ವಿಷಯಕ್ಕೆ ಹೋಗು

ಗೋಲ್ಕೊಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಲ್ಕೊಂಡ

ಹೈದರಾಬಾದ್ ನಗರದ ಪಶ್ಚಿಮಕ್ಕೆ 11 ಕಿಮೀ ದೂರದಲ್ಲಿರುವ ಐತಿಹಾಸಿಕ ಸ್ಥಳ. 1518-1687ರ ವರೆಗೆ ಇದು ಕುತುಬ್ ಶಾಹಿ ಸುಲ್ತಾನರು ಕಟ್ಟಿ ಆಳಿದ ಗೋಲ್ಕೊಂಡ ರಾಜ್ಯದ ರಾಜಧಾನಿಯಾಗಿತ್ತು.

ಇತಿಹಾಸ

[ಬದಲಾಯಿಸಿ]

ಗೋದಾವರಿ ನದಿಯ ಕೆಳದಂಡೆಯ ಪ್ರದೇಶದಿಂದ ಬಂಗಾಳಕೊಲ್ಲಿಯವರೆಗೆ ವ್ಯಾಪಿಸಿದ್ದ ರಾಜ್ಯಕ್ಕೆ ಗೋಲ್ಕೊಂಡವೆಂಬ ಹೆಸರಿತ್ತು. ಕಾಕತೀಯರ ರಾಜ್ಯದ ಭಾಗವಾಗಿದ್ದ ಈ ಪ್ರದೇಶವನ್ನು ಅಲ್ಲಾವುದ್ದೀನ್ ಖಿಲ್ಜಿ 1310ರಲ್ಲಿ ಆಕ್ರಮಿಸಿಕೊಂಡ. ಇದು 1424-25 ರವರೆಗೆ ಸ್ವತಂತ್ರ ಅಸ್ತಿತ್ವ ಹೊಂದಿದ್ದಾಗ ಬಹಮನಿಗಳ ವಶವಾಯಿತು. ಬಹಮನಿ ರಾಜ್ಯದ ಪೂರ್ವ ಪ್ರಾಂತಕ್ಕೆ ವಾರಂಗಲ್ ರಾಜಧಾನಿಯಾಗಿತ್ತು. ಈ ಪ್ರಾಂತ್ಯದ ಅಧಿಕಾರಿಯಾಗಿದ್ದ ಕುಲಿ ಕುತುಬ್ ಷಾ 1512ರಲ್ಲಿ ಸ್ವತಂತ್ರ ಸುಲ್ತಾನನಾದ. ಗೋಲ್ಕೊಂಡ ಅವನ ರಾಜಧಾನಿಯಾಯಿತು. 1687ರಲ್ಲಿ ಈ ರಾಜ್ಯವನ್ನು ಔರಂಗಜ಼ೇಬ್ ಗೆದ್ದುಕೊಂಡ. ಗೋಲ್ಕೊಂಡ ಮೊಗಲ್ ಚಕ್ರಾಧಿಪತ್ಯದ ಭಾಗವಾಯಿತು. ಗೋಲ್ಕೊಂಡದ ಬಳಿ ದೊರಕುತ್ತಿದ್ದ ವಜ್ರಗಳಿಂದಾಗಿ ಅದು ಇತಿಹಾಸದಲ್ಲಿ ಪ್ರಸಿದ್ಧವಾಗಿದೆ.

ಗೋಲ್ಕೊಂಡ ಕೋಟೆ

[ಬದಲಾಯಿಸಿ]
Fort overlooking the city of Hyderabad
Mosque of Ibrahim
The Baradari at the top of the citadel
View from the Baradari
Architecture inside golkonda fort
ಗೋಲ್ಕೊಂದ ಕೋಟೆಯ ಕಾಲುದಾರಿಗಳು
The Baradari

ಗೋಲ್ಕೊಂಡ ಕೋಟೆ ದಕ್ಷಿಣ ಭಾರತದ ಸುಪ್ರಸಿದ್ಧವಾದ ಹಾಗೂ ಬೃಹತ್ತಾದ ಕೋಟೆ ಗಳಲ್ಲೊಂದು. 400 ಅಡಿ ಎತ್ತರದ ಗ್ರಾನೈಟ್ ಗುಡ್ಡದ ಮೇಲೆ ಕಟ್ಟಲಾದ, ಸು. 7 ಕಿಮೀ ಸುತ್ತಳತೆಯುಳ್ಳ ಮೂರು ಸುತ್ತಿನ ಈ ಅಭೇದ್ಯ ಕೋಟೆ 8 ದ್ವಾರಗಳಿಂದಲೂ 87 ಕೊತ್ತಳಗಳಿಂದಲೂ ಕೂಡಿದ ಅದ್ಭುತ ನಿರ್ಮಿತಿಯಾಗಿದೆ. ಹೊರಸುತ್ತಿನ ಕೋಟೆಗೋಡೆಯು ಪಟ್ಟಣವನ್ನು ಆವರಿಸಿದ್ದು ಈ ಗೋಡೆಯ ಸುತ್ತಲೂ ಕಂದಕವಿದೆ. ಆಳವಾದ ಕಂದಕದಂಚಿನಲ್ಲಿರುವ ವೃತ್ತ-ಅರೆವೃತ್ತಾಕಾರದ ಎಲ್ಲ ಕೊತ್ತಳಗಳ ಮೇಲೆ ಫಿರಂಗಿಗಳನ್ನು ನೆಲೆಗೊಳಿಸಿದ್ದು, ಅದು ಶತ್ರುಧಾಳಿಗೆ ಕಂಟಕಪ್ರಾಯವಾಗಿತ್ತು. ಮಧ್ಯದ ಸುತ್ತಿನಲ್ಲಿ ಅವಳಿಗೋಡೆಗಳಿದ್ದು ಇವು ಗುಡ್ಡದ ಬುಡಭಾಗವನ್ನು ಸುತ್ತುವರೆದಿವೆ. ಒಳಗಿರುವ ರಾಜ ನಿವಾಸಕ್ಕೆ ಈ ಗೋಡೆಗಳು ಪ್ರಬಲ ರಕ್ಷಣೆಯನ್ನು ಒದಗಿಸಿದ್ದವು. ಒಳಸುತ್ತಿನ ಕೋಟೆಯನ್ನು ಗುಡ್ಡದ ಮೇಲ್ಭಾಗದಲ್ಲಿ, ನೈಸರ್ಗಿಕ ಬಂಡೆಗಳನ್ನು ಬಳಸಿಕೊಂಡು ಅವುಗಳ ರಚನಾಕಾರಗಳಿಗೆ ಅನುಗುಣವಾಗಿ, ಅಲ್ಲಲ್ಲಿ ಕಲ್ಗೋಡೆ ಗಳ ಆಸರೆಯೊಂದಿಗೆ ಕಟ್ಟಲಾಗಿದೆ. 1724ರಲ್ಲಿ ಪಟ್ಟಣದ ವಾಯವ್ಯ ಭಾಗದಲ್ಲಿ ಹೊರಗೋಡೆಯನ್ನು ವಿಸ್ತರಿಸಿ ನಯಾ ಕಿಲಾವನ್ನು ರಚಿಸ ಲಾಯಿತು. ಗುಡ್ಡದ ಮಧ್ಯಭಾಗದಲ್ಲಿ ಕೆರೆಗಳು, ಮದ್ದಿನ ಮನೆಗಳು, ರಾಜಗೃಹ, ಸಭಾಮಂದಿರ, ಲಾಯ, ಮಸೀದಿ, ಉದ್ಯಾನವನ ಹಾಗೂ ಉಗ್ರಾಣಗಳಿವೆ. ಬುಡಭಾಗದಲ್ಲಿ ರಾಣಿ ನಿವಾಸಗಳೂ ಸೇವಕರ ವಾಸಗೃಹಗಳೂ ಇವೆ. ಕೋಟೆಗೆ ಸ್ವಲ್ಪ ದೂರದಲ್ಲಿ ಕುತುಬ್ಶಾಹಿ ದೊರೆಗಳ ಗೋರಿಗಳಿವೆ. ಫತೇಹ್, ಬಹಮನಿ, ಮೆಕ್ಕ, ಪಟನ್ಚೆರು, ಬಂಜಾರ, ಜಮಾಲಿ, ನಯಾಕಿಲಾ ಮತ್ತು ಮೋತಿ ಇವು ಎಂಟು ದ್ವಾರಗಳು. ಈ ದ್ವಾರಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇಡಲಾಗಿದ್ದು ಒಂದು ದ್ವಾರದಲ್ಲಿ ನಿಂತು ಚಪ್ಪಾಳೆ ತಟ್ಟಿದರೆ ಅದರ ಶಬ್ದ ಪ್ರತಿಫಲನಗೊಂಡು ಮತ್ತೊಂದು ದ್ವಾರದ ವರೆಗೆ ತಲುಪುವುದು. ಹೀಗೆ ಸೂಚನೆಗಳನ್ನು ಹೊರದ್ವಾರದಿಂದ ಗುಡ್ಡದ ತುತ್ತತುದಿಯ ವರೆಗೆ ಇತರರಿಗೆ ಕೇಳದ ರೀತಿಯಲ್ಲಿ ವರ್ಗಾಯಿಸುವಂತೆ ಈ ಕೋಟೆಯನ್ನು ನಿರ್ಮಿಸಿರುವುದು ಆ ಕಾಲದ ತಂತ್ರಜ್ಞರ ವಾಸ್ತುಕೌಶಲ್ಯಕ್ಕೆ ಅನುಪಮ ಉದಾಹರಣೆಯಾಗಿದೆ. ಬ್ರಿಟಿಷ್ ಅಧಿಕಾರಿ ಸರ್ ಥಾಮಸ್ ಮನ್ರೋ ಈ ಕೋಟೆಯನ್ನು ವಜ್ರದ ಗಣಿ, ರತ್ನಗರ್ಭವೆಂದು ಕರೆದಿದ್ದಾನೆ.

ೋಟೆಯ ಅವಶೇಷಗಳು್


ಗೋಲ್ಕೊಂಡ ಕೋಟೆ ಈಗ ಜನಪ್ರಿಯ ಪ್ರವಾಸಿ ತಾಣವಾಗಿದ್ದು ಇತ್ತೀಚೆಗೆ ಈ ಕೋಟೆಯಲ್ಲಿ ಬೆಳಕು ಹಾಗೂ ಶ್ರಾವ್ಯ ಪ್ರದರ್ಶನವನ್ನು (ಲೈಟ್ ಅಂಡ್ ಸೌಂಡ್) ಪ್ರವಾಸಿಗರಿಗಾಗಿ ಏರ್ಪಡಿಸಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: