ಜಾರ್ಜ್ ಗೇಮೋವ್
ಜಾರ್ಜ್ ಗೇಮೋವ್ | |
---|---|
ಜನನ | Georgiy Antonovich Gamov ೪ ಮಾರ್ಚ್ ೧೯೦೪ (O.S. February 20, 1904) ಒಡೆಸ್ಸಾ, ರಷಿಯನ್ ಸಾಮ್ರಾಜ್ಯ |
ಮರಣ | August 19, 1968 ಬೌಲ್ಡರ್, ಕೊಲೆರಾಡೋ,ಅಮೇರಿಕ ಸಂಯುಕ್ತ ಸಂಸ್ಥಾನ | (aged 64)
ಪೌರತ್ವ | ಸೋವಿಯತ್ ಯೂನಿಯನ್, ಅಮೇರಿಕ ಸಂಯುಕ್ತ ಸಂಸ್ಥಾನ |
ಕಾರ್ಯಕ್ಷೇತ್ರ | ಭೌತವಿಜ್ಞಾನಿ, ವಿಜ್ಞಾನ ಬರಹಗಾರ |
ಸಂಸ್ಥೆಗಳು | University of Göttingen Niels Bohr Institute Cavendish Laboratory George Washington University University of California, Berkeley University of Colorado Boulder |
ಡಾಕ್ಟರೇಟ್ ಸಲಹೆಗಾರರು | Alexander Friedmann |
ಡಾಕ್ಟರೇಟ್ ವಿದ್ಯಾರ್ಥಿಗಳು | Ralph Asher Alpher Vera Rubin |
ಪ್ರಸಿದ್ಧಿಗೆ ಕಾರಣ | Gamow factor Gamow–Teller transition Alpher–Bethe–Gamow paper Alpha decay Liquid drop model quantum tunnelling Big Bang One Two Three ... Infinity |
ಗಮನಾರ್ಹ ಪ್ರಶಸ್ತಿಗಳು | ಕಳಿಂಗ ಪ್ರಶಸ್ತಿ (೧೯೫೬) |
ಜಾರ್ಜ್ ಗೇಮೋವ್(ಮಾರ್ಚ್ 4,1904 – ಆಗಸ್ಟ್ 19, 1968),ರಷ್ಯದಲ್ಲಿ ಹುಟ್ಟಿ ಬೆಳೆದು ಅನಂತರದ ವರ್ಷಗಳಲ್ಲಿ ಅಮೆರಿಕದಲ್ಲಿ ನೆಲೆಸಿದ ಭೌತವಿಜ್ಞಾನಿ. ಜನಪ್ರಿಯ ವಿಜ್ಞಾನಲೇಖಕನಾಗಿ ಅಸಾಧಾರಣ ಖ್ಯಾತಿಯನ್ನು ಗಳಿಸಿದ್ದೇ ಕಾರಣವಿರಬಹುದು. ಇವನ ಪುಸ್ತಕಗಳನ್ನು ಓದಿ ಮೆಚ್ಚಿಕೊಂಡಿರುವ ಸಾಮಾನ್ಯ ಓದುಗರನೇಕರಿಗೆ ಗೇಮೋವ್ ವೈಜ್ಞಾನಿಕ ವೃತ್ತಗಳಲ್ಲಿಯೂ ಮಾನ್ಯತೆ ಪಡೆದಿದ್ದ ದೊಡ್ಡ ವಿಜ್ಞಾನಿಯಾಗಿದ್ದ ಎಂಬ ವಿಷಯವೇ ಗೊತ್ತಿಲ್ಲ. ಈತ ಭೌತಶಾಸ್ತ್ರದಲ್ಲಿ ಮತ್ತು ಖಗೋಳ ವಿಜ್ಞಾನದಲ್ಲಿ ಗಣನೀಯ ಸಂಶೋಧನೆ ನಡೆಸಿರುವನಲ್ಲದೆ ಅಣುಜೀವ ವಿಜ್ಞಾನದಲ್ಲಿಯೂ ಆಸಕ್ತಿ ತಳೆದು ಆ ಕ್ಷೇತ್ರಕ್ಕೆ ಕೂಡ ಗಮನಾರ್ಹ ಕೊಡುಗೆ ನೀಡಿದ್ದಾನೆ.
ಬಾಲ್ಯ ಮತ್ತು ಜೀವನ
[ಬದಲಾಯಿಸಿ]- ಗೇಮೋವ್ ಯುಕ್ರೇನಿನಲ್ಲಿ ಕಪ್ಪು ಸಮುದ್ರದ ತೀರದಲ್ಲಿರುವ ಒಡೆಸ್ಸಾ ನಗರದಲ್ಲಿ 1904 ರ ಮಾರ್ಚ್ 4 ರಂದು ಜನಿಸಿದ. ಪ್ರಾಂತೀಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಲೆನಿನ್‍ಗ್ರಾಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಪದವೀಧರನಾದ. ಪದವಿ ಪಡೆದ ತರುಣ ದಲ್ಲಿ ಒಂದು ಸಲ ಜರ್ಮನಿಯ ಗಾಟಿಂಗೆನ್ನಿನಲ್ಲಿ ಒಂದು ಬೇಸಿಗೆ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದ.
- ಪರಮಾಣು ರಚನೆಗೆ ಕ್ವಾಂಟಮ್ ಸಿದ್ಧಾಂತವನ್ನು ಅನ್ವಯಿಸುವುದರಲ್ಲಿ ಮ್ಯಾಕ್ಸ್ ಬಾರ್ನ್ ತಂಡದವರು ಅಲ್ಲಿ ಸಾಧಿಸಿದ್ದ ಪ್ರಗತಿಯಿಂದ ಪ್ರಭಾವಿತನಾಗಿ ಪರಮಾಣು ಬೀಜದ ಅಧ್ಯಯನಕ್ಕೂ ಕ್ವಾಂಟಮ್ ಸಿದ್ಧಾಂತವನ್ನು ಅನ್ವಯಿಸುವ ಪ್ರಯತ್ನ ನಡೆಸಿ, ನೈಸರ್ಗಿಕ ವಿಕಿರಣ ಪಟುತ್ವವನ್ನೂ (ನ್ಯಾಚುರಲ್ ರೇಡಿಯೊ ಆ್ಯಕ್ಟಿವಿಟಿ) ಲಾರ್ಡ್ ರುದರ್ಫರ್ಡ್ ಸಾಧಿಸಿದ್ದ ಧಾತುಪರಿವರ್ತನೆಗಳನ್ನೂ (ಟ್ರಾನ್ಸ್‌ಮ್ಯುಟೇಷನ್ ಆಫ್ ಎಲಿಮೆಂಟ್ಸ್) ಸಮಂಜಸವಾಗಿ ವಿವರಿಸುವುದರಲ್ಲಿ ಜಯಶೀಲನಾದ.
- ಈ ಸಂಶೋಧನೆಗಳ ಆಧಾರದ ಮೇಲೆ ಈತ 1928 ರಲ್ಲಿ ಲೆನಿನ್‍ಗ್ರಾಡ್ ವಿಶ್ವವಿದ್ಯಾಲಯದ ಪಿ.ಎಚ್ ಡಿ. ಪದವಿಯನ್ನು ಪಡೆದ. 1928-29ರಲ್ಲಿ ಕೋಪನ್‍ಹೇಗನ್ ಇನ್ಸ್‌ಟಿಟ್ಯೂಟ್ ಆಫ್ ಥಿಯೊರಿಟಿಕಲ್ ಫಿಸಿಕ್ಸ್‌ನಲ್ಲಿ [[ ನೀಲ್ಸ್ ಬೋರನ ಜೊತೆಗೆ ಅದೇ ಸಂಶೋಧನೆಗಳನ್ನು ಮುಂದುವರಿಸಿದ. ಅದೇ ಸಮಯದಲ್ಲಿ, ಸೂರ್ಯನ ಅಂತರಾಳದಲ್ಲಿ ನಡೆಯುವ ಉಷ್ಣಬೈಜಿಕ ಕ್ರಿಯೆಗಳನ್ನು (ಥರ್ಮೊನ್ಯೂಕ್ಲಿಯರ್ ರಿಯಾಕ್ಷನ್ಸ್) ಕುರಿತ ಸಂಶೋಧನೆಯಲ್ಲಿ ಆಟ್ಕಿನ್ಸನ್ ಮತ್ತು ಹೌಟರ್ಮಾನ್ಸ್‌ರವರೊಂದಿಗೆ ಸಹಕರಿಸಿದ.
- ಅಲ್ಲಿಂದ ಒಂದು ವರ್ಷ ಕೇಂಬ್ರಿಜಿನಲ್ಲಿ ಲಾರ್ಡ್ ರುದರ್ಫರ್ಡ್‍ನ ಒಡನೆಯೂ ಪುನಃ ಒಂದು ವರ್ಷ ಕೋಪನ್‍ಹೇಗನ್‍ನಲ್ಲಿ ನೀಲ್ಸ್ ಬೋರ್‍ನ ಒಡನೆಯೂ ಕಳೆದು 1931 ರಲ್ಲಿ ಲೆನಿನ್‍ಗ್ರಾಡ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದ. 1933ರಲ್ಲಿ ಬ್ರಸೆಲ್ಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಾಲ್ವೆ ಕಾಂಗ್ರೆಸಿನಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿದ್ದಾಗ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದವರು ಗೇಮೋವ್ ನನ್ನು ಉಪನ್ಯಾಸಕ್ಕಾಗಿ ತಮ್ಮಲ್ಲಿಗೆ ಆಹ್ವಾನಿಸಿದರು.
- ಆ ಪ್ರಕಾರ ಅಮೆರಿಕಕ್ಕೆ ತೆರಳಿದ ಗೇಮೋವ್ ಪುನಃ ತಾಯ್ನಾಡಿಗೆ ಹಿಂತಿರುಗಲೇ ಇಲ್ಲ: ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕತ್ವವನ್ನು ಸ್ವೀಕರಿಸಿ ಅಮೆರಿಕದಲ್ಲಿಯೇ ನೆಲೆಸಿದ. 1956ರ ವರೆಗೂ ಅದೇ ವಿಶ್ವವಿದ್ಯಾಲಯದಲ್ಲಿದ್ದು ಅನಂತರ ಕಾಲೊರಾಡೋ ವಿಶ್ವ ವಿದ್ಯಾಲಯಕ್ಕೆ ತೆರಳಿದ.
ಸಂಶೋಧನೆಗಳು
[ಬದಲಾಯಿಸಿ]- ಪರಮಾಣು ಬೀಜದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ನಡುವೆ ಸ್ಥಿರ ವಿದ್ಯುದಾಕರ್ಷಣೆ (ಎಲೆಕ್ಟ್ರೊಸ್ಟ್ಯಾಟಿಕ್ ಅಟ್ರ್ಯಾಕ್ಷನ್) ಇಲ್ಲವಾದರೂ ಅವು ಒಂದಕ್ಕೊಂದು ಬಿಗಿಯಾಗಿ ಅಂಟಿಕೊಂಡಿರುವುದಕ್ಕೆ ಕಾರಣವಾದ ಯಾವುದೋ ಪ್ರಬಲವಾದ ಬಲಗಳಿವೆಯಷ್ಟೆ? ಈ ಬಲಗಳಿಗೂ ದ್ರವ ದಲ್ಲಿ ಅಣುಗಳು ಒಂದಕ್ಕೊಂದು ಅಂಟಿಕೊಂಡಿ ರುವುದಕ್ಕೆ ಕಾರಣವಾದ ಸಾಂಸಕ್ತಿಕ ಬಲಗಳಿಗೂ (ಕೊಹಿಸಿವ್ ಫೋರ್ಸಸ್) ಸಾಮ್ಯವಿರಬಹುದೆಂದು 1930 ರಲ್ಲಿ ಗೇಮೋವ್ ಸೂಚಿಸಿದ. ಅದರ ಪ್ರಕಾರ ಪರಮಾಣು ಬೀಜವನ್ನು ದ್ರವದ ಒಂದು ಹನಿ ಎಂದು ಚಿತ್ರಿಸಿಕೊಳ್ಳಬಹುದು. *ಗೇಮೋವ್ ಮುಂದಿಟ್ಟ ಈ ಭಾವನೆಗಳಿಂದ ಪರಮಾಣು ಬೀಜದ ವರ್ತನೆಯನ್ನು ಅರ್ಥಮಾಡಿಕೊಳ್ಳಲು, ಅದರಲ್ಲೂ ಬೀಜ ವಿದಳನವನ್ನು (ನ್ಯೂಕ್ಲಿಯರ್ ಫಿಷನ್) ವಿವರಿಸಲು ಬಹಳ ಅನುಕೂಲವಾಯಿತು. ಈ ಸಿದ್ಧಾಂತವನ್ನು ಬೋರ್ನ ಸಹಕಾರದಿಂದ ಈತ ಮಂಡಿಸಿದ್ದು ಕೋಪನ್ ಹೇಗನ್‍ನಲ್ಲಿದ್ದಾಗ. ಅದೇ ಸಮಯದಲ್ಲಿ ಗೇಮೋವ್ ಆಟ್ಕಿನ್ಸನ್ ಮತ್ತು ಹೌಟರ್ಮಾನ್ಸ್‌ರವರೊಂದಿಗೆ ಸಂಶೋಧನೆ ನಡೆಸಿ ನಕ್ಷತ್ರಗಳ ಒಳಗಡೆ ಸಂಭವಿಸುವ ಉಷ್ಣಬೈಜಿಕ ಕ್ರಿಯೆಗಳು ನಡೆಯುವ ದರವನ್ನು ಲೆಕ್ಕಹಾಕಲು ತನ್ನ ದ್ರವದ ಹನಿ ಮಾದರಿಯನ್ನು ಅನ್ವಯಿಸಿದ. ಇವನು ರೂಪಿ ಸಿದ ಸೂತ್ರವನ್ನು ಹೈಡ್ರೊಜನ್ ಬಾಂಬ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.
- ವಾಷಿಂಗ್ಟನ್ನಿನಲ್ಲಿದ್ದಾಗ ಗೇಮೋವ್ ಕೆಂಪು ದೈತ್ಯ ನಕ್ಷತ್ರಗಳ (ರೆಡ್ ಜಯಂಟ್ ಸ್ಟಾರ್ಸ್) ಒಳರಚನೆಯ ಬಗ್ಗೆ ಸಂಶೋಧನೆಯನ್ನು ಕೈಗೊಂಡ. ಈ ನಕ್ಷತ್ರಗಳ ಪ್ರಮುಖ ಇಂಧನವೆಂದು ನಂಬಲಾಗಿರುವ ಹೈಡ್ರೊಜನ್ ಮುಗಿಯುತ್ತ ಬಂದಂತೆ ನಕ್ಷತ್ರದ ಉಷ್ಣತೆ ಹೆಚ್ಚಾಗುವುದೆಂದು ಅವನು ತೋರಿಸಿದ. ನಕ್ಷತ್ರದ ವಯಸ್ಸೂ ಹೆಚ್ಚಾಗುತ್ತ ಹೋದಂತೆ ಅದು ತಣ್ಣಗಾಗುವುದೆಂದು ಅದುವರೆಗೆ ಭಾವಿಸಲಾಗಿದ್ದುದು ತಪ್ಪೆಂಬುದು ಇದರಿಂದ ವ್ಯಕ್ತವಾಯಿತು.
- ನಕ್ಷತ್ರದ ಉಷ್ಣತೆ ಹೀಗೆ ಅಧಿಕವಾಗುತ್ತ ಹೋಗಿ ಒಂದು ಹಂತದಲ್ಲಿ ನಕ್ಷತ್ರದೊಳಗಿನ ಬೈಜಿಕಕ್ರಿಯೆಗಳ ಫಲವಾಗಿ ಅಪಾರ ಸಂಖ್ಯೆಯ ನ್ಯೂಟ್ರಿನೊಗಳು ಉತ್ಪತ್ತಿಯಾಗುವುದೆಂದೂ ಅವು ನಕ್ಷತ್ರದ ದೇಹದ ಮೂಲಕ ಸರಾಗವಾಗಿ ಹಾದು ಹೊರಗೆ ಬಂದುಬಿಡುವುದರಿಂದ ನಕ್ಷತ್ರದ ಉಷ್ಣತೆ ಅಲ್ಲಿಂದ ಮುಂದೆ ವೇಗವಾಗಿ ಬಿದ್ದುಹೋಗುವುದೆಂದೂ ಅವನು ತೋರಿಸಿದ. ಗೇಮೋವ್ ಮತ್ತು ಷೋನ್ಬರ್ಗ್ ಜೊತೆಗೂಡಿ ರೂಪಿಸಿದ ಈ ಸಿದ್ಧಾಂತ ಉರ್ಕ ಪ್ರಕ್ರಿಯೆ (ಉರ್ಕ ಪ್ರೋಸೆಸ್) ಎಂದು ಪ್ರಸಿದ್ಧವಾಗಿದೆ.
- ವಿಶ್ವದ ಉಗಮದ ಬಗ್ಗೆ ಲೆಮೇತರ್ ಪ್ರತಿಪಾದಿಸಿರುವ ಮಹಾಸ್ಫೋಟ ಸಿದ್ಧಾಂತದ (ಬಿಗ್ ಬ್ಯಾಂಗ್ ಥಿಯರಿ) ಪ್ರಮುಖ ಬೆಂಬಲಿಗರಲ್ಲಿ ಗೇಮೋವ್ ಕೂಡ ಒಬ್ಬ. ಲೆಮೇತರನ ಕಲ್ಪನೆಯ ವಿಶ್ವಾಂಡ (ಕಾಸ್ಮಿಕ್ ಎಗ್) ಸ್ಫೋಟಗೊಂಡ ತರುವಾಯ ಅನತಿ ಕಾಲದಲ್ಲಿಯೇ ರಾಸಾಯನಿಕ ಧಾತುಗಳೆಲ್ಲವೂ ಹೇಗೆ ರೂಪುಗೊಳ್ಳುವುವೆಂಬ ಬಗ್ಗೆ ಗೇಮೋವ್ ತನ್ನದೇ ಆದ ಒಂದು ಸಿದ್ಧಾಂತವನ್ನು ಮಂಡಿಸಿದ್ದಾನೆ.
- ಮಹಾಸ್ಫೋಟ ಸಿದ್ಧಾಂತಕ್ಕೆ ವಿರುದ್ಧವಾದ ಸ್ಥಿಮಿತ ಸ್ಥಿತಿ ಸಿದ್ಧಾಂತ (ಸ್ಟೆಡಿ ಸ್ಟೇಟ್ ಥಿಯರಿ) ಅಥವಾ ಅವಿರತ ಸೃಷ್ಟಿ ಸಿದ್ಧಾಂತದ (ಕಂಟಿನ್ಯುಯಸ್ ಕ್ರಿಯೇಷನ್ ಥಿಯರಿ) ಪ್ರಮುಖ ಬೆಂಬಲಿಗನಾದ ಫ್ರೆಡ್ ಹಾಯ್ಲ್‌ನಿಗೂ ಮಿಗಿಲಾದ ಪರಿಣಾಮಕಾರೀ ಜನಪ್ರಿಯ ಲೇಖಕ ಗೇಮೋವ್. ತನ್ನ ಪುಸ್ತಕಗಳ ಮತ್ತು ಲೇಖನಗಳ ಮೂಲಕ ಗೇಮೋವ್ ಲೆಮೇತರ್ನ ಸಿದ್ಧಾಂತಕ್ಕೆ ಅಪಾರವಾದ ಪ್ರಚಾರ ನೀಡಿದ್ದಾನೆ.
ಜೀವ ವಿಜ್ಞಾನಿಯಾಗಿ
[ಬದಲಾಯಿಸಿ]1954 ರಲ್ಲಿ ಗೇಮೋವ್ ಜೀವವಿಜ್ಞಾನದಲ್ಲಿ ಆಸಕ್ತನಾಗಿ ಪ್ರೋಟೀನುಗಳ ಸಂಶ್ಲೇಷಣೆಗೆ ನ್ಯೂಕ್ಲೆಯಿಕ್ ಆಮ್ಲ ಒಂದು ವಿಧವಾದ ಸಂಕೇತ ಭಾಷೆಯಾಗಿ ವರ್ತಿಸುವುದೆಂಬ ಸೂಚನೆಯನ್ನು ಮುಂದಿಟ್ಟ. ಅಲ್ಲದೆ ಪ್ರತಿಯೊಂದು ಅಮೈನೋ ಆಮ್ಲಕ್ಕೂ ಒಂದೊಂದು ನ್ಯೂಕ್ಲಿಯೊಟೈಡ್ ತ್ರಿವಳಿ ಸಂಕೇತವಾಗಿರುವುದೆಂದು ಮೊಟ್ಟಮೊದಲು ಸೂಚಿಸಿದವನೂ ಈತನೇ. ಈ ಸಿದ್ಧಾಂತಕ್ಕೆ 1961 ರಿಂದ ಈಚೆಗೆ ಹೇರಳವಾದ ಪುರಾವೆ ದೊರೆತಿದೆ.
ವಿಜ್ಞಾನ ಲೇಖಕನಾಗಿ
[ಬದಲಾಯಿಸಿ]- ಗೇಮೋವ್ ಖ್ಯಾತ ಜನಪ್ರಿಯ ವಿಜ್ಞಾನ ಲೇಖಕ. ಈತ ಹುಟ್ಟಿದ್ದು ಬೆಳೆದದ್ದು ರಷ್ಯದಲ್ಲಿ; ವಿದ್ಯಾಭ್ಯಾಸ ಪಡೆದದ್ದು ರಷ್ಯನ್ ಭಾಷೆಯ ಮೂಲಕ. ಬಹುಶಃ ಈತನಿಗೆ 25 ವರ್ಷ ತುಂಬುವವರೆಗೂ ಇಂಗ್ಲಿಷ್ ಭಾಷೆಯೊಡನೆ ಹೆಚ್ಚಿನ ಸಂಪರ್ಕವಿರಲಿಲ್ಲ. ಆದರೂ ಇಂಗ್ಲಿಷ್ ಲೇಖನ ಕಲೆಯಲ್ಲಿ ಸಿದ್ಧಹಸ್ತನೆನಿಸಿಕೊಂಡ. ನಾಲ್ಕಾರು ಪ್ರೌಢವಿಜ್ಞಾನ ಗ್ರಂಥಗಳನ್ನಲ್ಲದೆ ಹತ್ತಿಪ್ಪತ್ತು ಜನಪ್ರಿಯ ವೈಜ್ಞಾನಿಕ ಪುಸ್ತಕಗಳನ್ನು ಬರೆದಿದ್ದಾನೆ.
- ಟಾಂಪ್ಕಿನ್ಸ್ ಇನ್ ವಂಡರ್ ಲ್ಯಾಂಡ್, ಟಾಂಪ್ಕಿನ್ಸ್ ಎಕ್ಸ್‌ಪ್ಲೋರ್ಸ್ ದಿ ಆಟಮ್ ಮುಂತಾದ ಈತನ ಟಾಂಪ್ಕಿನ್ಸ್ ಶ್ರೇಣಿಯ ಪುಸ್ತಕಗಳು ಮೊದಲು ಹೊರಬಂದಾಗ ಇಂಗ್ಲಿಷ್ ಓದುಗರ ಮೇಲೆ ಅವು ಬೀರಿದ ಪ್ರಭಾವ ಅದ್ಭುತವಾದುದಾಗಿತ್ತು. ಪರಿಣಾಮವಾಗಿ ಗೇಮೋವ್ ಎಂಬ ಹೆಸರು ಜನಪ್ರಿಯ ವಿಜ್ಞಾನ ಲೇಖಕ ಎಂಬುದಕ್ಕೆ ಒಂದು ಪರ್ಯಾಯ ಪದವಾಗಿ ಬಿಟ್ಟಿದೆ.
ಗೌರವಗಳು
[ಬದಲಾಯಿಸಿ]- ಡೆನ್ಮಾರ್ಕಿನ ರಾಯಲ್ ಅಕಾಡೆಮಿ ಆಫ್ ಸೈನ್ಸಸ್ ಗೇಮೋವ್ನನ್ನು 1950 ರಲ್ಲಿ ಸಂಸ್ಥೆಯ ಸದಸ್ಯನನ್ನಾಗಿ ಸ್ವೀಕರಿಸಿ ಗೌರವಿಸಿತು.
- 1953 ರಲ್ಲಿ ಈತ ಅಮೆರಿಕದ ರಾಷ್ಟ್ರೀಯ ಸೈನ್ಸ್ ಅಕಾಡೆಮಿಯ ಸದಸ್ಯನಾಗಿ ಚುನಾಯಿತನಾದ.
- 1965ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಚರ್ಚಿಲ್ ಕಾಲೇಜಿನ ವಿದೇಶೀ ಫೆಲೋ ಆಗಿ ಚುನಾಯಿತನಾದ.
- ಯುನೆಸ್ಕೊ ಸಂಸ್ಥೆಯವರು ಪ್ರತಿ ವರ್ಷ ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕಾಗಿ ನೀಡುವ ಕಳಿಂಗ ಬಹುಮಾನ 1956ರಲ್ಲಿ ಗೇಮೋವ್ಗೆ ದೊರೆಯಿತು.
- ಒಡಿಶಾ ರಾಜ್ಯದ ಒಂದು ಶ್ರೀಮಂತ ಮನೆತನದವರು ನಿರ್ಮಿಸಿರುವ ದತ್ತಿಯಿಂದ ಕೊಡಲಾಗುವ ಈ ಬಹುಮಾನದ ನಿಯಮದ ಪ್ರಕಾರ ಬಹುಮಾನಿತರು ಭಾರತಕ್ಕೆ ಬಂದು ಭಾರತದ ರಾಷ್ಟ್ರಪತಿಯವರಿಂದ ಈ ಬಹುಮಾನವನ್ನು ಸ್ವೀಕರಿಸಬೇಕು. ಅದರಂತೆ ಗೇಮೋವ್ 1956ರಲ್ಲಿ ಭಾರತಕ್ಕೆ ಬಂದು ಭಾರತದ ವಿವಿಧ ನಗರಗಳಿಗೆ ಭೇಟಿ ಕೊಟ್ಟು ಉಪನ್ಯಾಸಗಳನ್ನು ನೀಡಿದ್ದ.
ನಿಧನ
[ಬದಲಾಯಿಸಿ]1968ರ ಆಗಸ್ಟ್ 19ರಂದು ಕಾಲೊರಾಡೋನಲ್ಲಿರುವ ಬೌಲ್ಡರ್ ನಗರದಲ್ಲಿ ಈತ ನಿಧನನಾದ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Memorial Lecture Series (University of Colorado Boulder)
- Biographic sketch Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. (in PDF)
- Gamow Books Archived 2011-08-07 ವೇಬ್ಯಾಕ್ ಮೆಷಿನ್ ನಲ್ಲಿ.
- Annotated bibliography for George Gamow from the Alsos Digital Library for Nuclear Issues Archived 2006-08-28 ವೇಬ್ಯಾಕ್ ಮೆಷಿನ್ ನಲ್ಲಿ.
- Gamow memorial at George Washington University
- Oral History interview transcript with George Gamow Archived 2009-11-24 ವೇಬ್ಯಾಕ್ ಮೆಷಿನ್ ನಲ್ಲಿ. – a lengthy interview, a few months before Gamow died; includes reminiscences about his family, education, career, and writing.
- Gamow 25 April 1968, American Institute of Physics, Niels Bohr Library and Archives
- National Academy of Sciences Biographical Memoir
- Bowley, Roger; Merrifield, Michael; Padilla, Antonio (Tony). "αβγ – The Alpha Beta Gamma Paper". Sixty Symbols. Brady Haran for the University of Nottingham.
- Preliminary Guide to the George Gamow Papers, 1934-1955, Special Collections Research Center, Estelle and Melvin Gelman Library, The George Washington University Archived 2014-12-13 ವೇಬ್ಯಾಕ್ ಮೆಷಿನ್ ನಲ್ಲಿ.