ಜಡೆ ಬಿಲ್ಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಿಳೆಯರ ಕೇಶಾಲಂಕಾರದಲ್ಲಿ ಹೂವಿನಷ್ಟೇ ಮಹತ್ವವವನ್ನು ಜಡೆ ಬಿಲ್ಲೆ ಪಡೆದಿದೆ. ಜಡೆ ಬಿಲ್ಲೆ ಎಂದರೆ ಹೆಣೆದ ಹೆರಳಿಗೆ ಧರಿಸುವ ಆಭರಣ ಎಂಬುದು ಪ್ರತೀತಿ.ಇದು ಸಾಂಪ್ರದಾಯಿಕ ತೊಡುಗೆಯಾದರೂ ಇಂದು ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಎಲ್ಲಾ ವಯೋಮಾನದ ಹೆಂಗೆಳೆಯರು ಧರಿಸಬಹುದಾದ ಜಡೆ ಬಿಲ್ಲೆಗಳು ತರತರಾವರಿಯಲ್ಲಿ  ದೊರಕುತ್ತದೆ. ಪ್ರಾಚೀನ ಕಾಲದಿಂದಲೂ ಪ್ರಚಲಿತವಾಗಿರುವ ಜಡೆಬಿಲ್ಲೆಯನ್ನು ಮಹಾರಾಣಿಯರು, ಸೇವಕಿಯರು, ನರ್ತಕಿಯರು, ಗೃಹಿಣಿಯರು ಎಲ್ಲರೂ ಧರಿಸುತ್ತಿದ್ದರು. ನೋಡಲು ಆಕರ್ಷಕವಾಗಿರುವ ಜಡೆ ಬಿಲ್ಲೆಗಳು ಉದ್ದ ಕೂದಲಿನ ಹಾಗೂ ತುಂಡು ಕೂದಲಿನ ಮಹಿಳೆಯರಿಗೆ ಬಹಳ ಚೆನ್ನಾಗಿ ಒಪ್ಪುತ್ತದೆ.ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಮದುವೆ ಮನೆಯಲ್ಲಿ ಮಧುಮಗಳ ಅಂದವನ್ನು ರೇಷ್ಮೆ ಸೀರೆ, ಕಸೂತಿಯ ಕುಪ್ಪಸ,ಮದರಂಗಿ, ಕಾಲ್ಗೆಜ್ಜೆ,ಅರಿಶಿನ, ಕುಂಕುಮ ಇವೆಲ್ಲವುಗಳ ಜೊತೆಗೆ ಮೊಗ್ಗಿನ ಜಡೆಯ ಮಧ್ಯದಲ್ಲಿ ಮಿನುಗುವ ಜಡೆಯ ಬಿಲ್ಲೆಯು ಮದುವಣಗಿತ್ತಿಯ ಸಿಂಗಾರವನ್ನು ಹೆಚ್ಚಿಸುತ್ತದೆ. ಪ್ರಾಚೀನ ಕಾಲದಲ್ಲಿ ಬಂಗಾರ ಮತ್ತಿತರ ಲೋಹದ ಜಡೆಬಿಲ್ಲೆಗಳು ದೊರೆಯುತ್ತಿದ್ದವು. ಲೋಹದ ಮೇಲೆ ಅತೀ ನಾಜೂಕಿನ ಕುಸುರಿ ಕಲೆಯ ಜೊತೆಗೆ ಬಿಲ್ಲೆಯ ಮೆರುಗನ್ನು ಪಚ್ಚೆ,ಮುತ್ತು, ರತ್ನ, ಹವಳ,ವಜ್ರ ವೈಢೂರ್ಯಗಳನ್ನು ಸೇರಿಸುವುದರಿಂದ ಜಡೆ ಬಿಲ್ಲೆಗಳು ಆಕರ್ಷಕವಾಗುತ್ತವೆ. ಕೆಂಪು, ಬಿಳಿ ಮತ್ತು ಹಸಿರು ಕಲ್ಲುಗಳು ಬಂಗಾರದ ಬಣ್ಣದ ಬಿಲ್ಲೆಗಳು ಮಾರುಕಟ್ಟೆಯಲ್ಲಿ ತರಹೇವಾರಿ ಜಡೆಬಿಲ್ಲೆಗಳು ಕಾಣಸಿಗುತ್ತವೆ. ವಿಶಿಷ್ಟ ಮೊಬೈಲ್ ಅಪ್ಲಿಕೇಶನ್‍ಗಳಿಂದ ಮತ್ತು ಸಾಮಾಜಿಕ ಜಾಲತಾಣಗಳ ಸಹಾಯದಿಂದ ಜಡೆಬಿಲ್ಲೆಗಳನ್ನು ಕೊಂಡುಕೊಳ್ಳಬಹುದು.

ಒಂಟಿ ಜಡೆ ಬಿಲ್ಲೆಗಳು[ಬದಲಾಯಿಸಿ]

ಈ  ನಮೂನೆಯ ಜಡೆಬಿಲ್ಲೆಗಳು ಇಡೀ ಕೂದಲನ್ನು ಸೇರಿಸಿ ತುರುಬು ಕಟ್ಟಿ, ಬಿಗಿಯಾಗಿ ಅಲುಗಾಡದಂತೆ ಗಂಟು ಹಾಕಿ ಮಧ್ಯದಲ್ಲಿ ಒಂದು ಬಿಲ್ಲೆಯನ್ನು ಹಾಕುವುದು. ಇದನ್ನು ಎಲ್ಲಾ ಸಭೆ ಸಮಾರಂಭಗಳಿಗೆ ತೆರಳುವಾಗ ಮಾಡುವ ಸುಲಭ ವಿಧಾನದ ಕೇಶಾಲಂಕಾರ. ಆಧುನಿಕತೆಯಲ್ಲಿ ಕಾಲೇಜು ಹುಡುಗಿಯರು ಹದಿಹರೆಯದ ಯುವತಿಯರು ಕೂಡ ಈ ಬಗೆಯ ಜಡೆ ಬಿಲ್ಲೆಗಳನ್ನು ಧರಿಸಬಹುದು.ಅನಾರ್ಕಲಿ,ಗಾಗ್ರಾ ಚೋಲಿ ಕುರ್ತಿಗಳಿಗೆ ಧರಿಸಬಹುದು. ಸಾಂಪ್ರದಾಯಿಕ ಉಡುಗೆಗಳಾದ ಲಂಗದಾವಣಿ ಮತ್ತು ಸೀರೆಗೂ ಕೂಡ ಒಂಟಿ ಜಡೆ ಬಿಲ್ಲೆಗಳು ರೂಪವನ್ನು ಹೆಚ್ಚಿಸುತ್ತವೆ. ಕೂದಲನ್ನು ತುರುಬು ಕಟ್ಟಿ ಬಿಲ್ಲೆಹಾಕುವಂತೆ ಇಡೀ ಕೂದಲನ್ನು ಚೆನ್ನಾಗಿ ಬಾಚಿ ಎರಡು ಕಿವಿಗಳ ಕಡೆಯಿಂದ ಸ್ವಲ್ಪ ಕೂದಲನ್ನು ತೆಗೆದು ಮಧ್ಯಕ್ಕೆ ಸೇರಿಸಿ ಸಣ್ಣ ಜಡೆ ಹೆಣೆದು ಮಧ್ಯಕ್ಕೆ ಬಿಲ್ಲೆಯನ್ನು ಸೇರಿಸಬಹುದು. ಅಥವಾ ಇಡೀ ಕೂದಲಿಗೆ ಜಡೆಯನ್ನು ಹೆಣೆದು ತಲೆಯ ಯಾವುದೇ ಭಾಗಕ್ಕಾದರೂ  ಜಡೆಬಿಲ್ಲೆಯನ್ನು ಹಾಕಬಹುದು. ಒಂಟಿ ಬಿಲ್ಲೆಗಳಲ್ಲಿ ನವಿಲಿನ ಆಕೃತಿಯ ಬಿಲ್ಲೆಗಳು, ಕಮಲದ ಹೂ ಮಾದರಿಯ ಬಿಲ್ಲೆಗಳು ಮತ್ತು ಸೇವಂತಿಗೆ ಹೂ  ರೀತಿಯ ಬಿಲ್ಲೆಗಳನ್ನು ಹೆಚ್ಚಾಗಿ ಕಾಣಬಹುದು. ಬಗೆ ಬಗೆಯ ಕೇಶ ಶೃಂಗಾರಕ್ಕೆ ಅನೇಕ ರೀತಿಯ ನವೀನ ಕಲಾಕೃತಿ ಮತ್ತು ಕುಸುರಿಯನ್ನು ಹೊಂದಿರುವ ಜಡೆಬಿಲ್ಲೆಗಳನ್ನು ಉಪಯೋಗಿಸಬಹುದು. ಸಮಕಾಲಿನ ಯುಗದಲ್ಲಿ ತುರುಬು ಕಟ್ಟಿ ಬಿಲ್ಲೆ ಹಾಕುವುದರ ಬದಲು ಮಾರುಕಟ್ಟೆಗಳಲ್ಲಿ ಕಪ್ಪು ಬಣ್ಣದಲ್ಲಿ ದೊರೆಯುವ ಪ್ಯಾಡ್‍ಗಳನ್ನು ಕೂದಲಿನೊಂದಿಗೆ ಸೇರಿಸಿ ಬಿಗಿದು ಅದರ ಮೇಲೆ ಬಿಲ್ಲೆ ಹಾಕಬಹುದು. ಇದರಂತೆಯೇ ಬಿಲ್ಲೆಯನ್ನು ಅಂಟಿಸಿರುವ ಪ್ಯಾಡ್‍ಗಳು ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಬಿಲ್ಲೆಗಳ ಜಡೆ[ಬದಲಾಯಿಸಿ]

ಇದು ಒಂಟಿ ಬಿಲ್ಲೆಗಳ ಸರಮಾಲೆಯ ರೂಪದಲ್ಲಿರುತ್ತದೆ. ಹೆಚ್ಚಾಗಿ ಮದುವೆಯ ಸಂದರ್ಭದಲ್ಲಿ ಮಧುಮಗಳಿಗೆ ಈ ನಮೂನೆಯ ಬಿಲ್ಲೆ ಜಡೆಯನ್ನು ಹಾಕುವುದು ಹೆಚ್ಚು ಪ್ರಚಲಿತ. ಸುಮಾರು ಪದರಗಳ ಬಟ್ಟೆಯನ್ನು ಮಡಚಿ ಅದರ ಮೇಲೆ ಕಪ್ಪು ಬಟ್ಟೆಯನ್ನು ಹಾಕಿ ಉದ್ದವಾಗಿ ಹೊಲಿದು, ಜಡೆಯ ಉದ್ದ ಮತ್ತು ಅಗಲಕ್ಕೆ ತಯಾರಿಸಿಕೊಂಡು ಅದರ ಮೇಲೆ ಒಂದೊಂದೇ ಬಿಲ್ಲೆಗಳನ್ನು ಇಟ್ಟು ಹೊಲೆದು ಜಡೆಬಿಲ್ಲೆಯನ್ನು ತಯಾರಿಸಬಹುದು. ಇದನ್ನು ಚೌರಿ ಕುಚ್ಚು ಹಾಕಿದ ಜಡೆಯ ಮೇಲೆ ಇಟ್ಟು ದಾರದಿಂದ ಗಂಟು ಹಾಕುವುದು. ಇದೇ ರೀತಿಯ ಇನ್ನೊಂದು ವಿಧಾನ ಕಪ್ಪು ಬಣ್ಣದ ಉಲ್ಲನ್‍ನ ಮೂರು ಭಾಗವಾಗಿಸಿ ಜಡೆಯ ರೂಪದಲ್ಲೇ ಹೆಣೆದು ಅದರ ಮೇಲೆ ಬಿಲ್ಲೆಗಳನ್ನು ಇಟ್ಟು ಹೆಣೆದು ಎರಡು ಇಂಚು ಅಂತರದಲ್ಲಿ ಎರಡು ಬದಿಯಲ್ಲಿ ಉಲ್ಲನ್ ಎಳೆಯನ್ನು ಬಿಟ್ಟಿರಲಾಗುತ್ತದೆ. ಇದು ಬೇಕಾದಾಗ ಧರಿಸಿ ಬೇಡವೆಂದಾಗ ತೆಗೆಯುವಂತಹ ರೆಡಿಮೇಡ್ ಬಿಲ್ಲೆ ಜಡೆ. ಕಪ್ಪು ಬಟ್ಟೆಯನ್ನು ಉಪಯೋಗಿಸುವದರಿಂದ ಕೂದಲಿನಂತೆಯೇ ಕಾಣುತ್ತದೆ.

ಗೆಜ್ಜೆ ಜಡೆಬಿಲ್ಲೆಗಳು[ಬದಲಾಯಿಸಿ]

ಒಂಟಿ ಜಡೆಬಿಲ್ಲೆಗಳ ಮಧ್ಯದಿಂದ ಸಣ್ಣ ಸರಪಳಿಯನ್ನು ಸೇರಿಸಿ ಅದರ ತುದಿಗೆ ಮೂರು ಗೆಜ್ಜೆಗಳನ್ನು ಕೂಡಿಸಿದಾಗ ಗೆಜ್ಜೆ ಜಡೆಬಿಲ್ಲೆಗಳು ತಯಾರಾಗುವುದು.ಇದನ್ನು ನೀಳವಾದ ಜಡೆ ಹಾಕಿಯೂ ಹಾಕಬಹುದು ಹಾಗು ತುರುಬು ಕಟ್ಟಿಯೂ ಹಾಕಬಹುದು. ಇದು ಒಂಟಿ ಹಾಗು ಬಿಲ್ಲೆಗಳ ಸರಣಿಯಲ್ಲೂ ಉಪಯೋಗಿಸಬಹುದು. ಎಲ್ಲಾ ಬಣ್ಣಗಳಲ್ಲೂ ಸಿಗುವ ಗೆಜ್ಜೆ ಜಡೆಬಿಲ್ಲೆಗಳು ಹೆಚ್ಚಾಗಿ ಬಂಗಾರದ ಬಣ್ಣದಲ್ಲಿರುತ್ತವೆ. ಗೆಜ್ಜೆ ಇರುವುದರಿಂದ ಶಬ್ದ ಉಂಟಾಗುತ್ತದೆ.[೧]

ಇನ್ನಷ್ಟು ನೋಡಿ[ಬದಲಾಯಿಸಿ]

ಜಡೆ ಬಿಲ್ಲೆಗಳು


ಉಲ್ಲೇಖಗಳು[ಬದಲಾಯಿಸಿ]

  1. https://vijaykarnataka.indiatimes.com/lavalavk/lifestyle/about-peacock-design-jewelry/articleshow/58373793.cms