ದೂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಪಾಶ್ಚಾತ್ಯ ಮಿಶನರಿಗಳು ಕನ್ನಡ ಸಾಹಿತ್ಯ ಕೃಷಿಯಲ್ಲಿ ನೀಡಿದ ಸಣ್ಣ ಕೊಡುಗೆಯೇ ಈ 'ದೂತ' ಎಂಬ ಪತ್ರಿಕೆ. ಫ್ರೆಂಚ್‌ ಮಿಷನರಿಯಾದ ಸ್ವಾಮಿ ಇ. ಮೊರೆಲ್‌ರವರು ಈ ಪತ್ರಿಕೆಯ ಸ್ಥಾಪನೆಗೆ ಮೊದಲಡಿಯನ್ನಿರಿಸಿದರೆ ಅವರಿಗೆ ಸಹಾಯ ಹಸ್ತವನ್ನು ನೀಡಿ ಪತ್ರಿಕೆಯನ್ನು ಹೊರತಂದವರು ರೆವರೆಂಡ್‌ ಮೊನ್ಸಿಂಜೋರ್‌ ಐ.ಎಚ್‌.ಲೋಬೊರವರು. 'ಯೇಸುಕ್ರಿಸ್ತರ ತಿರು ಹೃದಯದ ದೂತನು" ಎಂಬ ಹೆಸರಿನಲ್ಲಿ ೧೬ ಪುಟಗಳ ಈ ಪತ್ರಿಕೆ ೧೯೨೪ರಲ್ಲಿ ಪ್ರಕಟವಾಯಿತು. ಪ್ರಪ್ರಥಮವಾಗಿ ಬೆಂಗಳೂರಿನ 'ವಿ ಗ್ರಾಡ್‌' ಎಂಬ ಪ್ರೆಸ್‌ನಲ್ಲಿ ೩೦೦ ಪ್ರತಿಗಳ ಮುದ್ರಣ. ಕೆಲವೇ ವರ್ಷಗಳಲ್ಲಿ ೨೦೦೦ ಪ್ರತಿಗಳಿಗೆ ಏರಿಕೆ. ೪೭ವರ್ಷಗಳ ಕಾಲ ಸ್ವಾಮಿ ಐ.ಎಚ್‌.ಲೋಬೊರವರ ಕೈಕೂಸು. ೧೯೬೭ರಲ್ಲಿ ಡೋರ್ನಹಳ್ಳಿಯಲ್ಲಿದ್ದ ಸ್ವಾಮಿ ಫೆಲಿಕ್ಸ್‌ ತಾವ್ರೊ(೧೯೬೭ರಿಂದ ೧೯೭೪ರವರೆಗೆ)ರವರ ಕೈಗೆ ಹಸ್ತಾಂತರ. ಆಗ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು ಸ್ವಾಮಿ ವಲೇರಿಯನ್‌ ಡಿಸೋಜಾ. ಮುಂದೆ ಸ್ವಾಮಿ ಥಾಮಸ್‌ ಥಡಿಕಲ್‌ ಪ್ರಕಾಶಕರಾದರೆ, ಸ್ವಾಮಿ ಡಾ.ದಯಾನಂದ ಪ್ರಭು(೧೯೭೭ರಿಂದ ೧೯೮೯ರವರೆಗೆ)ರವರು ಸಂಪಾದಕರಾದರು. ೧೯೮೦ರಿಂದ ಇವರು ಪ್ರಕಾಶಕರಾಗಿಯೂ ಮುಂದುವರಿದರು. ಇವರ ಅವಧಿಯಲ್ಲಿ 'ಯೇಸುಕ್ರಿಸ್ತರ ತಿರು ಹೃದಯದ ದೂತನು' ಎಂಬ ನಾಮಧೇಯವನ್ನು ಕಳೆದು ಶಾಂತಿ ದೀಪ್ತಿಯನ್ನು ಬೀರುವ "ದೂತ"ನಾಗಿ ಮೆರೆಯಿತಲ್ಲದೇ "ವಜ್ರ ಮಹೋತ್ಸವ"ವನ್ನು ವಿಜೃಂಭಣೆಯಿಂದ ಆಚರಿಸುವ ಅವಕಾಶವನ್ನೂ ಪಡೆಯಿತು. ಅವರ ನಂತರ ಸ್ವಾಮಿ ಜಿ.ಜೋಸೆಫ್, ಸ್ವಾಮಿ ಜೋಸೆಫ್‌ ಡಿಮೆಲ್ಲೊ ಮತ್ತು ಸ್ವಾಮಿ ಡಾ.ಎನ್.ಎಸ್.ಮರಿಜೋಸೆಫ್‌ ರವರೂ ಸಂಪಾದಕ/ಪ್ರಕಾಶಕರಾಗಿ ಕಾರ್ಯಭಾರದ ನೊಗವನ್ನು ಹೊತ್ತುಕೊಂಡರು. ಪ್ರಸ್ತುತ ಸ್ವಾಮಿ ಕೆ.ಎ.ವಿಲಿಯಂರವರು ಪ್ರಕಾಶಕರೂ, ಸಂಪಾದಕರೂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ಧಾರ್ಮಿಕ ಪತ್ರಿಕೆಯೊಂದು ಕೇವಲ ಎರಡು ಸಾವಿರದಷ್ಟು ಚಂದಾದಾರರನ್ನು ಹೊಂದಿದ್ದೂ ನಿಧಾನವಾಗಿ ನಡೆದೂ, ಬೆಳೆದೂ ಶತಮಾನೋತ್ಸವದತ್ತ ಹೆಜ್ಜೆಯಿಡುತ್ತಾ ಸಾಗಿರುವುದು ಅಚ್ಚರಿಯ ವಿಷಯವಲ್ಲವೇ?

"https://kn.wikipedia.org/w/index.php?title=ದೂತ&oldid=340710" ಇಂದ ಪಡೆಯಲ್ಪಟ್ಟಿದೆ