ಚಂದ್ರವಳ್ಳಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಚಂದನವಳ್ಳಿ

ಚಂದ್ರವಳ್ಳಿ- ಚಿತ್ರದುರ್ಗಪಶ್ಚಿಮಕ್ಕೆ ಬೆಟ್ಟದ ಬುಡದಲ್ಲಿ ಇರುವ ಪ್ರಾಕ್ತನ ನಿವೇಶನ. ಪ್ರಾಗೈತಿಹಾಸಿಕ ಕಾಲದಿಂದಲೂ ಇಲ್ಲಿ ಜನವಸತಿಯಿದ್ದು, ಇತಿಹಾಸ ಕಾಲದಲ್ಲಿ ವಿಜಯನಗರದ ಕಾಲದವರೆಗೂ ಇಲ್ಲಿ ಊರು ಬೆಳೆದು ಬಂದಿದ್ದಂತೆ ತೋರುತ್ತದೆ. ಹುಲೆಗುಂದಿ, ನೇರಲಗೊಂದಿ, ಬಾರಲಗೊಂದಿಗಳೆಂಬ ಬೆಟ್ಟದ ಕಣಿವೆ ಪ್ರದೇಶಗಳೂ ಅಂಕಲೆ ಮಠವಿರುವ ಗವಿಗಳೂ ಸುತ್ತಮುತ್ತಲ ಗುಡ್ಡಗಳೂ ಅಲ್ಲಿ ನಿರಂತರವಾಗಿ ಪ್ರವಹಿಸುತ್ತಿದ್ದ ಹಳ್ಳವೂ ಪ್ರಾಚೀನ ಕಾಲದಲ್ಲಿ ಜನವಸತಿಗೆ ಅನುಕೂಲವಾಗಿದ್ದುವು. ಆದರಿಂದಲೇ ಇಲ್ಲಿ ನವಶಿಲಾಯುಗದ ಜನರಿದ್ದ ಕುರುಹುಗಳೂ ಕಂಡುಬಂದಿವೆ.

ಪುರಾಣ[ಬದಲಾಯಿಸಿ]

ಈ ನಿವೇಶನ ಮೊದಲು ಬೆಳಕಿಗೆ ಬಂದದ್ದು ಸುಮಾರು 120 ವರ್ಷಗಳ ಹಿಂದೆ-ನೀರಿನ ಕಾಲುವೆಯೊಂದನ್ನು ಈ ನಿವೇಶನದ ನಡುವೆ ತೋಡುತ್ತಿದ್ದಾಗ ಅಲ್ಲಿ ದೊರೆತ ಸೀಸದ ನಾಣ್ಯಗಳಿಂದ. ಆರ್. ನರಸಿಂಹಾಚಾರ್ಯರು ಮೊದಲ ಬಾರಿಗೆ ಇಲ್ಲಿ ಕೆಲವು ಕುಳಿಗಳನ್ನು ತೋಡಿ ಅಲ್ಲಿ ದೊರೆತ ನಾಣ್ಯಗಳು, ಮಣ್ಣಿನ ಪಾತ್ರೆಗಳು, ಮಣಿಗಳು ಮೊದಲಾದವನ್ನು 1909ರಲ್ಲಿ ವರದಿ ಮಾಡಿ ಅದರ ಪ್ರಾಮುಖ್ಯವನ್ನು ಪ್ರಕಟಿಸಿದರು. 20 ವರ್ಷಗಳ ತರುವಾಯ ಎಂ.ಎಚ್. ಕೃಷ್ಣ ಅವರು ವಿಸ್ತಾರವಾದ ಭೂಶೋಧನೆಯನ್ನು ಕೈಗೊಂಡರು. 30ಕ್ಕೂ ಹೆಚ್ಚು ಕಡೆ ಉತ್ಖನನ ನಡೆಸಿದರು. ಇದರಿಂದ ಅಲ್ಲಿ ಅನೇಕ ಕಟ್ಟಡಗಳ ಅವಶೇಷಗಳು, ನಾಣ್ಯಗಳು, ಆಭರಣಗಳು, ಮಣಿಗಳು, ರೇಖಾಚಿತ್ರ ಮತ್ತು ಇತರ ಅಲಂಕರಣಗಳಿಂದ ಕೂಡಿದ ಮೃಣ್ಪಾತ್ರೆಗಳ ತುಂಡುಗಳು, ಕಬ್ಬಿಣದ ಮತ್ತು ಇತರ ಮನೆ ಬಳಕೆಯ ವಸ್ತುಗಳು ಹೇರಳವಾಗಿ ಕಂಡುಬಂದುವು. ಗೌತಮೀಪುತ್ರ ವಿಳಿವಾಯಕುರ, ಮಹಾರಠಿ ಸಡಕಣ ಕಳಲಾಯ, ಯಜ್ಞಶ್ರೀ ಶಾತಕರ್ಣಿ ಮುಡಾನಂದ ಮೊದಲಾದ ಶಾತವಾಹನ ಅರಸರ, ಮಾಂಡಲಿಕರ ಸೀಸದ ಮತ್ತು ಮಿಶ್ರಲೋಹದ ಹಲವಾರು ನಾಣ್ಯಗಳ ಜೊತೆಗೆ ರೋಂ ಚಕ್ರವರ್ತಿಗಳಾದ ಆಗಸ್ಟಸ್ ಮತ್ತು ಟೈಬೀರಿಯನರ ನಾಣ್ಯಗಳಿದ್ದುವು. ಇವಲ್ಲದೆ ಕೃಷ್ಣ ಅವರು ಎರಡು ಕಡೆ ಭೂಮಿಯೊಳಗೆ ಬೃಹತ್ ಶಿಲಾ ಸಮಾಧಿಯ ಕಲ್ಲಿನ ಶವಪೆಟ್ಟಿಗೆಯನ್ನೂ ಕಂಡರು.

ಉತ್ಖನನ[ಬದಲಾಯಿಸಿ]

ಪುನಃ 1947ರಲ್ಲಿ ಮಾರ್ಟಿಮರ್ ಹ್ವೀಲರ್ ಅವರ ನೇತೃತ್ವದಲ್ಲಿ ಭಾರತ ಸರ್ಕಾರದ ಮತ್ತು ಮೈಸೂರು ಸರ್ಕಾರದ ಪುರಾತತ್ವ ಇಲಾಖೆಗಳು ಇಲ್ಲಿ ಒಟ್ಟಾಗಿ ಹೆಚ್ಚು ವೈಜ್ಞಾನಿಕವಾದ ಉತ್ಖನನ ನಡೆಸಿದುವು. ಈ ಎಲ್ಲ ಉತ್ಖನನಗಳ ಫಲವಾಗಿ ಅಲ್ಲಿ ಮುಖ್ಯವಾಗಿ ಎರಡು ಸಂಸ್ಕøತಿಗಳ ಅವಶೇಷಗಳಿದ್ದುದು ಸ್ಪಷ್ಟವಾಯಿತು. ಒಂದು ಪ್ರಾಗೈತಿಹಾಸಿಕ ಯುಗದ ಬೃಹಚ್ಛಿಲಾಸಮಾಧಿಯ ಸಂಸ್ಕøತಿ. ಇನ್ನೊಂದು ಇತಿಹಾಸದ ಆರಂಭಕಾಲದ ಸಂಸ್ಕøತಿ. ಮೊದಲನೆಯದು ಅಷ್ಟು ವ್ಯಾಪಕವಾಗಿಲ್ಲದೆ ಅದರ ಕೊನೆಯ ಹಂತದ ಅವಶೇಷಗಳು ಮಾತ್ರ ಕೆಳಗಿನ ಪದರಗಳಲ್ಲಿ ಸ್ವಲ್ಪಮಟ್ಟಿಗೆ ಕಂಡುಬಂದುವು. ಎರಡನೆಯ ಸಂಸ್ಕøತಿ ಹೆಚ್ಚು ವ್ಯಾಪಕವಾಗಿ, ಬಹುಮುಖವಾಗಿ ಬೆಳೆದು ಹರಡಿದ್ದುದು ಸ್ಪಷ್ಟವಾಗಿದೆ. ಈ ಸಂಸ್ಕøತಿ ಕ್ರಿ.ಪೂ. ಸು. 3ನೆಯ ಶತಮಾನದಲ್ಲಿ ಆರಂಭವಾಗಿ ಕ್ರಿ.ಶ. 3ನೆಯ ಶತಮಾನದವರೆಗೂ ಬೆಳೆದುಬಂದಂತೆ ತೋರುತ್ತದೆ. ಇಲ್ಲಿ ದೊರೆತ ಶಾತವಾಹನ ಅರಸರ ಸೀಸದ, ಮಿಶ್ರಲೋಹದ ನಾಣ್ಯಗಳ ಜೊತೆಗೆ ರೋಂ ನಾಣ್ಯಗಳು, ರೂಲೆಟೆಡ್ ಮೃಣ್ಪಾತ್ರೆಗಳು ದೊರೆತಿರುವುದು ಇದರ ಕಾಲವನ್ನು ಗೊತ್ತುಪಡಿಸಲು ಸಹಕಾರಿಯಾಗಿದೆ. ಸುಟ್ಟ ಇಟ್ಟಿಗೆಗಳಿಂದ ದೊಡ್ಡ ಮನೆಗಳನ್ನು ಕಟ್ಟುತ್ತಿದ್ದುದು, ಕಪ್ಪು ಕೆಂಪು ಬಣ್ಣದ ಮಡಕೆಗಳ ಮೇಲೆ ಬಿಳಿಯ ಬಣ್ಣದಿಂದ ರೇಖಾಚಿತ್ರಗಳನ್ನು ಬಿಡಿಸುವುದು ಮತ್ತು ಅವುಗಳ ಕಂಠಗಳ ಮೇಲೆ ಬಗೆಬಗೆಯ ಅಲಂಕರಣಗಳನ್ನು ಕೊರೆದಿರುವುದು, ಪ್ರಶಸ್ತ ಶಿಲೆಗಳಲ್ಲಿ, ದಂತ ಶಂಖ ಮೊದಲಾದವುಗಳಲ್ಲಿ ಮಾಡಿದ ಮಣಿಗಳು ಮತ್ತು ಗಾಜಿನ, ದಂತದ ಬಳೆಗಳು, ಸೀಸದ ನಾಣ್ಯಗಳು ಈ ಸಂಸ್ಕøತಿಯ ಹೆಗ್ಗುರುತುಗಳಾಗಿವೆ. ಕದಂಬ ಮಯೂರ ಶರ್ಮ ಇಲ್ಲಿ ಒಂದು ಕೆರೆಯನ್ನು ಕಟ್ಟಿಸಿದ್ದನೆಂಬುದು ಇಲ್ಲಿ ದೊರೆತ ಶಾಸನವೊಂದರಿಂದ ತಿಳಿಯುತ್ತದೆ

ಉಲ್ಲೇಖನಗಳು[ಬದಲಾಯಿಸಿ]

  • Aiyangar, S. Krishnaswami (1995) [1995]. Some Contributions of South India to Indian Culture. Asian Educational Services. ISBN 81-206-0999-9.
  • Ghosh, Amalananda (1990) [1990]. An Encyclopaedia of Indian Archaeology. BRILL. ISBN 90-04-09262-5.
  • Peter Neal Peregrine, Melvin Ember, Human Relations Area Files Inc. (2001) [2001]. Encyclopedia of Prehistory. Springer. ISBN 0-306-46262-1.CS1 maint: multiple names: authors list (link)