ವಿಷಯಕ್ಕೆ ಹೋಗು

ಗಡಿಯಾರಂ ವೆಂಕಟಶೇಷಶಾಸ್ತ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಡಿಯಾರಂ ವೆಂಕಟಶೇಷಶಾಸ್ತ್ರೀ (1897-1981)[] ಶಿವಭಾರತಂ ಎಂಬ ಮಹಾಕಾವ್ಯವನ್ನು ರಚಿಸಿ ಆಂಧ್ರ ಪ್ರದೇಶದಲ್ಲೆಲ್ಲ ಪ್ರಸಿದ್ಧರಾದ ಕವಿಗಳು.[][]

ರೂಪವತಾರಂ ಶೇಷಶಾಸ್ತ್ರಿಗಳ ಶಿಷ್ಯರಾಗಿ ತೆಲುಗು-ಸಂಸ್ಕೃತ ಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯವನ್ನು ಗಳಿಸಿಕೊಂಡರು. ಬಾಲ್ಯದಲ್ಲಿಯೇ ಇವರಿಗೆ ಅಷ್ಟಾವಧಾನದ ಕಡೆ ಗೀಳು. ಕವಿತೆ ರಚಿಸುವುದು ಇವರಿಗೆ ಹುಟ್ಟಿನಿಂದ ಬಂದ ಕಲೆ. ದುರ್ಭಾಕಂ ರಾಜಶೇಖರ ಅವಧಾನಿಗಳ ಸ್ನೇಹ ಲಭಿಸಿತಾಗಿ ಅವರ ಜೊತೆಗೂಡಿ ಅನೇಕ ಅವಧಾನಗಳನ್ನು ನಡೆಸಿ ಕೀರ್ತಿಗಳಿಸಿ ಅವಧಾನಿ ಪಂಚಾನನ ಎಂಬ ಬಿರುದು ಪಡೆದರು. ಕಡಪ ಜಿಲ್ಲೆಯ ಪ್ರೊದ್ದುಟೂರಿನ ಪುರಸಭೆಯ ಪ್ರೌಢಶಾಲೆಯಲ್ಲಿ ಅನೇಕ ವರ್ಷಗಳ ಕಾಲ ತೆಲುಗು ಪಂಡಿತರಾಗಿದ್ದು ಸಾವಿರಾರು ಜನ ಶಿಷ್ಯರಿಗೆ ವಿದ್ಯಾದಾನ ಮಾಡಿದರು.

ಶಿವಭಾರತಂ ಮಹಾಕಾವ್ಯ

[ಬದಲಾಯಿಸಿ]

ಶಿವಭಾರತಂ ಕಾವ್ಯ ಎಂಟು ಆಶ್ವಾಸಗಳಿಂದ ಕೂಡಿದೆ. ದೇಶಭಕ್ತನೂ ಧೀರಾಗ್ರೇಸರನೂ ಭವಾನೀಭಕ್ತನೂ ಆದ ಶಿವಾಜಿ ಮಹಾರಾಜನ ವೀರಚರಿತ್ರೆಯೇ ಈ ಕಾವ್ಯದ ವಸ್ತು. ಜಟಿಲವಾದ ಚರಿತ್ರೆಯ ವಿಷಯಗಳನ್ನು ಶಾಸ್ತ್ರಿಗಳು ತಮ್ಮ ಭಾವನಾ ಶಕ್ತಿಯಿಂದ ಎಲ್ಲರ ಮನಃಪಟಲದಲ್ಲಿ ಚಿತ್ರಿತವಾಗುವಂತೆ ಮಾಡಿದ್ದಾರೆ. ಇವರ ವರ್ಣನಾಕುಶಲತೆ ಪ್ರಶಂಸಾರ್ಹ. ಶಾಸ್ತ್ರಿಗಳದ್ದು ದೃಶ್ಯ ಸಾಕ್ಷಾತ್ಕಾರವಾಗುವಂತೆ ಬರೆಯಬಲ್ಲ ಅಸಾಧಾರಣ ಪ್ರತಿಭೆ. ಅಚ್ಚತೆಲುಗಿನ ಮಾತುಗಳಲ್ಲಿಯೇ ಗಹನ ವಿಚಾರಗಳನ್ನು ಬಹಳ ಸುಲಭವಾಗಿವರು ಹೇಳಬಲ್ಲವರು. ತಾನಾಜಿ ದುರ್ಗವನ್ನು ಗೆದ್ದು ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ಸನ್ನಿವೇಶವನ್ನು ಓದುಗರು ಎಂದೂ ಮರೆಯಲಾಗದ ರೀತಿಯಲ್ಲಿ ಶಾಸ್ತ್ರಿಗಳು ವರ್ಣಿಸಿದ್ದಾರೆ. ಅಂಥ ಅವಿಸ್ಮರಣೀಯವಾದ ಎಷ್ಟೋ ವರ್ಣನೆಗಳು ಶಿವಭಾರತದಲ್ಲಿ ಸಿಗುತ್ತವೆ. ಭಾಷೆ, ಛಂದಸ್ಸುಗಳಲ್ಲಿ ಇವರು ತೆಲುಗು ಭಾಷೆಯ ಹಿರಿಯ ಕವಿಗಳ ದಾರಿಯಲ್ಲಿಯೇ ನಡೆದು ಪುರಾತನ ಪದ್ಯಜಾತಿಗಳನ್ನೇ ಬಳಸಿಕೊಂಡಿದ್ದಾರೆ. ಭಾಷೆ ಸರಳವಾಗಿದ್ದು ಆಕರ್ಷಕವಾಗಿದೆ. ಪಾಂಡಿತ್ಯದೊಂದಿಗೆ ರಸವಂತಿಕೆ ಹಾಳತವಾಗಿ ಬೆರೆತು ಬಂದಿರುವುದನ್ನಿಲ್ಲಿ ಕಾಣಬಹುದು. ತೆಲುಗಿನ ಕಡೆ ಹೆಚ್ಚಿನ ಒಲವಿದ್ದರೂ ಅಲ್ಲಲ್ಲಿ ಉಚಿತವಾಗಿ ಸಂಸ್ಕೃತವನ್ನು ಬಳಸಿರುವುದರಿಂದ ಇಲ್ಲಿನ ಶೈಲಿ ಮನೋಜ್ಞವಾಗಿದೆ.

ಮೆಚ್ಚುಗೆ, ಬಹುಮಾನ

[ಬದಲಾಯಿಸಿ]

ಶಿವಭಾರತವನ್ನು ಮೆಚ್ಚದ ತೆಲುಗರೇ ಇಲ್ಲ. ವಿದ್ವಾಂಸರು ಈ ಮಹಾಕಾವ್ಯವನ್ನು ಬಾಯಿ ತುಂಬ ಹೊಗಳಿ, ಕವಿಗೆ ಕವಿವಸಂತ, ಕವಿಸಿಂಹ ಮೊದಲಾದ ಬಿರುದುಗಳನ್ನು ಕೊಟ್ಟು ಗೌರವಿಸಿದ್ದಾರೆ. 1944ರಲ್ಲಿ ಹಿಂದೂಪುರದಲ್ಲಿ ಸಭೆ ಸೇರಿದ್ದ ಶ್ರೀಕೃಷ್ಣದೇವರಾಯ ಪರಿಷತ್ತು ಶಾಸ್ತ್ರಿಗಳಿಗೆ 'ಕವಿಗಂಡಪೆಂಡೆಯ' ವನ್ನು ಕೊಟ್ಟು ವಿಶೇಷ ಮನ್ನಣೆ ಸಲ್ಲಿಸಿತು. ಶಿವಭಾರತ ಕೃತಿಗೆ ಅಂದಿನ ಮದ್ರಾಸು ಪ್ರಭುತ್ವ ಬಹುಮಾನ ನೀಡಿತು.

ಉಲ್ಲೇಖಗಳು

[ಬದಲಾಯಿಸಿ]