತೆರನಾದ ನಾಡಿಗಳನ್ನು ಪ್ರಾಚೀನ ಕಾಲದಲ್ಲಿ ಚೀನಿಯರು ವಿವರಿಸಿದರು. ಬಲಗೈಯ ಮಧ್ಯದ ಮೂರು ಬೆರಳುಗಳನ್ನು ಅಪಧಮನಿಯ ಮೇಲಿರಿಸಿ ಬೇರೆ ಬೇರೆ ಪ್ರಮಾಣದ ಒತ್ತಡಕ್ಕೆ ಅದನ್ನು ಒಡ್ಡಿ 600 ಬೇರೆ ಬೇರೆ ತೆರನಾದ ನಾಡಿಗಳನ್ನು ಭಾರತೀಯ ವೈದ್ಯರು ವಿವರಿಸಿದ್ದರು. ಗ್ರೀಕರು ನಾಡಿಯನ್ನು ಅಪಧಮನಿಯೊಳಗಿನ ಜೀವಾಳ ದ್ರವ್ಯದ ಸ್ಪಂದನವೆಂದು ಭಾವಿಸಿದ್ದರು. ಹಿಪಾಕ್ರಟೀಸ್ ರೋಗಿಯ ಪರೀಕ್ಷೆಯಲ್ಲಿ ನಾಡಿಯನ್ನು ನಿಯತ ಕ್ರಮವಾಗಿ ಮಾಡಿದ. ಕ್ರಿ.ಶ. ಮೊದಲನೆಯ ಶತಮಾನದ ಆದಿ ಭಾಗದಲ್ಲಿ ನಾಡಿಯ ಬಗ್ಗೆ ರೂಫಸ್ ಬರೆದ ಕೃತಿಯಲ್ಲಿ ಆತ ನೀಡಿದ ವಿವರಣೆ ಇಂದಿಗೂ ನಾವೀನ್ಯಪೂರ್ಣವಾಗಿದೆ. ವೇಗ ಮತ್ತು ನಿಧಾನಗತಿಯ, ಬಲಯುತ ಮತ್ತು ಬಲಹೀನ, ಕುಗ್ಗದ ಮತ್ತು ಮೃದುವಾದ, ಬಿಟ್ಟುಬಿಟ್ಟು ಬರುವ, ಸ್ಪಂದನದ ಮತ್ತು ಅಲೆಯಾಕಾರದ ನಾಡಿಗಳನ್ನು ಆತ ವಿವರಿಸಿ ಗುಂಡಿಗೆ ಬಡಿತವೂ ನಾಡಿ ಬಡಿತವೂ ಏಕಕಾಲದಲ್ಲಿ ಜರುಗುವವು ಎಂಬುದನ್ನು ದೃಢೀಕರಿಸಿದ. ಗೇಲನ್ ಮುಂಗೈಯನ್ನು ಮುಟ್ಟಿ ನಾಡಿಯನ್ನು ಪರೀಕ್ಷಿಸುವುದು ಬಲು ಯೋಗ್ಯ ವಿಧಾನವೆಂದು ಸೂಚಿಸಿದ. ಅಂದಿನಿಂದ ರೇಡಿಯಲ್ ಅಪಧಮನಿಯನ್ನು (ಮುಂದೋಳ ಅಪಧಮನಿ) ಸ್ಪರ್ಶಿಸಿ ಪರೀಕ್ಷಿಸುವುದು ರೋಗನಿದಾನ ಕ್ರಮದಲ್ಲಿ ಬಲುಮುಖ್ಯವೂ ಅವಶ್ಯವೂ ಆದ ಭಾಗವಾಗಿದೆ.

ಉಪಯೋಗಗಳು

[ಬದಲಾಯಿಸಿ]

ನಾಡಿ ಪರೀಕ್ಷೆ ಅಪಧಮನಿ ಭಿತ್ತಿಯ ಸ್ಥಿತಿಯನ್ನು ಅರಿಯಲು, ಗುಂಡಿಗೆಯ ಸಂಕೋಚನ ವ್ಯಾಕೋಚನಗಳಿಂದ ಅಪಧಮನಿಗಳಲ್ಲಿ ಉಂಟಾಗುವ ರಕ್ತದ ಒತ್ತಡದ ಸ್ಥಿತಿಯನ್ನು ಅಪರೋಕ್ಷವಾಗಿ ತಿಳಿಯಲು, ಗುಂಡಿಗೆ ಮತ್ತು ರಕ್ತ ಪರಿಚಲನೆಯ ಪ್ರತಿಕ್ರಿಯೆಯನ್ನು ಗ್ರಹಿಸಲು, ಗುಂಡಿಗೆ ತಾಳಗತಿಯ ವ್ಯತ್ಯಾಸವನ್ನು ಗುರುತಿಸಲು ಮತ್ತು ಕೆಲವೊಂದು ಗುಂಡಿಗೆರೋಗಗಳ ಇರುವಿಕೆಯನ್ನು ಪತ್ತೆ ಹಚ್ಚಲು ಸಹಾಯಕವಾಗಿದೆ.

ಗುಂಡಿಗೆಯ ಸಂಕೋಚನದಿಂದ ಹೊರತಳ್ಳಲ್ಪಡುವ ರಕ್ತ ಚಲನೆಯನ್ನು ನಾಡಿ ಪ್ರತಿನಿಧಿಸುವುದಲ್ಲ, ಬದಲು, ಅದು ಅಲೆಯ ಪ್ರತೀಕ. ಹೃದಯದ ಸಂಕೋಚನದಿಂದ ಉದ್ಭವಿಸಿ ಅಪಧಮನಿಯ ಮೂಲಕ ದೇಹಾದ್ಯಂತ ರಕ್ತಪ್ರವಾಹದ ಮುಂದೆ ಚಲಿಸಿ ಹೋಗುತ್ತದೆ. ಅದನ್ನು ಮುಂಗೈಯಲ್ಲಿಯ ಅಪಧಮನಿಯನ್ನು ಸ್ಪರ್ಶಿಸಿ ಅಭ್ಯಸಿಸುವುದು ಸಾಮಾನ್ಯ. ಏಕೆಂದರೆ ಮುಂದೋಳಿನಲ್ಲಿಯ ಅಪಧಮನಿ ತೀರಾ ಮೇಲ್ಮಟ್ಟದಲ್ಲಿದ್ದು ಸ್ಪರ್ಶಕ್ಕೆ ಸುಲಭವಾಗಿ ಸಿಗುತ್ತದೆ. ಸಾಮಾನ್ಯವಾಗಿ ಎರಡೂ ಕಡೆಯ ರೇಡಿಯಲ್ ಅಪಧಮನಿಗಳನ್ನು ಏಕಕಾಲದಲ್ಲಿ ಮುಟ್ಟಿ ನೋಡುವುದರಿಂದ ಅವೆರಡರಲ್ಲಿಯ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ತೋಳು, ಕೊರಳು, ತೊಡೆ, ಹಿಮ್ಮಡಿ, ಕಪೋಲ, ಮತ್ತು ಮೇಲುಪಾದ ಇಲ್ಲಿಯ ಅಪಧಮನಿಗಳಲ್ಲಿಯ ನಾಡಿಯನ್ನು ಸ್ಪರ್ಶಿಸುವುದು ವಾಡಿಕೆ.

ಗುಣಲಕ್ಷಣಗಳು

[ಬದಲಾಯಿಸಿ]

ನಾಡಿಯನ್ನು ಸ್ಪರ್ಶಿಸಿ ಅದರ ಗತಿಯ ವೇಗ, ತಾಳ, ಅಪಧಮನಿ ಭಿತ್ತಿಯ ಸ್ಥಿತಿ, ಅದರ ಹಿಗ್ಗಲಿಕೆ, ಒತ್ತಡ, ತುಯ್ತ, ಮತ್ತು ಆಕೃತಿಯನ್ನು ಅಭ್ಯಸಿಸಬಹುದು. ನಾಡಿಯ ವೇಗ ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಅದೇ ವ್ಯಕ್ತಿಯಲ್ಲಿ ಹೊತ್ತಿನಿಂದ ಹೊತ್ತಿಗೆ ವ್ಯತ್ಯಾಸ ಹೊಂದುತ್ತದೆ. ವಯಸ್ಕರಲ್ಲಿ ಮಿನಿಟಿಗೆ 60ರಿಂದ 80 ಬಾರಿ ನಾಡಿ ಬಡಿತವಿದ್ದು ಸರಾಸರಿಯಲ್ಲಿ ಅದನ್ನು 72 ಎಂದು ಗಣಿಸಲಾಗಿದೆ. ನಾಡಿ ಗತಿ ಮಕ್ಕಳಲ್ಲಿ ಹೆಚ್ಚು ವೇಗಯುತವಾದದ್ದು. ಎದ್ದು ನಿಂತಾಗ, ವ್ಯಾಯಾಮ ಮಾಡಿದಾಗ, ಉದ್ರೇಕ ಸ್ಥಿತಿಗೊಳಗಾದಾಗ, ಜ್ವರ ಬಂದಾಗ, ತೈರಾಯಿಡ್ ಗ್ರಂಥಿಯ ವಿಪುಲ ಸ್ರಾವವಾದಾಗ, ರೋಗ ತಾಗಿದಾಗ ಇತ್ಯಾದಿ ಗುಂಡಿಗೆಯಲ್ಲಿ ನಾಡಿ ಬಡಿತ ವೇಗವಾಗಿರುವುದು. ರೋಗದಿಂದ ಚೇತರಿಸಿಕೊಳ್ಳುವಾಗ, ಕಾಮಾಲೆ ರೋಗಕ್ಕೆ ಒಳಗಾದಾಗ, ಗುಂಡಿಗೆಯ ತಡೆಯಲ್ಲಿ, ತೈರಾಯಿಡ್ ಗ್ರಂಥಿ ಸ್ರಾವ ಕುಗ್ಗಿದಾಗ ನಿಧಾನ ನಾಡಿ ಗೋಚರಿಸುತ್ತದೆ. ನಾಡಿ ಸಾಮಾನ್ಯವಾಗಿ ಗುಂಡಿಗೆ ಬಡಿತದ ವೇಗಗತಿಗೆ ಅನುಗುಣವಾಗಿರುವುದು. ಗುಂಡಿಗೆಯ ಹೆಚ್ಚಳ ಸಂಕೋಚನ (ಎಕ್ಸ್‍ಟ್ರಸಿಸ್ಟೋಲ್) ಮತ್ತು ಗುಂಡಿಗೆರೆಯ ತತ್ತರಿಕೆಯಲ್ಲಿ ನಾಡಿ ಕೊರತೆ ಗೋಚರಿಸಿ ಗುಂಡಿಗೆ ಬಡಿತಕ್ಕಿಂತಲೂ ನಾಡಿಯ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುವುದು. ಕೆಲವರಲ್ಲಿ ಉಸಿರಾಟ ನಾಡಿಯ ಮೇಲೆ ಪ್ರಭಾವ ಬೀರುತ್ತದೆ. ಉಚ್ವಾಸದಲ್ಲಿ ನಾಡಿ ವೇಗಗತಿಯದೂ ನಿಃಶ್ವಾಸದಲ್ಲಿ ಮಂದಗತಿಯದೂ ಆಗುವುದು.

ನಾಡಿಯನ್ನು ಹಗುರವಾಗಿ ಮುಟ್ಟಿ ನೋಡಿದಾಗ ಸಾಮಾನ್ಯವಾಗಿ ಅಪಧಮನಿ ಕೈಗೆ ಸಿಕ್ಕುವುದಿಲ್ಲ. ಅದು ಪೆಡಸಾದಾಗ ಸುಲಭವಾಗಿ ಕೈಗೆ ಸಿಕ್ಕುವುದು. ನಾಡಿಯ ಹಿಗ್ಗಲಿಕೆ ಅಪಧಮನಿಯ ಗಾತ್ರವನ್ನು ಸೂಚಿಸುವುದು. ಮೂರು ಬೆರಳಿನಿಂದ ಒತ್ತಿ ಅಪಧಮನಿ ಮಿಡಿಯದಂತೆ ಮಾಡಲು ಬೇಕಾದ ಒತ್ತಡ ಅಪರೋಕ್ಷವಾಗಿ ವ್ಯಾಕೋಚನ ಒತ್ತಡಕ್ಕೆ ಸರಿ ಹೋಲುವುದು. ಬಡಿತ ಮಧ್ಯದ ಅಪಧಮನಿ ಸ್ಥಿತಿ ಮೃದುವಾಗಿದೆಯೋ, ಬಿರುಸಾಗಿದೆಯೋ ಎಂಬುದು ಅದರ ತುಯ್ತಕ್ಕೆ ಅನುಗುಣವಾಗಿದ್ದು ವ್ಯಾಕೋಚನ ಒತ್ತಡವನ್ನು ಸೂಚ್ಯವಾಗಿ ತೋರಿಸುತ್ತದೆ. ನಾಡಿಯ ಆಕೃತಿ, ಅದರ ಏರಿಕೆ, ಶಿರೋಭಾಗ ಮತ್ತು ಇಳಿಕೆ ಅನೇಕ ಹೃದಯ ರೋಗಗಳ ಇರುವಿಕೆಯನ್ನು ಸೂಚಿಸುತ್ತದೆ. ಅದು ಬೇಗ ಮೇಲಕ್ಕೇರಿ ಕೂಡಲೇ ಕೆಳಕ್ಕಿಳಿಯಬಹುದು. ಸುತ್ತಣ ರಕ್ತ ಪರಿಚಲನೆಯ ಕುಸಿತದಲ್ಲಿ ನಾಡಿ ಎಳೆಯಂತಿದ್ದು ಕಡಿಮೆ ಪಾರ ಮತ್ತು ವೇಗಗತಿಯನ್ನು ಹೊಂದಿರುತ್ತದೆ. ಎಡಗುಂಡಿಗುಣಿಯ ಸೋಲುವಿಕೆಯಲ್ಲಿ ಗಾತ್ರ ದೊಡ್ಡದೂ ಆನಂತರ ಚಿಕ್ಕದೂ ಆದ ನಾಡಿಗಳು ಒಂದರ ಬಳಿಕ ಮತ್ತೊಂದಾಗಿ ಗೋಚರಿಸುತ್ತವೆ. ಗುಂಡಿಗೆ ಚೀಲದಲ್ಲಿ ನೀರು ಸಂಗ್ರಹವಾದಾಗ ವಿರೋಧಾಭಾಸ ನಾಡಿ ತೋರಿಬಂದು ನಾಡಿಯ ಗಾತ್ರ ಉಚ್ವಾಸದಲ್ಲಿ ಕುಗ್ಗಿರುತ್ತದೆ.



ಸಾಮಾನ್ಯ ನಾಡಿ ಮಿಡಿತ

[ಬದಲಾಯಿಸಿ]

ವಿಶ್ರಾಂತಿಯಲ್ಲಿರುವಾಗ ಸಾಮಾನ್ಯ ನಾಡಿ ಮಿಡಿತ, in beats per minute (BPM):[]

ನವಜಾತ ಶಿಶು
(೦–೩ ತಿಂಗಳು)
ಶಿಶುಗಳು
(೩ –೬ ತಿಂಗಳು)
ಶಿಶುಗಳು
(೬ –೧೨ ತಿಂಗಳು)
ಮಕ್ಕಳು
(೧ –೧೦ ವರ್ಷ)
೧೦ ವರ್ಷ ಮೇಲ್ಪಟ್ಟ ಮಕ್ಕಳು
& ವಯಸ್ಕರು,ಹಿರಿಯರೂ ಸೇರಿ
ತರಬೇತು ಹೊಂದಿದ
ಕ್ರಿಡಾಳುಗಳು
100-150 90–120 80-120 70–130 60–100 40–60

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನಾಡಿ&oldid=820390" ಇಂದ ಪಡೆಯಲ್ಪಟ್ಟಿದೆ