ಜಿಂಜೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜಿಂಜೀ - ತಮಿಳು ನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಸ್ಥಳ. ರಾಜಗಿರಿ, ಕೃಷ್ಣಗಿರಿ ಮತ್ತು ಚಂದ್ರಾಯ ದುರ್ಗಗಳನ್ನು ಒಳಗೊಂಡಂತೆ ಒಂದು ಭದ್ರವಾದ ಕೋಟೆಯಿದೆ. ಈ ಕೋಟೆಯ ಒಳಗೆ ಎರಡು ಸುಂದರ ದೇವಾಲಯಗಳು, ಕಲ್ಯಾಣಮಹಲ್, ಗರಡಿಮನೆ, ಕಣಜಗಳು ಇವೆ.

ಜಿಂಜೀ ಕೋಟೆ

ಇತಿಹಾಸ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಇದು ಒಂದು ಸುಭದ್ರವಾದ ಕೋಟೆಯಾಗಿತ್ತು. 1638ರಲ್ಲಿ ಬಿಜಾಪುರದ ಸೇನಾನಿ ಬಂದಾ ಉಲ್ಲಾಖಾನ್ ಗೋಲ್ಕೊಂಡದ ಸೇನೆಯ ಸಹಾಯದಿಂದ ಇಲ್ಲಿಯ ಕೋಟೆಯನ್ನು ವಶಪಡಿಸಿಕೊಂಡ. ಶಿವಾಜಿಯ ತಂದೆ ಷಾಜಿ ಬಿಜಾಪುರದ ಸೇನೆಯಲ್ಲಿ ಮುಖಂಡನಾಗಿದ್ದು ಈ ಕೋಟೆಯನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ನಡೆದ ಕಾಳಗದಲ್ಲಿ ಭಾಗವಹಿಸಿದ್ದ. 1677ರಲ್ಲಿ ಜಿಂಜೀಯನ್ನು ಶಿವಾಜಿ ಉಪಾಯವಾಗಿ ತನ್ನ ವಶಮಾಡಿ ಕೊಂಡ. ಅಲ್ಲಿಂದೀಚೆಗೆ ಸತತವಾಗಿ 22 ವರ್ಷಗಳ ಕಾಲ ಇದು ಮರಾಠರ ಆಡಳಿತಕ್ಕೆ ಒಳಪಟ್ಟಿತ್ತು. ಮರಾಠರ ರಾಜಧಾನಿ ರಾಯಗಢವನ್ನು ಮೊಗಲರು ವಶಪಡಿಸಿಕೊಂಡಿದ್ದಾಗ ಶಿವಾಜಿಯ ರಾಜಾರಾಮ ಈ ಕೋಟೆಯಲ್ಲಿ ಸ್ವಲ್ಪ ಕಾಲ ಇದ್ದ. ಇದು ಪೂರ್ವದಲ್ಲಿ ಮರಾಠರ ಕೇಂದ್ರವಾಗಿತ್ತು. ಮರಾಠರ ಶಕ್ತಿಯನ್ನು ಮುರಿಯುವ ಉದ್ದೇಶದಿಂದ 1690ರಲ್ಲಿ ಔರಂಗಜೇಬನ ಸೇನೆ ಜುಲ್ ಫಿಕರ್‍ಖಾನನ ಮುಖಂಡತ್ವದಲ್ಲಿ ಜಿಂಜೀಗೆ ಮುತ್ತಿಗೆ ಹಾಕಿತು. ಎಂಟು ವರ್ಷಗಳ ಕಾಲ ಈ ಮುತ್ತಿಗೆ ನಡೆಯಿತು. 1698ರಲ್ಲಿ ಕೋಟೆ ಮೊಗಲರ ವಶವಾಯಿತು. ಮುಂದೆ ಆರ್ಕಾಟ್ ಪ್ರಾಂತ್ಯದಲ್ಲಿ ತಂಗಿದ್ದ ಮೊಗಲ್ ಸೇನೆಗೆ ಜಿಂಜೀ ಕೇಂದ್ರವಾಯಿತು. 1750ರಲ್ಲಿ ಬುಸ್ಸಿ ಎಂಬ ಸೇನಾನಿಯ ನೇತೃತ್ವದಲ್ಲಿ ಫ್ರೆಂಚರು ಇದನ್ನು ವಶಪಡಿಸಿಕೊಂಡರು. ಹನ್ನೊಂದು ವರ್ಷಗಳ ಕಾಲ ಇದು ಅವರ ಕೈಯಲ್ಲಿತ್ತು. 1761ರಲ್ಲಿ ಐದು ವಾರಗಳ ಸತತ ಮುತ್ತಿಗೆಯಿಂದ ಜಿಂಜೀ ಬ್ರಿಟಿಷ್ ಸೈನ್ಯದ ಕ್ಯಾಪ್ಟನ್ ಸ್ಮಿತ್ತನ ವಶವಾಯಿತು.

ಚಿತ್ರಸಂಪುಟ[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಿಂಜೀ&oldid=1073617" ಇಂದ ಪಡೆಯಲ್ಪಟ್ಟಿದೆ