ವಿಷಯಕ್ಕೆ ಹೋಗು

ಕುಮಾರಿಲ ಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಮಾರಿಲ ಭಟ್ಟ
ಜನನಕ್ರಿ.ಶ.೭೦೦
ಅಸ್ಸಾಂ, ಭಾರತ
ಮರಣಅಸ್ಸಾಂ, ಭಾರತ
ತತ್ವಶಾಸ್ತ್ರಮಿಮಾಂಸ
ಹಿಂದೂ ತತ್ವಶಾಸ್ತ್ರಜ್ಞ

ಕುಮಾರಿಲ ಭಟ್ಟ (ಪ್ರವರ್ಧಮಾನ ಕಾಲ ಸರಿಸುಮಾರು ಕ್ರಿ.ಶ. ೭೦೦) ಅಸ್ಸಾಮ್‍ನ ಒಬ್ಬ ಮೈಥಿಲ ಬ್ರಾಹ್ಮಣ ಹಿಂದೂ ತತ್ವಶಾಸ್ತ್ರಜ್ಞ ಮತ್ತು ಮೀಮಾಂಸ ವಿದ್ವಾಂಸನಾಗಿದ್ದನು. ಅವನು ಮೀಮಾಂಸಶ್ಲೋಕವರ್ತಿಕದಂತಹ ಮೀಮಾಂಸದ ಮೇಲಿನ ತನ್ನ ಅನೇಕ ಮೂಲಭೂತ ಪ್ರೌಢಪ್ರಬಂಧಗಳಿಗೆ ಪ್ರಸಿದ್ಧನಾಗಿದ್ದಾನೆ. ಭಟ್ಟನು ವೈದಿಕ ಆದೇಶದ ಪರಮೋಚ್ಚ ಸಿಂಧುತ್ವದಲ್ಲಿ ಕಟ್ಟಾ ನಂಬಿಕೆಯುಳ್ಳವನಾಗಿದ್ದನು, ಪೂರ್ವ ಮೀಮಾಂಸದ ಮಹಾನ್ ಸಮರ್ಥಕ ಮತ್ತು ದೃಢೀಕೃತ ಧರ್ಮಾಚರಕನಾಗಿದ್ದನು.

ಕಾಲ[ಬದಲಾಯಿಸಿ]

ಸುಪ್ರಸಿದ್ಧ ಮೀಮಾಂಸಕನಾದ ಈತ ದಕ್ಷಿಣ ದೇಶದವ; ಆಂಧ್ರನೆಂದು ಹೇಳುತ್ತಾರೆ. ಬಿಹಾರ ಪ್ರಾಂತ್ಯದವನಾಗಿದ್ದ ಈತನನ್ನುಶಂಕರಾಚಾರ್ಯರು ಬಿಹಾರದಲ್ಲೇ ಸಂಧಿಸಿದರೆಂದೂ ಪ್ರಯಾಗದಲ್ಲಿ ಸಂಧಿಸಿದರೆಂದೂ ಹೇಳುವವರಿದ್ದಾರೆ. ಈತನ ಕಾಲನಿರ್ಣಯವೂ ಸಮರ್ಪಕವಾಗಿ ಆಗಿಲ್ಲ. ಕ್ರಿಸ್ತಾಬ್ದ 590ರಿಂದ 650ರವರೆಗೆ ಎಂದು ಕೆಲವು ಪಂಡಿತರು ನಿರ್ಧರಿಸಿದ್ದಾರೆ. ಈತ ಬೌದ್ಧಭಿಕ್ಷುಗಳ ಬಳಿ ಇದ್ದು ಅವರ ಧರ್ಮವನ್ನೆಲ್ಲ ಅಭ್ಯಾಸಮಾಡಿ ಮುಂದೆ ಆ ವಾದಗಳನ್ನೆಲ್ಲ ನಿರಸನ ಮಾಡಿ ವೈದಿಕ ಮತವನ್ನು ಸಮರ್ಥಿಸಿದನೆಂದೂ ಹೀಗೆ ಗುರು ದ್ರೋಹದ ಪಾಪ ಸಂಘಟಿತವಾಗಲು ಅದರ ಪರಿಹಾರಕ್ಕೆಂದು ತುಷಾಗ್ನಿ ಪ್ರವೇಶಮಾಡಿ ತೀರಿಕೊಂಡನೆಂದೂ ಕಥೆಯಿದೆ. ಇನ್ನೇನು ಬೆಂಕಿಯಲ್ಲಿ ಬೀಳಬೇಕೆನ್ನುವಾಗಲೇ ಶಂಕರಾಚಾರ್ಯರು ಇವರನ್ನು ಕಾಣಲು ಬಂದಿದ್ದರೆಂದೂ ಐತಿಹ್ಯ. ವೈದಿಕ ಧರ್ಮದ ವಿರೋಧಗಳು (ಬೌದ್ಧರು, ಜೈನರು, ಲೋಕಾಯತರು ಇತ್ಯಾದಿ) ಪ್ರಬಲರಾಗಿದ್ದ ಕಾಲದಲ್ಲಿ ವೈದಿಕ ಧರ್ಮದ ಪಕ್ಷವನ್ನು ಹಿಡಿದು ಅದನ್ನು ನಾಡಿನಾದ್ಯಂತ ಪ್ರಚಾರ ಮಾಡಿ ಸ್ಥಿರಪಡಿಸಿದ ಪ್ರಾಚೀನರಲ್ಲಿ ಕುಮಾರಿಲಭಟ್ಟ ಮತ್ತು ಶಂಕರಾಚಾರ್ಯರು ಪ್ರಖ್ಯಾತರು. ವೈದಿಕ ಸಂಪ್ರದಾಯದ ಕರ್ಮಕಾಂಡವನ್ನು ಹಿಡಿದು ಕುಮಾರಿಲನೂ ಜ್ಞಾನಕಾಂಡವನ್ನು ಹಿಡಿದು ಶಂಕರರೂ ತಮ್ಮ ತಮ್ಮ ದಾರ್ಶನಿಕ ನಿಲವನ್ನು ರೂಪಿಸಿಕೊಂಡರು.

ಗ್ರಂಥಗಳು[ಬದಲಾಯಿಸಿ]

ಮಧ್ಯಕಾಲಿಕ ಭಾರತದಲ್ಲಿ ಕುಮಾರಿಲಭಟ್ಟನ ಕೀರ್ತಿ ತುಂಬ ಪ್ರಚಲಿತವಾಗಿದ್ದಿತು. ಇವನ ದಾರ್ಶನಿಕ ನಿಲವನ್ನು ಇದಿರಾಳುಗಳು ಕೂಡ 'ಭಾಟ್ಟಮತ'ವೆಂದು ಮರ್ಯಾದೆಯಿಂದ ವ್ಯವಹರಿಸುತ್ತಿದ್ದರು. ಇವರ ಅಭಿಪ್ರಾಯಗಳನ್ನು ಋಗ್ವೇದಕ್ಕೆ ಭಾಷ್ಯ ಬರೆದ ಸ್ಕಂದಸ್ವಾಮಿಯೂ ಅವನ ಶಿಷ್ಯ ಹರಿಸ್ವಾಮಿಯೂ (ಶತಪಥ ಬ್ರಾಹ್ಮಣದ ಮೇಲೆ ಭಾಷ್ಯ ಬರೆದವ, ಕ್ರಿಸ್ತಾಬ್ದ 639) ನಿರುಕ್ತದ ಮೇಲೆ ಭಾಷ್ಯವನ್ನು ಬರೆದ ಮಹೇಶ್ವರಾಚಾರ್ಯನೂ (ಇವನೂ ಸ್ಕಂದಸ್ವಾಮಿಯ ಶಿಷ್ಯನೇ) ಉಲ್ಲೇಖಿಸಿದ್ದಾರೆ. ಆ ಕಾಲಕ್ಕೆ ಪ್ರಚುರವಾಗಿದ್ದ ಎಲ್ಲ ದರ್ಶನಗಳನ್ನೂ ವಿವೇಕದಿಂದ ತನ್ನೊಂದು ದರ್ಶನದಲ್ಲಿ ಈತ ಅಡಗಿಸಿರುವುದನ್ನು ಕಾಣಬಹುದು. ಇವನಿಗೆ ವೈದಿಕ ಧರ್ಮದಲ್ಲಿ ಮಾತ್ರವಲ್ಲದೆ ಬೌದ್ಧ, ಜೈನ, ಸಾಂಖ್ಯ ಮುಂತಾದ ಹಲವಾರು ದರ್ಶನಗಳ ನಿಕಟ ಪರಿಚಯವಿದ್ದುದು ಇವನ ಗ್ರಂಥಗಳಲ್ಲಿ ಸ್ಪಷ್ಟವಾಗುತ್ತದೆ. ಈತನ ಗ್ರಂಥಗಳು ಎಷ್ಟಿದ್ದುವೆಂಬುದು ತಿಳಿದು ಬಂದಿಲ್ಲ. ಶ್ಲೋಕವಾರ್ತಿಕ, ತಂತ್ರವಾರ್ತಿಕ, ಟುಪ್‍ಟೀಕಾ ಇವು ಮಾತ್ರ ಉಳಿದು ಬಂದಿವೆ. ಈ ಮೂರು ಗ್ರಂಥಗಳೂ ಪೂರ್ವಮೀಮಾಂಸಾ ಸೂತ್ರಗಳಿಗೆ ಶಬರಸ್ವಾಮಿ (ಕ್ರಿಸ್ತಾಬ್ದ ಮೊದಲನೆಯ ಶತಮಾನ) ಭಾಷ್ಯವನ್ನು ಸಿದ್ಧಮಾಡಿ ನಾಸ್ತಿಕ ಅವೈದಿಕ ಪಂಥಗಳ ಆಕ್ಷೇಪಗಳಿಗೆ ಸಮಾಧಾನ ಹೇಳಿ ವೈದಿಕ ಧರ್ಮದ ನಿಷ್ಠೆಯನ್ನು ಊರ್ಜಿತಗೊಳಿಸಿದ್ದ. ಶಬರಸ್ವಾಮಿಯ ಭಾಷ್ಯದಲ್ಲಿ ಪ್ರಸಕ್ತವಾದ ವಿಚಾರಗಳನ್ನೆತ್ತಿಕೊಂಡು ಕುಮಾರಿಲಭಟ್ಟ ತರ್ಕದಿಂದ, ಯುಕ್ತಿಯಿಂದ, ತನ್ನ ಪ್ರತಿಭೆಯಿಂದ ವರ್ಪೂಮೀಮಾಂಸಾದರ್ಶನವನ್ನು ಸ್ಫುಟಗೊಳಿಸಿದ. ಶಬರಸ್ವಾಮಿಯ ಭಾಷ್ಯಕ್ಕೆ ಕುಮಾರಿಲ ಬರೆದ ವಾರ್ತಿಕಗಳು ಸುಪ್ರಸಿದ್ಧವಾಗಿವೆ. ಶಬರಭಾಷ್ಯದ ಮೊದಲ ಪ್ರಕರಣದ ಮೊದಲ ಪಾದದ ಮೇಲೆ ಶ್ಲೋಕರೂಪವಾಗಿ ಸಿದ್ಧಪಡಿಸಿದ ವಾರ್ತಿಕವೇ ಶ್ಲೋಕವಾರ್ತಿಕ; ಮೊದಲ ಪ್ರಕರಣದ ಉಳಿದ ಪಾದಗಳ ಮೇಲೂ ಎರಡು, ಮೂರನೆಯ ಪ್ರಕರಣಗಳ ಮೇಲೂ ಮಾಡಿದ ವಾರ್ತಿಕವೇ ತಂತ್ರವಾರ್ತಿಕ; ಉಳಿದ ಪ್ರಕರಣಗಳ ಮೇಲಿನ ಟೀಕೆಯೇ ಟುಪ್‍ಟೀಕೆ. ಈ ಮೂರು ಗ್ರಂಥಗಳಿಗೆ ಏಕಸೂತ್ರವಿರುವುದರಿಂದ ಇವನ್ನು ಒಂದೇ ಬೃಹತ್ ಟೀಕೆಯ ಭಾಗಗಳೆಂದು ವ್ಯವಹರಿಸುತ್ತಾರೆ; ಈ ಮೂರು ಗ್ರಂಥಗಳನ್ನು ಬರೆಯುವ ಮುನ್ನ ಕುಮಾರಿಲ ಬೃಹತ್ ಟೀಕೆಂಬ ಬೇರೊಂದು ಗ್ರಂಥವನ್ನು ಬರೆದಿದ್ದನೆಂದು ಕೆಲವರು ಹೇಳುತ್ತಾರೆ. ಬೃಹತ್ ಟೀಕೆಯೆಂದು ಸ್ಪಷ್ಟವಾಗಿ ಕರೆಸಿಕೊಳ್ಳುವ ಗ್ರಂಥವೇನೋ ಇಂದಿಗೆ ಉಳಿದು ಬಂದಿಲ್ಲ.

ಕುಮಾರಿಲಭಟ್ಟನ ಗ್ರಂಥಗಳಿಗೆ ಹಲವಾರು ವ್ಯಾಖ್ಯಾನಗಳೂ ಟಿಪ್ಪಣಿಗಳೂ ಇವೆ. ಶ್ಲೋಕವಾರ್ತಿಕಕ್ಕೆ ಸುಚರಿತಮಿತ್ರ (ಕಾಶಿಕೆಯ ರಚಯಿತ), ಪಾರ್ಥಸಾರಥಿ ಮಿಶ್ರ ಬೃಹತ್ ಟೀಕೆಂಬ ಬೇರೊಂದು ಗ್ರಂಥವನ್ನು ಬರೆದಿದ್ದನೆಂದು ಕೆಲವರು ಹೇಳುತ್ತಾರೆ. ಬೃಹತ್ ಟೀಕೆಯೆಂದು ಸ್ಪಷ್ಟವಾಗಿ ಕರೆಸಿಕೊಳ್ಳುವ ಗ್ರಂಥವೇನೋ ಇಂದಿಗೆ ಉಳಿದು ಬಂದಿಲ್ಲ.

ಟೀಕೆ,ವ್ಯಾಖ್ಯೆಗಳು[ಬದಲಾಯಿಸಿ]

ಕುಮಾರಿಲಭಟ್ಟನ ಗ್ರಂಥಗಳಿಗೆ ಹಲವಾರು ವ್ಯಾಖ್ಯಾನಗಳೂ ಟಿಪ್ಪಣಿಗಳೂ ಇವೆ. ಶ್ಲೋಕವಾರ್ತಿಕಕ್ಕೆ ಸುಚರಿತಮಿತ್ರ (ಕಾಶಿಕೆಯ ರಚಯಿತ), ಪಾರ್ಥಸಾರಥಿ ಮಿಶ್ರ (ನ್ಯಾಯರತ್ನಾಕರವನ್ನು ಬರೆದವ) ಇಬ್ಬರೂ ಉತ್ತಮ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಶ್ಲೋಕವಾರ್ತಿಕ, ತಂತ್ರವಾರ್ತಿಕಗಳೆರಡಕ್ಕೂ ಉಂವೇಕನೆಂಬ ಕುಮಾರಿಲರ ಶಿಷ್ಯ ಬರೆದಿರುವ ಟೀಕೆ ಸುಪ್ರಸಿದ್ಧವಾಗಿದೆ. ಉಂವೇಕ (ಕ್ರಿಸ್ತಾಬ್ದ 620-680) ಕವಿಯಾದ ಭವಭೂತಿಯೇ ಎಂದು ಹೇಳುತ್ತಾರೆ. ಭವಭೂತಿಯ ಮಾಲತೀಮಾಧವದ ಒಂದು ಪ್ರತಿಯ ಆರನೆಯ ಅಂಕದ ಕೊನೆಯಲ್ಲಿ ಶ್ರೀ ಕುಮಾರಿಲಸ್ವಾಮಿ ಪ್ರಸಾದ ಪ್ರಾಪ್ತವಾಗ್ವೈಭವ ಶ್ರೀಮದುಂವೇಕಾಚಾರ್ಯ ವಿರಚಿತ ಎಂಬ ಮಾತಿದೆ. ಕುಮಾರಿಲನ ಶ್ಲೋಕವಾರ್ತಿಕದಲ್ಲಿ ವನವಾದದವರೆಗೂ ಉಂವೇಕನ ವ್ಯಾಖ್ಯೆಯಿದೆ; ಉಳಿದ ಭಾಗಗಳಿಗೆ ಕುಮಾರಿಲಭಟ್ಟನ ಮಗ ಜಯ ಮಿಶ್ರನ ವ್ಯಾಖ್ಯೆಯಿದೆ. ಮುಂದೆ ಶಂಕರಾಚಾರ್ಯರ ಶಿಷ್ಯನಾದ ಮಂಡನಮಿಶ್ರ (ಕ್ರಿಸ್ತಾಬ್ದ 633-680) ಎಂಬುವನೂ ಮೊದಲಿಗೆ ಕುಮಾರಿಲಭಟ್ಟನ ಶಿಷ್ಯನೆಂದು ಪ್ರತೀತಿ. ಮಾಂಡೂಕ್ಯಕಾರಿಕೆಗಳನ್ನು ರಚಿಸಿದ ಗೌಡಪಾದಾಚಾರ್ಯನೂ ಕುಮಾರಿಲಭಟ್ಟನ ಬಳಿ ಅಧ್ಯಯನ ಮಾಡಿದ್ದನೆಂದು ಒಂದು ಮತವಿದೆ. ಆದರೆ ಇದಕ್ಕೆ ಆಧಾರ ಸಾಲದು.

ಪ್ರಭಾವ[ಬದಲಾಯಿಸಿ]

ಕುಮಾರಿಲಭಟ್ಟ ತನ್ನ ಶ್ಲೋಕವಾರ್ತಿಕದಲ್ಲಿ ವಾಸ್ತವವಾದವನ್ನು ಹಿಡಿದು ಪುಷ್ಟಿಮಾಡಿದ. ಯೋಗಾಚಾರ-ವಿಜ್ಞಾನವಾದಿಗಳ ಮತ್ತು ಮಾಧ್ಯಮಿಕರ ನಿರಾಲಂಬವಾದ ಮತ್ತು ಶೂನ್ಯತಾವಾದಗಳನ್ನು ಖಂಡಿಸಿ, ವೇದಪ್ರಾಮಾಣ್ಯವನ್ನು ಸಮರ್ಥಿಸಿದ. ವೈದಿಕಧರ್ಮದ ಪುನರುಜ್ಜೀವನ ಮಾಡಿ ಆಧುನಿಕ ಹಿಂದೂಮತದ ರೂಪುರೇಷೆಗಳನ್ನು ನಿರ್ಧರಿಸಲು ಯತ್ನಿಸಿದ ಮಹಾಪುರುಷರಲ್ಲಿ ಕುಮಾರಿಲಭಟ್ಟ ಆದ್ಯನೆನ್ನಬಹುದು. ಮುಖ್ಯವಾಗಿ ಪ್ರಮಾಣಗಳ ಪ್ರಸ್ತಾಪವನ್ನು ಎತ್ತಿಕೊಂಡು ಪ್ರತ್ಯಕ್ಷ, ಅನುಮಾನ, ಆಗಮ, ಉಪಮಾನ, ಅರ್ಥಾಪತ್ತಿ, ಅನುಪಲಬ್ಧಿ ಈ ಆರು ಪ್ರಮಾಣಗಳನ್ನು ಸಾಧುವೆಂದು ಈತ ವಾದ ಮಾಡಿದ. ಈ ಜಾಡನ್ನೇ ಹಿಡಿದು ಸಿದ್ಧವಾದ ನಯವನ್ನೇ ವಿರೋಧಿಗಳಾದ ಅದ್ವೈತಿಗಳೂ ವ್ಯವಹಾರದಲ್ಲಿ ಒಪ್ಪಿಕೊಂಡರು. ವ್ಯವಹಾರೇ ಭಾಟ್ಟನಯಃ ಎನ್ನುವ ಮಾತು ಅದ್ವೈತಿಗಳ ವಿಚಾರವಾಗಿ ಬಂದದ್ದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: