ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್, ಇವರೊಬ್ಬ ಕ್ರೈಸ್ತ ಲೇಖಕರು. ಕರ್ನಾಟಕದ ಕ್ರೈಸ್ತ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದು ಇವರ ಹವ್ಯಾಸ, ಸಂತ ಫಿಲೋಮಿನಾ ಐಟಿಐಯ ಸಂಸ್ಥಾಪಕರಲ್ಲಿ ಒಬ್ಬರು, ಎಂಟನೆಯ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಗಲೇ ಬರೆಯಲುಪಕ್ರಮಿಸಿದ ಇವರ ಪೆನ್ನು ಬರೆಯುವುದನ್ನು ಇನ್ನೂ ನಿಲ್ಲಿಸಲಿಲ್ಲ. ಇವರ ಬರಹಗಳು ಅತ್ಯಂತ ಆಕರ್ಷಕವಾಗಿರುತ್ತದೆ. ಪತ್ತೆದಾರಿ ಕತೆಗಳನ್ನು ಬರೆಯುವುದರಲ್ಲೂ ಇವರು ಪಳಗಿದ್ದಾರೆ. ಮೈಸೂರಿನ ದೂತ ಪತ್ರಿಕೆಗಾಗಿ ಇವರು ಅನೇಕ ಧಾರಾವಾಹಿಗಳನ್ನು ಬರೆದು ಕೊಟ್ಟಿದ್ದಾರೆ. ಕವನ, ಲೇಖನಗಳನ್ನು ಬರೆಯುವಾಗಲೂ ಇವರ ಕೈ ಸರಾಗವಾಗಿ ಚಲಿಸುತ್ತದೆ. ಇತ್ತೀಚೆಗೆ ಅಂದರೆ, ೨೦೦೮ರಲ್ಲಿ ಇವರು ಬರೆದ 'ಹಿಂದೂ ಕ್ರೈಸ್ತ ಗುರು' ಪುಸ್ತಕದ ರೂಪವನ್ನು ಪಡೆಯಿತು.
ಪರಿಚಯ
[ಬದಲಾಯಿಸಿ]ಇವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಬಳಿಯ ಸಣ್ಣ ಗ್ರಾಮದಲ್ಲಿ. ತಂದೆ ಕೆ.ಸಿ.ಜೋಸೆಫ್, ತಾಯಿ ಫಿಲೋಮಿನ. ಹನ್ನೊಂದು ಜನ ಮಕ್ಕಳಲ್ಲಿ ಇವರೇ ಎಲ್ಲಕ್ಕಿಂತ ಹಿರಿಯರು. ಇವರು ಹುಟ್ಟಿದ್ದು ೧೯೫೭, ನವೆಂಬರ್ ೨೩ ರಂದು. ತಮಗಿದ್ದ ಜಮೀನನ್ನು ತಮ್ಮ ಸಹೋದರರಿಗೆ ಕೊಟ್ಟು ಕಡೂರಿಗೆ ಬಂದು ನೆಲಸಿದ ಕೆ.ಸಿ.ಜೋಸೆಫ್ ದಂಪತಿಗಳು ತಮ್ಮದೇ ಆದ ಸೈಂಟ್ ಜಾರ್ಜ್ ಟೈರ್ಸ್ ಎಂಬ ಸಣ್ಣ ಪ್ರಮಾಣದ ಕೈಗಾರಿಕೋದ್ಯಮವನ್ನು ಸ್ಥಾಪಿಸಿ ಬೆಳೆಸಿದ್ದಾರೆ.
ಜಾರ್ಜ್ ರವರು ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಕಡೂರಿನಲ್ಲೇ. ಇವರನ್ನು ಬರೆಯಲು ಪ್ರೇರೇಪಿಸಿದ್ದು ಅಂದು ಕಡೂರಿನ ನಿತ್ಯಾಧಾರ ಮಾತೆ ದೇವಾಲಯದ ಗುರುಗಳಾದ ಸ್ವಾಮಿ ಜೋ ಮೇರಿ ಲೋಬೊರವರು. ಇವರು ಮೊದಲ ಬರೆವಣಿಗೆ ಪ್ರಕಟವಾದದ್ದು ಚಿಕ್ಕಮಗಳೂರಿನ ನವಜ್ಯೋತಿ ಪತ್ರಿಕೆಯಲ್ಲಿ. ಸ್ವಾಮಿ ಪಾಸ್ಕಲ್ ಮರಿಯಪ್ಪ ಮತ್ತು ಸ್ವಾಮಿ ಜಾರ್ಜ್ ಡಿಸೋಜಾ ಇವರುಗಳು ಕೆ.ಜೆ.ಜಾರ್ಜ್ ರವರ ಬರವಣಿಗೆಗೆ ಉತ್ತೇಜನ ನೀಡಿ ಬೆಂಬಲಿಸಿದರು. ಇವರ ಪತ್ನಿ ಶ್ರೀಮತಿ ಫಿಲೋಮಿನ.ಎಂ.ಪಿ ರವರು ಬಿಳಿಕೆರೆ ಬಳಿಯ ಹಳೇಬೀಡು ಎಂಬ ಗ್ರಾಮದ ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಅವರು ಹುಣಸೂರು ತಾಲೋಕಿನ ಗೆರಸನ ಹಳ್ಳಿ ಎಂಬ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ವಾಸ್ತವ್ಯವೂ ಬಿಳಿಕೆರೆಯಲ್ಲೆ ಆಯಿತು. ಪ್ರಶಾಂತ್ ಮತ್ತು ಪ್ರತಾಪ್ ಈ ದಂಪತಿಗಳ ಪುತ್ರರು. ಬಹುತೇಕರು, ಅದೂ ಧರ್ಮಕ್ಷೇತ್ರದ ನೆರಳಿನಲ್ಲಿ ಜೀವಿಸುವವರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಸುವುದು ವಾಡಿಕೆ. ಜಾರ್ಜ್‌ರವರು ಇದಕ್ಕೆ ಅಪವಾದ. ತಮ್ಮ ಮಕ್ಕಳನ್ನು ಗ್ರಾಮೀಣ ಪರಿಸರದ ಸರಕಾರಿ ಶಾಲೆಗಳಲ್ಲಿ ಕಲಿಯಲು ಪ್ರೋತ್ಸಾಹಿಸಿದರು. ಅವರೂ ಸೇರಿದಂತೆ, ಅವರ ಪತ್ನಿ ಮತ್ತು ಮಕ್ಕಳು ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದ್ದಾರೆ ಎಂಬುದು ಇಲ್ಲಿ ಪ್ರಸ್ತುತ.
ದೂತನ ಖಾಯಂ ಲೇಖಕರಾಗಿ
[ಬದಲಾಯಿಸಿ]ಇವರನ್ನು ಮೈಸೂರಿಗೆ ಆಹ್ವಾನಿಸಿ ಇವರನ್ನು ಒಬ್ಬ ಲೇಖಕನನ್ನಾಗಿ ಪ್ರಖ್ಯಾತಿಗೊಳಿಸಿದವರು ಸ್ವಾಮಿ ಡಾ.ದಯಾನಂದ ಪ್ರಭುರವರು. ಕೆ.ಜಿ.ಎಫ್.ನ 'ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್'ನಲ್ಲಿ ಉದ್ಯೋಗಿಯಾಗಿದ್ದ ಇವರ ಪ್ರತಿಭೆಯನ್ನು ಗುರುತಿಸಿದ ಡಾ.ಪ್ರಭುರವರು ದೂತ ಕ್ರೈಸ್ತ ಮಾಸಪತ್ರಿಕೆಯನ್ನೂ ಹಾಗೂ ಸಂತ ಫಿಲೋಮಿನ ವಸತಿಗೃಹವನ್ನು ನೋಡಿಕೊಳ್ಳಲು ಇವರ ಸಹಾಯವನ್ನು ಕೋರಿ ಇವರನ್ನು ಮೈಸೂರಿಗೆ ಆಹ್ವಾನಿಸಿದರು. ಕೇಂದ್ರ ಸರಕಾರದ ಉದ್ಯೋಗಿಯಗಿದ್ದ ಜಾರ್ಜ್ ರವರು ತಮ್ಮ ಉದ್ಯೋಗವನ್ನು ಬಿಟ್ಟು ಬರಲು ಒಪ್ಪಲಿಲ್ಲ. ಅದೆ ಸಮಯದಲ್ಲಿ ಸಂತ ಫಿಲೋಮಿನ ಚರ್ಚ್ ನ ಪ್ರಧಾನ ಗುರುಗಳಾದ ಸ್ವಾಮಿ ಗ್ರೆಗೊರಿಯುಸ್ ಮಾಡಪಿಳ್ಳಿಯವರು ನಡೆಸುತ್ತಿರುವ ಕಾರ್ಯಗಾರವೊಂದನ್ನು ನೋಡಿಕೊಳ್ಳಲು, ಅವರ ಮೇಲ್ವಿಚಾರಣೆಯ ಅನಾಥಾಲಯದಲ್ಲಿ ಎಸೆಸೆಲ್ಸಿ ಮುಗಿಸಿದ ಮಕ್ಕಳಿಗೆ ಕೈಗಾರಿಕೆಯಲ್ಲಿ ತರಬೇತಿಯನ್ನು ನೀಡಿ ಅವರ ಭವಿಷ್ಯವನ್ನು ರೂಪಿಸಲು ತಕ್ಕ ವ್ಯಕ್ತಿಯೊಬ್ಬರ ಅನ್ವೇಷಣೆಯಲ್ಲಿ ಇರುವುದಾಗಿಯೂ ತಿಳಿಸಿ, ದೂತ ಪತ್ರಿಕೆ, ವಸತಿಗೃಹ ಹಾಗೂ ಕಾರ್ಯಾಗಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವುದರ ಮೂಲಕ ಹೆಚ್ಚಿನ ಸಂಭಾವನೆಯನ್ನು ಪಡೆಯಬಹುದೆಂದು ಹೇಳಿ ಮೈಸೂರಿಗೆ ಜಾರ್ಜ್ ರವರನ್ನು ಆಹ್ವಾನಿಸಿದರು. ಸಾಕಷ್ಟು ಯೋಚಿಸಿದ ಬಳಿಕ ತಮ್ಮ ಒಪ್ಪಿಗೆಯನ್ನು ನೀಡಿದ ಶ್ರೀಯುತರು ೧೯೮೨, ಮೇ ೧೫ರಂದು ಮೈಸೂರಿಗೆ ಬಂದರಲ್ಲದೇ ದೂತನ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವನ್ನೂ ವಹಿಸಿದರು.
ಸಂತ ಫಿಲೋಮಿನಾ ಐಟಿಐನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ
[ಬದಲಾಯಿಸಿ]೮೦ರ ದಶಕದಲ್ಲಿ ರಾಜ್ಯ ಸರಕಾರ ಮೈಸೂರು ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಹಾಕಿಕೊಡಿತ್ತು. ಇದನ್ನು ಮನಗಂಡ ಫಾದರ್ ಗ್ರೆಗೊರಿಯುಸ್ ರವರು ತಾವು ನಡೆಸುತ್ತಿರುವ ಅನಾಥಾಲಯದ ಮಕ್ಕಳ ಮುಂದಿನ ಭವಿಷ್ಯವನ್ನು ಮನದಲ್ಲಿರಿಸಿಕೊಂಡು, ಅವರಿಗೆ ತರಬೇತಿಯನ್ನು ನೀಡಲು ಕಾರ್ಯಾಗಾರವೊಂದನ್ನು ಸ್ಥಾಪಿಸಿದರೆ ಹೇಗೆ ಎಂದು ಆಲೋಚಿಸಿ, ಹೊಸ ಕಟ್ಟಡದೊಂದಿಗೆ, ಕೆಲವು ಯಂತ್ರಗಳನ್ನು ಖರೀದಿಸಲು ಹಾಲೆಂಡಿನ ಸಂಸ್ಥೆಯೊಂದಿಗೆ ಸಂಪರ್ಕಿಸಿದ್ದರು. ಅವರ ಯೋಜನೆಗೆ ಅಸ್ತು ಎಂದ ಹಾಲೆಂಡ್ ಸಹಾಯ ಹಸ್ತ ನೀಡಲು ಮುಂದಾಗಿತ್ತು. ಅವರ ಸಹಾಯದಿಂದ ಕೆಲವು ಯಂತ್ರೋಪಕರಣಗಳನ್ನು ಖರೀದಿಸಿದ್ದ ಸ್ವಾಮಿ ಗ್ರೆಗೊರಿಯುಸ್ ರವರು ಸಂತ ಫಿಲೋಮಿನ ವಸತಿಗೃಹ ಮತ್ತು ಗುಡ್ ಶೆಪರ್ಡ್ ಕಾನ್ವೆಂಟ್ ನಡುವಿನ, ಅವರದೇ ಸುಪರ್ದಿಯಲ್ಲಿದ್ದ ಒಂದು ಕಟ್ಟಡವನ್ನು ಉಪಯೋಗಿಸಿ ಅದರಲ್ಲಿ ಯಂತ್ರಗಳನ್ನು ಅಳವಡಿಸಿ ಕಾರ್ಯಾಗಾರವನ್ನು ಸ್ಥಾಪಿಸದ್ದರು. ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡ ಕೆ.ಜೆ.ಜಾರ್ಜ್ ರವರು ಮುಂದೆ ಅದನ್ನು ಹಾಗೆಯೇ ಉಳಿಸಿ ತರಬೇತಿಯನ್ನು ನೀಡಿದರೆ ತರಬೇತಿ ಪಡೆದವರಿಗೆ ಭವಿಷ್ಯವಿರುವುದಿಲ್ಲವೆಂದು ಯೋಚಿಸಿ, ಕೇಂದ್ರ ಸರಕಾರದ ಸಂಯೋಜನೆಯಡಿಯಲ್ಲಿ ಉದ್ಯೋಗಕ್ಕಾಗಿ ತರಬೇತಿಯನ್ನು ನೀಡುವ ಸಂಸ್ಥೆಯನ್ನಾಗಿ ಮಾಡೋಣವೆಂದು ನಿರ್ಧರಿಸಿದರು. ಇದಕ್ಕಾಗಿ ಪೂಜ್ಯರ ಅನುಮತಿಯನ್ನು ಪಡೆದು ಅದನ್ನು 'ಸಂತ ಫಿಲೋಮಿನಾ ಕೈಗಾರಿಕಾ ತರಬೇತಿ ಸಂಸ್ಥೆ'ಯನ್ನಾಗಿ ಪರಿವರ್ತಿಸಿದರು. ಅಲ್ಲಿಯವರೆಗೆ ಆ ಪರಿಕಲ್ಪನೆ ಯಾರಿಗೂ ಬಂದಿರಲಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ.