ಕುರಿ ರೋಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುರಿಗಳಿಗೆ ನೂರಕ್ಕೂ ಮೇಲ್ಪಟ್ಟು ಸೋಂಕು ರೋಗಗಳೂ ದೇಹದ ಅಂತರಿಕ ಪರಿಸ್ಥಿತಿಯಿಂದ ಉಲ್ಬಣಿಸುವ ಅನೇಕ ಬೇನೆಗಳೂ ಕಾಣಿಸಿಕೊಳ್ಳುವುದಾಗಿ ತಿಳಿದುಬಂದಿದೆ. ಅವುಗಳ ಸಾಂಕ್ರಾಮಿಕ ರೋಗಗಳಿಗೆ ಬ್ಯಾಕ್ಟೀರಿಯ, ವೈರಸ್, ಬೂಷ್ಟು, ಏಕಾಣುಜೀವಿಗಳ (ಪ್ರೊಟೋಜ಼ೋವ), ಹುಳುಗಳು (ವರ್ಮ್ಸ್), ಕೀಟಗಳು ಮುಂತಾದವು ಕಾರಣವೆನಿಸಿವೆ.[೧]

ಬ್ಯಾಕ್ಟೀರಿಯದಿಂದ ಬರುವ ರೋಗಗಳು[ಬದಲಾಯಿಸಿ]

ಮೂವತ್ತಕ್ಕೂ ಹೆಚ್ಚು ಜಾತಿಯ ಬ್ಯಾಕ್ಟೀರಿಯಗಳು ಕುರಿಗಳ ರೋಗಗಳಲ್ಲಿ ವಿವಿಧ ರೋಗಗಳನ್ನು ಉಂಟುಮಾಡುತ್ತವೆ. ನೆರಡಿ (ಆಂತ್ರಾಕ್ಸ್), ಚಪ್ಪೆರೋಗ (ಬ್ಲ್ಯಾಕ್‍ಲೆಗ್), ಅತ್ಯುಗ್ರ ಊತ (ಮಲಿಗ್ನಂಟ್‍ಈಡಿಪಸ್), ಬ್ರ್ಯಾಕ್ಸಿ, ಕಪ್ಪುರೋಗ, ಕುರಿಮರಿಗಳ ಭೇದಿ, ಕರುಳಿನ ವಿಷಬೇನೆ (ಎಂಟರೊಟಾಕ್ಸಿಮಿಯ), ಧನುರ್ವಾಯು (ಟೆಟ್ಯಾನಸ್), ವಿಷರೋಗ (ಬಾಟುಲಿಸಂ), ಕ್ಷಯ, ಕೆಚ್ಚಲಬಾವು (ಮ್ಯಾಸ್ಟೈಟಿಸ್), ಸಂಧಿವಾತ (ಪಾಲಿಆರ್ಥೈಟಿಸ್). ದುಗ್ಧನಾಳದ ಉರಿಯೂತದ ರೋಗ (ಕೇಸಿಯಸ್ ಲಿಂಫ್ಯಾಡೆನಿಟಿಸ್), ಗೊರಸು ರೋಗ (ಪುಟ್‍ರಾಟ್) - ಇವು ಕುರಿಗಳಿಗೆ ಬರುವ ಮುಖ್ಯ ಸಾಂಕ್ರಾಮಿಕ ರೋಗಗಳು, ಪಾಶ್ಚುರೆಲ್ಲ, ಬ್ರೂಸೆಲ್ಲ, ವಿಬ್ರಿಯೊ, ಸಾಲ್ಮೊನೆಲ್ಲಾ, ಲಿಸ್ಟಿರಿಯ, ಎರಿಸೆಫೆಲೊತ್ರಿಕ್ಸ್, ಟ್ಯುಲರೀಮೀಯ, ನೆಕ್ರೊಬೆಸಿಲ್ಲೊಸಿಸ್, ಆಕ್ಟಿನೊಬ್ಯಾಸಿಲೋಸಿಸ್ ಮುಂತಾದವುಗಳಿಂದಲೂ ರೋಗಬರುವುದುಂಟು. ರೋಗಕಾರಕ ಬ್ಯಾಕ್ಟೀರಿಯಗಳು ಅನೇಕ ರೀತಿಯಲ್ಲಿ ಕುರಿಯ ದೇಹವನ್ನು ಹೊಕ್ಕು ಅಲ್ಲಿ ವೃದ್ಧಿಯಾಗಿ ವಿವಿಧರೀತಿಯ ರೋಗಗಳನ್ನು ತರುವುವು. ಪ್ರತಿಯೊಂದು ರೋಗಕ್ಕೂ ಒಂದೊಂದು ವಿಶಿಷ್ಟ ಏಕಾಣು ಜೀವಿ ಕಾರಣ. ಇವು ದೇಹದ ವಿವಿಧಭಾಗಗಳಲ್ಲಿ ಪಸರಿಸಬಲ್ಲವು. ಆದ್ದರಿಂದ ದೇಹದ ಸಂಪೂರ್ಣಭಾಗ ರೋಗದ ಛಾಯೆಗೆ ಒಳಗಾಗುವುದು. ಜ್ವರ, ಭೇದಿ, ಕೆಮ್ಮು ಇತ್ಯಾದಿ ರೋಗಲಕ್ಷಣಗಳೂ ದೇಹದ ಒಳಗಡೆ ವಿವಿಧ ಅಂಗಾಂಗಗಳಲ್ಲಿ ವಿಶಿಷ್ಟ ಬದಲಾವಣೆಗಳೂ ಕಾಣಿಸಿಕೊಳ್ಳುವುವು. ಅವುಗಳಲ್ಲಿ ಮುಖ್ಯವಾದವನ್ನು ಕೆಳಗೆ ವಿವರಿಸಿದೆ.

ನೆರಡಿ ರೋಗ[ಬದಲಾಯಿಸಿ]

ನೆರಡಿ ರೋಗ ಕುರಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಇದಕ್ಕೆ ಬ್ಯಾಸಿಲಸ್ ಆಂತ್ರಾಸಿಸ್ ಎಂಬ ಬ್ಯಾಕ್ಟೀರಿಯ ಕಾರಣ. ಈ ರೋಗಕ್ಕೆ ತುತ್ತಾದ ಕುರಿಗಳು ಒಮ್ಮೆಲೆ ರಕ್ತಕಾರಿ ಸಾಯುವುವು. ಸತ್ತ ಕುರಿಯ ದೇಹದಲ್ಲೆಲ್ಲ ರೋಗಾಣುಗಳು ತುಂಬಿರುವುದರಿಂದ ಅದರ ದೇಹವನ್ನು ಸೀಳದೆ ಆಳವಾದ ಗುಂಡಿಯಲ್ಲಿ ಸುಡಬೇಕು. ಇಲ್ಲದೆ ಹೋದರೆ ರೋಗಾಣುಗಳು ದೇಹದಿಂದ ಹೊರಗೆ ಚೆಲ್ಲಿ ಅನೇಕ ವರ್ಷಗಳ ಕಾಲ ಜೀವಂತವಾಗಿದ್ದು ಇತರ ಕುರಿಗಳಿಗೆ ಸುಲಭವಾಗಿ ಹರಡಬಹುದು. ಕುರಿಯ ಮೈಯಲ್ಲಿ ಯಾವುದಾದರೂ ಕಾರಣದಿಂದ ಆಗುವ ಗಾಯಗಳ ಮೂಲಕ ಕ್ಲಾಸ್ಟ್ರಿಡಿಯಂ ಚಾವೆ, ಕ್ಲಾಸ್ಟ್ರಿಡಿಯಂ ಸೆಪ್ಟಿಕಂ ಎಂಬ ಬ್ಯಾಕ್ಟೀರಿಯಗಳೂ ಕ್ಲಾಸ್ಟ್ರಿಡಿಯಂ ಪರ್‍ಫ್ರಿಂಜಿಸ್, ಕ್ಲಾಸ್ಟ್ರಿಡಿಯಂ ಸೋವಿಯೈ ಮುಂತಾದವೂ ದೇಹವನ್ನು ಸೇರಿ ಚಪ್ಪೆರೋಗ, ಅತ್ಯುಗ್ರಊತ, ಬ್ರ್ಯಾಕ್ಸಿ ಹಾಗೂ ಕಪ್ಪುರೋಗವನ್ನು ಉಂಟುಮಾಡುವುವು. ಚಪ್ಪೆರೋಗದಲ್ಲಿ ಕುರಿ ಹಿಂಗಾಲು ಮುಂಗಾಲಿನ ಮಾಂಸ ಖಂಡದ ಉಬ್ಬರದಿಂದ ನರಳಿ ಸಾಯುವುದು. ಅತ್ಯುಗ್ರ ಊತದ ರೋಗದಲ್ಲಿ ದೇಹದಲ್ಲೆಲ್ಲ ಊತ ಕಾಣಬರುವುದು. ಬ್ರ್ಯಾಕ್ಸಿಯಂತೂ ಆರೋಗ್ಯವಂತ ಕುರಿಮರಿಯಲ್ಲಿ ಒಮ್ಮಿಂದೊಮ್ಮೆಗೆ ಕಾಣಿಸಿಕೊಳ್ಳುವ ರೋಗ. ಅದರ ಜಠರದ ನಾಲ್ಕನೆಯ ಕೋಣೆಯಲ್ಲಿ (ಅಬೊಮೇಸಂ) ಊರಿಯೂತವಾಗಿ ರೋಗಾಣುಗಳು ವೃದ್ಧಿಯಾಗಿ, ಮರಿಗಳಿಗೆ ಒಮ್ಮೆಗೆ ಸಾವನ್ನು ಉಂಟುಮಾಡುವುವು. ಕಪ್ಪು ರೋಗದಲ್ಲಿ ಕಾರಲುಹುಳುವಿನ ಶೈಶವ ರೂಪ ಯಕೃತ್ತನ್ನು ಭೇದಿಸುವುದರಿಂದ ಅಲ್ಲಿ ರೋಗಾಣುಗಳು ವೃದ್ಧಿಯಾಗಿ ಕಪ್ಪುರೋಗವುಂಟಾಗುವುದು. ಕುರಿಮರಿಗಳಿಗೆ ಹುಟ್ಟಿದಾಗಲೆ ಭೇದಿರೋಗ ಸಾಮಾನ್ಯ. ಕ್ಲಾಸ್ಟ್ರಿಡಿಯಂ ಪರ್‍ಫ್ರಿಂಜಿಸ್ ಟೈಪ್ ಎಂಬ ರೋಗಾಣು ಈ ರೋಗ ತರುವುದು. ವಯಸ್ಕ ಕುರಿಗಳಲ್ಲೂ ಈ ಭೇದಿರೋಗ ಬರುವುದುಂಟು. ಕರುಳಿನಲ್ಲಿ ಕ್ಲಾಸ್ಟ್ರಿಡಿಯಂ ಪರ್‍ಫ್ರಿಂಜಿಸ್ ಟೈಪ್ ಸಿ ಮತ್ತು ಡಿ ಎಂಬ ರೋಗಾಣುಗಳಿಂದ ವಿಷ ಉತ್ಪಾದನೆಯಾಗಿ ಕರುಳಿನ ವಿಷಬೇನೆ ಬರುವುದು. ಇದರಿಂದ ಭೇದಿಕಾರಕ ಲಕ್ಷಣಗಳು ತಲೆದೋರಿ ಕುರಿಗಳು ಸಾಯುವುವು.[೨]

ಧನುರ್ವಾಯು[ಬದಲಾಯಿಸಿ]

ಕುರಿಗಳಿಗೆ ಬರುವ ಇನ್ನೊಂದು ರೋಗ ಧನುರ್ವಾಯು. ಮಾಂಸಖಂಡಗಳು ಬಿಗಿದು ದೇಹ ಬಿಲ್ಲಿನಾಕಾರವಾಗುವ ಈ ರೋಗಕ್ಕೆ ಕ್ಲಾಸ್ಟ್ರಿಡಿಯಂ ಟೆಟನಿ ಎಂಬ ರೋಗಾಣು ಕಾರಣ. ಮುಂದೆ ಈ ರೋಗದಿಂದ ಕುರಿ ಸಾಯುವುದು. ಕುರಿಯ ದೇಹದಲ್ಲಿ ರಂಜಕದ ಅಂಶ ಕಡಿಮೆಯಾದಾಗ ಸತ್ತಪ್ರಾಣಿಗಳ ದೇಹವನ್ನು ತಿನ್ನಬೇಕೆಂಬ ಆಸೆಯಾಗಿ ತಿಂದಾಗ ಅದರಲ್ಲಿರುವ ಕ್ಲಾಸ್ಟ್ರಿಡಿಯಂ ಬಾಟೂಲಿನಂ ಟೈಪ್ ಎಂಬ ರೋಗಾಣು ಕುರಿಯ ದೇಹವನ್ನು ಸೇರಿ ವಿಷ ಉತ್ಪತ್ತಿಮಾಡುದರಿಂದ ಕುರಿಗಳು ಸಾಯುವುವು. ಪ್ಯಾಸ್ಚುರೆಲ್ಲ ಮಲ್ಟೋಸಿಡ ಎಂಬ ರೋಗಾಣುವಿನಿಂದ ವಿಶಿಷ್ಟ ರೀತಿಯ ಆಂತರಿಕ ಬೇನೆ ಬರುವುದು. ಶ್ವಾಸಕೋಶ, ಹೃದಯ ಹಾಗೂ ಕೀಲುಗಳಲ್ಲಿ ಈ ರೋಗದ ಛಾಯೆ ಕಂಡುಬರುವುದು. ಕುರಿಗಳ ದೇಹದ ಮೇಲೆ ವಾಸಮಾಡುವ ಉಣ್ಣೆಗಳ ಮೂಲಕ ಪ್ಯಾಸ್ಚುರೆಲ್ಲ ಟುಲರೆನ್ನಿಸ್ ಎಂಬ ರೋಗಾಣು ದೇಹಕ್ಕೆ ಸೇರಿ ಟ್ಯುಲರೀಮಿಯ ಎಂಬ ರೋಗವನ್ನು ತರುವುದು. ಕುರಿಗಳ ಮೊಲೆಯ ಮೂಲಕ ಅನೇಕ ರೀತಿಯ ರೋಗಾಣುಗಳು ಕೆಚ್ಚಲನ್ನು ಸೇರಿ ವೃದ್ಧಿಯಾಗಿ ಕೆಚ್ಚಲುಬಾವು ಬರುವುದು. ಸ್ಟ್ಯಾಫಿಲೊಕಾಕಸ್ ಸ್ಟ್ರಪ್ಟೊಕಾಕಸ್ ಪ್ಯಾಸ್ಚುರೆಲ್ಲ , ಕೊರಿನಿ ಬ್ಯಾಕ್ಟೀರಿಯಂ ಮುಂತಾದವು ಈ ರೋಗಕ್ಕೆ ಕಾರಣ. ಈ ಬೇನೆ ಕುರಿಸಾಕಣಿಗೆ ಒಂದು ಮಾರಕವಾಗಿದೆ. ಕೆಚ್ಚಲು ಊದಿ ಹಾಲು ರಕ್ತಮಯವಾಗುವುದು. ಕೆಚ್ಚಲಿನಲ್ಲಿ ಉರಿಯೂತ ಉಲ್ಬಣಿಸಿ ಕೊನೆಗೆ ಕೆಚ್ಚಲು ಒಣಗಿ ಹೋಗುವುದು. ಕುರಿಗಳು ಗರ್ಭಧರಿಸಿದ ಮೇಲೆ ಕಂದು ಹಾಕುವುದು ಸಾಮಾನ್ಯ. ಬ್ರುಸೆಲ್ಲ ವಿಬ್ರಿಯೊ ಮತ್ತು ಸಾಲ್ಮೊನೆಲ್ಲ ಎಂಬ ರೋಗಾಣುಗಳಿಂದ ಈ ರೋಗ ಬರುವುದು. ಅದರ ಫಲವಾಗಿ ಸಂತಾನಹರಣವಾಗುವುದು. ಲಿಸ್ಟಿರಿಯ ಮಾನೊಸೈಟೊಜೀನ್ಸ್ ಎಂಬ ರೋಗಾಣುವಿನಿಂದ ಪ್ರಧಾನವಾಗಿ ತಲೆತಿರುಗಿ ಬಂದು ಇತರ ರೋಗಲಕ್ಷಣಗಳಿಂದ ಕುರಿಗಳು ಸಾಯುವುವು. ಲೆಪ್ಟೊಸ್ಟೈರ ಎಂಬ ರೋಗಾಣು ಯಕೃತ್ತು, ಮೂತ್ರಪಿಂಡಗಳಲ್ಲಿ ರೋಗಛಾಯೆಯನ್ನು ಬರಿಸಿ ರಕ್ತರೋಗಮಯವಾಗಿ ಕುರಿಗಳು ಸಾಯುವುವು. ಮುಖ್ಯ ಕೆನ್ನೆ , ತುಟಿ, ಒಸಡುಗಳಲ್ಲಿ ವ್ರಣಗಳನ್ನು ಉಂಟುಮಾಡುವ ಆಕ್ಟಿನೊಬ್ಯಾಸಿಲಸ್ ಎಂಬ ರೋಗಾಣುವಿನಿಂದ ಕುರಿ ದೀರ್ಘಕಾಲ ನರಳಿ ಸಾಯುವುದು. ಕ್ಷಯರೋಗವೂ ಕುರಿಗಳಲ್ಲಿ ಕಾಣಿಸಿಕೊಳ್ಳುವುದುಂಟು. ಇದು ದೀರ್ಘಾವಧಿಯ ರೋಗ. ಯಕೃತ್ತು, ಮೂತ್ರಪಿಂಡ, ಗುಲ್ಮ, ಶ್ವಾಸಕೋಶ ಹಾಗೂ ದೇಹದ ಇತರ ಭಾಗಗಳಲ್ಲಿ ಕ್ಷಯದ ಗೆಡ್ಡೆಗಳಾಗಿ ಅದರಿಂದ ಸಾವು ಬರುವುದು ಎರಿಸೆಫೆಲೊತ್ರಿಕ್ಸ್ ಎಂಬ ರೋಗಾಣುವಿನಿಂದ ಕೀಲುಗಳಲ್ಲಿ ರೋಗುವುಂಟಾಗಿ ಸಂಧಿವಾತ ಬರುವುದು. ಕುರಿ ಕುಂಟುತ್ತ ನರಳುತ್ತ ಸಾಯುವುದು. ಈ ರೀತಿಯಾಗಿ ಬ್ಯಾಕ್ಟೀರಿಯಗಳು ವಿವಿಧರೀತಿಯ ರೋಗಗಳನ್ನು ತರುವುವು.

ರಿಕೆಟ್‍ಸಿಯ ರೋಗಗಳು (ರಿಕೆಟ್ಸಿಯಲ್ ಡಿಸೀಸಸ್)[ಬದಲಾಯಿಸಿ]

ಬ್ಯಾಕ್ಟೀರಿಯಗಳಿಗಿಂತ ದೊಡ್ಡದಾದ ರಿಕೆಟ್‍ಸಿಯದಿಂದ ಕುರಿಗಳಲ್ಲಿ ಅನೇಕ ರೋಗಗಳು ಉಂಟಾಗುವುವು. ಸಾಂಕ್ರಾವಿಕ ಕಣ್ಣಿನ ಉರಿಯೂತ (ಪಿಂಕ್ ಐ) ತೀವ್ರತರವಾದ ರೋಗ; ಕಣ್ಣಿನ ಪೊರೆಯಲ್ಲಿ ಉರಿಯೂತವಾಗುವುದು. ಕುರಿ ಇರುವೆಡೆಯಲ್ಲಿ ಈ ರೋಗ ಕಂಡುಬರುವುದು. ಈ ರೋಗದಲ್ಲಿ ಕುರಿಯ ಕಣ್ಣು ಕೆಂಪಾಗಿ ಸದಾ ನೀರು ಹರಿಯುತ್ತಿರುವುದು. ಒಮ್ಮೊಮ್ಮೆ ಕುರುಡು ಸಂಭವಿಸುವುದು. ನೊಣಗಳು ರೋಗದ ಹರಡುವಿಕೆಗೆ ಕಾರಣ. ಕುರಿಗಳ ದೇಹದ ಮೇಲೆ ವಾಸಿಸುವ ಉಣ್ಣೆಗಳು ರಿಕೆಟ್‍ಸಿಯ ರೋಗಾಣುಗಳನ್ನು ಕುರಿಯ ದೇಹದೊಳಗೆ ಸೇರಿಸುವುದರಿಂದ ಉಣ್ಣೆಯ ಮೂಲಕ ಬರುವ ಜ್ವರ (ಟಿಕ್‍ಬಾನ್ ಫೀವರ್) ಕ್ಯೂಜ್ವರ, ಎಪೆರಿಟ್ರೊಜೊವನ್ ಇತ್ಯಾದಿ ರೋಗಗಳು ಬರುವುವು. ಕುರಿಗಳು ಈ ಜ್ವರಗಳಿಂದ ನರಳಿ ಸಾಯುವುವು.

ವೈರಸ್ ರೋಗಗಳು[ಬದಲಾಯಿಸಿ]

ಬ್ಯಾಕ್ಟೀರಿಯಗಳಿಗಿಂತ ಚಿಕ್ಕದಾಗಿರುವ ವೈರಸ್ ರೋಗಾಣುಗಳು ಕುರಿಗಳಲ್ಲಿ ಅನೇಕ ರೀತಿಯ ರೋಗಗಳನ್ನು ಉಂಟುಮಾಡುವುವು. ಅವುಗಳಲ್ಲಿ ಸಿಡುಬು, ಕಾಲುಬಾಯಿರೋಗ, ಸಾಂಕ್ರಾಮಿಕ ಚರ್ಮರೋಗ (ಕಂಟೀಜಿಯಸ್ ಪುಸ್ಟುಲಾರ, ಡರ್ಮಟೈಟಿಸ್) ನೀಲಿನಾಲಗೆ (ಬ್ಲೂ ಟಿಂಗ್), ದೊಡ್ಡರೋಗ (ರಿಂಡರ್‍ಪೆಸ್ಟ್) ಪಿ.ಪಿ.ಆರ್. ಮತ್ತು ಹುಚ್ಚುರೋಗ ಮುಖ್ಯವಾದವು. ಸಿಡುಬುರೋಗ ಬಂದಾಗ ಚರ್ಮದ ಮೇಲೆ ದದ್ದು ಹಾಗೂ ವ್ರಣಗಳೇಳುವುವು. ಜ್ವರಬರುವುದು, ದೇಹದ ಒಳಗಡೆ ರೋಗದ ಛಾಯೆಯ ಫಲದಿಂದ ಜ್ವರವೂ ಇರುವುದು. ಇತರ ಕುರಿಗಳಿಗೆ ಬೇಗನೆ ಹರಡುವುದು, ಆದ್ದರಿಂದ ಇದು ಬಹಳ ಮಾರಕವಾದುದು ಕಾಲು ಮತ್ತು ಬಾಯಿ ರೋಗ (ಫುಟ್ ಅಂಡ್ ಮೌತ್ ಡಿಸೀಸ್ ) ಕುರಿಗಳಲ್ಲೂ ಬರುವುದು. ಬಾಯಿಯಲ್ಲಿ ನಾಲಗೆಯ ಮೇಲೆ ವ್ರಣಗಳೇಳುವುವು. ಇದರಿಂದ ಎನನ್ನೂ ತಿನ್ನಲಾಗುವುದಿಲ್ಲ. ಕಾಲಿನ ಗಾಯಗಳು ಅಷ್ಟೇನೂ ಕಾಣಬರುವುದಿಲ್ಲ. ಜ್ವರದ ತಾಪದಿಂದ ಕುರಿಗಳು ಬಳಲುವುವು. ಇದರಂತೆ ಕುರಿಗಳ ತುಟಿಯ ಮೇಲೆ, ನಾಲಗೆಯ ಮೇಲೆ ಬೊಕ್ಕೆಗಳೇಳುವುವು. ಬಾಯಿ ಹಾಗೂ ಮೂಗಿನ ದ್ವಾರದ ಅದಿಬದಿಯಲ್ಲಯೂ ವ್ರಣಗಳೇಳುವುವು. ನೀಲಿನಾಲಗೆ ರೋಗ ಇತರ ದೇಶದ ಕುರಿಗಳಲ್ಲಿ ಸಾಮಾನ್ಯ. ಹಲವು ಕೀಟಗಳು ಈ ರೋಗವನ್ನು ಹರಡುವುವು. ನಾಲಗೆಯ ಮೇಲೆ ಸೂಕ್ಷ್ಮವಾಗಿ ವ್ರಣಗಳಾಗುವುವು. ಕುರಿಗಳು ಮಂಕಾಗಿ ಜೊಲ್ಲುಸುರಿಸಿ, ಮೂಗಿನ ಮೂಲಕ ದ್ರವ ಹರಿಸುವುವು. ತುಟಿಗಳು ಊದಿಕೊಳ್ಳುವುವು. ಬಾಯಿಯ ಮೃದುಪೊರೆ ಊದಿಕೊಳ್ಳುವುದಲ್ಲದೆ ಮುಖವನ್ನೆಲ್ಲ ವ್ಯಾಪಿಸಿಕೊಳ್ಳವುದು.ಹಸುಗಳಿಗೆ ಬರುವ ದೊಡ್ಡರೋಗ ಕುರಿಗಳಲ್ಲೂ ಬಂದು ಸಾವು ನೋವನ್ನುಂಟು ಮಾಡುವುದು. ಈ ರೋಗದ ವಿಷಾಣು ರಕ್ತದಲ್ಲಿ ಹಾಗೂ ದೇಹದಲ್ಲೆಲ್ಲ ಇರುತ್ತದೆ. ಸೋಂಕು ಪ್ರಾಣಿಯಿಂದ ಪ್ರಾಣಿಗೆ ತಗುಲಿ ರೋಗ ಹರಡುವುದು. ಕಣ್ಣುಮೂಗಿನಿಂದ ದ್ರವ ಹರಿಯುವುದಲ್ಲದೆ ಬಾಯಿಯಿಂದ ಅಪಾರವಾಗಿ ಜೊಲ್ಲು ಸುರಿಯುವುದು. ಕುರಿಗಳಿಗೆ ಹುಚ್ಚುರೋಗ ಸಹ ಬರುವುದು. ಈ ರೋಗಗಳಲ್ಲದೆ ವೈರಸ್‍ಗಳು ಮಿದುಳನ್ನು ಭೇದಿಸಿ ನರಮಂಡಲಕ್ಕೆ ವ್ಯಾಪಿಸಿ ಲೂಪಿಂಗ್ ಇಲ್, ಸ್ಕ್ರೇಪಿಸಿ, ರೈಡ್ ಬೋರ್ನ ಎಂಬ ರೋಗಗಳನ್ನು ತರುವುದು ಸಹ ಉಂಟು. ಈ ರೋಗವನ್ನು ತಡೆಯಲು ಚುಚ್ಚು ಮದ್ದು ಹಾಕಿಸಬೇಕು.

ಶಿಲೀಂಧ್ರ ಅಥವಾ ಬೂಷ್ಟು[ಬದಲಾಯಿಸಿ]

ಕುರಿಗಳಲ್ಲಿ ಶಿಲೀಂಧ್ರಗಳು ಕೆಲವು ರೋಗಗಳನ್ನು ತರುತ್ತವೆ. ಇವು ಸಾಮಾನ್ಯವಾಗಿ ಚರ್ಮರೋಗಗಳು ಚರ್ಮದಲ್ಲಿ ಉರಿಯೂತವಾಗಿ ತುರಿ, ಕಜ್ಜಿ , ಗಜಕರ್ಣಗಳೇಳುವುವು. ಚರ್ಮದ ಉರಿಯೂತ ಇವುಗಳಲ್ಲಿ ಮುಖ್ಯವಾದದ್ದು. ಕುರಿಯ ಉಣ್ಣೆ ಹೊಳಪನ್ನು ಕಳೆದುಕೊಳ್ಳುವುದು. ಇದು ಆಕ್ಟಿನೊಮೈಸಿಸ್ ಡಿಮಾಟೊನವಸ್ ಎಂಬ ಶಿಲೀಂಧ್ರದಿಂದ ಬರುವುದು. ಕುರಿಯ ಬೆನ್ನು, ಪಕ್ಕೆ ತಲೆಭಾÀಗದಲ್ಲಿ ರೋಗದ ಲಕ್ಷಣಗಳು ಕಾಣುವುವು. ಉಣ್ಣೆ ಉಂಡೆಯಾಗುವುದು. ಚರ್ಮದ ಮೇಲೆ ಮೂಡುವ ಗಜಕರ್ಣದ ಕಲೆಗಳು ಟ್ರೈಕೊಫೈಟನ್ ಎಂಬ ಶಿಲೀಂಧ್ರದಿಂದ ಬರುವ ಕಲೆಗಳು. ಮುಖ, ಕಿವಿಗಳ ಬಳಿ ಈ ಕಲೆಗಳು ಸಾಮಾನ್ಯವಾಗಿ ಉಳಿಯುವುವು. ಪ್ರೋಟೋeóÉೂೀವಗಳಿಂದ ಬರುವ ರೋಗಗಳು : ಮುಖ್ಯವಾದ ಕೆಲವನ್ನು ಇಲ್ಲಿ ವಿವರಿಸಿದೆ.

ಕಾಕ್ಸಿಡಿಯ ರೋಗ[ಬದಲಾಯಿಸಿ]

ಐಮೀರಿಯ ಎಂಬ ಪ್ರೋಟೋeóÉೂೀವಗಳಿಂದ ಈ ರೋಗ ಬರುವುದು. ಇದು ಮರಿಗಳಲ್ಲಿ ಸಾಮಾನ್ಯವಾದದ್ದು. ಒಂದು ಮಂದೆ ಮಲ್ಲಿ ಕಾಣಿಸಿಕೊಂಡರೆ ಎಲ್ಲ ಕುರಿಗಳಿಗೂ ಹರಡುವುದು. ಇದರಿಂದ ಕುರಿಮರಿಗಳು ಸಾಯುವುವು. ಅವುಗಳ ಪಿಚಿಕೆಗಳಲ್ಲಿ ರೋಗದ ಕೋಶಾಣುಗಳು ಇರುವುವು. ನೀರಿನ ಅಂಶವಿರುವೆಡೆ ಬೀಜಕಣಗಳಾಗಿ ಪರಿವರ್ತನೆಗೊಂಡು ಆಹಾರ ಹಾಗೂ ನೀರಿನ ಮೂಲಕ ಇತರ ಮರಿಗಳ ದೇಹವನ್ನು ಸೇರುವುವು. ಕರುಳಿನ ಮೃದು ಪೊರೆಯನ್ನು ಭೇದಿಸಿ ಅಲ್ಲಿ ವೃದ್ಧಿಯಾಗಿ ರಕ್ತಮಿಶ್ರಿತ ಭೇದಿರೋಗವನ್ನುಂಟು ಮಾಡುವುವು. ಈ ರೋಗ ಕಾಣಿಸಿಕೊಂಡಾಗ ಕಾಲ ಕಾಲಕ್ಕೆ ಮಲವನ್ನು ತೆಗೆಯಬೇಕು. ಕುರಿಗಳ ರೊಪ್ಪವನ್ನು ಸ್ವಚ್ಛಮಾಡಬೇಕು. ರೋಗದಿಂದ ನರಳುವ ಪ್ರಾಣಿಗಳನ್ನು ಚಿಕಿತ್ಸೆ ಮಾಡಿಸಬೇಕು. ಇದರಿಂದ ಈ ರೋಗವನ್ನು ತಡೆಗಟ್ಟಬಹುದು.

ಬಬೇಸಿಯ ಹಾಗೂ ತೈಲೇರಿಯ ರೋಗಗಳು[ಬದಲಾಯಿಸಿ]

ಬಬೇಸಿಯ ಮತ್ತು ತೈಲೇರಿಯ ಎಂಬ ಪ್ರೋಟೋeóÉೂೀವಗಳು ಕೆಂಪುರಕ್ತಕಣಗಳಲ್ಲಿ ಸೇರಿ ತಿಂದು ನಾಶ ಮಾಡಿ ರಕ್ತಹೀನತೆ ಉಂಟುಮಾಡುವುವು. ಬಬೇಸಿಯ ರೋಗದಲ್ಲಿ ಮೂತ್ರ ಕೆಂಪು ಬಣ್ಣ ತಾಳುವುದು. ಎರಡು ರೋಗಗಳಲ್ಲಿಯೂ ಜ್ವರವಿರುವುದು. ರೋಗ ಉಲ್ಪಣಿಸಿದಾಗ ಕುರಿಗಳು ಸಾಯುವುವು. ದೇಹದ ಮೇಲಿರುವ ಉಣ್ಣೆಗಳಿಂದ ಈರೋಗ ಹರಡುವುದು. ಕುರಿಮರಿಗಳಲ್ಲಿ ಈರೋಗ ಕಾಣಬರುವುದಿಲ್ಲ.

ಟ್ರಿಪ್ಯಾನಸೋಮ ರೋಗ[ಬದಲಾಯಿಸಿ]

ರಕ್ತದಲ್ಲಿ ಟ್ರಿಪ್ಯಾನಸೋಮ ಎಂಬ ರೋಗಾ£ಣುಗಳು ಹರಡಿ ಈ ರೋಗ ಉಂಟಾಗುತ್ತದೆ. ರಕ್ತ ಹೀರುವ ನೊಣಗಳು ಈ ರೋಗ ಹರಡಲು ಸಹಾಯಕವಾಗುವುವು. ರೋಗಲಕ್ಷಣ ಮುಖ್ಯವಾಗಿ ಜ್ವರ.

ಟೊಕ್ಸೊಪ್ಲಾಸ್ಮ ರೋಗ[ಬದಲಾಯಿಸಿ]

ಟೊಕ್ಸೊಪ್ಲಾಸ್ಮ ಎಂಬ ರೋಗಾಣುಗಳಂದ ಈ ರೋಗ ಬರುವುದು. ಆಗ ಕುರಿ ಕಂದು ಹಾಕುವುದು. ನರಮಂಡಲದಲ್ಲಿ ಸ್ಪಷ್ಟ ಬದಲಾವಣೆಯೂ ಅಗುವುದು.ಈ ರೋಗಗಳಲ್ಲದೆ ಕರುಳಿನಲ್ಲಿ ಗಯಾಆರ್ಡಿಯ, ಕೆಂಪುರಕ್ತಗಳಲ್ಲಿ ಅನಾಪ್ಲಾಸ್ಮ ಮಾಂಸಖಂಡಗಳಲ್ಲಿ ಸಾರ್ಕೋಸಿಸ್ಟ್ ಪ್ರೊಟೋeóÉೂೀವಗಳಿಂದ ಆಯಾ ರೋಗ ಬರುತ್ತದೆ. ಹುಳುಗಳಿಂದ ಬರುವ (ಹೆಲ್ಮಿಂತಿಕ್) ರೋಗಗಳು: ಕುರಿಗಳಲ್ಲಿ ಅನೇಕ ಹುಳುಗಳು ಇರುವುವು. ದೇಹದ ವಿವಿಧಭಾಗಗಳಲ್ಲಿ ಅವು ಕಂಡುಬಂದರೂ ಅನ್ನನಾಳದಲ್ಲಿ ಇವುಗಳ ಇರವು ಹೆಚ್ಚು. ಚಪ್ಪಟೆಹುಳು, ಲಾಡಿಹುಳು ಮತ್ತು ದುಂಡುಹುಳು ಇವು ಕುರಿಯಲ್ಲಿ ಕಂಡುಬರುವುವು. ಫ್ಯಾಸಿಯೋಲ ಎಂಬ ಚಪ್ಚಟೆ ಹುಳು ಕಾರಲು ರೋಗವನ್ನು ಆಂಫಿಸ್ಟೊಮ ರೋಗವನ್ನು ತರುವುದು. ಕಾರಲು ರೋಗ ಕುರಿಗಳಿಗೆ ಒಂದು ಮಾರಕರೋಗ. ಈ ರೋಗಾಣುಗಳ ಶೈಶವರೂಪ ಬಸವನಹುಳುಗಳಲ್ಲಿರುವುದು. ಜೌಗುಪ್ರದೇಶ ಹಾಗೂ ಕಾಲುವೆಗಳ ಆದಿಬದಿಯಲ್ಲಿ ಕುರಿಗಳು ಮೇಯಲು ಹೋದಾಗ ಈ ರೋಗಕ್ಕೆ ಒಳಗಾಗುವುವು. ಮಾನೀಸಿಯ ಆವಿಟೆಲ್ಲಿನ, ಸೈಲೀಸಿಯ ಮುಂತಾದ ಲಾಡಿಹುಳುಗಳು ಕುರಿಗಳ ಕರುಳಿನಲ್ಲಿ ಕಾಣಬರುವುವು. ಇವುಗಳ ಶೈಶವ ರೂಪ ಹುಲ್ಲುಕಾವಲಿನಲ್ಲಿರುವ ಸೂಕ್ಷ್ಮಕೀಟಗಳಲ್ಲಿ (ಆರಿಬ್ಯಾಟಿಡ್‍ಮೈಟ್ಸ್) ಇರುತ್ತವೆ. ಕುರಿಗಳು ಮೇಯುವಾಗ ಈ ಸೂಕ್ಷ್ಮಕೀಟಗಳನ್ನು ಹುಲ್ಲಿನ ಜೊತೆಗೆ ತಿನ್ನುವುವು. ಮುಂದೆ ಲಾಡಿಹುಳುಗಳ ಶೈಶವ ರೂಪ ಕುರಿಯ ಕರುಳಿನಲ್ಲಿ ಬೆಳೆದು ದೊಡ್ಡದಾಗುವುದು. ಈ ಹುಳುಗಳಿಂದ ಕುರಿಗಳ ಆರೋಗ್ಯ ಕೆಡುವುದು. ಮಲ್ಟಿಸೆಪ್ಸ್ ಲಾಡಿಹುಳುವಿನ ಶೈಶವ ರೂಪ ಸೀನೋರಸ್ ರೋಗ ಕುರಿಗಳಲ್ಲಿ ತಲೆಸುತ್ತುವಿಕಯನ್ನು ಉಂಟುಮಾಡುವುದು. ಅನೇಕ ರೀತಿಯ ದುಂಡು ಹುಳುಗಳು ಕುರಿಯ ಅನ್ನನಾಳ ಹಾಗೂ ಶ್ವಾಸಕೋಶಗಳಲ್ಲಿ ಮನೆಮಾಡಿಕೊಂಡಿರವುವು. ಅನ್ನನಾಳದಲ್ಲಿ ವಾಸಿಸುವ ಹೆಮಾಂಖಸ್, ಮೆಸಿಸ್ಟೊಸಿರಸ್, ಟ್ರೈಕೊಸ್ಟ್ರಾಂಗೈಲಿಸ್ ಬ್ಯೂನೋಸ್ಟೋಮಮ್ ಮುಂತಾದ ಹುಳುಗಳು ರಕ್ತಹೀರುವುವು. ಈಸಾಫೆಗಸ್ಟೋಮಮ್ ಹುಳುಗಳು ಕರುಳಿನಲ್ಲಿ ಗಂಟು ರೋಗವನ್ನು ಉಂಟುಮಾಡುವುವು. ಶ್ವಾಸಕೋಶದ ಹುಳುಗಳಾದ ಮ್ಯುಲ್ಲೆರಿಯಸ್, ಪ್ರೋಟೋಸ್ಟ್ರಾಂಗೈಲಸ್ ಮುಂತಾದವು ಕೆಮ್ಮನ್ನು ತರುವುವಲ್ಲದೆ ಶ್ವಾಸಕೋಶ ಸಂಬಂಧರೋಗಕ್ಕೆ ಕುರಿಗಳನ್ನು ಈಡುಮಾಡುವುವು.

ಕೀಟಗಳಿಂದ ಬರುವ ರೋಗಗಳು[ಬದಲಾಯಿಸಿ]

ಅನೇಕ ರೀತಿಯ ಕೀಟಗಳು ಕುರಿಗಳಲ್ಲಿ ಕಾಣಬರುವುವು. ಇವು ಕುರಿಗಳ ಮೇಲೆ ಹಾವಳಿ ಮಾಡುವುವಲ್ಲದೆ ಇತರ ರೋಗಗಳು ಹರಡಲು ಸಹಾಯವಾಗುವುವು. ನೊಣಗಳ ಮರಿಹುಳುಗಳು, ಹೇನು, ಉಣ್ಣೆ ಇವು ಅಂಥ ಪ್ರಮುಖ ಕೀಟಗಳು. ಕೆಲವು ನೊಣಗಳು ರಕ್ತ ಹೀರುವುವು. ಕೆಲವು ನೊಣಗಳ ಮರಿ ಹುಳುಗಳು ಕುರಿಗಳ ದೇಹದ ಮೇಲೆ ವೃದ್ಧಿಯಾಗುವುದರಿಂದ ಮರಿಹುಳು ವ್ಯಾಧಿಯನ್ನು (ಮಯಾಸಿಸ್) ತರುವುವು. ಇದರಿಂದ ಉಣ್ಣೆಯ ಉತ್ಪಾದನೆ ನಿಂತು ಹೋಗಿ ಅಪಾರ ನಷ್ಟವಾಗುವುದು. ಕುರಿ ಕೆಡ್ (óóಷೀಪ್ ಕೆಡ್) ಎಂದು ಕರೆಯುವ ಮೆಲೊಫ್ಯಾಗಸ್ ಓವಿನಸ್ ಎಂಬುದು ಉಣ್ಣೆಯಲ್ಲಿ ಸೇರಿಕೊಂಡು ಹೋಗಲಾರದಂಥ ಕಪ್ಪು ಕಲೆಗಳನ್ನು ಉಂಟುಮಾಡುವುದು. ಇದರಿಂದ ಉಣ್ಣೆಯ ಬೆಲೆ ಕಡಿಮೆಯಾಗುವುದು. ಡಮೇಲಿನಿಯ, ಲೈನೊಗ್ನಾಥಸ್ ಎಂಬ ಹೇನುಗಳ ಹಾವಳಿಯಿಂದಲೂ ಕುರಿಯ ದೇಹಸ್ಥಿತಿ ಕೆಡುವುದು. ದೇಹದ ಮೇಲಿದ್ದು ಉಣ್ಣೆಗಳು (ಟಿಕ್ಸ್) ರಕ್ತ ಹೀರುವುವಲ್ಲದೆ ಅನೇಕ ರೀತಿಯ ಸೋಂಕು ರೋಗಗಳನ್ನು ಹರಡುವುವು. ತೊಗಲಿನಲ್ಲಿ ಮಚ್ಚೆ ತೂತುಗಳಾಗುವುವು. ಇವುಗಳ ಹಾವಳಿಯಿಂದ ಸುಕ್ಷ್ಮ ಕೀಟಗಳು (ಮೈಟ್ಸ್) ಚರ್ಮದೊಳಗೆ ಸೇರಿ ಉರಿಯೂತದಿಂದ ಉಣ್ಣೆ ಬಿದ್ದು ಹೋಗಿ ಕುರಿ ಬರಡಾಗುವುದು. (ಜಿ.ಆರ್.ಆರ್.ಎಸ್) ಕುರಿಗಳಲ್ಲಿ ಲಸಿಕೆ

ಕ್ರ. ಸಂ. ರೋಗದ ಹೆಸರು ಲಸಿಕೆ ಕಾರ್ಯಕ್ರಮ
1 ಪಿ.ಪಿ.ಆರ್. ರೋಗ ಜೀವಮಾನದಲ್ಲಿ ಒಂದು ಬಾರಿ
2 ಸಿಡುಬು ರೋಗ ಜೀವಮಾನದಲ್ಲಿ ಒಂದು ಬಾರಿ
3 ನೀಲಿ ನಾಲಿಗೆ ರೋಗ ಮಳೆಗಾಲಕ್ಕೆ ಮುನ್ನ
4 ಕಾಲು ಬಾಯಿ ರಓಗ ವರ್ಷಕ್ಕೆ 3 ಬಾರಿ
5 ಗಂಟಲು ಬೇನೆ ವರ್ಷಕ್ಕೆ ಒಂದು ಬಾರಿ
6 ಕರುಳು ಬೇನೆ ವರ್ಷಕ್ಕೆ ಒಂದು ಬಾರಿ/ಗಬ್ಬದ ಕುರಿಗಳಿಗೆ ಮರಿ ಹಾಕುವ 4 ವಾರ ಮುನ್ನ
7 ಚಪ್ಪೆ ರೋಗ ಬೇಸಗೆಯಲ್ಲಿ
8 ನೆರಡಿ ರೋಗ ಬೇಸಗೆಯಲ್ಲಿ

ಉಲ್ಲೇಖಗಳು[ಬದಲಾಯಿಸಿ]