ಗಿಲ್ಗಿಟ್

ವಿಕಿಪೀಡಿಯ ಇಂದ
Jump to navigation Jump to search

ಕಾಶ್ಮೀರ ವಾಯುವ್ಯದಲ್ಲಿರುವ ಒಂದು ನಗರ. ಇದೇ ಹೆಸರಿನ ನದಿಯೊಂದಿದೆ. ಅದರ ದಕ್ಷಿಣಕ್ಕಿರುವ ವಜ಼ಾರತ್ಗೂ ಈ ಹೆಸರಿದೆ. ಗುಪಿಸ್, ಪುನ್ಯಾಲ್, ಅಷ್ಕುಮಾನ್, ಯಾಸಿನ್ ರಾಜಕೀಯ ಜಿಲ್ಲೆಗಳು, ಗಿಲ್ಗಿಟ್ ಆಸ್ಟರ್ನ ಉಪವಿಭಾಗಗಳು, ಹುನ್ಜ಼ ಮತ್ತು ನಗರ್ ಸಂಸ್ಥಾನಗಳು ಜಿಲಾಸ್ ಉಪ ಏಜೆನ್ಸಿ-ಇವನ್ನೆಲ್ಲ ಒಳಗೊಂಡ ಎಜೆನ್ಸಿಗೂ ಗಿಲ್ಗಿಟ್ ಎಂದೇ ಹೆಸರು. ಚಿತ್ರಾಲ್, ಆಫ್ಘಾನಿಸ್ತಾನ್, ಸೋವಿಯತ್ ದೇಶ ಮತ್ತು ಸಿಂಕಿಯಾಂಗ್(ಚೀನ)ವರೆಗೆ ಈ ಪ್ರದೇಶ ವ್ಯಾಪಿಸಿದೆ. 1947 ರಿಂದ ಈ ಪ್ರದೇಶ ಪಾಕಿಸ್ತಾನದ ಆಕ್ರಮಣಕ್ಕೊಳಗಾಗಿ ಅದರ ಹತೋಟಿಯಲ್ಲಿದೆ. ಆದರೆ ನ್ಯಾಯವಾಗಿ ಇದು ಭಾರತದ ಭಾಗ.


ಭೌತಲಕ್ಷಣಗಳು[ಬದಲಾಯಿಸಿ]

ಇದು ಪರ್ವತ ಪ್ರದೇಶ. ಹಿಂದೂಕುಷ್ ಮತ್ತು ಕಾರಕೋರಮ್ ಪರ್ವತಗಳು ಸಂಧಿಸುವ ಸ್ಥಳಕ್ಕೆ ಸಮೀಪದಲ್ಲಿದೆ; ನಗರ್ ಪ್ರದೇಶದ ನೀರ್ಗಲ್ಲ ನದಿಗಳು ಈಶಾನ್ಯದ ಮಜ಼್-ತಾಗ್-ಆಟ ಪರ್ವತಶ್ರೇಣಿಗಳ ಮತ್ತು ನೈಋತ್ಯದ ಕಾಶ್ಮೀರದ ಗಡಿ ಶಿಖರಗಳ ನಡುವೆ ಹರಿದು ಒಟ್ಟಾಗಿ, ಹುನ್ಜ಼ ಕಣಿವೆಯಿಂದ ಗಾಡ್ವಿನ್ ಆಸ್ಟೆನ್ ಶಿಖರದ ಬುಡಕ್ಕೆ ಧಾರಾಕಾರವಾಗಿ ಇಳಿಯುತ್ತವೆ. ತಲೆಯಿಂದ ಕೊನೆಯವರೆಗೆ ನೀರ್ಗಲ್ಲ ನದೀಪಾತ್ರದ ಉದ್ದ 144 ಕಿಮೀ ಇದನ್ನು ಬೈಯಾಪೋ ಎಂದು ಕರೆಯುತ್ತಾರೆ. ಹುನಜ಼ ಮತ್ತು ನಗರ್ ಪರ್ವತ ಪ್ರದೇಶದ ಉದ್ದಕ್ಕೂ ಕಣಿವೆಗಳು ಸುಮಾರು 5250 ಮೀಟರ್ಗಳಿಗೆ ಕಡಿಮೆ ಇಲ್ಲದ ಮತ್ತು ಸರಾಸರಿ 7000 ಮೀಟರ್ ಎತ್ತರವುಳ್ಳ ಪರ್ವತಶ್ರೇಣಿಗಳ ನಡುವೆ ಆಳವಾಗಿ ಹಬ್ಬಿವೆ. ಇಲ್ಲಿ ಸಾಮಾನ್ಯವಾಗಿ ಯಾವ ಸಸ್ಯವೂ ಇಲ್ಲ.


ಇದುವರೆಗೆ ತಿಳಿದಿರುವಂತೆ ಈ ಪ್ರದೇಶದ ಒಂದು ಅತ್ಯಂತ ಪ್ರಾಚೀನ ಮಾರ್ಗವೆಂದರೆ ಗಿಲ್ಗಿಟ್ಗೂ ಚಿತ್ರಾಲ್ ಕಣಿವೆಯ ಮಸ್ತೂಜಿಗೂ ಸಂಬಂಧ ಕಲ್ಪಿಸುವ ಹಾದಿ. ಇದು ಈಗ ಚಿತ್ರಾಲ್- ಗಿಲ್ಗಿಟ್ ಹೆದ್ದಾರಿಯಾಗಿದೆ. ಗಿಲ್ಗಿಟ್ ನದಿಯ ಉತ್ತರದ ಒಂದೊಂದು ಕವಲಿನ ಕೊನೆಗೂ ಒಂದೊಂದು ಅಥವಾ ಹಲವಾರು ಕಣಿವೆ ದಾರಿಗಳಿವೆ. ಇವೆಲ್ಲ ಪಾಮಿರ್ ಪ್ರದೇಶವನ್ನೊ ಪಾಮಿರ್ ಹಾದಿಯ ಉಗಮ ಸ್ಥಳವಾದ ಮೇಲಣ ಯಾರ್ಬುಂ ಕಣಿವೆಯನ್ನೂ ಕೂಡಿಕೊಳ್ಳುತ್ತವೆ. ಯಾಸಿನ್ ಕಣಿವೆಯಲ್ಲಿರುವ ದಾರ್ಕೋಟ್ ಕಣಿವೆ ಮಾರ್ಗದ ಎತ್ತರ 5253.5 ಮೀಟರ್, ಇದು ಯಾರ್ಬುಂ ಕಣಿವೆಗೆ ಇಳಿಯುತ್ತದೆ. ಅಷ್ಕುಮಾನ್ ತಲೆಯ ಬಳಿ ಗಾಜ಼ಾರ್ ಮತ್ತು ಕೋರ ಬೋರ್ಟ್ ಕಣಿವೆಮಾರ್ಗಗಳಾಗಿವೆ. ಇವೆಲ್ಲ ವರ್ಷದಲ್ಲಿ ಸ್ವಲ್ಪಕಾಲ ಮಾತ್ರ ಸಂಚಾರಕ್ಕೆ ಅರ್ಹ.

ಬುಂಜಿಗೆ ಮೇಲೆ ಸ್ವಲ್ಪ ದೂರದಲ್ಲಿ ಗಿಲ್ಗಿಟ್ ನದಿ ಸಿಂಧೂ ನದಿಯನ್ನು ಸೇರುತ್ತದೆ. ಬುಂಜಿಯ ಕೆಳಗೆ ಅಸ್ತಾರ್ ನದಿ ಆಗ್ನೇಯದಿಂದ ಹರಿದು ಬಂದು ಸಿಂಧುವನ್ನು ಸೇರುತ್ತದೆ. ಗಿಲ್ಗಿಟ್ನಿಂದ ದಕ್ಷಿಣಕ್ಕೆ ಸಾಗುವ ಹೆದ್ದಾರಿ ದಟ್ಟವಾದ ಪೈನ್ ಮರಗಳಿಂದ ಕೂಡಿದೆ. ಈ ಕಣಿವೆಯ ಮೂಲಕ ಹಾದು ಹೋಗುತ್ತದೆ. ಪಾಕಿಸ್ತಾನಕ್ಕೂ ಗಿಲ್ಗಿಟ್ಗೂ ನಡುವಣ ಇನ್ನೊಂದು ಮಾರ್ಗ ಬಾಬುಸಾರ ಕಣಿವೆಯ ಮೂಲಕ ಸಾಗುತ್ತದೆ.

ಜನ[ಬದಲಾಯಿಸಿ]

ಗಿಲ್ಗಿಟ್ನ ವ್ಯಾಪಕ ಪ್ರದೇಶದಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ವಿವಿಧ ಜನಾಂಗಗಳಿವೆ. ಈ ಜನರನ್ನೆಲ್ಲ ದಾರ್ದ ಎಂಬ ಹೆಸರಿನಿಂದ ಸಾಮಾನ್ಯವಾಗಿ ಕರೆಯಲಾಗುತ್ತಿದೆ. ಚಿತ್ರಾಲ್ ಮತ್ತು ಸಿಂಧೂ ನಡುವೆ ಇರುವ ದಾರ್ದಿಸ್ತಾನದ ದಾರ್ದರು ಮುಖ್ಯವಾಗಿ ಅಷ್ಕುನ್ ಅಥವಾ ಯೆಷ್ಕುನ್ ಹಾಗೂ ಷಿನ್ ಜನ. ಸತತ ಧಾಳಿಗಳ ಪರಿಣಾಮವಾಗಿ ಅಷ್ಕುನ್ನರೂ ಅನಂತರ ಷಿನ್ನರೂ ಸಿಂಧೂ ಕಣಿವೆಯಿಂದ ಇಲ್ಲಿಗೆ ಬಂದಿರಬೇಕು. ಷಿನ್ ಜನರ ಮೂಲಪುರುಷರು ಹಿಂದೂಗಳು. ಇವರು ಉತ್ತರಪೂರ್ವಗಳಲ್ಲಿ ಬಾಲ್ಟಿಸ್ತಾನದವರೆಗೂ ಪ್ರಸರಿಸಿದ್ದಾರೆ. ಅಲ್ಲಿ ಇವರು ತಾತರ್ ಜನರೊಂದಿಗೆ ಬೆರೆತು ಹೋಗಿದ್ದಾರೆ. ಷಿನ್ನರ ಪ್ರಮುಖ ಭಾಷೆ ಷೀನಾ ಇಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಇದೊಂದು ಪೈಶಾಚೀಭಾಷೆಯೆಂದು ಹೇಳಲಾಗಿದೆ. ಇರಾನಿಯನ್ ಮತ್ತು ಸಂಸ್ಕೃತಗಳ ನಡುವಣ ಆರ್ಯಭಾಷೆಯ ಆರ್ಷೇಯ ರೂಪವಿದು.


ಉತ್ತರದ ಪರ್ವತ ಜಿಲ್ಲೆಗಳ ಎಲ್ಲ ಜನರೂ ಮೈಕಟ್ಟು ವೇಷಭೂಷಣಗಳಲ್ಲಿ ಸಾಮಾನ್ಯವಾಗಿ ಒಂದೇ ತೆರ. ಇವರು ಗಟ್ಟಿಮುಟ್ಟಾಗಿರುವರಲ್ಲದೆ ಸ್ಪುರದ್ರೂಪಿಗಳು. ಇವರು ಮೊಣಕಾಲನ್ನು ಮುಟ್ಟುವ ದಪ್ಪ ಉಣ್ಣೆ ನಿಲುವಂಗಿಗಳನ್ನೂ ಸಡಿಲ ಪೈಜಾಮುಗಳನ್ನೂ ಕಣಕಾಲುಪಟ್ಟಿ ಮತ್ತು ಬೂಟುಗಳನ್ನೂ ಪದರಪದರವಾಗಿ ತಲೆಗೆ ಸುತ್ತಿದಂತಿರುವ ಫೆಲ್ಟ್ ಟೋಪಿಗಳನ್ನೂ ಸಾಮಾನ್ಯವಾಗಿ ಧರಿಸುತ್ತಾರೆ. ಇವರು ಪೋಲೋ ಆಟಪ್ರಿಯರು, ನೃತ್ಯದಲ್ಲಿ ಆಸಕ್ತರು.


ಅಕ್ಕಿ, ಗೋಧಿ ಮತ್ತಿತರ ಆಹಾರಧಾನ್ಯಗಳೂ ಹಣ್ಣುಗಳೂ ವಿಫುಲವಾಗಿ ಗಿಲ್ಗಿಟ್ನಲ್ಲಿ ಬೆಳೆಯುತ್ತವೆ. ಅಸ್ತಾರ್ನಲ್ಲಿ ಎತ್ತರದ ಬೆಟ್ಟಗುಡ್ಡ ಪ್ರದೇಶದಿಂದಾಗಿ ವ್ಯವಸಾಯ ಕಷ್ಟಕರ, ಉಣ್ಣೆ ನೇಯ್ಗೆ ಪ್ರಮುಖ ಕೈಗಾರಿಕೆ.


ಚರಿತ್ರೆ[ಬದಲಾಯಿಸಿ]

ಮೇಲಣ ಸಿಂಧೂನದಿಯ ಪಶ್ಚಿಮದಲ್ಲಿ ಸ್ವಾತ್ ನದಿಯ ತಲೆಯ ಬಳಿಯ ಪ್ರದೇಶದಿಂದಾಚೆಗೆ ಗಾಂಧಾರ ಪ್ರದೇಶದ ಉತ್ತರಕ್ಕೆ ವಾಸಿಸುತ್ತಿದ್ದವರೆಂದು ದಾರ್ದರನ್ನು ಬಲು ಹಿಂದೆಯೇ ಟಾಲೆಮಿ ಗುರುತಿಸಿದ್ದ. ಉತ್ತರದಿಂದ ಸು. 400 ರಲ್ಲಿ ಇಲ್ಲಿಗೆ ಬಂದ ಫಾಹಿಯಾನನೂ 629 ರಲ್ಲಿ ಸ್ವಾತ್ ಮೂಲಕ ಬಂದ ಯುವಾನ್ಚಾಂಗ್ನೂ ಇದರ ಬಗ್ಗೆ ಬರೆದಿದ್ದಾರೆ. ಗಿಲ್ಗಿಟ್ ಪ್ರದೇಶದ ತ್ರಾಕನ್ ಎಂಬ ಮನೆತನಕ್ಕೆ ಸೇರಿದ ದೊರೆಗಳಿಂದ ಆಳಲ್ಪಡುತ್ತಿತ್ತೆಂಬುದು ಹಳೆಯ ಐತಿಹ್ಯ. ಈ ರಾಜಮನೆತನದ ಆಳ್ವಿಕೆ ಕೊನೆಗೊಂಡ ಅನಂತರ ಈ ಪ್ರದೇಶ ನೆರೆಹೊರೆಯ ದೊರೆಗಳ ಸತತ ಧಾಳಿಗೆ ತುತ್ತಾಯಿತು. 1842 ಕ್ಕೆ ಹಿಂದಿನ ಎರಡು ಮೂರು ದಶಕಗಳಲ್ಲಿ ಇದರ ಮೇಲಣ ಒಡೆತನಕ್ಕಾಗಿ ಐದು ಬಾರಿ ರಾಜವಂಶದಲ್ಲೇ ಹೊಡೆದಾಟಗಳಾದವು. 1842 ರ ಸುಮಾರಿನಲ್ಲಿ ಸಿಕ್ಖರು ಇಲ್ಲಿಗೆ ಬಂದು ಇಲ್ಲೊಂದು ಸೇನೆಯನ್ನಿಟ್ಟರು. 1846 ರಲ್ಲಿ ಲಾರ್ಡ್ ಹಾರ್ಡಿಂಜ್ ಜಮ್ಮುವಿನ ಮಹಾರಾಜ ಗುಲಾಬ್ ಸಿಂಗನಿಗೆ ಕಾಶ್ಮೀರವನ್ನು ಒಪ್ಪಿಸಿದಾಗ ಗಿಲ್ಗಿಟ್ ಕೂಡ ಅದರೊಂದಿಗೆ ಅವನ ವಶವಾಯಿತು. ಗುಲಾಬ್ ಸಿಂಗನ ಕಡೆಯ ಡೋಗ್ರ ಜನ 1852 ರಲ್ಲಿ ಇಲ್ಲಿಂದ ಹೊರದೂಡಲ್ಪಟ್ಟರು. ಎಂಟು ವರ್ಷಗಳ ಕಾಲ ಅವರು ಇಲ್ಲಿಗೆ ಪ್ರವೇಶಿಸಿರಲಿಲ್ಲ. ಅವರ ಪೈಕಿ ಎರಡು ಸಾವಿರ ಜನ ಹತರಾದರು. 1860 ರಲ್ಲಿ ಅವರು ಗಿಲ್ಗಿಟ್ಗೆ ಹಿಂದಿರುಗಿದರು. ಅವರು ಗಿಲ್ಗಿಟಿನ ಕೆಲವು ಭಾಗಗಳನ್ನು ಹಿಡಿದುಕೊಂಡರಾದರೂ ಚಿರಕಾಲ ಅವರ ಕೈಯಲ್ಲಿ ಅವು ಉಳಿಯಲಿಲ್ಲ. 1889 ರಲ್ಲಿ ರಷ್ಯ ಮುನ್ನಡೆಯದಂತೆ ತಡೆಯಲು ಬ್ರಿಟಿಷ್ ಸರ್ಕಾರ ಗಿಲ್ಗಿಟ್ ಏಜೆನ್ಸಿಯನ್ನು ಸ್ಥಾಪಿಸಿತು. 1947 ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದಾಗ ಇದರ ಆಡಳಿತದ ಹೊಣೆ ಕಾಶ್ಮೀರದ ರಾಜ್ಯಪಾಲನದಾಯಿತು. 1947 ರ ನವೆಂಬರಿನಲ್ಲಿ ಪಾಕ್ ಆಕ್ರಮಣಕಾರಿ ಪಡೆಗಳು ರಾಜ್ಯಪಾಲನನ್ನು ಸೆರೆಹಿಡಿದು ಗಿಲ್ಗಿಟನ್ನು ವಶಪಡಿಸಿಕೊಂಡವು.


ಗಿಲ್ಗಿಟ್ ಪಟ್ಟಣ[ಬದಲಾಯಿಸಿ]

ಇದೊಂದು ಚಿಕ್ಕ ಗಿರಿಧಾಮ. ಗಿಲ್ಗಿಟ್ ಪ್ರದೇಶದ ಆಡಳಿತ ಕೇಂದ್ರ ಸಮುದ್ರಮಟ್ಟದಿಂದ 1715 ಮೀಟರ್ ಎತ್ತರದಲ್ಲಿದೆ ಹಿಂದೂಕುಷ್ನ ಕೋಡುಗಲ್ಲುಗಳ ಕೆಳಗೆ ಇರುವ ಈ ಪಟ್ಟಣ ಆಯಕಟ್ಟಿನ ಸ್ಥಳದಲ್ಲಿದೆ. ಪರ್ವತ ಮಾರ್ಗಗಳು ಸುತ್ತಮುತ್ತಲ ಕಣಿವೆಗಳತ್ತ ಸಾಗುತ್ತವೆ. ಹಿಂದೂಗಳು ಆಳುತ್ತಿದ್ದಾಗ ಇದಕ್ಕೆ ಸಾರ್ಗಿನ್ ಎಂಬ ಹೆಸರಿತ್ತು. ಅನಂತರ ಇದಕ್ಕೆ ಗಿಲಿಟ್ ಎಂಬ ಹೆಸರು ಬಂತು. ಇದೇ ಕ್ರಮೇಣ ಗಿಲ್ಗಿಟ್ ಆಯಿತು. ಇಲ್ಲಿ ಕೆಲವು ಹಳೆಯ ಕಲ್ಲುಕಟ್ಟಡಗಳೂ ಬೌದ್ಧಶಿಲ್ಪಗಳೂ ಉಂಟು. ಇದು ಬಹಳ ಹಿಂದೆ ಒಂದು ಬೌದ್ಧ ಕೇಂದ್ರವಾಗಿತ್ತು.

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆ (ಸಿಪಿಇಸಿ)[ಬದಲಾಯಿಸಿ]

  • ಅಂದಾಜು ಮೂರು ಲಕ್ಷ ಕೋಟಿ ಮೊತ್ತದ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆ (ಸಿಪಿಇಸಿ) ಪಾಕಿಸ್ತಾನದ ‘ಹಣೆಬರಹ’ ಬದಲಿಸಲಿದೆ ಮತ್ತು ಆರ್ಥಿಕ, ಸಾಮಾಜಿಕ ಕ್ರಾಂತಿಯನ್ನೇ ತರಲಿದೆ ಎಂದು ಪಾಕ್‌ ಸರ್ಕಾರ ಮತ್ತು ಅಲ್ಲಿಯ ಮಾಧ್ಯಮಗಳು ಹೇಳಿವೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಪಾಕಿಸ್ತಾನದ ಗ್ವದಾರ್‌ನ ಅರಬಿ ಸಮುದ್ರದಾಳದಲ್ಲಿರುವ ಬಂದರಿಗೆ ಚೀನಾ ಪಶ್ಚಿಮ ಭಾಗವನ್ನು ಸಂಪರ್ಕಿಸುವ ಯೋಜನೆ ಇದಾಗಿದೆ. ಈ ವಿವಾದಾತ್ಮಕ ಆರ್ಥಿಕ ಕಾರಿಡಾರ್ ಒಪ್ಪಂದಕ್ಕೆ ನೆರೆಯ ಚೀನಾ ಮತ್ತು ಪಾಕಿಸ್ತಾನಗಳು ಈಗಾಗಲೇ ಸಹಿ ಹಾಕಿವೆ. ಇಂಧನ, ಮೂಲಸೌಕರ್ಯ, ಭದ್ರತೆ ಮತ್ತು ಗಡಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಯನ್ನು ಈ ಯೋಜನೆ ಒಳಗೊಂಡಿದೆ.
  • ಇಂಧನ ಕ್ಷೇತ್ರದಲ್ಲಿ (ಕಲ್ಲಿದ್ದಲು, ಜಲ ಮತ್ತು ಸೌರವಿದ್ಯುತ್‌ ಯೋಜನೆ ಒಳಗೊಂಡಿದೆ) ಮತ್ತು ಮೂಲಸೌಕರ್ಯ ಯೋಜನೆಗಳಿಗೆ (ಬೃಹತ್ ಮತ್ತು ಸಂಕೀರ್ಣ ರಸ್ತೆ ಯೋಜನೆಗಳು, ರೈಲು, ವಾಣಿಜ್ಯ ವಲಯಗಳು ಒಳಗೊಂಡಿದೆ.) ಸಿಪಿಇಸಿ ಯೋಜನೆಯಡಿ ಹಣವನ್ನು ವ್ಯಯಿಸಲಾಗುತ್ತಿದೆ. ಪಾಕಿಸ್ತಾನದಿಂದ ನೇರವಾಗಿ ಚೀನಾದ ವರೆಗೆ ಕೊಳವೆ ಮಾರ್ಗ ನಿರ್ಮಿಸಿ ಅನಿಲ ಆಮದು ಮಾಡಿಕೊಳ್ಳುವ ಮಾರ್ಗವನ್ನು ಸರಳಗೊಳಿಸುವ ಪ್ರಮುಖ ಉದ್ದೇಶವನ್ನು ಚೀನಾ ಹೊಂದಿದೆ. 1979ರಲ್ಲಿ ಕರಕೋರಂ ಹೆದ್ದಾರಿ ನಿರ್ಮಾಣದ ಬಳಿಕ, ಉಭಯ ದೇಶಗಳ ನಡುವೆ ನಡೆಯುತ್ತಿರುವ ಅತಿ ದೊಡ್ಡ ಯೋಜನೆ ಇದಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಈ 3 ಸಾವಿರ ಕಿ.ಮೀ ಉದ್ದದ ಕಾರಿಡಾರ್‌ ಕುರಿತ ಭಾರತದ ಕಳವಳವನ್ನು ನಿರಾಕರಿಸಿರುವ ಚೀನಾ, ಇದೊಂದು ವಾಣಿಜ್ಯ ಉದ್ದೇಶದ ಯೋಜನೆ ಎಂದು ಹೇಳಿದೆ. ಸಿಪಿಇಸಿ ಯೋಜನೆಯಿಂದ ನವಾಜ್‌ ಷರೀಫ್‌ ಸರ್ಕಾರಕ್ಕೆ ನಷ್ಟಕ್ಕಿಂತ ಲಾಭವೇ ಹೆಚ್ಚಿದೆ. ಅಪಾರ ಉದ್ಯೋಗಾವಕಾಶ ಮತ್ತು ಆರ್ಥಿಕ ಅನುಕೂಲತೆಗಳನ್ನು ಒದಗಿಸುವುದರಿಂದ 2018ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಷರೀಫ್‌ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಉಭಯ ರಾಷ್ಟ್ರಗಳ ಬಾಂಧವ್ಯವನ್ನು ವೃದ್ಧಿಸಲಿದೆ ಎನ್ನುತ್ತಾರೆ ಚೀನಾ ಆಧ್ಯಕ್ಷ ಕ್ಸಿ ಜಿನ್‌ಪಿಂಗ್.
  • ಹಿನ್ನಡೆ:ಈ ಕಾರಿಡಾರ್‌ನಲ್ಲಿ ಚೀನಾದ ಸುಮಾರು 7,036 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ರಕ್ಷಣೆಗಾಗಿ ಪಾಕಿಸ್ತಾನ ಸೇನೆ ವಿಶೇಷ ಭದ್ರತಾ ವಿಭಾಗ ನಿರ್ಮಾಣವೂ ಯೋಜನೆಯಲ್ಲಿ ಸೇರಿದೆ. ಕಾರ್ಮಿಕರ ರಕ್ಷಣೆಗಾಗಿ ಮೇಜರ್‌ ಜನರಲ್‌ ನೇತೃತ್ವದಲ್ಲಿ 14 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗಿರುವುದು ಚೀನಾದ ಹಿನ್ನಡೆಗೆ ಕಾರಣ ಎನ್ನಲಾಗಿದೆ. ಹೀಗಾಗಿ ‘ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡುವುದು ಮೂರ್ಖತನವಾಗಬಹುದು’ ಎಂಬ ನಿರ್ಧಾರಕ್ಕೆ ಚೀನಾ ಬಂದಂತಿದೆ. ಇದೂ ಅಲ್ಲದೇ ಈ ಯೋಜನೆ ಚೀನಾ–ಭಾರತ ಸಂಬಂಧದ ಮೇಲೂ ಪರಿಣಾಮ ಬೀರಬಹುದು ಎಂಬ ಅಂಶ ಲೇಖನದಲ್ಲಿ ಉಲ್ಲೇಖವಾಗಿರುವುದು ಗಮನಾರ್ಹ.
  • ಪಾಕ್‌ ಆಕ್ರಮಿಕ ಕಾಶ್ಮೀರ ಜನರ ಆಕ್ರೋಶ:ಮೂರು ಸಾವಿರ ಕಿಲೋ ಮೀಟರ್‌ ಉದ್ದದ ಈ ಯೋಜನೆ ಪಾಕ್‌ ಆಕ್ರಮಿಕ ಕಾಶ್ಮೀರದ, ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನದ ಮೂಲಕ ಹಾದು ಹೋಗುತ್ತದೆ. ಯೋಜನೆಗೆ ಮುಂದಾಗಿರುವ ಎರಡೂ ದೇಶಗಳು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಗಿಲ್ಗಿಟ್‌ ಬಾಲ್ಟಿಸ್ತಾನ ಮತ್ತು ಪಿಓಕೆ ಭಾಗದ ಜನರು ಆರೋಪಿಸಿದ್ದಾರೆ. ಕಾರಕೋರಂ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಯ ಪರಿಹಾರ ಇನ್ನೂ ಸಿಕ್ಕಿಲ್ಲ ಎನ್ನುವುದು ಅಲ್ಲಿಯ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಯೋಜನೆಯ ವಿರುದ್ಧ ಧ್ವನಿ ಎತ್ತಿದ್ದಾರೆ.
  • ಭಾರತದ ಕ್ರಮ:ಚೀನಾ ಅಭಿವೃದ್ಧಿಪಡಿಸುತ್ತಿರುವ ಪಾಕಿಸ್ತಾನದ ಗ್ವಾದರ್ ಬಂದರು ಪ್ರದೇಶದದಿಂದ ಸುಮಾರು 70 ಕಿಲೋ ಮೀಟರ್‌ ದೂರದಲ್ಲಿರುವ ಚಬಾಹರ್‌ ಬಂದರು ಅಭಿವೃದ್ಧಿಗೆ ಭಾರತ 56 ಕೋಟಿ ಅಮೆರಿಕನ್ ಡಾಲರ್ (ಅಂದಾಜು ರೂ.3,300 ಕೋಟಿ) ವ್ಯಯಿಸಲಿದೆ. ಈ ಬಂದರು ಅಭಿವೃದ್ಧಿಪಡಿಸಿದ ನಂತರ ಭಾರತವೇ ಅದರ ನಿರ್ವಹಣೆ ಮಾಡಲಿದೆ.

ಭಾರತದ ಸರಕುಗಳನ್ನು ಚಬಾಹರ್ ಬಂದರಿಗೆ ಸಾಗಿಸಿ ಅಲ್ಲಿಂದ ರೈಲು, ಟ್ರಕ್‌ಗಳ ಮೂಲಕ ಆಫ್ಘಾನಿಸ್ತಾನ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳಿಗೆ ರವಾನೆ ಈ ಯೋಜನೆಯಿಂದ ಸಾಧ್ಯವಾಗಲಿದೆ.[೧]

ಉಲ್ಲೇಖ[ಬದಲಾಯಿಸಿ]

  1. ಬದಲಾಗಲಿದೆಯೇ ಪಾಕ್‌ ಹಣೆಬರಹ