ಉಪಸರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಸರ್ಗ: ಸಂಸ್ಕೃತ ಭಾಷೆಯ ಈ ಪದಕ್ಕೆ ಹಲವು ಅರ್ಥಗಳಿವೆ. ಕಾಯಿಲೆ ಎಂಬುದು ಒಂದು ಅರ್ಥ. ತೊಂದರೆ ಎಂಬುದು ಇನ್ನೊಂದು ಅರ್ಥ. ವ್ಯಾಕರಣದ ಪರಿಭಾಷೆಯಲ್ಲಿ ಪದಗಳಿಗೆ ಪ್ರಾರಂಭದಲ್ಲಿ ಹತ್ತುವ ಪದ ಪ್ರತ್ಯಯವೆಂದು ಅರ್ಥ. ಇದೇ ಸಾಮಾನ್ಯವಾಗಿ ರೂಢಿಯಲ್ಲಿರುವ ಅರ್ಥ. ಆದರೆ ಜೈನಧರ್ಮ ಪರಿಭಾಷೆಯಲ್ಲಿ ಇದಕ್ಕೆ ವಿಶಿಷ್ಟಾರ್ಥವಿದೆ. ಜೈನಮುನಿಗಳ ನಿರಾತಂಕ ತಪಸ್ಸಿಗೆ ಅಡ್ಡಬರುವ ಕಿರುಕುಳವನ್ನು ಉಪಸರ್ಗವೆಂಬ ಪಾರಿಭಾಷಿಕ ಪದದಿಂದ ನಿರ್ದೇಶಿಸಿದ್ದಾರೆ; ಹಿಂಸೆ, ಕೇಡು, ಅಟ್ಟುಳಿ ಎಂದೂ ಕರೆದಿದ್ದಾರೆ. ತಪಸ್ಸಿನಲ್ಲಿ ತೊಡಗಿರುವ ತಪೋಧನರಾದ ಜಿನಮುನಿಗಳಿಗೆ ಆತ್ಮಾನುಸಂಧಾನದ ಏಕಾಗ್ರತೆಗೆ ಅಡ್ಡ ಬರುವ ಈ ಉಪಸರ್ಗ ನಿಮಿತ್ತವಾಗಿಯಾಗಲಿ, ಅನಿಮಿತ್ತವಾಗಿಯಾಗಲಿ ಒದಗಬಹುದು. ಉಪಸರ್ಗಗಳಲ್ಲಿ ನಾಲ್ಕು ವಿಧ: ತಪಸ್ಸಿನ ಏಕಾಗ್ರತೆಗೆ ದೇವತೆಗಳಿಂದ ಉಂಟಾಗುವ ತೊಂದರೆಯೇ ದೇವೋಪಸರ್ಗ. ಮನುಷ್ಯರಿಂದ ಆಗುವ ತೊಂದರೆ ಮನುಷ್ಯೋಪಸರ್ಗ. ಪ್ರಾಣಿಗಳಿಂದ ಬರುವ ತೊಂದರೆ ತಿರಿಕೋಪಸರ್ಗ. ಪ್ರಕೃತಿಯಿಂದ ಒದಗುವ ತೊಂದರೆ ಅಚೇತನೋಪಸರ್ಗ. ಇದನ್ನು ನರಕೋಪಸರ್ಗವೆಂದೂ ಕರೆಯುತ್ತಾರೆ. ಕನ್ನಡದ ಗದ್ಯಗ್ರಂಥಗಳಲ್ಲೆಲ್ಲ ತುಂಬ ಹಳೆಯದಾದ ವಡ್ಡಾರಾಧನೆಯಲ್ಲಿ ಇರುವ 19 ಕಥೆಗಳಿಗೆ ಉಪಸರ್ಗಕೇವಲಿಗಳ ಕಥೆ ಎಂಬ ಇನ್ನೊಂದು ಹೆಸರೂ ಪ್ರಚಲಿತವಾಗಿದೆ. ವಡ್ಡಾರಾಧನೆಯಲ್ಲಿ ಬರುವ ಎಲ್ಲ ಕಥೆಗಳಲ್ಲೂ ಒಂದಲ್ಲ ಒಂದು ತೆರನಾದ ಉಪಸರ್ಗಕ್ಕೆ ಒಳಗಾದ ಕೇವಲಿಗಳ ಕಥಾನಕವೇ ಬರುತ್ತದೆ. ಜೈನ ಮುನಿಗಳು ಉಪಸರ್ಗದ ಪರಿಣಾಮವಾಗಿ ಸತ್ತು, ಆದರೆ ಆ ಅಟ್ಟುಳಿಯ ನಿವಾರಣೆಗೆ ಎಳ್ಳಷ್ಟೂ ಪ್ರಯತ್ನಿಸದೇ ಆ ದಿಕ್ಕಿನಲ್ಲಿ ಸ್ವಲ್ಪವೂ ಆಲೋಚಿಸದೆ ಸಂಯಮ ಹಾಗೂ ಪಂಚಪರಮೇಷ್ಠಿಗಳ ಧ್ಯಾನಾನುಷ್ಠಾನ ದಿಂದ ಮೋಕ್ಷ ಸುಖಕ್ಕೆ ಭಾಜನರಾಗುವ ವಿಚಾರ ಈ ಉಪಸರ್ಗಕೇವಲಿಗಳ ಎಲ್ಲ ಕತೆಗಳಲ್ಲೂ ತಪ್ಪದೆ ಬರುತ್ತದೆ. ಉದಾ: ಮತ್ತಾರಾಧಕರಪ್ಪವರ್ಗಳ್ ಸುಕೌಶಲಸ್ವಾಮಿಯ ತಿರಿಕೋಪಸರ್ಗಮಂ ಮನದೆ ಬಗೆದು ಪಸಿವುಂ ನೀರಱ್ಕೆದಾಹವವಾತಂ ಸೂಲೆಯೆಂದಿವು ಮೊದಲಾಗೊಡೆಯ ವೇದನೆಗಳಂ ಸೈರಿಸಿ ದರ್ಶನ ಜ್ಞಾನ ಚಾರಿತ್ಯಂಗಳಂ ಸಾಧಿಸಿ ಸಮಾಧಿ ಮರಣದಿಂದ ಮುಡಿಪಯಭ್ಯುದಯನಿಶ್ರೇಯಸಸುಖಂಗಳನೆಯ್ದುಗೆ. (ಎಚ್.ಪಿ.ಎನ್.)

"https://kn.wikipedia.org/w/index.php?title=ಉಪಸರ್ಗ&oldid=1023497" ಇಂದ ಪಡೆಯಲ್ಪಟ್ಟಿದೆ