ಕೊವಾಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊವಾಲಾ
ಹೆಣ್ಣು ಕೊವಾಲಾ
ಗಂಡು ಕೊವಾಲಾ
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಕೆಳವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
P. cinereus
Binomial name
Phascolarctos cinereus
(Goldfuss, 1817)
ಕೊವಾಲಾದ ಆವಾಸ ಸ್ಥಾನ
(ಕಂದು – ಸ್ವಾಭಾವಿಕ, ಕೆಂಪು – ಕೃತಕ (ಮಾನವ ನಿರ್ಮಿತ))

ಕೊವಾಲಾ ಎಂಬುದು ಆಸ್ಟ್ರೇಲಿಯಾ ದೇಶದಲ್ಲಿ ಕಂಡುಬರುವ ಒಂದು ಬಗೆಯ ಪ್ರಾಣಿಯಾಗಿದೆ, ಇದು ಫಾಸ್ಕೋಲ್ಯಾರ್ಕ್ಟಿಡೇ ಎಂಬ ಕುಟುಂಬವನ್ನು ಪ್ರತಿನಿಧಿಸುವ ಏಕೈಕ ಪ್ರಾಣಿಯಾಗಿದೆ. ಇದು ಆಸ್ಟ್ರೇಲಿಯಾ ದೇಶದ ಪೂರ್ವ ಹಾಗೂ ದಕ್ಷಿಣ ಕರಾವಳಿಯಲ್ಲಿ ಕಂಡುಬರುತ್ತದೆ. ಇವುಗಳ ಸಂತತಿ ೨೦ ನೆಯ ಶತಮಾನದ ಆದಿಯಲ್ಲಿ ಬೇಟೆಯಾಡುವಿಕೆಯಿಂದಾಗಿ ಕ್ಷೀಣಿಸಿತ್ತು, ಈಗ ಮತ್ತೆ ಅವುಗಳ ಸಂಖ್ಯೆಯನ್ನು ಸುಧಾರಿಸಲಾಗಿದೆ. ಆಸ್ಟ್ರೇಲಿಯಾ ಸರ್ಕಾರವು ಇವುಗಳನ್ನು ಸಂರಕ್ಷಿತ ಪ್ರಾಣಿತಗಳೆಂದು ಘೋಷಿಸಿದೆ. ಕೊವಾಲಾಗಳು ಟಾಸ್ಮಾನಿಯಾ ಅಥವಾ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಕಂಡುಬರುವುದಿಲ್ಲ.

ಹೆಸರಿನ ಬಗ್ಗೆ[ಬದಲಾಯಿಸಿ]

ಕೊವಾಲಾ ಎಂಬ ಪದವನ್ನು ಧರುಕ್ ಭಾಷೆಯ ಗುಲಾ (gula) ಎಂಬ ಪದದಿಂದ ಸೃಷ್ಟಿಸಲಾಗಿದೆ. /u/ (ಉ) ಅನ್ನು ಲ್ಯಾಟಿನ್ ಅಕ್ಷರಗಳಲ್ಲಿ ಮೊದಲಿಗೆ oo (ಊ) ಎಂದು ಬರೆಯಲಾಗುತ್ತಿದ್ದು, ಬಳಿಕ ಅದು oa (ಒವಾ) ಗೆ ಬದಲಾವಣೆಯನ್ನು ಹೊಂದಿದ್ದರಿಂದ, ಗುಲಾ ಎಂಬುದು ಕೊವಾಲಾ ಎಂದು ಪರಿವರ್ತನೆಯನ್ನು ಹೊಂದಿತು. ಇದರ ಪ್ರಜಾತಿ ಹೆಸರು ಫಾಸ್ಕೋಲ್ಯಾರ್ಕ್ಟೋಸ್ ಎಂಬುದನ್ನು ಗ್ರೀಕ್ ಭಾಷೆಯ ಫಾಸ್ಕೋಲೋಸ್ (Phaskolos) ಅಂದರೆ ಚೀಲ ಹಾಗೂ ಆರ್ಕ್ಟೋಸ್ (Arktos) ಅಂದರೆ ಕರಡಿ ಎಂಬ ಪದಗಳಿಂದ ಪಡೆಯಲಾಗಿದೆ. ಇದರ ಜಾತಿ ಹೆಸರಾದ ಸಿನೇರಿಯಸ್ (Cinereus) ಎಂಬುದು ಲ್ಯಾಟಿನ್ ಶಬ್ದವಾಗಿದ್ದು, "ಬೂದು ಬಣ್ಣದ" ಎಂಬ ಅರ್ಥವನ್ನು ಹೊಂದಿದೆ.

ದೈಹಿಕ ಲಕ್ಷಣ[ಬದಲಾಯಿಸಿ]

ಕೊವಾಲಾಗಳು ಅತ್ಯಂತ ಕಡಿಮೆ ಚಯಾಪಚಯ ಕ್ರಿಯೆಯ ವೇಗವನ್ನು ಹೊಂದಿದ್ದು, ದಿನದ ಹೆಚ್ಚಿನ ಸಮಯವನ್ನು ನಿದ್ರೆಯಲ ಕೊವಾಲಾಗಳು ನೋಡಲು ಬಹುತೇಕ ಅವುಗಳ ಸಮೀಪ ಸಂಬಂಧಿಯಾದ ವೊಂಬ್ಯಾಟ್ ಗಳನ್ನು ಹೋಲುತ್ತವೆ. ವೊಂಬ್ಯಾಟ್ ಗಳಿಗೆ ಹೋಲಿಸಿದರೆ ಕೊವಾಲಾಗಳು ದಪ್ಪನೆಯ ತುಪ್ಪಳ, ದೊಡ್ಡದಾದ ಕಿವಿ ಹಾಗೂ ಉದ್ದನೆಯ ಕೈಕಾಲುಗಳನ್ನು ಹೊಂದಿವೆ. ಮರಗಳನ್ನು ಏರಲು ಅನುಕೂಲವಾಗುವಂತೆ ಕೊವಾಲಾಗಳು ಉದ್ದನೆಯ ಹಾಗೂ ಚೂಪಾದ ಉಗುರುಗಳನ್ನು ಹೊಂದಿವೆ. ಕೊವಾಲಾಗಳು ೫ ಕೆ.ಜಿಯಿಂದ ಹಿಡಿದು ೧೪ ಕೆ.ಜಿ ಯ ವರೆಗೂ ತೂಗುತ್ತವೆ. ಕೊವಾಲಾಗಳು ಕೈಕಾಲುಗಳಲ್ಲಿ ತಲಾ ಐದು ಬೆರಳುಗಳನ್ನು ಹೊಂದಿದ್ದು, ಮರ ಏರುವಾಗ ಹೆಚ್ಚಿನ ಆಧಾರಕ್ಕಾಗಿ ತಲಾ ಎರಡು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಹೆಬ್ಬೆರಳುಗಳನ್ನು ಹೊಂದಿವೆ. ಕೊವಾಲಾಗಳು ಮನುಷ್ಯರಂತೆಯೇ ಬೆರಳಚ್ಚನ್ನೂ ಹೊಂದಿವೆ. ವಾನರ ಜಾತಿಯನ್ನು ಹೊರತುಪಡಿಸಿದರೆ, ಬೆರಳಚ್ಚನ್ನು ಹೊಂದಿರುವ ಕೆಲವೇ ಕೆಲವು ಪ್ರಾಣಿಗಳಲ್ಲಿ ಕೊವಾಲಾಗಳೂ ಸೇರಿವೆ. ಕೊವಾಲಾಗಳ ಬೆರಳಚ್ಚು ಮನುಷ್ಯರದ್ದಕ್ಕೆ ಅದೆಷ್ಟು ಸಾಮ್ಯತೆಯನ್ನು ಹೊಂದಿದೆಯೆಂದರೆ, ಇಲೆಕ್ಟ್ರೋನ್ ಸೂಕ್ಷ್ಮದರ್ಶಕದ ಸಹಾಯದಿಂದಲೂ ಇವೆರಡರ ಮಧ್ಯೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟಸಾಧ್ಯವಾಗಿದೆ. ಕೊವಾಲಾಗಳ ದಂತಪಂಕ್ತಿಯು ಅವುಗಳ ಆಹಾರಾಭ್ಯಾಸಕ್ಕೆ ಅನುಗುಣವಾಗಿ ವಿನ್ಯಾಸ ಹೊಂದಿದೆ. ಆಹಾರವನ್ನು ಕತ್ತರಿಸಲು ಅನುಕೂಲವಾಗುವಂತೆ ಹರಿತವಾದ ಹಲ್ಲುಗಳು ಬಾಯಿಯ ಮುಂಭಾಗದಲ್ಲೂ, ಅರೆಯಲು ಅನುಕೂಲವಾಗುವಂತೆ ಅಗಲವಾದ ಹಲ್ಲುಗಳು ದವಡೆಯ ಹಿಂಭಾಗದಲ್ಲೂ ಇವೆ. ಪ್ರಾಚೀನ ಕೊವಾಲಾಗಳಿಗಿಂತ ಇಂದಿನ ಕೊವಾಲಾಗಳ ಮೆದುಳಿನ ಗಾತ್ರ ಸಾಕಷ್ಟು ಕುಗ್ಗಿದ್ದು, ಕಡಿಮೆ ಶಕ್ತಿಯನ್ನು ಹೊಂದಿರುವ ಆಹಾರವನ್ನು ಸೇವಿಸುವುದೇ ಇದಕ್ಕೆ ಕಾರಣ ಎಂದು ಊಹಿಸಲಾಗಿದೆ. ಸಾಮಾನ್ಯವಾಗಿ ಕೊವಾಲಾಗಳು ಅತ್ಯಂತ ಮೌನದಿಂದಿರುವ ಪ್ರಾಣಿಗಳಾಗಿದ್ದರೂ, ಗಂಡು ಕೊವಾಲಾಗಳು ಸಂತಾನೋತ್ಪತ್ತಿಯ ಕಾಲದಲ್ಲಿ ಅತ್ಯಂತ ಜೋರಾದ ಪ್ರಣಯ ಸೂಚಕ ಕರೆಯನ್ನು ಹೊರಹಾಕುತ್ತವೆ. ಇದನ್ನು ಅನೇಕ ಕಿ.ಮೀ ಗಳಷ್ಟು ದೂರದಿಂದಲೂ ಕೇಳುವಷ್ಟು ಜೋರಾಗಿರುತ್ತದೆ. ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಕೊವಾಲಾಗಳು ಮಗುವಿನ ಅಳುವಿಗೆ ಸಮನಾದ ಕೂಗನ್ನು ಹೊರಹಾಕುವುದೂ ವರದಿಯಾಗಿದೆ.

ಜೀವನ ಚಕ್ರ[ಬದಲಾಯಿಸಿ]

ಮರಿ ಕೊವಾಲಾ

ಹೆಣ್ಣು ಕೊವಾಲಾಗಳು ೨-೩ ವರ್ಷ ವಯಸ್ಸಿನಲ್ಲಿಯೂ, ಗಂಡು ಕೊವಾಲಾಗಳು ೩-೪ ವರ್ಷ ವಯಸ್ಸಿನಲ್ಲಿಯೂ ಪ್ರೌಢತೆಯನ್ನು ಹೊಂದುತ್ತವೆ. ಆರೋಗ್ಯವಂತ ಹೆಣ್ಣು ಕೊವಾಲಾವೊಂದು ವರ್ಷವೊಂದಕ್ಕೆ ಒಂದು ಮರಿಯಂತೆ ೧೨ ವರ್ಷಗಳ ಕಾಲ ಮರಿ ಇಡುವ ಸಾಮರ್ಥ್ಯವನ್ನು ಹೊಂದಿದೆ. ಗರ್ಭಧಾರಣೆಯ ಅವಧಿ ೩೫ ದಿನಗಳು. ಅವಳಿ ಮರಿಗಳು ತುಂಬಾ ಅಪರೂಪ; ಪ್ರಪಂಚದ ಪ್ರಪ್ರಥಮ ಧೃಢೀಕರಿಸಲಾದ ಅವಳಿ ಕೊವಾಲಾಗಳಾದ "ಯೂಕಾ" ಹಾಗೂ "ಲಿಪ್ಟಸ್", ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯಲ್ಲಿ ಎಪ್ರಿಲ್ ೧೯೯೯ ರಂದು ಜನಿಸಿದವು. ಗಂಡು, ಹೆಣ್ಣುಗಳ ಮಿಲನವು ಡಿಸೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳಿನ ವರೆಗೆ, ದಕ್ಷಿಣಾರ್ಧ ಗೋಳದ ಬೇಸಿಗೆಯ ಸಮಯದಲ್ಲಿ ನಡೆಯುತ್ತದೆ. ಮರಿ ಕೊವಾಲಾಗಳು ರೋಮವನ್ನು ಹೊಂದಿರದೇ, ಶ್ರವಣ ಹಾಗೂ ದೃಷ್ಟಿಹೀನವಾಗಿರುತ್ತವೆ. ಹುಟ್ಟಿದ ತಕ್ಷಣವೇ ಮರಿಗಳು ತೆವಳಿಕೊಂಡು ತಾಯಿಯ ಹೊಟ್ಟೆಯ ಭಾಗದಲ್ಲಿರುವ ಚೀಲದೊಳಕ್ಕೆ ಹೋಗುತ್ತವೆ. ಹುಟ್ಟುವಾಗ ಇವು ಒಂದು ಇಂಚಿನ ಕಾಲು ಭಾಗದಷ್ಟು ದೊಡ್ಡದಾಗಿರುತ್ತವೆ. ಮರಿಯು ತಾಯಿಯ ಚೀಲದಲ್ಲಿ ಕೇವಲ ಹಾಲನ್ನು ಕುಡಿಯುತ್ತಾ ಆರು ತಿಂಗಳುಗಳ ಕಾಲ ಅವಿತಿರುತ್ತದೆ. ಈ ಅವಧಿಯಲ್ಲಿ ಅದಕ್ಕೆ ರೋಮ, ಕಣ್ಣು ಹಾಗೂ ಕಿವಿಗಳು ಬೆಳೆಯುತ್ತವೆ. ಮುಂದಿನ ಸುಮಾರು ಆರು ತಿಂಗಳುಗಳ ಕಾಲ ಅವು ತಾಯಿಯ ಚೀಲದೊಳಗೆ, ಬೆನ್ನಿನ ಮೇಲೆ ಕುಳಿತುಕೊಂಡು, ನೀಲಗಿರಿ ಎಲೆ ಹಾಗೂ ತಾಯಿಯ ಹಾಲನ್ನು ಕುಡಿಯುತ್ತಾ ಜೀವಿಸುತ್ತವೆ. ಈ ಅವಧಿಯ ಬಳಿಕ ಹೆಣ್ಣು ಮರಿ ಕೊವಾಲಾಗಳು ಸಮೀಪದ ಪ್ರದೇಶಕ್ಕೆ ಸ್ವತಂತ್ರವಾಗಿ ಹೊರಟು ಹೋಗುತ್ತವೆ, ಗಂಡು ಮರಿಗಳು ತಾಯಿಯೊಡನೆಯೇ ಅದೇ ಪ್ರದೇಶದಲ್ಲಿ ಸುಮಾರು ಮೂರು ವರ್ಷಗಳ ಕಾಲ ಜೀವಿಸುತ್ತವೆ.

ಆಹಾರ ಪದ್ಧತಿ[ಬದಲಾಯಿಸಿ]

ಕೊವಾಲಾಗಳು ಬಹುತೇಕ ನೀಲಗಿರಿ ಎಲೆಯನ್ನು ತಿಂದು ಬದುಕುತ್ತವೆ. ಇತರ ಸಸ್ತನಿಗಳಿಗಿಂತ ಕೊವಾಲಾಗಳ ಚಯಾಪಚಯ ಕ್ರಿಯೆಯ ವೇಗ ತುಂಬಾ ಕಮ್ಮಿ, ಹಾಗಾಗಿ ಇವು ದಿನದ ಹೆಚ್ಚಿನ ಪಾಲು ಅಂದರೆ ಸುಮಾರು ೧೬-೧೮ ಗಂಟೆಗಳ ಕಾಲ ನಿದ್ರೆಯಲ್ಲಿ ಕಳೆಯುತ್ತವೆ. ಈ ಮೂಲಕ ಅವು, ನೀಲಗಿರಿ ಎಲೆಯಿಂದ ಸಿಗುವ ಕಡಿಮೆ ಶಕ್ತಿಯನ್ನು ಸಮದೂಗಿಸುತ್ತವೆ. ಕೊವಾಲಾಗಳು ತಾವು ಎಚ್ಚರವಿರುವ ಐದು ಗಂಟೆಗಳಲ್ಲಿ ಮೂರು ಗಂಟೆಗಳ ಕಾಲ ತಿನ್ನುತ್ತವೆ. ತಿನ್ನುವುದಕ್ಕೆ ನಿರ್ದಿಷ್ಟ ಸಮಯವೆಂದಿಲ್ಲದಿದ್ದರೂ, ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ ತಿನ್ನುತ್ತವೆ. ದಿನವೊಂದಕ್ಕೆ ಕೊವಾಲಾವೊಂದು ಸುಮಾರು ೫೦೦ ಗ್ರಾಂ ಗಳಷ್ಟು ನೀಲಗಿರಿ ಎಲೆಯನ್ನು ತಿನ್ನುತ್ತವೆ. ಇವುಗಳ ಜೀರ್ಣಾಂಗ ವ್ಯವಸ್ಥೆಯು ನೀಲಗಿರಿ ಎಲೆಗಳಲ್ಲಿರುವ ವಿಷ ಪದಾರ್ಥಗಳನ್ನು ಹೊರಹಾಕುವಂತೆಯೂ, ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳುವಂತೆಯೂ ಮಾರ್ಪಾಡು ಹೊಂದಿದೆ.

ಉಲ್ಲೇಖನ[ಬದಲಾಯಿಸಿ]

[೧] [೨] [೩]

  1. https://www.natgeokids.com/uk/discover/animals/general-animals/ten-facts-about-koalas/
  2. https://www.britannica.com/animal/koala
  3. https://www.savethekoala.com/about-koalas/interesting-facts
"https://kn.wikipedia.org/w/index.php?title=ಕೊವಾಲಾ&oldid=863645" ಇಂದ ಪಡೆಯಲ್ಪಟ್ಟಿದೆ