ವಿಷಯಕ್ಕೆ ಹೋಗು

ನಾಸದೀಯ ಸೂಕ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೃಷ್ಟಿಯ ಸೂಕ್ತ ಎಂದೂ ಪರಿಚಿತವಿರುವ ನಾಸದೀಯ ಸೂಕ್ತ ಋಗ್ವೇದದ ೧೦ನೇ ಮಂಡಲದ ೧೨೯ನೇ ಸೂಕ್ತ (೧೦:೧೨೯). ಅದು ವಿಶ್ವವಿಜ್ಞಾನ ಮತ್ತು ಬ್ರಹ್ಮಾಂಡದ ಮೂಲಕ್ಕೆ ಸಂಬಂಧಿಸಿದೆ. ಈ ಸೂಕ್ತ ಭಾರತೀಯ ದೇವತಾಶಾಸ್ತ್ರ ಹಾಗು ಪಾಶ್ಚಾತ್ಯ ಭಾಷಾಶಾಸ್ತ್ರದಲ್ಲಿ ವ್ಯಾಖ್ಯಾನಗಳ ಸಾಹಿತ್ಯದ ದೊಡ್ಡ ಮಂಡಲವನ್ನು ಆಕರ್ಷಿಸಿದೆ.

ನಾಸದೀಯ ಸೂಕ್ತ

[ಬದಲಾಯಿಸಿ]
  • ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ ಒಂದುನೂರ ಇಪ್ಪತ್ತೊಂಬತ್ತನೆಯ ಸೂಕ್ತ. ಈ ಸೂಕ್ತ ಪರತತ್ತ್ವಾನ್ವೇಷಣೆಯಲ್ಲಿ ತೊಡಗಿ ತನ್ನ ಚಿಂತನೆಗಳಲ್ಲಿ ನ ಅಸತ್ ಇತ್ಯಾದಿ ನಿಷೇಧ ರೂಪದ ಪ್ರಾರಂಭವುಳ್ಳದ್ದಾಗಿ ನಾಸದೀಯ ಸೂಕ್ತವೆನಿಸಿಕೊಂಡಿದೆ. ಏಕೈಕವಾಗಿರುವ ಪರಾತ್ಪರ ವಸ್ತುವೇ ತತ್ತ್ವವಾಗಿದ್ದಿರಬಹುದೆಂಬ ನಂಬಿಕೆಯನ್ನು ಈ ಸೂಕ್ತ ಕಡೆಯ ಭಾಗಗಳಲ್ಲಿ ವ್ಯಕ್ತಪಡಿಸುತ್ತದೆ. ಪರಮೇಷ್ಠೀ ಎಂಬ ಹೆಸರುಳ್ಳ ಪ್ರಜಾಪತಿಯೇ ಈ ಸೂಕ್ತಕ್ಕೆ ಸಂಬಂಧಪಟ್ಟ ಋಷಿ. ಇದರಲ್ಲಿ ಆಕಾಶಾದಿಗಳ ಮತ್ತು ಸೃಷ್ಟಿ ಪ್ರಳಯ ಮುಂತಾದವುಗಳ ವಿಚಾರವಿರುವುದರಿಂದ ಅವುಗಳ ಕರ್ತೃವಾದ ಪರಮಾತ್ಮನೇ ದೇವತೆಯೆಂದು ಸಾಯಣ ಭಾಷ್ಯದಲ್ಲಿ ವಿವರಣೆ ಇದೆ.
  • ಇದರಲ್ಲಿ ಏಳು ಋಕ್ಕುಗಳಿವೆ. ಮೊದಲನೆಯ ಎರಡು ಋಕ್ಕುಗಳಲ್ಲಿ ಮತ್ತು ಮೂರನೆಯದರ ಪೂರ್ವಾರ್ಧದಲ್ಲಿ ಜಗತ್ತಿನ ಸೃಷ್ಟಿಗೆ ಮುಂಚಿನ ಸ್ಥಿತಿಯ ವರ್ಣನೆ ಇದೆ. ಆಗ ಇಂದ್ರಿಯಗಳಿಗೆ ಗೋಚರವಾಗದ ಅಸತ್ ಮತ್ತು ಗೋಚರವಾಗುವ ಸತ್-ಇವುಗಳಾಗಲಿ, ಲೋಕ ಅಂತರಿಕ್ಷಗಳಾಗಲಿ ಇರಲಿಲ್ಲ. ಮೃತ್ಯು ಅಮರಣಗಳಿರಲಿಲ್ಲ. ರಾತ್ರಿ ಹಗಲುಗಳ ಪರಿಜ್ಞಾನವಿರಲಿಲ್ಲ. ಆ ಏಕೈಕ ವಸ್ತು ಮಾತ್ರ ಶ್ವಾಸೋಚ್ಛ್ವಾಸರಹಿತವಾಗಿ ಸ್ವಸಾಮಥ್ರ್ಯದಿಂದ ಜೀವಂತವಾಗಿದ್ದಿತು.

ಬೇರೆ ಏನೂ ಇರಲಿಲ್ಲ

[ಬದಲಾಯಿಸಿ]
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ
  • ಆ ವಸ್ತುವಲ್ಲದೆ ಆಗ ಬೇರೆ ಏನೂ ಇರಲಿಲ್ಲ. ಯಾವುದನ್ನೂ ತಿಳಿಯಲು ಅಸಾಧ್ಯವಾಗುವಂತೆ ಅಂಧಕಾರಮಯ ಕತ್ತಲೋ ಸರ್ವವ್ಯಾಪಿಯಾದ ಉದಕವೋ ಇದ್ದಿರಬೇಕು-ಇವೇ ಮುಂತಾದವು ವರ್ಣನೆಯ ವಿಷಯಗಳು. ಅಂಥ ಸ್ಥಿತಿಯಲ್ಲಿ ಏಕೈಕವಾಗಿದ್ದ ಒಂದು ಅವ್ಯಕ್ತಸ್ವರೂಪ ತಪೋಮಹಿಮೆಯಿಂದ ಜಗತ್ತಾಗಿ ಪರಿಣಮಿಸಿತೆಂಬುದೂ ಮಾನಸಿಕ ಕ್ರಿಯೆಯನ್ನು ಬೀಜರೂಪವಾಗಿ ಪಟಡದ ಸೃಷ್ಟಿಸಂಕಲ್ಪದ ಉತ್ಪತ್ತಿಯೂ ಅನಂತರ ಬಂದ ಸತ್, ಸೃಷ್ಟಿಗೆ ಮುಂಚಿನ ಅವ್ಯಕ್ತಸ್ವರೂಪದ ಅಸತ್ತಿನೊಡನೆ ಸಂಬಂಧವುಳ್ಳದ್ದೆಂಬುದನ್ನು ಋಷಿಗಳು ಬಲ್ಲರೆಂಬುದೂ ಮೂರನೆಯ ಋಕ್ಕಿನ ಉತ್ತರಾರ್ಧದ ಮತ್ತು ನಾಲ್ಕನೆಯದರ ವಿಷಯಗಳು. ಕೆಳಗೆ, ಮೇಲೆ, ಅಡ್ಡಲಾಗೆ ಎಲ್ಲೆಲ್ಲೂ ಅತಿ ವೇಗದಿಂದ ನಡೆದ ಸೃಷ್ಟಿಕಾರ್ಯ ಪ್ರಾರಂಭ, ಭೋಗ್ಯಗಳು ಮತ್ತು ಅವುಗಳಲ್ಲಿ ಭೋಕ್ತøಗಳು ಶ್ರೇಷ್ಠವೆಂಬ ವಿಚಾರ-ಇವು ಐದನೆಯ ಋಕ್ಕಿನಲ್ಲಿ ಪ್ರತಿಪಾದಿತವಾಗಿವೆ. ಆರನೆಯದರಲ್ಲಿ ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ಅರಿತಿರುವರೆಂಬುದನ್ನು ಕುರಿತ ಸಂಶಯ ವ್ಯಕ್ತಗೊಂಡು ದೇವತೆಗಳು ಸೃಷ್ಟಿಯ ತರುವಾಯ ಬಂದವರಾದ್ದರಿಂದ ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಪುನರುಕ್ತವಾಗಿದೆ. ಸ್ವಪ್ರಕಾಶದಲ್ಲಿ ಬೆಳಗುತ್ತಿರುವ ಪರಮಾತ್ಮನಿಗೆ ಸೃಷ್ಟಿಯ ರಹಸ್ಯ ತಿಳಿದೇ ಇರಬೇಕೆಂಬುದೂ ಏಳನೆಯ ಋಕ್ಕಿನಲ್ಲಿ ಕಂಡು ಬರುವ ಚಿಂತನೆಗಳು.

ಏಕತತ್ತ್ವವಾದ

[ಬದಲಾಯಿಸಿ]

ಅನೇಕ ದೇವತೆಗಳ ಆರಾಧನೆಯಲ್ಲಿ ಆಸಕ್ತಿಯನ್ನು ತೋರಿಸಿದ ಋಗ್ವೇದ ಮತಧರ್ಮ ಕ್ರಮೇಣ ಏಕದೇವತಾವಾದದ ಮೂಲಕ ಏಕತತ್ತಾನ್ವೇಷಣೆಯಲ್ಲಿ ಪರಿಣಮಿಸಿದೆಯೆಂಬುದು ವಿದ್ವಾಂಸರ ಅಭಿಪ್ರಾಯ ಈ ತತ್ತ್ವಾನ್ವೇಷಣೆ ಹತ್ತನೆಯ ಮಂಡಲದ ಕೆಲವು ಸೂಕ್ತಗಳಲ್ಲಿ, ತತ್ರಾಪಿ ನಾಸದೀಯ ಸೂಕ್ತದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಎಲ್ಲ ವಿಶ್ವವೂ ಒಂದೇ ಒಂದು ಮೂಲದಿಂದ ಹೊರಹೊರಟಿವೆಯೆಂದು ಪ್ರತಿಪಾದಿಸುವ ಏಕತತ್ತ್ವವಾದ ಮುಂದೆ ಉಪನಿಷತ್ತುಗಳಲ್ಲಿ ವಿಸ್ತಾರವಾಗಿ ಪ್ರತಿಪಾದಿತವಾಗಿದೆ; ಆದರೆ ವಿಶ್ವಾತೀತವೂ ವ್ಯಕ್ತ್ಯತೀತವೂ ಆದ ಒಂದು ಆಧ್ಯಾತ್ಮಿಕ ತತ್ತ್ವದ ಅನ್ವೇಷಣೆಯ ರೂಪದಲ್ಲಿ ಆ ವಾದದ ಬೇರುಗಳು ಈ ಸೂಕ್ತದಲ್ಲಿ ಕಂಡುಬರುತ್ತವೆ. ಆದ್ದರಿಂದ ಇದು ಭಾರತೀಯ ತತ್ತ್ವ ಚಿಂತನೆಯಲ್ಲಿ ಪುಷ್ಪಪ್ರಾಯ ಎಂದು ಪ್ರಶಂಸೆ ಪಡೆದಿದೆ. ಏಕತತ್ತ್ವವಾದದ ತಿರುಳನ್ನೊಳಗೊಂಡಿರುವ ಈ ಸೂಕ್ತ ವಿಶ್ವಸಾಹಿತ್ಯಕ್ಕೆ ಸೇರಿದೆಯೆಂದು ಹಿರಿಯಣ್ಣನವರು ಅಭಿಪ್ರಾಯ ಪಟ್ಟಿದ್ದಾರೆ. (ಬಿ.ಕೆ.ಎಸ್.)[]

  • ವಿಕಿಯಲ್ಲಿ-ಇಂಗ್ಲಿಷ್ ಅನುವಾದ:Nasadiya Sukta

ನಾಲ್ಕು ಶ್ಲೋಕಗಳು ಮತ್ತು ಅನುವಾದ

[ಬದಲಾಯಿಸಿ]

ವೇದದಲ್ಲಿರುವ ವಿಚಾರದ ಪ್ರಖರತೆಗೆ ಋಗ್ವೇದದಲ್ಲಿ ಬರುವ ‘ನಾಸದೀಯ ಸೂಕ್ತ’ವನ್ನು ನೋಡಬಹುದು. ಈ ಸೃಷ್ಟಿಯ ಮೂಲವೇನು? ಅದು ಹೇಗೆ ಹುಟ್ಟಿತು? – ಎಂಬ ಗಂಭೀರವಾದ ಚಿಂತನೆಯ ಬೆಳಕು ಅಲ್ಲಿ ಸೊಗಸಾಗಿ ಮೂಡಿದೆ:

ನಾಸದಾಸೀನ್ನೋ ಸದಾಸೀತ್ತದಾನೀಂ |
ನಾಸೀದ್ರಜೋ ನೋ ವ್ಯೋಮಾ ಪರೋ ಯತ್‌ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂ |
ಭಃ ಕಿಮಾಸೀದ್ಗಹನಂ ಗಭೀರಮ್‌ ||
  • ‘ಆಗ (ಮೊದಲಲ್ಲಿ) ಅಸತ್ತೂ ಇರಲಿಲ್ಲ, ಸತ್ತೂ ಇರಲಿಲ್ಲ, ಲೋಕವೂ ಇರಲಿಲ್ಲ. ಅದರ ಆಚೆಯ ಆಕಾಶವೂ ಇರಲಿಲ್ಲ. ಅದೇನನ್ನು ಆವರಿಸಿತ್ತು? ಎಲ್ಲಿ? ಯಾರ ಆಶ್ರಯದಲ್ಲಿ? ಅಲ್ಲಿ ಗಹನವೂ ಗಭೀರವೂ ಆದ ನೀರೇನಾದರೂ ಇತ್ತೆ?’
ನ ಮೃತ್ಯುರಾಸೀದಮೃತಂ ನ ತರ್ಹಿ |
ನ ರಾತ್ರ್ಯಾ ಅಹ್ನ ಅಸೀತ್ಪ್ರಕೇತಃ |
ಆನೀದವಾತಂ ಸ್ವಧಯಾ ತದೇಕಂ |
ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ ||
  • ‘ಆಗ ಮೃತ್ಯವಿರಲಿಲ್ಲ, ಅಮೃತತ್ವವೂ ಇರಲಿಲ್ಲ, ರಾತ್ರಿ–ಹಗಲುಗಳಿಗೆ ಭೇದವಿರಲಿಲ್ಲ; ಅದೊಂದು (ಗಾಳಿ ಇಲ್ಲದೆ) ತನ್ನ ಬಲದಿಂದಲೇ ಉಸಿರಾಡುತ್ತಿತ್ತು. ಅದನ್ನು ಬಿಟ್ಟು ಹೊರಗೆ ಬೇರೆ ಏನೂ ಇರಲಿಲ್ಲ.’
ಕೋ ಅದ್ಧಾ ವೇದ ಕ ಇಹ ಪ್ರವೋಚತ್‌ |
ಕುತ ಆಜಾತಾ ಕುತ ಇಯಂ ವಿಸೃಷ್ಟಿಃ |
ಅರ್ವಾಗ್ದೇವಾ ಅಸ್ಯ ವಿಸರ್ಜನೇನಾ |
ಥಾ ಕೋ ವೇದ ಯತ ಆಬಭೂವ ||
  • ‘ಇದನ್ನೆಲ್ಲ ನಿಜವಾಗಿ ತಿಳಿದವರು ಯಾರು? ಯಾವುದರಿಂದ ಇದೆಲ್ಲ ಆಯಿತು? ಈ ಸೃಷ್ಟಿ ಆದುದು ಹೇಗೆ; ಇದನ್ನು ಹೇಳುವವರು ಯಾರು? (ಸೃಷ್ಠಿಯ ವಿಷಯ ಹೇಳುವವರೆಲ್ಲಾ) ಈ ಸೃಷ್ಟಿಯೆಲ್ಲ ಆದನಂತರ ಬಂದವರು ದೇವತೆಗಳು. ಆದ್ದರಿಂದ ಇದು ಹೇಗಾಯಿತು ಎಂದು ತಿಳಿದವರು ಯಾರು?’
ಇಯಂ ವಿಸೃಷ್ಟಿರ್ಯತ ಆಬಭೂವ |
ಯದಿ ವಾ ದಧೇ ಯದಿ ವಾ ನ |
ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್‌ |
ಸೋ ಅಂಗ ವೇದ ಯದಿ ವಾ ನ ವೇದ ||
  • ‘ಈ ಸೃಷ್ಟಿ ಎಲ್ಲಿಂದ ಉದ್ಭವವಾಯಿತು; ಅವನು ಅದನ್ನು ಸ್ಥಾಪಿಸಿದನೋ ಅಥವಾ ಇಲ್ಲವೋ? ಮೇಲಿನಿಂದ ಎಲ್ಲವನ್ನೂ ನೋಡುವ ಅವನಿಗೇ ಅದು ಗೊತ್ತು; ಇಲ್ಲ ಅವನಿಗೂ ತಿಳಿಯದೋ?’

(ಇಲ್ಲಿಯ ವೇದಮಂತ್ರಗಳ ಅನುವಾದ: ಜಿ. ಹನುಮಂತರಾವ್‌- ಮೈಸೂರು ವಿಶ್ವವಿದ್ಯಾಲಯ - ಪ್ರಸಾರಾಂಗ- ಋಗ್ವೇದ) []

ಏಳು ಶ್ಲೋಕಗಳ ಕನ್ನಡ ಅನುವಾದ

[ಬದಲಾಯಿಸಿ]
  • (ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಲ್ಲಿ - ಇಲ್ಲದೇ ಇರುವ ಈ ಭಾಗವನ್ನು ಓದುಗರಿಗಾಗಿ ಸೇರಿಸಿದೆ)
  • ಸತ್ತೆಂಬುದು ಇರಲಿಲ್ಲ, ಅಸತ್ತೂ ಇರಲಿಲ್ಲ; ಲೋಕ, ನೀಲಿ ಆಕಾಶ, ಅವುಗಳಾಚೆ ಎಂಬುದೂ ಇರಲಿಲ್ಲ.

ಅದನ್ನು ಯಾರು ಬಲ್ಲರು? ಯಾವ ಆಶ್ರಯದಲ್ಲಿ ಏನನ್ನು ಆಧರಿಸಿತ್ತು ಎಂದು. ಜಲಧಿಯು ಇತ್ತೆ? ಇಲ್ಲ. ||೧||

  • ಮೃತ್ಯುವು ಸಹ ಇರಲಿಲ್ಲ, ಅಮರತ್ವವಸಹ ಇರಲಿಲ್ಲ, ರಾತ್ರಿಹಗಲುಗಳ ಭೇದವು ಇರಲಿಲ್ಲ;

ರಾತ್ರಿಹಗಲುಗಳು ಇನ್ನೂ ಹುಟ್ಟಿರಲೇ ಇಲ್ಲದಿರಲು ಅವುಹೇಗೆಇರುವುವು? ಆದಿಮೂಲವದೊಂದು ಉಸಿರಾಡುತಿತ್ತು: ||೨||

  • ಗಾಳಿಯೂ ಇಲ್ಲದೆ ಉಸಿರನ್ನು ಹೊರಸೂಸುತ್ತಿತ್ತು. ಅದರ ಹೊರತು ಬೇರೆ ಏನೂ ಇರಲಿಲ್ಲ ಈ ವಿಶ್ವದಲ್ಲಿ,

ಎಲ್ಲವೂ ಕತ್ತಲೆಯ ಕಾಳಗರ್ಭದಲ್ಲಿ ಅಡಗಿತ್ತು. ಎಲ್ಲವೂ ಅವ್ಯಕ್ತ ಕಾಣದ ಸಾಗರವಾಗಿತ್ತು. ||೩||

  • ಅದು ಕಾರಣಶರೀರವು, ಈ ಲೋಕ ಆಗ ಹಾಗಿತ್ತು – ಹುಟ್ಟಿದೆಲ್ಲವೂ ಶೂನ್ಯದಿಂದ ಕವಿದಿತ್ತು.

ಅದರ ತಪ- ಶಾಖ, ಅದರ ಇಚ್ಛೆಯಿಂದ ಮೇಲೆ ಎದ್ದಿತ್ತು ಅದು – ಆ ಕಾಳಗರ್ಭದ ಹೊರಗೆ ಮನಸ್ಸು ಬಂದಿತ್ತು. ||೪||

  • ಮನಸ್ಸು ಈ ಇಚ್ಛೆ ಎಲ್ಲಿಯದು, ಈ ಕಾಮವು- ಬಯಕೆ ಎಲ್ಲಿಯದು? ಅದರ ಎದೆಯಲ್ಲಿ ಆಡಗಿತ್ತು ಮೊಳೆತ ಬೀಜ;

ನಶಿತ- ಕಾಣದ ಲೋಕದ ಬೀಜ, ಅದು ಕಾಲಚಕ್ರದ ಬೀಜ; ಋಷಿಯ ಹೃದಯದಲ್ಲಿ ಹೊಳೆದ ಮೊದಲ ಬೀಜ.||೫||

  • ಏನು ಇತ್ತೇ ಯೋಚನೆ? ಮೊಲ ಶಬ್ದ- ಸದ್ದು, ಮೇಲೆಂಬುದಿಲ್ಲ, ಕೆಳಗೆ ಎಂಬುದಿಲ್ಲ –

ಯಾರು ಬಲ್ಲರು ಲೋಕಕಾರಣವು ಏನು ಎಂದು? ಭೋಕ್ತೃ ಪರವಾಗಿರಲು- ಬೇರೆಇರಲು ಭೋಗ್ಯವೂ ಬೇರೆ-
ಪರವಾಗಿತ್ತು; ಅದೇ ಗರ್ಭಬೀಜವ ಕಟ್ಟಿಸಿತು, ಅದೆ ಗರ್ಭವನ್ನು ತಾಳಿತ್ತು. ||೬||

  • ಅದನ್ನು ತಿಳಿದವರು ಯಾರು? ಏಕೆಂದು, ಹೇಗೆಂದು?

ಅದು ಹುಟ್ಟಿದ ನಂತರದಲ್ಲಿ ಬಂದವರು ದೇವರುಗಳು ಎನ್ನವಾಗ?
ಮೂಲವಾದ ಅದರ ಹೊರತು ಅದರ ಅರಿವು? ಯಾರಿಗೆಇರಬಲ್ಲುದು? ||೭||[][]

ಉಲ್ಲೇಖ

[ಬದಲಾಯಿಸಿ]
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಸದೀಯ ಸೂಕ್ತ
  2. ವೇದ: ಕಾವ್ಯವೂ ಹೌದು, ವಿಚಾರವೂ ಹೌದುವೇದ: ಕಾವ್ಯವೂ ಹೌದು, ವಿಚಾರವೂ ಹೌದು;ಪ್ರಜಾವಾಣಿ ;d: 04 ನವೆಂಬರ್ 2017
  3. ಸೃಷ್ಟಿಗೆ ಮೊದಲು ಅದೂ ಇರಲಿಲ್ಲ… ಇದೂ ಇರಲಿಲ್ಲ : ನಾಸದೀಯ ಸೂಕ್ತದಿಂದ ಒಂದು ಪದ್ಯ;ಜನವರಿ 14, 2020 BY ಅರಳಿ ಮರ ಡಾ.ಎಚ್.ರಾಮಚಂದ್ರ ಸ್ವಾಮಿ ಅವರ ಅನುವಾದದ ಆಧಾರ:
  4. [https://sanskritdocuments.org/doc_veda/naasadiiya.html?lang=sa नासदीय सूक्त (ऋग्वेद )
    nAsadIya sUkta (Rigveda )]