ಥಾಯ್ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥಾಯ್ ಭಾಷೆ
ภาษาไทย Phasa Thai 
ಉಚ್ಛಾರಣೆ: IPA: [pʰāːsǎː tʰāj]
ಬಳಕೆಯಲ್ಲಿರುವ 
ಪ್ರದೇಶಗಳು:
ಥೈಲ್ಯಾಂಡ್ (ಕೇಂದ್ರ ಥೈಲೆಂಡ್, ಪಶ್ಚಿಮ ಥೈಲೆಂಡ್, ಪೂರ್ವ ಥೈಲೆಂಡ್, ನಾಕೋನ್ ರಾತ್ಚಿಸಿಮಾ and ಉತ್ತರಾದಿತ್ ಪ್ರಾಂತ್ಯ)
ಕಾಂಬೋಡಿಯಾ (ಕೋ ಕೋಂಗ್ ಜಿಲ್ಲೆ)
ಒಟ್ಟು 
ಮಾತನಾಡುವವರು:
20 ರಿಂದ 36 ಮಿಲಿಯನ್
ಭಾಷಾ ಕುಟುಂಬ: ಕ್ರಾ-ಡೈ
 ಥಾಯ್
  ನೈಋತ್ಯ ತಾಯ್
   ಚಿಯಾಂಗ್ ಸೈನ್
    ಥಾಯ್ ಭಾಷೆ 
ಬರವಣಿಗೆ: ಥಾಯ್ ಲಿಪಿ
ಥಾಯ್ ಬ್ರೈಲ್ ಲಿಪಿ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಥೈಲೆಂಡ್
ನಿಯಂತ್ರಿಸುವ
ಪ್ರಾಧಿಕಾರ:
ರಾಯಲ್ ಸೊಸೈಟಿ ಆಫ್ ಥೈಲ್ಯಾಂಡ್
ಭಾಷೆಯ ಸಂಕೇತಗಳು
ISO 639-1: th
ISO 639-2: tha
ISO/FDIS 639-3: tha 
Idioma tailandés.png
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಥಾಯ್ ಭಾಷೆ - ಭಾಷಾ ವಿಜ್ಞಾನದಲ್ಲಿ ಪಾರಿಭಾಷಿಕವಾಗಿ ಅಯೋಗಾತ್ಮಕ ಭಾಷೆ ಎಂದು ಕರೆಯಲಾಗುವ ಭಾಷಾವರ್ಗಕ್ಕೆ ಸೇರಿದ ಭಾಷೆ. ಇಂಥ ಭಾಷೆಯಲ್ಲಿರುವ ಶಬ್ದಗಳು ವಿಭಕ್ತಿ, ಲಿಂಗ ವಚನ, ಕ್ರಿಯಾರ್ಥ ಅಥವಾ ಕಾಲ ಸಂಬಂಧವಾದ ಯಾವುದೇ ಬದಲಾವಣೆಗಳಿಗೆ ಒಳಗಾಗದೆ ವಾಕ್ಯಗಳಲ್ಲಿ ಪ್ರಯೋಗವಾಗುತ್ತವೆ. ಒಂದು ಅರ್ಥದಲ್ಲಿ, ಇಂಥ ಭಾಷೆಗೆ ಯಾವುದೇ ವ್ಯಾಕರಣವೂ ಅಗತ್ಯವಾಗುವುದಿಲ್ಲ.[೧]

ಬಳಕೆಯ ಪ್ರದೇಶ[ಬದಲಾಯಿಸಿ]

ಥೈಲೆಂಡಿನಲ್ಲಿ, ಬರ್ಮದ ಷಾನ್ ಪ್ರಾಂತ್ಯಗಳಲ್ಲಿ. ಲಾವೊ ರಾಜ್ಯದಲ್ಲಿ ಮತ್ತು ಥಾಯ್ ಜನಾಂಗ ಪ್ರತ್ಯೇಕವರ್ಗವೆಂಬಂತೆ ವಾಸಿಸುತ್ತಿರುವ ತೊಂಗ್ ಕಿಂಗ್ ಹಾಗು ದಕ್ಷಿಣ ಚೀಣದಲ್ಲಿ ಥಾಯ್ ಭಾಷೆ ಬಳಕೆಯಲ್ಲಿದೆ. ಈ ಭಾಗಗಳಲ್ಲಿನ ಭಾಷೆಗಳನ್ನು ಹೋಲಿಸಿ ನೋಡಿದರೂ, ಶಬ್ದಕೋಶ, ಶಬ್ದಗಳು ರೂಪುಗೊಳ್ಳುವ ವಿಧಾನ ಮತ್ತು ರಚನೆಗಳ ದೃಷ್ಟಿಯಿಂದ ಅವುಗಳಲ್ಲಿ ಏಕರೂಪತೆ ಕಾಣ ದೊರೆಯುತ್ತದೆ. ಹೀಗಾಗಿ ಅವೆಲ್ಲ ಒಂದು ಮೂಲದಿಂದ ಬಂದಿರುವ ಭಾಷೆಗಳೆಂಬ ಬಗ್ಗೆ ಯಾವುದೇ ಸಂದೇಹವೂ ಉಳಿಯುವುದಿಲ್ಲ. ಕಾಲದ ಪ್ರಕ್ರಿಯೆಗೆ ಒಳಗಾಗಿರುವುದರಿಂದ, ಐತಿಹಾಸಿಕ ಘಟನೆಗಳ ಪರಿಣಾಮವಾಗಿ ಮತ್ತು ಭೌಗೋಳಿಕ ಸನ್ನಿವೇಶಗಳ ವ್ಯತ್ಯಾಸದಿಂದಾಗಿ, ಥಾಯ್ ಜನಾಂಗ ನೆಲೆಸಿದೆಯೆಂದು ಮೇಲೆ ಉಲ್ಲೇಖಿಸಲಾಗಿರುವ ಪ್ರತಿಯೊಂದು ಭೌಗೋಳಿಕ ಪ್ರದೇಶದಲ್ಲಿನ ಥಾಯ್‍ಭಾಷೆಯೂ ಅನಿವಾರ್ಯವಾಗಿಯೇ ವ್ಯತ್ಯಾಸಗಳಿಗೆ ಒಳಗಾಗಿದೆ ಹಾಗೂ ಸ್ವಲ್ಪ ಮಟ್ಟಿಗೆ ಬದಲಾಗಿಯೂ ಇದೆ. ಇಷ್ಟಾಗಿಯೂ ಪ್ರತಿಯೊಂದು ವರ್ಗವೂ ಮೂಲಭಾಷೆಯ ಬಹುಪಾಲು ಮೂಲಭೂತ ಲಕ್ಷಣಗಳನ್ನು - ಅಂದರೆ, ಏಕಾಕ್ಷರೀಯ ಮತ್ತು ಸ್ವರೀಯ ಲಕ್ಷಣಗಳನ್ನು ಉಳಿಸಿಕೊಂಡಿವೆ.

ಮೂಲ ಸ್ವರೂಪ[ಬದಲಾಯಿಸಿ]

ವಾದ ವಿವಾದಗಳಿಗೆ ಪ್ರವೇಶಿಸದೆ ಸುಲಭವಾಗಿ ಹೇಳುವುದಾದರೆ, ಥಾಯ್ ಭಾಷೆ ಮೂಲಸ್ವರೂಪದಲ್ಲಿ ಚೀನೀ ಭಾಷೆಯಂತೆಯೇ ಏಕಾಕ್ಷರಯುಕ್ತವಾದ ಶಬ್ದಗಳನ್ನೊಳಗೊಂಡಿತ್ತು ಎಂದು ಹೇಳಬಹುದು. ಏಕಾಕ್ಷರೀಯ ಶಬ್ದಗಳಲ್ಲಿ ಅರ್ಥಸಂಬಂಧವಾದ ವ್ಯತ್ಯಾಸಗಳನ್ನು ಸೂಚಿಸಲು ಅದು ಸ್ವರಗಳನ್ನು ಮೂಲಭೂತ ಲಕ್ಷಣವೆಂಬಂತೆ ಬಳಸಿಕೊಳ್ಳುತ್ತದೆ. ಪ್ರತಿಯೊಂದು ಶಬ್ದವೂ ಸ್ವಯಂಪೂರ್ಣವಾಗಿದೆ. ವಿಭಕ್ತಿ, ಲಿಂಗ ವಚನ ಮೊದಲಾದವುಗಳಿಗನುಗುಣವಾಗಿ, ವಿಭಕ್ತಿ - ಪ್ರಧಾನ ಭಾಷೆಗಳಲ್ಲಿ ಆಗುವಂತೆ, ಇದರಲ್ಲಿ ಯಾವುದೇ ಬದಲಾವಣೆ ಆಗುವುದಕ್ಕೂ ಅವಕಾಶವಿಲ್ಲ. ಥಾಯ್‍ಭಾಷೆಯಲ್ಲಿ ಶಬ್ದಗಳನ್ನು ನಿರ್ದಿಷ್ಟ ಪದವರ್ಗಕ್ಕೆ ಸೇರುವಂತೆ ಮಾಡುವ ಅನುಲ್ಲಂಘ್ಯ ನಿಯಮಗಳೇನೂ ಇಲ್ಲ. ಅವುಗಳಲ್ಲಿ ಯಾವುದು ಏನು ಬೇಕಾದರೂ - ಅಂದರೆ ನಾಮಪದ, ಗುಣವಚನ, ಕ್ರಿಯಾಪದ ಕ್ರಿಯಾವಿಶೇಷಣ ಇತ್ಯಾದಿ ಆಗಬಹುದು. ವಾಕ್ಯದಲ್ಲಿ ಅವುಗಳಿಗೆ ದೊರೆತಿರುವ ಸ್ಥಾನಕ್ಕೆ ಅನುಗುಣವಾಗಿ ಅವುಗಳ ವ್ಯಾಕರಣ ಪ್ರಕ್ರಿಯೆ ನಿರ್ಧರಿತವಾಗುತ್ತದೆ. ಪ್ರತಿಯೊಂದು ಶಬ್ದವೂ ಬೇರೆಯಾಗಿ ಹಾಗೂ ಸ್ವತಂತ್ರವಾಗಿ ಉಳಿದಿರುತ್ತದೆ. ಧ್ವನಿಗಳ ಸಂಯೋಗಕ್ಕಾಗಲಿ ಶಬ್ದಗಳ ನಡುವಣ ಸಂಧಿಕಾರ್ಯಕ್ಕಾಗಲಿ ಅವಕಾಶವಿರುವುದಿಲ್ಲ. ಈ ನಿಯಮಕ್ಕೆ ಅಪವಾದವಾಗಿರುವುವು ಹೋಲಿಕೆಯಲ್ಲಿ ತೀರ ಮಿತಸಂಖ್ಯೆಯಲ್ಲಿರುವ ಹಾಗೂ ಕೆಲವು ನಿರ್ದಿಷ್ಟ ಶಬ್ದಗಳೊಂದಿಗೆ ಮಾತ್ರ ಕೂಡಿಕೊಂಡು ಬರುವ ಕೆಲವು ಶಬ್ದಗಳು ಮಾತ್ರ. ಉದಾಹರಣೆಗೆ ಥಮ್‍ಕ್ಲಂಗ್, ಥಮ್ = ಸ್ಥಳ, ಕ್ಲಂಗ್ = ಮಧ್ಯ ಎಂದರೆ ಮಧ್ಯದಲ್ಲಿ ಎಂದು ಅರ್ಥ. ಮೊದಲನೆಯ ಶಬ್ದವಾದ ಥಮ್ ಒಂದು ಸ್ವತಂತ್ರ ಶಬ್ದವಾಗಿದ್ದರೂ ಕ್ಲಂಗ್ ಎಂಬ ಇನ್ನೊಂದು ಶಬ್ದವನ್ನು ಬಿಟ್ಟು ಬೇರೆ ಯಾವುದೇ ಶಬ್ದದೊಂದಿಗೆ ಬೆರೆಯುವಂತಿಲ್ಲ್ಲ. ಇಂಗ್ಲೀಷ್‍ನಲ್ಲಿ ಇನ್ ದಿ ಎಂಬುವರ ಹೊರತು ಬೇರಾವುದೇ ಶಬ್ದದೊಡನೆ ಬೆರೆಯಲಾಗದ ಲರ್ಚ್ ಶಬ್ದದಂತೆ (ಇನ್ ದಿ ಲರ್ಚ್) ಈ ಶಬ್ದ ಕೂಡ ಭಾಷೆಯ ಬೆಳವಣಿಗೆಯ ಪರಿಣಾಮವಾಗಿ ಎರಡು ಏಕಾಕ್ಷರ ಶಬ್ದಗಳನ್ನು ಸೇರಿಸಿ ಒಂದು ಸಂಯುಕ್ತ ಅಥವಾ ಸಮಾಸ ಶಬ್ದವನ್ನು ರೂಪಿಸಿದಾಗ, ಅಘಾತಶೂನ್ಯಶಬ್ದ, ಹ್ರಸ್ವವಾಗಿ ಪರಿಣಮಿಸಿ (ಇದನ್ನು ಪಾರಿಭಾಷಿಕವಾಗಿ ಧ್ವನಿನಾಶವೆಂದು ಕರೆಯುತ್ತಾರೆ.) ದ್ವ್ಯಕ್ಷರ ಶಬ್ದದಲ್ಲಿ - ಅಂದರೆ ಎರಡು ಅಕ್ಷರಗಳನ್ನುಳ್ಳ ಶಬ್ದದಲ್ಲಿ ಲೀನವಾಗುತ್ತದೆ. ಉದಾಹರಣೆಗೆ ತವನ್ (ಸೂರ್ಯ) ಇದು ತಾ (ಕಣ್ಣು) ಮತ್ತು ವನ್ (ದಿವಸ) ಎಂಬ ಶಬ್ದಗಳ ಸಂಯೋಗದಿಂದ ರೂಪಿತವಾಗಿರುವ ಶಬ್ದ. ಇವುಗಳಲ್ಲಿ ಮೊದಲನೆಯದಾದ ತಾ ಎಂಬುದು ತ ಎಂದು ಹ್ರಸ್ವವಾಗಿದೆ. ಮಲಯ್ ಶಬ್ದಗಳಂತೆ ಥಾಯ್ ಶಬ್ದಗಳನ್ನೂ ದ್ವ್ಯಕ್ಷರ ಶಬ್ದಗಳನ್ನಾಗಿಸುವ ಇನ್ನೊಂದು ಪದ್ಧತಿಯೂ ಇದೆ. ಆದರೆ ಇದು ಮಲಯ್‍ಗಿಂತ ಭಿನ್ನವಾಗಿದೆ. ಏಕೆಂದರೆ, ಥಾಯ್ ಭಾಷೆಯ ದ್ವ್ಯಕ್ಷರ ಶಬ್ದಗಳೆಲ್ಲ ಬಹುಮಟ್ಟಿಗೆ ಶ್ರುತಿ ಮಧುರ ದ್ವಿಪದಗಳು ಅಂದರೆ ನಾದಮಯ ಶಬ್ದಗಳು ಅಷ್ಟೇ. ಉದಾಹರಣೆಗೆ ಕಿನ್ ಎಂದರೆ ತಿನ್ನು ಎಂದು ಅರ್ಥ. ಇದು ಕಿನ್‍ಕಎನ್ ಅಥವಾ ಆಡುಮಾತಿನಲ್ಲಿ ಕಿನ್‍ಕೊಯೆನ್ ಎಂದು ಕಾಣಿಸಿಕೊಳ್ಳಬಹುದು. ಇದರಲ್ಲಿ ಕೊನೆಯ ಅಕ್ಷರಕ್ಕೆ ಅರ್ಥವೇನೂ ಇಲ್ಲ; ಕೇವಲ ಧ್ವನಿಮಾಧುರ್ಯಕ್ಕಾಗಿ ಅದನ್ನು ಸೇರಿಸಲಾಗಿದೆ. ಈ ಬಗೆಯ ಶಬ್ದಗಳು ಅನೇಕ ಬಗೆಯಾಗಿವೆ; ಥಾಯ್ ಭಾಷೆಯಲ್ಲಿ ಇವು ಬಹುಸಂಖ್ಯಾತವಾಗಿಯೂ ಇವೆ. ಇವುಗಳಲ್ಲಿ ಕೆಲವು ಒಂದು ಅಥವಾ ಇನ್ನೊಂದು ಉಪಭಾಷೆಯಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಹೆನ್ (ನೋಡುವುದು) ಎಂಬುದು ಚಿಯಾಂಗ್‍ಮೈನಲ್ಲಿನ ಥಾಯ್‍ಭಾಷೆಯ ಉತ್ತರದ ಉಪಭಾಷೆಯಲ್ಲಿ ಹನ್ ಎಂದಾಗುತ್ತದೆ. ಇಂಥ ಸಂದÀರ್ಭಗಳಲ್ಲಿ ಅರ್ಥ ವ್ಯತ್ಯಾಸವೇನೂ ಘಟಿಸದೆ ಒಂದು ಪ್ರಧಾನ ಸ್ವರಕ್ಕೆ ಬದಲಾಗಿ ಇನ್ನೊಂದು ಪ್ರಧಾನ ಸ್ವರ ಮಾತ್ರ ಬರುವುದರಿಂದ ದ್ವ್ಯಕ್ಷರ ಶಬ್ದಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವಲ್ಲಿ ಕಷ್ಟವೇನೂ ಉಂಟಾಗುವುದಿಲ್ಲ; ಏಕೆಂದರೆ ಅಪ್ರe್ಞÁಪೂರ್ವಕವಾಗಿಯೇ ಆಡುಗರಿಗೆ ಅವು ಸ್ಫುರಿಸುತ್ತದೆ.

ವಾಕ್ಯಗಳ ಒಳ ರಚನೆ[ಬದಲಾಯಿಸಿ]

ಇಂಗ್ಲೀಷ್‍ನಂತೆ ಥಾಯ್‍ಭಾಷೆಯ ವಾಕ್ಯದಲ್ಲಿಯೂ ಶಬ್ದಗಳ ಜೋಡಣೆ ಮೂಲಭೂತವಾಗಿ ಕರ್ತೃ -ಕ್ರಿಯೆ-ಕರ್ಮಗಳ ಸರಣಿಯಲ್ಲಿಯೇ ಕಾಣಿಸಿಕೊಳ್ಳುತ್ತದೆ. ಗುಣವಾಚಕ ಮತ್ತು ಕ್ರಿಯಾವಿಶೇಷಣದಂಥ ವಿಶೇಷಕ ಶಬ್ದಗಳ ಚೀನಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ವರ್ತಿಸುವಂತಲ್ಲದೆ, ಪ್ರತಿಯೊಂದು ಸೂಕ್ತಶಬ್ದವನ್ನೂ ಹಿಂಬಾಲಿಸಿಕೊಂಡು ಬರುತ್ತವೆ ಅಥವಾ ಅನುಸರಿಸುತ್ತವೆ. ಒಂದೇ ಪದವರ್ಗದ ಶಬ್ದಗಳನ್ನು ನಾವು ಅಪೇಕ್ಷಿಸಿದಷ್ಟು ಸಂಖ್ಯೆಯಲ್ಲಿ, ಒಟ್ಟಿಗೆ ಪೋಣಿಸಬಹುದು; ಇದಕ್ಕಿರುವ ಒಂದೇ ಒಂದು ನಿಬಂಧನೆ ಎಂದರೆ ಪ್ರತಿಯೊಂದು ಶಬ್ದವೂ ತನ್ನ ತರ್ಕಬದ್ಧವಾದ ಸ್ಥಾನದಲ್ಲಿ ಅಥವಾ ಕ್ರಿಯಾಪದಗಳ ವಿಷಯವನ್ನು ತೆಗೆದುಕೊಂಡರೆ ಕಾಲಾನುಕ್ರಮದಲ್ಲಿ ನೆಲೆಗೊಂಡಿರಬೇಕು. ಒಂದು ಭಾವನೆಯನ್ನು ಅಭಿವ್ಯಕ್ತಗೊಳಿಸಲು ಬಹುತೇಕವಾಗಿ ಎರಡು ಅಥವಾ ಹೆಚ್ಚಿನ ಸಂಖ್ಯೆಯ ಶಬ್ದಗಳನ್ನು ಒಂದುಗೂಡಿಸಲಾಗುತ್ತದೆ; ಇಂಥ ಸಂದರ್ಭಗಳಲ್ಲಿ ಮೊದಲನೆಯ ಶಬ್ದಕ್ಕೆ ಎರಡನೆಯ ಮತ್ತು ಅನಂತರದ ಸ್ಥಾನದಲ್ಲಿ ಶಬ್ದಗಳನ್ನು ಗುಣವಾಚಕವಾಗಿ ವರ್ತಿಸುತ್ತದೆ. ಉದಾಹರಣೆಗೆ ಫೈ ಫಾ (ಫೇ = ಬೆಂಕಿ; ಫಾ = ಆಕಾಶ) ಎಂದರೆ ವಿದ್ಯುತ್ ಎಂದು ಅರ್ಥ; ಮೈ ಖೀತ್ ಫೈ (ಕಡ್ಡಿ-ಗೀಚು-ಬೆಂಕಿ) ಎಂದರೆ ಬೆಂಕಿಕಡ್ಡಿ ಅಥವಾ ಬೆಂಕಿಕಡ್ಡಿಗಳು ಎಂದು ಅರ್ಥ.

ಕಲಿಕೆಯ ಕ್ರಮ[ಬದಲಾಯಿಸಿ]

ಆದ್ದರಿಂದ, ಥಾಯ್‍ಭಾಷೆ ಸರಳವಾದುದು ಎಂಬುದೂ ವಾಕ್ಯದಲ್ಲಿ ಶಬ್ದಗಳ ಜೋಡಣೆಯ ವಿಧಾನವನ್ನು ಅರಿತುಕೊಂಡಲ್ಲಿ ಹಾಗೂ ಅವುಗಳ ಸ್ಪರೀಯತೆ ಅಥವಾ ತಾನವನ್ನು ಚೆನ್ನಾಗಿ ತಿಳಿದಲ್ಲಿ ಥಾಯ್ ಭಾಷೆಯನ್ನು ಕಲಿಯುವುದು ಸುಲಭ ಎಂಬುದೂ ಸ್ಪಷ್ಟವಾಗುತ್ತದೆ. ತಾನದ ಮೇಲೆ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವುದು ಕಷ್ಟವೇನಲ್ಲ. ಇಂಗ್ಲೀಷ್ ಭಾಷೆಯಲ್ಲಿ ಶಬ್ದಗಳಲ್ಲಿನ ಸ್ವರಘಾತವನ್ನು ಸ್ವರಘಾತಸ್ವರೂಪದ್ದು. ನಾವು ಕಲಿಯುವ ರೀತಿಯಲ್ಲಿಯೇ ಇದನ್ನೂ ಕಲಿಯಬಹುದು. ವಾಸ್ತವವಾಗಿ ಒಂದು ನಿರ್ದಿಷ್ಟ ಅರ್ಥದಲ್ಲಿ ಥಾಯ್‍ಭಾಷೆಯ ತಾನ ಶ್ರುತಿ - ಸ್ವರಘಾತ ಸ್ವರೂಪದ್ದು. ಪದವರ್ಗ, ರೂಪ ಪರಿವರ್ತನೆ, ಕ್ರಿಯಾರೂಪ ನಿಷ್ಪತ್ತಿ ಮೊದಲಾದ ವ್ಯಾಕರಣಾಂಶಗಳ ಬಗ್ಗೆ ತಲೆಕಡೆಸಿಕೊಳ್ಳುವ ಅಗತ್ಯವಿಲ್ಲ. ಹೀಗಾಗಿ ವೈದೃಶ್ಯವಾಗಿ, ಹೀಗಾಗಿ ಸಂಶ್ಲೇಷಕ ಭಾಷೆ ಎಂದು ಕರೆಯಲಾಗುವ ಇಂಡೋ-ಯೂರೋಪಿಯನ್ ಭಾಷೆಗೆ ವೈದೃಶ್ಯವಾಗಿ, ಥಾಯ್‍ನಂಥ ಹಾಗೂ ಚೀಣೀಯಂಥ ಭಾಷೆಯನ್ನು ಪಾರಿಭಾಷಿಕವಾಗಿ ವಿಶ್ಲೇಷಿತ ಭಾಷೆಯೆಂದು ಕರೆಯಲಾಗಿದೆ. ವಾಸ್ತವವಾಗಿ ಥಾಯ್‍ಭಾಷೆಯ ಶಬ್ದಗಳು ಪರಿಕಲ್ಪನೆಯ ಸಂಕೇತಗಳು: ವಾಕ್ಯದಲ್ಲಿನ ಇತರ ಶಬ್ದಗಳೊಡನೆ ಅವುಗಳಿಗೆ ಇರುವ ಸಂಬಂಧವನ್ನು ಸ್ಪಷ್ಟಪಡಿಸುವ ಮತ್ತು ವಿವರಿಸುವ ಪ್ರಯಾತ್ಮಕ ವ್ಯವಸ್ಥೆ ಇದರಲ್ಲಿ ಸಂಪೂರ್ಣವಾಗಿ ಇಲ್ಲವಾಗಿದೆ. ಹೀಗಾಗಿ ಮೂಲಭೂತ ಅರ್ಥಕ್ಕೆ ಅಸಂಗತವಾದ ರೀತಿಯಲ್ಲಿ ಯಾವುದೇ ಬಗೆಯ ಸಂಶ್ಲೇಷಕ ಸಂಬಂಧದಲ್ಲಿ ವರ್ತಿಸುವ ಸ್ವಾತಂತ್ರ್ಯ ಅವುಗಳಿಗೆ ಇದೆ.

ಧ್ವನಿ ಮತ್ತು ಅರ್ಥ ವ್ಯತ್ಯಾಸ[ಬದಲಾಯಿಸಿ]

ಮೂಲ ಪದಕೋಶದಲ್ಲಿ ಏಕಾಕ್ಷರ ಶಬ್ದಗಳನ್ನು ಬಳಸುತ್ತಿದ್ದಂಥ ಹಾಗೂ ಶಬ್ದಗಳ ವ್ಯಾಕರಣ ಸಂಬಂಧಗಳನ್ನು ನಿರೂಪಿಸಲು ಯಾವುದೇ ಬಗೆಯ ಧ್ವನಿ ವ್ಯತ್ಯಾಸಕ್ಕೂ ಎಡೆಗೊಡದಂಥ ಭಾಷೆಯಲ್ಲಿ ಭಿನ್ನಾರ್ಥಕ ಸಮಾನ ಪದಗಳು ಅಂದರೆ, ಒಂದೇ ಧ್ವನಿಯನ್ನುಳ್ಳ ಅದರ ಅರ್ಥವ್ಯತ್ಯಾಸವನ್ನುಳ್ಳ ಪದಗಳು - ಹೇರಳವಾಗಿರುತ್ತವೆಂಬುದು ವಾಸ್ತವವಾದ ಸಂಗತಿ. ಅರ್ಥ ಸಂದಿಗ್ಧತೆಯನ್ನು ದೂರ ಮಾಡುವ ದೃಷ್ಟಿಯಿಂದ ಇಂಥ ಬಿನ್ನಾರ್ಥಕ ಸಮಾನ ಪದಗಳಲ್ಲಿ ಸ್ಪರೀಯತೆ ಅಥವಾ ತಾನಗಳಿಗೆ ಅವಕಾಶವನ್ನು ಕಲ್ಪಿಸಲಾಯಿತೆಂಬುದೇನೋ ನಿಜ. ಮೂಲ ಥಾಯ್ ಶಬ್ದಗಳಲ್ಲಿ ಎಷ್ಟು ತಾನಗಳಿದ್ದವು. ಎಂಬುದನ್ನು ತಿಳಿಯುವುದು ಇಂದು ಅಸಾಧ್ಯವಾಗಿ ಪರಿಣಮಿಸಿದೆ. ಸೈದ್ಧಾಂತಿಕವಾಗಿ, ಇಂದು ಥಾಯ್ ಬಾಷೆಯಲ್ಲಿ ಐದು ತಾನಗಳಿವೆ ಎಂದು ಹೇಳಲಾಗುತ್ತದೆಯಾದರೂ ವಾಸ್ತವಿಕ ಮಾತಿನಲ್ಲಿ ಆರು ಅಥವಾ ಏಳು ತಾನಗಳಿರುವಂತೆ ತೋರುತ್ತವೆ. ಏಕೆಂದರೆ, ಥೈಲೆಂಡಿನ ಕೆಲವು ಉಪಭಾಷಾ ಕ್ಷೇತ್ರಗಳಲ್ಲಿ, ಅದರಲ್ಲಿಯೂ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಕೆಲವೊಂದು ಸೂಕ್ಷ್ಮ ವ್ಯತ್ಯಾಸಗಳು ಕಾಣದೊರೆಯುತ್ತವೆ.

ಸಮಾನಾರ್ಥ ಪದಗಳು[ಬದಲಾಯಿಸಿ]

ಈ ಭಾಷಿಕ ವ್ಯವಸ್ಥೆಯಲ್ಲಿ ತಾನಗಳಿಗೆ ಎಡೆಮಾಡಿಕೊಡುವುದರ ಮೂಲಕ ಶಬ್ದಗಳನ್ನು ಪರಸ್ಪರ ವಿಭೇದಿಕರಿಸುವ ಕ್ರಮವನ್ನು ಅಳವಡಿಸಿಕೊಳ್ಳಲಾಗಿತ್ತಾದರೂ ಭಿನ್ನಾರ್ಥಕ ಸಮಾನ ಪದಗಳ ಇನ್ನೂ ಗಣನೀಯವಾಗಿಯೇ ಇತ್ತು. ಸಂದರ್ಭ ಬಲದಿಂದ ಶಬ್ದಪುಂಜ ಅಥವಾ ವಾಕ್ಯದಲ್ಲಿ ಪದಗಳ ವಿಭಿನ್ನಾರ್ಥಗಳು ಗೋಚರಿಸದೆ ಹೋದರೆ ಅರ್ಥ ಸಂದಿಗ್ಧವಾಗಿಯೇ ಉಳಿಯಬಹುದು. ಉದಾಹರಣೆಗೆ, ತಾಮೈ ಹೆನ್ ಎಂದರೆ ಕಣ್ಣುಗಳು ನೋಡುವುದಿಲ್ಲ ಎಂದಾದರೂ ಅರ್ಥವಾಗಬಹುದು ಅಥವಾ ಅಜ್ಜ (ತಾಯಿಯ ತಂದೆ) ನೋಡುವುದಿಲ್ಲ ಎಂದಾದರೂ ಅರ್ಥವಾಗಬಹುದು. ಏಕೆಂದರೆ, ಕಣ್ಣು ಮತ್ತು ಅಜ್ಜ ಎಂಬುದನ್ನು ಸೂಚಿಸುವ ಶಬ್ದಗಳು ಧ್ವನಿ ಮತ್ತು ತಾನಗಳ ದೃಷ್ಟಿಯಿಂದ ಒಂದೇ ಆಗಿವೆ. ಅದೃಷ್ಟವಶಾತ್ ಬಹುಸಂಖ್ಯಾತವಾಗಿಯೇನೂ ಇಲ್ಲದಿರುವ ಇಂದ ಶಬ್ದಗಳ ಅರ್ಥ ಪದಪುಂಖಗಳಲ್ಲಿನ ಅಥವಾ ವಾಕ್ಯದಲ್ಲಿನ ಸಂದರ್ಭದಿಂದ ಸ್ಪಷ್ಟವಾಗದಿದ್ದರೆ, ಅರ್ಥಸ್ಪಷ್ಟತೆಗಾಗಿ ಬೇರೊಂದು ಶಬ್ದ ಅಥವಾ ಶಬ್ದಗಳನ್ನೂ ಸೇರಿಸಬೇಕಾಗುತ್ತದೆ. ಇದನ್ನು ಸಾಧಿಸಲು ಎರಡು ವಿಧಾನಗಳಿವೆ;

  1. ನಿರ್ಧಾರಕ ಅಥವಾ ವಿವರಣಕವಾಗಿ ಅರ್ಥಪೂರ್ಣವಾದ ಶಬ್ದವೊಂದನ್ನು ಪೂರ್ವಪದವಾಗಿ ಸೇರಿಸುವುದು. ಉದಾಹರಣೆಗೆ, ತರಲಸ್ಥಿತಿಯಲ್ಲಿರುವ ಯಾವುದೇ ವಸ್ತುವನ್ನು ಸೂಚಿಸಬೇಕಾದರೂ ಸಂದಿಗ್ಧ ಶಬ್ದಕ್ಕೆ ನಾಮ್ ಎಂಬುದನ್ನು ಪೂರ್ವಕವಾಗಿ ಸೇರಿಸಬೇಕು. ಮಳೆಯನೀರು ಎಂಬುದನ್ನು ಸೂಚಿಸಬೇಕಾದರೆ ನಾಮ್ ಫೋನ್ (ನಾಮ್ =ನೀರು; ಫೋನ್ = ಮಳೆ) ಎನ್ನಬೇಕಾಗುತ್ತದೆ.
  2. ಒಂದೇ ಅರ್ಥದ ಅಥವಾ ಸಂಬಂಧಪಟ್ಟ ಅರ್ಥದ ಎರಡು ಶಬ್ದಗಳನ್ನು ಜೊತೆಜೊತೆಯಾಗಿ ಇರಿಸುವುದು. ಉದಾಹರಣೆಗೆ, ಯೈತೊಎ ಎಂಬುದಕ್ಕೆ ಮಹತ್ತಾದುದು ಎಂದು ಅರ್ಥ (ಯೈ = ದೊಡ್ಡದು ಅಥವಾ ವಿಶಾಲವಾದುದು; ತೊಎ ಎಂಬುದಕ್ಕೂ ಇದೇ ಅರ್ಥ). ಬಾನ್‍ಮುಅಂಗ್ ಎಂದರೆ ನಾಡು ಅಥವಾ ರಾಷ್ಟ್ರ ಎಂದು ಅರ್ಥ (ಬಾನ್= ಹಳ್ಳಿ ; ಮುಅಂಗ್ = ಪಟ್ಟಣ).

ವಚನಗಳು[ಬದಲಾಯಿಸಿ]

ನಾಮಪದಗಳ ಜೊತೆಯಲ್ಲಿ ವಚನವನ್ನು ಬಳಸುವಾಗ - ಉದಾಹರಣೆಗೆ, ಇಂಗ್ಲೀಷಿನ ಸೆವೆನ್ ಹೆಡ್ಸ್ ಆಫ್ ಕೌಸ್ ನಂತೆ - ಥಾಯ್ ಭಾಷೆಯೂ ಚೀನೀ ಮತ್ತು ಆಗ್ನೇಯ ಏಷ್ಯಾ ಭಾಷೆಗಳಂಥ ವಿವರಣಾತ್ಮಕ ಶಬ್ದಗಳನ್ನು ಬಳಸುತ್ತವೆ. ಆದರೆ, ಥಾಯ್ ಭಾಷೆಯಲ್ಲಿ ಪ್ರತಿಯೊಂದು ಸೂಕ್ತ ನಾಮಪದಕ್ಕೂ ಅನೇಕ ವಿವರಣಾತ್ಮಕ ಶಬ್ದಗಳಿರುತ್ತವೆ. ಏಳು ಹಸುಗಳು ಎಂದು ಹೇಳಬೇಕಾದರೆ ಥಾಯ್ ಭಾಷೆಯಲ್ಲಿ ನ್ಗು ಅ ಛೆತ್ ತುಅ (ನ್ಗುಅ = ಹಸು ಅಥವಾ ಹಸುಗಳು; ಛೆತ್ = ಏಳು, ತುಅ = ಒಂದು ಸಮುದಾಯ) ಎಂದು ಹೇಳಬೇಕಾಗುತ್ತದೆ. ಇದು ಪ್ರಾಣಿಗಳ ಸಂದರ್ಭಗಳಲ್ಲಿ ಬಳಸುವ ಸಂಖ್ಯಾತ್ಮಕ ವಿವರಣಾತ್ಮಕ ನಾಮಪದ. ಏಳು ಮರಗಳು ಎಂದು ಹೇಳಬೇಕಾದರೆ ತೊನ್ ಮೈ ಛೆತ್ ತೊನ (ತೊನ್ ಮೈ - ಮರಗಳು; ಛೆತ್ = ಏಳು; ತೊನ್ = ಮರದ ಕಾಂಡ) ಎನ್ನಬೇಕಾಗುತ್ತದೆ. ಇದು ಸಂಖ್ಯಾತ್ಮಕ ವಿವರಣಾತ್ಮಕ ನಾಮಪದ.

ಶಬ್ದವೇ ಲಿಂಗ ಅಥವಾ ವಚನವನ್ನು ಸೂಚಿಸುವುದಿಲ್ಲ; ಆದರೆ, ಅರ್ಥ ಇದನ್ನು ಸ್ಪಷ್ಟಪಡಿಸುತ್ತದೆ. ಉದಾಹರಣೆಗೆ ಖೊನ್ ಮಾ ಎಂಬಲ್ಲಿ ಖೊನ್ ಎಂದರೆ ಸಾಮಾನ್ಯವಾದ ಅರ್ಥದಲ್ಲಿ ಮನುಷ್ಯ ಎಂದೂ ಮಾ ಎಂದರೆ ಬರುವುದು ಎಂದು ಆಗುತ್ತದೆ. ವಚನವನ್ನು ಸ್ಪಷ್ಟವಾಗಿ ಸೂಚಿಸುವಂತೆ ಖೊನ್ ಶಬ್ದವನ್ನು ಬಳಸಬೇಕಾದರೆ, ಲಾಇ (ಅಂದರೆ ಅನೇಕ) ಎಂಬ ಪದವನ್ನು ಪೂರ್ವಪದವಾಗಿ ಸೇರಿಸಲಾಗುತ್ತದೆ. ಲಾಇ ಖೊನ್ ಅಂದರೆ ಅನೇಕ ಮನುಷ್ಯ ಮನುಷ್ಯರು ಲಿಂಗವನ್ನು ಸೂಚಿಸಬೇಕಾದರ ಖೊನ್ ಶಬ್ದದ ತರುವಾಯ ಫೂಛಾಇ ಅಂದರೆ ಗಂಡು ಅಥವಾ ಫೂಯಿಂಗ್ ಅಂದರೆ ಹೆಣ್ಣು ಎಂಬ ಶಬ್ದವನ್ನು ಸೇರಿಸಲಾಗುತ್ತದೆ. ಆಗ ಅದು ಖೊನ್ ಫೂಛಾಇ (ಗಂಡಸು ಅಥವಾ ಗಂಡಸರು) ಅಥವಾ ಖೊನ್ ಪೂಯಿಂಗ್ (ಹೆಂಗಸು ಅಥವಾ ಹೆಂಗಸರು) ಎಂದಾಗುತ್ತದೆ. ಛಾಇ, ಅಥವಾ ಯಿಂಗ್ ಶಬ್ದವನ್ನು ಸಂದರ್ಭಾನುಸಾರವಾಗಿ ಗಂಡಸು ಅಥವಾ ಹೆಂಗಸು ಎಂಬುದನ್ನು ಸೂಚಿಸಲು ಬಳಸಿರಬಹುದು.

ಕ್ರಿಯಾ ಪದದ ಬಳಕೆ[ಬದಲಾಯಿಸಿ]

ಕಾಲಕ್ಕೆ ಸಂಬಂಧಿಸಿದಂತೆ ಸಂದರ್ಭ ಸ್ಪಷ್ಟವಾಗಿದ್ದರೆ ಕ್ರಿಯಾ ಪದದ ರೂಪ ಪರಿವರ್ತನೆಯೇನೂ ಅಗತ್ಯವಾಗುವುದಿಲ್ಲ. ಉದಾಹರಣೆಗೆ, ಅವನು ನಿನ್ನೆ ಬಂದನು ಎಂಬುದು ಥಾಯ್ ಭಾಷೆಯಲ್ಲಿ ಮೂವಾನ್ ಖ ಒ ಮಾ ಎಂದಾಗುತ್ತದೆ. ಮೂ=ಕಾಲ, ವಾನ್=ನಿನ್ನೆ, ಖಒ=ಅವನು, ಅವನನ್ನು ಅವಳು, ಅವಳನ್ನು ಅದು, ಅವರು, ಅಥವಾ ಅವರನ್ನು ; ಮಾ = ಬರುತ್ತಾರೆ, ಬರುತ್ತಾನೆ, ಬಂದರು (ಇತ್ಯಾದಿ). ಮೂವಾನ್ = (ನಿನ್ನೆ) ಶಬ್ದಪುಂಜ ಭೂತಕಾಲದಲ್ಲಿನ ಕಾಲವನ್ನು ಸೂಚಿಸುತ್ತದೆ; ಮಾ ಶಬ್ದ (ಬರುತ್ತಾರೆ) ತಾರ್ಕಿಕವಾಗಿ ಬಂದನು ಎಂಬ ಅರ್ಥದಲ್ಲಿ ಬಳಕೆಗೆ ಬರುತ್ತದೆ. ಸಂದರ್ಭ ಕಾಲವನ್ನು ಸೂಚಿಸದೆ ಇದ್ದಾಗ, ಭೂತಕಾಲವನ್ನು ಸ್ಪಷ್ಟಪಡಿಸಬೇಕಾಗುತ್ತದೆ ಉದ್ದೇಶವಿದ್ದರೆ ಮಾ ಶಬ್ದಕ್ಕೆ ಪೂರ್ವಪದವಾಗಿ ದೈ ( = ಇರು)- ಎಂಬುದನ್ನು ಸೇರಿಸಲಾಗುತ್ತದೆ. ಆಗ ಅದು ದೈಮಾ ಅಂದರೆ ಬಂದರು ಎಂದಾಗುತ್ತದೆ.

ಗುಣವಾಚಿಗಳು[ಬದಲಾಯಿಸಿ]

ಶಬ್ದಗಳನ್ನು ವಾಕ್ಯದಲ್ಲಿ ಜೋಡಿಸುವಾಗ ಅರ್ಥಕ್ಕೆ ಸಂಬಂಧಿಸಿದಂತೆ ಏನಾದರೂ ಸಂದಿಗ್ಧತೆ ತಲೆದೋರಿದರೆ, ಅರ್ಥಕ್ಕೆ ನೆರವಾಗುವ ಒಂದು ನಿರ್ದಿಷ್ಟ ವರ್ಗದ ಶಬ್ದಗಳನ್ನು ನಡುವೆ ಸೇರಿಸಲಾಗುತ್ತದೆ. ಇಂಥ ಶಬ್ದಗಳನ್ನು ವ್ಯಾಕರಣದ ದೃಷ್ಟಿಯಿಂದ ಉಪಸರ್ಗಗಳು, ಸಮುಚ್ಚಯಗಳು ಅಥವಾ ನಿರ್ದೇಶಕ ಆನಿರ್ದೇಶಕ ಗುಣವಾಚಿಗಳು ಎಂದು ಕರೆಯಬಹುದು. ಆದರೆ ಮೂಲತಃ ಥಾಯ್ ಭಾಷೆಯಲ್ಲಿ ಈ ಪ್ರಕ್ರಿಯೆ ಇರಲಿಲ್ಲ. ಚೀನಿಯರು ಇವನ್ನು ಸಹಾಯಕ ಶಬ್ದಗಳು ಎಂದು ಕರೆದಿದ್ದಾರೆ. ಉದಾಹರಣೆಗೆ ಪವ್ ಲೂಕ್ (ಪವ್ = ತಂದೆ ಲೂಕ್ = ಮಗು, ಅಥವಾ ಮಕ್ಕಳು) ಎಂದರೆ ತಂದೆ ಅಥವಾ ಮಗ, ಅಥವಾ ತಂದೆ ಮತ್ತು ಮಗ, ಅಥವಾ ಮಗನ ತಂದೆ ಎಂದಾಗಬಹುದು. ಅರ್ಥವನ್ನು ಸ್ಪಷ್ಟಪಡಿಸುವುದಕ್ಕಾಗಿ ಸಹಾಯಕ ಶಬ್ದವಾಗಿ ರೂ = ಅಥವಾ, ಲಯೆ = ಮತ್ತು ಅಥವಾ ಖೊಂಗ್ = ನ ಳ ರ ಯದ ಎಂಬುದನ್ನು ನಡುವೆ ಸೇರಿಸಲಾಗುತ್ತದೆ. ವಾಕ್ಯದ ಸಂದರ್ಭ ಸ್ಪಷ್ಟವಾಗಿದ್ದರೆ ಸಹಾಯಕ ಶಬ್ದವೂ ಅಗತ್ಯವಾಗುವುದಿಲ್ಲ.

ವಿಕಾಸ[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿ ಥಾಯ್ ಜನಾಂಗ ದಕ್ಷಿಣ ಚೀನದಲ್ಲಿ ವಾಸವಾಗಿತ್ತು. ಇದರ ಪರಿಣಾಮವಾಗಿ ಒಟ್ಟಿನಲ್ಲಿ ಥಾಯ್ ಭಾಷೆ ಮೂಲತಃ ತನ್ನ ಶಬ್ದ ಮತ್ತು ರೂಪಗಳಲ್ಲಿ ಚೀನೀ ಭಾಷೆಯೊಂದಿಗೆ ಪಾರಿವಾರಿಕ ಸಂಬಂಧವನ್ನೆಲ್ಲದ್ದಿದ್ದರೂ ಸ್ವರೂಪ ಸಮಾನತೆಯ ಸಂಬಂಧವನ್ನು ಹೊಂದಿತ್ತು. ಹೀಗಾಗಿ ಭಾಷಾಶಾಸ್ತ್ರದಲ್ಲಿದ್ದ ಥಾಯ್ ಮತ್ತು ಚೀನಿ ಭಾಷೆಗಳರಡನ್ನೂ ಒಂದು ಪರಿವಾರಕ್ಕೆ ಸೇರಿದುವು ಎಂಬುದಾಗಿ - ಅಂದರೆ ಅಯೋಗಾತ್ಮಕ ಅಥವಾ ವಿಶ್ಲೇಷಣಾತ್ಮಕ ಭಾಷೆಗಳು ಎಂಬುದಾಗಿ ವರ್ಗೀಕರಿಸಲಾಗಿದೆ. ಎರಡೂ ಭಾಷೆಗಳ ಶಬ್ದಕೋಶಗಳಲ್ಲಿ ಸಮಾನ ಶಬ್ದಗಳ ಸಂಖ್ಯೆ ಹೇರಳವಾಗಿದೆ. ಇಂಥ ನೂರಾರು ಶಬ್ದಗಳು ಕಾಣದೊರೆಯುತ್ತವೆ. ಈ ಶಬ್ದಗಳು ಬಹಳ ಸಂದರ್ಭಗಳಲ್ಲಿ ಸಾಂಸ್ಕೃತಿಕ ಸ್ವೀಕರಣದ ನಿದರ್ಶನಗಳು ಅಂದರೆ ಶಾಂತಿ ಕಾಲದಲ್ಲಿನ ಹಾಗೂ ಯುದ್ಧಕಾಲದಲ್ಲಿನ ಸುದೀರ್ಘ ಅವಧಿಯ ಸಂಪರ್ಕದಿಂದಾಗಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಹರಿದು ಬಂದಿರುವಂಥವು. ಅದರ ಕೆಲವು ನಿರ್ದಿಷ್ಟ ವರ್ಗಗಳಿಗೆ ಸೇರಿದ ಶಬ್ದಗಳು ಅತ್ಯಂತ ಪ್ರಾಚೀನ ಕಾಲದಲ್ಲಿ ಒಂದೇ ಮೂಲದಿಂದ ಎರಡೂ ಭಾಷೆಗಳಿಗೆ ಬಂದಂತೆ ತೋರುತ್ತವೆ.

ಥಾಯ್ ವರ್ಗಗಳು[ಬದಲಾಯಿಸಿ]

ಕಾಲಾನುಕ್ರಮದಲ್ಲಿ ಅನೇಕ ಥಾಯ್ ವರ್ಗಗಳು ಇಂಡೋ - ಚೀನ ಪರ್ಯಾಯ ದ್ವೀಪಕ್ಕೆ ಬೇರೆ ಬೇರೆ ಕಾಲಗಳಲ್ಲಿ ಹಾಗೂ ತಂಡಗಳಲ್ಲಿ ವಲಸೆ ಬಂದು, ಬೇರೆ ಬೇರೆ ಭಾಗಗಳಲ್ಲಿ ನೆಲೆಗೊಂಡುವು. ಒಂದು ತಂಡ ಬರ್ಮದ ಷಾನ್ ಸಮುದಾಯವಾಯಿತು. ಇನ್ನೊಂದು ಥಾಯ್‍ಲೆಂಡಿನ ಥಾಯ್ ಅಥವಾ ಸಯಾಮೀ ಸಮುದಾಯವಾಯಿತು. ಮತ್ತೊಂದು ಲಾವೊ ಸಮುದಾಯವಾಯಿತು. ಥಾಯ್ ಭಾಷೆಯ ಇನ್ನೂ ಅನೇಕ ಸಮುದಾಯಗಳು ಅನೇಕ ವರ್ಗನಾಮಗಳೊಂದಿಗೆ ತಾಂಗ್‍ಕಿಂಗ್ ಮತ್ತು ದಕ್ಷಿಣ ಚೀನದಲ್ಲೂ ಅಷ್ಟೇ ಅಲ್ಲದೆ ಹೈನಾನ್ ದ್ವೀಪದಲ್ಲಿಯೂ ನೆಲೆಗೊಂಡುವು. ಇಲ್ಲಿ ಹೆಸರಿಸಿದ ಈ ಥಾಯ್ ಸಮುದಾಯಗಳ ಭಾಗ್ಯ ಅವುಗಳ ಇತಿಹಾಸದಲ್ಲಿ ಜೀವನ ಅಥವಾ ಸಾಂಸ್ಕøತಿಕ ವಿಧಾನಗಳಲ್ಲಿ ಬೇರೆ ಬೇರೆಯೇ ಆದುವು. ಖಾ (ಅನ್ನಾಮಿಯಲ್ಲಿ ಮೊಇ) ಸಮುದಾಯದೊಡನೆ ಹಾಗೂ ಬಹುಶಃ ಪೂರ್ವ — ಆಸ್ಟೋನೇಷ್ಯನ್ ಜನಾಂಗದೊಡನೆಯೂ ಅದರಲ್ಲಿಯೂ ವಿಶೇಷವಾಗಿ ಮಲಯ ಪಾಲಿನೇಷ್ಯಯ ಜನಾಂಗದೊಡನೆ ಯಾವುದೇ ನಿರ್ಬಂಧವಿಲ್ಲದೆ ಬೆರೆತ ಬರ್ಮಾ ತಾಂಗ್‍ಕಿಂಗ್ ಮತ್ತು ದಕ್ಷಿಣದ ಚೀನದಲ್ಲಿನ ಷಾನ್ ಸಮುದಾಯದ ಸೋದರರಲ್ಲದೆ ಥಾಯ್ ಭಾಷಾ ಸಮುದಾಯ ಮಾನ್ ಖ್ಮೇರ್ ಜನಾಂಗದೊಂದಿಗೆ, ಅದರಲ್ಲಿ ಮಾನ್ ಮತ್ತು ಖ್ಮೇರ್ (ಕಾಂಬೋಡಿಯಾದವರು) ಹಾಗೂ ಪ್ರಧಾನವಾಗಿ ಮಧ್ಯಭಾಗದಲ್ಲಿನ ಅಂದರೆ, ನಾಡಿನ ಬೇರಾವುದೇ ಭಾಗಕ್ಕಿಂತ ಹೆಚ್ಚಾಗಿ ಮೆನಮ್ ಛಾಓ ಫಯ ಕಣಿವೆ ಪ್ರದೇಶದಲ್ಲಿನ ಜನಾಂಗದೊಂದಿಗೆ ಅನಿರ್ಬಂಧಿತವಾಗಿ ಬೆರೆಯಿತು. ಥಾಯ್‍ಲೆಂಡಿನ ಈ ಥಾಯ್ ಭಾಷೆಗೆ ಮಾನ್ ಮತ್ತು ಖ್ಮೇರ್ ಸಮುದಾಯಗಳೊಂದಿಗೆ ನಿಕಟ ಸಂಪರ್ಕ ಏರ್ಪಟ್ಟ ಫಲವಾಗಿ ಭೌತಿಕವಾಗಿ, ಭಾಷಿಕವಾಗಿ ಹಾಗೂ ಸಾಂಸ್ಕøತಿಕವಾಗಿ ಅಮೂಲಾಗ್ರವಾದ ಪ್ರಭಾವ ಬಿದ್ದದ್ದು ಥಾಯ್ ಭಾಷೆಯ ಮೇಲೆ, ಶಬ್ದಕ್ರಮದ ದೃಷ್ಟಿಯಿಂದ ಪರಿಶೀಲಿಸಿದರೆ, ಮಾನ್‍ಖ್ಮೇರ್ ಭಾಷೆ ಅಯೋಗಾತ್ಮಕ ಭಾಷೆಯಾಗುತ್ತದೆ; ಆದರೆ, ಥಾಯ್ ಭಾಷೆಯಂತಲ್ಲದೆ, ತನ್ನ ವೈಶಿಷ್ಟ್ಯವೆಂಬಂತೆ ಅದು ಕೆಲವೊಂದು ಪೂರ್ವ ಪ್ರತ್ಯಯ ಹಾಗೂ ಮಧ್ಯಪ್ರತ್ಯಯಗಳನ್ನು ಹೊಂದಿದೆ. ಥಾಯ್ ಭಾಷೆಯ ವ್ಯವಸ್ಥೆಯಲ್ಲಿ ಮೂಲತಃ ಇವು ಇರಲಿಲ್ಲ. ಅದರಲ್ಲಿ ಮೊದಲಿಗೇ ಎರಡು ಅಥವಾ ಹೆಚ್ಚು ಅವರ್ಣೀಯ ಧ್ವನೀಯುಗ್ಮದ ಬಳಕೆಯೂ ರೂಢಿಯಲ್ಲಿದೆ; ಥಾಯ್ ಭಾಷೆಯ ಅನೇಕ ಉಪಭಾಷೆಗಳೊಡನೆ ಹೋಲಿಸಿ ನೋಡಿದರೆ, ಇಂಥ ಧ್ವನಿಯುಗ್ಮಗಳು ಪ್ರಾಚೀನ ಥಾಯ್ ಉಪಭಾಷೆಗಳಲ್ಲಿ ಅಷ್ಟಾಗಿ ಇಲ್ಲವೆಂಬುದು ಗೊತ್ತಾಗುತ್ತದೆ. ಮೊದಲ ಸ್ಥಾನದಲ್ಲಿ ಕಾಣಸಿಕೊಳ್ಳುವಂಥ ಅವರ್ಣೀಗಳು. ಕ, ತ, ಪ ಹಾಗೂ ಅವುಗಳ ಸಂವಾದಿ ಮಹಾಪ್ರಾಣಾಕ್ಷರಗಳಾದ ಖ, ಥ, ಫ ಗಳು ಅದ್ಯ ಧ್ವನಿಯುಗ್ಮಗಳಾಗಿ ಕಾಣಿಸಿಕೊಳ್ಳ್ಳುತ್ತವೆ: ಇವುಗಳ ತರುವಾಯ ರ, ಲ, ವ ಗಳಂಥ ಅರ್ಧಸ್ವರಗಳು ಕಾಣಿಸಿಕೊಳ್ಳಬಹುದು. ಮಾನ್‍ಖ್ಮೇರ್ ಭಾಷೆಯ ಸಂಪರ್ಕದಿಂದಾಗಿ ಥಾಯ್‍ಲೆಂಡಿನ ಥಾಯ್ ಭಾಷೆ - ಅದರಲ್ಲಿಯೂ ಮಧ್ಯಭಾಗದಲ್ಲಿ - ಆ ಭಾಷೆಯ ಇಂಥ ಲಕ್ಷಣಗಳನ್ನು ಕೆಲಮಟ್ಟಿಗೆ ತನ್ನ ವ್ಯವಸ್ಥೆಗೆ ಅಳವಡಿಸಿಕೊಂಡಿತು.

ಕಾಲ[ಬದಲಾಯಿಸಿ]

ಸ್ಥೂಲವಾಗಿ ಕ್ರಿ.ಶ. 5 ರಿಂದ 13ನೆಯ ಶತಮಾನದವರೆಗೆ ಮಧ್ಯ ಥೈಲೆಂಡ್, ಅನುಕ್ರಮವಾಗಿ ಮಾನ್ ಮತ್ತು ಖ್ಮೇರ್ (ಕಾಂಬೋಡಿಯ) ಚಕ್ರಾಧಿಪತ್ಯಗಳ ಮೇರೆಗೆ ಒಳಪಟ್ಟಿತು. ಈ ಪರ್ಯಾಯ ದ್ವೀಪದಲ್ಲಿ ಇತರ ಜನಾಂಗಗಳೊಡನೆ ಹೋಲಿಸಿದರೆ, ಮಾನ್ ಹೆಚ್ಚು ಸುಸಂಸ್ಕøತ ಜನಾಂಗವಾಗಿತ್ತು. ಇದು ಭಾರತದಿಂದ ಸಂಸ್ಕøತಿಯನ್ನೂ ದಕ್ಷಿಣ ಪಂಥದ ಬೌದ್ಧಧರ್ಮವನ್ನು ಅಂಗೀಕರಿಸಿತ್ತು. ಇತ್ತ ಈ ಅವಧಿಯಲ್ಲಿನ ಇನ್ನೊಂದು ಸುಸಂಸ್ಕೃತ ಜನಾಂಗವಾಗಿದ್ದ ಖ್ಮೇರ್ ಅತ್ಯಂತ ಭಾರತೀಕರಣಗೊಂಡಿದ್ದ ಜನಾಂಗವಾಗಿತ್ತು. ಬೇರೆ ಬೇರೆ ಕಾಲಗಳಲ್ಲಿ ಇದು ಉತ್ತರ (ಮಹಾಯಾನ) ಹಾಗೂ ದಕ್ಷಿಣ ಪಂಥದ ಬೌದ್ಧ ಧರ್ಮವನ್ನು ಅಂಗೀಕರಿಸಿತ್ತು. ಬೌದ್ಧಧರ್ಮದ ದಕ್ಷಿಣ ಪಂಥ ತನ್ನ ಚಿಂತನೆಯ ವಾಹಕವಾಗಿ ಪಾಲಿ ಭಾಷೆಯನ್ನು ಬಳಸಿದರೆ, ಉತ್ತರದ ಪಂಥ ಹಾಗೂ ಹಿಂದೂ ಧರ್ಮ ಸಂಸ್ಕøತವನ್ನು ಬಳಸಿದುವು. ಸಮಿಟಿಕ್ ಮೂಲದ ಧರ್ಮಗಳಂತಲ್ಲದೆ, ತಮ್ಮ ಪರಸ್ಪರ ಸಹಿಷ್ಣುತೆಯ ಮನೋಧರ್ಮದಿಂದಾಗಿ ಅವು ಒಂದರೊಡನೊಂದು ಬೆರೆತವು. ಹೀಗೆ ಬದಲಾಗುತ್ತಿದ್ದ ಅದರ ಸ್ವರೂಪ ಮತ್ತಷ್ಟು ಬದಲಾಗುವುದಕ್ಕೆ ಕಾರಣವಾದ ಸಂಗತಿಯೆಂದರೆ ಸರ್ವಚೇತನವಾದದ ಸ್ಥಳೀಯ ಹಾಗೂ ಜನಪ್ರಿಯ ನಂಬಿಕೆಗಳು ಅದರೊಡನೆ ಗಿಡಿದುಕೊಂಡಿದ್ದು. ಈ ಕಲಸುಮೇ ಲೋಗರ ಸಾಕಷ್ಟು ಪ್ರಮಾಣದಲ್ಲಿ ಚಿಂತನೆ ಮತ್ತು ನಂಬಿಕೆಗಳ ಮೇಲೆ ಹಾಗೂ ಜನರ ಭಾಷೆ ಮತ್ತು ಸಾಹಿತ್ಯದ ಮೇಲೆ ದುಷ್ಪರಿಣಾಮವನ್ನುಂಟುಮಾಡಿತು.

ಅನ್ಯ ಭಾಷೆಯೊಂದಿಗೆ ನುಡಿಬೆರಕೆ[ಬದಲಾಯಿಸಿ]

ಮಾನ್ ಮತ್ತು ಖ್ಮೇರ್ ಜನಾಂಗಗಳ ತರುವಾಯ, 13 ನೆಯ ಶತಮಾನದಲ್ಲಿ ಥಾಯ್ ಜನಾಂಗ ಮಧ್ಯ ಥೈಲೆಂಡಿನಲ್ಲಿ ಅತ್ಯಂತ ಪ್ರಮುಖ ಜನಾಂಗವಾಗಿ ಪರಿಣಮಿಸಿದಾಗ ಅದು ತನ್ನ ಪೂರ್ವಿಕರ ಸಂಸ್ಕೃತಿಗಳನ್ನು ತನ್ನ ಗೌರವಪೂರ್ಣ ಪರಂಪರೆ ಎಂಬುದಾಗಿ ಅಂಗೀಕರಿಸಿತು; ಅವನ್ನು ಥಾಯ್‍ನ ವಿಶಿಷ್ಟ ಲಕ್ಷಣಗಳಾಗಿ ಅಳವಡಿಸಿಕೊಂಡಿತು; ಜನಾಂಗಿಕವಾಗಿ ಅದು ಸ್ವಚ್ಛಂದವಾಗಿ ಬೆರೆಯಿತು. ಮೂಲಭೂತವಾಗಿ ಅದರ ಜನಾಂಗಿಕ ಲಕ್ಷಣಗಳಿಗೂ ಬಾಧೆ ತಟ್ಟಿತು. ಇಂಗ್ಲೀಷ್‍ನಂತೆ ಬೆರೆಯುವಿಕೆ ಸಂಪೂರ್ಣವಾಗಿದೆ. ಇಂದು ಮೇಲುನೋಟದಿಂದ ಮಾತ್ರವೇ ಥೈಲೆಂಡಿನಲ್ಲಿರುವ ಈ ಮೂರು ಜನಾಂಗಗಳ ಬಹುಪಾಲು ಸಾಂಸ್ಕೃತಿಕ ಅಂಶಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಸಾಧ್ಯವಿಲ್ಲ. ಈ ಕಾಲದ ಹೊತ್ತಿಗೆ ಮತ್ತು ಅನಂತರದಲ್ಲಿ ಥಾಯ್ ಭಾಷೆಯ ಶಬ್ದಕೋಶ ಬಹಳವಾಗಿ ಬದಲಾಗಿತ್ತು. ಪಾಲಿ ಮತ್ತು ಸಂಸ್ಕೃತ ಮೂಲದ ಅಂತೆಯೇ ಮಾನ್ ಮತ್ತು ಖ್ಮೇರ್ ಮೂಲದ ಅದರಲ್ಲಿಯೂ - ಎರಡನೆಯದಕ್ಕೆ ಸೇರಿದ - ಹೆಚ್ಚು ಹೆಚ್ಚು ಶಬ್ದಗಳನ್ನು ಇದರ ಶಬ್ದಕೋಶಕ್ಕೆ ಸೇರಿಸಲಾಗಿತ್ತು. ಕೆಲವು ಥಾಯ್ ಶಬ್ದಗಳು ಬಳಕೆ ತಪ್ಪಿ, ಸ್ಥಾನಚ್ಯುತವಾಗಿದ್ದುವು. ಪಾಲಿ, ಸಂಸ್ಕøತ ಮತ್ತು ಖ್ಮೇರ್ ಭಾಷೆಗಳ ವಿದೇಶೀಯ ಶಬ್ದಗಳು ಅವುಗಳ ಸ್ಥಾನವನ್ನು ತುಂಬಿದವು. ಥಾಯ್ ಯಾವುದೇ ಶಬ್ದ ಸ್ವೀಕರಿಸಿದರೂ ತನ್ನ ಧ್ವನಿ ವ್ಯವಸ್ಥೆಗೆ ಹೊಂದುವಂತೆ ಆಮದುಮಾಡಿಕೊಂಡ ಶಬ್ದಗಳ ಧ್ವನಿಯನ್ನು ಬದಲಾಯಿಸಿಕೊಂಡಿದೆ.

ದ್ವಯಾಕ್ಷರ[ಬದಲಾಯಿಸಿ]

ಪಾಲಿ ಮತ್ತು ಸಂಸ್ಕೃತದಂಥ ವಿಭಕ್ತಿಪ್ರಧಾನ ಭಾಷೆಗಳ ಹಾಗೂ ಮಾನ್ ಮತ್ತು ಖ್ಮೇರ್‍ನಂಥ ಅರೆಅಂಟು ಭಾಷೆಗಳ ದೀರ್ಘಕಾಲದ ಸಂಪರ್ಕದಲ್ಲಿ ಬೆಳೆದು ಬಂದಿರುವುದರಿಂದ ಒಟ್ಟಿನಲ್ಲಿ ಥಾಯ್‍ಭಾಷೆ, ಚೀನ ಮತ್ತು ಇತರ ಥಾಯ್ ಉಪಭಾಷೆಗಳಂತಲ್ಲದೆ, ಹೆಚ್ಚು ಹೆಚ್ಚು ದ್ವ್ಯಕ್ಷರೀಯ ಭಾಷೆಯಾಗಿದೆ. ಉದಾಹರಣೆಗೆ ಎಚ್ಚರಿಕೆ ನೀಡುವುದು ಎಂಬ ಅರ್ಥದ ಥುಅಂಗ್ ಎಂಬುದು ಪ್ರ ಎಂಬ ಸಂಸ್ಕøತ ಉಪಸರ್ಗದ ಸೇರ್ಪಡೆಯೊಡನೆ ಪ್ರಥುಅಂಗ್ ಎಂದಾಗಿ ರಕ್ಷಿಸುವುದು ಎಂಬ ಅರ್ಥವನ್ನು ಪಡೆದುಕೊಳ್ಳುತ್ತದೆ. ಸಾದೃಶ್ಯದಿಂದಾಗಿ ದ್ವ್ಯಕ್ಷರೀಯವಾಗಿರುವ ಅನೇಕ ಶಬ್ದಗಳು ಕ್ರ, ತ್ರ, ಪ್ರ ಮೊದಲಾದ ಉಪಸರ್ಗಗಳನ್ನು ಹೊಂದಿದ್ದರೂ ಮೂಲ ಶಬ್ದಗಳ ಅರ್ಥವೇನೂ ಬದಲಾಗುವುದಿಲ್ಲ. ಇದರ ಥಾಯ್ ಉಪಭಾಷೆಗಳಲ್ಲಿ ಇಂಥ ವಿದ್ಯಮಾನ ಕಾಣದೊರೆಯುವುದಿಲ್ಲ. ಉದಾಹರಣೆಗೆ, ಮೂಳೆ ಎಂಬ ಅರ್ಥದ ಥಾಯ್ ಥೈ ಭಾಷೆಯಲ್ಲಿನ ದೋಕ್ ಎಂಬ ಶಬ್ದ ಮಧ್ಯ ಥೈಲೆಂಡಿನ ಥಾಯ್ ಭಾಷೆಯಲ್ಲಿ ಕ್ರದೋಕ್ ಎಂದಾಗುತ್ತದೆ. ಇದರಲ್ಲಿನ ಕ್ರ ಎಂಬುದು ಉಪಸರ್ಗ ಅಥವಾ ಪೂರ್ವಪದ. ಇದು ದ್ರೋಕ್ ಶಬ್ದದ ಮೂಲ ಅರ್ಥದಲ್ಲಿ ಯಾವುದೇ ಬದಲಾವಣೆಯನ್ನೂ ಉಂಟುಮಾಡುವುದಿಲ್ಲ. ಥೈಲೆಂಡಿನ ಥಾಯ್ ಭಾಷೆಯಲ್ಲಿ (ಅಥವಾ ಶಾಸ್ತ್ರೀಯವಾಗಿ ಹೇಳಬೇಕೆಂದರೆ ಸಯಾಮೀ ಭಾಷೆಯಲ್ಲಿ) ಇಂಥ ಶಬ್ದಗಳು ಕಾಣದೊರೆಯುತ್ತವೆ.

ವರ್ಣಮಾಲೆ[ಬದಲಾಯಿಸಿ]

  1. ಥಾಯ್ ವರ್ಣಮಾಲೆ ಭಾರತೀಯ ಮೂಲದ್ದಾಗಿದೆ. ಸುಖೋಥಾಯ್ ವಂಶಕ್ಕೆ ಸೇರಿದ ಥೈಲೆಂಡಿನ ಮಹಾ ದೊರೆ ರಾಮ್ ಕಮ್ಹಯೆಂಗ್ ಎಂಬಾತ ಕ್ರಿ.ಶ. 1283ರಲ್ಲಿ ಇಂದಿನ ಥಾಯ್‍ಭಾಷೆಯ ವರ್ಣ ಮಾಲೆಯನ್ನು ಬಳಕೆಗೆ ತಂದ. ಖ್ಮೆರ್ ಅಥವಾ ಕಾಂಬೋಡಿಯನ್ ಅಕ್ಷರಗಳನ್ನು ಮಾಧ್ಯಮವಾಗಿರಿಸಿಕೊಂಡು ಭಾರತೀಯ ವರ್ಣಮಾಲೆಯನ್ನು ಮಾದರಿಯಾಗಿರಿಸಿಕೊಂಡು ಇದರ ವರ್ಣಮಾಲೆಯನ್ನು ರೂಪಸಿಲಾಗಿದೆಯಾದರೂ ಎರಡು ಮುಖ್ಯ ಅಂಶಗಳಲ್ಲಿ ಇದರ ವರ್ಣಮಾಲೆ ಭಾರತೀಯ ಮತ್ತು ಕಾಂಬೋಡಿಯನ್ ಅಕ್ಷರಗಳಿಗಿಂತ ಭಿನ್ನವಾಗಿದೆ.
  2. ದೊರೆ ರಾಮ್ ಕಮ್ಹಯೆಂಗನ ಸಂಕೇತ ಸ್ವರ ವ್ಯವಸ್ಥೆಯನ್ನು ರಾಜ ವಜಿರಾವುಧ್ ಕ್ರಿ..ಶ. 1917ರಲ್ಲಿ ಪ್ರಾಯೋಗಿಕವಾಗಿ ಪುನರುಜ್ಜೀವಿಸಿದನಾದರೂ ಅದಕ್ಕೆ ಯಶಸ್ಸು ದೊರೆಯಲಿಲ್ಲ. ಮೂಲದ ಭಾರತೀಯ ಮತ್ತು ಖ್ಮೇರ್ ಆಕರಗಳಲ್ಲಿನ ವಾಡಿಕೆಯಂತೆ ಸ್ವರಗಳನ್ನು ಬರೆಯುವ ಹಳೆಯ ಪದ್ಧತಿ ಇಂದೂ ಪ್ರಬಲವಾಗಿದೆ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಮೇಲೆ ಉಲ್ಲೇಖಿಸಿದ ಸಂಕೇತಸ್ವರ ವ್ಯವಸ್ಥೆಯನ್ನು ಬದಿಗಿರಿಸಿದರೆ, ಇಂದೂ ದೊರೆ ರಾಮ್‍ಕಮ್ಹಯೆಂಗನ ವರ್ಣಮಾಲೆಯನ್ನೇ ಥಾಯ್ ಬರವಣಿಗೆ ಅನುಸರಿಸುತ್ತಿದೆ. ಬರವಣಿಗೆಯ ವಿಕಾಸದ ಪರಿಣಾಮವಾಗಿ ಕೆಲವೊಂದು ಬದಲಾವಣೆಗಳೂ ಸೇರ್ಪಡೆಗಳೂ ಆಗಿವೆಯೆಂಬುದೇನೋ ನಿಜ.
  3. ಈ ಮೊದಲೇ ಹೇಳಿರುವಂತೆ ಥಾಯ್ ಸ್ವರೀಯ ಭಾಷೆ. ಇಲ್ಲಿಯ ಥಾಯ್ ಅನ್ನು ಬಿಟ್ಟರೆ, ವಿವಿಧ ಉಪಭಾಷೆಗಳಲ್ಲಿ ಹಾಗೂ ಬರ್ಮದ ಷಾನ್ ಉಪಭಾಷೆಯಲ್ಲಿ ಎಲ್ಲ ಲಿಖಿತ ಥಾಯ್ ಶಬ್ದಗಳಿಗೂ ಶಬ್ದದ ವಿವಿಧ ಸ್ವರೀಯತೆಯನ್ನು ಸ್ಪಷ್ಟವಾಗಿ ತೋರಿಸುವ ಲಿಖಿತ ಚಿಹ್ನೆಗಳಿಲ್ಲ. ಉದಾಹರಣೆಗೆ, ಬಾ, ಕುದುರೆ ಮತ್ತು ನಾಯಿ ಎಂಬುದನ್ನು ಸೂಚಿಸುವ ಶಬ್ದಗಳನ್ನು ಮ ಎಂದೇ ಬರೆಯಲಾಗುತ್ತದೆಯಾದರೂ ವಿಭಿನ್ನ ಸ್ವರೀಯ ಅಘಾತಗಳೊಂದಿಗೆ ಅವನ್ನು ಉಚ್ಛರಿಸಲಾಗುತ್ತದೆ. ಬರವಣಿಗೆಯಲ್ಲಿ ಇದು ಯಾವ ಅರ್ಥದ ಮ ಎಂಬುದನ್ನು ಹೇಳಲಾಗುವುದಿಲ್ಲ. ಹಿಂದೆ ಮುಂದೆ ಬರುವ ಶಬ್ದಗಳು ಆ ಸಂದರ್ಭದಲ್ಲಿ ಅದಕ್ಕೆ ಏನು ಅರ್ಥ ಎಂಬುದಕ್ಕೆ ಸುಳಿವನ್ನು ನೀಡುತ್ತವೆ. ಆದರೆ, ದೊರೆ, ರಾಮ್‍ಕಮ್ಹಯೆಂಗನ ವರ್ಣಮಾಲೆಯಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಶಬ್ದದಲ್ಲಿನ ವಿವಿಧ ಸ್ವರೀಯತೆಯನ್ನು ಸೂಚಿಸಲು ಆತ ಎರಡು ಸ್ವರೀಯ ಸಂಕೇತಗಳನ್ನು ರೂಪಿಸಿದ್ದ. ವಿಕಾಸದ ಹಾದಿಯಲ್ಲಿ ಇಂದಿನ ಥಾಯ್ ಭಾಷೆ ಸ್ವರೀಯತೆಯನ್ನು ಸೂಚಿಸುವ ನಾಲ್ಕು ಸಂಕೇತಗಳನ್ನು ಪಡೆದುಕೊಂಡಿದೆ.
  4. ಆಧುನಿಕ ಥಾಯ್ ವರ್ಣಮಾಲೆಯಲ್ಲಿ 44 ವ್ಯಂಜನಗಳಿವೆ. ಇವುಗಳಲ್ಲಿ 16 ಅನಾವಶ್ಯಕವಾದವು. ಇವನ್ನು ಬಿಟ್ಟರೆ ಮೂಲಧ್ವನಿಯ ವ್ಯಂಜನಗಳು 28 ಮಾತ್ರ ಆಗುತ್ತವೆ. ಬಹುತೇಕವಾಗಿ ಪಾಲಿ ಮತ್ತು ಸಂಸ್ಕøತ ಮೂಲದ ಥಾಯ್ ಶಬ್ದಗಳನ್ನು ಲಿಪ್ಯಂತರಿಸುವಾಗ ಈ ಅನಾವಶ್ಯಕ ವ್ಯಂಜನಗಳನ್ನು ಬಳಸಲಾಗುತ್ತದೆ. ಈ ಹೆಚ್ಚಿನ ವ್ಯಂಜನಗಳಲ್ಲಿ ಎರಡು ವ್ಯಂಜನಗಳಿಗಂತೂ ಈಗ ಬಳಕೆ ತಪ್ಪಿಹೋಗಿದೆ. ವರ್ಣಮಾಲೆಯಲ್ಲಿನ ಅಕ್ಷರಗಳ ಕ್ರಮ ಪಾಲಿ ಮತ್ತು ಸಂಸ್ಕøತ ವರ್ಣಮಾಲೆಯ ಕ್ರಮವನ್ನೇ ಅನುಸರಿಸಿದೆ; ವ್ಯಂಜನಗಳ ಉಚ್ಛಾರದ ಸ್ಥಾನವನ್ನೂ ದೃಷ್ಟಿಯಲ್ಲಿರಿಸಿಕೊಂಡು ಅವನ್ನು ಆರುವರ್ಗಗಳಾಗಿ ವಿಂಗಡಿಸಿದೆ. ಥಾಯ್ ವರ್ಣಮಾಲೆಯ ಸ್ಥೂಲ ರೂಪರೇಷೆಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ.

ಉಲ್ಲೇಖ[ಬದಲಾಯಿಸಿ]

  1. https://www.ethnologue.com/language/tha