ವಿಷಯಕ್ಕೆ ಹೋಗು

ತುಘ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಘ್ರಾ - ಈ ಪದ ತುರ್ಕಿ ಮೂಲದ್ದು. ಮುದ್ರೆ ಅಥವಾ ತೊಡಕು ಚಿತ್ರ ಎಂಬುದು ಇದರ ಅರ್ಥ.[] ರಾಜ್ಯದ ದಾಖಲೆಗಳ ಮೇಲೆ ಒತ್ತಲಾಗುವ ಸುಂದರವಾದ ಬರೆವಣಿಗೆಯ ರಾಜಲಾಂಛನವನ್ನು ಇದು ಸೂಚಿಸುತ್ತದೆ. ಮುಂದೆ ಇದಕ್ಕೆ ಒಂದೇ ಪಂಕ್ತಿಯಲ್ಲಿ ಬರೆಯಲಾದ ರಾಜನ ಸಹಿ ಅಥವಾ ರಾಜವಂಶದ ಬಿರುದುಗಳು ಎಂಬ ಅರ್ಥವೂ ಬಂತು. ಇವನ್ನು ಅಧಿಕೃತ ಕಾಗದ ಪತ್ರಗಳು ಮತ್ತು ರಾಜ್ಯದ ಸನ್ನದು ಅಥವಾ ಅಧಿಕಾರ ಪತ್ರಗಳ ಮೇಲೆ ಮಾತ್ರವಲ್ಲದೆ ಹಕ್ಕುದಾರಿಕೆ ಪತ್ರಗಳ ನಾಣ್ಯಗಳು ಮತ್ತು ಅಧಿಕೃತ ಸ್ಮಾರಕಗಳಂಥ ದಾಖಲೆಗಳಲ್ಲಿಯೂ ಬಳಸಲಾಗುತ್ತಿತ್ತು. ಸಾಮಾನ್ಯವಾಗಿ ಅತ್ಯಂತ ಅಲಂಕಾರಿಕವಾದ ಹಾಗೂ ತೊಡಕಿನ ಶೈಲಿಯಲ್ಲಿ ಇವನ್ನು ಬರೆಯಲಾಗುತ್ತದೆ. ಹೀಗಾಗಿ ಸಾಹಿತ್ಯ ಕೃತಿಗಳಲ್ಲಿ ಇದಕ್ಕೆ ರಾಜಾಜ್ಞೆ ಎಂಬ ಅರ್ಥವೂ ಲಭ್ಯವಾಗಿದೆ. ಸಾಮಾನ್ಯವಾಗಿ ವಿವಿಧ ರೀತಿಯ ಮುದ್ರೆಗಳ ರೂಪದಲ್ಲಿ ಇವನ್ನು ಅಂದರೆ ರಾಜನ ಸಹಿ ಅಥವಾ ಬಿರುದುಗಳನ್ನು, ಒತ್ತುವ ಸ್ಥಳ ಬು ಚಿಕ್ಕದಾಗಿರುತ್ತವಾಗಿ ಅಷ್ಟರಲ್ಲಿಯೇ ಮುದ್ರೆಯ ಎಲ್ಲ ಅಕ್ಷರಗಳನ್ನೂ ಅಡಕಗೊಳಿಸಬೇಕಾಗಿತ್ತು. ಮುಂದೆ ಈ ಉದ್ದೇಶಕ್ಕೆಂದೇ ತಯಾರಾದ ಮುದ್ರೆಗಳಲ್ಲಿ ಅಕ್ಷರಗಳನ್ನು ಒಂದರ ಮೇಲೆ ಒಂದು ಬರುವಂತೆಯೋ ಒಂದರೊಳಗೆ ಒಂದು ಸುತ್ತಿಕೊಂಡಿರುವಂತೆಯೋ ಬರೆಯುವ ವಾಡಿಕೆ ಏರ್ಪಟ್ಟಿತ್ತು.

ಹೀಗಾಗಿ, ತುಘ್ರಾ ಅರಬ್ಬೀ ವರ್ಣಮಾಲೆಯ ಬಗೆಗಳಲ್ಲಿಯೇ ಅತ್ಯಂತ ತೊಡಕಿನ (ಇದರಲ್ಲಿ ಅರೇಬಿಕ್ ಮಾತ್ರವಲ್ಲದೆ ಪರ್ಷಿಯನ್, ಉರ್ದು ಮತ್ತು ಇತರ ಅನೇಕ ಭಾಷೆಗಳ ಬರೆಹಗಳನ್ನೂ ರೇಖಿಸಲಾಗುತ್ತದೆ) ಹಾಗೂ ಬಹುಶಃ ಅತ್ಯಂತ ಅಲಂಕಾರಿಕವಾದ ವರ್ಣಮಾಲೆಯಾಗಿದೆ. ಮೂಲತಃ ಅಗತ್ಯಾನುಗುಣವಾಗಿ ಅಥವಾ ವಿಶಿಷ್ಟ ಉದ್ದೇಶಕ್ಕಾಗಿ ರೂಪುಗೊಂಡ ಒಂದು ಬಗೆಯ ಕೂಡಕ್ಷರದ ಶೈಲಿ ಇದಾಗಿದ್ದು, ರಾಜ್ಯದ ಆಜ್ಞೆಗಳಲ್ಲಿ, ನಾಣ್ಯಗಳಲ್ಲಿ ಇತ್ಯಾದಿಯಾಗಿ ಇಂದಿಗೂ ಬಳಕೆಯಲ್ಲಿದೆ. ಆದರೆ, ಕಾಲಾನುಕ್ರಮದಲ್ಲಿ ಮುಸಲ್ಮಾನ ಕಲಾವಿದರು ಹಗೂ ಲಿಪಿಕಾರರು ತಮ್ಮ ಕಲಾತ್ಮಕ ಪ್ರತಿಭಯ ಮಾಧ್ಯಮವಾಗಿ ಇದನ್ನು ಬಳಸತೊಡಗಿದರು. ಅತ್ಯಂತ ಕಲಾತ್ಮಕವಾದ ಅಲಂಕಾರಿಕವಾದ ವಿನ್ಯಾಸ ಅಥವಾ ಆಕೃತಿಯನ್ನು ಮೂಡಿಸುವಂತೆ ಈ ಶೈಲಿಯಲ್ಲಿ ಪಠ್ಯಭಾಗವನ್ನು ಬರೆಯಲಾಗುತ್ತಿತ್ತು. ಅಗಾಧ ಕಲ್ಪನಾಚಾತುರ್ಯ ಮತ್ತು ಪ್ರಯತ್ನದಿಂದ ಮಾತ್ರವೇ ಅವನ್ನು ಗುರುತಿಸಲು ಸಾಧ್ಯವಾಗುತ್ತಿತ್ತು .
ಆದರೆ, ತುಘ್ರಾ ಎಂಬುದು ಉದಾಹರಣೆಗೆ ನಸ್ಖ ಅಥವಾ ತುಲ್ತ್ ಅಥವಾ ನಸ್ತಲೀಕ್‍ನಂತೆ ಅತ್ಯಾಬಿಕ್ ಬರೆವಣೆಗೆಯ ವಿಶಿಷ್ಟ ಲಿಪೆಯೇನೂ ಅಲ್ಲವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಬರೆವಣಿಗೆಯ ಅಲಂಕಾರಿಕ ವಿಧನ ಅಥವಾ ವ್ಯವಸ್ಥೆ ಮಾತ್ರ: ಅರ್ಯಾಬಿಕ್ ವರ್ಣಮಾಲೆಯ ಯಾವುದೇ ಶಿಷ್ಟ ಲಿಪಿಯನ್ನಾದರೂ ಇಲ್ಲಿ ಬಳಸಬಹುದು; ಹೆಚ್ಚಾಗಿ ಬಳಸುವುದು ತುಲ್ತ್, ನಸ್ಖ್ ಮತ್ತು ನಸ್ತಲೀಕ್ ಲಿಪಿಗಳನ್ನೇ.

ತುಘ್ರಾದ ದೃಶ್ಯ ಅಂಶಗಳು

[ಬದಲಾಯಿಸಿ]

ತುಘ್ರಾ ಒಂದು ವಿಶಿಷ್ಟ ರೂಪವನ್ನು ಹೊಂದಿದೆ, ಎಡಭಾಗದಲ್ಲಿ ಎರಡು ಕುಣಿಕೆಗಳು, ಮಧ್ಯದಲ್ಲಿ ಮೂರು ಲಂಬ ರೇಖೆಗಳು, ಕೆಳಭಾಗದಲ್ಲಿ ಜೋಡಿಸಲಾದ ಬರವಣಿಗೆ ಮತ್ತು ಬಲಕ್ಕೆ ಎರಡು ವಿಸ್ತರಣೆಗಳು. ಈ ಪ್ರತಿಯೊಂದು ಅಂಶಗಳು ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿವೆ, ಮತ್ತು ಒಟ್ಟಿಗೆ ಅವು ತುಘ್ರಾ ಎಂದು ಸುಲಭವಾಗಿ ಗುರುತಿಸಬಹುದಾದ ರೂಪವನ್ನು ರೂಪಿಸುತ್ತವೆ .[]

ಉದಾಹರಣೆ

[ಬದಲಾಯಿಸಿ]

ತನ್ನ ಸ್ವರೂಪದಿಂದಲೇ ಈ ಬಗೆಯ ಬರಹ ಕಣ್ಣೆದುರಿಗೆ ಒಂದು ಚಿತ್ರವನ್ನು ಮೂಡಿಸುತ್ತದೆ. ಉದಾಹರಣೆಗೆ ತುರ್ಕಿಯಲ್ಲಿ ಅಭ್ಯಾಸ ಮಾಡಲಾಗುತ್ತಿದ್ದ ಅಧಿಕೃತ ತುಘ್ರಾ ವಾಸ್ತವವಾಗಿ ಪಕ್ಷಿಯ ಅಥವಾ ಪೂರ್ಣ ವೇಗದಲ್ಲಿ ಧಾವಿಸುತ್ತಿರುವ ಆಶ್ವಾರೋಹಿಯ ರೂಪರೇಖೆಗಳನ್ನು ಹೊಂದಿದೆ. ಇದು ಲಿಪಿಕಾರರ ಪ್ರತಿಭೆಗೆ ಸ್ಫೂರ್ತಿಯನ್ನಿತ್ತಿತ್ತು. ಪರಿಣಾಮತಃ; ಸಾಮಾನ್ಯವಾಗಿ ಸಂಕ್ಷಿಪ್ತವೂ ಸಾರವತ್ತಾದುದೂ ಆದ ಪಠ್ಯಗಳನ್ನು ಒಳಗೊಂಡಿರುವಂಥ ಸ್ಮರಣಾರ್ಥ ಶಾಸನಗಳನ್ನು, ಧಾರ್ಮಿಕ ಸೂತ್ರಗಳನ್ನು, ರಾಜರುಗಳ ಹೆಸರು ಬಿರುದು ಇತ್ಯಾದಿಗಳನ್ನು ಪೂರ್ಣವಾಗಿಯಾಗಲೀ ಆಂಶಿಕವಾಗಿಯಾಗಲೀ ಕಂಡರಿಸುವಾಗ ಇದರ ಬಳಕೆ ಆಗತೊಡಗಿತು. ಬೇರೊಂದು ಉದ್ದೇಶಕ್ಕಾಗಿ ಇದು ಬಂಗಾಳದ ಮತ್ತು ಅದರ ಪಶ್ಚಿಮದ ನೆರೆಹೊರೆಯ ಪ್ರಾಂತ್ಯಗಳಲ್ಲಿ ವಿಶೇಷವಾಗಿ ಜನಪ್ರಿಯವಾಗಿತ್ತು. ಅಲ್ಲಿ ಐತಿಹಾಸಿಕ ಸ್ವರೂಪದ ಶಾಸನಗಳ ರಚನೆಯಲ್ಲಿಯೂ ತುಘ್ರಾದ ಶ್ರೇಷ್ಠ ವೈಖರಿಯನ್ನೊಳಗೊಂಡ ವಿಶಿಷ್ಟ ಅಲಂಕಾರಿಕ ಶೈಲಿಯೊಂದು ಬಳಕೆಗೆ ಬಂದಿತ್ತು. ಇದರಲ್ಲಿ ಅಕ್ಷರಗಳ ಉದ್ದನೆಯ ಕಾವು ಹಾಗೂ ಕೊಂಕುಗಳನ್ನು, ವಿವಿಧ ಪ್ರತೀಕಗಳೆಂಬ ಭಾವನೆಯನ್ನುಂಟು ಮಾಡುವಂಥ ವಿಶಿಷ್ಟ ರೀತಿಯಲ್ಲಿ ಜೋಡಿಸಲಾಗಿರುತ್ತದೆ. ಉದಾಹರಣೆಗೆ ಬಿಲ್ಲು ಮತ್ತು ಬಾಣದ ಪ್ರತೀಕವನ್ನು ಪ್ರತಿನಿಧಿಸುವಂತೆ ಬಾಣದ ತುದಿಯಂತಿರುವ ಮೊನಚಾದ ಹಾಗೂ ಲಂಬಾಕಾರದ ಕಾವಿನ ಮೇಲೆ ವಕ್ರ ಅಥವಾ ಕೊಂಕು ಆಕಾರದ ಅಕ್ಷರಗಳನ್ನು ಸಮ್ಮಿತರೂಪದಲ್ಲಿ ಇರಿಸುವುದು. ಅಥವಾ ಸರಳುಗಳು ಅಥವಾ ಬಾತುಕೋಳಿಗಳು ಅಥವಾ ಹೆಡೆಯುಳ್ಳ ಸರ್ಪಗಳು ಇತ್ಯಾದಿಗಳ ಹಿನ್ನೆಲೆಯಲ್ಲಿ ರೇಖಿಸಿದ ಕಮಾನುಗಳ ಅಥವಾ ಕಂಬಿಗಳ ಅಥವಾ ಭಾರತೀಯ ಮಾದರಿಯ ದೀಪಗಳ ಲಂಬಾಕಾರದ ಸಾಲು, ಅಥವಾ ಧ್ವಜಗಳನ್ನು ಎತ್ತಿ ಹಿಡಿದು ಮುಂದೆ ಸಾಗುತ್ತಿರುವ ಸೇನೆಯನ್ನು ಪ್ರತಿನಿಧಿಸುವಂಥ ಪ್ರತೀಕ.[]

ತುಘ್ರಾದ ಬಳಕೆ

[ಬದಲಾಯಿಸಿ]

ಅತ್ಯಂತ ಕುಶಲ ಹಗೂ ಆಕರ್ಷಕ ವಿನ್ಯಾಸಗಳ ಮೂಲಕ ಬೆರಗುಗೊಳಿಸುವಂಥ ಕೂಡಕ್ಷರ ವಿಧಾನವನ್ನು ತೆರೆದು ತೋರುವ ತುಘ್ರಾ ಶೈಲಿಯ ಸಮಗ್ರರೂಪದ ಬಳಕೆ ಸಾಮಾನ್ಯವಾಗಿ ರಾಜರ [] ಫರ್ಮಾನುಗಳಿಗೆ ಅಥವಾ ಆಜ್ಞೆಗಳಿಗೆ ಒತ್ತಲಾಗುತ್ತಿದ್ದ ಮುದ್ರೆಗಳಿಗೆ ಮಾತ್ರ ಸೀಮಿತವಾಗಿತ್ತಾದ್ದರೂ ಕಳೆದ ಕೆಲವು ಶತಮಾನಗಳಲ್ಲಿ ವೃತ್ತಿನಿರತ ಲಿಪಿಕಾರರು ಇದನ್ನು ಮಾನವರು, ಪ್ರಾಣಿಗಳು, ಪಕ್ಷಿಗಳು, ಅಥವಾ ಇಂಥವೇ ಇತರ ವಸ್ತುಗಳನ್ನೂ ಒಳಗೊಂಡಂತೆ ಅತ್ಯಂತ ಕಲಾತ್ಮಕಾನಾದ. ಬಗೆಬಗೆಯ ಪ್ರತೀಕಗಳನ್ನು ಚಿತ್ರಿಸಲೂ ಬಳಸಿಕೊಂಡರು. ಮಾನವನ ತಲೆ, ಹಕ್ಕಿ, ಹುಲಿ ಅಥವಾ ಸಿಂಹದಂಥ ಪ್ರಾಣಿ, ಅಂಬಾರಿಯನ್ನು ಹೊತ್ತಿರುವ ಆನೆ, ಮಸೀದಿಯ ಮುಂಭಾಗ ಅಥವಾ ಜ್ಯಾಮಿತೀಯ ವಿನ್ಯಾಸ-ವೃತ್ತ, ಚದರ ಅಥವಾ ಬಹುಬಾಹುಯುಕ್ತ ವಿನ್ಯಾಸ-ಇವೇ ಮೊದಲದುವುಗಳ ರೂಪರೇಖೆಗಳನ್ನು ಹೋಲುವಂತೆ ಪಠ್ಯಭಾಗವನ್ನು ಬರೆದಿರುವ ಪ್ರಸಂಗಗಳು ಬಹುಶಃ ತುಘ್ರಾ ಶೈಲಿಯ ಅತ್ಯಂತ ಕುಶಲ ಆಲಂಕಾರಿಕ ರಚನೆಗಳಾಗಿವೆ. ತುಘ್ರಾದ ಮತ್ತೊಂದು ಆಲಂಕಾರಿಕ ವಿಧಾನವನ್ನು ತುಘ್ರಾ-ಇ-ಮ ಕೂಸ್ ಅಂದರೆ ವಿಲೋಮ ಅಥವಾ ಪ್ರತಿಬಿಂಬಿತ ತುಘ್ರಾ ಎಂದು ಹೆಸರಿಸಲಾಗಿದೆ.[] ಈ ಬಗೆಯ ರಚನೆಯಲ್ಲಿ ಬಲ ಅರ್ಧದಲ್ಲಿನ ಬರೆಹದ ವಿಲೋಮ ಪ್ರತಿಕೃತಿ ಎಡ ಅರ್ಧದಲ್ಲಿ ಕಂಡುಬರುತ್ತದೆ-ಅಂದರೆ, ಬಲಭಾಗಕ್ಕೆ ಕನ್ನಡಿ ಹಿಡಿಯಲಾಗಿದೆಯೋ ಎಂಬಂತೆ ತೋರುತ್ತದೆ. ಈಚಿನ ಶತಮಾನಗಳ ಶಾಸನಗಳಲ್ಲಿಯೂ ಇಂಥ ಮಾದರಿಗಳು ಕಾಣಬರುತ್ತವೆ. ಧಾರ್ಮಿಕ ಶ್ರದ್ಧೆಯುಳ್ಳ ಜನ ಇವನ್ನೂ ಸರಳ ತುಘ್ರಾ ರಚನೆಗಳನ್ನೂ ಯಂತ್ರಗಳಾಗಿ ಅಥವಾ ತಾಯಿತಗಳಾಗಿ ಬಳಸುತ್ತಿದ್ದರು.[]

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://www.definitions.net/definition/tughra
  2. https://history2701.fandom.com/wiki/Ottoman_Tughra
  3. http://www.sothebys.com/en/auctions/ecatalogue/2011/arts-of-the-islamic-world-l11220/lot.238.html
  4. www.metmuseum.org https://www.metmuseum.org/en/art/collection/search/449533. Retrieved 11 January 2020. {{cite web}}: Missing or empty |title= (help)
  5. "13 Best Tughra images | Islamic art, Ottoman empire, Islamic calligraphy". Pinterest (in ಇಂಗ್ಲಿಷ್). Retrieved 11 January 2020.
  6. "Tugra (Sultanic Cipher)". www.turkishculture.org. Retrieved 11 January 2020.
"https://kn.wikipedia.org/w/index.php?title=ತುಘ್ರಾ&oldid=1066029" ಇಂದ ಪಡೆಯಲ್ಪಟ್ಟಿದೆ