ದ ಶಾಶ್ಯಾಂಕ್ ರಿಡೆಂಪ್ಶನ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದ ಶಾಶ್ಯಾಂಕ್ ರಿಡೆಂಪ್ಶನ್
A man stands with his back to the viewer and his arms outstretched, looking up to the sky in the rain. A tagline reads "Fear can hold you prisoner. Hope can set you free."
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
ನಿರ್ದೇಶನಫ಼್ರ್ಯಾಂಕ್ ಡೆರಬಾಂಟ್
ನಿರ್ಮಾಪಕನಿಕಿ ಮಾರ್ವಿನ್
ಚಿತ್ರಕಥೆಫ಼್ರ್ಯಾಂಕ್ ಡೆರಬಾಂಟ್
ಆಧಾರಸ್ಟೀಫ಼ನ್ ಕಿಂಗ್‍ರ ರೀಟಾ ಹೇವರ್ತ್ ಅಂಡ್ ಶಾಶ್ಯಾಂಕ್ ರಿಡೆಂಪ್ಶನ್
ಪಾತ್ರವರ್ಗ
  • ಟಿಮ್ ರಾಬಿನ್ಸ್
  • ಮೋರ್ಗನ್ ಫ಼್ರೀಮನ್
  • ಬಾಬ್ ಗಂಟನ್
  • ವಿಲಿಯಂ ಸ್ಯಾಡ್ಲರ್
  • ಕ್ಲ್ಯಾನ್ಸಿ ಬ್ರೌನ್
  • ಗಿಲ್ ಬೆಲೋಸ್
  • ಜೇಮ್ಸ್ ವಿಟ್ಮೋರ್
ಸಂಗೀತಥಾಮಸ್ ನ್ಯೂಮನ್
ಛಾಯಾಗ್ರಹಣರೋಜರ್ ಡೀಕಿನ್ಸ್
ಸಂಕಲನರಿಚರ್ಡ್ ಫ಼್ರಾನ್ಸಿಸ್-ಬ್ರೂಸ್
ಸ್ಟುಡಿಯೋಕಾಸಲ್ ರಾಕ್ ಎಂಟರ್ಟೇನ್‍ಮಂಟ್
ವಿತರಕರುಕೊಲಂಬಿಯಾ ಪಿಕ್ಚರ್ಸ್
ಬಿಡುಗಡೆಯಾಗಿದ್ದು
  • ಸೆಪ್ಟೆಂಬರ್ 10, 1994 (1994-09-10) (1994ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ)
  • ಸೆಪ್ಟೆಂಬರ್ 23, 1994 (1994-09-23) (ಅಮೇರಿಕ)
ಅವಧಿ142 ನಿಮಿಷಗಳು[೧]
ದೇಶಅಮೇರಿಕ ಸಂಯುಕ್ತ ಸಂಸ್ಥಾನ
ಭಾಷೆಇಂಗ್ಲಿಷ್
ಬಂಡವಾಳ$25 ಮಿಲಿಯನ್[೨]
ಬಾಕ್ಸ್ ಆಫೀಸ್$58.3 ಮಿಲಿಯನ್[೩]

ದ ಶಾಶ್ಯಾಂಕ್ ರಿಡೆಂಪ್ಶನ್ 1994ರ ಅಮೆರಿಕನ್ ನಾಟಕೀಯ ಚಲನಚಿತ್ರ. ಇದನ್ನು ಫ಼್ರ್ಯಾಂಕ್ ಡೆರಬಾಂಟ್ ಬರೆದು ನಿರ್ದೇಶಿಸಿದರು. ಈ ಚಿತ್ರವು ಸ್ಟೀಫನ್ ಕಿಂಗ್‍ರ ಕಿರು ಕಾದಂಬರಿ 'ರೀಟಾ ಹೇವರ್ಥ್ ಅಂಡ್ ಶಾಶ್ಯಾಂಕ್ ರಿಡೆಂಪ್ಶನ್' ಮೇಲೆ ಆಧಾರಿತವಾಗಿದೆ. ಇದು ತಾನು ಮುಗ್ಧನೆಂದು ಸಾಧಿಸಿದರೂ, ತನ್ನ ಹೆಂಡತಿ ಮತ್ತು ಅವಳ ಪ್ರೇಮಿಯ ಕೊಲೆಗಳಿಗಾಗಿ ಶಾಶ್ಯಾಂಕ್ ರಾಜ್ಯ ಸೆರೆಮನೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗುವ ಬ್ಯಾಂಕರ್‌ ಆ್ಯಂಡಿ ಡುಫ಼್ರೇನ್‍ನ (ಟಿಮ್ ರಾಬಿನ್ಸ್) ಕಥೆಯನ್ನು ಹೇಳುತ್ತದೆ. ಮುಂದಿನ ಎರಡು ದಶಕಗಳಲ್ಲಿ, ಅವನು ಅಕ್ರಮ ಕಳ್ಳಸಾಗಣೆದಾರ ಎಲಿಸ್ "ರೆಡ್" ರೆಡಿಂಗ್ (ಮೊರ್ಗನ್ ಫ಼್ರೀಮನ್) ಎಂಬ ಸಹ ಕೈದಿಯ ಸ್ನೇಹಬೆಳೆಸಿ, ಜೈಲಿನ ಮೇಲ್ವಿಚಾರಕ ಸ್ಯಾಮುಯಲ್ ನಾರ್ಟನ್‍ನ (ಬಾಬ್ ಗಂಟನ್) ನೇತೃತ್ವದಲ್ಲಿ ಒಂದು ಹಣ ಖಾತಾಂತರ ಕಾರ್ಯದಲ್ಲಿ ಸಾಧನಭೂತನಾಗುತ್ತಾನೆ. ವಿಲಿಯಂ ಸ್ಯಾಡ್ಲರ್, ಕ್ಲ್ಯಾನ್ಸಿ ಬ್ರೌನ್, ಗಿಲ್ ಬೆಲೋಸ್ ಮತ್ತು ಜೇಮ್ಸ್ ವಿಟ್ಮೋರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಡೆರಬಾಂಟ್ ಕಿಂಗ್‌ರ ಕಥೆಗೆ ಚಲನಚಿತ್ರದ ಹಕ್ಕುಗಳನ್ನು ೧೯೮೭ರಲ್ಲಿ ಖರೀದಿಸಿದರು, ಆದರೆ ಐದು ವರ್ಷಗಳವರೆಗೆ ಯಾವುದೇ ಬೆಳವಣಿಗೆಯಾಗಲಿಲ್ಲ. ಆಗ ಅವರು ಅದರ ಚಿತ್ರಕಥೆಯನ್ನು ಎಂಟು ವಾರಗಳ ಅವಧಿಯಲ್ಲಿ ಬರೆದರು. ಚಿತ್ರವನ್ನು ನಿರ್ಮಿಸಲು ಕ್ಯಾಸಲ್ ರಾಕ್ ಎಂಟರ್ಟೇನ್‍ಮಂಟ್‍ನಿಂದ ಡೆರಬಾಂಟ್ $25 ಮಿಲಿಯನ್ ಬಂಡವಾಳವನ್ನು ಪಡೆದುಕೊಂಡರು. ಚಲನಚಿತ್ರವು ಮೇಯ್ನನ್ನು ಹಿನ್ನೆಲೆಯಾಗಿ ಹೊಂದಿದೆಯಾದರೂ, ಪ್ರಧಾನ ಛಾಯಾಗ್ರಹಣವು ಬಹುತೇಕ ಸಂಪೂರ್ಣವಾಗಿ ಮ್ಯಾನ್ಸ್‌ಫ಼ೀಲ್ಡ್, ಒಹಾಯೊದಲ್ಲಿ ಜೂನ್ ನಿಂದ ಆಗಸ್ಟ್ ೧೯೯೩ ವರೆಗೆ ನಡೆಯಿತು. ಒಹಾಯೊ ರಾಜ್ಯ ಸುಧಾರಕಗೃಹವು ನಾಮಸೂಚಕ ಸೆರೆಮನೆಯಾಗಿ ಕಾರ್ಯನಿರ್ವಹಿಸಿತು. ಈ ಯೋಜನೆಯು ಆ್ಯಂಡಿಯ ಪಾತ್ರಕ್ಕೆ ಟಾಮ್ ಹ್ಯಾಂಕ್ಸ್, ಟಾಮ್‌ ಕ್ರೂಸ್‌ ಮತ್ತು ಕೆವಿನ್ ಕಾಸ್ಟ್‌ನರ್ ಸೇರಿದಂತೆ ಆ ಕಾಲದ ಅನೇಕ ತಾರೆಗಳನ್ನು ಆಕರ್ಷಿಸಿತು. ಥಾಮಸ್ ನ್ಯೂಮನ ಚಿತ್ರಕ್ಕೆ ಸಂಗೀತವನ್ನು ನೀಡಿದರು.

ಬಿಡುಗಡೆಯಾದ ಮೇಲೆ ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು, ವಿಶೇಷವಾಗಿ ತನ್ನ ಕಥೆ ಮತ್ತು ರಾಬಿನ್ಸ್ ಹಾಗೂ ಫ಼್ರೀಮನ್‍ರ ನಟನೆಗಾಗಿ ಪಡೆಯಿತಾದರೂ, ಇದು ಬಾಕ್ಸ್ ಆಫ಼ಿಸ್‍ನಲ್ಲಿ ನಿರಾಶಾದಾಯಕವಾಗಿತ್ತು ಮತ್ತು ತನ್ನ ಆರಂಭಿಕ ಚಿತ್ರಮಂದಿರ ಪ್ರದರ್ಶನಗಳಲ್ಲಿ ಕೇವಲ $16 ಮಿಲಿಯನ್ ಗಳಿಸಿತು. ಪಲ್ಪ್ ಫ಼ಿಕ್ಷನ್ ಹಾಗೂ ಫಾರೆಸ್ಟ್ ಗಂಪ್ನಂತಹ ಚಲನಚಿತ್ರಗಳಿಂದ ಪೈಪೋಟಿ, ಸೆರೆಮನೆ ಚಲನಚಿತ್ರಗಳ ಸಾಮಾನ್ಯ ಜನಪ್ರಿಯವಿಲ್ಲದಿರುವಿಕೆ, ಹೆಣ್ಣು ಪಾತ್ರಗಳ ಕೊರತೆ ಮತ್ತು ಪ್ರೇಕ್ಷಕರಿಗೆ ಗೊಂದಲಗೊಳಿಸುವಂಥದ್ದೆಂದು ಪರಿಗಣಿತವಾದ ಇದರ ಶೀರ್ಷಿಕೆ ಸೇರಿದಂತೆ, ಆ ಕಾಲದಲ್ಲಿ ಇದರ ವೈಫಲ್ಯಕ್ಕೆ ಅನೇಕ ಕಾರಣಗಳನ್ನು ನೀಡಲಾಗಿತ್ತು. ಆದರೂ ಸಹ, ಇದು ಏಳು ಅಕ್ಯಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳು ಸೇರಿದಂತೆ, ಅನೇಕ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆಯಿತು. ಚಿತ್ರಮಂದಿರಗಳಲ್ಲಿ ಮರುಬಿಡುಗಡೆ, ಜೊತೆಗೆ ಅಂತರರಾಷ್ಟ್ರೀಯ ಆದಾಯದಿಂದ ಚಿತ್ರದ ಬಾಕ್ಸ್ ಆಫ಼ಿಸ್ ಮೊತ್ತ $58.3 ಕ್ಕೆ ಹೆಚ್ಚಿತು.

ಅಮೇರಿಕದಾದ್ಯಂತ ೩೨೦,೦೦೦ ಕ್ಕಿಂತ ಹೆಚ್ಚು ವಿಎಚ್ಎಸ್ ಪ್ರತಿಗಳನ್ನು ಮಾರಾಟ ಮಾಡಲಾಯಿತು, ಮತ್ತು ಅದರ ಪ್ರಶಸ್ತಿ ನಾಮನಿರ್ದೇಶನಗಳು ಮತ್ತು ಸುದ್ದಿ ಹರಡುವಿಕೆಯನ್ನು ಆಧರಿಸಿ, ಇದು ೧೯೯೫ರ ಅತ್ಯಂತ ಹೆಚ್ಚು ಬಾಡಿಗೆ ಪಡೆದು ನೋಡಲಾದ ಚಿತ್ರಗಳಲ್ಲಿ ಒಂದಾಯಿತು. ಪ್ರಸಾರ ಹಕ್ಕುಗಳನ್ನು ಟರ್ನರ್ ಬ್ರಾಡ್‍ಕಾಸ್ಟಿಂಗ್ ಸಿಸ್ಟಂ ಪಡೆಯಿತು, ಮತ್ತು ಚಿತ್ರವನ್ನು ೧೯೯೭ರಿಂದ ಆರಂಭಿಸಿ ಟಿಎನ್‍ಟಿ ನೆಟ್ವರ್ಕ್‌ನಲ್ಲಿ ನಿಯಮಿತವಾಗಿ ತೋರಿಸಲಾಯಿತು, ಇದು ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಈಗ ಅನೇಕರು ಈ ಚಿತ್ರವನ್ನು ೧೯೯೦ರ ದಶಕದ ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ೨೦೧೭ರ ವೇಳೆಗೆ, ಈ ಚಿತ್ರವನ್ನು ಈಗಲೂ ನಿಯಮಿತವಾಗಿ ಪ್ರಸಾರ ಮಾಡಲಾಗುತ್ತದೆ, ಮತ್ತು ಹಲವಾರು ದೇಶಗಳಲ್ಲಿ ಜನಪ್ರಿಯವಾಗಿದೆ, ಮತ್ತು ಪ್ರೇಕ್ಷಕರು ಹಾಗೂ ಪ್ರಖ್ಯಾತ ವ್ಯಕ್ತಿಗಳು ಇದನ್ನು ಸ್ಫೂರ್ತಿಯ ಮೂಲವೆಂದು ಉಲ್ಲೇಖಿಸುತ್ತಾರೆ ಮತ್ತು ವಿವಿಧ ಸಮೀಕ್ಷೆಗಳಲ್ಲಿ ಈ ಚಿತ್ರವನ್ನು ಅಚ್ಚುಮೆಚ್ಚಿನದು ಎಂದು ಹೆಸರಿಸುತ್ತಾರೆ. ೨೦೧೫ರಲ್ಲಿ, ಅಮೇರಿಕ ಕಾಂಗ್ರೆಸ್ ಗ್ರಂಥಾಲಯವು ರಾಷ್ಟ್ರೀಯ ಚಲನಚಿತ್ರ ದಾಖಲೆ ಕಚೇರಿಯಲ್ಲಿ ಸಂರಕ್ಷಣೆಗಾಗಿ ಈ ಚಿತ್ರವನ್ನು ಆಯ್ಕೆಮಾಡಿತು.

ಕಥಾವಸ್ತು[ಬದಲಾಯಿಸಿ]

೧೯೪೭, ಪೋರ್ಟ್‌ಲಂಡ್, ಮೇಯ್ನ್‌ನಲ್ಲಿ, ಬ್ಯಾಂಕರ್ ಆ್ಯಂಡಿ ತನ್ನ ಹೆಂಡತಿ ಮತ್ತು ಅವಳ ಪ್ರೇಮಿಯ ಕೊಲೆಗಳನ್ನು ಮಾಡಿದ್ದಾನೆಂದು ತೀರ್ಮಾನವಾಗಿ, ಶಾಶ್ಯಾಂಕ್ ರಾಜ್ಯ ಸೆರೆಮನೆಯಲ್ಲಿ ಎರಡು ಕ್ರಮಾನುಗತ ಜೀವಾವಧಿ ಶಿಕ್ಷೆಗಳಿಗೆ ಒಳಗಾಗುತ್ತಾನೆ. ಅಲ್ಲಿ ಅವನು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಹ ಖೈದಿ ಮತ್ತು ಸೆರೆಮನೆಯಲ್ಲಿ ಕಳ್ಳ ಸಾಮಾನುಗಳ ಸಾಗಣೆದಾರನಾದ ಎಲಿಸ್ "ರೆಡ್" ರೆಡಿಂಗ್‍ನ ಸ್ನೇಹ ಬೆಳೆಸುತ್ತಾನೆ. ಆ್ಯಂಡಿಗಾಗಿ ರೆಡ್ ಒಂದು ಕಲ್ಲು ಸುತ್ತಿಗೆ ಮತ್ತು ರೀಟಾ ಹೇವರ್ತ್‌ಳ ಒಂದು ದೊಡ್ಡ ಭಿತ್ತಿಚಿತ್ರವನ್ನು ಒದಗಿಸಿ ಕೊಡುತ್ತಾನೆ. ಸೆರೆಮನೆಯ ದೋಬಿಖಾನೆಯಲ್ಲಿ ಕೆಲಸಕ್ಕೆ ನಿಗದಿಮಾಡಲಾದ ಆ್ಯಂಡಿಯ ಮೇಲೆ "ದ ಸಿಸ್ಟರ್ಸ್" ಮತ್ತು ಅವರ ನಾಯಕ ಬಾಗ್ಸ್ ಆಗಾಗ್ಗೆ ಲೈಂಗಿಕ ದಾಳಿ ನಡೆಸುತ್ತಾರೆ.

೧೯೪೯ರಲ್ಲಿ, ಕಾವಲು ಪಡೆಗಳ ನಾಯಕ ಬೈರನ್ ಹ್ಯಾಡ್ಲಿ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ಕೊಡುವುದರ ಬಗ್ಗೆ ದೂರುತ್ತಿರುವುದನ್ನು ಆ್ಯಂಡಿ ಕದ್ದುಕೇಳಿ, ಅವನಿಗೆ ಕಾನೂನುಬದ್ಧವಾಗಿ ಹಣವನ್ನು ರಕ್ಷಿಸಲು ನೆರವಾಗುವುದಾಗಿ ಪ್ರಸ್ತಾಪಿಸುತ್ತಾನೆ. ದ ಸಿಸ್ಟರ್ಸ್‌ರ ಒಂದು ದಾಳಿ, ಆ್ಯಂಡಿಯನ್ನು ಬಹುತೇಕವಾಗಿ ಸಾಯಿಸಿದ ನಂತರ, ಹ್ಯಾಡ್ಲಿ ಬಾಗ್ಸ್‌ಗೆ ಹೊಡೆದು ಅವನನ್ನು ಅಂಗವಿಕಲನಾಗಿ ಮಾಡುತ್ತಾನೆ. ತರುವಾಯ, ಅವನನ್ನು ಮತ್ತೊಂದು ಸೆರೆಮನೆಗೆ ವರ್ಗಾಯಿಸಲಾಗುತ್ತದೆ. ಆ್ಯಂಡಿಯ ಮೇಲೆ ಮತ್ತೆ ದಾಳಿ ನಡೆಯುವುದಿಲ್ಲ. ಸೆರೆಮನೆಯ ಮೇಲ್ವಿಚಾರಕ ಸ್ಯಾಮುಯಲ್ ನಾರ್ಟನ್ ಆ್ಯಂಡಿಯನ್ನು ಭೇಟಿಯಾಗಿ ವಯಸ್ಸಾದ ಕೈದಿ ಬ್ರೂಕ್ಸ್ ಹ್ಯಾಟ್ಲೆನ್‍ಗೆ ನೆರವಾಗಲು ಅವನನ್ನು ಸೆರೆಮನೆಯ ಗ್ರಂಥಾಲಯದ ಕೆಲಸಕ್ಕೆ ನಿಗದಿಮಾಡುತ್ತಾನೆ. ಆ್ಯಂಡಿ ಇತರ ಸೆರೆಮನೆ ಸಿಬ್ಬಂದಿ, ಇತರ ಸೆರೆಮನೆಗಳ ಕಾವಲು ಪಡೆಗಳು, ಮತ್ತು ಸ್ವತಃ ಸೆರೆಮನೆಯ ಮೇಲ್ವಿಚಾರಕನಿಗಾಗಿ ಹಣಕಾಸಿನ ವಿಷಯಗಳನ್ನು ನಿರ್ವಹಿಸಲು ಶುರುಮಾಡುತ್ತಾನೆ. ಸೆರೆಮನೆಯ ನಶಿಸುತ್ತಿರುವ ಗ್ರಂಥಾಲಯವನ್ನು ಸುಧಾರಿಸುವ ಸಲುವಾಗಿ ಹಣವನ್ನು ವಿನಂತಿಸಿ ರಾಜ್ಯ ಶಾಸನಸಭೆಗೆ ಸಾಪ್ತಾಹಿಕ ಪತ್ರಗಳನ್ನು ಬರೆಯಲೂ ಶುರುಮಾಡುತ್ತಾನೆ.

೫೦ ವರ್ಷ ಶಿಕ್ಷೆಗೊಳಗಾದ ನಂತರ ಬ್ರೂಕ್ಸ್‌ನನ್ನು ೧೯೫೪ರಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಅವನು ಹೊರಜಗತ್ತಿಗೆ ಹೊಂದಿಕೊಳ್ಳಲಾಗದೆ ಅಂತಿಮವಾಗಿ ನೇಗು ಬಿಗಿದುಕೊಂಡು ಸಾಯುತ್ತಾನೆ. ಶಾಸನಸಭೆಯು ದ ಮ್ಯಾರೇಜ್ ಆಫ಼್ ಫ಼ಿಗರೊ ಧ್ವನಿಮುದ್ರಿಕೆ ಸೇರಿದಂತೆ ಗ್ರಂಥಾಲಯ ಕೊಡುಗೆಯನ್ನು ಕಳಿಸುತ್ತದೆ; ಆ್ಯಂಡಿ ಸಾರ್ವಜನಿಕ ಸಂಬೋಧನಾ ಸಾಧನದ ಮೇಲೆ ಒಂದು ಆಯ್ದ ತುಣುಕನ್ನು ಪ್ರಸಾರಮಾಡುತ್ತಾನೆ ಮತ್ತು ಅದಕ್ಕಾಗಿ ಏಕಾಂತ ಕಾರಾವಾಸವನ್ನು ಅನುಭವಿಸುತ್ತಾನೆ. ಏಕಾಂತ ಶಿಕ್ಷೆಯ ನಂತರ ಬಿಡುಗಡೆಯಾದ ಮೇಲೆ, ಭರವಸೆಯು ಅವನಿಗೆ ಕಾಲ ಕಳೆಯಲು ನೆರವಾಗುತ್ತದೆ ಎಂದು ಆ್ಯಂಡಿ ವಿವರಿಸುತ್ತಾನೆ, ಆದರೆ ಈ ಪರಿಕಲ್ಪನೆಯನ್ನು ರೆಡ್ ತಳ್ಳಿಹಾಕುತ್ತಾನೆ. ೧೯೬೩ರಲ್ಲಿ, ನಾರ್ಟನ್ ಸಾರ್ವಜನಿಕ ಕಾಮಗಾರಿಗಾಗಿ ಸೆರೆಮನೆಯ ಕೈದಿಗಳನ್ನು ಬಳಸಿಕೊಳ್ಳಲು ಆರಂಭಿಸುತ್ತಾನೆ, ಮತ್ತು ನುರಿತ ಕಾರ್ಮಿಕ ವೆಚ್ಚಗಳನ್ನು ಕಡಿಮೆ ಹೇಳಿ, ಲಂಚ ಪಡೆದು ಲಾಭ ಮಾಡಿಕೊಳ್ಳುತ್ತಾನೆ. ಆ್ಯಂಡಿ "ರ‍್ಯಾಂಡಲ್ ಸ್ಟೀವನ್ಸ್" ಎಂಬ ಅಡ್ಡಹೆಸರನ್ನು ಬಳಸಿ ಹಣದ ಮೂಲವನ್ನು ಮರೆಮಾಡುತ್ತಾನೆ.

ಕನ್ನಗಳವಿಗಾಗಿ ೧೯೬೫ರಲ್ಲಿ ಟಾಮಿ ವಿಲಿಯಮ್ಸ್ ಸೆರೆವಾಸಕ್ಕೆ ಬರುತ್ತಾನೆ. ಆ್ಯಂಡಿ ಮತ್ತು ರೆಡ್ ಅವನ ಸ್ನೇಹ ಗಳಿಸುತ್ತಾರೆ, ಮತ್ತು ಅವನು ತನ್ನ ಜಿಇಡಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಆ್ಯಂಡಿ ಸಹಾಯ ಮಾಡುತ್ತಾನೆ. ಒಂದು ವರ್ಷದ ನಂತರ, ಯಾವ ಕೊಲೆಗಳಿಗಾಗಿ ಆ್ಯಂಡಿಗೆ ಶಿಕ್ಷೆಯಾಯಿತೊ ಆ ಕೊಲೆಗಳಿಗೆ ಮತ್ತೊಂದು ಸೆರೆಮನೆಯಲ್ಲಿನ ಖೈದಿಯು ಹೊಣೆ ಹೊತ್ತಿಕೊಂಡನು ಎಂದು ಟಾಮಿ ರೆಡ್ ಹಾಗೂ ಆ್ಯಂಡಿಗೆ ಬಹಿರಂಗಪಡಿಸಿದನು. ಈ ಮಾಹಿತಿಯೊಂದಿಗೆ ಆ್ಯಂಡಿ ನಾರ್ಟನ್ ಜೊತೆ ಮಾತನಾಡುತ್ತಾನೆ, ಆದರೆ ನಾರ್ಟನ್ ಕೇಳಲು ನಿರಾಕರಿಸುತ್ತಾನೆ, ಮತ್ತು ಆ್ಯಂಡಿ ಹಣ ಖಾತಾಂತರಿಸುವಿಕೆ ಬಗ್ಗೆ ಹೇಳಿದಾಗ, ನಾರ್ಟನ್ ಅವನನ್ನು ಮತ್ತೊಮ್ಮೆ ಏಕಾಂತ ಸೆರೆವಾಸಕ್ಕೆ ಕಳಿಸುತ್ತಾನೆ. ನಾರ್ಟನ್ ಹ್ಯಾಡ್ಲಿ ಮೂಲಕ ತಪ್ಪಿಸಿಕೊಳ್ಳುವಿಕೆ ಪ್ರಯತ್ನದ ಸೋಗಿನಲ್ಲಿ ಟಾಮಿಯನ್ನು ಸಾಯಿಸುತ್ತಾನೆ. ಆ್ಯಂಡಿ ಖಾತಾಂತರವನ್ನು ಮುಂದುವರಿಸದಿರಲು ಪ್ರಯತ್ನಿಸುತ್ತಾನೆ, ಆದರೆ ನಾರ್ಟನ್ ಗ್ರಂಥಾಲಯವನ್ನು ನಾಶಗೊಳಿಸುವ, ಕಾವಲು ಪಡೆಗಳಿಂದ ಆ್ಯಂಡಿಯ ರಕ್ಷಣೆಯನ್ನು ಹಿಂತೆಗೆದುಕೊಳ್ಳುವ, ಮತ್ತು ಅವನನ್ನು ಹೆಚ್ಚು ಕಳಪೆಯಾದ ಸ್ಥಿತಿಗೆ ಸ್ಥಳಾಂತರಿಸುವ ಬೆದರಿಕೆ ಹಾಕಿದಾಗ ಆ್ಯಂಡಿ ಪಟ್ಟು ಸಡಿಲಿಸುತ್ತಾನೆ. ಎರಡು ತಿಂಗಳ ನಂತರ ಆ್ಯಂಡಿಯನ್ನು ಏಕಾಂತ ಸೆರೆವಾಸದಿಂದ ಬಿಡುಗಡೆ ಮಾಡಲಾಗುತ್ತದೆ, ಮತ್ತು ಅವನು ಸಂದೇಹಾತ್ಮಕನಾಗಿದ್ದ ರೆಡ್‌ಗೆ ಮೆಕ್ಸಿಕೊದ ಒಂದು ಕರಾವಳಿ ಪಟ್ಟಣವಾದ ಜ಼ಿಹುವಾಟನೇಯೊದಲ್ಲಿ ಬಾಳುವ ಕನಸು ಕಾಣುತ್ತಿರುವುದಾಗಿ ಹೇಳುತ್ತಾನೆ. ಆ್ಯಂಡಿ ಅವನಿಗೆ ಬಕ್ಸ್‌ಟನ್ ಹತ್ತಿರದ ಒಂದು ನಿರ್ದಿಷ್ಟ ಹುಲ್ಲು ಅಂಗಳದ ಬಗ್ಗೆಯೂ ಹೇಳುತ್ತಾನೆ, ಮತ್ತು ಅವನು ಒಮ್ಮೆ ಬಿಡುಗಡೆಯಾದ ಬಳಿಕ ಆ್ಯಂಡಿ ಹೂತುಹಾಕಿದ ಒಂದು ಪೊಟ್ಟಣವನ್ನು ಹುಡುಕಿ ಪಡೆಯಬೇಕೆಂದು ಹೇಳುತ್ತಾನೆ. ರೆಡ್ ಆ್ಯಂಡಿಯ ಯೋಗಕ್ಷೇಮದ ಬಗ್ಗೆ ಚಿಂತೆಗೊಳಗಾಗುತ್ತಾನೆ, ವಿಶೇಷವಾಗಿ ಆ್ಯಂಡಿ ಒಬ್ಬ ಸಹ ಕೈದಿಗೆ ೬ ಅಡಿಯ ಹಗ್ಗವನ್ನು ಕೇಳಿದನೆಂದು ಗೊತ್ತಾದಾಗ.

ಮುಂದಿನ ದಿನದ ಹಾಜರಿ ಕೂಗಿನಲ್ಲಿ, ಕಾವಲು ಪಡೆಗಳು ಆ್ಯಂಡಿಯ ಸೆರೆಕೋಣೆ ಖಾಲಿಯಾಗಿದ್ದನ್ನು ಕಂಡುಕೊಳ್ಳುತ್ತಾರೆ. ಸಿಟ್ಟಾದ ನಾರ್ಟನ್ ಕೋಣೆಯ ಗೋಡೆಯ ಮೇಲೆ ತೂಗುಹಾಕಿದ ರ‍್ಯಾಕೆಲ್ ವೆಲ್ಚ್‌ಳ ಭಿತ್ತಿಚಿತ್ರಕ್ಕೆ ಕಲ್ಲು ಎಸೆದಾಗ, ಆ್ಯಂಡಿ ತನ್ನ ಕಲ್ಲು ಸುತ್ತಿಗೆಯಿಂದ ಕಳೆದ ೧೯ ವರ್ಷಗಳಲ್ಲಿ ತೋಡಿದ ಒಂದು ಸುರಂಗವು ಬಹಿರಂಗವಾಗುತ್ತದೆ. ಹಿಂದಿನ ರಾತ್ರಿ, ಆ್ಯಂಡಿ ಹಗ್ಗವನ್ನು ಬಳಸಿ ಸುರಂಗ ಮತ್ತು ಸೆರೆಮನೆಯ ಚರಂಡಿ ಕೊಳವೆಯ ಮೂಲಕ ತಪ್ಪಿಸಿಕೊಂಡಿರುತ್ತಾನೆ. ಜೊತೆಗೆ, ನಾರ್ಟನ್‍ನ ಸೂಟು, ಶೂಗಳು ಮತ್ತು ಹಣ ಖಾತಾಂತರಿಸುವಿಕೆಯ ಸಾಕ್ಷಿಯಿರುವ ಕಿರ್ದಿ ಪುಸ್ತಕವನ್ನು ಒಯ್ದಿರುತ್ತಾನೆ. ಕಾವಲು ಪಡೆಗಳು ಅವನಿಗಾಗಿ ಹುಡುಕುತ್ತಿರುವಾಗ, ಆ್ಯಂಡಿ ರ‍್ಯಾಂಡಲ್ ಸ್ಟೀವನ್ಸ್ ಆಗಿ ವೇಷಹಾಕಿ, ಹಲವಾರು ಬ್ಯಾಂಕ್‍ಗಳಿಂದ ಖಾತಾಂತರ ಮಾಡಿದ್ದ ಹಣವನ್ನು ಪಡೆದುಕೊಂಡು, ಕಿರ್ದಿ ಪುಸ್ತಕ ಮತ್ತು ಶಾಶ್ಯಾಂಕ್‍ನಲ್ಲಿನ ಭ್ರಷ್ಟಾಚಾರ ಮತ್ತು ಕೊಲೆಗಳ ಇತರ ಸಾಕ್ಷಿಗಳನ್ನು ಒಂದು ಸ್ಥಳೀಯ ಸುದ್ದಿಪತ್ರಿಕೆಗೆ ಅಂಚೆ ಮೂಲಕ ಕಳುಹಿಸುತ್ತಾನೆ. ರಾಜ್ಯದ ಪೋಲಿಸರು ಶಾಶ್ಯಾಂಕ್‍ಗೆ ಆಗಮಿಸಿ ಹ್ಯಾಡ್ಲಿಯನ್ನು ಬಂಧಿಸುತ್ತಾರೆ. ನಾರ್ಟನ್ ಬಂಧನದಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

೪೦ ವರ್ಷ ಶಿಕ್ಷೆ ಅನುಭವಿಸಿದ ನಂತರ, ರೆಡ್‍ನನ್ನು ಅಂತಿಮವಾಗಿ ಬಿಡುಗಡೆ ಮಾಡಲಾಗುತ್ತದೆ. ಸೆರೆಮನೆಯ ಹೊರಗಿನ ಜೀವನಕ್ಕೆ ಹೊಂದಿಕೊಳ್ಳಲು ಅವನು ಒದ್ದಾಡುತ್ತಾನೆ ಮತ್ತು ತನಗೆಂದೂ ಸಾಧ್ಯವಾಗುವುದಿಲ್ಲವೆಂದು ಭಯಪಡುತ್ತಾನೆ. ಆ್ಯಂಡಿಗೆ ಕೊಟ್ಟ ಮಾತನ್ನು ನೆನಪಿಸಿಕೊಂಡು, ಅವನು ಬಕ್ಸ್‌ಟನ್‍ಗೆ ಭೇಟಿಕೊಟ್ಟಾಗ ಅಲ್ಲಿ ಅವನಿಗೆ ಹಣ ಮತ್ತು ಅವನು ಜ಼ಿಹುವಾಟನೇಯೊಗೆ ಬರುವಂತೆ ಹೇಳಿದ ಪತ್ರವಿರುವ ಸಂಗ್ರಹ ಸಿಗುತ್ತದೆ. ರೆಡ್ ಬಿಡುಗಡೆಯ ವಾಗ್ದಾನವನ್ನು ಮುರಿದು ಫ಼ೋರ್ಟ್ ಹ್ಯಾನ್‍ಕಾಕ್ ಟೆಕ್ಸಸ್‍ಗೆ ಪ್ರಯಾಣ ಮಾಡಿ, ಮೆಕ್ಸಿಕೊದ ಗಡಿಯನ್ನು ದಾಟಿ, ಅಂತಿಮವಾಗಿ ತನಗೆ ಭರವಸೆಯ ಅನಿಸಿಕೆಯಾಗುತ್ತಿದೆ ಎಂದು ಒಪ್ಪಿಕೊಳ್ಳುತ್ತಾನೆ. ಅವನು ಜ಼ಿಹುವಾಟನೇಯೊದ ಒಂದು ಬೀಚ್‍ನಲ್ಲಿ ಆ್ಯಂಡಿಯನ್ನು ಪತ್ತೆಹಚ್ಚುತ್ತಾನೆ, ಮತ್ತು ಮತ್ತೆ ಒಂದಾದ ಇಬ್ಬರು ಮಿತ್ರರು ಸಂತೋಷದಿಂದ ಅಪ್ಪಿಕೊಳ್ಳುತ್ತಾರೆ.

ವಿಶ್ಲೇಷಣೆ[ಬದಲಾಯಿಸಿ]

ಚಲನಚಿತ್ರವು ಕ್ರೈಸ್ತ ಅತೀಂದ್ರಿಯವಾದದ ಮೇಲೆ ನೆಲೆಗೊಂಡಿದೆ ಎಂದು ವ್ಯಾಖ್ಯಾನಿಸಲಾಗಿದೆ.[೪] ಆ್ಯಂಡಿಯನ್ನು ಏಸುಕ್ರಿಸ್ತನಂತಹ ವ್ಯಕ್ತಿ, ಉದ್ಧಾರಕನಾಗಿ ಪ್ರಸ್ತುತಪಡಿಸಲಾಗಿದೆ, ಮತ್ತು ಚಿತ್ರದ ಮುಂಚಿನ ಭಾಗದಲ್ಲಿ ರೆಡ್ ಅವನನ್ನು ಶಾಶ್ಯಾಂಕ್‍ನಿಂದ ಆವರಿಸಿ ರಕ್ಷಿಸುವ ದಿವ್ಯಕಾಂತಿಯನ್ನು ಹೊಂದಿದವನು ಎಂದು ವರ್ಣಿಸುತ್ತಾನೆ.[೫] ಆ್ಯಂಡಿ ಮತ್ತು ಹಲವಾರು ಕೈದಿಗಳು ಸೆರೆಮನೆಯ ಚಾವಣಿಗೆ ಡಾಂಬರು ಬಳಿಯುವ, ಮತ್ತು ಆ್ಯಂಡಿ ಹನ್ನೆರಡು ಜನ ಕೈದಿಗಳು/ಶಿಷ್ಯರಿಗಾಗಿ ಬಿಯರ್/ವೈನ್ ಪಡೆಯುವ ದೃಶ್ಯವನ್ನು ಲಾಸ್ಟ್ ಸಪರ್‌ನ ಪುನಸ್ಸೃಷ್ಟಿಯಾಗಿ ಕಾಣಬಹುದು. ಫ಼್ರೀಮನ್ ಅವರನ್ನು ಜೀಸಸ್‍ನ ಅನುಗ್ರಹವನ್ನು ಬೇಡುತ್ತಿರುವ "ಎಲ್ಲ ಸೃಷ್ಟಿಯ ಪ್ರಭುಗಳು" ಎಂದು ವರ್ಣಿಸುತ್ತಾನೆ.[೬] ಇದು ಅವರ ಉದ್ದೇಶವಾಗಿರಲಿಲ್ಲ,[೭] ಮತ್ತು ಜನರು ಚಿತ್ರದಲ್ಲಿ ತಮ್ಮ ಸ್ವಂತದ ಅರ್ಥವನ್ನು ಕಂಡುಕೊಳ್ಳಲು ಬಯಸಿದ್ದೆ ಎಂದು ನಿರ್ದೇಶಕ ಡೇರಬಾಂಟ್ ಹೇಳಿದರು.[೮] ಚಿತ್ರಕಥೆಯಲ್ಲಿ ದ ಮ್ಯಾರೇಜ್ ಆಫ಼್ ಫ಼ಿಗರೊದ ಶೋಧನೆಯನ್ನು ಪವಿತ್ರ ಬಟ್ಟಲಿನ ಶೋಧನೆಯನ್ನು ಹೋಲುವಂಥದ್ದು ಎಂದು ವರ್ಣಿಸಲಾಗಿದೆ.[೯]

ಸೆರೆಮನೆಯ ಮೇಲ್ವಿಚಾರಕನನ್ನು ಅಮೇರಿಕದ ಮಾಜಿ ರಾಷ್ಟ್ರಪತಿ ರಿಚರ್ಡ್ ನಿಕ್ಸನ್‌ಗೂ ಹೋಲಿಸಲಾಗಿದೆ. ನಾರ್ಟನ್‍ನ ನೋಟ ಮತ್ತು ಸಾರ್ವಜನಿಕ ಭಾಷಣಗಳು ನಿಕ್ಸನ್‍ನಂತೆ ಅನುರೂಪವಾಗಿದ್ದವು ಎಂಬುದನ್ನು ನೋಡಬಹುದು. ಅದೇ ರೀತಿ, ಭ್ರಷ್ಟ ಹಗರಣಗಳನ್ನು ಮಾಡುತ್ತಲೇ ಗುಲಾಮ ಜನರೆದುರು ದೊಡ್ಡಸ್ತಿಕೆ ತೋರುವವನಂತೆ ಮಾತಾಡುವುದು ಇತ್ಯಾದಿ ಕಾರ್ಯಗಳನ್ನು ನಿಕ್ಸನ್‍ಗೆ ಕುಖ್ಯಾತಿಯನ್ನು ತಂದುಕೊಟ್ಟಂತೆ, ನಾರ್ಟನ್ ಪವಿತ್ರ ಮನುಷ್ಯನ ಚಿತ್ರವನ್ನು ತೋರಿಸಿಕೊಡುತ್ತಾನೆ.[೧೦]

ಜ಼ಿಹುವಾಟನೇಯೊವನ್ನು ಸ್ವರ್ಗ ಅಥವಾ ಹೊನ್ನಾಡಿನ ಸಾದೃಶ್ಯವಾಗಿ ವ್ಯಾಖ್ಯಾನಿಸಲಾಗಿದೆ.[೧೧] ಚಲನಚಿತ್ರದಲ್ಲಿ, ಆ್ಯಂಡಿ ಅದನ್ನು ಸ್ಮರಣೆಯಿಲ್ಲದ ಸ್ಥಳವೆಂದು, ಪಾಪಗಳನ್ನು ಮರೆತು ಅಥವಾ ಅವುಗಳನ್ನು ಶಾಂತ ಮಹಾಸಾಗರದಿಂದ ತೇಲಿಸಿಕೊಂಡು ಹೋಗಿಸುವ ಮೂಲಕ ತನ್ನ ಪಾಪಗಳಿಂದ ಮುಕ್ತಿಯನ್ನು ಕೊಡುವ ಸ್ಥಳವೆಂದು ವರ್ಣಿಸುತ್ತಾನೆ. ಫ಼್ರೀಮನ್ ರೆಡ್‍ನ ಕಥೆಯನ್ನು ಮುಕ್ತಿಯ ಕಥೆಯೆಂದು ವಿವರಿಸಿದ್ದಾರೆ, ಏಕೆಂದರೆ ಅವನು ತನ್ನ ಅಪರಾಧಗಳಿಂದ ಪಾಪರಹಿತನಾಗಿಲ್ಲ, ಆದರೆ ಆ್ಯಂಡಿಯ ಕಥೆ ವಿಮೋಚನೆಯನ್ನು ಕಂಡುಕೊಳ್ಳುವ ಕಥೆಯಾಗಿದೆ.[೧೨] ಕೆಲವು ಕ್ರೈಸ್ತ ಪ್ರೇಕ್ಷಕರು ಜ಼ಿಹುವಾಟನೇಯೊವನ್ನು ಸ್ವರ್ಗವೆಂದು ವ್ಯಾಖ್ಯಾನಿಸುತ್ತಾರಾದರೂ, ಅದನ್ನು ಒಳ್ಳೆಯದು ಮತ್ತು ಕೆಟ್ಟದ್ದಿನ ಸಾಂಪ್ರದಾಯಿಕ ಕಲ್ಪನೆಗಳ ಆಚೆಗೆ ಸಾಧಿಸಲಾದ ದೋಷರಹಿತತೆಯ ನೀಚವಾದಿ ರೂಪವಾಗಿಯೂ ವ್ಯಾಖ್ಯಾನಿಸಬಹುದು. ಇದರಲ್ಲಿ ನೀಡಲಾದ ವಿಸ್ಮೃತಿಯು ಪಾಪದ ಕ್ಷಮೆಯ ಬದಲಾಗಿ ನಾಶವಾಗಿದೆ, ಇದರರ್ಥ ಆ್ಯಂಡಿಯ ಗುರಿ ಅಧಾರ್ಮಿಕ ಮತ್ತು ನಾಸ್ತಿಕವಾದಿಯಾಗಿದೆ. ಆ್ಯಂಡಿಯನ್ನು ಏಸುಕ್ರಿಸ್ತನಂತಹ ವ್ಯಕ್ತಿ ಎಂದು ವ್ಯಾಖ್ಯಾನಿಸಿದಂತೆ, ಅವನು ಶಿಕ್ಷಣ ಮತ್ತು ಸ್ವಾತಂತ್ರ್ಯದ ಅನುಭವದ ಮೂಲಕ ಬಿಡುಗಡೆಯನ್ನು ನೀಡುತ್ತಿರುವ ಜ಼ರಾತುಷ್ಟ್ರನಂತಹ ಪ್ರವಾದಿ ಎಂದು ಕಾಣಬಹುದು.[೧೧] ದ ಶಾಶ್ಯಾಂಕ್ ರಿಡೆಂಪ್ಶನ್ ಆಶಾರಹಿತ ಸ್ಥಿತಿಯಲ್ಲಿ ಇರಿಸಿದಾಗ ತಮ್ಮ ಆತ್ಮಮೌಲ್ಯದ ಅನಿಸಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ ಸಾಂಕೇತಿಕವಾಗಿದೆ ಎಂದು ಚಲನಚಿತ್ರ ವಿಮರ್ಶಕ ರೋಜರ್ ಈಬರ್ಟ್ ವಾದಿಸಿದರು. ಕಥಾವಸ್ತುವಿನಲ್ಲಿ ಆ್ಯಂಡಿಯ ಋಜುತ್ವವು ಮುಖ್ಯವಾದ ವಿಷಯವಾಗಿದೆ, ವಿಶೇಷವಾಗಿ ಪ್ರಾಮಾಣಿಕತೆಯ ಕೊರತೆಯಿರುವ ಸೆರೆಮನೆಯಲ್ಲಿ.[೧೩]

ನಿರ್ಮಾಣ[ಬದಲಾಯಿಸಿ]

ಚಿತ್ರೀಕರಣ[ಬದಲಾಯಿಸಿ]

ಚಲನಚಿತ್ರದ ಪ್ರಧಾನ ಛಾಯಾಗ್ರಹಣ ಮೂರು ತಿಂಗಳ ಅವಧಿಯಲ್ಲಿ ನಡೆಯಿತು,[೧೪] ೧೯೯೩ರ ಜೂನ್ ಮತ್ತು ಆಗಸ್ಟ್ ನಡುವೆ.[೧೫][೧೬] ಚಿತ್ರೀಕರಣಕ್ಕೆ ನಿಯಮಿತವಾಗಿ ೧೮ ಗಂಟೆಗಳ ವರೆಗಿನ ಕೆಲಸದ ದಿನಗಳು ಬೇಕಾಯಿತು, ವಾರಕ್ಕೆ ಆರು ದಿನಗಳಂತೆ.[೧೪]

ಮಾರ್ವಿನ್ ಐದು ತಿಂಗಳು ಅಮೇರಿಕ ಮತ್ತು ಕೆನಡಾದಾದ್ಯಂತ ಸೆರೆಮನೆಗಳನ್ನು ಅನ್ವೇಷಿಸುತ್ತ ಕಳೆದರು. ಅವರು ಬೇಕಾದ ತುಣುಕನ್ನು ಪ್ರತಿದಿನ ಗಂಟೆಗಟ್ಟಲೆ ಒಳಗೊಂಡ ಭದ್ರತಾ ತೊಡಕುಗಳಿರುವ ಸಕ್ರಿಯ ಸೆರೆಮನೆಯಲ್ಲಿ ಚಿತ್ರೀಕರಿಸುವ ಸಂಕೀರ್ಣತೆಯನ್ನು ತಪ್ಪಿಸುವ ನಿರೀಕ್ಷೆಯಿಂದ, ಸಮಯರಹಿತ ಸೌಂದರ್ಯವನ್ನು ಹೊಂದಿದ್ದ, ಮತ್ತು ಸಂಪೂರ್ಣವಾಗಿ ಪರಿತ್ಯಕ್ತವಾದ ಸ್ಥಳಕ್ಕಾಗಿ ನೋಡುತ್ತಿದ್ದರು.[೧೭]

ಕೊಡುಗೆ[ಬದಲಾಯಿಸಿ]

ಯಾವ ಮರದ ಕೆಳಗೆ ಆ್ಯಂಡಿ ರೆಡ್‍ಗಾಗಿ ಜ಼ಿಹುವಾಟನೇಯೊಗೆ ದಾರಿ ತೋರಿಸುವ ಕೈಪತ್ರವನ್ನು ಬಿಡುತ್ತಾನೊ, ಆ ಓಕ್ ಮರವು ಚಲನಚಿತ್ರದಲ್ಲಿ ತನ್ನ ಪಾತ್ರಕ್ಕಾಗಿ ಭರವಸೆಯ ಸಂಕೇತವಾಯಿತು, ಮತ್ತು ಅದು ಪ್ರತೀಕಾತ್ಮಕವೆಂದು ಪರಿಗಣಿತವಾಗಿದೆ.[೧೮][೧೯] ಆ ಮರವು ವಾರ್ಷಿಕವಾಗಿ ಸಾವಿರಾರು ಪ್ರವಾಸಿಗಳನ್ನು ಆಕರ್ಷಿಸಿತು ಎಂದು ಪತ್ರಿಕೆಗಳು ವರದಿ ಮಾಡಿದವು.[೨೦] ಆ ಮರವು ಜುಲೈ ೨೨, ೨೦೧೬ ರ ಸುಮಾರು ಜೋರಾದ ಗಾಳಿಯಿಂದ ಸಂಪೂರ್ಣವಾಗಿ ನೆಲಕ್ಕುರುಳಿತು, ಮತ್ತು ಅದರ ಕುರುಹುಗಳನ್ನು ಎಪ್ರಿಲ್ ೨೦೧೭ರಲ್ಲಿ ಕತ್ತರಿಸಿ ಹಾಕಲಾಯಿತು.[೨೧] ಅದರ ಅವಶೇಷಗಳನ್ನು ಕಲ್ಲು ಸುತ್ತಿಗೆಗಳು ಮತ್ತು ಆಯಸ್ಕಾಂತಗಳು ಸೇರಿದಂತೆ, ದ ಶಾಶ್ಯಾಂಕ್ ರಿಡೆಂಪ್ಶನ್ ಸ್ಮರಣಿಕೆಗಳಾಗಿ ಮಾರ್ಪಡಿಸಲಾಯಿತು.[೨೨]

ಉಲ್ಲೇಖಗಳು[ಬದಲಾಯಿಸಿ]

  1. "The Shawshank Redemption". British Board of Film Classification. Archived from the original on ಜನವರಿ 21, 2015. Retrieved ಆಗಸ್ಟ್ 15, 2015.
  2. "'The Shawshank Redemption': 2 Pros and Countless Cons". Entertainment Weekly. ಸೆಪ್ಟೆಂಬರ್ 30, 1994. Archived from the original on ಸೆಪ್ಟೆಂಬರ್ 20, 2017. Retrieved ಸೆಪ್ಟೆಂಬರ್ 20, 2017.
  3. Adams, Russell (ಮೇ 22, 2014). "The Shawshank Residuals". The Wall Street Journal. Archived from the original on ಸೆಪ್ಟೆಂಬರ್ 11, 2017. Retrieved ಸೆಪ್ಟೆಂಬರ್ 24, 2017.(subscription required)
  4. Kermode 2003, p. 14.
  5. Kermode 2003, p. 30.
  6. Kermode 2003, pp. 31, 39.
  7. Kermode 2003, p. 31.
  8. Kermode, Mark (ಆಗಸ್ಟ್ 22, 2004). "Hope springs eternal". The Observer. Archived from the original on ಡಿಸೆಂಬರ್ 16, 2013. Retrieved ಸೆಪ್ಟೆಂಬರ್ 30, 2012.
  9. Kermode 2003, p. 39.
  10. Kermode 2003, p. 45.
  11. ೧೧.೦ ೧೧.೧ Kermode 2003, p. 68.
  12. Kermode 2003, p. 80.
  13. Ebert, Roger (ಸೆಪ್ಟೆಂಬರ್ 23, 1994). "Review: The Shawshank Redemption". Chicago Sun-Times. Archived from the original on ಸೆಪ್ಟೆಂಬರ್ 28, 2009. Retrieved ಏಪ್ರಿಲ್ 13, 2010.
  14. ೧೪.೦ ೧೪.೧ Heiderny, Margaret (ಸೆಪ್ಟೆಂಬರ್ 22, 2014). "The Little-Known Story of How The Shawshank Redemption Became One of the Most Beloved Films of All Time". Vanity Fair. Archived from the original on ಸೆಪ್ಟೆಂಬರ್ 10, 2017. Retrieved ಮಾರ್ಚ್ 5, 2017.
  15. Frook, John Evan (ಮಾರ್ಚ್ 24, 1993). "Location News; Mexico's Cine South looks to branch out". Variety. Archived from the original on ಅಕ್ಟೋಬರ್ 17, 2017. Retrieved ಅಕ್ಟೋಬರ್ 16, 2017.
  16. "Cleveland: The Shawshank Redemption prison". The A.V. Club. March 8, 2011. Archived from the original on September 14, 2017. Retrieved September 14, 2017.
  17. Rauzi, Robin (ಡಿಸೆಂಬರ್ 1, 1993). "Doing 'Redemption' Time in a Former Prison". Los Angeles Times. Archived from the original on ಏಪ್ರಿಲ್ 11, 2013. Retrieved ಸೆಪ್ಟೆಂಬರ್ 16, 2017.
  18. Smith, Nigel (ಜುಲೈ 25, 2016). "Rotten luck: tree from The Shawshank Redemption toppled by strong winds". The Guardian. Archived from the original on ಸೆಪ್ಟೆಂಬರ್ 17, 2017. Retrieved ಸೆಪ್ಟೆಂಬರ್ 17, 2017.
  19. Whitmire, Lou (ಜುಲೈ 22, 2016). "'Shawshank' tree falls over". Mansfield News Journal. Archived from the original on ಆಗಸ್ಟ್ 15, 2016. Retrieved ಜುಲೈ 23, 2016.
  20. Victor, Daniel (ಜುಲೈ 25, 2016). "Famed Oak Tree From 'Shawshank Redemption' Is Toppled by Heavy Winds". ದ ನ್ಯೂ ಯಾರ್ಕ್ ಟೈಮ್ಸ್. Archived from the original on ನವೆಂಬರ್ 28, 2017. Retrieved ನವೆಂಬರ್ 28, 2017.
  21. Martz, Linda (ಜೂನ್ 17, 2017). "Last of 'Shawshank Redemption' tree cut up". WKYC. Archived from the original on ನವೆಂಬರ್ 28, 2017. Retrieved ನವೆಂಬರ್ 28, 2017.
  22. "'Shawshank' oak tree merchandise for sale during 'Shawshank Hustle' in Mansfield". WKYC. ಜೂನ್ 17, 2017. Archived from the original on ನವೆಂಬರ್ 28, 2017. Retrieved ನವೆಂಬರ್ 28, 2017.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]