ವಿಷಯಕ್ಕೆ ಹೋಗು

ಗಾರೆಶಿಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾರೆಶಿಲ್ಪ

[ಬದಲಾಯಿಸಿ]

ವಿವಿಧ ಮೂರ್ತಿಗಳನ್ನು ಗಾರೆಯಿಂದ ರಚಿಸುವ ಕಲೆ. ಪ್ರಾಚೀನ ಕಾಲದಿಂದಲೂ ಗಾರೆಯನ್ನು ವಾಸ್ತು ಮತ್ತು ಮೂರ್ತಿಶಿಲ್ಪಗಳ ರಚನೆಯಲ್ಲಿ ಬಳಸಿರುವುದನ್ನು ಕಾಣಬಹುದು. ಈಜಿಪ್ತ್ ಸುಮೇರಿಯ ಮತ್ತು ಸಿಂಧೂ ನಾಗರಿಕತೆಗಳಲ್ಲಿ ಗಾರೆಯ ಬಳಕೆ ಬಗ್ಗೆ ಕುರುಹುಗಳಿವೆ. ಪ್ರಾಚೀನ ಭಿತ್ತಿ ಚಿತ್ರಗಳ ಹಿನ್ನಲೆಯಾಗಿ ಗಾರೆಯನ್ನು ಬಳಸಲಾಗಿದೆ. ಪ್ರಾಚೀನ ಗ್ರೀಕ್ ಮತ್ತು ರೋಮಿನ ಕಟ್ಟಡಗಳ ನಿರ್ಮಾಣದಲ್ಲಿ ಹಾಗೂ ಶಿಲ್ಪಕಲಾಕೃತಿಗಳ ರಚನೆಯಲ್ಲಿ ಗಾರೆ ಹೆಚ್ಚು ಬಳಕೆಗೊಂಡಿದೆ. ಈ ಕಾಲದಲ್ಲೇ ನಯ ಗಾರೆ ಒಂದು ಕಲಾಮಾಧ್ಯಮವಾಗಿ ರೂಪುಗೊಂಡಿತೆನ್ನಬಹುದು. ಭಾರತದಲ್ಲಿ ಗಾಂಧಾರ ಶೈಲಿಯಲ್ಲಿ ರಚನೆಗೊಂಡ ಬಹುತೇಕ ಬಿಡಿ ಆಕೃತಿಗಳು ಮತ್ತು ಫಲಕ ಶಿಲ್ಪಗಳು ಗಾರೆ ಮಾಧ್ಯಮವಾದವು. ಕರ್ನಾಟಕದಲ್ಲಿ ಶಾತವಾಹನರ ಕಾಲದಲ್ಲೇ ಕಟ್ಟಡಗಳ ನಿರ್ಮಾಣದಲ್ಲಿ ಸುಣ್ಣ ಗಾರೆಯನ್ನು ಬಳಸಲಾಗಿದೆ. ಬ್ರಹ್ಮಗಿರಿ, ಚಂದ್ರವಳ್ಳಿ, ಬನವಾಸಿ, ವಡಗಾಂವ್ ಮಾಧವಪುರದಲ್ಲಿ ನಡೆದ ಉತ್ಖನನಗಳು ಇಟ್ಟಿಗೆ ಕಟ್ಟಡಾವಶೇಷಗಳನ್ನು ಬೆಳಕಿಗೆ ತಂದಿವೆ. ಗಂಗರ ಕಾಲದ ದೇವಾಲಯಗಳಲ್ಲಿ ಭಿತ್ತಿ, ಚಾವಣಿ ಮತ್ತು ಶಿಖರಗಳ ರಚನೆಯಲ್ಲಿ ಇಟ್ಟಿಗೆಯೊಡನೆ ಗಾರೆಯನ್ನು ಬಳಸಲಾಗಿದೆ. ಬೌದ್ಧ ವಿಹಾರಗಳಲ್ಲಿನ ಭಿತ್ತಿ ರಚನೆಯಲ್ಲಿ ಗಾರೆಯನ್ನು ಕಾಣಬಹುದು. ಐಹೊಳೆಯ ಚಾಳುಕ್ಯ ಪುರ್ವಕಾಲದ ಇಟ್ಟಿಗೆ ಕಟ್ಟಡದಲ್ಲಿ ಗಾರೆಯನ್ನು ಉಪಯೋಗಿಸಲಾಗಿದೆ. ಕಲ್ಯಾಣ ಚಾಳುಕ್ಯರ ಕಾಲದಲ್ಲೂ ಇಟ್ಟಿಗೆ ಗೋಡೆಯ ಮೇಲೆ ಗಾರೆ ಲೇಪನವನ್ನು ಮಾಡಿದ ಕುರುಹುಗಳು ಶಿಗ್ಗಾವಿ ತಾಲ್ಲೂಕಿನ ಬನ್ನಿಕೊಪ್ಪದ ಭೀಮೇಶ್ವರ ದೇವಾಲಯದಲ್ಲಿ ಕಾಣಬಹುದು. ಇದೇ ರೀತಿ ಹೊಯ್ಸಳ, ಮುಂದೆ ವಿಜಯನಗರ ಕಾಲಗಳಲ್ಲಿ ಗಾರೆ ಬಳಕೆಯನ್ನು ಕಾಣಬಹುದು. ಹಂಪಿಯ ಬಹುತೇಕ ಸ್ಮಾರಕಗಳಲ್ಲಿ ಗಾರೆಯನ್ನು ಬಳಸಲಾಗಿದೆ. ಬಿಜಾಪುರ, ಗುಲ್ಬರ್ಗಾ ಮತ್ತು ಬೀದರ್ನಲ್ಲ್ಲಿನ ಮುಸ್ಲಿಂ ಸ್ಮಾರಕಗಳಲ್ಲಿ ಪ್ರಧಾನವಾಗಿ ಗಾರೆ ಬಳಕೆಗೊಂಡಿದೆ. ಅದರ ಪ್ರಭಾವ ವಿಜಯನಗರದ ಸ್ಮಾರಕಗಳಲ್ಲಿ ಎದ್ದು ಕಾಣುತ್ತದೆ. ಮುಖ್ಯವಾಗಿ ದೇವಾಲಯಗಳಲ್ಲಿಯ ಕೈಪಿಡಿ ಗೋಡೆಯ ಗೂಡುಗಳಲ್ಲಿ ಹಾಗೂ ಮಹಾದ್ವಾರ ಗೋಪುರಗಳಲ್ಲಿ ಗಾರೆ ಮೂರ್ತಿಶಿಲ್ಪಗಳನ್ನು ರಚಿಸಲಾಗಿದೆ. ಗಾರೆಯನ್ನು ಸುಣ್ಣ, ಮರಳು, ನೀರು, ಅಂಟುವಾಳಕಾಯಿ ಮತ್ತಿತರ ಅಂಟುಪದಾರ್ಥಗಳನ್ನು ಸೇರಿಸಿ ಸಿದ್ಧಪಡಿಸಲಾಗುವುದು. ಗಾರೆ ಮಿಶ್ರಣಗಳ ಅಳತೆ ಮತ್ತು ಪ್ರಮಾಣಗಳಿಗೆ ಸಂಬಂಧಿಸಿದಂತೆ ಸಂಸ್ಕೃತಿ ಸಾಹಿತ್ಯದ ಆಗಮಗಳು ಮತ್ತು ಶಿಲ್ಪ ಶಾಸ್ತ್ರ ಕೃತಿಗಳು ವಿವರಿಸಿವೆ. ಕಾಮಿಕಾಗಮ, ಹರಿಭಕ್ತವಿಲಾಸ ಮೊದಲಾದ ಕೃತಿಗಳಲ್ಲಿ ಗಾರೆ ಬಗೆಗಿನ ಮಾಹಿತಿಗಳುಂಟು. ಮುಖ್ಯವಾಗಿ ಗಾರೆಯ ಗುಣಮಟ್ಟ, ಅದನ್ನು ಬಳಸುವ ಉದ್ದೇಶವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಕಟ್ಟಡಗಳ ರಚನೆಗೆ ಮೇಲೆ ತಿಳಿಸಿದಂತೆ ಗಾರೆಯಲ್ಲಿ ಸುಣ್ಣ ಮತ್ತು ಮರಳು ಪ್ರಧಾನವಾಗಿರುತ್ತದೆ. ಆದರೆ ಶಿಲ್ಪಗಳ ರಚನೆಗೆ ಸುಣ್ಣ ಮತ್ತು ಮರಳಿನೊಂದಿಗೆ ಅಂಟುವಾಳ ಕಾಯಿ, ಬೆಲ್ಲ, ಮೊಟ್ಟೆ ಲೋಳೆರಸ, ಬಿಲ್ವಪತ್ರೆ ಕಾಯಿಗಳನ್ನು ಸೇರಿಸಿ ನುಣ್ಣಗೆ ಅರೆದು ಗಾರೆಯನ್ನು ತಯಾರಿಸಲಾಗುವುದು. ಆ ಗಾರೆಯನ್ನು ತಯಾರಿಸಿದ ಅನಂತರ ಕೆಲವು ದಿನಗಳವರೆಗೆ ಅದನ್ನು ಬಳಸಬಹುದು.

ಗಾರೆ ಶಿಲ್ಪಗಳು ಮಥುರಾದ ಕಾಲದಿಂದಲೂ ದೊರೆಯುತ್ತವೆ. ಮರಳಿನೊಂದಿಗೆ ಅಂಟು ಇತ್ಯಾದಿ ಪದಾರ್ಥಗಳನ್ನು ಸೇರಿಸಿ ಗಾರೆಯನ್ನು ಸಿದ್ಧಪಡಿಸುವ ಬಗೆಗೆ ಕಾಶ್ಯಪ ಶಿಲ್ಪ, ವಿಷ್ಣು ಧರ್ಮೋತ್ತರ ಪುರಾಣ ಮತ್ತು ಸಮರಾಂಗಣ ಸೂತ್ರಧಾರಗಳಲ್ಲಿ ಸಾಕಷ್ಟು ವಿವರಗಳಿವೆ. ಶಿಲ್ಪಗಳನ್ನು ಮಣ್ಣು, ಗಾರೆ, ಮರ, ಕಲ್ಲು, ಇಟ್ಟಿಗೆ, ಲೋಹ ಇತ್ಯಾದಿಗಳಿಂದ ರೂಪಿಸಿ ಅದಕ್ಕೆ ಸರಿಹೊಂದುವ ಬಣ್ಣಗಳನ್ನು ಲೇಪಿಸಿ, ಸುಂದರಗೊಳಿಸಬಹುದೆಂದು ಶ್ರೀಕುಮಾರನ ಚಿತ್ರಲಕ್ಷಣದಲ್ಲಿ ಹೇಳಿದೆ. ಗಾರೆ ಪ್ರತಿಮೆಗಳಿಗೆ ಬಣ್ಣ ಹಾಕಿರುವುದನ್ನು ಪಲ್ಲವರ ಕಾಲದ ಕಾಂಚಿಪುರಂನ ಕೈಲಾಸನಾಥ ದೇವಾಲಯ ಮತ್ತು ಚೋಳರ ಕಾಲದ ತಂಜಾವೂರಿನ ಬೃಹದೇಶ್ವರ ದೇವಾಲಯಗಳಲ್ಲಿ ಕಾಣಬಹುದು. ಕೆಲವು ಉತ್ಸವ ಮೂರ್ತಿಗಳನ್ನು ಮರ, ಕಲ್ಲು, ಅಥವಾ ಮಣ್ಣಿನಿಂದ ತಯಾರಿಸಿ ಅವುಗಳ ಮೇಲೆ ತೆಳುವಾಗಿ ಗಾರೆಯನ್ನು ಲೇಪಿಸಿ ಬಣ್ಣ ಹಚ್ಚಿರುವುದನ್ನು ಹಾಗೂ ಅವುಗಳಿಗೆ ಅಭಿಷೇಕಾದಿಗಳನ್ನು ಮಾಡುವಂತಿಲ್ಲವೆಂಬ ವಿಚಾರ ಆಗಮಗಳಲ್ಲಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಗಾರೆಯ ಶಿಲ್ಪ ಗಾಂಧಾರ ಶಿಲ್ಪ ಕಾಲಕ್ಕಿಂತ ಹಳೆಯದೆಂದೂ ಆಕೃತಿಯ ಬಟ್ಟೆ ಮತ್ತು ಅಂಗಾಂಗಗಳ ಉಬ್ಬು ತಗ್ಗುಗಳನ್ನು ಸೂಚಿಸಲು ಮಾತ್ರ ಬಣ್ಣಗಳನ್ನು ಹಾಕಲಾಗುತ್ತದೆಂಬುದು ಕೆ.ಎಂ. ವರ್ಮ ಅವರ ಅಭಿಪ್ರಾಯ.

ಕರ್ನಾಟಕದ ಗಂಗರ ಕಾಲದ ದೇವಾಲಯಗಳಲ್ಲಿ ಗಾರೆಶಿಲ್ಪಗಳಿವೆ. ಚಾಮರಾಜನಗರ ತಾಲ್ಲೂಕಿನ ನರಸಮಂಗಲದ ರಾಮಲಿಂಗೇಶ್ವರ ದೇವಾಲಯದ ವಿಮಾನದಲ್ಲಿ ಗಾರೆ ವಿಗ್ರಹಗಳು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಉಳಿದು ಬಂದಿವೆ. ಸು.೧೦-೧೨ ನೆಯ ಶತಮಾನದ ಹಲವಾರು ದೇವಾಲಯಗಳ ಗರ್ಭಗೃಹಗಳಲ್ಲಿ ಗಾರೆಶಿಲ್ಪಗಳನ್ನು ರಚಿಸಿದ್ದು, ಇಂದಿಗೂ ಉಳಿದು ಬಂದಿವೆ. ಕೋಲಾರದ ಕೋಲಾರಮ್ಮ, ಅಂಗಡಿಗ್ರಾಮದ ವಾಸಂತಿಕಾ, ಕೂಡಲೂರಿನ ಬಸದಿ ಹಾಗೂ ದೇವಾಲಯ, ಹಾಸನದ ಹಾಸನಾಂಬ, ಕೆಲಸೂರಿನ ಬಸದಿ ಮುಂತಾದೆಡೆಗಳಲ್ಲಿ ಗಾರೆಯ ಬೃಹದಾಕಾರದ ಪುಜಾ ವಿಗ್ರಹಗಳನ್ನು ಕಾಣಬಹುದು. ಮಂಡ್ಯ, ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಗ್ರಾಮದೇವತೆಗಳು ಗಾರೆಯಿಂದ ರೂಪುಗೊಂಡಿವೆ. ಚನ್ನಪಟ್ಟಣ ತಾಲ್ಲೂಕಿನ ದೇವರ ಹೊಸಳ್ಳಿಯಲ್ಲಿರುವ ಸಂಜೀವರಾಯ (ಆಂಜನೇಯ) ಶಿಲ್ಪ ಗಾರೆಯದು. ಗ್ರಾಮದೇವತೆಗಳ ಗುಡಿಗಳಲ್ಲಿ ಗಾರೆಯ ನಗ್ನ ಸ್ತ್ರೀ ಮತ್ತು ಪುರುಷರ ಪ್ರತಿಮೆಗಳು ಹೆಚ್ಚಾಗಿವೆ. ಪ್ರಾಚೀನ ಕನ್ನಡ ಸಾಹಿತ್ಯದ ವಡ್ಡಾರಾಧನೆ ಹಾಗೂ ಜಗನ್ನಾಥ ವಿಜಯ ಮೊದಲಾದ ಕಾವ್ಯಗಳಲ್ಲಿ ಲೆಪ್ಪದ ಬೊಂಬೆ ಎಂಬುದನ್ನು ಗಾರೆ ಪ್ರತಿಮೆಗಳಿಗೆ ಸಂವಾದಿಯಾಗಿ ಬಳಸಲಾಗಿದೆ. ಅಂದರೆ ಪ್ರತಿಮೆಯನ್ನು ಸಂಪುರ್ಣ ಗಾರೆಯಿಂದ ಮಾಡದೆ ಮಣ್ಣು ಅಥವಾ ಕಲ್ಲಿನಲ್ಲಿ ಮಾಡಿದ ಒರಟು ರಚನೆಗಳ ಮೇಲೆ ಗಾರೆಯನ್ನು ಲೇಪಿಸಲಾಗುತ್ತಿತ್ತು. ಇಂಥಹ ಪ್ರತಿಮೆಗಳು ಚೋಳರ ಕಾಲದಲ್ಲಿಯೂ ರಚನೆಗೊಂಡಿವೆ. ಗಂಗೈಕೊಂಡ ಚೋಳಪುರಂನಲ್ಲಿ ಇಂಥ ಈ ಬಗೆಯ ಗೊಂಬೆಗಳನ್ನು ಈಗಲೂ ನೋಡಬಹುದು. ವಿಜಯನಗರ ಕಾಲದಲ್ಲಿ ಒರಟು ಶಿಲಾಕಂಬಗಳಿಗೆ ಗಾರೆ ಲೇಪನ ಮಾಡಿ ನಯಗೊಳಿಸಿ ಚಿತ್ರಗಳಿಂದ ಅಲಂಕರಿಸಲಾಗುತ್ತಿತ್ತು. ಮತ್ತೊಂದು ರೀತಿಯ ಗಾರೆಶಿಲ್ಪಗಳೆಂದರೆ, ಮೊದಲಿಗೆ ಕಬ್ಬಿಣದ ಕಂಬಿಗಳಿಂದ ಸ್ಥೂಲ ರಚನೆಯನ್ನು ಸಿದ್ಧಪಡಿಸಿಕೊಂಡು, ಅನಂತರ ಅದಕ್ಕೆ ಗಾರೆ ತುಂಬಲಾಗುತ್ತಿತ್ತು. ಇವು ಮೈಸೂರು ಅರಸರ ಕಾಲದ್ದಿರಬಹುದೆಂಬುದು ವಿದ್ವಾಂಸರ ಅಭಿಪ್ರಾಯ. ಆದರೆ ವಿಜಯನಗರ ಕಾಲದ ಗಾರೆ ಶಿಲ್ಪಗಳಲ್ಲೇ ಮರದ ಗೂಟ ಹಾಗೂ ಅವಶ್ಯವಿದ್ದಲ್ಲಿ ಮಾತ್ರ ಅಭಯ ಹಸ್ತ ಮತ್ತು ವರದ ಹಸ್ತಗಳ ರಚನೆಗೆ ಕಬ್ಬಿಣದ ಕಡ್ಡಿಗಳನ್ನು ಬಳಸುತ್ತಿದ್ದರು. ಬಹುಶಃ ಇದೇ ವಿಧಾನವನ್ನು ಮೈಸೂರು ಅರಸರು ಅನುಸರಿಸಿ ಅಭಿವೃದ್ಧಿಪಡಿಸಿರಬಹುದು.

ಶಿಲಾ ಪ್ರತಿಮೆಗಳಲ್ಲಿ ಕಂಡುಬರುವ ವಿಗ್ರಹಗಳ ನಿರ್ಮಾಣದ ಮಾನ, ಪ್ರಮಾಣ, ಉನ್ಮಾನ, ಪರಿಮಾಣ, ಉಪಮಾನ, ಲಂಬಮಾನ ಮೊದಲಾದ ಲಕ್ಷಣಗಳು ಗಾರೆಶಿಲ್ಪಗಳ ನಿರ್ಮಾಣದಲ್ಲೂ ಕಂಡುಬರುತ್ತವೆ. ದ್ರಾವಿಡ ಶೈಲಿಯ ಶಿಖರ ಮತ್ತು ಗೋಪುರಗಳಲ್ಲಿ ಗಾರೆ ಶಿಲ್ಪಗಳು ವಿಶೇಷವಾಗಿವೆ. ಇದಕ್ಕೆ ದ್ರಾವಿಡ ಮಾದರಿಯ ನಿರ್ಮಾಣ ಸ್ವರೂಪವೇ ಕಾರಣ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದನ್ನು ಹಂಪೆಯ ದೇವಾಲಯಗಳ ಶಿಖರ ಮತ್ತು ಗೋಪುರಗಳಲ್ಲಿ ರಚನೆಗೊಂಡಿರುವ ಅಸಂಖ್ಯಾತ ಗಾರೆಶಿಲ್ಪಗಳು ಸಮರ್ಥಿಸುತ್ತವೆ. ಆದರೂ ಗಾರೆಶಿಲ್ಪಗಳ ರಚನೆಯ ಹಿಂದಿರುವ ಪ್ರಧಾನ ಉದ್ದೇಶ ವಾಸ್ತು ನಿರ್ಮಾಣಗಳನ್ನು ಅಲಂಕೃತಗೊಳಿಸುವುದಾಗಿದೆ. ಇದು ಬಿಡಿ ಶಿಲ್ಪವಾಗಿರಲಿ ಅಥವಾ ಉಬ್ಬು ಶಿಲ್ಪವಾಗಿರಲಿ ಹಿನ್ನಲೆಯಲ್ಲಿರುವ ವಾಸ್ತು ಭಾಗದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಖಾಲಿ ಕಾಣುವ ಸ್ಥಳವನ್ನು ಕಲಾಕೃತಿಗಳಿಂದ ತುಂಬುವುದಾಗಿತ್ತು. ಹೀಗಾಗಿ ವಾಸ್ತು ಅಲಂಕರಣದಲ್ಲಿ ಗಾರೆ ಪ್ರತಿಮೆಗಳು ಪ್ರಮುಖ ಪಾತ್ರ ವಹಿಸಿದ್ದವು.

ವಿಜಯನಗರ ಕಾಲದ ಗಾರೆ ಪ್ರತಿಮೆಗಳ ಅಧ್ಯಯನಕ್ಕೆ ಹಂಪಿ ಸೂಕ್ತ ಸ್ಥಳ. ಇಲ್ಲಿಯ ವಿರೂಪಾಕ್ಷ ದೇವಾಲಯ, ಕೃಷ್ಣದೇವಾಲಯ, ವಿಠ್ಠಲ ದೇವಾಲಯ, ಹಜಾರ ರಾಮ ದೇವಾಲಯ, ಮಾಲ್ಯವಂತ ರಘುನಾಥ ದೇವಾಲಯ, ಅಚ್ಯುತರಾಯ ದೇವಾಲಯ ಹಾಗೂ ಇನ್ನಿತರ ಸಣ್ಣ ಪುಟ್ಟ ದೇವಾಲಯಗಳಲ್ಲಿ ಗಾರೆಶಿಲ್ಪಗಳನ್ನು ಕಾಣಬಹುದು. ಅಲ್ಲದೆ ವಿಜಯನಗರ ಕಾಲದಲ್ಲಿ ಬೇರೆ, ಬೇರೆ ಪ್ರದೇಶಗಳಲ್ಲಿ ನಿರ್ಮಾಣಗೊಂಡ ದೇವಾಲಯಗಳ ಶಿಖರ, ರಾಯಗೋಪುರ ಮತ್ತು ಕೈಪಿಡಿಗೋಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಾರೆ ಪ್ರತಿಮೆಗಳು ರಚನೆಗೊಂಡವು. ಈ ಪ್ರತಿಮೆಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದು, ಉಳಿದಂತೆ ಭಗ್ನಗೊಂಡಿವೆ. ಅಲ್ಲದೆ ಗಾರೆಶಿಲ್ಪಗಳು ಸದಾ ತೆರೆದ ಸ್ಥಿತಿಯಲ್ಲಿದ್ದು, ಮಳೆ, ಗಾಳಿ ಮತ್ತು ಬಿಸಿಲುಗಳಿಂದ ಹಾಳಾಗುವ ಸಾಧ್ಯತೆಯೇ ಹೆಚ್ಚು. ಹೀಗೆ ಹಾಳಾದ ಶಿಲ್ಪಗಳನ್ನು ಕಾಲ ಕಾಲಕ್ಕೆ ಜೀರ್ಣೋದ್ಧಾರಗೊಳಿಸಿ ಸುಣ್ಣ ಬಣ್ಣಗಳನ್ನು ಹಚ್ಚಿರುವುದರಿಂದ ಅವುಗಳ ಸೌಂದರ್ಯ ಮರೆಯಾಗಿ ಒರಟು ರಚನೆಗಳಂತೆ ಕಂಡು ಬರುತ್ತವೆ. ಹೀಗಾಗಿ ಗಾರೆಶಿಲ್ಪಗಳ ಕಾಲಮಾನವನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟ.

ವಿಜಯನಗರ ಕಾಲದ ಗಾರೆ ಶಿಲ್ಪಗಳು ಬೆಡಗುಬಿನ್ನಾಣಗಳಿಂದ ಕೂಡಿದ್ದು, ಹೊಯ್ಸಳ ಶಿಲ್ಪಗಳನ್ನು ನೆನಪಿಸುತ್ತವೆ. ಗಾರೆ ಹಸಿ ಹಿಟ್ಟಿನಂತಿರುವುದರಿಂದ ಶಿಲ್ಪಿ ತನ್ನೆಲ್ಲ ಕುಶಲತೆಯನ್ನು ಪ್ರಯೋಗಿಸಲು ಅವಕಾಶವಿದ್ದು, ಶಿಲ್ಪಗಳು ಅತ್ಯಂತ ಮನೋಜ್ಞವಾಗಿ ಮೂಡಿ ಬರಲು ಸಾಧ್ಯವಾಗಿದೆ. ಒಂದು ವೇಳೆ ರಚನೆ ಸರಿ ಬರದಿದ್ದರೆ, ಪುನಃ ಅದಕ್ಕೆ ಗಾರೆಯನ್ನು ಲೇಪಿಸಿ ಸುಂದರಗೊಳಿಸಲಾಗುತ್ತಿತ್ತು. ಹೀಗಾಗಿ ಗಾರೆ ಶಿಲ್ಪಗಳ ರಚನೆಯಲ್ಲಿ ತಿಳಿದೋ ತಿಳಿಯದೆಯೋ ಶಿಲ್ಪಿಯ ಸೃಜನಶೀಲತೆ ಪ್ರವೇಶವಾಗುತ್ತಿತ್ತು. ಇದರಿಂದಾಗಿ ಕೆಲವು ಗಾರೆ ಶಿಲ್ಪಗಳಲ್ಲಿ ನವ್ಯ ಗುಣಲಕ್ಷಣಗಳನ್ನು ಕಾಣಬಹುದು. ಮುಖ್ಯವಾಗಿ ವಿಜಯನಗರದ ಗಾರೆಶಿಲ್ಪಗಳು ನಾನಾ ಭಂಗಿಗಳಲ್ಲಿದ್ದು, ನೀಳ ರಚನೆಗಳಾಗಿವೆ. ಉದ್ದವಾಗಿದ್ದು, ತೆಳುವಾಗಿ ಬಳಕುವ ಲಕ್ಷಣಗಳಿಂದ ಕೂಡಿವೆ. ಈ ಲಕ್ಷಣಗಳನ್ನು ಆ ಕಾಲದ ಶಿಲಾಶಿಲ್ಪಗಳಲ್ಲೂ ಕಾಣಬಹುದು. ಗಾರೆಶಿಲ್ಪಗಳಿಗೆ ವಸ್ತ್ರದ ಅಲಂಕರಣವಿದ್ದು, ಕಸೂತಿ ಕೆಲಸವನ್ನು ಮಾಡಲಾಗಿದೆ. ಮಣಿಗಳ ಹಾರಗಳು ಪ್ರಧಾನ ಆಭರಣಗಳಾಗಿ ಎದ್ದು ಕಾಣುತ್ತವೆ. ಗಾರೆ ಶಿಲ್ಪಗಳು ಗೋಡೆಗೆ ಒರಗಿ ನಿಂತ ಬಿಡಿಶಿಲ್ಪಗಳಂತೆ ರಚನೆಗೊಂಡಿವೆ. ಪ್ರತಿಮಾ ಶಾಸ್ತ್ರದ ಲಕ್ಷಣಗಳನ್ನೊಳಗೊಂಡ ಈ ಶಿಲ್ಪಗಳು ಅಂಗಾಂಗ ರಚನೆಯಲ್ಲಿ ಪ್ರಮಾಣ ಬದ್ಧತೆಯನ್ನು ಕಾಯ್ದುಕೊಂಡಿವೆ. ನುರಿತ ಶಿಲ್ಪಿಗಳ ಅನುಭವದ ಸಾಕಾರ ಮೂರ್ತಿಗಳಂತೆ ಕಂಡು ಬರುತ್ತವೆ ಹಾಗೂ ಸಮಕಾಲೀನ ಇತರ ಮಾಧ್ಯಮಗಳ ಪ್ರತಿಮೆಗಳಿಗೆ ಸರಿ ಸಮನಾಗಿ ನಿಲ್ಲುತ್ತವೆ. ವಿಜಯನಗರೋತ್ತರ ಕಾಲದಲ್ಲಿ ರಚನೆಗೊಂಡ ಗಾರೆಶಿಲ್ಪಗಳು ಉಬ್ಬು ರಚನೆಗಳಾಗಿದ್ದು, ಒರಟು ಒರಟಾಗಿವೆ. ಈ ರೀತಿಯ ಶಿಲ್ಪಗಳು ವಿರೂಪಾಕ್ಷ ದೇವಾಲಯದ ಕೈಪಿಡಿಗೋಡೆಯ ಕೆಲವು ಗೂಡುಗಳಲ್ಲಿ(ವೈಷ್ಣವ ಶಿಲ್ಪಗಳು) ಮತ್ತು ಮುಂದಿನ ಮಹಾದ್ವಾರ ಗೋಪುರದಲ್ಲಿವೆ. ಈ ಶಿಲ್ಪಗಳು ಕೇವಲ ಗೋಡೆಗಂಟಿದ ತೆಳು ಉಬ್ಬು ಶಿಲ್ಪಗಳಂತಿವೆ. ವಸ್ತ್ರ ಮತ್ತು ಆಭರಣಗಳ ಅಲಂಕರಣದಲ್ಲಿ ವಿಜಯನಗರ ಕಾಲದ ಶಿಲ್ಪಶೈಲಿಯನ್ನೇ ಅನುಸರಿಸಿದ್ದರೂ ಒರಟು ಲಕ್ಷಣಗಳು ಎದ್ದು ಕಾಣುತ್ತವೆ. ಹೀಗಾಗಿ ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ವಿಜಯನಗರ ಮತ್ತು ವಿಜಯನಗರೋತ್ತರ ಕಾಲದ ಗಾರೆ ಪ್ರತಿಮೆಗಳನ್ನು ಕಾಣಬಹುದಾಗಿದೆ. ಆದರೆ ಉಳಿದ ದೇವಾಲಯಗಳಲ್ಲಿ ವಾಸ್ತು ನಿರ್ಮಾಣದೊಂದಿಗೆ ರಚನೆಗೊಂಡ ಗಾರೆಶಿಲ್ಪಗಳನ್ನು ಕಾಣಬಹುದು. ಅಂದರೆ ವಿಜಯನಗರ ಕಾಲದಲ್ಲೆ ರಚನೆಗೊಂಡ ಗಾರೆಶಿಲ್ಪಗಳಿವೆ. ವಿರೂಪಾಕ್ಷ ದೇವಾಲಯದ ಕೈಪಿಡಿ ಗೋಡೆಯ ಗೂಡುಗಳಲ್ಲಿರುವ ಶೈವಗಾರೆ ಶಿಲ್ಪಗಳು ಇದೇ ದೇವಾಲಯದ ಕಿರಿಯ ಗೋಪುರದಲ್ಲಿರುವ ಗಾರೆಶಿಲ್ಪಗಳು, ಕೃಷ್ಣ ದೇವಾಲಯದ ಮಹಾದ್ವಾರ ಗೋಪುರದ ಗಾರೆ ಪ್ರತಿಮೆಗಳು, ಹಜಾರರಾಮದೇವಾಲಯದ ಕೈಪಿಡಿಗೋಡೆಯಲ್ಲಿರುವ ಸಾಲುಗಾರೆ ಪ್ರತಿಮೆಗಳು, ಮಲಪನ ಗುಡಿಯ ಮಲ್ಲಿಕಾರ್ಜುನ ದೇವಾಲಯದ ಕೈಪಿಡಿ ಗೋಡೆಯ ಗೂಡುಗಳಲ್ಲಿರುವ ಗಾರೆ ಪ್ರತಿಮೆಗಳು ಹಾಗೂ ಮಾಲ್ಯವಂತ ರಘುನಾಥ ದೇವಾಲಯದ ಗೋಪುರಗಳಲ್ಲಿರುವ ಗಾರೆ ಪ್ರತಿಮೆಗಳು ಮುಖ್ಯವಾಗಿವೆ. ಕೆಲವೆಡೆ ಗಾರೆ ಪ್ರತಿಮೆಗಳಿಗೆ ವಿವಿಧ ಬಣ್ಣಗಳನ್ನು ಲೇಪಿಸಿ ಅಲಂಕರಿಸಲಾಗಿದೆ. ಇವುಗಳಲ್ಲಿ ದೇವತಾ ಶಿಲ್ಪಗಳಲ್ಲದೆ ಲೌಕಿಕ ಶಿಲ್ಪಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿವೆ.

ವಿರೂಪಾಕ್ಷ ದೇವಾಲಯದ ಕೈಪಿಡಿ ಗೋಡೆಯ ಗೂಡುಗಳಲ್ಲಿರುವ ಉಮಾಮಹೇಶ್ವರ, ನಾಟ್ಯಗಣಪ, ತ್ರಿಭಂಗಿಯಲ್ಲಿರುವ ಶಿವ, ನಂದಿರೂಢ ಶಿವಪಾರ್ವತಿ, ಶೈವಂiÀÄತಿ, ಗಣಸಮೂಹ, ಚಾತುರಧಾರಿ ಸ್ತ್ರೀಯರು, ಭಕ್ತ ವೃಂದ ಗಾರೆ ಪ್ರತಿಮೆಗಳು ಉಲ್ಲೇಖಾರ್ಹ. ಕೊರಳಹಾರ, ತೋಳ್ಬಂದಿ, ಕಡಗ, ಡಾಬು ಮತ್ತು ಕಿರೀಟಗಳಿಂದ ಅಲಂಕೃತಗೊಂಡ ಈ ಪ್ರತಿಮೆಗಳು ಮನಮೋಹಕವಾಗಿವೆ. ಪುರುಷ ದೇವತೆಯನ್ನು ದೊಡ್ಡದಾಗಿಯೂ ಸ್ತ್ರೀದೇವತೆಯನ್ನು ಚಿಕ್ಕದಾಗಿಯೂ ರಚಿಸಲಾಗಿದೆ. ಕೃಷ್ಣದೇವಾಲಯದ ಮಹಾದ್ವಾರ ಗೋಪುರದ ಪಶ್ಚಿಮ ಭಾಗದಲ್ಲಿರುವ ಸೈನಿಕರ ಸಮೂಹ ಗಾರೆ ಶಿಲ್ಪಗಳನ್ನು ಕೃಷ್ಣದೇವರಾಯ ಒರಿಸ್ಸದ ಮೇಲೆ ಕೈಗೊಂಡ ದಂಡಯಾತ್ರೆಯ ಚಿತ್ರಣವೆನ್ನಲಾಗಿದೆ. ಇದರ ಬಹುಭಾಗ ಭಗ್ನಗೊಂಡಿದ್ದು ಇತ್ತೀಚೆಗೆ ಇದನ್ನು ಸಂರಕ್ಷಿಸಲಾಗಿದೆ.

ಹಂಪೆಯ ಗಾರೆ ಪ್ರತಿಮೆಗಳಲ್ಲಿ ಮಿಥುನ ಶಿಲ್ಪಗಳು ಪ್ರಮುಖವಾಗಿವೆ. ಇವುಗಳ ಮೈಮಾಟ ಆಕರ್ಷಕವಾಗಿದೆ. ವಿಠಲ ದೇವಾಲಯದ ಗೋಪುರದಲ್ಲಿ (ಪುರ್ವ) ನಗ್ನ ಸ್ತ್ರೀಶಿಲ್ಪವೊಂದು ಲಜ್ಜಾಗೌರಿಶಿಲ್ಪದ ಮಾದರಿಯಲ್ಲಿದೆ. ವಿರೂಪಾಕ್ಷ ದೇವಾಲಯದ ದೊಡ್ಡ ಗೋಪುರದ ದಕ್ಷಿಣ ಮುಖದಲ್ಲಿರುವ ಮಿಥುನ ಶಿಲ್ಪಗಳು ಜೀವಂತಿಕೆಯಿಂದ ಕೂಡಿವೆ. ಸ್ತ್ರೀ ಪ್ರತಿಮೆಗಳು ತುಂಬು ಯೌವನವನ್ನು ಪ್ರಕಟಿಸುತ್ತವೆ. ಇವುಗಳ ಸುಂದರ ಕೇಶಾಲಂಕರಣ, ಲೇಪಾಕ್ಷಿ ವರ್ಣ ಚಿತ್ರಗಳಲ್ಲಿರುವ ಸ್ತ್ರೀಯರ ಕೇಶಾಲಂಕಾರವನ್ನು ಹೋಲುತ್ತವೆ. ಕೃಷ್ಣ ದೇವಾಲಯದ ಗೋಪುರದಲ್ಲಿರುವ ಗೋಪಿಕಾಸ್ತ್ರೀಯರ ಶಿಲ್ಪಗಳು ನಗ್ನವಾಗಿದ್ದರೂ ಸದಭಿರುಚಿಗೆ ಉತ್ತಮ ಉದಾಹರಣೆಗಳಾಗಿವೆ.

ಹೀಗೆ ಗಾರೆ ಪ್ರತಿಮೆಗಳು ವಿಜಯನಗರ ಕಾಲದ ವಾಸ್ತು ರಚನೆಗಳ ಅಲಂಕರಣವನ್ನು ಇಮ್ಮಡಿಸುವುದರಲ್ಲಿ ಪ್ರಮುಖ ಪಾತ್ರವಹಿಸಿವೆ. ವಿವಿಧ ಪಂಥದ ದೇವತೆಗಳು, ಪೌರಾಣಿಕ ಘಟನಾವಳಿಗಳು, ಪರಿವಾರ ದೇವತೆಗಳು, ಪ್ರಾಣಿಪಕ್ಷಿಗಳು, ರಾಜ, ರಾಣಿ, ಯತಿ ,ಶಿಷ್ಯ ಮತ್ತು ಇತರ ಸಮೂಹ ಗಾರೆ ಪ್ರತಿಮೆಗಳು ಪ್ರಮುಖವಾಗಿವೆ. ವಿಜಯನಗರ ಕಾಲದಲ್ಲಿ ಹಂಪಿ ಹೊರತುಪಡಿಸಿ ಇತರೆಡೆಗಳಲ್ಲಿ ನಿರ್ಮಾಣಗೊಂಡ ರಾಯಗೋಪುರ (ಮಹಾದ್ವಾರ ಗೋಪುರ) ಹಾಗೂ ಕೈಪಿಡಿ ಗೋಡೆಯ ಗೂಡುಗಳಲ್ಲಿ ಗಾರೆ ಪ್ರತಿಮೆಗಳು ನಿರ್ಮಾಣ ಗೊಂಡವು. ಉದಾ: ಮೇಲುಕೋಟೆ, ಕನಕಗಿರಿ, ಶ್ರೀರಂಗಪಟ್ಟಣ. ಈ ಹಿನ್ನೆಲೆಯಲ್ಲಿ ವಿಜಯನಗರ ಕಾಲದಲ್ಲಿ ಗಾರೆ ಪ್ರತಿಮೆಗಳನ್ನು ಶಿಲ್ಪಶಾಸ್ತ್ರದಲ್ಲಿ ಪರಿಣತಿ ಪಡೆದಿದ್ದ ಶಿಲ್ಪಿಗಳೆ ನಿರ್ಮಿಸಿರುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಈ ಕಾಲದ ಮರ, ಶಿಲೆ, ಲೋಹ ಮತ್ತು ಗಾರೆ ಪ್ರತಿಮೆಗಳು ಲಕ್ಷಣ ಮತ್ತು ಶೈಲಿಯಲ್ಲಿ ಒಂದೇ ಮಾದರಿಯಲ್ಲಿ ಕಂಡುಬರುತ್ತವೆ. ಅಂದರೆ ವಿಜಯನಗರ ಕಾಲದಲ್ಲಿ ಗಾರೆ ಕುಶಲಕಲೆಯಲ್ಲಿ ನುರಿತ ಶಿಲ್ಪಗಳ ಒಂದು ವರ್ಗವೇ ಇತ್ತೆಂಬುದು ಸುಸ್ಪಷ್ಟ. ಆದರೆ ಗಾರೆ ಶಿಲ್ಪಿಗಳನ್ನು ಕುರಿತಂತೆ ಈವರೆಗೂ ಯಾವುದೇ ಮೂಲದ ಮಾಹಿತಿ ದೊರೆತಿಲ್ಲ. ಇನ್ನು ಮೈಸೂರು ಒಡೆಯರ ಕಾಲದಲ್ಲೂ ಹೆಚ್ಚಿನ ಸಂಖ್ಯೆಯ ಗಾರೆ ಪ್ರತಿಮೆಗಳನ್ನು ದೇವಾಲಯಗಳ ಗೋಪುರ ಮತ್ತು ಕೈಪಿಡಿಗೋಡೆಯ ಗೂಡುಗಳಲ್ಲಿ ನಿರ್ಮಿಸಲಾಯಿತು. ಕಾಲಕ್ರಮೇಣ ವಸತಿ ಗೃಹಗಳ ಅಲಂಕರಣೆಯಲ್ಲಿ ಗಾರೆಯನ್ನು ಯಥೇಚ್ಛವಾಗಿ ಬಳಸುವ ಪದ್ಧತಿ ರೂಢಿಯಾಯಿತು. ಸಿಮೆಂಟ್ ಮತ್ತಿತರ ಆಧುನಿಕ ವಸ್ತುಗಳ ಪ್ರವೇಶದಿಂದಾಗಿ ಗಾರೆ ಬಳಕೆ ಸ್ಥಗಿತಗೊಂಡಿತೆನ್ನಬಹುದು. ಆದರೂ ಕೆಲವು ಕೆಲಸಗಳಿಗೆ ಗಾರೆ ಬಳಕೆಗೊಳ್ಳುತ್ತಿದೆ.