ವಿಷಯಕ್ಕೆ ಹೋಗು

ಟಿ. ಎಸ್. ಎಲಿಯಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ. ಎಸ್. ಎಲಿಯಟ್
ಟಿ. ಎಸ್. ಎಲಿಯಟ್ 1934 ರಲ್ಲಿ
ಜನನಥಾಮಸ್ ಸ್ಟರ್ನ್ಸ್ ಎಲಿಯಟ್
(೧೮೮೮-೦೯-೨೬)೨೬ ಸೆಪ್ಟೆಂಬರ್ ೧೮೮೮
ಸೇಂಟ್ ಲೂಯಿ, ಮಿಜ಼ೂರಿ
ಮರಣ4 January 1965(1965-01-04) (aged 76)
ಕೆನ್ಸಿಂಗ್ಟನ್, ಲಂಡನ್, ಇಂಗ್ಲಂಡ್
ವೃತ್ತಿಕವಿ, ನಾಟಕಕಾರ, ಸಾಹಿತ್ಯ ವಿಮರ್ಶಕ, ಮತ್ತು ಸಂಪಾದಕ
ಪೌರತ್ವಹುಟ್ಟಿನಿಂದ ಅಮೇರಿಕನ್; ೧೯೨೭ರಿಂದ ಬ್ರಿಟಿಶ್ ಪ್ರಜೆ
ವಿದ್ಯಾಭ್ಯಾಸಬಿ.ಎ. ತತ್ವಶಾಸ್ತ್ರ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಹಾರ್ವರ್ಡ್ ವಿಶ್ವವಿದ್ಯಾಲಯ
ಮರ್ಟನ್ ಕಾಲೇಜ್, ಆಕ್ಸ್‌ಫ಼ರ್ಡ್
ಕಾಲ1905–1965
ಸಾಹಿತ್ಯ ಚಳುವಳಿಆಧುನಿಕತಾವಾದ
ಪ್ರಮುಖ ಕೆಲಸ(ಗಳು)ದ ಲವ್ ಸಾಂಗ್ ಆಫ್ ಆಲ್‍ಫ಼್ರೆಡ್ ಜೆ. ಪ್ರೂಫ಼್ರಾಕ್ (1915), ದ ವೇಸ್ಟ್ ಲ್ಯಾಂಡ್ (1922), ಫ಼ೋರ್ ಕ್ವಾರ್ಟೆಟ್ಸ್ (1944)
ಪ್ರಮುಖ ಪ್ರಶಸ್ತಿ(ಗಳು)ನೊಬೆಲ್ ಸಾಹಿತ್ಯ ಪ್ರಶಸ್ತಿ (1948), ಆರ್ಡರ್ ಆಫ್ ಮೆರಿಟ್ (1948)
ಬಾಳ ಸಂಗಾತಿವಿವಿಯನ್ ಹೇಯ್‍ವುಡ್ (1915–1947); ಎಸ್ಮಿ ವ್ಯಾಲರಿ ಫ಼್ಲೆಚರ್ (1957–ನಿಧನ)
ಮಕ್ಕಳುಇಲ್ಲ

ಸಹಿ

ಟಿ. ಎಸ್. ಎಲಿಯಟ್ (೨೬ ಸೆಪ್ಟಂಬರ್ ೧೮೮೮ - ೪ ಜನವರಿ ೧೯೬೫)ಇಪ್ಪತ್ತನೆಯ ಶತಮಾನದ ಪ್ರಮುಖ ಇಂಗ್ಲಿಷ್ ಕವಿಗಳಲ್ಲಿ ಒಬ್ಬ.

ಎಲಿಯಟ್ ಕವಿಯ ಜೀವನ[ಬದಲಾಯಿಸಿ]

The Faber and Faber building where Eliot worked from 1925 to 1965; the commemorative plaque is under the right-hand arch.

ಎಲಿಯಟ್ ಸಾಂಪ್ರದಾಯಿಕ ಉಡುಗೆ ತೊಡುಗೆಯ ವ್ಯಕ್ತಿ,ಮೃದು ಭಾಷಿ,ಶಾಂತ ಸ್ವಭಾವದವನು. ತನ್ನ ವೈಯಕ್ತಿಕ ಬಾಳಿನಲ್ಲಿ ದೊಡ್ಡ ಬಿರುಗಾಳಿಯೇ ಎದ್ದಾಗಲು ವಿಚಲಿತನಾಗದೆ ಅಪೂರ್ವ ಸಂಯಮದಲ್ಲಿ ಅದನ್ನು ಸಹಿಸಿ ನಿಂತವನು,ಅವನು ಅನುಭವಿಸಿದ ನೋವು ಕಹಿನಿರಾಸೆಗಳು ಅವನ ಕಾವ್ಯದ ಮೇಲೆ ಬಹಳ ಪರಿಣಾಮ ಬೀರಿರುವದು ನಿಜ.

ಎಲಿಯಟ್ ಹುಟ್ಟಿದ್ದು ೧೮೮೮ರಲ್ಲಿ; ಅಮೇರಿಕಾಮಿಸ್ಸೌರಿ ಪ್ರಾಂತ್ಯದ ಸೆಂಟ್ ಲೂಯಿಸ್ ನಗರದಲ್ಲಿ. ಹೆನ್ರಿಮೇರ್ ಎಲಿಯಟ್ ಅವನ ತಂದೆ; ಶಾರ್ಲೋಟ್ ಚಾನ್ಸಿ ಸ್ಟರ್ನ್ಸ್ ಅವನ ತಾಯಿ. ಅವನ ಪೂರ್ವಜರ ಮೂಲ ದೇಶ ಇಂಗ್ಲೆಂಡ್. ಸೋಮರ್ ಸೆಟ್ ನ ಈಸ್ಟ್ ಕೋಕರ್ ಎಂಬ ಗ್ರಾಮ ಅವನ ಮೂಲ ಸ್ಥಳ. ಮುಂದೆ ಎಲಿಯಟ್ ವಂಶದ ಪೂರ್ವಜರಲ್ಲೊಬ್ಬನಾದ ಆಂಡ್ರ್ಯೂ ಎಲಿಯತ್ ೧೬೭೦ರಲ್ಲಿ ಇಂಗ್ಲೆಂಡ್ ಬಿಟ್ಟು ಅಮೇರಿಕಾದ ನ್ಯೂ ಇಂಗ್ಲೆಂಡ್ ಪ್ರಾಂತ್ಯದ ಬಾಸ್ಟನ್ ನಗರಕ್ಕೆ ವಲಸೆ ಬಂದ.

ಎಲಿಯಟ್ ನ ಅಜ್ಜ, ವಿಲಿಯಂ ಗ್ರೀನ್ ಲೀಫ್ ಎಲಿಯಟ್ ಬಾಸ್ಟನ್ ನಗರ ಬಿಟ್ಟು ಸೆಂಟ್ ಲೂಯಿಸ್ ನಗರಕ್ಕೆ ಬಂದ. ಅಲ್ಲಿ ಯುನಿಟರೇನಿಯನ್ ಚರ್ಚ್ ಸ್ಥಾಪಿಸಿದ್ದಲ್ಲದೆ ಆ ಚರ್ಚಿನಲ್ಲಿ ಕ್ರೈಸ್ತಪುರೋಹಿತನು ಆಗಿ ಪ್ರಸಿದ್ದಿ ಪಡೆದನು. ಸೆಂಟ್ ಲೂಯಿಸ್ ನಲ್ಲಿರುವ ಪ್ರಖ್ಯಾತ ವಾಷಿಂಗ್ಟನ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಅದರ ಏಳಿಗೆಗೆ ದುಡಿದ ವ್ಯಕ್ತಿ. ಮುಂದೆ ೧೮೭೨ರಲ್ಲಿ ಗ್ರೀನ್ ಲಿಫ್ ಅದರ ಕುಲಪತಿಯೂ ಆದ.ಅವನು ರಚಿಸಿದ ಅನೇಕ ಧಾರ್ಮಿಕ ಕೃತಿಗಳಿವೆ.

ಸ್ಮಿತ್ ಅಕಾಡೆಮಿ ಎಲಿಯಟ್ ಓದಿದ ಮೊದಲ ಶಾಲೆ. ಆ ದಿನಗಳಲ್ಲೇ ಅವನು ಮೆಲ್ವಿಲ್ ನ ಮಾಬಿಡಿಕ್ ಕಾದಂಬರಿ ಓದಿದ್ದ. ಗ್ರೀಕ್ ಭಾಷಾ ಪರಿಣಿತಿಗಾಗಿ ಅವನಿಗೆ ಗ್ರೀಕ್ ಬಹುಮಾನ ದೊರೆತಿದೆ. ಅದೇ ವರ್ಷ ಅವನು ಹೋಮರ್,ವರ್ಜಿಲರ ಕೃತಿಗಳನ್ನು ಅದ್ಯಯನ ಮಾಡಿದ. ೧೪ನೇ ವಯಸ್ಸಿನಲ್ಲಿ ಉಮರ್ ಖಯ್ಯಾಮನ ರುಬಾಯತ್ ಗಳನ್ನು ಓದಿದ. ಈ ವಯಸ್ಸಿನಲ್ಲಿ ಎಲಿಯಟ್ ನ ಮೇಲೆ ತುಂಬಾ ಗಾಢವಾದ ಪರಿಣಾಮ ಬೀರಿದ ಕೃತಿಯೆಂದರೆ ಮ್ಯಾಥ್ಯೂ ಅರ್ನಾಲ್ಡ್ ರ ದಿ ಲೈಟ್ ಆಫ್ ಏಷ್ಯಾ.

ಪದವೀಧರನಾದಮೇಲೂ (1909) ಹಾರ್ವರ್ಡ್‍ನಲ್ಲಿ ಸಾಹಿತ್ಯ ಮತ್ತು ದರ್ಶನಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ. 1915ರಲ್ಲಿ ಪ್ರಯಾಣ ವೇತನ ಸಿಗಲಾಗಿ ಜರ್ಮನಿಗೆ ಹೋಗಿ ಬಂದು ಆಕ್ಸ್‌ಫರ್ಡಿನಲ್ಲಿ ಪುನಃ ದರ್ಶನ ಶಾಸ್ತ್ರದ ವ್ಯಾಸಂಗ ಮಾಡಿದ. ವಿವಾಹವಾಗಿ (1915) ಇಂಗ್ಲೆಂಡಿನಲ್ಲಿ ನೆಲೆಸಿದ. ಶಾಲಾಧ್ಯಾಪಕನಾಗಿ, ಬ್ಯಾಂಕ್ ಗುಮಾಸ್ತನಾಗಿ ಕೆಲಕಾಲ ಕೆಲಸ ಮಾಡಿದ. ಸಂಕೇತ ಪಂಥದ ಈಗೋಯಿಸ್ಟ್‌ ಪತ್ರಿಕೆಯ ಸಹಸಂಪಾದಕನಾಗಿ (1917) ದುಡಿದು, ಸಾಹಿತ್ಯ ಮತ್ತು ದರ್ಶನಗಳಿಗೆ ಮೀಸಲಾದ ನಿಯತಕಾಲಿಕವೊಂದನ್ನು ಆರಂಭಿಸಿ ಅದರ ಸಂಪಾದಕನಾಗಿ ಕೆಲಸ ಮಾಡಿದ. ಮೊದಲು ಕ್ರೈಟೀರಿಯನ್ ಎಂದೂ ಅನಂತರ ನ್ಯೂ ಕ್ರೈಟೀರಿಯನ್ ಎಂದೂ ಕರೆಯಲಾದ ಈ ಪತ್ರಿಕೆ ಸುಮಾರು ಹತ್ತು ವರ್ಷಗಳ ಕಾಲ ಬಹು ಪ್ರಸಿದ್ಧವೆನಿಸಿತು. 1925ರಿಂದ ಕೊನೆಯವರೆಗೂ ಫೇಬರ್ ಅಂಡ್ ಫೇಬರ್ ಪ್ರಕಟಣಾಲಯದ ನಿರ್ದೇಶಕರನಲ್ಲೊಬ್ಬನಾಗಿ ಕೆಲಸ ಮಾಡಿದ.ಫ್ರಾನ್ಸಿನ ಸಂಕೇತ ಪಂಥದ ಕೆಲವರು ಕವಿಗಳಿಂದ ತುಂಬ ಪ್ರಭಾವಿತನಾದ. ಜೀವನದ ವಾಸ್ತವತೆಯನ್ನು ದಿಟ್ಟತನದಿಂದ ಸ್ವಿಕರಿಸುವ ನಿಲುವನ್ನು ಎಲಿಯಟ್ ಪಡೆದಿದ್ದು ಇರ್ವಿಂಗ್ ಬ್ಯಾಬಿಲ್ ನಿಂದ.ಭಾರತೀಯ ವೇದಾಂತ ಸಾರವನ್ನು ಪ್ರಸಿದ್ದ ವಿಧ್ವಾಂಸ ಚಾರ್ಲ್ಸ್ ಲೆನ್ಮನ್ ನಿಂದ ಕಲಿತುಕೊಂಡ. ಎಲಿಯಟ್ ತನ್ನ ಗೌರವ ಡಾಕ್ಟರೇಟ್ ಪದವಿಗಾಗಿ "ಬ್ರಾಡ್ ಲೇ ಯ ತತ್ವವಿಚಾರಗಳಲ್ಲಿ ವ್ಯಕ್ತವಾಗಿರುವ ಜ್ಞಾನ ಮತ್ತು ಅನುಭವ" ಎಂಬ ವ್ಷಯವನ್ನು ಆಯ್ದುಕೊಂಡ.

ಎಲಿಯಟ್ ನ ಕಾವ್ಯ ವ್ಯಕ್ತಿತ್ವವನ್ನು ಕೆಲಮಟ್ಟಿಗೆ ರೂಪಿಸಿ ಅವನ ನಿಜ ದಾರಿಯಲ್ಲಿ ಗತಿ ತಪ್ಪದಂತೆ ನಡೆಸಿದ ಮಾರ್ಗದರ್ಶಿ ಎಜ್ರಾ ಪೌಂಡ್ ಎಂದು ಹೇಳಲಾಗುತ್ತದೆ.

ಸಾಹಿತ್ಯ ಜೀವನ[ಬದಲಾಯಿಸಿ]

೧೯೦೭ರಲ್ಲಿ ತನ್ನ ೧೯ನೇ ವಯಸ್ಸಿನಲ್ಲಿ ಅವನು ಬರೆದ ಕೆಲವು ಕವನಗಳಿಗೆ ಅವನೇ ಸಂಪಾದಕನಾಗಿ 'ಹಾರ್ವರ್ಡ್ ಅಡ್ವೋಕೇಟ್' ಎಂಬ ವಿದ್ಯಾರ್ಥಿ ಸಾಹಿತ್ಯ ಪತ್ರಿಕಯಲ್ಲಿ ಪ್ರಕಟವಾದವು. ೧೯೦೮ರಲ್ಲಿ ಎಲಿಯಟ್ ನ ಜೀವನದ ಗತಿಯನ್ನೇ ಬದಲಿಸಿದ ಕೃತಿಯೆಂದರೆ 'ಆರ್ಥರ್ ಸಿಂಬಲಿಸ್ಟ್' ಬರೆದ Movement in Literature ಕೃತಿ. ಇವನ ದಿ ಲೌವ್ ಸಾಂಗ್ ಆಫ್ ಆಲ್ಫ್ರೆಡ್ ಪ್ರಫ್ರಾಕ್ ಎಂಬ ಪ್ರಥಮ ವಿಡಂಬನ ಕವಿತೆ ಮೊದಲು ಪತ್ರಿಕೆಯಲ್ಲೂ (1915) ಅನಂತರ ಬೇರೆ ಕೆಲವು ಕವನಗಳೊಡನೆ ಪುಸ್ತಕವಾಗಿಯೂ ಪ್ರಕಟವಾಯಿತು (1917). 1919ರಲ್ಲಿ ಪೊಯಮ್ಸ್‌ ಎಂಬ ಗ್ರಂಥ ಹೊರಬಂತು. ಎಲ್ಲವೂ ಒಟ್ಟಾಗಿ 1920ರಲ್ಲಿ ಪುನರ್ಮುದ್ರಿತ ವಾದುವು. ಎಲಿಯಟ್ನ ಈ ಕವನಗಳಲ್ಲೆಲ್ಲ ಸಮಕಾಲೀನ ನಗರ ಜೀವನದ ಹರಿತವಾದ ವಿಮರ್ಶೆ, ವಿಡಂಬನೆಗಳು ಪಾತ್ರಗಳ ಮೂಲಕ ನಾಟಕೀಯವಾಗಿ ಮೈದೋರಿವೆ. ಈ ವಿಡಂಬನೆ ದಿ ವೇಸ್ಟ್‌ ಲ್ಯಾಂಡ್ ಕವಿತೆಯಲ್ಲಿ (1922) ತನ್ನ ಶಿಖರ ಮುಟ್ಟಿದೆ. ಉಜ್ಜ್ವಲ ಪ್ರತಿಮೆಗಳ ಮಾಲಿಕೆಯ ಮೂಲಕ ಯುದ್ಧೋತ್ತರ ಯುರೋಪಿನ ಭಗ್ನಜೀವನವನ್ನು ಚಿತ್ರಿಸುವ ಈ ಕವನಕ್ಕೆ 2000 ಡಾಲರುಗಳ ಡಯಲ್ ಬಹುಮಾನ ದೊರೆಯಿತು.ಅರಿಸ್ಟೋಫೆನೀಸನ ಮಾದರಿಯದೆಂದು ಹೇಳಲಾದ ಉಗ್ರನಾಟಕವೊಂದರ (ಮೆಲೋ ಡ್ರಾಮ) ಭಾಗಗಳಾದ ದಿ ಹಾಲೊ ಮೆನ್ ಮತ್ತು ಸ್ವೀನಿ ಅಗೋನಿಸ್ಟಿಸ್ ಎಂಬುವು ಕ್ರೈಟೀರಿಯನ್ ಪತ್ರಿಕೆ ಯಲ್ಲಿ ಬೆಳಕು ಕಂಡವು. ದಿ ಜರ್ನಿ ಆಫ್ ದಿ ಮಾಗಿ (1917), ಎ ಸಾಂಗ್ ಫಾರ್ ಸಿಮ್ಯೋನ್ (1928) ಮತ್ತು ಆನಿಮುಲಾಗಳು (1929) ಪುಸ್ತಕಗಳಲ್ಲಿ ಪ್ರಕಟ ಗೊಂಡವು. ಬಾಳಿನ ಒಳಿತು ಕೆಡಕುಗಳ ಬಗ್ಗೆ ಮತ್ತು ಶ್ರದ್ಧೆ ನಮ್ರತೆಗಳ ಮೂಲಕ ಪ್ರಸ್ತುತ ಜೀವನದ ಪಾಳು ಭೂಮಿಯಿಂದ ಪಾರಾಗುವ ಬಗ್ಗೆ ಕವಿ ನಡೆಸಿರುವ ದೀರ್ಘ ಚಿಂತನೆ ಆಷ್ ವೆಡ್ನೆಸ್ಡೆ (1930) ಕವನದಲ್ಲಿ ಕಲಾತ್ಮಕವಾಗಿ ರೂಪುಗೊಂಡಿದೆ. ಆಗಾಗ ಬರೆದಿಟ್ಟ ಕೆಲವು ಪದ್ಯದ ತುಣುಕುಗಳನ್ನು ಒಟ್ಟಿಗೆ ಪರಿಭಾವಿಸಿದಾಗ ಏನೋ ಒಂದು ಅರ್ಥ ಹೊಳೆದು ಈ ಕವನ ರೂಪುಗೊಂಡಿತು. ರೋಮನ್ ಕೆಥೊಲಿಕ್ ಧರ್ಮಕ್ಕೆ ಸೇರಿದ ಎಲಿಯಟ್ ತಾನು ಸಾಹಿತ್ಯದಲ್ಲಿ ಪ್ರಾಚೀನ ಸಂಪ್ರದಾಯದವನೆಂದೂ ರಾಜಕೀಯದಲ್ಲಿ ರಾಜಪಕ್ಷದವನೆಂದೂ ಧರ್ಮದಲ್ಲಿ ರೋಮನ್ ಕೆಥೊಲಿಕನೆಂದೂ ಸಾರಿದ. ಈ ಘೋಷಣೆಗೆ ಮುಂಚೆ ಬಂದ ಕವನಗಳು ಇದರ ಪುರ್ವಭಾವಿ ಸಿದ್ಧತೆ ಎಂಬಂತಿವೆ. ದಿ ಲೌವ್ ಸಾಂಗ್ ಆಫ್ ಆಲ್ಪ್ರೆಡ್ ಪ್ರಫ್ರಾಕ್ ಮತ್ತು ದಿ ವೇಸ್ಟ್‌ ಲ್ಯಾಂಡ್‍ಗಳು ಧರ್ಮಸಂಪ್ರದಾಯಗಳಿಲ್ಲದ ಸಮಾಜದಲ್ಲಿ ಜೀವನ ವಿಫಲತೆ ನಿರಾಶೆಗಳಿಗೆ ಹೇಗೆ ಬಲಿಯಾಗುತ್ತದೆಂಬುದನ್ನು ತೋರಿಸುತ್ತವೆ. ಮೌಲ್ಯಹೀನವಾಗಿ ಸಿಡಿದ ಜಗತ್ತಿನ ಚಿತ್ರ ದಿ ವೇಸ್ಟ್‌ ಲ್ಯಾಂಡ್‍ನಲ್ಲಿದೆ. ಫೋರ್ ಕ್ವಾರ್ಟೆಟ್ಸ್‌ ಎಲಿಯಟ್ಟನ ಕಾವ್ಯಸಿದ್ಧಿಯ ನಿದರ್ಶನವೆನ್ನಬಹುದು. ಕವಿಯ ಪುರ್ವಜರಿಗೆ ಸಂಬಂಧಿಸಿದ್ದು ಕವಿಗೆ ಧ್ಯಾನವಸ್ತುಗಳಾದ ನಾಲ್ಕು ಪ್ರದೇಶಗಳ ಹೆಸರನ್ನು ಈ ಕೃತಿಯ ನಾಲ್ಕು ಭಾಗಗಳಿಗೆ ಕೊಡಲಾಗಿದೆ. ಮಾನವ ಜೀವನದಲ್ಲಿ ಕಾಲದ ಅರ್ಥ ಮತ್ತು ನಿತ್ಯತೆಗೆ ಅದರೊಡನಿರುವ ಸಂಬಂಧವನ್ನು ಕುರಿತು ಎಲಿಯಟ್ ಸಂಯಮ ಪುರ್ಣವಾದ ಚಿಂತನೆ ನಡೆಸಿರುವುದು ಈ ಕೃತಿಯಲ್ಲಿ ಕಾಣುತ್ತದೆ. ಗತಪರಂಪರೆಯ ಪುನರ್ಶೋಧನೆ ಮತ್ತು ಅದರೊಡನೆ ಸ್ನೇಹಸ್ಥಾಪನೆಗೆ ನಡೆಸಿದ ಚತುರ್ಯಾತ್ರೆಗಳೆಂದು ವಿಮರ್ಶಕರು ಇದನ್ನು ಬಣ್ಣಿಸಿದ್ದಾರೆ. ಎಲಿಯಟ್ಟನ ಬೃಹತ್ ಸಾಧನೆಗಳ ದೃಷ್ಟಿಯಿಂದ ಗೌಣವಾದರೂ ಪ್ರಕೃತ ಹೆಸರಿಸಲು ಯೋಗ್ಯವಾದ ಗ್ರಂಥವೆಂದರೆ ಓಲ್ಡ್‌ ಪೋಸಮ್ಸ್‌ ಬುಕ್ ಆಫ್ ಪ್ರಾಕ್ಟಿಕಲ್ ಕ್ಯಾಟ್ಸ್‌ (1939). ಇದರಲ್ಲಿ ಮಕ್ಕಳಿಗಾಗಿ ಬಹು ಸುಲಭ ಶೈಲಿಯಲ್ಲಿ ಬರೆದ ಕವನಗಳಿವೆ. ಎಲಿಯಟ್‍ನ ಮೊದಲ ಕವನಗಳು ರಮ್ಯ ಕಾವ್ಯಪಂಥದಿಂದ ತೀರ ಭಿನ್ನವಾದ ಹಾದಿಯನ್ನು ಹಿಡಿದಿದ್ದು ಹೊಸ ಕಾವ್ಯವಿಧಾನವನ್ನೇ ರೂಪಿಸಿದುವು. ಅತಿ ಬಳಕೆಯಿಂದ ನಿರ್ವೀರ್ಯವಾಗಿದ್ದ ಕಾವ್ಯ ಭಾಷೆಯನ್ನು ಎಲಿಯಟ್ ಹೊಸ ರಚನೆ ಮತ್ತು ಪ್ರತಿಮೆಗಳ ಬಳಕೆಯಿಂದ ವೀರ್ಯವತ್ತಾಗಿ ಮಾಡಿ ಅದರ ಅಭಿವ್ಯಕ್ತಿಯನ್ನೇ ತಿದ್ದಿದ. ತಾನೇ ರೂಪಿಸಿದ ವಿಮರ್ಶಾ ಸೂತ್ರಗಳಿಗೆ ಮಾದರಿಯೆಂಬಂತೆ ಕಾವ್ಯ ರಚನೆ ಮಾಡಿದ. ಸಮಕಾಲೀನ ಸಾಹಿತ್ಯ ಇವನ ಕೃತಿಗಳಿಂದ ತೀರ ಪ್ರಭಾವಿತವಾಗಿದೆ. ಎಲಿಯಟ್‍ನ ಎಲ್ಲ ಕವನಗಳೂ ಪರಂಪರೆ, ಧರ್ಮ, ಜೀವನಗಳ ಮೌಲ್ಯಗಳನ್ನು ಆಧರಿಸಿ ಸೃಷ್ಟಿಸಿದ ಕಲಾತ್ಮಕ ಕೃತಿಗಳಾಗಿದ್ದು ಇಂಗ್ಲಿಷ್ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ. ಎಲಿಯಟ್ ನ ಪ್ರಮುಖ ಕೃತಿಗಳಲ್ಲ್ಲಿ The Waste Land (ಬಂಜೆಭೂಮಿ),ಈ ಕೃತಿಯು ಇಂಗ್ಲೀಷ್ ಸಾಹಿತ್ಯದ ಎರಡನೇ ಮಹಾಕಾವ್ಯವಾಗಿದೆ. ಮೊದಲನೆಯದು ಜಾನ್ ಮಿಲ್ಟನ್ ನ ಪ್ಯಾರಡೈಸ್ ಲಾಸ್ಟ್. ಬಂಜೆಭೂಮಿ ಇವನಿಗೆ ಪ್ರಖ್ಯಾತಿ ತಂದುಕೊಟ್ಟ ಒಂದು ಮಹಾಕಾವ್ಯ,ಇದರಲ್ಲಿ ೪೩೩ ಸಾಲುಗಳಿದ್ದು ಐದು ವಿಭಾಗಗಳಲ್ಲಿ ವಿನ್ಯಾಸಗೊಂಡಂತಹ ಇಂಗ್ಲೀಷ್ ಭಾಷೆಯಲ್ಲಿ ಅತೀ ಧೀರ್ಘವಾದ ಪಾಂಡಿತ್ಯಪೂರ್ಣವಾದ ಕಾವ್ಯ.

ಪರಸ್ಪರ ಸಂಭಂದವಿಲ್ಲದೆ ಚಿತ್ರ ವಿಚಿತ್ರ ಪ್ರತಿಮೆಗಳ ಗುಡ್ಡೆಯಂತೆ ತೋರಿ ವಾದ ವಿವಾದಗಳ ಅಲೆಯನ್ನು ಎಬ್ಬಿಸಿದ ಕವನ.೨೦ನೇ ಶತಮಾನದ ಆಧುನಿಕ ಜಗತ್ತಿನ ಬಂಜೆತನವನ್ನು ಚಿತ್ರಿಸುವುದೇ ಈ ಕೃತಿಯ ಮುಖ್ಯ ಆಶಯವಾಗಿದೆ.

ನಾಟಕಕಾರನಾಗಿ[ಬದಲಾಯಿಸಿ]

20ನೆಯ ಶತಮಾನದ ನಾಲ್ಕನೆಯ ದಶಕದಲ್ಲಿ ಇಂಗ್ಲೆಂಡಿನಲ್ಲಿ ಪುನರುಜ್ಜೀವನ ಗೊಂಡ ಪದ್ಯನಾಟಕಗಳ ಕ್ಷೇತ್ರದಲ್ಲಿ ಪ್ರಧಾನ ಪಾತ್ರ ಎಲಿಯಟ್‍ನದು. ಪದ್ಯ ನಾಟಕಗಳ ವೈಶಿಷ್ಟ್ಯವನ್ನು ಎಲಿಯಟ್ ಹಲವು ಪ್ರಬಂಧಗಳಲ್ಲಿ ವಿಮರ್ಶಿಸಿದ್ದಾನಲ್ಲದೆ ತನ್ನ ಉದ್ದೇಶ, ಮಾರ್ಗ ಮತ್ತು ಪ್ರಯೋಗಗಳನ್ನೂ ಪೃಥಕ್ಕರಿಸಿದ್ದಾನೆ. ಎ ಡಯಲಾಗ್ ಆನ್ ಡ್ರಮೆಟಿಕ್ ಪೊಯಟ್ರಿ, ಆನ ಪೊಯಟ್ರಿ ಅಂಡ್ ಪೊಯಟ್ಸ್‌, ಪೊಯಟ್ರಿ ಅಂಡ್ ಡ್ರಾಮ ಎಂಬ ವಿಮರ್ಶೆಗಳಲ್ಲೂ ಈತ ಮಾಡಿದ ಒಂದು ರೇಡಿಯೋ ಭಾಷಣ (1936) ಮತ್ತು ಎಲಿಜ಼ಬೆತ್ ಯುಗದ ನಾಟಕಕಾರರ ಮೇಲಿನ ಪ್ರಬಂಧಗಳಲ್ಲೂ-ಈ ಬಗ್ಗೆ ಎಲಿಯಟ್‍ನಿಗಿದ್ದ ಧೋರಣೆಯನ್ನು ಕಾಣಬಹುದು. ನಾಟಕಕ್ಕೆ ಪದ್ಯಮಾಧ್ಯಮ ಅಲಂಕಾರಕ್ಕೆಂದು ಕೃತಕವಾಗಿ ತೊಡಿಸಿದ ಒಡವೆಯಲ್ಲ. ನಾಟಕದ ಕ್ರಿಯೆಯ ಕ್ರಮಕ್ಕೆ (ಪ್ಯಾಟರ್ನ್) ಗಹನತೆಯನ್ನು ನೀಡಬಲ್ಲ ಇನ್ನೊಂದು ಕ್ರಮವನ್ನು ಸೂಚಿಸುವುದೇ ಪದ್ಯಮಾಧ್ಯಮದ ಸಾರ್ಥಕ್ಯ. ಈ ಎರಡು ಕ್ರಮಗಳೂ ಒಂದರೊಡನೊಂದು ಬೆಸೆದು ಕೊಂಡಿರಬೇಕು ಎಂಬುದು ಈತನ ದೃಷ್ಟಿ.. ಎಲಿಯಟ್‍ನ ಪದ್ಯನಾಟಕಗಳು ಈ ದೃಷ್ಟಿಯ ಅಭಿವ್ಯಕ್ತಿ ಎನ್ನಬಹುದು. ಸ್ವೀನಿ ಅಗೊನಿಸ್ಟಿಸ್ (1932) ಮತ್ತು ದಿ ರಾಕ್ (1934) ಎಂಬೆರಡು ಕೃತಿಗಳು ಈ ಕ್ಷೇತ್ರದಲ್ಲಿ ಪ್ರಯೋಗಗಳು. ಎಲಿಯೆಟ್‍ನ ಕೈ ಪದ್ಯನಾಟಕಗಳನ್ನು ಬರೆಯುವುದರಲ್ಲಿ ಪಳಗಿರುವುದು ಮರ್ಡರ್ ಇನ್ ದಿ ಕೆಥೆಡ್ರಲ್‍ನಲ್ಲಿ (1935) ನಿಸ್ಸಂದೇಹವಾಗಿ ಕಾಣುತ್ತದೆ. ಕ್ಯಾಂಟರ್ಬರಿ ಉತ್ಸವದ ಸಮಯದಲ್ಲಿ ಅಭಿನಯಕ್ಕಾಗಿ ರಚಿಸಿದ ಈ ಕೃತಿಯಲ್ಲಿ ಧಾರ್ಮಿಕ ವಿಧಿಯ ವಾತಾವರಣವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾನೆ, ನಾಟಕಕಾರ, 1170ರಲ್ಲಿ ರಾಜಭಟರಿಂದ ಸಂತ ಥಾಮಸ್ ಬೆಕೆಟ್ ಕೊಲೆಯಾದುದು ನಾಟಕದ ಕಥಾವಸ್ತು. ದೇವಾಲಯದಲ್ಲಿ ಅಭಿನಯಿಸಲೆಂದೇ ರಚಿತವಾದ ಈ ಕೃತಿಯಲ್ಲಿ ಪ್ರೇಕ್ಷಕರು ನಾಟಕದ ಕ್ರಿಯೆಯಲ್ಲಿ-ಧಾರ್ಮಿಕ ವಿಧಿಯಲ್ಲಿ ಭಾಗವಹಿಸುವಂತೆ ಭಾಗಿಗಳಾಗಿ ರಸಾತ್ಮಕ ಅನುಭವವನ್ನು ಪಡೆಯುತ್ತಾರೆ. ಭಾಷೆಯ ಗಾಂಭೀರ್ಯ ಮತ್ತು ಬಿಗುಮಾನ ಇದಕ್ಕೆ ಹೊಂದಿಕೊಳ್ಳುತ್ತದೆ. ಇದರ ಮುಂದಿನ ನಾಟಕ ದಿ ಫ್ಯಾಮಿಲಿ ರೀಯೂನಿಯನ್ (1939) ಎಂಬುದು ನಾಟಕಕಾರನ ಸಮಕಾಲೀನ ಭಾಷೆಯನ್ನಾಡುವ ಸಮಕಾಲೀನ ಜನರನ್ನು ಕುರಿತ ನಾಟಕ. ಇದರ ನಾಯಕ ತರುಣ ಶ್ರೀಮಂತ ಹ್ಯಾರಿ, ಲಾರ್ಡ್ ಮಾನ್ಚೆನ್ಸಿ ತನ್ನ ಹೆಂಡತಿಯನ್ನು ಕೊಲೆಮಾಡಿರುವನೆಂಬ ನಂಬಿಕೆಯಿಂದ ಜೀವನದಲ್ಲಿ ಬೇಸರಗೊಂಡಿದ್ದಾನೆ. ಪ್ರಾಚೀನ ಗ್ರೀಕರ ನಾಟಕಗಳಲ್ಲಿನಂತೆ ಪ್ರತೀಕಾರ ದೇವತೆಗಳು ಅವನನ್ನು ಬೆನ್ನಟ್ಟುತ್ತಾರೆ. ತನ್ನ ಚಿಕ್ಕಮ್ಮ ಅಗಾಥಳಿಂದ ಅವನಿಗೆ ಇವರು ಪರಿಶುದ್ಧತೆಯ ದೇವತೆಗಳು ಅಹುದು ಎನ್ನುವ ಅರಿವಾಗುತ್ತದೆ. ಇಲ್ಲಿ ಸಾಮಾನ್ಯ ಜನದ ವ್ಯವಹಾರ ಜಗತ್ತನ್ನೂ ಅಗಾಥಳ ಆಧ್ಯಾತ್ಮ್ಮಿಕ ಜಗತ್ತನ್ನೂ ಸೃಷ್ಟಿಸುತ್ತಾನೆ. ಎಲಿಯಟ್, ಹಾಗೆ ಮಾಡುವಲ್ಲಿ ಶೈಲಿಯ ಶ್ರೀಮಂತಿಕೆಯನ್ನೂ ಕಾವ್ಯಗುಣವನ್ನೂ ಕಡಿಮೆ ಮಾಡುತ್ತಾನೆ. ಪಾಪ ಕೃತ್ಯಕ್ಕಿಂತ ಪಾಪದ ಅರಿವನ್ನು ನಿರೂಪಿಸಲು ಹೊರಟುದರಿಂದ ಇಲ್ಲಿ ಕ್ರಿಯೆ ತಕ್ಕಷ್ಟು ನಿಷ್ಕೃಷ್ಟವಾಗಿಲ್ಲ. ದಿ ಕಾಕ್ಟೇಲ್ ಪಾರ್ಟಿಯಲ್ಲಿ (1951) ಒಬ್ಬರಿಂದೊಬ್ಬರು ದೂರವಾದ ಗಂಡ ಹೆಂಡತಿಯರು ಮನೋರೋಗ ವೈದ್ಯನೊಬ್ಬನ ಮಾರ್ಗದರ್ಶನದಿಂದ ಮತ್ತೆ ಒಟ್ಟಾಗಿ ಬಾಳಲು ಕಲಿಯುತ್ತಾರೆ. ಇಬ್ಬರೂ ತಮ್ಮ ಕನಸುಗಳನ್ನು ಬಿಟ್ಟು ತಮ್ಮ ವ್ಯಕ್ತಿತ್ವಗಳ ಮಿತಿಯಲ್ಲಿ ಬಾಳುವುದನರಿತರೆ ತೃಪ್ತಿಯನ್ನು ಕಂಡುಕೊಳ್ಳಬಹುದೆಂಬ ಅರಿವು ಬರುತ್ತದೆ. ಈ ನಾಟಕ ಫ್ಯಾಮಿಲಿ ರೀಯೂನಿಯನ್ ಗಿಂತ ಯಶಸ್ವಿ ಎನಿಸಿದೆ. ನಾಟಕಕಾರ ಪ್ರೇಕ್ಷಕರ ಆಸಕ್ತಿಯನ್ನು ಉಳಿಸಿಕೊಂಡು ಬರುವ ಮತ್ತು ಅವರನ್ನು ವಿನೋದಗೊಳಿಸಬಲ್ಲ ಫಟನೆಗಳೊಂದಿಗೆ ಸಮಕಾಲದ ಜೀವನದ ಸಮಸ್ಯೆಗಳ ಗಂಭೀರ ಪೃಥಕ್ಕರಣೆಯನ್ನು ಬೆರೆಸುವುದರಲ್ಲಿ ಯಶಸ್ವಿಯಾಗಿದ್ದಾನೆ. ನಾಯಕ ಭಗವದಿಚ್ಛೆಯನ್ನೂ ಸೂಚಿಸುತ್ತಾನೆ. ಧಾರ್ಮಿಕ ವಿಧಿಗಳ ವಾತಾವರಣವನ್ನು ಇಲ್ಲಿಯೂ ಕಾಣಬಹುದು. ಈ ಕಥೆಯ ಮೂಲ ಯುರಿಪಿಡೀಸ್ನ ಆಲ್ಸೆಸ್ಟಿಸ್ ಎಂದು ಎಲಿಯಟ್ ಹೇಳಿದ್ದಾನೆ. ಇದರಲ್ಲಿ ಅಲ್ಲಲ್ಲಿ ಹೃದಯಸ್ಪರ್ಶಿಯಾದ ವಾಗ್ಮಿತೆಯುಳ್ಳ ಭಾಗಗಳುಂಟು. ಶೈಲಿ ಸಮಕಾಲೀನ ವಿದ್ಯಾವಂತರ ದೈನಿಕ ಜೀವನದ ಭಾಷೆಗೆ ಬಹುದೂರವಿಲ್ಲ. ದಿ ಕಾನ್ಫಿಡೆನ್ಷಿಯಲ್ ಕ್ಲರ್ಕ್ನ (1953) ವಸ್ತು ಜಟಿಲವಾದುದು. ತನ್ನ ತಂದೆ ಯಾರೆಂದು ಅರಿಯದ ಯುವಕ ಕಾಲ್ಬಿ ಸಿಮ್ಕಿನ್ಸ್‌ ಇದರ ಕೇಂದ್ರ ವ್ಯಕ್ತಿ. ಕಥೆಯ ತಿರುವುಗಳು ಪ್ರೇಕ್ಷಕರ ಅಸಕ್ತಿಯನ್ನು ಉಳಿಸಿಕೊಳ್ಳುತ್ತವೆ. ಕಾಲ್ಬಿಗೆ ಕಡೆಯಲ್ಲಿ ಆಯ್ಕೆಯ ಸ್ವಾತಂತ್ರ್ಯ ಲಭಿಸುತ್ತದೆ-ತನ್ನ ತಂದೆ ಎಂದು ತಾನು ಭಾವಿಸಿದ್ದ ಶ್ರೀಮಂತನ ಜೀವನ ರೀತಿಯನ್ನೇ ಅನುಸರಿಸಿ ಅದು ತನ್ನ ಪ್ರವೃತ್ತಿಗೆ ವಿರುದ್ಧವಾಗಿದ್ದರೂ ಐಶ್ವರ್ಯಪದವಿ ಸುಖಗಳನ್ನು ಖಂಡಿತಮಾಡಿಕೊಳ್ಳಬಹುದು ಇಲ್ಲವೆ ಬಡ ಸಂಗೀತಗಾರನೊಬ್ಬನ ಮಾರ್ಗವನನ್ನನುಸರಿಸಿ ತನ್ನ ಪ್ರವೃತ್ತಿಯ ಬಯಕೆಯನ್ನು ತೃಪ್ತಿಪಡಿಸಬಹುದು. ಈ ನಾಟಕದ ರಚನೆಯಲ್ಲಿ ಯುರಿಪಿಡೀಸನ ಐಯಾನ್ನ ಪ್ರಭಾವ ಕಾಣುತ್ತದೆ. ಎಲಿಯಟ್‍ನ ಕಡೆಯ ನಾಟಕ ದಿ ಎಲ್ಡರ್ ಸ್ಟೇಟ್ಸ್‌ಮನ್ (1958). ಇದರಲ್ಲಿನ ಕೇಂದ್ರ ವ್ಯಕ್ತಿ ಲಾರ್ಡ್ ಕ್ಲೇವರ್ಟನ್. ಇತರ ನಾಟಕಗಳಲ್ಲಿನಂತೆ ಇಲ್ಲೂ ಭೂತಕಾಲದ ಘಟನೆಗಳು ವರ್ತಮಾನದ ಬಾಳನ್ನು ಸುಡಲು ಬರುತ್ತವೆ. ಅದರೆ ಕ್ಲೇಮರ್ಟನ್ ತನ್ನ ಅಂತಃಸಾಕ್ಷಿಯನ್ನು ಶುದ್ಧಗೊಳಿಸಿಕೊಂಡ ಅನಂತರ ಭೂತಕಾಲ ಅವನನ್ನು ಏನೂ ಮಾಡಲಾರದು. ಕಲೋಸಸ್‍ನಲ್ಲಿ ಈಡಿಪಸ್ ಎಂಬ ಸೊಫೋಕ್ಲೀಸ್ನ ನಾಟಕದ ಪ್ರಭಾವ ಇಲ್ಲಿ ತೋರುತ್ತದೆ. ಕಟ್ಟುನಿಟ್ಟಿನ ವಾಸ್ತವಿಕತೆ ನಾಟಕದ ಶಕ್ತಿಯನ್ನೂ ಸೂಚ್ಯಾರ್ಥವನ್ನೂ ಅನಗತ್ಯವಾಗಿ ಮಿತಿಗೊಳಿಸುವುದೆಂದು ಭಾವಿಸಿದ ಎಲಿಯಟ್‍ನ ಪ್ರಯೋಗಗಳು ವಿಶೇಷ ಪ್ರಭಾವವನ್ನು ಬೀರಿದುವು. ಈ ಕೃತ್ತಿಗಳಲ್ಲಿ ಗ್ರೀಕ್ ನಾಟಕಗಳ ಪ್ರಭಾವದೊಡನೆ ಕ್ರೈಸ್ತಧರ್ಮ ಅಂಶ ಬೆರೆತಿದೆ. ಕ್ರಿಯೆ ಎರಡು ಹಂತಗಳಲ್ಲಿ ಸಾಗುವುದೆನ್ನುವುದಕ್ಕಿಂತ ಎರಡು ಜಗತ್ತುಗಳ ಅರಿವನ್ನು ಉಂಟುಮಾಡಬಲ್ಲದು ಎಂದು ಹೇಳುವುದು ಸರಿಯಾಗುತ್ತದೆ. ಪದ್ಯಮಾಧ್ಯಮದ ಬಳಕೆಯ ಪ್ರಯೋಗಗಳು ಕುತೂಹಲಕಾರಿಯಾಗಿವೆ.

ವಿಮರ್ಶಕನಾಗಿ[ಬದಲಾಯಿಸಿ]

ಎಲಿಯಟ್ ಕವಿಯಾಗಿ, ನಾಟಕಕಾರನಾಗಿ ಖ್ಯಾತಿಪಡೆದಿರುವುದು ಮಾತ್ರವಲ್ಲದೆ ವಿಮರ್ಶಕನಾಗಿಯೂ ಸಮಾಜ ಸಂಸ್ಕೃತಿಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕುರಿತ ಚಿಂತನಾಸಕ್ತ ಲೇಖಕನಾಗಿಯೂ ಖ್ಯಾತಿಪಡೆದಿದ್ದಾನೆ. ಇವನ ವಿಮರ್ಶಾತ್ಮಕ ಪ್ರಬಂಧಗಳ ಪ್ರಥಮ ಸಂಗ್ರಹ ದಿ ಸೇಕ್ರೆಡ್ ವುಡ್ ಹೊರಬಿದ್ದುದು 1920ರಲ್ಲಿ. 17ನೆಯ ಶತಮಾನದ ಇಂಗ್ಲಿಷ್ ಕಾವ್ಯದ ಕೆಲವು ಅಂಶಗಳನ್ನು ವಿಷಯವಾಗುಳ್ಳ ಮೂರು ಪ್ರಬಂಧಗಳು ಹೋಮೇಜ್ ಟು ಡ್ರೈಡೆನ್ ಎಂಬ ಹೆಸರಿನ ಪುಸ್ತಕದಲ್ಲಿ 1924ರಲ್ಲಿ ಪ್ರಕಟವಾದುವು. ಈ ಲೇಖನಗಳೆಲ್ಲ ಸಾಹಿತ್ಯವಿಮರ್ಶೆಯ ಮೇಲೂ ಸಾಹಿತಿಗಳ ಮೇಲೂ ಪ್ರಭಾವ ಬೀರಿದುವು. ಅನಂತರವೂ ಎಲಿಯಟ್ ವಿಮರ್ಶಾತ್ಮಕ ಲೇಖನಗಳನ್ನು ಬರೆಯುತ್ತಲೇ ಇದ್ದ. 1932ರಲ್ಲಿ ಹೊರಬಿದ್ದ ಅವನ ಸೆಲೆಕ್ಟೆಡ್ ಎಸ್ಸೇಸ್ ಎಂಬ ಸಂಗ್ರಹದಲ್ಲಿ ಇವನ ಅತ್ಯುತ್ತಮ ಲೇಖನಗಳು ಕೆಲವಿದ್ದವು. ಟ್ರೆಡಿಷನ್ ಅಂಡ್ ದಿ ಇಂಡಿವಿಡ್ಯುಯಲ್ ಟ್ಯಾಲೆಂಟ್ (ಸಂಪ್ರದಾಯ ಮತ್ತು ವೈಯಕ್ತಿಕ ಪ್ರತಿಭೆ), ದಿ ಯೂಸ್ ಆಫ್ ಪೊಯಟ್ರಿ ಅಂಡ್ ದಿ ಯೂಸ್ ಆಫ್ ಕ್ರಿಟಿಸಿಸಮ್ (ಕಾವ್ಯದ ಮತ್ತು ವಿಮರ್ಶೆಯ ಉಪಯೋಗ) ಮೊದಲಾದ ಲೇಖನಗಳು ವಿಶೇಷವಾಗಿ ಹೆಸರಾಂತಿವೆ. ಎಲಿಯಟ್ ಕ್ಲಾಸಿಕಲ್ ಪಂಥದ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದವ. ರಮ್ಯಕಾವ್ಯದ ಅತಿರೇಕಗಳನ್ನು ಕಂಡರೆ ಇವನಿಗೆ ಆಗದು. ಅದೇ ರೀತಿ ಮಿಲ್ಟನ್ ಕವಿಯ ಕ್ಲಿಷ್ಟಪದ ಪ್ರಯೋಗವೂ ಇವನ ಆಕ್ಷೇಪಣೆಗೆ ಪಾತ್ರವಾಯಿತು. ಅಸಹಜವೂ ಅತಿಪಾಂಡಿತ್ಯಮಯವು ಆದ ಶಬ್ದಪ್ರಯೋಗವನ್ನು ಈತ ಖಂಡಿಸಿದ. ಕಾವ್ಯ ಸಮಕಾಲೀನ ಆಡುಮಾತಿಗೆ ಆದಷ್ಟು ಸಮೀಪವಾಗಿರಬೇಕೆನ್ನುವುದು ಈತನ ಮತ. ತನ್ನ ಕಾವ್ಯದಲ್ಲೂ ಇಂಥ ಭಾಷೆಯನ್ನು ಬಳಸಿ ಇವನು ಅದ್ಭುತ ಫಲಗಳನ್ನು ಸಾಧಿಸಿದ. ಸಾಹಿತ್ಯದಲ್ಲಿ ಭಾವ ಮತ್ತು ಆಲೋಚನೆಗಳ ಸಹಚರ್ಯ ಅಗತ್ಯವೆಂಬ ಇವನ ಅಭಿಪ್ರಾಯವೂ ಈ ಪ್ರಬಂಧಗಳಲ್ಲಿ ಪ್ರಖರವಾಗಿ ವ್ಯಕ್ತವಾಗಿದೆ. ಆಧುನಿಕ ಯುಗದ ಜೀವನ ಜಟಿಲವಾಗಿರುವುದರಿಂದ ಕವಿಯೂ ಅದಕ್ಕೆ ತಕ್ಕ ಮತ್ತು ಅದನ್ನು ಪ್ರತಿಬಿಂಬಿಸುವ ಪದಸಂಪತ್ತನ್ನು ರೂಪಿಸಿಕೊಳ್ಳಬೇಕೆಂಬುದು ಇವನ ಅಭಿಪ್ರಾಯವಾಗಿತ್ತು.

ಸಾರ್ವಜನಿಕ ಜೀವನ[ಬದಲಾಯಿಸಿ]

ಉತ್ತಮ ಸಾಹಿತ್ಯಮೌಲ್ಯಗಳ ಪ್ರಸಾರದಲ್ಲಿ ಆಸಕ್ತನಾಗಿದ್ದಂತೆಯೇ ಎಲಿಯಟ್ ಸಾರ್ವಜನಿಕ ಸಂಸ್ಕೃತಿಯ ಉದ್ಧಾರ ಕಾರ್ಯದಲ್ಲೂ ಶ್ರದ್ಧೆಹೊಂದಿದ್ದ. ಈತ ಬ್ರಿಟಿಷ್ ಪ್ರಜೆಯಾಗಿ ಚರ್ಚ್ ಆಫ್ ಇಂಗ್ಲೆಂಡಿನ ಸದಸ್ಯನಾದ ಮೇಲೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳಲ್ಲೂ ಆಸಕ್ತನಾದ. ಈ ಕ್ಷೇತ್ರಗಳಲ್ಲಿ ಇವನ ಆಭಿಪ್ರಾಯಗಳು ಕ್ರೈಟೀರಿಯನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದುವು. ಆಫ್ಟರ್ ಸ್ಟ್ರೇಂಜ್ ಗಾಡ್ಸ್‌ (ವಿಚಿತ್ರ ದೇವರುಗಳ ಅನುಸರಣೆ, 1934), ದಿ ಐಡಿಯ ಆಫ್ ಎ ಕ್ರಿಶ್ಚಿಯನ್ ಸೊಸೈಟಿ (ಕ್ರೈಸ್ತ ಸಮಾಜದ ಆದರ್ಶಕಲ್ಪನೆ, 1939) ಎಂಬ ಪ್ರಬಂಧಗಳು ಪ್ರಸಿದ್ಧವಾಗಿವೆ. ಇವುಗಳಲೆಲ್ಲ ಎಲಿಯಟ್ ತನ್ನ ಕಾಲದಲ್ಲಿ ಜನಪ್ರಿಯವಾಗಿದ್ದ ವಿಚಾರಸರಣಿಗೆ ವಿರುದ್ಧ ವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿ ಜನರಲ್ಲಿ ಹಿಂದಿರುತ್ತಿದ್ದಷ್ಟು ಮಟ್ಟದ ಸಂಸ್ಕೃತಿ ಮತ್ತು ಸಂವೇದನಶಕ್ತಿ ಇಲ್ಲವೆಂದೂ ಅವುಗಳ ಪುನರುದ್ಧಾರ ಅಗತ್ಯವೆಂದೂ ವಾದಿಸಿದ. ಪರಿಣಾಮವಾಗಿ ಇವನು ಪ್ರಗತಿ ವಿರೋಧಿಯೆಂಬ ಆಪಾದನೆಗೂ ಗುರಿಯಾದ. ಆದರೆ ಇವನು ವೇಸ್ಟ್‌ ಲ್ಯಾಂಡ್ ಮೊದಲಾದ ಕವಿತೆಗಳಲ್ಲಿ ವ್ಯಕ್ತಪಡಿಸಿದ ಭಾವಗಳಿಗೂ ಈ ಪ್ರಬಂಧಗಳಲ್ಲಿ ಪ್ರತಿವಾದಿಸಿರುವ ಅಭಿಪ್ರಾಯಗಳಿಗೂ ಸಾದೃಶ್ಯವಿರುವುದನ್ನು ಮರೆಯುವಂತಿಲ್ಲ.

ಗೌರವಗಳು[ಬದಲಾಯಿಸಿ]

Blue plaque, 3 Kensington Court Gardens, Kensington, London, home from 1957 until his death in 1965

ಸಾಹಿತ್ಯಕ್ಕೆಂದು ಎಲಿಯಟ್ನಿಗೆ ನೊಬೆಲ್ ಪ್ರಶಸ್ತಿ ಕೊಡಲಾಯಿತು (1948). ಅದೇ ವರ್ಷ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯೂ ದೊರೆಯಿತು. ಹಾರ್ವರ್ಡ್, ಯೇಲ್, ಪ್ರಿನ್ಸ್‌ಟನ್, ಕೇಂಬ್ರಿಜ್, ಎಡಿನ್ಬರೊ, ಬ್ರಿಸ್ಟಲ್, ಲೀಡ್ಸ್‌ ಮೊದಲಾದ ವಿಶ್ವವಿದ್ಯಾನಿಲಯಗಳು ಇವನಿಗೆ ಡಾಕ್ಟೂರಲ್ ಪದವಿಯಿತ್ತು ಗೌರವಿಸಿದುವು

ಎಲಿಯಟ್ ನ ಪ್ರಮುಖ ಹಂತಗಳು[ಬದಲಾಯಿಸಿ]

೧. ೧೯೦೯-೧೯೧೧ರಲ್ಲಿ ದ ಲವ್ ಸಾಂಗ್ ಆಫ್ ಜೆ. ಆಲ್ ಫ್ರೆಡ್ ಫ್ರುಫ್ರಾಕ್ ೨.೧೯೩೮ರಲ್ಲಿ ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ ೩.೧೯೪೮ರಲ್ಲಿ ನೊಬೆಲ್ ಪ್ರಶಸ್ತಿ ಮತ್ತು ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ೪.೧೯೬೫ರಲ್ಲಿ ಜನವರಿ ೪ರಂದು ಲಂಡನ್ನಿನಲ್ಲಿ ನಿಧನ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Works[ಬದಲಾಯಿಸಿ]

Web sites[ಬದಲಾಯಿಸಿ]

Archives[ಬದಲಾಯಿಸಿ]

Miscellaneous[ಬದಲಾಯಿಸಿ]

  • Links to audio recordings of Eliot reading his work Archived 2015-02-23 ವೇಬ್ಯಾಕ್ ಮೆಷಿನ್ ನಲ್ಲಿ.
  • An interview with Eliot: Donald Hall (Spring–Summer 1959). "T. S. Eliot, The Art of Poetry No. 1". Paris Review.
  • Yale College Lecture on T.S. Eliot Archived 2008-09-22 ವೇಬ್ಯಾಕ್ ಮೆಷಿನ್ ನಲ್ಲಿ. audio, video and full transcripts from Open Yale Courses
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: