ವಿಷಯಕ್ಕೆ ಹೋಗು

ದಿ ಲಾಸ್ಟ್‌ ಸಮುರಾಯ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Last Samurai
ಚಿತ್ರ:TLSPoster.jpg
Promotional Poster by Olga Kaljakin
ನಿರ್ದೇಶನEdward Zwick
ನಿರ್ಮಾಪಕEdward Zwick
Tom Cruise
Tom Engelman
Marshall Herskovitz
Scott Kroopf
Paula Wagner
Associate producer:
Michael Doven
ಪಾತ್ರವರ್ಗTom Cruise
Ken Watanabe
Shin Koyamada
Tony Goldwyn
Timothy Spall
Billy Connolly
Hiroyuki Sanada
Koyuki Kato
Shun Sugata
ಸಂಗೀತHans Zimmer
ಛಾಯಾಗ್ರಹಣJohn Toll
ಸಂಕಲನVictor Du Bois
Steven Rosenblum
ವಿತರಕರುWarner Bros.
ಬಿಡುಗಡೆಯಾಗಿದ್ದುDecember 5, 2003
ಅವಧಿ160 minutes
ದೇಶUnited States
ಭಾಷೆEnglish / Japanese
ಬಂಡವಾಳUS$ 140 million
ಬಾಕ್ಸ್ ಆಫೀಸ್US$ 456 million[೧]

ದಿ ಲಾಸ್ಟ್‌ ಸಮುರಾಯ್‌‌ ಎಂಬುದು ೨೦೦೩ರಲ್ಲಿ ಬಂದ ಅಮೆರಿಕಾದ ಮಹಾಕಾವ್ಯದಂಥ ನಾಟಕೀಯ ಚಲನಚಿತ್ರವಾಗಿದ್ದು, ಇದರ ನಿರ್ದೇಶನ ಮತ್ತು ಸಹ-ನಿರ್ಮಾಣ ಕಾರ್ಯವನ್ನು ಎಡ್ವರ್ಡ್‌ ಝ್ವಿಕ್‌‌ ಎಂಬಾತ ನಿರ್ವಹಿಸಿದ್ದ; ಅಷ್ಟೇ ಅಲ್ಲ, ಜಾನ್‌ ಲೊಗಾನ್‌‌ ಬರೆದ ಕಥೆಯೊಂದನ್ನು ಆಧರಿಸಿ ರಚಿಸಲಾದ ಚಿತ್ರಕಥೆಯಲ್ಲಿ ಈತ ಸಹ-ಬರಹಗಾರನ ಪಾತ್ರವನ್ನೂ ವಹಿಸಿದ್ದ.

ವಿನ್ಸೆಂಟ್‌ ವಾರ್ಡ್‌ ಎಂಬ ಬರಹಗಾರ ಮತ್ತು ನಿರ್ದೇಶಕನಿಂದ ಬೆಳೆಸಲ್ಪಟ್ಟ ಯೋಜನೆಯೊಂದರಿಂದ ಈ ಚಲನಚಿತ್ರವು ಪ್ರೇರಣೆಯನ್ನು ಪಡೆಯಿತು. ಈ ಚಲನಚಿತ್ರಕ್ಕೆ ಸಂಬಂಧಿಸಿದಂತೆ ವಾರ್ಡ್‌ ಕಾರ್ಯಕಾರಿ ನಿರ್ಮಾಪಕನ ಹೊಣೆಹೊತ್ತುಕೊಂಡ- ಸರಿಸುಮಾರು ನಾಲ್ಕು ವರ್ಷಗಳವರೆಗೆ ಇದನ್ನು ಬೆಳೆಸುವುದರ ಕುರಿತೇ ತನ್ನನ್ನು ತೊಡಗಿಸಿಕೊಂಡ ಆತ, ಹಲವಾರು ನಿರ್ದೇಶಕರನ್ನು (ಕೊಪ್ಪೊಲಾ, ವೇಯ್ರ್‌) ಸಂಪರ್ಕಿಸಿದ ನಂತರ, ಎಡ್ವರ್ಡ್‌ ಝ್ವಿಕ್‌‌ನಲ್ಲಿ ಆಸಕ್ತಿ ವಹಿಸಿದ.

ಝ್ವಿಕ್‌ನ ನೇತೃತ್ವದಲ್ಲಿ ಚಲನಚಿತ್ರದ ಕಾರ್ಯವು ಮುಂದಕ್ಕೆ ಸಾಗಿತು ಮತ್ತು ವಾರ್ಡ್‌ನ ಜನ್ಮಸ್ಥಳವಾದ ನ್ಯೂಜಿಲೆಂಡ್‌‌‌ನಲ್ಲಿ ಚಿತ್ರೀಕರಿಸಲ್ಪಟ್ಟಿತು.

ಈ ಚಲನಚಿತ್ರದಲ್ಲಿ ಬರುವ ಅಮೆರಿಕಾದ ಯೋಧ ನಾಥನ್‌ ಆಲ್‌ಗ್ರೆನ್‌‌ ಪಾತ್ರದಲ್ಲಿ ಟಾಮ್‌ ಕ್ರೂಸ್‌ (ಈತ ಚಿತ್ರದ ಸಹ-ನಿರ್ಮಾಪಕ ಕೂಡಾ) ನಟಿಸಿದ್ದಾನೆ; ನಾಥನ್‌ ಆಲ್‌ಗ್ರೆನ್‌ನ ವೈಯಕ್ತಿಕ ಮತ್ತು ಭಾವನಾತ್ಮಕ ತಿಕ್ಕಾಟಗಳು ಸಮುರಾಯ್‌‌ ಯೋಧರೊಂದಿಗೆ ಆತ ಸಂಪರ್ಕ ಹೊಂದಲು ಕಾರಣವಾಗುತ್ತವೆ ಮತ್ತು ೧೮೭೬ ಹಾಗೂ ೧೮೭೭ರಲ್ಲಿ ಜಪಾನ್‌ ಸಾಮ್ರಾಜ್ಯದಲ್ಲಿನ ಮೆಯಿಜಿ ಪುನಃ-ಪ್ರತಿಷ್ಠಾಪನೆಯ ತತ್ಪರಿಣಾಮವಾಗಿ ಇದು ಸಂಭವಿಸುತ್ತದೆ. ಚಿತ್ರದ ಇತರ ಕಲಾವಿದರಲ್ಲಿ ಕೆನ್‌ ವತಾನಬೆ, ಟೋನಿ ಗೋಲ್ಡ್‌ವಿನ್‌‌, ಹಿರೋಯುಕಿ ಸನಾಡಾ, ತಿಮೋಥಿ ಸ್ಪಾಲ್‌, ಶಿನ್‌ ಕೊಯಮಡಾ, ಮತ್ತು ಬಿಲ್ಲಿ ಕೊನೊಲ್ಲಿ ಮೊದಲಾದವರು ಸೇರಿದ್ದಾರೆ.

ಸೈಗೋ ಟಕಾಮೊರಿ ನೇತೃತ್ವದಲ್ಲಿ ೧೮೭೬ರಲ್ಲಿ ನಡೆದ ಸತ್ಸುಮಾ ದಂಗೆಯಿಂದ ಚಲನಚಿತ್ರದ ಕಥಾವಸ್ತುವು ಪ್ರೇರೇಪಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಹಿಂದೆ ನಡೆದ ಬೊಷಿನ್‌ ಯುದ್ಧದಲ್ಲಿ ಎನೊಮೊಟೊ ಟಕೆಯಾಕಿ ಜೊತೆಜೊತೆಗೆ ಕಾದಾಡಿದ ಜೂಲ್ಸ್‌ ಬ್ರೂನೆಟ್ ಎಂಬ ಹೆಸರಿನ ಓರ್ವ ಫ್ರೆಂಚ್‌ ಸೇನಾ ಕ್ಯಾಪ್ಟನ್‌ನ ಕಥೆಯನ್ನೂ ಈ ಚಲನಚಿತ್ರದ ಕಥಾವಸ್ತುವು ಆಧರಿಸಿದೆ. ಜಪಾನಿಯರ ಪಾಶ್ಚಾತ್ಯೀಕರಣದಲ್ಲಿ ಬ್ರಿಟಿಷ್‌ ಸಾಮ್ರಾಜ್ಯ, ನೆದರ್ಲೆಂಡ್ಸ್‌ ಮತ್ತು ಫ್ರಾನ್ಸ್‌‌‌ನ ಐತಿಹಾಸಿಕ ಪಾತ್ರಗಳಿಗೆ ಚಲನಚಿತ್ರದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನವು ಬಹುಪಾಲು ಕಾರಣವಾಗಿದೆ. ಕಥಾವಸ್ತುವಿನ ಉದ್ದೇಶಗಳಿಗೆ ಸಂಬಂಧಿಸಿದಂತೆ, ಚಲನಚಿತ್ರ ಮತ್ತು ನಿಜವಾದ ಕಥೆಯಲ್ಲಿ ಈ ವಿವರಗಳು, ಪಾತ್ರಗಳು ಸರಳೀಕರಿಸಲ್ಪಟ್ಟಿವೆ; ಇತಿಹಾಸವನ್ನು ಪುನರಾವರ್ತಿಸಲು ಚಲನಚಿತ್ರವು ಬಯಸದಿರುವುದು ಇದರ ಹಿಂದಿನ ಉದ್ದೇಶ.

ಬಿಡುಗಡೆಯಾದ ನಂತರ ದಿ ಲಾಸ್ಟ್‌ ಸಮುರಾಯ್‌‌ ಚಿತ್ರವು ಎಲ್ಲೆಡೆಯಲ್ಲಿಯೂ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು ಹಾಗೂ ವಿಶ್ವದೆಲ್ಲೆಡೆ ಗಲ್ಲಾ ಪೆಟ್ಟಿಗೆಯಲ್ಲಿ ಒಟ್ಟು ೪೫೬ ದಶಲಕ್ಷ $ನಷ್ಟು ಹಣದ ಸಂಗ್ರಹಣೆಯನ್ನು ದಾಖಲಿಸಿತು. ಇದರ ಜೊತೆಗೆ, ಅಕಾಡೆಮಿ ಪ್ರಶಸ್ತಿಗಳು, ಗೋಲ್ಡನ್‌ ಗ್ಲೋಬ್‌‌ ಪ್ರಶಸ್ತಿಗಳು ಮತ್ತು ನ್ಯಾಷನಲ್‌ ಬೋರ್ಡ್‌ ಆಫ್‌ ರಿವ್ಯೂ ಪ್ರಶಸ್ತಿಗಳೂ ಸೇರಿದಂತೆ, ಹಲವಾರು ಪ್ರಶಸ್ತಿಗಳಿಗೆ ಇದು ನಾಮನಿರ್ದೇಶನಗೊಂಡಿತು.

ಕಥಾವಸ್ತು[ಬದಲಾಯಿಸಿ]

ಕ್ಯಾಪ್ಟನ್‌ ನಾಥನ್‌ ಆಲ್‌ಗ್ರೆನ್‌‌ (ಟಾಮ್‌ ಕ್ರೂಸ್‌) ಪಾತ್ರವನ್ನು ಪರಿಚಯಿಸುವುದರೊಂದಿಗೆ ೧೮೭೬ರ ಬೇಸಿಗೆಯಲ್ಲಿ ಚಲನಚಿತ್ರವು ಶುರುವಾಗುತ್ತದೆ; ನಾಥನ್‌ ಆಲ್‌ಗ್ರೆನ್‌‌ ಓರ್ವ ಭ್ರಮೆಗಳೆಯಲ್ಪಟ್ಟ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸೇನೆಯ ಮಾಜಿ-ಕ್ಯಾಪ್ಟನ್‌ ಮತ್ತು ಓರ್ವ ಮದ್ಯವ್ಯಸನಿ ಆಗಿದ್ದು, ಭಾರತದ ಯುದ್ಧಗಳ ಅವಧಿಯಲ್ಲಿ ದೇಶೀಯ ಅಮೆರಿಕನ್‌‌ ಜನಗಳ ವಿರುದ್ಧದ ತನ್ನ ಹಿಂದಿನ ನಿಯಮೋಲ್ಲಂಘನೆಗಳಿಂದ ಮಾನಸಿಕ ಆಘಾತಕ್ಕೀಡಾಗಿರುತ್ತಾನೆ. ತನ್ನ ಸೇನಾ-ಸೇವೆಯ ನಂತರದ ವರ್ಷಗಳಲ್ಲಿ, ಬಂದೂಕು ಪ್ರದರ್ಶನದ ಪ್ರೇಕ್ಷಕರಿಗೆ ಯುದ್ಧದ ಕಥೆಗಳನ್ನು ನಿರೂಪಿಸುವ ಮೂಲಕ ಆಲ್‌ಗ್ರೆನ್‌ ತನ್ನ ಜೀವನೋಪಾಯವನ್ನು ಕಂಡುಕೊಂಡಿರುತ್ತಾನೆ; ಈ ಅನುಭವವು ಅವನ ಮಾನಸಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಆಲ್‌ಗ್ರೆನ್‌‌ನ ಎಡೆಬಿಡದ ಪಾನೋನ್ಮತ್ತತೆಯಿಂದಾಗಿ ತಲೆಚಿಟ್ಟುಹಿಡಿಸಿಕೊಳ್ಳುವ ಅವನ ಉದ್ಯೋಗದಾತರು ಅವನನ್ನು ಕೆಲಸದಿಂದ ತೆಗೆಯುತ್ತಾರೆ; ತನ್ನ ಹಿಂದಿನ ಆದೇಶಾಧಿಕಾರಿಯಾದ ಲೆಫ್ಟಿನೆಂಟ್‌ ಕರ್ನಲ್‌‌ ಬ್ಯಾಗ್ಲೆ (ಟೋನಿ ಗೋಲ್ಡ್‌ವಿನ್‌‌) ಎಂಬಾತನಿಂದ ಬರುವ ಆಹ್ವಾನವನ್ನು ಪುರಸ್ಕರಿಸುವಂತೆ ಈ ಉಚ್ಚಾಟನೆಯು ಆಲ್‌ಗ್ರೆನ್‌‌ ಮೇಲೆ ಒತ್ತಡ ಹೇರುತ್ತದೆ. ಆದರೆ ಘೋರಸ್ವಪ್ನದಂತೆ ಎಡೆಬಿಡದೆ ಕಾಡುವ ಈ ಅಧಿಕಾರಿಯ ಭಯದಿಂದಾಗಿ, ಅವನನ್ನು ಆಲ್‌ಗ್ರೆನ್‌‌ ಆಳವಾಗಿ ದ್ವೇಷಿಸುತ್ತಿರುತ್ತಾನೆ ಮತ್ತು ದೂಷಿಸುತ್ತಿರುತ್ತಾನೆ. ಶ್ರೀಮಾನ್‌ ಒಮುರಾ (ಮಸಾಟೊ ಹರಾಡಾ) ಎಂಬ ಓರ್ವ ಜಪಾನಿ ವ್ಯವಹಾರಸ್ಥನ ಪರವಾಗಿ, ಒಂದು ಆಹ್ವಾನದೊಂದಿಗೆ ಬ್ಯಾಗ್ಲೆಯು ಅವನನ್ನು ಸಂಪರ್ಕಿಸುತ್ತಾನೆ; ಪಾಶ್ಚಾತ್ಯ-ಶೈಲಿಯ ಹೊಸ ಚಕ್ರಾಧಿಪತ್ಯದ ಜಪಾನಿಯರ ಸೇನೆಗೆ ತರಬೇತಿ ನೀಡುವುದಕ್ಕೆ ಸಂಬಂಧಿಸಿದಂತೆ ಮೆಯಿಜಿ ಪುನಃ-ಪ್ರತಿಷ್ಠಾಪನೆಯ ಹೊಸ ಸರ್ಕಾರಕ್ಕೆ ಸಹಾಯಹಸ್ತ ನೀಡಬೇಕು ಎನ್ನುವುದೇ ಈ ಆಹ್ವಾನವಾಗಿರುತ್ತದೆ. ಆಲ್‌ಗ್ರೆನ್‌‌ನ ಹಳೆಯ ಸೇನಾ ಸಹೋದ್ಯೋಗಿ ಸಾರ್ಜೆಂಟ್‌ ಝೆಬ್‌ ಗ್ಯಾಂಟ್‌ (ಬಿಲ್ಲಿ ಕೊನೊಲ್ಲಿ) ಮತ್ತು ಸಮುರಾಯ್‌‌ನಲ್ಲಿ ಒಂದು ಆಳವಾದ ಆಸಕ್ತಿ ಹೊಂದಿದ್ದ ಓರ್ವ ನಿಂದಾಶೀಲ ಬ್ರಿಟಿಷ್‌ ಭಾಷಾಂತರಕಾರನಾದ ಸೈಮನ್‌ ಗ್ರಹಾಂ (ತಿಮೋಥಿ ಸ್ಪಾಲ್‌) ಎಂಬಿಬ್ಬರು ಈ ನಿಟ್ಟಿನಲ್ಲಿ ಅವರಿಗೆ ನೆರವಾಗುತ್ತಾರೆ.

ಬ್ಯಾಗ್ಲೆಯ ಆದೇಶದ ಅನುಸಾರ, ಒತ್ತಾಯದಿಂದ ದಾಖಲಿಸಲ್ಪಟ್ಟ ರೈತರ ಒಂದು ಸೇನೆಗೆ ಒಂದು ಬಂದೂಕುಪಡೆಯನ್ನು ನಿರ್ವಹಿಸುವುದರ ವಿಷಯದಲ್ಲಿ ಆಲ್‌ಗ್ರೆನ್‌‌ ತರಬೇತು ನೀಡುತ್ತಾನೆ. ಅವರಿಗೆ ಸಮರ್ಪಕವಾಗಿ ತರಬೇತಿ ನೀಡುವುದಕ್ಕೆ ಮುಂಚಿತವಾಗಿ, ಸಮುರಾಯ್‌‌ ಕಾಟ್ಸುಮೊಟೊ (ಕೆನ್‌ ವತಾನಬೆ) ನೇತೃತ್ವದ ಸಮುರಾಯ್‌‌ ಬಂಡಾಯಗಾರರ ಒಂದು ಗುಂಪಿನ ವಿರುದ್ಧದ ಕದನದಲ್ಲಿ ಪಾಲ್ಗೊಳ್ಳಲು ಅವರನ್ನು ಕರೆದೊಯ್ಯುವಂತೆ ಆಲ್‌ಗ್ರೆನ್‌‌ಗೆ ಆದೇಶಿಸಲಾಗುತ್ತದೆ; ಒಂದು ಹೊಸ ರೈಲುಮಾರ್ಗದಲ್ಲಿ ಒಮುರಾ ಮಾಡಿರುವ ಹೂಡಿಕೆಯನ್ನು ರಕ್ಷಿಸುವ ಸಂಬಂಧದ ಹೋರಾಟ ಇದಾಗಿರುತ್ತದೆ. ಕದನದ ಅವಧಿಯಲ್ಲಿ, ಒತ್ತಾಯದಿಂದ ದಾಖಲಿಸಲ್ಪಟ್ಟ ರೈತಸೈನಿಕರು ತಮ್ಮ ಆದೇಶಾಧಿಕಾರಿಗಳನ್ನು ಉಪೇಕ್ಷಿಸುತ್ತಾರೆ ಮತ್ತು ತೀರಾ ಮುಂಚಿತವಾಗಿ ಗುಂಡಿನದಾಳಿಯನ್ನು ಶುರುಮಾಡುತ್ತಾರೆ; ಹೀಗಾಗಿ ಅವರಿಗೆ ಮದ್ದುಗುಂಡುಗಳ ಕೊರತೆ ಕಂಡುಬರುತ್ತದೆ.

ಸಂಪೂರ್ಣವಾಗಿ-ಸಜ್ಜುಗೊಳ್ಳದ ಸೇನೆಯನ್ನು ಸಮುರಾಯ್‌‌ಗಳು ಗುಂಪುಗುಂಪಾಗಿ ಸುತ್ತುವರಿದು ಕೆಲವೇ ಕ್ಷಣಗಳಲ್ಲಿ ಅವರನ್ನು ಹೊಡೆದೋಡಿಸಿ, ಗ್ಯಾಂಟ್‌ನನ್ನು ಸಾಯಿಸುತ್ತಾರೆ ಮತ್ತು ಯುದ್ಧಭೂಮಿಯಿಂದ ಹಿಂದೆಗೆದುಕೊಳ್ಳುವಂತೆ ಬ್ಯಾಗ್ಲೆಯ ಮೇಲೆ ಒತ್ತಡ ಹೇರುತ್ತಾರೆ. ಓರ್ವ ಅಶ್ವಸೈನ್ಯದ ಸಿಪಾಯಿಯಾಗಿ ತಾನು ಹೊಂದಿದ್ದ ಅನುಭವವನ್ನು ಬಳಸಿಕೊಂಡು, ಬಾಗುಕತ್ತಿ ಮತ್ತು ರಿವಾಲ್ವರ್‌ನ ನೆರವಿನೊಂದಿಗೆ ಆಲ್‌ಗ್ರೆನ್‌ ಹಲವಾರು ಸಮುರಾಯ್‌ಗಳನ್ನು ಸಾಯಿಸುತ್ತಾನೆ; ಆದರೆ, ಕುದುರೆ-ಸವಾರಿ ಮಾಡಿಕೊಂಡು ಬರುತ್ತಿರುವ ಓರ್ವ ಸಮುರಾಯ್‌ ಅವನೆಡೆಗೆ ದಾಳಿಮಾಡಲು ಮುನ್ನುಗ್ಗುವಾಗ, ಮತ್ತು ಅದೇ ವೇಳೆಗೆ ಓರ್ವ ಕಾಲಾಳು ಭರ್ಜಿಯೊಂದಿಗೆ ಮುನ್ನುಗ್ಗುತ್ತಾ ಅವನ ಕುದುರೆಯನ್ನು ಬೀಳಿಸಿದಾಗ ಚಂಚಲಗೊಂಡ ಆಲ್‌ಗ್ರೆನ್‌ ತನ್ನ ಕುದುರೆಯಿಂದ ಕೆಳಗುರುಳುತ್ತಾನೆ. ಆದರೂ ಸಹ ಸೋಲೊಪ್ಪಿಕೊಳ್ಳಲು ನಿರಾಕರಿಸುವ ಅವನು, ಒಂದು ಬಿಳಿಯ ಹುಲಿಯನ್ನು ಚಿತ್ರಿಸಿರುವ ಒಂದು ಧ್ವಜದೊಂದಿಗೆ ಅಲಂಕರಿಸಲ್ಪಟ್ಟ ಒಂದು ಮುರಿದ ಭರ್ಜಿಯನ್ನು ಬಳಸಿಕೊಂಡೇ ಹಲವಾರು ಸಮುರಾಯ್‌‌ಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುತ್ತಾನೆ. ಭರ್ಜಿಯ ಮೇಲಿನ ಧ್ವಜವು ಕಾಟ್ಸುಮೊಟೊಗೆ ತಾನು ಧ್ಯಾನವನ್ನು ಮಾಡುವ ಸಮಯದಲ್ಲಿ ಅನುಭವಕ್ಕೆ ಬಂದಿದ್ದ ಒಂದು ಅಂತರ್ದೃಷ್ಟಿಯನ್ನು ನೆನಪಿಸುತ್ತದೆ; ಇದು ಒಂದು ಬಿಳಿಯ ಹುಲಿಯು ತನ್ನ ದಾಳಿಕೋರರನ್ನು ಎದುರಿಸುತ್ತಾ ಹೋರಾಡುತ್ತಿರುವಂತೆ ಕಂಡ ದೃಷ್ಟಿಯಾಗಿರುತ್ತದೆ. ಕೆಲವೇ ಸಮಯದ ಹಿಂದೆ ಗ್ಯಾಂಟ್‌ಗೆ ಒಂದು ಮಾರಕ ಹೊಡೆತವನ್ನು ನೀಡಿದ್ದ ಕೆಂಪು-ಮುಖವಾಡದ ಸಮುರಾಯ್‌ ಮತ್ತು ಕಾಟ್ಸುಮೊಟೊನ ಭಾವನಾದ ಹಿರೊಟಾರೊ, ಕೆಳಗೆಬಿದ್ದ ಆಲ್‌ಗ್ರೆನ್‌‌ಗೆ ಒಂದು ಮಾರಕ ಹೊಡೆತವನ್ನು ನೀಡಲು ಸಜ್ಜುಗೊಳ್ಳುತ್ತಾನೆ; ಆದಾಗ್ಯೂ, ತಲೆಬಾಗಲು ಆಲ್‌ಗ್ರೆನ್‌‌ ತಿರಸ್ಕರಿಸುತ್ತಾನೆ ಮತ್ತು ಒಂದು ಭರ್ಜಿಯನ್ನು ಎತ್ತಿಕೊಂಡು, ಕುತ್ತಿಗೆಯಿಂದ ಹಾದುಹೋಗುವಂತೆ ಹಿರೊಟಾರೊಗೆ ಮಾರಕವಾಗಿ ಇರಿಯುತ್ತಾನೆ.

ತಾನು ನೋಡಿದ್ದು ಒಂದು ಶಕುನವಾಗಿರಬೇಕು ಎಂದು ಭಾವಿಸುವ ಕಾಟ್ಸುಮೊಟೊ, ಗಾಯಗೊಂಡ ಆಲ್‌ಗ್ರೆನ್‌ನನ್ನು ತನ್ನ ಯೋಧರು ಮುಗಿಸಿಬಿಡದಂತೆ ಅವರನ್ನು ತಡೆದು, ಅವನನ್ನು ಸೆರೆಯಾಳಾಗಿ ಒಯ್ಯುತ್ತಾನೆ. ಆಲ್‌ಗ್ರೆನ್‌‌ನನ್ನು ಒಂದು ಏಕಾಂತವಾದ ಹಳ್ಳಿಗೆ ಕರೆದೊಯ್ಯಲಾಗುತ್ತದೆ; ಅಲ್ಲಿದ್ದ ಹಿರೊಟಾರೊನ ಕುಟುಂಬಕ್ಕೆ ಸೇರಿದ್ದ ಮನೆಯೊಂದರಲ್ಲಿ ಅವನು ಕ್ರಮೇಣವಾಗಿ ಚೇತರಿಸಿಕೊಳ್ಳುತ್ತಾನೆ; ಅಲ್ಲಿ ಹಿರೊಟಾರೊನ ವಿಧವೆ ಟಾಕಾ, ಅವಳ ಇಬ್ಬರು ಗಂಡುಮಕ್ಕಳು, ಮತ್ತು ಕಾಟ್ಸುಮೊಟೊನ ಮಗನಾದ ನೊಬುಟಾಡ (ಶಿನ್‌ ಕೊಯಮಡಾ) ಒಟ್ಟಿಗೇ ಇರುತ್ತಾರೆ.

ಕಾಲಾನಂತರದಲ್ಲಿ, ಆಲ್‌ಗ್ರೆನ್‌‌ ತನ್ನ ಕುಡಿತದ ಚಟವನ್ನು ಜಯಿಸುತ್ತಾನೆ ಮತ್ತು ಸಮುರಾಯ್‌ಗಳ ಜೀವನಕ್ರಮವಾದ ಬುಷಿಡೊವನ್ನು ಅಭ್ಯಾಸ ಮಾಡುವ ಮೂಲಕ ತನ್ನ ಮನಸ್ಸನ್ನು ತೀಕ್ಷ್ಣಗೊಳಿಸಿಕೊಳ್ಳುತ್ತಾನೆ. ಕಾಟ್ಸುಮೊಟೊ ಮತ್ತು ತನ್ನ ಜನರ ನಡುವೆ ತಾನು ಇದ್ದಾಗ ಕಂಡುಕೊಂಡಿದ್ದಂಥ ಶಾಂತಿಯನ್ನು ತಾನು ಸಂಪೂರ್ಣವಾಗಿ ಎಂದಿಗೂ ಅನುಭವಿಸಲಿಲ್ಲ ಎಂಬುದಾಗಿ ಅವನು ತನ್ನ ದಿನಚರಿಯಲ್ಲಿ ಬರೆದುಕೊಳ್ಳುತ್ತಾನೆ. ಹಿರೊಟಾರೊ ಎಡೆಗಿನ ದೀರ್ಘಕಾಲದ ನಿಷ್ಠೆಯ ಹೊರತಾಗಿಯೂ, ಆಲ್‌ಗ್ರೆನ್‌ಗೋಸ್ಕರ ಟಾಕಾ ರಮ್ಯ ಭಾವನೆಗಳನ್ನು ಬೆಳೆಸಿಕೊಳ್ಳುತ್ತಾಳೆ; ಅದರಲ್ಲೂ ನಿರ್ದಿಷ್ಟವಾಗಿ ತನ್ನ ಮಕ್ಕಳೆಡೆಗೆ ಅವನಲ್ಲಿ ಚಿಗುರುತ್ತಿರುವ ಪಿತೃಸಹಜವಾದ ಬಾಂಧವ್ಯವು ಅವಳ ಗಮನಕ್ಕೆ ಬಂದಾಗ ಅವಳಲ್ಲಿ ಈ ಭಾವನೆ ಬೆಳೆಯುತ್ತದೆ. ನಿಪುಣನಾದ ಕತ್ತಿವರಿಸೆಯ ಗುರುವಾದ ಉಜಿಯೊ (ಹಿರೋಯುಕಿ ಸನಾಡಾ) ಮಾರ್ಗದರ್ಶನದ ಅಡಿಯಲ್ಲಿ ಆಲ್‌ಗ್ರೆನ್‌‌ ಕತ್ತಿವರಿಸೆಯನ್ನು ಅಧ್ಯಯನ ಮಾಡುತ್ತಾನೆ ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸಂಭಾಷಿಸುವ ಮೂಲಕ ಜಪಾನಿ ಭಾಷೆಯಲ್ಲಿ ನಿರರ್ಗಳತೆಯನ್ನು ಗಳಿಸುತ್ತಾನೆ; ಮತ್ತು ಹಾಗೆ ಮಾಡುವ ಮೂಲಕ ಆತ ಅವರ ಗೌರವವನ್ನು ಸಂಪಾದಿಸುತ್ತಾನೆ. ಒಂದು ರಾತ್ರಿ, ಜನರು ಒಂದು ಹಾಸ್ಯನಾಟಕವನ್ನು ವೀಕ್ಷಿಸುತ್ತಿದ್ದಾಗ, ನಿಂಜಾ ಕೊಲೆಪಾತಕಿಗಳ ಗುಂಪೊಂದು ಹಳ್ಳಿಯ ಮೇಲೆ ದಾಳಿಮಾಡುತ್ತದೆ. ಕೊಲೆಪಾತಕಿಗಳು ಕಾಟ್ಸುಮೊಟೊನನ್ನು ಗುರಿಯಾಗಿಟ್ಟುಕೊಂಡು ಅಡ್ಡಬಿಲ್ಲು ಬಾಣಗಳು ಮತ್ತು ಷುರಿಕೆನ್‌‌‌ಗಳಿಂದ ದಾಳಿಮಾಡಿದಾಗ, ಕಾಟ್ಸುಮೊಟೊನ ಜೀವವನ್ನು ಉಳಿಸುವ ಮೂಲಕ ಸಮುರಾಯ್‌‌ಗಳ ಗೌರವ ಮತ್ತು ಹೊಗಳಿಕೆಯನ್ನು ಆಲ್‌ಗ್ರೆನ್‌ ಪಡೆಯುತ್ತಾನೆ; ಈ ದಾಳಿಯಿಂದ ಕಾಟ್ಸುಮೊಟೊನ ಪಕ್ಕದಲ್ಲಿದ್ದ ನಟ ಸಾಯುತ್ತಾನೆ. ನಿಂಜಾಗಳನ್ನು ಸೋಲಿಸುವಲ್ಲಿ ಸಮುರಾಯ್‌ಗಳು ಯಶಸ್ಸು ಪಡೆಯುತ್ತಾರಾದರೂ, ಅವರ ಕಡೆಯೂ ಹಲವು ನಷ್ಟಗಳಾಗುತ್ತವೆ.

ಕಾಟ್ಸುಮೊಟೊ ಇದನ್ನು ದೃಢೀಕರಿಸದಿದ್ದರೂ ಸಹ, ಸದರಿ ದಾಳಿಯು ಒಮುರಾನ ಆದೇಶದ ಅನುಸಾರವಾಗಿಯೇ ನಡೆದಿದೆ ಎಂದು ಆಲ್‌ಗ್ರೆನ್‌‌ ಊಹಿಸುತ್ತಾನೆ.

ವಸಂತಕಾಲದಲ್ಲಿ, ಆಲ್‌ಗ್ರೆನ್‌‌ನನ್ನು ಮರಳಿ ಟೋಕಿಯೊಗೆ ಕರೆದೊಯ್ಯಲಾಯಿತು. ಅಲ್ಲಿ ಸೇನೆಯು ಬ್ಯಾಗ್ಲೆಯ ನಿಯಂತ್ರಣದಡಿಯಲ್ಲಿ ಈಗ ಸುಸಂಘಟಿತವಾಗಿದೆ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಬಂದಿರುವ ಹಾವಿಟ್ಸರ್‌‌ ತುಪಾಕಿಗಳು ಮತ್ತು ಗೊಂಚಲುಕೋವಿ ಫಿರಂಗಿಗಳಿಂದ ಸಜ್ಜುಗೊಂಡಿದೆ ಎಂಬುದು ಅವನಿಗೆ ತಿಳಿದುಬರುತ್ತದೆ. ಒಂದು ವೇಳೆ ಸಮುರಾಯ್‌‌ ದಂಗೆಯನ್ನು ದಮನಮಾಡಲು ಆಲ್‌ಗ್ರೆನ್‌‌ ಸಮ್ಮತಿಸುವುದಾದರೆ, ಅವನನ್ನು ಸೇನೆಯ ಅಧಿಪತಿಯನ್ನಾಗಿಸುವ ಪ್ರಸ್ತಾವವನ್ನು ಒಮುರಾ ಅವನ ಮುಂದಿಡುತ್ತಾನೆ; ಆದರೆ ಆಲ್‌ಗ್ರೆನ್‌‌ ಅದನ್ನು ನಿರಾಕರಿಸುತ್ತಾನೆ. ಒಂದು ವೇಳೆ ತಮ್ಮ ಆಶಯಗಳ ಕುರಿತು ಕಾಟ್ಸುಮೊಟೊನನ್ನು ಆಲ್‌ಗ್ರೆನ್‌‌ ಎಚ್ಚರಿಸಿದ್ದೇ ಆದಲ್ಲಿ, ಆಲ್‌ಗ್ರೆನ್‌‌ನನ್ನು ಸಾಯಿಸುವಂತೆ ಒಮುರಾ ತನ್ನ ಜನರಿಗೆ ರಹಸ್ಯವಾಗಿ ಆದೇಶಿಸುತ್ತಾನೆ. ಅದೇ ವೇಳೆಗೆ, ಕಾಟ್ಸುಮೊಟೊ ತನ್ನ ಸಲಹೆಯನ್ನು ಹಿಂದೊಮ್ಮೆ ತನ್ನ ವಿದ್ಯಾರ್ಥಿಯಾಗಿದ್ದ ಯುವ ಚಕ್ರವರ್ತಿಯ ಮುಂದೆ ಪ್ರಸ್ತಾವಿಸುತ್ತಾನೆ. ಸಿಂಹಾಸನದ ಮೇಲಿನ ಚಕ್ರವರ್ತಿಯ ಹಿಡಿತವು ತಾನು ಯೋಚಿಸಿದ್ದಕ್ಕಿಂತಲೂ ದುರ್ಬಲವಾಗಿದೆ ಎಂಬುದು, ಮತ್ತು ಆತ ಅತ್ಯಾವಶ್ಯಕವಾಗಿ ಒಮುರಾನ ಓರ್ವ ಕೈಗೊಂಬೆಯಾಗಿದ್ದಾನೆ ಎಂಬುದು ಅವನಿಗೆ ಅರಿವಾಗುತ್ತದೆ. ಸಮುರಾಯ್‌‌ಗಳು ಬಹಿರಂಗವಾಗಿ ಕತ್ತಿಗಳನ್ನು ಒಯ್ಯುವುದನ್ನು ನಿಷೇಧಿಸುವ ಹೊಸ ಕಾನೂನುಗಳನ್ನು ಪಾಲಿಸಲು ಕಾಟ್ಸುಮೊಟೊ ತಿರಸ್ಕರಿಸಿದಾಗ, ಅವನನ್ನು ಬಂಧಿಸಿ ಟೋಕಿಯೊದಲ್ಲಿನ ಅವನ ನಿವಾಸದಲ್ಲಿ ಕೂಡಿಹಾಕಲಾಗುತ್ತದೆ. ಕಾಟ್ಸುಮೊಟೊ ಮೇಲೆ ಒಂದು ಹತ್ಯೆಯ ಪ್ರಯತ್ನವಾಗಬಹುದು ಎಂದು ನಿರೀಕ್ಷಿಸುವ ಆಲ್‌ಗ್ರೆನ್‌‌ ನೇರವಾಗಿ ಅವನ ನಿವಾಸದ ಬಳಿಗೆ ತೆರಳುತ್ತಾನಾದರೂ, ಹೊಂಚಿಕಾಯುತ್ತಿದ್ದ ಒಮುರಾನ ಜನರಿಂದ ಹಠಾತ್‌ ದಾಳಿಗೊಳಗಾಗುತ್ತಾನೆ; ತಾನು ಕಾಟ್ಸುಮೊಟೊನ ಶಿಬಿರದಲ್ಲಿದ್ದಾಗ ಕಲಿತಿದ್ದ ಕದನ ಕಲೆಗಳನ್ನು ವಿವೇಚನಾಯುಕ್ತವಾಗಿ ಬಳಸುವ ಮೂಲಕ ಆಲ್‌ಗ್ರೆನ್‌‌ ಸ್ವಲ್ಪದರಲ್ಲಿಯೇ ಸಾವನ್ನು ತಪ್ಪಿಸಿಕೊಳ್ಳುತ್ತಾನೆ. ಉಜಿಯೊ, ನೊಬುಟಾಡ, ಮತ್ತು ಗ್ರಹಾಂ ನೆರವಿನೊಂದಿಗೆ ಕಾಟ್ಸುಮೊಟೊನನ್ನು ಆಲ್‌ಗ್ರೆನ್‌‌ ಬಂಧನದಿಂದ ಮುಕ್ತನಾಗಿಸುತ್ತಾನೆ. ಅವರ ಪಲಾಯನದ ಸಂದರ್ಭದಲ್ಲಿ, ನೊಬುಟಾಡ ಮಾರಕವಾಗಿ ಗಾಯಗೊಳ್ಳುತ್ತಾನೆ ಮತ್ತು ತನ್ನ ತಂದೆಯ ತಪ್ಪಿಸಿಕೊಳ್ಳುವಿಕೆಗೆ ನೆರವಾಗಲು ಉಳಿದುಕೊಳ್ಳುತ್ತಾನೆ; ಕೇವಲ ತುಪಾಕಿಯ ಗುಂಡಿನ ಸುರಿಮಳೆಗಳಿಂದ ಮಾತ್ರವೇ ಸಾಯಿಸಲ್ಪಡಬಹುದಾದ ತನ್ನ ವೈರಿಗಳ ಮೇಲೆ ಮಾರಕವಾಗಿ ಗಾಯಗೊಂಡ ನೊಬುಟಾಡನು ಆಕ್ರಮಣ ಮಾಡುವಾಗ ಆಲ್‌ಗ್ರೆನ್‌ ಸುಮ್ಮನೇ ಪ್ರೇಕ್ಷಕನಂತೆ ನೋಡುತ್ತಿರುತ್ತಾನೆ.

ಒಮುರಾ ಮತ್ತು ಬ್ಯಾಗ್ಲೆಯಿಂದ ಆದೇಶಿಸಲ್ಪಟ್ಟ ಚಕ್ರಾಧಿಪತ್ಯದ ಒಂದು ಬೃಹತ್‌‌‌ ಸೇನಾ ತುಕಡಿಯು ಸಮುರಾಯ್‌‌‌ಗಳನ್ನು ಎದುರಿಸಲು ಶಿಸ್ತಿನಿಂದ ಸಾಗುತ್ತಿದೆ ಎಂಬ ಮಾಹಿತಿಯನ್ನು ಕಾಟ್ಸುಮೊಟೊ ಸ್ವೀಕರಿಸಿದಾಗ, ತನ್ನ ಮಗನನ್ನು ಕಳೆದುಕೊಂಡಿದ್ದರ ಕುರಿತಾಗಿ ಅವನಿನ್ನೂ ಶೋಕಿಸುತ್ತಿರುತ್ತಾನೆ. ಕೇವಲ ೫೦೦ ಸಂಖ್ಯೆಯಲ್ಲಿರುವ ಸಮುರಾಯ್‌ಗಳ ಒಂದು ಪ್ರತಿದಾಳಿಯ-ಪಡೆಯು ಜಮಾವಣೆಗೊಳ್ಳುತ್ತದೆ. ಥರ್ಮೊಪೈಲೆ ಕದನದ ಉದಾಹರಣೆಯನ್ನು ಆಲ್‌ಗ್ರೆನ್‌‌ ನೀಡುತ್ತಾ, ಸರಿಸುಮಾರು ೨೫೦,೦೦೦ಕ್ಕಿಂತಲೂ ಹೆಚ್ಚಿದ್ದ (ಈ ಸಂಖ್ಯೆಯು ೧ ದಶಲಕ್ಷದಷ್ಟಿತ್ತು ಎಂಬುದಾಗಿ ಆಲ್‌ಗ್ರೆನ್‌‌ ಪ್ರತಿಪಾದಿಸುತ್ತಾನೆ) ಪರ್ಷಿಯನ್ನರ ಒಂದು ಬೃಹತ್‌ ಎದುರಾಳಿ ಪಡೆಯೊಂದಿಗೆ ಕೇವಲ ೩೦೦ ಮಂದಿ ಸ್ಪಾರ್ಟದವರನ್ನು ಒಳಗೊಂಡಿದ್ದ ಒಂದು ಸಣ್ಣ ಸೈನ್ಯವು ಹೇಗೆ ಹೋರಾಡಿತು ಎಂಬುದನ್ನು ವಿವರಿಸುತ್ತಾನೆ ಮತ್ತು ಹೀಗೆ ಎದುರಿಸುವಾಗ ಸದರಿ ಚಿಕ್ಕ ಸೈನ್ಯವು ಶತ್ರುವಿನ ಅತಿಯಾದ ಆತ್ಮವಿಶ್ವಾಸ ಹಾಗೂ ಭೂಪ್ರದೇಶವನ್ನು ಹೇಗೆ ತನ್ನ ಪ್ರಯೋಜನಕ್ಕೆ ತಕ್ಕಂತೆ ಬಳಸಿಕೊಂಡಿತು ಎಂದು ತಿಳಿಸುತ್ತಾನೆ; ಇದೇ ರೀತಿಯ ಒಂದು ಯುದ್ಧತಂತ್ರವು ತಮ್ಮ ಶತ್ರುಗಳ ಫಿರಂಗಿವಿದ್ಯೆಯ ಪರಿಣಾಮಕಾರಿತ್ವವನ್ನು ತಗ್ಗಿಸುತ್ತದೆ ಎಂದು ಆಲ್‌ಗ್ರೆನ್‌‌ ತರ್ಕಿಸುತ್ತಾನೆ. ಕದನದ ಮುನ್ನಾದಿನದಂದು, ಆಲ್‌ಗ್ರೆನ್‌ಗೆ ಅವನದೇ ಆದ ಕಟಾನವನ್ನು ನೀಡಲಾಗುತ್ತದೆ. ಟಾಕಾ ಕೂಡಾ ತನ್ನ ಮೃತ ಗಂಡನ ರಕ್ಷಾಕವಚವನ್ನು ಅವನಿಗೆ ನೀಡುತ್ತಾಳೆ, ಮತ್ತು ಆಲ್‌ಗ್ರೆನ್‌‌ ಅಲ್ಲಿಂದ ಹೊರಡುವುದಕ್ಕೆ ಮುಂಚಿತವಾಗಿ ಅವರಿಬ್ಬರು ಪರಸ್ಪರ ಚುಂಬಿಸಿಕೊಳ್ಳುತ್ತಾರೆ.

ಸಮುರಾಯ್‌‌ಗಳ ದಂಗೆಕೋರ ಪಡೆಗೆ ಚಕ್ರಾಧಿಪತ್ಯದ ಸೇನೆಯು ಮುಖಾಮುಖಿಯಾಗಿ ನಿಂತಾಗ, ಸಮುರಾಯ್‌‌ಗಳು ಎತ್ತರದ ಪ್ರದೇಶಕ್ಕೆ ಹಿಮ್ಮೆಟ್ಟುತ್ತಾರೆ ಮತ್ತು ತನ್ಮೂಲಕ ಚಕ್ರಾಧಿಪತ್ಯದ ಪಡೆಗಳು ತಮ್ಮ ಅತ್ಯುತ್ಕೃಷ್ಟ ಸಿಡಿಮದ್ದುಗಳ ಶಕ್ತಿಯನ್ನು ಬಳಸುವುದು ತಪ್ಪಿದಂತಾಗುತ್ತದೆ. ನಿರೀಕ್ಷಿಸಿದಂತೆ, ಸಮುರಾಯ್‌‌ಗಳನ್ನು ಒಂದು ಬಲೆಯೊಳಗೆ ಕೆಡವಲು ಮುಂದುವರಿಯುವಂತೆ ಪದಾತಿ ಸೈನ್ಯಕ್ಕೆ ಒಮುರಾ ತತ್‌ಕ್ಷಣ ಆದೇಶಿಸುತ್ತಾನೆ. ಶತ್ರುವಿನ ತತ್‌ಕ್ಷಣದ ಹೋರಾಟದ ಬಲವನ್ನು ಅರ್ಧದಲ್ಲಿಯೇ ತುಂಡರಿಸುವ ಸಲುವಾಗಿ, ಸಮುರಾಯ್‌ಗಳು ಅಗ ಪದಾತಿದಳದ ಸೈನಿಕರ ಮೇಲೆ ಬಾಣಗಳ ಸುರಿಮಳೆಗರೆಯುತ್ತಾರೆ. ತಮ್ಮ ಕತ್ತಿಗಳನ್ನು ಸೆಳೆಯುವ ಮೂಲಕ ಸಮುರಾಯ್‌ಗಳು, ಅದರಲ್ಲೂ ಮುಖ್ಯವಾಗಿ ಆಲ್‌ಗ್ರೆನ್‌‌ ಮತ್ತು ಕಾಟ್ಸುಮೊಟೊ, ಗೊಂದಲಗೊಂಡ ಮತ್ತು ಗಾಯಗೊಂಡ ಪದಾತಿದಳದ ಸೈನಿಕರ ಮೇಲೆ ದಾಳಿಮಾಡುತ್ತಾರೆ. ಚಕ್ರಾಧಿಪತ್ಯದ ಪದಾತಿ ಸೈನ್ಯದ ಎರಡನೇ ಅಲೆಯೊಂದು ಹಿಂಬಾಲಿಸಿಕೊಂಡು ಬರುತ್ತದೆ ಮತ್ತು ಅದೇ ರೀತಿಯಲ್ಲಿ ಸಮುರಾಯ್‌‌ ಅಶ್ವಸೈನ್ಯವೂ ಬರುತ್ತದೆ; ಇದರ ಪರಿಣಾಮವಾಗಿ ಒಂದು ನಿರ್ದಯದ ಉಗ್ರ ಹೋರಾಟವು ನಡೆದು, ಚಕ್ರಾಧಿಪತ್ಯದ ಯೋಧರು ಅಂತಿಮವಾಗಿ ಹಿಮ್ಮೆಟ್ಟುವುದಕ್ಕೆ ಮುಂಚಿತವಾಗಿ ಎರಡೂ ಕಡೆಗಳಲ್ಲಿ ಅನೇಕರು ಸಾವನ್ನಪ್ಪುತ್ತಾರೆ.

ಚಕ್ರಾಧಿಪತ್ಯದ ಹೊಸ ಪಡೆಗಳು ಬರುತ್ತಿವೆ ಎಂಬುದನ್ನು ಹಾಗೂ ಎರಡನೆಯ ಕದನವು ನಡೆದರೆ ಸೋಲುವಿಕೆಯು ಅನಿವಾರ್ಯ ಎಂಬುದನ್ನು ಮನಗಾಣುವ ಬದುಕುಳಿದಿರುವ ಸಮುರಾಯ್‌ಗಳು, ಒಂದು ಅಂತಿಮವಾದ, ವಿಧಿ-ಆರೋಪಿತ ಅಶ್ವಾರೋಹಿ ಆಕ್ರಮಣವನ್ನು ನಡೆಸಲು ನಿರ್ಣಯಿಸುತ್ತಾರೆ. ಕದನದ ಸಂದರ್ಭದಲ್ಲಿ, ಕಾಟ್ಸುಮೊಟೊನ ಭುಜಕ್ಕೆ ಬ್ಯಾಗ್ಲೆ ಗುಂಡುಹಾರಿಸುತ್ತಾನೆ, ಆದರೆ ಸಮುರಾಯ್‌‌ಗಳನ್ನು ಅವನು ಮುಗಿಸುವುದಕ್ಕೆ ಮುಂಚಿತವಾಗಿಯೇ ಬ್ಯಾಗ್ಲೆಯೆಡೆಗೆ ತನ್ನ ಕತ್ತಿಯನ್ನು ಬೀಸುವ ಆಲ್‌ಗ್ರೆನ್‌‌ ಅವನನ್ನು ಸಾಯಿಸುತ್ತಾನೆ. ಚಕ್ರಾಧಿಪತ್ಯದ ಸೇನೆಯ ಹಿಂದಿನ ಸಾಲನ್ನು ಸಮೀಪಿಸಿದ ಮೇಲೆ ಮತ್ತು ಒಮುರಾನನ್ನು ಹೆದರಿಸುವಷ್ಟರ ಮಟ್ಟಿಗೆ ಸಾಕಷ್ಟು ಮುಂದುವರೆದ ಮೇಲೆ, ಸಮುರಾಯ್‌ಗಳು ಗೊಂಚಲುಕೋವಿ ಫಿರಂಗಿಯ ಗುಂಡಿನ ದಾಳಿಯಿಂದ ಅಂತಿಮವಾಗಿ ಸಾಯಿಸಲ್ಪಡುತ್ತಾರೆ. ಸಾಯುತ್ತಿರುವ ಸಮುರಾಯ್‌ನ ನೋಟವನ್ನು ದಾಟಿಕೊಂಡು ಬರುವ, ಮೂಲತಃ ಆಲ್‌ಗ್ರೆನ್‌‌ನಿಂದ ತರಬೇತಿಯನ್ನು ಪಡೆದಿರುವ ಚಕ್ರಾಧಿಪತ್ಯದ ಓರ್ವ ಲೆಫ್ಟಿನೆಂಟ್‌, ಒಮುರಾನ ಇಚ್ಛೆಗೆ ವಿರುದ್ಧವಾಗಿ ಕದನ ವಿರಾಮವನ್ನು ಜಾರಿಗೆ ತರಲು ಗೊಂಚಲುಕೋವಿ ಫಿರಂಗಿಗಳ ಪಡೆಗಳಿಗೆ ಆದೇಶಿಸುತ್ತಾನೆ. ಬುಷಿಡೊವನ್ನು ಆಚರಿಸುತ್ತಿದ್ದ ಕಾಟ್ಸುಮೊಟೊ, ಹೊಟ್ಟೆಬಗೆತವನ್ನು ನಿರ್ವಹಿಸುವಲ್ಲಿ ತನಗೆ ನೆರವಾಗುವಂತೆ ಆಲ್‌ಗ್ರೆನ್‌‌ನನ್ನು ಕೇಳಿಕೊಳ್ಳುತ್ತಾನೆ; ಆಲ್‌ಗ್ರೆನ್‌‌ ಅದನ್ನು ಪಾಲಿಸಿದಾಗ ಕಾಟ್ಸುಮೊಟೊನ ಜೀವ ಕೊನೆಗೊಳ್ಳುತ್ತದೆ. ಕೆಳಗೆಬಿದ್ದ ಸಮುರಾಯ್ ಸಮ್ಮುಖದಲ್ಲಿ ತಲೆಬಾಗಿಸುವ ಮೂಲಕ ಚಕ್ರಾಧಿಪತ್ಯದ ಪಡೆಗಳು ತಮ್ಮ ಗೌರವವನ್ನು ಸಲ್ಲಿಸುತ್ತವೆ.

ನಂತರ, ಜಪಾನಿ ಸರ್ಕಾರಕ್ಕೆ ಫಿರಂಗಿ-ಬಂದೂಕುಗಳನ್ನು ಮಾರಾಟಮಾಡುವುದಕ್ಕೆ USಗೆ ಏಕಮಾತ್ರದ ಹಕ್ಕುಗಳನ್ನು ನೀಡುವ ಒಡಂಬಡಿಕೆಯೊಂದಕ್ಕೆ ಚಕ್ರವರ್ತಿಯು ಸಹಿಹಾಕುವಂಥ ಭೂಮಿಕೆಯನ್ನು ಅಮೆರಿಕಾದ ರಾಯಭಾರಿಗಳು ಸಜ್ಜುಗೊಳಿಸುತ್ತಿದ್ದಂತೆ, ಕಾಟ್ಸುಮೊಟೊನ ಕತ್ತಿಯನ್ನು ಆಲ್‌ಗ್ರೆನ್‌‌ ಒಂದು ಕಾಣಿಕೆಯಾಗಿ ಚಕ್ರವರ್ತಿಗೆ ನೀಡುತ್ತಾನೆ. ಈ ಸಂದೇಶವನ್ನು ಅರ್ಥಮಾಡಿಕೊಳ್ಳುವ ಚಕ್ರವರ್ತಿಯು, ಸದರಿ ಒಡಂಬಡಿಕೆಯ ವ್ಯವಹಾರವು ಜಪಾನ್‌ನ ಅತ್ಯುತ್ತಮ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂಬುದಾಗಿ ಅಮೆರಿಕಾದ ರಾಯಭಾರಿಗೆ ತಿಳಿಸುತ್ತಾನೆ. ಇದಕ್ಕೆ ಒಮುರಾ ಆಕ್ಷೇಪಿಸಿದಾಗ, ತಾನು ಒಮುರಾನಿಂದ ಆಳುವಿಕೆಗೆ ಒಳಗಾಗುವ ಅಗತ್ಯವಿಲ್ಲ ಎಂಬುದನ್ನು ಮನಗಾಣುವ ಚಕ್ರವರ್ತಿಯು, ಅವನೆಲ್ಲಾ ಆಸ್ತಿಪಾಸ್ತಿಗಳು ಮತ್ತು ಸಂಪತ್ತುಗಳನ್ನು ವಶಪಡಿಸಿಕೊಳ್ಳುತ್ತಾನೆ. ಒಮುರಾ ಪ್ರತಿಭಟಿಸಲು ಪ್ರಯತ್ನಿಸಿದಾಗ, ಒಂದು ವೇಳೆ ಸಹಿಸಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಅಗೌರವವು ಮಹತ್ತರವಾಗಿ ಕಂಡುಬಂದಲ್ಲಿ ಹೊಟ್ಟೆಬಗೆತವನ್ನು ಮಾಡಿಕೊಳ್ಳಲೆಂದು, ಚಕ್ರವರ್ತಿ ಅವನಿಗೆ ಕಾಟ್ಸುಮೊಟೊನ ಕತ್ತಿಯನ್ನು ನೀಡುತ್ತಾನೆ. ಒಮುರಾ ಹಾಗೇಸುಮ್ಮನೆ ತನ್ನ ತಲೆಯನ್ನು ತಗ್ಗಿಸಿಕೊಂಡು, ಅಲ್ಲಿಂದ ಹೊರನಡೆಯುತ್ತಾನೆ.

ಸೈಮನ್‌ ಗ್ರಹಾಂನಿಂದ ಒದಗಿಸಲ್ಪಟ್ಟ ಒಂದು ನಿರೂಪಣೆಯ ಅಡಿಯಲ್ಲಿ, ಸಮುರಾಯ್‌‌ ಹಳ್ಳಿಗೆ ಮತ್ತು ಟಾಕಾಳ ಕಡೆಗೆ ಆಲ್‌ಗ್ರೆನ್‌ ಹಿಂದಿರುಗುವುದರೊಂದಿಗೆ ಚಲನಚಿತ್ರವು ಮುಕ್ತಾಯಗೊಳ್ಳುತ್ತದೆ. "ನಾವೆಲ್ಲರೂ ಬಯಸುವ, ಮತ್ತು ನಮ್ಮಲ್ಲಿ ಕೆಲವೇ ಮಂದಿಗೆ ದೊರೆಯುವ" ಶಾಂತಿಯ ಒಂದು ವಿಧಾನವನ್ನು ಆಲ್‌ಗ್ರೆನ್‌ ಕಂಡುಕೊಂಡಿದ್ದಾನೆ ಎಂಬುದಾಗಿ ಗ್ರಹಾಂ ತಾತ್ತ್ವಿಕವಾಗಿ ತೀರ್ಮಾನಿಸುತ್ತಾನೆ.

ಪಾತ್ರವರ್ಗ[ಬದಲಾಯಿಸಿ]

 • ಟಾಮ್‌ ಕ್ರೂಸ್‌: ವಾಷಿತಾ ನದಿಯ ಬಳಿಯಲ್ಲಿ ನಡೆದ ದೇಶೀಯ ಅಮೆರಿಕನ್‌‌ ನಾಗರಿಕರ ಹತ್ಯಾಕಾಂಡದಿಂದ ಪದೇ ಪದೇ ಕಾಡಿಸಲ್ಪಟ್ಟ, ನಾಗರಿಕ ಯುದ್ಧ ಮತ್ತು ಭಾರತದ ಯುದ್ಧಗಳ ಓರ್ವ ಮಾಜಿ ಯೋಧನಾದ ಕ್ಯಾಪ್ಟನ್‌ ನಾಥನ್‌ ಆಲ್‌ಗ್ರೆನ್‌‌ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ. ಆಲ್‌ಗ್ರೆನ್‌‌ ಬ್ರಿಟಿಷ್‌ ಸಾಮ್ರಾಜ್ಯದಲ್ಲಿ ಹುಟ್ಟಿದವನಾದರೂ ಸಹ, ಅವನೊಬ್ಬ ದೇಶೀಕರಿಸಲ್ಪಟ್ಟ ಅಮೆರಿಕನ್‌ ಆಗಿರುತ್ತಾನೆ. ತಾನು ಮಾಡುತ್ತಿದ್ದ ಉದ್ಯೋಗದಿಂದ ವಜಾಗೊಳಿಸಲ್ಪಟ್ಟಾಗ, ಒಂದು ಭಾರೀ ಮೊತ್ತದ ಹಣಕ್ಕೆ ಪ್ರತಿಯಾಗಿ, ಮೆಯಿಜಿ ಪುನಃ-ಪ್ರತಿಷ್ಠಾಪನೆಯ ಸರ್ಕಾರದ ಒತ್ತಾಯದ ದಾಖಲಾತಿಯ ಮೊದಲ ಪಾಶ್ಚಾತ್ಯ-ಶೈಲಿಯ ಸೇನೆಗೆ ತರಬೇತು ನೀಡುವ ಮೂಲಕ ಆ ಸರ್ಕಾರಕ್ಕೆ ನೆರವಾಗಲು ಅವನು ಸಮ್ಮತಿಸುತ್ತಾನೆ. ಸೇನೆಯ ಮೊದಲ ಕದನದ ಅವಧಿಯಲ್ಲಿ ಸಮುರಾಯ್‌‌ ಕಾಟ್ಸುಮೊಟೊನಿಂದ ಅವನು ಸೆರೆಹಿಡಿಯಲ್ಪಟ್ಟು, ಕಾಟ್ಸುಮೊಟೊನ ಮಗನ ಹಳ್ಳಿಗೆ ಕರೆದೊಯ್ಯಲ್ಪಡುತ್ತಾನೆ; ಅಲ್ಲಿ ಆತನಿಗೆ ಸಮುರಾಯ್‌ಗಳ ಕಾರ್ಯಾಚರಣಾ ವಿಧಾನದಲ್ಲಿ ಆಸಕ್ತಿ ಹುಟ್ಟುತ್ತದೆ ಮತ್ತು ಅವರ ಉದ್ದೇಶದಲ್ಲಿ ತಾನೂ ಸೇರಿಕೊಳ್ಳಲು ಅವನು ನಿರ್ಧರಿಸುತ್ತಾನೆ. ಸಂಪ್ರದಾಯಶರಣ ಜಪಾನಿಯರ ಸಂಸ್ಕೃತಿಯ ಕುರಿತಾದ ಅವನ ಅನಿಸಿಕೆಗಳನ್ನು ಅವನ ದಿನಚರಿಯ ನಮೂದುಗಳು ಹೊರಗೆಡಹುತ್ತವೆ, ಮತ್ತು ಹೆಚ್ಚೂಕಮ್ಮಿ ಕೆಲವೇ ಸಮಯದಲ್ಲಿ ಅವು ಹೊಗಳಿಕೆಯಾಗಿ ಮಾರ್ಪಡುತ್ತವೆ.
 • ಕೆನ್‌ ವತಾನಬೆ: ಸಮುರಾಯ್‌‌ ಧಣಿ ಕಾಟ್ಸುಮೊಟೊ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಹಿಂದೊಮ್ಮೆ ಚಕ್ರವರ್ತಿ ಮೆಯಿಜಿಯ ಅತ್ಯಂತ ನಂಬುಗೆಯ ಶಿಕ್ಷಕನಾಗಿದ್ದ ಈತ ಓರ್ವ ಯೋಧ-ಕವಿಯಾಗಿರುತ್ತಾನೆ. ಶ್ರೀಮಾನ್‌‌ ಒಮುರಾನ ಅಧಿಕಾರಿಶಾಹಿಯ ಸುಧಾರಣಾ ಕಾರ್ಯನೀತಿಗಳಿಂದ ಅಸಂತೋಷಕ್ಕೆ ಒಳಗಾಗುವ ಈತ, ಚಕ್ರಾಧಿಪತ್ಯದ ಸೇನೆಯ ವಿರುದ್ಧ ಒಂದು ಬಂಡಾಯವನ್ನು ಸಂಘಟಿಸಲು ಮುಂದಾಗುತ್ತಾನೆ. ನಿಜ ಜೀವನದ ಸಮುರಾಯ್‌‌ ಸೈಗೋ ಟಕಾಮೊರಿಯ ಮೇಲೆ ಕಾಟ್ಸುಮೊಟೊ ಪಾತ್ರವು ಅಸ್ಪಷ್ಟವಾಗಿ ಆಧರಿಸಿದೆ.
 • ಶಿನ್‌ ಕೊಯಮಡಾ: ನೊಬುಟಾಡ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಈತ ಕಾಟ್ಸುಮೊಟೊನ ಮಗನಾಗಿದ್ದು, ಸಮುರಾಯ್‌ಗಳು ಶಿಬಿರಹೂಡಿದ್ದ ಹಳ್ಳಿಯ ಧಣಿಯಾಗಿರುತ್ತಾನೆ ಮತ್ತು ಆಲ್‌ಗ್ರೆನ್‌ಗೆ ಈತ ಸಹಾಯಮಾಡುತ್ತಾನೆ. ಜಪಾನಿಯರ ಜೀವನಕ್ರಮವಾದ ಜಪಾನಿಯರ ಸಂಸ್ಕೃತಿ ಮತ್ತು ಜಪಾನಿಯರ ಭಾಷೆಯನ್ನು ಆಲ್‌ಗ್ರೆನ್‌‌ಗೆ ಬೋಧಿಸುವಂತೆ ನೊಬುಟಾಡನಿಗೆ ಸಮುರಾಯ್ ನಾಯಕನಾದ ಕಾಟ್ಸುಮೊಟೊ ಸಲಹೆ ನೀಡುತ್ತಾನೆ.
 • ಟೋನಿ ಗೋಲ್ಡ್‌ವಿನ್‌‌: ಲೆಫ್ಟಿನೆಂಟ್‌ ಕರ್ನಲ್‌‌ ಬ್ಯಾಗ್ಲೆಯ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ೮ನೇ ಅಶ್ವಸೈನ್ಯದ ಪಡೆಯಲ್ಲಿ ಕ್ಯಾಪ್ಟನ್‌‌ ಆಲ್‌ಗ್ರೆನ್‌‌ನ ಆದೇಶಾಧಿಕಾರಿಯಾಗಿದ್ದ ಈತನಿಗೆ ಚಕ್ರಾಧಿಪತ್ಯದ ಸೇನೆಗೆ ತರಬೇತು ನೀಡುವ ಹೊಣೆಹೊರಿಸಲಾಗಿತ್ತು. ಆಲ್‌ಗ್ರೆನ್‌‌ ತನ್ನ ದಿಗ್ಭ್ರಮೆಯಿಂದ ಗುಣಹೊಂದಿ ಆಚೆಬರಲು ಅವಕಾಶ ಮಾಡಿಕೊಡದ ದೇಶೀಯ ಅಮೆರಿಕನ್ನರ ವಾಷಿತಾ ನದಿ ಹತ್ಯಾಕಾಂಡದಲ್ಲಿ ಬ್ಯಾಗ್ಲೆ ವಹಿಸಿದ್ದ ಪಾತ್ರದಿಂದಾಗಿ ಅವನೆಡೆಗೆ ಆಲ್‌ಗ್ರೆನ್‌‌ಗೆ ಒಂದು ರೀತಿಯ ತಿರಸ್ಕಾರವಿರುತ್ತದೆ. ಕಥೆಯ ಒಂದು ಫ್ಲಾಶ್‌ಬ್ಯಾಕ್‌ನಲ್ಲಿ, ಭಾರತೀಯರ ಶಿಬಿರದಲ್ಲಿನ ಮಕ್ಕಳು ಮತ್ತು ಮಹಿಳೆಯರನ್ನು ಬ್ಯಾಗ್ಲೆಯು ಕೊಲ್ಲುತ್ತಿರುವುದನ್ನು ನಾವು ಕಾಣಬಹುದು. ಜನರಲ್‌ ಕಸ್ಟರ್‌‌‌ನೊಂದಿಗೆ ("ತನ್ನದೇ ದಂತಕಥೆಯೊಂದಿಗೆ ಪ್ರೀತಿಯಲ್ಲಿ ಸಿಲುಕಿದ ಓರ್ವ ಕಲೆಗಾರ" ಎಂಬುದಾಗಿ ಇವನ ಕುರಿತು ಆಲ್‌ಗ್ರೆನ್‌‌ ಉಲ್ಲೇಖಿಸುತ್ತಾನೆ) ಬ್ಯಾಗ್ಲೆಯು ನಿಕಟವಾದ ಹೋಲಿಕೆಯನ್ನು ಹೊಂದಿರುತ್ತಾನೆ. ಅಂತಿಮ ಕದನದಲ್ಲಿ, ಬ್ಯಾಗ್ಲೆಯ ಎದೆಯೆಡೆಗೆ ಆಲ್‌ಗ್ರೆನ್‌‌ ತನ್ನ ಕತ್ತಿಯನ್ನು ಬೀಸಿದಾಗ, ಆಲ್‌ಗ್ರೆನ್‌‌ನಿಂದ ಬ್ಯಾಗ್ಲೆಯ ಸಾವು ಸಂಭವಿಸುತ್ತದೆ.
 • ಮಸಾಟೊ ಹರಾಡಾ: ಒಮುರಾ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಚಲನಚಿತ್ರದ ಪ್ರಮುಖ ಪ್ರತಿನಾಯಕನಾದ ಈತ, ಓರ್ವ ಕೈಗಾರಿಕೋದ್ಯಮಿ ಮತ್ತು ಸುಧಾರಣಾ-ಪರ ರಾಜಕಾರಣಿಯಾಗಿದ್ದು, ಹಳೆಯ ಸಮುರಾಯ್‌‌ ಮತ್ತು ಷೋಗನ್‌ ಸಂಬಂಧಿತ ಜೀವನಶೈಲಿಯನ್ನು ಇಷ್ಟಪಡದವನಾಗಿರುತ್ತಾನೆ. ತನ್ನ ರೈಲುಮಾರ್ಗಗಳ ಮೂಲಕ ತನಗಾಗಿ ಹಣ ಮಾಡಿಕೊಳ್ಳುವಾಗ, ಪಾಶ್ಚಾತ್ಯೀಕರಣ ಮತ್ತು ಆಧುನೀಕರಣವನ್ನು ಅವನು ಶೀಘ್ರವಾಗಿ ಬಳಸಿಕೊಳ್ಳುತ್ತಾನೆ. ಸಮುರಾಯ್‌‌ ಆಳ್ವಿಕೆಯ ದಿನಗಳ ಅವಧಿಯಲ್ಲಿ ದಮನಮಾಡಲ್ಪಟ್ಟ, ಮತ್ತು ಅವರ ಕುಲೀನತೆಯೆಡೆಗಿನ ಅವನ ಪರಮಾವಧಿಯ ಇಷ್ಟಪಡದಿರುವಿಕೆಗೆ ಕಾರಣವಾಗಿದ್ದ ಅನೇಕ ವ್ಯಾಪಾರಿ ಕುಟುಂಬಗಳ ಪೈಕಿ ಒಂದೆನಿಸಿದ್ದ ಕುಟುಂಬಕ್ಕೆ ಸೇರಿದ್ದ ಅವನು, ಮೆಯಿಜಿ ಪುನಃ-ಪ್ರತಿಷ್ಠಾಪನೆಯ ಅವಧಿಯಲ್ಲಿ ಭಾರೀ ಪ್ರಮಾಣದ ಅಧಿಕಾರವನ್ನು ದಕ್ಕಿಸಿಕೊಳ್ಳುತ್ತಾನೆ ಮತ್ತು ಮೆಯಿಜಿಯ ಮುಖ್ಯ ಸಲಹೆಗಾರನಾಗುವ ದೃಷ್ಟಿಯಿಂದ ಅವನ ಯುವಜನತೆಯ ಪ್ರಯೋಜನಗಳನ್ನು ಪಡೆಯುತ್ತಾನೆ (ಷೋಗನ್‌ಗಳ ವೈಖರಿಯನ್ನು ಹೋಲುವಂತಿರುವ ಅಧಿಕಾರ ಚಲಾಯಿಸುವಿಕೆ). ಮೆಯಿಜಿ ಪುನಃ-ಪ್ರತಿಷ್ಠಾಪನೆಯ ಅವಧಿಯಲ್ಲಿನ ಓರ್ವ ಅಗ್ರಗಣ್ಯ ಸುಧಾರಕನಾಗಿದ್ದ, ಒಕುಬೊ ತೊಷಿಮಿಚಿಯ ಬಿಂಬವನ್ನು ನೆನಪಿಸುವ ರೀತಿಯಲ್ಲಿ ಅವನ ಬಿಂಬವನ್ನು ವಿನ್ಯಾಸಗೊಳಿಸಲಾಗಿದೆ. ವಾರ್ನರ್‌ ಬ್ರದರ್ಸ್‌ ಸ್ಟುಡಿಯೋಸ್‌ನಲ್ಲಿನ ಧ್ವನಿ ವೇದಿಕೆ ೧೯ರ ಮೇಲೆ (ಇಲ್ಲಿ ಹಂಫ್ರೆ ಬೊಗಾರ್ಟ್‌ ಒಮ್ಮೆ ನಟಿಸಿದ್ದ) ಚಕ್ರವರ್ತಿ ಮೆಯಿಜಿಯ ಸಮಾವೇಶದ ಕೋಣೆಯ ನಿರ್ಮಾಣವಾಗುತ್ತಿರುವುದನ್ನು ನೋಡಿದ ನಂತರ, ಚಲನಚಿತ್ರದಲ್ಲಿ ಸೇರಿಕೊಳ್ಳುವ ಕುರಿತು ತಾನು ಆಳವಾಗಿ ಆಸಕ್ತಿ ವಹಿಸಿದುದನ್ನು ಮಸಾಟೊ ಹರಾಡಾ ಉಲ್ಲೇಖಿಸಿದ್ದಾನೆ.[ಸೂಕ್ತ ಉಲ್ಲೇಖನ ಬೇಕು]
 • ಶಿಚಿನೊಸುಕೆ ನಕಮುರಾ: ಚಕ್ರವರ್ತಿ ಮೆಯಿಜಿಯ ಪಾತ್ರದಲ್ಲಿ ಈತ ನಟಿಸಿದ್ದಾನೆ. ೧೮೬೮ರ ಮೆಯಿಜಿ ಪುನಃ-ಪ್ರತಿಷ್ಠಾಪನೆಯ ಕಾರ್ಯಗತಗೊಳಿಸುವಿಕೆಯನ್ನು ಮಾಡಿರುವುದಾಗಿ ಭಾವಿಸಲ್ಪಟ್ಟಿರುವ ಚಕ್ರವರ್ತಿಯು, ಒಂದು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಜಪಾನ್‌ನ್ನು ಆಧುನೀಕರಿಸುವ ಮತ್ತು ಶಕ್ತಿನೀಡುವ ಸಲುವಾಗಿ, ಪಾಶ್ಚಾತ್ಯ ಪರಿಕಲ್ಪನೆಗಳು ಮತ್ತು ಪರಿಪಾಠಗಳನ್ನು ಬಳಸಿಕೊಳ್ಳಲು ಉತ್ಸುಕನಾಗಿರುತ್ತಾನೆ. ದಿ ಲಾಸ್ಟ್‌ ಸಮುರಾಯ್‌‌ ಸಂಭವಿಸಿದ ೧೮೭೦ರ ದಶಕದ ಅವಧಿಗಿಂತ ಹೆಚ್ಚಾಗಿ ೧೮೬೦ರ ದಶಕದಲ್ಲಿದ್ದ ಚಕ್ರವರ್ತಿ ಮೆಯಿಜಿಗೆ ಅವನ ಬಾಹ್ಯರೂಪವು ಒಂದು ಪ್ರಬಲ ಹೋಲಿಕೆಯನ್ನು ಹೊಂದಿರುತ್ತದೆ.
 • ಹಿರೋಯುಕಿ ಸನಾಡಾ: ಉಜಿಯೊ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಇವನು ಕಾಟ್ಸುಮೊಟೊ ಅಡಿಯಲ್ಲಿ ಬರುವ ಅತ್ಯಂತ ಸಮರ್ಪಣಾ ಮನೋಭಾವದ, ಸ್ವಾಮಿನಿಷ್ಠ ಮತ್ತು ತೀವ್ರೋತ್ಸಾಹದ ಸಮುರಾಯ್‌‌ಗಳ ಪೈಕಿ ಒಬ್ಬನೆನಿಸಿಕೊಂಡಿರುತ್ತಾನೆ. ಸಮುರಾಯ್‌‌ ಕತ್ತಿ ಕಾಳಗದ ಕಲೆಯನ್ನು ತೀರಾ ನವಿರಾಗಿ ಅವನು ಆಲ್‌ಗ್ರೆನ್‌ಗೆ ಹೇಳಿಕೊಡುತ್ತಾನಾದರೂ, ಅಂತಿಮವಾಗಿ ಅವನೆಡೆಗೆ ಗೌರವಭಾವನೆಯನ್ನು ಬೆಳೆಸಿಕೊಳ್ಳುತ್ತಾನೆ. ಕೊನೆಯ ಕದನದಲ್ಲಿನ ಅಂತಿಮ ಆಕ್ರಮಣದಲ್ಲಿ ಸಾಯುವ ಉಳಿದಿರುವ ಸಮುರಾಯ್‌ಗಳ ಪೈಕಿ ಅವನು ಒಬ್ಬನಾಗಿರುತ್ತಾನೆ.
 • ತಿಮೋಥಿ ಸ್ಪಾಲ್‌: ಸೈಮನ್‌ ಗ್ರಹಾಂ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಕ್ಯಾಪ್ಟನ್‌ ಆಲ್‌ಗ್ರೆನ್‌‌ ಮತ್ತು ಇಂಗ್ಲಿಷ್‌-ಮಾತನಾಡದ ಅವನ ಯೋಧರ ಪರವಾಗಿ ಈತ ಓರ್ವ ಬ್ರಿಟಿಷ್‌ ದುಭಾಷಿಯಾಗಿ ಕೆಲಸ ಮಾಡುತ್ತಿರುತ್ತಾನೆ. ಕ್ರಿಯಾಶೀಲ-ಮನಸ್ಸುಳ್ಳ ಓರ್ವ ವಿಶಿಷ್ಟ ಇಂಗ್ಲಿಷ್‌ನವನಾಗಿ ಆರಂಭದಲ್ಲಿ ಇವನನ್ನು ಚಿತ್ರಿಸಲಾಗಿದ್ದು, ನಂತರದಲ್ಲಿ ಇವನಿಗೆ ಸಮುರಾಯ್‌ ಉದ್ದೇಶಗಳು ಅರಿವಾಗುತ್ತವೆ. ವಾಸ್ತವಿಕ-ಪ್ರಪಂಚದ ಕಾರ್ಫಿಯೋಟ್‌‌ನ ಛಾಯಾಗ್ರಾಹಕನಾದ ಫೆಲೀಸ್‌ ಬೀಟೋ ಎಂಬಾತನಿಗೂ ಈ ಪಾತ್ರವು ಒಂದಷ್ಟು ಹೋಲಿಕೆಗಳನ್ನು ಹೊಂದಿರುವಂತೆ ತೋರಿಸಲಾಗಿದೆ.
 • ಸೀಜೋ ಫುಕುಮೊಟೊ: ಮೌನಿ ಸಮುರಾಯ್‌‌ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಆಲ್‌ಗ್ರೆನ್‌‌ ಹಳ್ಳಿಯ ಮೂಲಕ ಸಂಚರಿಸುತ್ತಾ ಇರುವಾಗ ಅವನನ್ನು ಹಿಂಬಾಲಿಸುವಂತೆ ನಿಯೋಜಿಸಲ್ಪಟ್ಟ ಓರ್ವ ಹಿರಿಯ ಮನುಷ್ಯನ (ಇವನೇ ನಂತರದಲ್ಲಿ ಸಮುರಾಯ್‌‌ "ಬಾಬ್‌‌" ಎಂದು ಕರೆಯುತ್ತಾನೆ) ಪಾತ್ರ ಇದಾಗಿದೆ. ಅಂತಿಮವಾಗಿ, ಅವನಿಗೋಸ್ಕರ ಒಂದು ಮಾರಕ ಗುಂಡಿನೇಟಿಗೆ ಈಡಾಗುವ ಮೂಲಕ, ಆಲ್‌ಗ್ರೆನ್‌‌ನ ಜೀವವನ್ನು ಸಮುರಾಯ್‌ ಉಳಿಸುತ್ತಾನೆ (ಮತ್ತು ಮೊದಲ ಹಾಗೂ ಏಕೈಕ ಬಾರಿಗೆ, "ಆಲ್‌ಗ್ರೆನ್‌‌-ಸ್ಯಾನ್‌‌!" ಎಂದು ಅವನು ಮಾತಾಡುತ್ತಾನೆ).
 ಸೆವೆನ್‌‌ ಸಮುರಾಯ್‌‌ಗೆ ಸೇರಿದ ಕ್ಯುಜೊನೊಂದಿಗೆ ಅವನು ಒಂದು ಗಮನಾರ್ಹವಾದ ಹೋಲಿಕೆಯನ್ನು ಹೊಂದಿರುತ್ತಾನೆ.
 • ಕೊಯುಕಿ: ಟಾಕಾ ಪಾತ್ರದಲ್ಲಿ ಇವಳು ಕಾಣಿಸಿಕೊಂಡಿದ್ದಾಳೆ; ಈಕೆ ಕಾಟ್ಸುಮೊಟೊನ ಸೋದರಿ ಮತ್ತು ನಾಥನ್‌ ಆಲ್‌ಗ್ರೆನ್‌‌ನಿಂದ ಸಾಯಿಸಲ್ಪಟ್ಟ ಕೆಂಪು-ಮುಖವಾಡದ ಸಮುರಾಯ್‌‌ ಹಿರೊಟಾರೊನ ಹೆಂಡತಿಯಾಗಿರುತ್ತಾಳೆ.
 • ಬಿಲ್ಲಿ ಕೊನೊಲ್ಲಿ: ಸಾರ್ಜೆಂಟ್‌ ಜೆಬುಲಾನ್‌‌ ಗ್ಯಾಂಟ್‌‌ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಈತ ಓರ್ವ ಮಾಜಿ-ಯೋಧನಾಗಿದ್ದು, ಆಲ್‌ಗ್ರೆನ್‌‌ ಜೊತೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾನೆ ಮತ್ತು ಅವನಿಗೆ ನಿಷ್ಠನಾಗಿರುತ್ತಾನೆ, ಜಪಾನ್‌ಗೆ ಬರುವಂತೆ ಅವನೊಂದಿಗೆ ಮಾತುಕತೆ ನಡೆಸುತ್ತಾನೆ. ಸಮುರಾಯ್‌ಗಳಿಗೆ ಮುಖಾಮುಖಿಯಾಗುವುದಕ್ಕೆ ಮುಂಚಿತವಾಗಿ, ಆಲ್‌ಗ್ರೆನ್ ಜೊತೆಯಲ್ಲಿ ಸೇರಿಕೊಂಡು ಅವನು‌‌ ಚಕ್ರಾಧಿಪತ್ಯದ ಸೇನೆಗೆ ತರಬೇತು ನೀಡುತ್ತಾನೆ. ಆರಂಭಿಕ ಕದನದಲ್ಲಿ ಅವನು ನಂತರ ಹಿರೊಟಾರೊನಿಂದ (ಟಾಕಾಳ ಗಂಡ) ಸಾಯಿಸಲ್ಪಡುತ್ತಾನೆ.
 • ಷುನ್‌ ಸುಗಾಟಾ: ನಕಾವೊ ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಈತ ಓರ್ವ ಎತ್ತರದ ಜುಜುಟ್ಸು ಮತ್ತು ನಗಿನಾಟಾ-ನಿಪುಣ ಸಮುರಾಯ್ ಆಗಿದ್ದು‌‌, ಕಾಟ್ಸುಮೊಟೊನ ರಕ್ಷಣೆಯಲ್ಲಿ ಪಾಲ್ಗೊಳ್ಳುತ್ತಾನೆ, ಮತ್ತು ಅಂತಿಮ ಕದನದಲ್ಲಿ ನಂತರ ಸಾಯಿಸಲ್ಪಡುತ್ತಾನೆ.
 • ಸತೋಷಿ ನಿಕೈಡೊ: N.C.O. ಪಾತ್ರದಲ್ಲಿ ಇವನು ಕಾಣಿಸಿಕೊಂಡಿದ್ದಾನೆ; ಆಲ್‌ಗ್ರೆನ್‌ನಿಂದ ತರಬೇತಿಯನ್ನು ಪಡೆದ ಮೊದಲ ಯೋಧರಲ್ಲಿ ಇವನೂ ಒಬ್ಬನಾಗಿದ್ದು, ಆಲ್‌ಗ್ರೆನ್‌‌ ಸೆರೆಹಿಡಿಯಲ್ಪಟ್ಟ ಕದನದಿಂದ ತಪ್ಪಿಸಿಕೊಳ್ಳುವಲ್ಲಿ ಈತ ಯಶಸ್ವಿಯಾಗುತ್ತಾನೆ. ನಂತರ, ಅಂತಿಮ ಮುಖಾಮುಖಿಯಲ್ಲಿ ಅವನು ಮತ್ತೊಮ್ಮೆ ಒಮುರಾ ಸಹಾಯಕನಾಗಿ ಕಾಣಿಸಿಕೊಳ್ಳುತ್ತಾನೆ; ಉಳಿದಿರುವ ಸಮುರಾಯ್‌ಗಳ ಕಗ್ಗೊಲೆಯನ್ನು ಕಂಡು ದುಃಖಿತನಾಗುವ ಆತ, ಕಾಟ್ಸುಮೊಟೊ ಗೌರವದಿಂದ ಸಾಯುವಂತಾಗಲು, ಗುಂಡಿನದಾಳಿಯನ್ನು ನಿಲ್ಲಿಸುವಂತೆ ಬಂದೂಕುಪಡೆಗಳಿಗೆ ಆದೇಶಿಸುವ ಮೂಲಕ, ಒಮುರಾಗೆ ಸವಾಲು ಹಾಕುತ್ತಾನೆ.

ತಯಾರಿಕೆ[ಬದಲಾಯಿಸಿ]

ಜಪಾನಿ ಪಾತ್ರವರ್ಗದ ಸದಸ್ಯರು ಮತ್ತು ಅಮೆರಿಕಾದ ನಿರ್ಮಾಣ ಸಿಬ್ಬಂದಿಯೊಂದಿಗೆ, ನ್ಯೂಜಿಲೆಂಡ್‌ನಲ್ಲಿ ಚಿತ್ರದ ಚಿತ್ರೀಕರಣವು ನಡೆಯಿತು. ಯೋಕೋಹಾಮಾದಿಂದ ಕಂಡಂತೆ ಫ್ಯುಜಿ ಪರ್ವತದ CGIನ್ನು ಬಳಸಿಕೊಂಡು, ಫ್ಯುಜಿ ಪರ್ವತದ ದೃಶ್ಯಗಳನ್ನು ಒಂದರ ಮೇಲೆ ಇನ್ನೊಂದನ್ನು ಇರಿಸಿ ಚಿತ್ರಿಸಲಾಯಿತು. ಹಳ್ಳಿಗೆ ಸಂಬಂಧಿಸಿದ ಹಲವಾರು ದೃಶ್ಯಗಳನ್ನು, ಕ್ಯಾಲಿಫೋರ್ನಿಯಾದ ಬರ್‌ಬ್ಯಾಂಕ್‌‌ನಲ್ಲಿನ ವಾರ್ನರ್‌ ಬ್ರದರ್ಸ್‌ ಸ್ಟುಡಿಯೋಸ್‌‌‌ನ ಹಿಂಭಾಗದ ಪ್ರದೇಶದಲ್ಲಿ ಚಿತ್ರೀಕರಿಸಲಾಯಿತು.

ಧ್ವನಿಪಥ[ಬದಲಾಯಿಸಿ]

Untitled

ಎಲ್ಲಾ ಹಾಡುಗಳಿಗೂ ಹಾನ್ಸ್‌ ಜಿಮ್ಮರ್‌ ಸಂಗೀತ ನೀಡಿದ. ಹಾಲಿವುಡ್‌ ಸ್ಟುಡಿಯೋ ಸಿಂಫನಿಯು ಇವನ್ನು ನಿರ್ವಹಿಸಿದರೆ, ಬ್ಲೇಕ್‌ ನೀಲಿ ಇವನ್ನು ಸಂಯೋಜಿಸಿದ.

 1. "ಎ ವೇ ಆಫ್‌ ಲೈಫ್‌" ೮:೦೩
 2. "ಸ್ಪೆಕ್ಟರ್ಸ್‌ ಇನ್‌ ದಿ ಫಾಗ್‌" ೪:೦೭
 3. "ಟೇಕನ್‌‌" ೩:೩೬
 4. "ಎ ಹಾರ್ಡ್‌ ಟೀಚರ್‌‌" ೫:೪೪
 5. "ಟು ನೋ ಮೈ ಎನಿಮಿ" ೪:೪೯
 6. "ಐಡಿಲ್‌'ಸ್‌ ಎಂಡ್‌" ೬:೪೧
 7. "ಸೇಫ್‌ ಪ್ಯಾಸೇಜ್‌‌" ೪:೫೭
 8. "ರೋನಿನ್‌‌" ೧:೫೩
 9. "ರೆಡ್‌ ವಾರಿಯರ್‌‌" ೩:೫೬
 10. "ದಿ ವೇ ಆಫ್‌ ದಿ ಸ್ವೋರ್ಡ್‌" ೭:೫೯
 11. "ಎ ಸ್ಮಾಲ್‌ ಮೆಷರ್‌ ಆಫ್‌ ಪೀಸ್‌‌" ೭:೫೯

ಸ್ವಾಗತ ವೈಖರಿ[ಬದಲಾಯಿಸಿ]

USAಗಿಂತ ಹೆಚ್ಚಾಗಿ ಜಪಾನ್‌ನಲ್ಲಿ ಈ ಚಲನಚಿತ್ರವು ಅತಿಹೆಚ್ಚಿನ ಗಲ್ಲಾ ಪೆಟ್ಟಿಗೆಯ ಹಣಗಳಿಕೆಗಳನ್ನು ದಾಖಲಿಸಿತು.[೨] ಜಪಾನ್‌ನಲ್ಲಿನ ವಿಮರ್ಶಾತ್ಮಕ ಸ್ವಾಗತ ವೈಖರಿಯು ಸಾಮಾನ್ಯವಾಗಿ ಧನಾತ್ಮಕವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ದಿ ಮೈನಿಚಿ ಷಿನ್‌ಬುನ್‌‌‌‌‌ ನ ತೊಮೊಮಿ ಕಟ್ಸುಟಾ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಈ ಚಲನಚಿತ್ರವು "ಜಪಾನ್‌ನ್ನು ಚಿತ್ರಿಸಲು ಅಮೆರಿಕಾ ಮಾಡಿದ್ದ ಹಿಂದಿನ ಪ್ರಯತ್ನಗಳನ್ನು ಮೀರಿಸಿದ ಒಂದು ಬೃಹತ್‌ ಸುಧಾರಣೆಯಾಗಿದೆ" ಎಂದು ತಿಳಿಸಿದ. ಅಷ್ಟೇ ಅಲ್ಲ, ಚಿತ್ರದ ನಿರ್ದೇಶಕ ಝ್ವಿಕ್‌, "ಜಪಾನಿಯರ ಇತಿಹಾಸವನ್ನು ಚೆನ್ನಾಗಿ ಸಂಶೋಧನೆ ಮಾಡಿದ್ದಾನೆ, ಸುಪರಿಚಿತ ಜಪಾನೀ ನಟರನ್ನು ಪಾತ್ರವರ್ಗದಲ್ಲಿ ಸೇರಿಸಿದ್ದಾನೆ ಮತ್ತು ಜಪಾನಿನ ಮಾತುಗಾರಿಕೆಯ ವಾಡಿಕೆಯ ಮತ್ತು ಔಪಚಾರಿಕ ವರ್ಗಗಳಲ್ಲಿ ತಾನು ಗೊಂದಲವನ್ನು ಉಂಟುಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು, ಸಂಭಾಷಣೆಯ ಶಿಕ್ಷಕರೊಂದಿಗೆ ಅವನು ಸಮಾಲೋಚಿಸಿದ್ದಾನೆ" ಎಂದೂ ಸಹ ತೊಮೊಮಿ ಕಟ್ಸುಟಾ ಬರೆದ. ಆದಾಗ್ಯೂ, ಚಲನಚಿತ್ರವು ಒಳಗೊಂಡಿದ್ದ ಸಮುರಾಯ್‌‌ಗಳ ಆದರ್ಶಾತ್ಮಕ, "ಮಕ್ಕಳ ಕಥೆಯಂಥ" ಚಿತ್ರಣವು ಕಟ್ಸುಟಾಗೆ ನ್ಯೂನತೆಯಾಗಿ ಕಂಡುಬಂತು, ಮತ್ತು "ಸಮುರಾಯ್‌ಗಳು ತುಂಬಾ ಭ್ರಷ್ಟರಾಗಿದ್ದರು ಎಂಬುದು ಅವರ ಕುರಿತಾಗಿ ನಾವು ಹೊಂದಿದ್ದ ಅಭಿಪ್ರಾಯವಾಗಿದೆ" ಎಂಬುದನ್ನು ಅವನು ಇದಕ್ಕೆ ಸಮರ್ಥನೆಯಾಗಿ ಅವನು ನೀಡಿದ. ಅದರಂತೆ, ಮಹೋನ್ನತ ಸಮುರಾಯ್‌‌ ನಾಯಕ ಕಾಟ್ಸುಮೊಟೊ, "ತನ್ನ ಸ್ಥಿತಿಯನ್ನು ಅಪಾಯದ ಅಂಚಿಗೆ ತಂದುಕೊಂಡಿದ್ದಾನೆ" ಎಂಬುದಾಗಿ ಅವನು ಹೇಳಿದ.[೩] ಜಪಾನ್‌ನಲ್ಲಿನ ಚಿತ್ರದ ಪ್ರಥಮ ಪ್ರದರ್ಶನವನ್ನು ಟೋಕಿಯೊದಲ್ಲಿನ ರೊಪ್ಪೊಂಗಿ ಹಿಲ್ಸ್‌ ಮಲ್ಟಿಪ್ಲೆಕ್ಸ್‌‌ನಲ್ಲಿ ೨೦೦೩ರ ನವೆಂಬರ್‌‌‌ ೧ರಂದು ಆಯೋಜಿಸಲಾಗಿತ್ತು. ಚಿತ್ರದ ಸಮಗ್ರ ಪಾತ್ರವರ್ಗವೂ ಅಲ್ಲಿ ಹಾಜರಿತ್ತು; ಅವರು ಹಸ್ತಾಕ್ಷರಗಳನ್ನು ನೀಡಿದರು, ಸಂದರ್ಶನಗಳನ್ನು ನೀಡಿದರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲು ವೇದಿಕೆಯ ಮೇಲೆ ಕಾಣಿಸಿಕೊಂಡರು. ಪಾತ್ರವರ್ಗದ ಪೈಕಿಯ ಅನೇಕ ಸದಸ್ಯರು ಪ್ರೇಕ್ಷಕರೊಂದಿಗೆ ಮಾತನಾಡುತ್ತಾ, ಸಮುರಾಯ್‌‌ನ ಪ್ರಮುಖ ಮೌಲ್ಯಗಳನ್ನು ಕಲಿಯುವುದಕ್ಕೆ ಮತ್ತು ಗೌರವಿಸುವುದಕ್ಕೆ ಸಂಬಂಧಿಸಿದ ಬಯಕೆಯನ್ನು ವ್ಯಕ್ತಪಡಿಸಿದರು, ಹಾಗೂ ಜಪಾನಿಯರ ಸಂಸ್ಕೃತಿ ಮತ್ತು ಆಚರಣೆಯ ಕುರಿತಾಗಿ ಒಂದು ಮಹತ್ತಾದ ಮೆಚ್ಚುಗೆಯನ್ನು ತಾವು ಹೊಂದಿರುವುದಾಗಿ ತಿಳಿಸಿದರು.

ಹೊಗಳಿಕೆಯ ಸ್ವರೂಪದಲ್ಲಿರದ ಹಲವಾರು ಅಭಿಪ್ರಾಯಗಳು ಅಮೆರಿಕಾದಲ್ಲಿ ಕೇಳಿಬಂದವು; ಕೆವಿನ್‌ ಕಾಸ್ಟ್‌‌ನರ್‌‌‌‌ನ ಡಾನ್ಸಸ್‌ ವಿತ್‌ ವೋಲ್ವ್ಸ್‌‌ ಚಲನಚಿತ್ರವನ್ನು ಇದು ಹೋಲುತ್ತದೆ ಎಂಬ ಮಾತೂ ಇದರಲ್ಲಿ ಸೇರಿತ್ತು. ದಿ ನ್ಯೂಯಾರ್ಕ್‌ ಟೈಮ್ಸ್‌‌ ಪತ್ರಿಕೆಯ ಮೊಟೊಕೊ ರಿಚ್‌ ಎಂಬಾತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಈ ಚಲನಚಿತ್ರವು ಒಂದು ಚರ್ಚೆಗೆ ಮುನ್ನುಡಿಯನ್ನು ಹಾಕಿಕೊಟ್ಟಿದ್ದು, "ಏಷ್ಯಾದ-ಅಮೆರಿಕನ್ನರು ಮತ್ತು ಜಪಾನಿಯರ ನಡುವೆ ಈ ಚರ್ಚೆಯು ನಿರ್ದಿಷ್ಟವಾಗಿ" ಕಂಡುಬಂದಿದೆ; ಈ ಚಲನಚಿತ್ರ ಹಾಗೂ ಇದರ ರೀತಿಯಲ್ಲಿರುವ ಇತರ ಚಲನಚಿತ್ರಗಳು "ಜನಾಂಗೀಯವಾದಿ, ನಿಷ್ಕಪಟವಾದ, ಉತ್ತಮ-ಆಶಯದ, ಕರಾರುವಾಕ್ಕಾದ ಚಿತ್ರಗಳಾಗಿವೆಯೋ - ಅಥವಾ ಮೇಲೆ ತಿಳಿಸಿದ ಎಲ್ಲವೂ ಆಗಿವೆಯೋ" ಎಂಬುದೇ ಅವರ ನಡುವಿನ ಚರ್ಚೆಯ ವಿಷಯವಾಗಿದೆ ಎಂದು ತಿಳಿಸಿದ.[೩] ಆದಾಗ್ಯೂ ಚಿಕಾಗೊ ಸನ್‌-ಟೈಮ್ಸ್‌ ಪತ್ರಿಕೆಯ ವಿಮರ್ಶಕನಾದ ರೋಜರ್‌ ಎಬರ್ಟ್‌ ಎಂಬಾತ ಈ ಚಲನಚಿತ್ರಕ್ಕೆ ನಾಲ್ಕು ನಕ್ಷತ್ರಗಳ ಪೈಕಿ ಮೂರೂವರೆ ನಕ್ಷತ್ರಗಳ ಶ್ರೇಯಾಂಕವನ್ನು ನೀಡಿ, ಈ ಚಿತ್ರವನ್ನು "ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ, ಕಥೆಯನ್ನು ಬುದ್ಧಿವಂತಿಕೆಯಿಂದ ಬರೆಯಲಾಗಿದೆ, ಕಲಾವಿದರು ಗಾಢನಂಬಿಕೆಯೊಂದಿಗೆ ನಟಿಸಿದ್ದಾರೆ, ಇದೊಂದು ಅಸಾಮಾನ್ಯವಾದ ಆಲೋಚನಾಶೀಲ ಮಹಾಕೃತಿಯಾಗಿದೆ" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ.[೪]

ಮೆಟಾಕ್ರಿಟಿಕ್‌‌ನಲ್ಲಿ ೧೦೦ ಅಂಕಗಳ ಪೈಕಿ ೫೫ ಅಂಕಗಳನ್ನು ಗಳಿಸುವ ಮೂಲಕ ಈ ಚಲನಚಿತ್ರವು ಪ್ರಸಕ್ತವಾಗಿ ಒಂದು ಮಿಶ್ರ-ಶ್ರೇಯಾಂಕವನ್ನು ಪಡೆದುಕೊಂಡಿದೆ.[೫] ಈ ಚಲನಚಿತ್ರಕ್ಕೆ ರಾಟನ್‌ ಟೊಮೆಟೋಸ್‌ ೬೫%ನಷ್ಟು ಶ್ರೇಯಾಂಕವನ್ನು ನೀಡಿದೆ.[೬]

ಕೆನ್‌ ವತಾನಬೆಗೆ ಸಂಬಂಧಿದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಒಳಗೊಂಡಂತೆ ಈ ಚಲನಚಿತ್ರವು ನಾಲ್ಕು ಅಕಾಡೆಮಿ ಪ್ರಶಸ್ತಿಗಳಿಗೆ, ಮತ್ತು ಮೂರು ಗೋಲ್ಡನ್‌ ಗ್ಲೋಬ್‌‌ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು; ವತಾನಬೆಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಟಾಮ್‌ ಕ್ರೂಸ್‌‌‌ಗಾಗಿ ಅತ್ಯುತ್ತಮ ನಟ - ರೂಪಕ ಪ್ರಶಸ್ತಿ ಹಾಗೂ ಹಾನ್ಸ್‌ ಜಿಮ್ಮರ್‌‌‌ಗಾಗಿ ಅತ್ಯುತ್ತಮ ಸಂಗೀತ ಸಂಯೋಜನೆ ಇವು ಗೋಲ್ಡನ್‌ ಗ್ಲೋಬ್‌‌ ಪ್ರಶಸ್ತಿಗಳಲ್ಲಿ ಸೇರಿದ್ದವು. ಚಲನಚಿತ್ರವು ಗೆದ್ದ ಪ್ರಶಸ್ತಿಗಳ ವಿವರಗಳು ಹೀಗಿವೆ: ನ್ಯಾಷನಲ್‌ ಬೋರ್ಡ್‌ ಆಫ್‌ ರಿವ್ಯೂ ವತಿಯಿಂದ ನೀಡಲಾದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ವಿಷುಯಲ್‌ ಎಫೆಕ್ಟ್ಸ್‌ ಸೊಸೈಟಿ ಪ್ರಶಸ್ತಿಗಳ ಸಮಾರಂಭದಲ್ಲಿ ನೀಡಲಾದ ಮಹೋನ್ನತ ನಿರ್ವಹಣೆಯ ಪೋಷಕ ದೃಷ್ಟಿಗೋಚರ ಪರಿಣಾಮಗಳ ಪ್ರಶಸ್ತಿ, ಜಪಾನ್‌ ಅಕಾಡೆಮಿ ಪ್ರೈಜ್‌ ವತಿಯಿಂದ ನೀಡಲಾದ ಮಹೋನ್ನತ ನಿರ್ವಹಣೆಯ ವಿದೇಶಿ ಭಾಷೆ ಚಲನಚಿತ್ರ ಪ್ರಶಸ್ತಿ, ನಾಲ್ಕು ಗೋಲ್ಡನ್‌ ಸೆಟಲೈಟ್‌ ಪ್ರಶಸ್ತಿಗಳು, ಹಾಗೂ ಟಾರಸ್‌ ವರ್ಲ್ಡ್‌‌ ಸ್ಟಂಟ್‌ ಪ್ರಶಸ್ತಿಗಳ ವತಿಯಿಂದ ನೀಡಲಾದ ಅತ್ಯುತ್ತಮ ಬೆಂಕಿಯ ಸಾಹಸ ಪ್ರಶಸ್ತಿ.[೭]

ಐತಿಹಾಸಿಕ ಹಿನ್ನೆಲೆ[ಬದಲಾಯಿಸಿ]

ದಿ ಲಾಸ್ಟ್‌ ಸಮುರಾಯ್‌‌ ಚಿತ್ರವು ನಿಜವಾದ ಆದರೆ ಅಸಂಗತವಾದ ಸಮಯದಲ್ಲಿ ಸಾಕಷ್ಟು ದೂರವಾಗಿರುವ ಐತಿಹಾಸಿಕ ಸನ್ನಿವೇಶಗಳನ್ನು, ಒಂದು ಏಕ ನಿರೂಪಣೆಯಾಗಿ ಸಂಯೋಜಿಸುತ್ತದೆ. ಈ ಚಿತ್ರದಲ್ಲಿ ಆ ಕಾಲದ ಪ್ರಮುಖ ಪಾಶ್ಚಾತ್ಯ ನಟರು (ವಿಶೇಷವಾಗಿ ಫ್ರೆಂಚ್‌ ನಟರು) ಅಮೆರಿಕಾದ ನಟರಿಂದ ಪಲ್ಲಟಗೊಳಿಸಲ್ಪಟ್ಟಿರುವುದು ವಿಶೇಷ. ಅಂತಿಮವಾಗಿ, ಇದು ಪ್ರಾಚೀನ ಮತ್ತು ಆಧುನಿಕ ಹೋರಾಡುವ ವಿಧಾನಗಳ ನಡುವಿನ ಒಂದು ಆಮೂಲಾಗ್ರ ತಿಕ್ಕಾಟವನ್ನು ಚಿತ್ರಿಸುತ್ತದೆಯಾದರೂ, ವಾಸ್ತವದಲ್ಲಿ ತಿಕ್ಕಾಟದ ಎಲ್ಲಾ ಪಾರ್ಶ್ವಗಳೂ (ಸತ್ಸುಮಾ ದಂಗೆ, ಮತ್ತು ಅದಕ್ಕೂ ಮುಂಚಿತವಾಗಿ ಬೊಷಿನ್‌ ಯುದ್ಧ) ಆಧುನಿಕ ಉಪಕರಣಗಳನ್ನು ಬಗೆಬಗೆಯ ಮಟ್ಟಗಳವರೆಗೆ ಅಳವಡಿಸಿಕೊಂಡಿದ್ದವು. ವಾಸ್ತವವಾಗಿ, ಫಿರಂಗಿ-ಬಂದೂಕುಗಳು ಸಾಕಷ್ಟು ಶತಮಾನಗಳಷ್ಟು ಮುಂಚೆಯೇ ಜಪಾನ್‌ನಲ್ಲಿ ಬಳಕೆಯಲ್ಲಿದ್ದವು ಮತ್ತು ಟೋಕುಗವಾ ಷೋಗನ್‌ಗಿರಿಯನ್ನು ಸೃಷ್ಟಿಸಿದ ನಾಗರಿಕ ಯುದ್ಧಗಳಲ್ಲಿ ಅವು ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದವು; ಆದರೆ ಅಗೌರವ ಉಂಟುಮಾಡುವಂಥವು ಎಂದು ಪರಿಗಣಿಸಿ ಅವನ್ನು ನಂತರದಲ್ಲಿ ತಿರಸ್ಕರಿಸಲಾಯಿತು ಮತ್ತು ೧೯ನೇ ಶತಮಾನದ ಆರಂಭದ ಹೊತ್ತಿಗೆ ಬಂದೂಕುಗಾರರ ಕಲೆಯು ಬಳಕೆ ತಪ್ಪಿದ ಸ್ಥಿತಿಗೆ ಕುಸಿದವು. ಈ ಚಲನಚಿತ್ರದ ಅನೇಕ ವಿಷಯಾಧಾರಿತ, ಮತ್ತು ದೃಶ್ಯರೂಪದ ಅಂಶಗಳು ಅಕಿರಾ ಕುರೊಸಾವಾನ ಚಲನಚಿತ್ರಗಳಿಗೆ, ಅದರಲ್ಲೂ ನಿರ್ದಿಷ್ಟವಾಗಿ ಸೆವೆನ್‌‌ ಸಮುರಾಯ್‌‌ ಚಿತ್ರಕ್ಕೆ ಸಮಾನಾಂತರವಾಗಿ ನಿಲ್ಲುತ್ತವೆ.

ಸೇನೆಯ ಆಧುನೀಕರಣ ಮತ್ತು ಪಾಶ್ಚಾತ್ಯರ ತೊಡಗಿಸಿಕೊಳ್ಳುವಿಕೆ[ಬದಲಾಯಿಸಿ]

ಜಪಾನ್‌ಗೆ ಬಂದ ಫ್ರೆಂಚ್‌ ಸೇನಾ ನಿಯೋಗವು ಷೋಗನ್‌ಗಿರಿ ಪಡೆಗಳಿಗೆ ತರಬೇತು ನೀಡುತ್ತಿರುವುದು. 1867ರ ಛಾಯಾಚಿತ್ರ.
ಬೊಷಿನ್‌ ಯುದ್ಧದ (1868-1869) ಅವಧಿಯಲ್ಲಿ ಹೊಕ್ಕಾಯ್ಡೊನಲ್ಲಿನ ಫ್ರೆಂಚ್‌ ಸೇನಾ ಸಲಹೆಗಾರರು ಮತ್ತು ಅವರ ಜಪಾನೀ ಮಿತ್ರರು.ಮುಂದಿನ ಸಾಲು, ಎಡದಿಂದ ಎರಡನೆಯವ: ಜೂಲ್ಸ್‌ ಬ್ರೂನೆಟ್‌‌, ಜೊತೆಗಿರುವುದು ಎಜೊ ಗಣರಾಜ್ಯದ ಉಪಾಧ್ಯಕ್ಷನಾದ ಮಾಟ್ಸುಡೈರಾ ಟಾರೊ.

ದಿ ಲಾಸ್ಟ್‌ ಸಮುರಾಯ್‌‌ನಲ್ಲಿ ವಿವರಿಸಲ್ಪಟ್ಟಿರುವ ಸೇನಾ ಆಧುನೀಕರಣದ ಬಗೆಯು, ಹತ್ತು ವರ್ಷಗಳಷ್ಟು ಮುಂಚಿತವಾಗಿ ೧೮೬೮ರಲ್ಲಿ ಬೊಷಿನ್‌ ಯುದ್ಧದ ವೇಳೆಗಾಗಲೇ ಬಹುಪಾಲು ಸಾಧಿಸಲ್ಪಟ್ಟಿತ್ತು. ಆ ಸಮಯದಲ್ಲಿ, ಷೋಗನ್‌‌‌‌‌ಗೆ ಅನುಕೂಲಕರವಾಗಿರುವ ಪಡೆಗಳು, ಜಪಾನ್‌ಗೆ ಭೇಟಿ ನೀಡಿದ ಫ್ರೆಂಚ್‌ ಸೇನೆ ನಿಯೋಗದಿಂದ (೧೮೬೭) ಆಧುನೀಕರಿಸಲ್ಪಟ್ಟವು ಮತ್ತು ತರಬೇತು ನೀಡಲ್ಪಟ್ಟವು, ಮತ್ತು ಆವಿಯ ಸಮರನೌಕೆಗಳ ಒಂದು ಆಧುನಿಕ ವ್ಯೂಹವು ಅಷ್ಟು ಹೊತ್ತಿಗಾಗಲೇ ರೂಪಿಸಲ್ಪಟ್ಟಿತ್ತು (ಎಂಟು ಆವಿ ಸಮರನೌಕೆಗಳಾದ, ಕೈಟೆನ್‌‌ , ಬನ್ರಿಯೂ , ಚಿಯೋಡಗಾಟಾ , ಚೋಗೆಯ್‌ , ಕೈಯೋ ಮಾರು , ಕನ್ರಿನ್‌ ಮಾರು , ಮಿಕಾಹೊ ಮತ್ತು ಷಿನ್‌ಸೊಕು ಇವು ೧೮೬೮ರಲ್ಲಿನ ಬಕುಫು ನೌಕಾಪಡೆಯ ಮುಖ್ಯಭಾಗವಾಗಿ ರೂಪಿಸಲ್ಪಟ್ಟವು). ಸತ್ಸುಮಾ ಮತ್ತು ಚೋಷೂದ ಪಾಶ್ಚಾತ್ಯ ಕ್ಷೇತ್ರಗಳೂ ಸಹ ಅತೀವವಾಗಿ ಆಧುನೀಕರಿಸಲ್ಪಟ್ಟು, ಬ್ರಿಟಿಷ್‌ ಹಿತಾಸಕ್ತಿಗಳು ಮತ್ತು ಪರಿಣತಿಯಿಂದ ಬೆಂಬಲಿಸಲ್ಪಟ್ಟಿದ್ದವು. ಜಪಾನ್‌ನಲ್ಲಿ ಗೊಂಚಲುಕೋವಿ ಫಿರಂಗಿಗಳು ಕಾಣಿಸಿಕೊಂಡಿದ್ದೂ ಸಹ ಆ ಕಾಲಕ್ಕೇ ನಮ್ಮನ್ನು ಕರೆದೊಯ್ಯುತ್ತದೆ (ಗೊಂಚಲುಕೋವಿ ಫಿರಂಗಿಗಳು ೧೮೬೧ರಲ್ಲಿ ಆವಿಷ್ಕರಿಸಲ್ಪಟ್ಟವು, ಮತ್ತು ೧೮೬೮-೧೮೬೯ರ ಬೊಷಿನ್‌ ಯುದ್ಧದ ಸಮಯದಲ್ಲಿ ಎರಡೂ ಕಡೆಯ ಪಡೆಗಳಿಂದ ಅವು ನಿಯೋಜಿಸಲ್ಪಟ್ಟವು, ಮತ್ತು ಹೊಕುಯೆಟ್ಸುವಿನ ಕದನ ಮತ್ತು ಮಿಯಾಕೊವಿನ ನೌಕಾ ಕದನಗಳಲ್ಲಿಯೂ ಇವು ಬಳಕೆಯಾದವು). ಮೆಯಿಜಿ ಚಕ್ರವರ್ತಿಯ ಪ್ರತಿಷ್ಠಾಪನೆಗೆ ಅನೇಕ ವರ್ಷಗಳಷ್ಟು ಮುಂಚಿತವಾಗಿ, ಬಕುಮಟ್ಸು ಅವಧಿಯ ಸಮಯದಲ್ಲಾಗಲೇ ಒಂದು ಕ್ಷಿಪ್ರವಾದ ಗತಿಯಲ್ಲಿ ಆಧುನೀಕರಣವು ಪ್ರಗತಿ ಸಾಧಿಸಿತ್ತು.

ಜಪಾನ್‌ ದೇಶವನ್ನು ೧೮೫೪ರಲ್ಲಿ ವಿದೇಶಿ ಸಂಪರ್ಕಗಳಿಗೆ ಮುಕ್ತವಾಗಿಸಿದ ಕೀರ್ತಿಯು ಕಮೊಡೊರ್‌ ಪೆರ್ರಿ ಎಂಬಾತನಿಗೆ ದಕ್ಕಿದೆಯಾದರೂ, ಅದಾದ ನಂತರದಲ್ಲಿ ಅಮೆರಿಕಾದ ತೊಡಗಿಸಿಕೊಳ್ಳುವಿಕೆಯು ಕನಿಷ್ಟತಮವಾಗಿತ್ತು. ಮುಖ್ಯವಾಗಿ ವ್ಯಾಪಾರೀ ಸ್ವರೂಪದಲ್ಲಿದ್ದ ಗಾಢವಾದ ಪರಸ್ಪರ ಸಂವಹನೆಯು, ಹ್ಯಾರಿಸ್‌‌ ಒಡಂಬಡಿಕೆಯೊಂದಿಗೆ ೧೮೫೯ರಿಂದಷ್ಟೇ ಪ್ರಾರಂಭವಾಯಿತು, ಮತ್ತು ಅಮೆರಿಕಾದ ನಾಗರಿಕ ಯುದ್ಧದ (೧೮೬೧–೧೮೬೫) ಬೇಡಿಕೆಗಳ ಕಾರಣದಿಂದಾಗಿ ೧೮೬೧ರಿಂದ ಅಮೆರಿಕಾದ ಪ್ರಭಾವವು ಕ್ಷಯಿಸಿತು. ೧೮೬೮ರ ಮೆಯಿಜಿ ಪುನಃ-ಪ್ರತಿಷ್ಠಾಪನೆಯವರೆಗೆ ಜಪಾನ್‌ನ ಆಧುನೀಕರಣದಲ್ಲಿ ಪಾಲ್ಗೊಂಡಿದ್ದ ಪ್ರಮುಖ ಅಧಿಕಾರ-ಶಕ್ತಿಗಳಲ್ಲಿ ಇವು ಸೇರಿದ್ದವು: ನೆದರ್ಲೆಂಡ್ಸ್‌ (ನಾಗಸಾಕಿ ನೌಕಾ ತರಬೇತಿ ಕೇಂದ್ರದೊಂದಿಗೆ ಒಂದು ಆಧುನಿಕ ನೌಕಾಪಡೆಯ ಚಾಲನೆ ಮತ್ತು ಕಾನ್‌ಕೋ ಮಾರು ಹಾಗೂ ಕನ್ರಿನ್‌ ಮಾರು ನಂಥ ಜಪಾನ್‌ನ ಮೊದಲ ಆಧುನಿಕ ಹಡಗುಗಳ ಪೂರೈಕೆ), ಫ್ರಾನ್ಸ್‌‌‌ (೧೮೬೭ರ ಫ್ರೆಂಚ್‌ ಸೇನಾ ನಿಯೋಗವಾದ ಲಿಯೋನ್ಸ್‌ ವೆರ್ನಿಯಿಂದ ಯೋಕೊಸುಕಾ ಶಸ್ತ್ರಾಗಾರದ ನಿರ್ಮಾಣ), ಮತ್ತು ಗ್ರೇಟ್‌ ಬ್ರಿಟನ್‌ (ವೈವಿಧ್ಯಮಯ ತಾಣಗಳಿಗೆ ಆಧುನಿಕ ಉಪಕರಣಗಳ, ಅದರಲ್ಲೂ ವಿಶೇಷವಾಗಿ ಹಡಗುಗಳ ಪೂರೈಕೆ, ಮತ್ತು ಟ್ರೇಸಿ ನಿಯೋಗದೊಂದಿಗೆ ನೌಕಾಪಡೆಗೆ ತರಬೇತು ನೀಡುವಿಕೆ).

ಮೆಯಿಜಿ ಪುನಃ-ಪ್ರತಿಷ್ಠಾಪನೆ[ಬದಲಾಯಿಸಿ]

1872ರಲ್ಲಿ ಜಪಾನ್‌ಗೆ ಭೇಟಿನೀಡಿದ ಎರಡನೇ ಫ್ರೆಂಚ್‌ ಸೇನಾ ನಿಯೋಗವನ್ನು ಮೆಯಿಜಿ ಚಕ್ರವರ್ತಿಯು ಸ್ವಾಗತಿಸಿದ ವೈಖರಿ .

೧೮೬೮ರಲ್ಲಿ ನಡೆದ ಮೆಯಿಜಿ ಪುನಃ-ಪ್ರತಿಷ್ಠಾಪನೆಯನ್ನು ಅನುಸರಿಸಿ, ಜಪಾನ್‌ಗೆ ಬಂದ ಎರಡನೇ ಫ್ರೆಂಚ್‌ ಸೇನಾ ನಿಯೋಗದ (೧೮೭೨-೧೮೮೦) ಮೂಲಕ, ಮತ್ತೊಮ್ಮೆ ಫ್ರೆಂಚ್‌ ಸಲಹೆಗಾರರ ನೆರವಿನೊಂದಿಗೆ ಮುಂಚಿನ ಚಕ್ರಾಧಿಪತ್ಯದ ಜಪಾನಿಯರ ಸೇನೆಯು ಅತ್ಯಾವಶ್ಯಕವಾಗಿ ಅಭಿವೃದ್ಧಿಪಡಿಸಲ್ಪಟ್ಟಿತು. ಹಿಂದಿನ ಸಮುರಾಯ್‌‌ ವರ್ಗವನ್ನು ಪಲ್ಲಟಗೊಳಿಸಿದ್ದ ಬಹುಪಾಲು ರೈತರನ್ನು ಒಳಗೊಂಡಿದ್ದ, ಒತ್ತಾಯದ ದಾಖಲಾತಿಗಳ ಒಂದು ಸೇನೆಯು, ೧೮೭೩ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಫ್ರೆಂಚ್‌ ನೆರವಿನೊಂದಿಗೆ ನೆಲೆಗೊಳಿಸಲ್ಪಟ್ಟಿತು. ಈ ಪಡೆಗಳು ಮತ್ತಷ್ಟು ಆಧುನೀಕರಿಸಲ್ಪಟ್ಟವು ಮತ್ತು ಫ್ರೆಂಚರಿಂದ ಸ್ಥಾಪಿಸಲ್ಪಟ್ಟಿದ್ದ ಸೇನಾ ಅಕಾಡೆಮಿಗಳಲ್ಲಿ ಅವುಗಳ ಅಧಿಕಾರಿಗಳು ತರಬೇತಿ ಪಡೆದರು, ಮತ್ತು ೧೮೭೭ರಲ್ಲಿ ನಡೆದ ಸತ್ಸುಮಾ ದಂಗೆಯಲ್ಲಿ ಹಿಂದಿನ ಸಮುರಾಯ್‌ಗಳ ವಿರುದ್ಧ ಅವರು ಮಧ್ಯಪ್ರವೇಶ ಮಾಡಿದರು. ಬೀದಿಗಳಲ್ಲಿ ಕತ್ತಿಗಳು ಮತ್ತು ಬಂದೂಕುಗಳನ್ನು ಒಯ್ಯುವುದನ್ನು, ೧೮೭೬ರಲ್ಲಿ ಬಂದ ಹೈಟೋರೀ ರಾಜಶಾಸನವು ನಿಷೇಧಿಸಿತು.

ಸತ್ಸುಮಾ ದಂಗೆ[ಬದಲಾಯಿಸಿ]

ಸಮುರಾಯ್‌‌ ದಿರಿಸಿನಲ್ಲಿರುವ ತನ್ನ ಅಧಿಕಾರಿಗಳಿಂದ ಸುತ್ತುವರೆಯಲ್ಪಟ್ಟಿರುವ ಸೈಗೋ ಟಾಕಾಮೊರಿ (ಪಾಶ್ಚಾತ್ಯ ಸಮವಸ್ತ್ರದಲ್ಲಿ ಕುಳಿತಿರುವವ).1877ರ ಲೆ ಮಾಂಡೆ ಇಲಸ್ಟ್ರೆಯಲ್ಲಿನ ಸುದ್ದಿಲೇಖನ.
ಶಿರೋಯಾಮಾ ಕದನದ ನಿರ್ಣಾಯಕ ನಿಲುವಿನಲ್ಲಿ ಎರಡೂ ಕಡೆಯವರು ಬಂದೂಕುಗಳನ್ನು ಬಳಸಿದರು.

ದಿ ಲಾಸ್ಟ್‌ ಸಮುರಾಯ್‌‌‌ ನಲ್ಲಿ ವಿವರಿಸಲ್ಪಟ್ಟಿರುವ ಐತಿಹಾಸಿಕ ಘಟನೆಯಾದ ಸತ್ಸುಮಾ ದಂಗೆಯು, ಚಲನಚಿತ್ರದಲ್ಲಿ ತೋರಿಸಿರುವುದಕ್ಕಿಂತಲೂ ಇನ್ನೂ ಹೆಚ್ಚು ಏಕಪಕ್ಷೀಯವಾಗಿತ್ತು; ಆದರೂ ಪ್ರತಿಯೊಂದು ಸೇನಾಪಕ್ಷದಲ್ಲೂ ಅಳವಡಿಸಿಕೊಳ್ಳಲಾಗಿದ್ದ ಸೇನಾ ಕೌಶಲಗಳ ನಡುವೆ ಅಂಥಾ ದೊಡ್ಡ ವ್ಯತ್ಯಾಸವೇನೂ ಇರಲಿಲ್ಲ. ಬೊಷಿನ್‌ ಯುದ್ಧವಾದ ಹತ್ತು ವರ್ಷಗಳ ನಂತರ, ಮತ್ತು ಚಕ್ರಾಧಿಪತ್ಯದ ಜಪಾನಿ ಸೇನೆಯ ಸ್ಥಾಪನೆಯಾದ ಹತ್ತು ವರ್ಷಗಳ ನಂತರ ೧೮೭೭ರಲ್ಲಿ ಇದು ನಡೆಯಿತು. ಕವಾಮುರಾ ಸುಮಿಯೋಷಿ ಅಡಿಯಲ್ಲಿ ೩೦೦,೦೦೦ ಯೋಧರನ್ನು ಒಳಗೊಂಡಿದ್ದ ಒಂದು ಬೃಹತ್‌‌ ಪಡೆಯನ್ನು ಸೈಗೋ ಟಕಾಮೊರಿಯೊಂದಿಗೆ ಹೋರಾಡಲು ಕ್ಯೂಷು ದ್ವೀಪಕ್ಕೆ ಚಕ್ರಾಧಿಪತ್ಯದ ಸೇನಾವಿಭಾಗಗಳು ಕಳಿಸಿದವು; ಈ ಪಡೆಗಳು ಯುದ್ಧದ ಎಲ್ಲಾ ಮಗ್ಗುಲುಗಳಲ್ಲೂ ಆಧುನಿಕವಾಗಿದ್ದು ಹಾವಿಟ್ಸರ್‌‌ ತುಪಾಕಿಗಳು ಮತ್ತು ವೀಕ್ಷಣೆಗಳ ಬಲೂನುಗಳನ್ನು ಅವು ಬಳಸಿದವು.

ಒಟ್ಟು ಸಂಖ್ಯೆಯಲ್ಲಿ ಸುಮಾರು ೪೦,೦೦೦ದಷ್ಟಿದ್ದ ಸೈಗೋ ಟಕಾಮೊರಿಯ ಬಂಡಾಯಗಾರರು, ಶಿರೋಯಾಮಾದ ಕದನದಲ್ಲಿನ ಅಂತಿಮ ನಿಲುವಿನ ಹೊತ್ತಿಗೆ ಸುಮಾರು ೪೦೦ರಷ್ಟಕ್ಕೆ ಕುಗ್ಗಿಹೋಗಿದ್ದರು. ಸಮುರಾಯ್ ಜಾತಿಯ ಸಂರಕ್ಷಣೆಗಾಗಿ ಅವರು ಹೋರಾಡಿದರಾದರೂ, ಮತ್ತು ಅಧಿಕಾರಿಗಳು ಹೆಚ್ಚಿನಂಶ ಸಮುರಾಯ್‌‌ ವಕ್ಷಗವಚಗಳನ್ನು ಧರಿಸಿದ್ದರಾದರೂ, ಪಾಶ್ಚಾತ್ಯ ಸೇನಾ ವಿಧಾನಗಳನ್ನು ಅವರು ಉಪೇಕ್ಷಿಸಲಿಲ್ಲ: ಬಂದೂಕುಗಳು ಮತ್ತು ಫಿರಂಗಿಗಳನ್ನು ಅವರು ಬಳಸಿದರು, ಮತ್ತು ಸೈಗೋ ಟಕಾಮೊರಿಯು ಓರ್ವ ಪಾಶ್ಚಾತ್ಯ ದಂಡನಾಯಕನ ಸಮವಸ್ತ್ರವನ್ನು ಧರಿಸಿರುವಂತೆ, ಸೈಗೋ ಟಕಾಮೊರಿಯ ಎಲ್ಲಾ ಸಮಕಾಲೀನ ಚಿತ್ರಣಗಳೂ ಅವನನ್ನು ಚಿತ್ರಿಸಿವೆ. ತಿಕ್ಕಾಟದ ಅಂತ್ಯದ ವೇಳೆಗೆ ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಯ ಕೊರತೆ ಕಂಡುಬಂದಿದ್ದರಿಂದಾಗಿ, ಅತಿ ಸಾಮೀಪ್ಯದ ಯುದ್ಧತಂತ್ರಗಳಿಗೆ ಅವರು ಮರಳಬೇಕಾಯಿತು ಮತ್ತು ಕತ್ತಿಗಳು, ಬಿಲ್ಲುಗಳು ಹಾಗೂ ಬಾಣಗಳನ್ನು ಬಳಸಬೇಕಾಗಿಬಂತು. ಚಲನಚಿತ್ರಕ್ಕೆ ಹೋಲಿಕೆಯಾಗಿರುವ ಒಂದು ರೂಪದಲ್ಲಿ, ಸರ್ಕಾರದ ಒಂದು ಹೆಚ್ಚು ಕಾರ್ಯಸಾಧ್ಯ-ಸದ್ಗುಣಿ ಸ್ವರೂಪವೊಂದಕ್ಕಾಗಿಯೂ ಅವರು ಹೋರಾಡಿದರು ("新政厚徳" ಎಂಬುದು ಅವರ ಘೋಷಣೆಯಾಗಿತ್ತು, ಅಂದರೆ "ಹೊಸ ಸರ್ಕಾರ, ಉನ್ನತ ನೈತಿಕತೆ" ಎಂಬುದು ಇದರರ್ಥವಾಗಿತ್ತು).

ಬೊಷಿನ್‌ ಯುದ್ಧಕ್ಕೆ ತದ್ವಿರುದ್ಧವಾಗಿ, ಸತ್ಸುಮಾ ದಂಗೆಯ ಯಾವುದೇ ಪಕ್ಷದಲ್ಲಿ ಹೋರಾಟ ಮಾಡಿರುವಂತೆ ಪಾಶ್ಚಾತ್ಯರು ದಾಖಲಿಸಲ್ಪಟ್ಟಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಸತ್ಸುಮಾ ದಂಗೆಯ ಅವಧಿಯಲ್ಲಿ ವಿದೇಶಿ ಯೋಧರೊಂದಿಗೆ ಜೊತೆ-ಜೊತೆಯಾಗಿ ಸೈಗೋ ಟಕಾಮೊರಿಯು ಹೋರಾಡಲಿಲ್ಲ. ಬೊಷಿನ್‌ ಯುದ್ಧದ ಸಂದರ್ಭದಲ್ಲಿ, ಬ್ರಿಟಿಷ್‌ ಮತ್ತು ಅಮೆರಿಕಾದ ಸೇನಾ ಸಲಹೆಗಾರಿಂದ[೮] ಸೈಗೋ ಬೆಂಬಲವನ್ನು ಪಡೆಯಬಹುದಾಗಿತ್ತು; ಆದರೆ ಜಪಾನಿಯರ ಒಂದು ಉದ್ದೇಶಕ್ಕಾಗಿ ವಾಸ್ತವವಾಗಿ ಹೋರಾಡುತ್ತಿದ್ದ ಏಕೈಕ ದಾಖಲಿತ ನಿದರ್ಶನವು ಎನೊಮೊಟೊ ಟಕೆಯಾಕಿಯನ್ನು ಬೆಂಬಲಿಸುತ್ತಿದ್ದ ಫ್ರೆಂಚ್‌ ಯೋಧರ ಕುರಿತದ್ದಾಗಿತ್ತು.

ಸೈಗೋ ಟಾಕಾಮೊರಿಯ ಮೇಲೆ ಕಾಟ್ಸುಮೊಟೊ ಪಾತ್ರವು ಆಧರಿಸಿದೆಯಾದರೂ, ಚಲನಚಿತ್ರದಲ್ಲಿನ ಕೊನೆಯ ಕದನವು ಅವನ ಕೊನೆಯ ನಿಲುವನ್ನು ಆಧರಿಸದೆ ಮತ್ತೊಂದು ಕದನವನ್ನು ಆಧರಿಸಿದೆ; ಹೆಚ್ಚೂಕಮ್ಮಿ ಅದೇ ವೇಳೆಗೆ ನಡೆದ ಸದರಿ ಮತ್ತೊಂದು ಕದನದಲ್ಲಿ, ಯಾವುದೇ ಫಿರಂಗಿ-ಬಂದೂಕುಗಳು ಅಥವಾ ಪಾಶ್ಚಾತ್ಯ ಶಸ್ತ್ರಾಸ್ತ್ರಗಳನ್ನು ಹೊಂದಿರದ ಚಕ್ರಾಧಿಪತ್ಯದ ಹೊಸ ಸೇನೆಯ ಮೇಲೆ ಅಸಂತುಷ್ಟ ಆಶ್ರಿತರ ಒಂದು ಗುಂಪು ದಾಳಿಮಾಡಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಮತ್ತಷ್ಟು ವಿದೇಶಿ ನೆರವು[ಬದಲಾಯಿಸಿ]

ಜಪಾನ್‌ಗೆ ಮೂರನೇ ಫ್ರೆಂಚ್‌ ಸೇನಾ ನಿಯೋಗವನ್ನು (೧೮೮೪-೧೮೮೯) ನಂತರದಲ್ಲಿ ಕಳಿಸಲಾಯಿತು. ಆದಾಗ್ಯೂ, ಫ್ರಾಂಕೋ-ಪ್ರಷ್ಯನ್‌‌ ಯುದ್ಧದಲ್ಲಿ ಜರ್ಮನ್‌‌ ವಿಜಯವು ದಾಖಲಿಸಲ್ಪಟ್ಟ ಕಾರಣದಿಂದಾಗಿ, ತಮ್ಮ ಸೇನೆಗೆ ಒಂದು ಮಾದರಿಯಾಗಿ ಪ್ರಷ್ಯಾದ ಮೇಲೆಯೂ ಜಪಾನಿ ಸರ್ಕಾರವು ವಿಶ್ವಾಸವನ್ನಿಟ್ಟಿತು, ಮತ್ತು ೧೮೮೬ರಿಂದ ೧೮೮೯ರವರೆಗೆ ಜಪಾನಿಯರ ಸಾಮಾನ್ಯ ಸಿಬ್ಬಂದಿಗೆ ತರಬೇತು ನೀಡುವ ದೃಷ್ಟಿಯಿಂದ, ಇಬ್ಬರು ಜರ್ಮನ್‌‌ ಸೇನಾ ಸಲಹೆಗಾರರನ್ನು (ಮೇಜರ್‌‌ ಜಾಕೋಬ್‌ ಮೆಕೆಲ್‌‌ ಮತ್ತು ಕ್ಯಾಪ್ಟನ್‌ ವಾನ್‌ ಬ್ಲಾಕೆನ್‌ಬೋರ್ಗ್‌) ಅದು ಎರವಲು ಸೇವೆಗೆ ನೇಮಿಸಿಕೊಂಡಿತು. ಇತರ ಚಿರಪರಿಚಿತ ವಿದೇಶಿ ಸೇನಾ-ಸಮಾಲೋಚಕರ ಪೈಕಿ, ೧೮೮೪ರಿಂದ ೧೮೮೮ರವರೆಗೆ ಒಸಾಕಾ ಎರಕಗೃಹದಲ್ಲಿ ಕಾರ್ಯನಿರ್ವಹಿಸಿದ ಇಟಲಿಯ ಮೇಜರ್‌ ಪಾಂಪಿಯೋ ಗ್ರಿಲ್ಲೊ, ಇದಾದ ನಂತರ ೧೮೮೯ರಿಂದ ೧೮೯೦ರವರೆಗೆ ಸೇವೆ ಸಲ್ಲಿಸಿದ ಮೇಜರ್‌‌ ಕ್ವಾರಟೆಜಿ, ಹಾಗೂ ೧೮೮೩ರಿಂದ ೧೮೮೬ರವರೆಗೆ ಕಡಲತೀರದ ರಕ್ಷಣೆಗಳನ್ನು ಸುಧಾರಿಸುವ ಕುರಿತಾಗಿ ಕೆಲಸ ಮಾಡಿದ ಡಚ್‌ ಕ್ಯಾಪ್ಟನ್‌ ಸ್ಕೆರ್ಮ್‌ಬೆಕ್‌‌ ಸೇರಿದ್ದರು.

೧೮೮೯ ಮತ್ತು ೧೯೧೮ರ ನಡುವಣ ಮತ್ತಾವ ವಿದೇಶಿ ಸೇನಾ-ಸಲಹೆಗಾರರ ಸೇವೆಯನ್ನು ಜಪಾನ್‌ ಬಳಸಿಕೊಳ್ಳಲಿಲ್ಲ; ಅದರೆ, ಇನ್ನೂ ಸಾಕಷ್ಟು ಬೆಳೆದಿರದ ಜಪಾನಿಯರ ವಾಯುಪಡೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಹಮ್ಮಿಕೊಂಡ ಯೋಜನೆಯಲ್ಲಿ ನೆರವಾಗಲೆಂದು, ದಳಪತಿ ಜಾಕ್ವೆಸ್‌-ಪಾಲ್‌ ಫೌರೆ ನೇತೃತ್ವದ ನಿಯೋಗವೊಂದಕ್ಕಾಗಿ ಮನವಿ ಮಾಡಿಕೊಳ್ಳಲಾಯಿತು. ಇದರ ಫಲವಾಗಿ ಮತ್ತೊಮ್ಮೆ ಜಪಾನ್‌ಗೆ ನಾಲ್ಕನೇ ಫ್ರೆಂಚ್‌ ಸೇನಾ ನಿಯೋಗವು (೧೯೧೮-೧೯೧೯) ಭೇಟಿನೀಡಿತು.

ಜಪಾನಿಯರ ಜೊತೆಜೊತೆಗೆ ಹೋರಾಡಿದ ಪಾಶ್ಚಾತ್ಯರು[ಬದಲಾಯಿಸಿ]

1868ರಲ್ಲಿ ಷೋಗನ್‌ಗಾಗಿ ಹೋರಾಡಿದ ಜೂಲ್ಸ್‌ ಬ್ರೂನೆಟ್‌
ಸಮುರಾಯ್‌‌ ದಿರಿಸಿನಲ್ಲಿ ಹೋರಾಡಿದ ಫ್ರೆಂಚ್‌ ನೌಕಾಪಡೆ ಅಧಿಕಾರಿ ಯೂಜೀನ್‌ ಕೊಲ್ಲಾಷೆ.

ಐತಿಹಾಸಿಕವಾಗಿ ಹೇಳುವುದಾದರೆ, ಜಪಾನಿಯರ ನಾಗರಿಕ ಯುದ್ಧವೊಂದರಲ್ಲಿ ಒಂದು ಸಕ್ರಿಯ ಪಾತ್ರವನ್ನು ವಹಿಸಿದ ವಿದೇಶಿಯರ ಏಕೈಕ ಪ್ರಮುಖ ನಿದರ್ಶನವೆಂದರೆ (೧೬೩೭ - ೧೬೩೮ರ ಷಿಮಾಬಾರಾ ದಂಗೆಯ ಸಂದರ್ಭದಲ್ಲಿ ಸಿಕ್ಕಿದ ಒಂದು ಸೀಮಿತ ಡಚ್‌ ನೌಕಾ ಬೆಂಬಲವನ್ನು ಹೊರತುಪಡಿಸಿ), ಜೂಲ್ಸ್‌ ಬ್ರೂನೆಟ್‌‌ ಅಡಿಯಲ್ಲಿ ಫ್ರೆಂಚ್‌ ಸೇನಾ ಸಲಹೆಗಾರರದಾಗಿದೆ (ಆರಂಭದಲ್ಲಿ ೧೮೬೭ರ ಫ್ರೆಂಚ್‌ ಸೇನಾ ನಿಯೋಗದ ಸದಸ್ಯರಾಗಿದ್ದವರು); ಈ ಸಲಹೆಗಾರರು ಬೊಷಿನ್‌ ಯುದ್ಧದ ಸಂದರ್ಭದಲ್ಲಿ ಎನೊಮೊಟೊ ಟಕೆಯಾಕಿ ಅಡಿಯಲ್ಲಿ ಷೋಗನ್‌ಗೆ ಅನುಕೂಲಕರವಾಗಿರುವ ಪಡೆಗಳನ್ನು ಸೇರಿಕೊಂಡಿದ್ದರು. ಷೋಗನ್‌ಗಿರಿಯ ಪಡೆಗಳ ಸೇನಾ ಸಂಘಟನೆಯಲ್ಲಿ ಅವರು ಆಳವಾಗಿ ಪಾಲ್ಗೊಂಡಿದ್ದರು, ಮತ್ತು ಹೆಚ್ಚೂಕಮ್ಮಿ ತಿಕ್ಕಾಟದ ಅಂತ್ಯದವರೆಗೂ (ಅವರಲ್ಲಿ ಹಲವು ಮಂದಿ ಅತೀವವಾಗಿ ಗಾಯಗೊಂಡರು) ಅವರು ಹೋರಾಡಿದರು. ಶರಣಾಗತಿಗೆ ಕೆಲವೇ ದಿನಗಳು ಮುಂಚಿತವಾಗಿ, ಸನ್ನಿವೇಶವು ಹತಾಶ ಸ್ಥಿತಿಯನ್ನು ತಲುಪಿದ್ದಾಗ, ಹಾಕೋಡೇಟ್‌‌ನಲ್ಲಿ ಲಂಗರು ಇಳಿಸಿ ಕಾಯುತ್ತಿದ್ದ ಕೋಯೆಟ್ಲೋಗನ್‌ ಎಂಬ ಫ್ರೆಂಚ್‌ ಸಣ್ಣ ಯುದ್ಧನೌಕೆಯಲ್ಲಿ ಅವರು ತೆರಳಿದರು. ಈ ಫ್ರೆಂಚ್‌ ಅಧಿಕಾರಿಗಳ ಪೈಕಿ ಕೆಲವೊಬ್ಬರು (ಫ್ರೆಂಚ್‌ ನೌಕಾ ಅಧಿಕಾರಿ ಯೂಜೀನ್‌ ಕೊಲ್ಲಾಷೆಯಂಥವರು) ಸಮುರಾಯ್‌‌ ದಿರಿಸನ್ನು ಧರಿಸಿದ್ದರಾದರೂ, ಬಕುಫುವಿನ ಸೇನಾಪಡೆಗಳಲ್ಲಿನ ಬಹುತೇಕ ಅಧಿಕಾರಿಗಳು ಮತ್ತು ಅವರ ಫ್ರೆಂಚ್‌ ಸಹೋದ್ಯೋಗಿಗಳು ಫ್ರೆಂಚ್‌ ಸೇನಾ ಸಮವಸ್ತ್ರಗಳನ್ನು ಧರಿಸಿದ್ದರು.

೧೯ನೇ ಶತಮಾನದ ಅಂತ್ಯಭಾಗದಲ್ಲಿ ಜಪಾನಿಯರು ತಮ್ಮ ಸೇನೆಯನ್ನು ಆಧುನೀಕರಿಸಲು ವಿದೇಶಿ ಸಲಹೆಗಾರರ ಸೇವೆಯನ್ನು ಎರವಲುಪಡೆದರಾದರೂ, ಅವರಲ್ಲಿ ಬಹುಪಾಲು ಮಂದಿ ಫ್ರೆಂಚರಾಗಿದ್ದರೇ ಹೊರತು, ಅಮೆರಿಕನ್ನರಾಗಿರಲಿಲ್ಲ. ಕೆನ್‌ ವತಾನಬೆಯ ಪಾತ್ರವು ನಿಜವಾದ ಸೈಗೋ ಟಕಾಮೊರಿಯನ್ನು ಆಧರಿಸಿತ್ತು ಮತ್ತು ಇವನ ಸಾವಿನ ನಿಖರ ಶೈಲಿಯು ಅಜ್ಞಾತವಾಗಿದೆ. ಅವನ ಅಧೀನದ ನೌಕರರು ನೀಡಿದ ವಿವರಗಳು ಪ್ರತಿಪಾದಿಸುವ ಪ್ರಕಾರ, ಅವನು ಸ್ವತಃ ತಾನು ನೆಟ್ಟಗೆ ನಿಂತುಕೊಂಡ ಮತ್ತು ತನ್ನ ಗಾಯದ ಪಕ್ಕದಲ್ಲಿ ಹೊಟ್ಟೆಬಗೆತವನ್ನು ಮಾಡಿಕೊಂಡ ಅಥವಾ ತನ್ನ ಆತ್ಮಹತ್ಯೆಯಲ್ಲಿ ನೆರವಾಗುವಂತೆ ಓರ್ವ ಒಡನಾಡಿಗೆ ಅವನು ಮನವಿಮಾಡಿಕೊಂಡ.[ಸೂಕ್ತ ಉಲ್ಲೇಖನ ಬೇಕು] ಚರ್ಚೆಯ ಸಂದರ್ಭದಲ್ಲಿ, ಕೆಲವೊಬ್ಬ ವಿದ್ವಾಂಸರು[who?] ಸೂಚಿಸಿರುವ ಪ್ರಕಾರ, ಈ ಎರಡೂ ನಿರ್ದಶನಗಳೂ ನಡೆದಿಲ್ಲ; ತನಗೆ ಆದ ಗಾಯವನ್ನು ಅನುಸರಿಸಿ ಸೈಗೋ ಆಘಾತಕ್ಕೆ ಈಡಾಗಿರಬಹುದು ಮತ್ತು ಮಾತನಾಡುವ ಸಾಮರ್ಥ್ಯವನ್ನು ಅವನು ಕಳೆದುಕೊಂಡಿರಬಹುದು. ಈ ಸ್ಥಿತಿಯಲ್ಲಿ ಅವನನ್ನು ಹಲವಾರು ಒಡನಾಡಿಗಳು ಕಂಡನಂತರ, ಅವನ ತಲೆಯನ್ನು ಕತ್ತರಿಸಿರಬಹುದು; ತನ್ಮೂಲಕ ಅವನು ಬಯಸಿದ್ದ ಎಂಬುದಾಗಿ ತಾವು ಅರಿತಿದ್ದ, ಯೋಧನ ಆತ್ಮಹತ್ಯೆಯನ್ನು ಈಡೇರಿಸುವಲ್ಲಿ ಅವನಿಗೆ ನೆರವಾಗಿರಬಹುದು. ನಂತರದಲ್ಲಿ, ಓರ್ವ ನಿಜವಾದ ಸಮುರಾಯ್‌‌ ಆಗಿ ಅವನ ಸ್ಥಾನಮಾನವನ್ನು ಸಂರಕ್ಷಿಸುವ ದೃಷ್ಟಿಯಿಂದ, ಅವನು ಹೊಟ್ಟೆಬಗೆತವನ್ನು ಕೈಗೊಂಡ ಎಂಬುದಾಗಿ ಅವರು ಹೇಳಿರಬಹುದು.

ಇವನ್ನೂ ಗಮನಿಸಿ[ಬದಲಾಯಿಸಿ]

 • ಒ-ಯಟೊಯಿ ಗೈಕೊಕುಜಿನ್‌‌
 • ಸಮುರಾಯ್‌‌
 • ಒಮುರಾ ಮುಸುಜಿರೊ
 • ಜಪಾನ್‌ಗೆ ತೆರಳಿದ ಫ್ರೆಂಚ್‌ ಸೇನಾ ನಿಯೋಗ (೧೮೬೭)
 • ಮಾರ್ಕ್‌ ರಾಪ್ಪಾಪೋರ್ಟ್‌ (ಜೀವಿಗಳ ಪರಿಣಾಮಗಳ ಕಲಾವಿದ)
 • ಎಂಜಿಯೊ-ಜಿ ದೇವಸ್ಥಾನ - ಅನೇಕ ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಯಿತು.

ಟಿಪ್ಪಣಿಗಳು[ಬದಲಾಯಿಸಿ]

 1. http://boxofficemojo.com/movies/?id=lastsamurai.htm
 2. "ದಿ ಲಾಸ್ಟ್‌ ಸಮುರಾಯ್‌‌ (2003) : ಸುದ್ದಿ". Archived from the original on 2010-12-18. Retrieved 2010-08-23.
 3. ೩.೦ ೩.೧ "ಯಾಹೂ! ಗ್ರೂಪ್ಸ್‌‌". Archived from the original on 2010-12-25. Retrieved 2021-07-20.
 4. ದಿ ಲಾಸ್ಟ್‌ ಸಮುರಾಯ್‌‌ Archived 2012-10-09 ವೇಬ್ಯಾಕ್ ಮೆಷಿನ್ ನಲ್ಲಿ. ರೋಜರ್‌ ಎಬರ್ಟ್‌, ೦೮/೦೮/೧೦ರಂದು ಮರುಸಂಪಾದಿಸಲಾಯಿತು
 5. ಮೆಟಾಕ್ರಿಟಿಕ್‌‌ ಸ್ಕೋರ್‌‌ ಫಾರ್‌ ದಿ ಲಾಸ್ಟ್‌ ಸಮುರಾಯ್‌‌
 6. ರಾಟನ್‌ ಟೊಮೆಟೋಸ್‌ ಆನ್‌ ದಿ ಲಾಸ್ಟ್‌ ಸಮುರಾಯ್
 7. ದಿ ಲಾಸ್ಟ್‌ ಸಮುರಾಯ್‌‌ಗೆ ಸಂಬಂಧಿಸಿದ ಪ್ರಶಸ್ತಿಗಳು(2003), IMDb
 8. ಇದು IIIನೇ ನೆಪೋಲಿಯನ್‌‌ಗೆ ಬರೆದ ಪತ್ರದಲ್ಲಿ ಜೂಲ್ಸ್‌ ಬ್ರೂನೆಟ್‌‌ ಮಾಡಿದ ಸಮರ್ಥನೆ: "ಫ್ರೆಂಚ್‌ ಹಿತಾಸಕ್ತಿಗಳಿಗೆ ಪ್ರತಿಕೂಲವಾಗಿರುವ [ದಕ್ಷಿಣದ ಡೈಮಿಯೋಸ್‌ನ] ಈ ಸಂತೋಷಕೂಟದಲ್ಲಿ, ನಿವೃತ್ತರಾಗಿರುವ ಅಥವಾ ರಜೆಯ ಮೇಲಿರುವ ಹಲವಾರು ಅಮೆರಿಕಾದ ಮತ್ತು ಬ್ರಿಟಿಷ್‌ ಅಧಿಕಾರಿಗಳು ಹಾಜರಿರುವುದರ ಕುರಿತು ಚಕ್ರವರ್ತಿಗೆ ನಾನು ಸೂಚನೆ ನೀಡಬೇಕು. ನಮ್ಮ ಶತ್ರುಗಳ ನಡುವೆ ಪಾಶ್ಚಾತ್ಯ ಮುಖ್ಯಸ್ಥ ಅಧಿಕಾರಿಗಳ ಹಾಜರಿಯು, ಒಂದು ರಾಜಕೀಯ ದೃಷ್ಟಿಕೋನದಿಂದ ನನ್ನ ಯಶಸ್ಸನ್ನು ಅಪಾಯಕ್ಕೆ ಸಿಕ್ಕಿಸಬಹುದು, ಆದರೆ ಮಹಾಪ್ರಭುವಿನ ಗಮನಕ್ಕೆ ಮಾಹಿತಿಯನ್ನು ತಲುಪಿಸುವುದರಿಂದ ನನ್ನನ್ನು ಯಾರೂ ತಡೆಯಲಾರರು; ಯಾವುದೇ ಸಂದೇಹಕ್ಕೆ ಎಡೆಯಿಲ್ಲದೆ ಅವರು ಕುತೂಹಲಕರವಾಗಿ ಕಂಡುಬರುತ್ತಾರೆ." "ಸೋಲಿ ಎಟ್‌ ಲ್ಯೂಮಿಯೇರ್‌‌"ನಲ್ಲಿ ಪುಟ ೮೧ (ಫ್ರೆಂಚ್‌)

ಆಕರಗಳು[ಬದಲಾಯಿಸಿ]

 • ‌‌ಪೋಲಾಕ್, ಕ್ರಿಸ್ಟಿಯನ್‌‌. (೨೦೦೧). ಸೊಲೀ ಎಟ್‌ ಲ್ಯೂಮಿಯೆರ್ಸ್‌: ಎಲ್‌'ಏಜ್‌ ಡಿ'ಒರ್‌ ಡೆಸ್‌ ಎಚೇಂಜಸ್‌ ಫ್ರಾಂಕೊ-ಜಪೊನೈಸ್‌ (ಡೆಸ್‌ ಆರಿಜಿನ್ಸ್‌ ಔಕ್ಸ್‌ ಅನೀಸ್‌ ೧೯೫೦). ಟೋಕಿಯೊ: ಛೇಂಬ್ರೆ ಡೆ ಕಾಮರ್ಸ್‌ ಎಟ್‌ ಡಿ'ಇಂಡಸ್ಟ್ರಿ ಫ್ರಾಂಚೈಸ್‌ ಡು ಜಪಾನ್‌, ಹ್ಯಾಚೆಟ್‌‌ ಫ್ಯೂಜಿನ್‌ ಗಹೊಷಾ (アシェット婦人画報社).
 • __________. (೨೦೦೨). 絹と光: 知られざる日仏交流೧೦೦年の歴史 (江戸時代-೧೯೫೦年代) ಕಿನು ಟು ಹಿಕಾರಿಯೊ: ಶಿರಾರೆಜಾರು ನಿಚಿ-ಫಟ್ಸು ಕೊರ್ಯು ೧೦೦-ನೆನ್‌‌ ನೊ ರೆಕಿಶಿ (ಎಡೊ ಜಿಡಾಯಿ-೧೯೫೦-ನೆಂಡಾಯಿ). ಟೋಕಿಯೊ: ಅಶೆಟ್ಟೊ ಫ್ಯೂಜಿನ್‌ ಗಹೊಷಾ, ೨೦೦೨. ೧೦-ISBN ೪-೫೭೩-೦೬೨೧೦-೬; ೧೩-ISBN ೯೭೮-೪-೫೭೩-೦೬೨೧೦-೮; OCLC 50875162

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ದಿ ಲಾಸ್ಟ್‌ ಸಮುರಾಯ್‌]]