ವಿಷಯಕ್ಕೆ ಹೋಗು

ಜಾಮಿಯ ಮಿಲಿಯ ಇಸ್ಲಾಮಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಮಿಯ ಮಿಲಿಯ ಇಸ್ಲಾಮಿಯ - ಇದು ದೆಹಲಿಯ ಒಂದು ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆ. ಇದು ಒಂದು ಪರಿಗಣಿತ ವಿಶ್ವವಿದ್ಯಾಲಯವಾಗಿದೆ.

ಇತಿಹಾಸ

[ಬದಲಾಯಿಸಿ]

ಭಾರತದಲ್ಲಿ ೧೯೨೧-೨೨ರ ಅವಧಿಯಲ್ಲಿ ಪ್ರಸಿದ್ಧ ಶಿಕ್ಷಣವೇತ್ತರಾದ ಜಾಕೀರ್ ಹುಸೇನರು ಅರಂಭಿಸಿದ ಒಂದು ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆ. ಆಗ ದೇಶಾದ್ಯಂತ ನಡೆಯುತ್ತಿದ್ದ ಸ್ವದೇಶೀ ಚಳವಳಿಯ ಅಂಗವಾಗಿ ಉತ್ಕಟ ದೇಶಾಭಿಮಾನದಿಂದ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಬಹಿಷ್ಕರಿಸುವ ಉದ್ದೇಶದಿಂದ ಅನೇಕ ದೇಶೀಯ ಶಾಲಾಕಾಲೇಜುಗಳು ಆರಂಭವಾದುವು. ಕೇವಲ ಒಂದು ವರ್ಷ ಕಾಲ ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳನ್ನು ಬಹಿಷ್ಕರಿಸುವುದರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವುದೆಂದು ಗಾಂಧೀಜಿ ಕರೆ ನೀಡಿದರು. ಅವರ ಆಶ್ವಾಸನೆಯಂತೆ ಅನೇಕ ವಿದ್ಯಾರ್ಥಿಗಳು ಅಧ್ಯಾಪಕರೂ ಸರ್ಕಾರದ ಶಾಲಾಕಾಲೇಜುಗಳನ್ನು ತೊರೆದು ಹೊರಬಂದರು. ಆದರೆ ಒಂದು ವರ್ಷವಾದರೂ ಸ್ವರಾಜ್ಯ ಲಭಿಸಲಿಲ್ಲ. ಆಗ, ಹೊರಬಂದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಅವಕಾಶವಾಗಲೆಂದು ಇಂಗ್ಲಿಷ್ ಶಿಕ್ಷಣ ಪದ್ಧತಿಗೆ ಸಮಾಂತರವಾಗಿ ದೇಶೀಯ ಶಾಲಾಕಾಲೇಜುಗಳನ್ನು ಆರಂಭಿಸುವ ಯತ್ನ ನಡೆಯಿತು. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳೇನೊ ಆರಂಭವಾದವು. ಆದರೆ ಅವಷ್ಟರಿಂದಲೇ ರಾಷ್ಟ್ರೀಯ ಶಿಕ್ಷಣ ಪದ್ಧತಿಯ ಸ್ಥಾಪನೆ ಸಾಧ್ಯವಿಲ್ಲವೆಂದು ಅದು ರಾಷ್ಟ್ರೀಯ ಸರ್ಕಾರದಿಂದ ಮಾತ್ರ ಸಾಧ್ಯವೆಂದೂ ತಿಳಿಯಲು ಬಹಳ ಕಾಲ ಹಿಡಿಯಲಿಲ್ಲ. ಆ ಕಾರ್ಯಸಾಧನೆಗೆ ಸ್ವರಾಜ್ಯ ಲಭಿಸುವವರೆಗೂ ಕಾಯಬೇಕೆಂದು ನಾಯಕರು ನಿರ್ಧರಿಸಿ, ಇರುವ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಬೇಕೆಂದು ಸೂಚಿಸಿದರು. ಇದರ ಫಲವಾಗಿ ಸಮಾಂತರ ಶಿಕ್ಷಣ ಪದ್ಧತಿಯನ್ನು ಸ್ಥಾಪಿಸುವ ಬದಲು ಇರುವ ಜನ ಮತ್ತು ಧನಮೂಲಗಳನ್ನು ಹಲವು ವಿಶಿಷ್ಟ ಸಂಸ್ಥೆಗಳ ಸ್ಥಾಪನೆಗಾಗಿ ಬಳಸಿ ಅಲ್ಲಿ ಪ್ರಾಯೋಗಿಕವಾಗಿ ಕೆಲವಂಶಗಳನ್ನು ಆಚರಣೆಗೆ ತರುವ ಯತ್ನ ನಡೆಯಿತು. ಆ ಯೋಜನೆಯ ಪ್ರಕಾರ ಗುಜರಾತ್, ಬಿಹಾರ್, ಕಾಶೀವಿದ್ಯಾಪೀಠ ಮತ್ತು ಜಾಮಿಯ ಮಿಲಿಯ ಇಸ್ಲಾಮಿಯ ಶಿಕ್ಷಣ ಸಂಸ್ಥೆಗಳು ಆರಂಭವಾದುವು. ಅವುಗಳಲ್ಲಿ ಮೊದಲ ಮೂರು ಸಂಸ್ಥೆಗಳು ಕಾಲಕ್ರಮದಲ್ಲಿ ತಮ್ಮ ಮೊದಲ ಸ್ವರೂಪವನ್ನು ಕಳೆದುಕೊಂಡವು. ಕೊನೆಯದು ತನ್ನ ಮೂಲರೂಪದಲ್ಲಿ ಮೂಲ ಉದ್ದೇಶ ಸಾಧನೆಗಾಗಿ ಇಂದಿಗೂ ನಡೆದುಕೊಂಡು ಬರುತ್ತಿದೆ.

ಈ ಶಿಕ್ಷಣ ಸಂಸ್ಥೆ ಮೊದಲು ಆಲಿಗಢದಲ್ಲಿ ಆರಂಭವಾಯಿತು. ಆಡಳಿತಾನುಕೂಲಕ್ಕಾಗಿ 1925ರಲ್ಲಿ ಇದನ್ನು ದೆಹಲಿಗೆ ವರ್ಗಾಯಿಸಲಾಯಿತು. ಇದು ಸರ್ಕಾರದ ಅಂಗೀಕಾರನ್ನು ಪಡೆಯಲು ಆಶಿಸಲಿಲ್ಲ. ಸರ್ಕಾರದ ಅಂಗೀಕಾರ, ಆ ಮೂಲಕ ಬರುವ ಧನಸಹಾಯ, ನೆಮ್ಮದಿ-ಇವೆಲ್ಲ ಇದ್ದರೆ ತನ್ನ ತನ್ನ ಘನ ಉದ್ದೇಶಕ್ಕೆ ಭಂಗ ಬರಬಹುದೆಂದು ಅದರ ನೇತಾರರು ಕಷ್ಟಪಾರ್ಪಣ್ಯಗಳಿಂದ ಕೂಡಿದ್ದರೂ ಪ್ರಾಮಾಣಿಕವೆನಿಸುವ ಸಾತಂತ್ರ್ಯವನ್ನು ಬಯಸಿದರು. 1 ಇತರ ಸಂಸ್ಕøತಿಗಳಲ್ಲಿ ಸತ್ಯ ಮತ್ತು ಉಪಯುಕ್ತವೆನಿಸತಕ್ಕದ್ದನ್ನು ತಿರಸ್ಕರಿಸದೆ ಯುವ ಜನರಿಗೆ ಸಂಸ್ಕøತಿ ಪರಂಪರೆಯನ್ನು ಆಧರಿಸಿ ಶಿಕ್ಷಣವನ್ನು ವಿಸ್ತರಿಸುವುದು; 2 ಬೆಳೆಯುವ ಮನಸ್ಸಿನ ಬೌದ್ಧಿಕ ಮತ್ತು ಸುರಸ ಜೀವನದ ಆವಶ್ಯಕತೆಗೂ ಅಂದಿಗಂದಿಗೆ ಆತ್ಮಾಭಿವ್ಯಕ್ತಿಗೂ ಅವಕಾಶ ಕಲ್ಪಿಸಿ, ಭೀತಿಯ ಬದಲು ಆಸಕ್ತಿ ಮತ್ತು ಹೊಣೆಗಾರಿಕೆಯನ್ನು ಶಿಸ್ತಿನ ಮೂಲವನ್ನಾಗಿ ಮಾಡಿಕೊಳ್ಳುವುದು-ಈ ಎರಡು ಅಂಶಗಳು ಇಂಗ್ಲಿಷ್ ಶಿಕ್ಷಣ ಸಂಸ್ಥೆಗೂ ಇದಕ್ಕೂ ಇರುವ ಮೂಲಭೂತ ವ್ಯತ್ಯಾಸಗಳೆಂದು ಸಂಸ್ಥಾಪಕರು ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದರು.

ಈಗ ಇದು ಕೇಂದ್ರ ಸರ್ಕಾರದ ಆಡಳಿತಕ್ಕೊಳಪಟ್ಟಿದೆ. ಭಾರತ ಸರ್ಕಾರ ಇದನ್ನು ಒಂದು ಪರಿಗಣಿತ ವಿಶ್ವವಿದ್ಯಾಲಯವಾಗಿ 1962ರಲ್ಲಿ ಅಂಗೀಕರಿಸಿದೆ. ಅದರಿಂದಾಗಿ, ತನ್ನಲ್ಲಿ ಶಿಕ್ಷಣ ಪಡೆದವರಿಗೆ ತನ್ನದೇ ಆದ ಪದವಿಯನ್ನು ನೀಡುವ ಹಕ್ಕನ್ನು ಈ ಸಂಸ್ಥೆ ಪಡೆದುಕೊಂಡಿದೆ.

ಸಂಸ್ಥೆಯ ಕಾರ್ಯಕ್ರಮಗಳು

[ಬದಲಾಯಿಸಿ]

ಈ ಸಂಸ್ಥೆ ತನ್ನ ಉದ್ದೇಶವನ್ನು ಸಾಧಿಸಲು ಈಗ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಅಲ್ಲಿ ಒಂದು ವಸತಿವಿದ್ಯಾಲಯವಿದೆ. ಮದರ್ಸ ಶಿಕ್ಷಣವನ್ನು ಮುಗಿಸಿದವರಿಗೆ ಆಧುನಿಕ ಭಾಷೆ, ಕಲೆ ಮತ್ತು ಸಮಾಜ ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣವನ್ನು ನೀಡುವುದಕ್ಕೆ ಸೌಲಭ್ಯವಿದೆ. 20,000 ಪುಸ್ತಕಗಳನ್ನೊಳಗೊಂಡ ಒಂದು ಗ್ರಂಥಾಲಯವೂ ನಿಸರ್ಗ ವಿಜ್ಞಾನದ ಪ್ರಯೋಗಾಲಯವೂ ಇವೆ. ಒಬ್ಬೊಬ್ಬರೂ ಪ್ರತ್ಯೇಕವಾಗಿ ಅಭ್ಯಸಿಸಲು ಅವಕಾಶವಿರುವ ಒಂದು ವಸತಿ ಪ್ರೌಢಶಾಲೆಯಿದೆ. ಅಲ್ಲಿ ಆಧುನಿಕ ಶಿಕ್ಷಣದ ವ್ಯವಸ್ಥೆಯಿದೆ. ಯೋಜನಾ (ಪ್ರಾಜೆಕ್ಟ್) ಪದ್ಧತಿಯ ಒಂದು ಪ್ರಾಥಮಿಕ ಶಾಲೆಯಿದೆ. ಅದಕ್ಕೆ ಸೇರಿದಂತೆ ಒಂದು ಶಾಲಾತೋಟ, ಒಂದು ಬ್ಯಾಂಕು ಮತ್ತು ಒಂದು ಸಹಕಾರಿ ಅಂಗಡಿ ಇದೆ. ಅವನ್ನೇ ವಿದ್ಯಾರ್ಥಿಗಳೇ ನಡೆಸುತ್ತಾರೆ. ಪ್ರಾಥಮಿಕ ಮತ್ತು ವಯಸ್ಕರ ಶಿಕ್ಷಣಕ್ಕಾಗಿ ಉದ್ದೇಶಿಸಿರುವ ಮೊದಲ ಒಂದು ಕೇಂದ್ರ ಈಗ ಆರಂಭವಾಗಿದೆ. ದಿನಬಳಕೆಯ ರಸಾಯನವಸ್ತುಗಳನ್ನು ತಯಾರಿಸಲು ರಸಾಯನಶಾಸ್ತ್ರದ ಪ್ರಯೋಗಾಲಯಕ್ಕೆ ಸೇರಿದಂತೆ ಒಂದು ರಾಸಾಯನಿಕ ಉದ್ಯೋಗ ಕೇಂದ್ರವಿದೆ. ಉರ್ದು ಸಾಹಿತ್ಯವನ್ನು ಸಮೃದ್ಧಗೊಳಿಸಿರುವ ಉರ್ದು ಸಾಹಿತ್ಯ ಅಕಾಡೆಮಿ, ಒಂದು ಪ್ರಕಟನಾಲಯ, ಒಂದು ಪುಸ್ತಕದಂಗಡಿ, ಇಲ್ಲಿ ಇವೆ. ಒಂದು ನಿಯತಕಾಲಿಕ ಪತ್ರಿಕೆಯನ್ನು ಪ್ರಕಟಿಸುವ ವ್ಯವಸ್ಥೆಯೂ ಇದೆ.

ಈಚೆಗೆ ಇಲ್ಲಿ ಮೂಲಶಿಕ್ಷಣ ಪಾಠಶಾಲೆಯ ಅಧ್ಯಾಪಕರಿಗೆ ಶಿಕ್ಷಣವೀಯಲು ಒಂದು ವೃತ್ತಿ ಶಿಕ್ಷಣ ಸಂಸ್ಥೆಯೂ ಏರ್ಪಟ್ಟಿದೆ. ಭಾರತದ ಬೇರೆ ಬೇರೆ ಭಾಗಗಳಿಂದಲೂ ಇಂಡೋನೇಷ್ಯ, ಮಧ್ಯಪ್ರಾಚ್ಯ ಮುಂತಾದ ದೇಶಗಳಿಂದಲೂ ಬಂದ 500ಕ್ಕೂ ಹೆಚ್ಚು ಮಂದಿ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: