ವಿಷಯಕ್ಕೆ ಹೋಗು

ನರಹರ ವಿಷ್ಣು ಗಾಡಗೀಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gadgil (centre) at a Conference of Building Engineers convened by him in October 1947.

ನರಹರ ವಿಷ್ಣು ಗಾಡಗೀಳ (10 ಜನವರಿ 1896 – 12 ಜನವರಿ 1966)ಸ್ವಾತಂತ್ರ್ಯ ಹೋರಾಟಗಾರರು. ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ಮುಂದಾಳುಗಳಲ್ಲಿ ಒಬ್ಬರು.

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ರಾಜಸ್ತಾನದಲ್ಲಿಯ ಮಲ್ಹಾರ ಗಡದಲ್ಲಿ 1896ರ ಜನವರಿ 10ರಂದು ಜನ್ಮ ತಾಳಿದ ಇವರು ನೀಮಚ್, ಬರೋಡ ಮತ್ತು ಪುಣೆಗಳಲ್ಲಿ ಶಿಕ್ಷಣ ಪಡೆದು 1918ರಲ್ಲಿ ಬಿ.ಎ. ಪದವೀಧರರಾದರು. ಮುಂದಿನ ಎರಡು ವರ್ಷಗಳಲ್ಲಿ ಮುಂಬಯಿಯಲ್ಲಿ ಕಾನೂನು ವ್ಯಾಸಂಗ ಮುಗಿಸಿ ಪುಣೆಯಲ್ಲಿ ನ್ಯಾಯವಾದಿಗಳಾದರು. 1929ರಿಂದ 1932ರ ವರೆಗೆ ಪುಣೆಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಯಾಗಿ, 1931,1936 ಮತ್ತು 1945ರಲ್ಲಿ ಅದರ ಅಧ್ಯಕ್ಷರಾಗಿ ಕೆಲಸ ಮಾಡಿದರು.

ಸ್ವಾತಂತ್ರ್ಯ ಹೋರಾಟ

[ಬದಲಾಯಿಸಿ]

1928ರಿಂದ 1932ರ ವರೆಗೆ ಕಾಂಗ್ರೆಸಿನ ಯುವಕ ಚಳವಳಿಯಲ್ಲಿ ಭಾಗವಹಿಸಿದ್ದರು; ಅಲ್ಲದೆ ನಾಸಿಕ ಮತ್ತು ಖಾರಗಳಲ್ಲಿ ಸೇರಿದ್ದ ಸಮ್ಮೇಳನಗಳ ಅಧ್ಯಕ್ಷರಾಗಿದ್ದರು. 1935ರಲ್ಲಿ ಆಗಿನ ಕೇಂದ್ರ ವಿಧಾನಪರಿಷತ್ತಿಗೆ ಆಯ್ಕೆಯಾಗಿ ಅಲ್ಲಿಯ ಕಾಂಗ್ರೆಸ್ ಪಕ್ಷದ ಸಚೇತಕರಾಗಿ ಮತ್ತು ಕಾರ್ಯದರ್ಶಿಯಾಗಿ ನೇಮಕವಾದರು. 1942ರಲ್ಲಿ ಭಾರತದ ವಿಮೋಚನೆಗಾಗಿ ನಡೆದ ಚಳವಳಿಯಲ್ಲಿ ಭಾಗವಹಿಸಿದ್ದರು. 1947-52ರಲ್ಲಿ ಕೇಂದ್ರ ಮಂತ್ರಿ ಮಂಡಲದಲ್ಲಿ ವಿದ್ಯುತ್ತು, ಗಣಿ ಮತ್ತು ಕಟ್ಟಡಗಳ ಶಾಖೆಯ ಮಂತ್ರಿಯಾಗಿದ್ದರು. 1955ರಲ್ಲಿ ಸಾಂಗಲಿಯಲ್ಲಿ ನಡೆದ ಮಹಾರಾಷ್ಟ್ರ ಗ್ರಂಥಾಲಯ ಪರಿಷತ್ತಿನ ಅಧಿವೇಶನದ ಅಧ್ಯಕ್ಷರಾಗಿದ್ದರು. 1958-62ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದ ಅಧ್ಯಕ್ಷರಾಗಿಯೂ ಪಂಜಾಬಿನ ರಾಜ್ಯಪಾಲರಾಗಿಯೂ ಇದ್ದರು. ಕ್ರಿಯಾಶೀಲ ರಾಜಕೀಯದಲ್ಲಿ ಭಾಗವಹಿಸುತ್ತಿದ್ದ ಗಾಡಗೀಳರು ಲೇಖಕರೂ ಆಗಿದ್ದರು. 1962ರಲ್ಲಿ ಸಾತಾರದಲ್ಲಿ ಜರುಗಿದ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರು 1963ರಿಂದ ಮೂರು ವರ್ಷಗಳ ಕಾಲ ಪುಣೆ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೆಲಸ ಮಾಡಿದರು.

ರಾಜಕೀಯ ಜೀವನ

[ಬದಲಾಯಿಸಿ]

ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಸಮಾಜ ಕಾಂಗ್ರೆಸ್ಸಿನಿಂದ ದೂರವಾಗಿರುತ್ತಿದ್ದ ಕಾಲವೊಂದಿತ್ತು. ಆ ಸಂದರ್ಭದಲ್ಲಿ ಬ್ರಾಹ್ಮಣೇತರ ಮುಂದಾಳುಗಳಾಗಿದ್ದ ಕೇಶವರಾವ್ ಜೇಧೆ ಎಂಬವರ ಸಹಾಯ ಸಹಕಾರಗಳಿಂದ, ಜನಸಂಖ್ಯೆಯ ದೃಷ್ಟಿಯಿಂದ ಬಹುಸಂಖ್ಯಾತವಾದ ಆ ಪಕ್ಷ ಕಾಂಗ್ರೆಸ್ಸಿನೊಳಗೆ ಬರುವಂತೆ ಮಾಡಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸನ್ನು ದೃಢಪಡಿಸಲು ಕಾರಣರಾದರು. 1932ರಿಂದ ಹದಿಮೂರು ವರ್ಷಕಾಲ ಮಹಾರಾಷ್ಟ್ರದ ರಾಜಕೀಯ ಕ್ಷೇತ್ರದಲ್ಲಿ ಇವರ ಪ್ರಭಾವ ವಿಶೇಷವಾಗಿತ್ತು. ವಿಚಾರ ಮತ್ತು ಕಾರ್ಯಧೋರಣೆಗಳಲ್ಲಿ ಗಾಢಗೀಳರು ವಲ್ಲಭ ಭಾಯಿ ಪಟೇಲರಿಗೆ ಹತ್ತಿರದವರಾಗಿದ್ದರು. ಪಟೇಲರ ನಿಧನದ ಅನಂತರದಲ್ಲಿ ಜವಾಹರಲಾಲ್ ನೆಹರು ಅವರಿಂದ ಇವರು ದೂರದೂರ ಸರಿಯುವಂತಾಯಿತು. ಪಕ್ಷದ ಪ್ರತಿಷ್ಠೆಯನ್ನು ಕಾಪಾಡಬೇಕಾದಾಗ ಅಂತಸ್ಸಾಕ್ಷಿಯ ವಿಚಾರ ಧೋರಣೆಗೆ ಅವಕಾಶವಿರಕೂಡದು ಎಂದು ಇವರು ಪ್ರಚಾರ ಮಾಡಿದರು. ಹಿಂದಿ, ಗುಜರಾತಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಮರ್ಥವಾಗಿ ಬರೆಯಬಲ್ಲವರಾಗಿದ್ದ ಇವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಹಿಂದಿ ಅಂದಾಜು ಪತ್ರಿಕೆ, ಗ್ಯಾನಬಾಚೆ ಅರ್ಥಶಾಸ್ತ್ರ, ಸಭಾಶಾಸ್ತ್ರ, ರಾಜ್ಯಶಾಸ್ತ್ರ ವಿಚಾರ, ರಾಜ್ಯವ್ಯವಹಾರ ವಿಚಾರ, ಘಟಾನಾಪ್ರಬೋಧಿನೀ, ಸಾಲಗುದಸ್ತ, ಅನಗಡ ಮೋತಿ, ಎಂಬ ಗ್ರಂಥಗಳನ್ನೂ ಮಾಝೆ ಸಮಕಾಲೀನ, ಮುಠಾತೇ ಮೇನ್, ಪಥಿಕ ಹೀಗೆ ಮೂರು ಸಂಪುಟಗಳಲ್ಲಿ ಆತ್ಮಚರಿತ್ರೆಯನ್ನೂ ಇವರು ಬರೆದಿದ್ದಾರೆ.

ರಾಜಕೀಯ, ಸಾಹಿತ್ಯ ಮತ್ತು ವಿದ್ಯಾಕ್ಷೇತ್ರಗಳಲ್ಲಿ ಸ್ಮರಣೀಯವಾದ ಕೆಲಸ ಮಾಡಿದ ಇವರು 1966ರ ಜನವರಿ 12ರಂದು ನಿಧನರಾದರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: