ವಿಷಯಕ್ಕೆ ಹೋಗು

ಗೌರಿ ಕುಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌರಿ ಕುಂಡ
ಗೌರಿ ಕುಂಡ
village


ಗೌರಿ ಕುಂಡ ಭಾರತಉತ್ತರಾಖಂಡ ರಾಜ್ಯದಲ್ಲಿ ರುದ್ರ ಪ್ರಯಾಗ ಜಿಲ್ಲೆಯಲ್ಲಿರುವ ಒಂದು ಪವಿತ್ರ ಕ್ಷೇತ್ರವಾಗಿದೆ. ಕೇದಾರನಾಥಕ್ಕೆ ಸಾಗುವ ದಾರಿಯಲ್ಲಿ ಗೌರಿ ಕುಂಡದ ವರೆಗೆ ಮಾತ್ರ ಮೋಟಾರು ರಸ್ತೆಯಿದ್ದು ಇಲ್ಲಿಂದ ಮುಂದೆ ಕೇದಾರನಾಥವನ್ನು ತಲುಪಲು ೧೪ ಕಿ.ಮೀ. ಗಳಷ್ಟು ಕಾಲುದಾರಿಯಲ್ಲಿ ಪರ್ವತವನ್ನು ಏರಬೇಕು. ಗೌರಿ ಕುಂಡವು ಸಮುದ್ರಮಟ್ಟದಿಂದ ೬೦೦೦ ಅಡಿಗಳ ಎತ್ತರದಲ್ಲಿದೆ. ಗೌರಿ ಕುಂಡವು ಗೌರಿ ಅಥವಾ ಪಾರ್ವತಿಗೆ ಸಂಬಂಧಿಸಿದ ಕ್ಷೇತ್ರವಾಗಿದೆ. ಪಾರ್ವತಿಯು ಶಿವನನ್ನು ಒಲಿಸಿಕೊಳ್ಳಲು ಈ ಸ್ಥಳದಲ್ಲಿ ಅತಿ ಕಠಿಣ ತಪಸ್ಸನ್ನು ಆಚರಿಸಿದಳು ಮತ್ತು ಅನನ್ಯ ನಿಷ್ಠೆಯಿಂದ ಶಿವನಿಗೆ ಸೇವೆ ಸಲ್ಲಿಸಿದಳು. ಕೊನೆಗೆ ಶಿವನು ಪಾರ್ವತಿಗೆ ಒಲಿದಾಗ ಇವರ ವಿವಾಹವು ಗೌರಿ ಕುಂಡಕ್ಕೆ ಸಮೀಪದ ತ್ರಿಯುಗಿ ನಾರಾಯಣ ಕ್ಷೇತ್ರದಲ್ಲಿ ನಡೆಯಿತು. ಗೌರಿ ಕುಂಡದಲ್ಲಿ ಬಿಸಿನೀರಿನ ಕುಂಡಗಳಿದ್ದು ಭಕ್ತಜನರು ಇವುಗಳಲ್ಲಿ ಸ್ನಾನ ಮಾಡುವರು.

ಗೌರಿ ಕುಂಡವು ಗಣೇಶನ ಕಥೆಯೊಂದಿಗೆ ಸಹ ನಿಕಟ ಸಂಬಂಧವನ್ನು ಹೊಂದಿದೆ. ಗೌರಿಯು ಸ್ನಾನಕ್ಕೆ ಹೋಗುವ ಮೊದಲು ಮನೆಯನ್ನು ಕಾಪಾಡಲು ಗಣೇಶನನ್ನು ಸೃಷ್ಟಿಸಿ ತಾನು ಮೀಯಲು ತೆರಳುವಳು. ಆಗ ಶಿವನು ಅಕಸ್ಮಾತ್ತಾಗಿ ಅಲ್ಲಿಗೆ ಬರಲು ಗಣೇಶನು ಅವನನ್ನು ತಡೆಯುವನು. ಇದರಿಂದ ಕ್ರುದ್ಧನಾದ ಶಿವನು ಗಣೇಶನ ಶಿರಚ್ಛೇಧನ ಮಾಡುವನು. ಇದನ್ನು ತಿಳಿದ ಗೌರಿಯ ದುಃಖವು ಎಲ್ಲೆ ಮೀರಿದಾಗ ಅವಳನ್ನು ಸಮಾಧಾನಗೊಳಿಸಲೋಸುಗ ಶಿವನು ಒಂದು ಆನೆಯ ತಲೆಯನ್ನು ಕಡಿದುತಂದು ಗಣೇಶನ ಮುಂಡಕ್ಕೆ ಜೋಡಿಸಿ ಮತ್ತೆ ಪ್ರಾಣ ಬರಿಸುವನು. ಇಲ್ಲಿಂದ ಮುಂದೆ ಗಣೇಶನು ಗಜಮುಖ, ಗಜಾನನ ಎಂಬ ಹೆಸರನ್ನು ಪಡೆದು ಇಂದು ನಾವು ಪೂಜಿಸುವ ರೂಪವನ್ನು ಹೊಂದಿದನು.

ಇದನ್ನೂ ನೋಡಿ

[ಬದಲಾಯಿಸಿ]

ಕೇದಾರನಾಥ