ಕೈಫಿಯತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೈಫಿಯತ್ತು ಪಾರ್ಸಿಭಾಷೆಯ ಈ ಮಾತಿಗೆ ಸಮಾಚಾರ ಎಂಬುದು ಸಾಮಾನ್ಯವಾದ ಅರ್ಥ. ಇಂದೂ ನ್ಯಾಯಸ್ಥಾನಗಳಲ್ಲಿ ಸಾಕ್ಷಿ ನುಡಿಯುವವರ ಕಡೆಯಿಂದ ಪ್ರಮಾಣ ಮಾಡಿಸಿ ಪಡೆಯುವ ಹೇಳಿಕೆಗಳನ್ನು ಕೈಫೀತು ಅನ್ನುತ್ತಾರೆ. ಈ ಮಾತು ಬಿಜಾಪುರಆದಿಲ್‍ಷಾಹಿಗಳ ಕಾಲದಲ್ಲಿ ಕನ್ನಡ ಭಾಷೆಗೆ ಬಂದು ಸೇರಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಕನ್ನಡ ನಾಡಿನಲ್ಲೆಲ್ಲ ವಿಶೇಷವಾಗಿ ಪ್ರಚುರಗೊಂಡಿತು. ಅಂದಿಗಾಗಲೇ ಈ ಮಾತಿನ ಅರ್ಥ ವಿಶಾಲಗೊಂಡು ಚಾರಿತ್ರಿಕ ನಿರೂಪಣೆಯೆಂಬ ಬಣ್ಣವೂ ಬಂದಿತು.

ಇತಿಹಾಸ[ಬದಲಾಯಿಸಿ]

ಹೈದರ್ ಮತ್ತು ಟಿಪ್ಪುಗಳ ಕಾಲದಲ್ಲಿ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ಅನೇಕ ಮಂದಿ ಇತಿಹಾಸಪ್ರಿಯರಾದ ಪಾರ್ಸಿಲಿಪಿಕಾರರಿದ್ದರು. ಒಂದು ಐತಿಹಾಸಿಕ ಘಟನೆ ಕುರಿತು ಯಾರು ಏನು ಹೇಳಿದರೂ ತತ್‍ಕ್ಷಣ ಅವರು ಅದನ್ನು ಬರೆದಿಡುತ್ತಿದ್ದರು. ಹೀಗಾಗಿ ಶ್ರೀರಂಗಪಟ್ಟಣದಲ್ಲಿ ಅನೇಕ ಕೈಫಿಯತ್ತುಗಳ ಸಂಗ್ರಹವಾಗಿದ್ದವು. ಅವುಗಳಲ್ಲಿ ಬಹಳಷ್ಟು ಕೈಫಿಯತ್ತುಗಳ ನಾಲ್ಕನೆಯ ಮೈಸೂರು ಯುದ್ಧದ ಕಾಲದಲ್ಲಿ ಬಿದ್ದ ಬೆಂಕಿಯಿಂದ ನಾಶವಾದುವು. ಮುಂದೆ ಪೂರ್ಣಯ್ಯನ ಮುಕ್ತಿಯಿಂದ ರಾಜ್ಯ ಕಳೆದುಕೊಂಡ ಪಾಳೆಯಗಾರರು ತಮ್ಮ ರಾಜ್ಯಗಳನ್ನು ಹಿಂದಕ್ಕೆ ಬರೆಸಿ,ಮದ್ರಾಸಿನಲ್ಲಿದ್ದ ಬ್ರಿಟಿಷರಿಗೆ ಹಾಗೂ ಮೈಸೂರು ಅರಸರಿಗೆ ಸಲ್ಲಿಸಲು ಸಿದ್ಧಪಡಿಸಿದರು. ಇದು ಕರ್ನಾಟಕಕ್ಕೆ ಹೊಸದಾದ್ದರಿಂದಲೂ, ಅರಮನೆಯ ಕಾರಕೂನರಿಗೆ ಕೈಫಿಯತ್ ಎಂಬ ಪದ ಪರಿಚಯವಿದ್ದದ್ದರಿಂದಲೂ ಅದೇ ಹೆಸರಿನಲ್ಲಿ ಇದನ್ನು ಕರೆದರು. ಈ ಕೈಫಿಯತ್ತುಗಳ ಮೂಲಕ ತಮ್ಮ ಗತ ಇತಿಹಾಸದ ವೈಭವವನ್ನು ವೈಭವೀಕರಿಸಿ ಹೇಳಿರುತ್ತಾರೆ. ಈ ಕೈಫಿಯತ್ತುಗಳನ್ನು ಹೀಗಾಗಿ ಹೇಳಿ ಬರೆಯಿಸುವವರ ಗುಂಪೊಂದು, ಹೇಳಿದ್ದನ್ನು ಬರೆದಿಡುವವರ ಗುಂಪೊಂದು-ಇವೆರಡೂ ಗುಂಪುಗಳ ಸಹಕಾರ ಫಲವಾಗಿ ಕೈಫಿಯತ್ತುಗಳು ವಿಪುಲವಾಗಿ ಸೃಷ್ಟಿಯಾದುವು. ಸಾಮಾನ್ಯವಾಗಿ ಇವೆಲ್ಲ ಪಾಳೆಯಗಾರರ ಜೀವನ ಚರಿತ್ರೆಗಳೇ ಆಗಿದ್ದುವು.

ಇತರ ಭಾಷೆಗಳಲ್ಲಿ[ಬದಲಾಯಿಸಿ]

ಶ್ರೀರಂಗಪಟ್ಟಣದ ಪತನಾನಂತರ ಪಾರ್ಸಿ ಭಾಷೆಗೆ ಇದ್ದ ರಾಜಪದ ಕೊಂಚಕಾಲ ಕನ್ನಡಕ್ಕೂ ಮರಾಠಿಗೂ ಲಭ್ಯವಾಯಿತು. ಅನೇಕ ಪಾರ್ಸಿ ಕೈಫಿಯತ್ತುಗಳು ಕನ್ನಡಕ್ಕೂ ಮರಾಠಿಗೂ ಭಾಷಾಂತರಗೊಂಡವು. ಈ ಹಂತದಲ್ಲಿ ಕೈಫಿಯತ್ತು ಕಪಿಯಾತು ಆಯಿತು.

ಕೈಫಿಯತ್ತುಗಳ ಸಂಗ್ರಹ[ಬದಲಾಯಿಸಿ]

ದಕ್ಷಿಣ ಭಾರತದಲ್ಲಿ ಸಂಚಾರ ಮಾಡಿ, ಇತಿಹಾಸ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಪ್ರಾಚೀನ ವಸ್ತು, ಗ್ರಂಥ ಮುಂತಾದವನ್ನು ಸಂಗ್ರಹ ಮಾಡಿದವರಲ್ಲಿ ಮುಖ್ಯರಾದ ಬುಕ್ಯಾನನ್, ಎಲಿಯಟ್,ಕರ್ನಲ್ ಮೆಕೆಂಜಿ. ಸಿ.ಪಿ. ಬ್ರೌನ್, ವಿಲ್‍ಕ್ಸ್-ಮೊದಲಾದವರು ತಾವು ಭೇಟಿ ಮಾಡಿದ ಹಳಬರನೇಕರ ಕಡೆಯಿಂದ ಕೈಫಿಯತ್ತುಗಳನ್ನು ಪಡೆದರು. ಇವುಗಳಲ್ಲೆಲ್ಲ ಮೆಕೆಂಜಿ ಸಂಗ್ರಹವೇ ಬಹಳ ದೊಡ್ಡದು; ಪ್ರಖ್ಯಾತವೂ ಅಮೂಲ್ಯವೂ ಆದುದು. ಈ ಸಂಗ್ರಹದ ಬಹುಭಾಗ ಲಂಡನ್ನಿನ ಇಂಡಿಯ ಆಫೀಸ್ ಗ್ರಂಥಾಲಯ ಸೇರಿತು. ಕೊಂಚ ಭಾಗ ಕಲ್ಕತ್ತೆಯ ಇಂಪೀರಿಯಲ್ ಗ್ರಂಥಾಲಯಕ್ಕೆ ಹೋಯಿತು. ಉಳಿದ ಅಷ್ಟಿಷ್ಟು ಮದ್ರಾಸಿನ ಓರಿಯಂಟಲ್ ಹಸ್ತಪ್ರತಿ ಗ್ರಂಥಾಲಯಕ್ಕೆ ಬಂದು ಬಿತ್ತು.

ಮೈಸೂರು ದೇಶದ ಇತಿಹಾಸ ಬರೆಯಲು ನಿಯುಕ್ತನಾದ ವಿಲ್‍ಕ್ಸ್ ಶ್ರೀರಂಗಪಟ್ಟಣಕ್ಕೆ ಬಂದು ದೇಶದ ಚರಿತ್ರೆಗೆ ಸಂಬಂಧಪಟ್ಟ ಸಾಹಿತ್ಯವನ್ನೆಲ್ಲ ದಿವಾನ್ ಪೂರ್ಣಯ್ಯನವರ ಸಹಕಾರದಿಂದ ಪಡೆದುಕೊಂಡ. ಒಡೆಯರ ಮನೆತನದ ಅರಮನೆ ಸರಸ್ವತೀ ಭಂಡಾರವೆಲ್ಲ ಅವನದಾಯಿತು. ಟಿಪ್ಪುವಿನ ಮರಣಾನಂತರ ಅವನ ಅಮೂಲ್ಯವಾದ ಸಮಗ್ರ ಗ್ರಂಥಭಂಡಾರ ವಿಲಾಯಿತಿಗೆ ಸಾಗಿತು. ಅಲ್ಲದೆ ಕೈಫಿಯತ್ತುಗಳ ರಚನೆಗಾಗಿಯೇ ಪೂರ್ಣಯ್ಯನವರು ದೇಶದ ನಾನಾ ಭಾಗಗಳ ಹಿರಿಯರನ್ನಾರಿಸಿ ಕರೆಸಿದರು. ಅವರಲ್ಲಿ ಕೆಲವರು ಇತಿಹಾಸಕಾರರೂ ಇದ್ದರು. ಪೂರ್ಣಯ್ಯನವರ ಅನುಜ್ಞೆಯಂತೆ ಅವರೆಲ್ಲ ಇತಿಹಾಸ ರಚನೆಯಲ್ಲಿ ತೊಡಗಿದರು. ಕೆಲವರು ತಾವೇ ಬರೆದರು; ಬರಹಗಾರರಲ್ಲದ ಇತರರು ಹೇಳಿ ಬರೆಯಿಸಿದರು. ನೂರಾರು ಕೈಫಿಯತ್ತುಗಳು ಸಿದ್ಧವಾದುವು. ಈ ಗ್ರಂಥ ರಾಶಿಯನ್ನೆಲ್ಲ ಅಂದರೆ ಇತಿಹಾಸದ ಮೂಲ ಸಾಮಗ್ರಿಯನ್ನೆಲ್ಲ ವಿಲ್‍ಕ್ಸ್ ತೆಗೆದುಕೊಂಡು ಹೋದ. ಹೀಗಾಗಿ ಮೈಸೂರು ಚರಿತ್ರೆಗೆ ಬೇಕಾದ ಕೈಫಿಯತ್ತುಗಳೆಲ್ಲ ವಿದೇಶಿ ಗ್ರಂಥ ಭಂಡಾರವನ್ನು ಸೇರಿದುವು. ಅನೇಕ ಜಾತಿಗಳವರು ತಮ್ಮ ಜಾತಿ ಇತಿಹಾಸವನ್ನು ಬರೆಸಿ ಅದನ್ನೂ ಕೈಫಿಯತ್ತು ಎಂದು ಕರೆದಿರುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: