ಕಿವಿ, ಮೂಗು ಮತ್ತು ಗಂಟಲು ರೋಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನುಷ್ಯನ ಕಿವಿ, ಮೂಗು ಮತ್ತು ಗಂಟಲುಗಳು ಅವುಗಳ ಸ್ಥಾನ ಮತ್ತು ಕ್ರಿಯೆಗಳ ನಿಮಿತ್ತ ಪರಸ್ಪರ ನಿಕಟವಾದ ಸಂಬಂಧವನ್ನು ಪಡೆದಿವೆ. ಆದ್ದರಿಂದ ವೈದ್ಯಕೀಯ ತರಬೇತಿ ಮತ್ತು ವ್ಯವಹಾರಗಳಲ್ಲಿ ಇವನ್ನು ಒಟ್ಟಿಗೆ ಪರಿಶೀಲಿಸಲಾಗುತ್ತದೆ. ಯೂಸ್ಟೇಕಿಯನ್ ನಾಳ ಕಿವಿ ಮತ್ತು ಗಂಟಲ ಕುಹರಗಳ ನಡುವೆ ಸಂಬಂಧವನ್ನು ಕಲ್ಪಿಸುವುದರ ಪರಿಣಾಮವಾಗಿ ಮೂಗು ಮತ್ತು ಗಂಟಲಿನ ಕೆಲವು ಕಾಯಿಲೆಗಳು ಕಿವಿಗೂ ವ್ಯಾಪಿಸಿ ಬಾಧಿಗೀಡು ಮಾಡುತ್ತವೆ.[೧]

ಕಿವಿಯ ರೋಗಗಳು[ಬದಲಾಯಿಸಿ]

ಕಿವಿ ಶ್ರವಣಕ್ಕೆ ಅಗತ್ಯವಾದ ಮತ್ತು ದೇಹವನ್ನು ಸಮತೋಲದಲ್ಲಿಡಲು ಸಹಾಯಕವಾದ ಮುಖ್ಯ ಅಂಗ. ಕಿವಿಗೆ ಸಂಬಂಧಿಸಿದ ಯಾವುದೇ ಕಾಯಿಲೆ ಅದರ ಈ ಎರಡು ಮುಖ್ಯವಾದ ಕಾರ್ಯಗಳಿಗೆ ಅಡಚಣೆಯನ್ನುಂಟುಮಾಡಬಲ್ಲುದು. ಹೊರಗಿವಿಗೆ ಪೆಟ್ಟುಬಿದ್ದಾಗ ರಕ್ತಿದ ಹೊಪ್ಪಳೆ ಅಥವಾ ಸೋಂಕುಂಟಾಗಬಹುದು. ಅನಂತರ ಆ ಜಾಗದಲ್ಲಿ ಗಾಯದ ಕಲೆ ಉಳಿದು ಹೊರಗಿವಿ ಸೊಟ್ಟಗಾಗುತ್ತದೆ. ಸಾಮಾನ್ಯವಾಗಿ ಕುಸ್ತಿಮಾಡುವವರಲ್ಲಿ ಮತ್ತು ಮುಷ್ಟಿಕಾಳಗದ ಜಟ್ಟಿಗಳಲ್ಲಿ ಹೊರಗಿವಿಗೆ ಪೆಟ್ಟುಬಿದ್ದು ಅದು ಹೂಕೋಸಿನಾಕಾರದಲ್ಲಿರುವುದುಂಟು. ಕೆಲವರಲ್ಲಿ ಕಿವಿಯನಾಳದ ಚರ್ಮ ಸೂಕ್ಷ್ಮವಾಗಿದ್ದು ಪೈತ್ಯಕಾರಕಗಳು (ಅಲ್ಲರ್ಜನ್ಸ್) ಅದನ್ನು ಸೋಂಕಿದಾಗ ಕಿವಿಯ ಕಡಿತವುಂಟಾಗುತ್ತದೆ. ಇದರಲ್ಲಿ ಚರ್ಮ ಒಣಗಿ ಚೆಕ್ಕೆಯಾಗಿಯೂ ಅಥವಾ ತೇವವಾಗಿ ಜಿನುಗುತ್ತಲೂ ಇರುತ್ತದೆ. ಕಿವಿಯನ್ನು ಕೆರೆದುಕೊಳ್ಳುವುದನ್ನು ಹಾಗೂ ಸಾಬೂನು ಮತ್ತು ನೀರನ್ನು ಅದಕ್ಕೆ ಹಾಕುವುದನ್ನು ನಿಲ್ಲಿಸಿದಲ್ಲಿ ಕಡಿತ ಶಮನಗೊಳ್ಳುತ್ತದೆ. ಹೊರಗಿವಿಯ ನಾಳದಲ್ಲಿರುವ ಮೇಣಗ್ರಂಥಿಗಳು ಕಿವಿಯ ಮೇಣವನ್ನು ಉತ್ಪತ್ತಿ ಮಾಡುತ್ತವೆ. ಈ ಮೇಣ ಹೆಚ್ಚಾಗಿ ಶೇಖರಗೊಂಡಾಗ ಕಿವಿ ಗುಮ್ಮೆನ್ನುತ್ತದೆ ಮತ್ತು ಶ್ರವಣಶಕ್ತಿ ಕಡಿಮೆಯಾಗುತ್ತದೆ. ಮೇಣವನ್ನು ಹೊರದೆಗೆದಾಗ ಈ ಚಿಹ್ನೆಗಳು ಇಲ್ಲವಾಗುತ್ತವೆ.

ಕಿವಿತಮಟೆ[ಬದಲಾಯಿಸಿ]

ಕಿವಿತಮಟೆಗೆ ನೇರವಾಗಿ ಪೆಟ್ಟುಬಿದ್ದಾಗ ಅಥವಾ ಕಿವಿಯನಾಳಮೇಲೆ (ಕಪಾಲಕ್ಕೆ) ಅಂಗೈಯಿಂದ ಹೊಡೆದಾಗ ಕಿವಿತಮಟೆ ಹರಿದುಹೋಗಬಹುದು. ಇದರಿಂದ ಕಿವಿ ಜುಮ್ಮೆನ್ನುವುದಲ್ಲದೆ ತೀಕ್ಷ್ಣವಾದ ನೋವು ಮತ್ತು ಶ್ರವಣಕ್ಕೆ ತೊಂದರೆಯುಂಟಾಗುತ್ತವೆ. ಯಾವ ಸೋಂಕೂ ತಗುಲದಿದ್ದಲ್ಲಿ ಕಿವಿತಮಟೆಯ ತೂತು ತನಗೆ ತಾನೇ ಮುಚ್ಚಿಹೋಗುತ್ತದೆ. ಈ ರೀತಿ ಪೆಟ್ಟುತಗುಲಿದಾಗ ಅದು ವಾಸಿಯಾಗುವವರೆಗೂ ಕಿವಿಯೊಳಕ್ಕೆ ನೀರನ್ನು ಹಾಕಬಾರದು.ಮಧ್ಯಕಿವಿಯ ತೀವ್ರ ಸೋಂಕು (ಅಕ್ಯೂಟ್ ಆಟೈಟಿಸ್ ಮೀಡಿಯ) ಸಾಮಾನ್ಯವಾಗಿ ನೆಗಡಿಯಾದ ಅನಂತರ ಬರುತ್ತದೆ. ಸೋಂಕು ಮೂಗಿನಿಂದ ಯೂಸ್ಟೇಕಿಯನ್ ನಾಳದ ಮೂಲಕ ಮಧ್ಯಕಿವಿಗೆ ಹರಡುತ್ತದೆ. ಇದರಿಂದ ಸೋಂಕಿಗೊಳಗಾದ ಕಿವಿಯಲ್ಲಿ ಎಡೆಬಿಡದೆ ತೀವ್ರವಾದ ನೋವು, ಜ್ವರ ಕಾಣಿಸಿಕೊಂಡು ಕಿವಿ ಗುಮ್ಮನ್ನುವುದಲ್ಲದೆ ಶ್ರವಣಕ್ಕೆ ಅಡಚಣೆಯುಂಟಾಗುತ್ತದೆ. ಮಧ್ಯಕಿವಿಯ ತೀವ್ರ ಸೋಂಕು ಮಧ್ಯ ಕಿವಿಯಮೂಳೆಗೆ ಹರಡಿದಾಗ ಮಧ್ಯಕಿವಿಯ ದೀರ್ಘ ಸೋಂಕು (ಕ್ರ್ರಾನಿಕ್ ಆಟೈಟಿಸ್ ಮೀಡಿಯ) ತಲೆದೋರುತ್ತದೆ. ಇದರಿಂದ ಕಿವಿತಮಟೆ ತೂತಾಗಿ ಕಿವಿ ಸೋರುತ್ತದೆ ಮತ್ತು ಶ್ರವಣಕ್ಕೆ ಅಡ್ಡಿಯುಂಟಾಗುತ್ತದೆ. ಸಾಮಾನ್ಯವಾಗಿ ದುರ್ವಾಸನೆಯಿಂದ ಕೂಡಿರುವ ಈ ಕಿವಿಸೋರುವಿಕೆ ಸತತವಾಗಿರಬಹುದು ಅಥವಾ ಬಿಟ್ಟು ಬಿಟ್ಟು ಕಾಣಿಸಬಹುದು. ಸ್ಥಳೀಯ ಹಾಗೂ ಸಾಮಾನ್ಯ ಚಿಕಿತ್ಸೆಗಳಿಂದ ಇದನ್ನು ವಾಸಿಮಾಡಬಹುದು. ಕೆಲವು ವೇಳೆ ಶಸ್ತ್ರಚಿಕಿತ್ಸೆಯಿಂದ ಸೋಂಕಿಗೊಳಗಾದ ಮೂಳೆಯನ್ನು ತೆಗೆದುಹಾಕಬೇಕಾಗುತ್ತದೆ. ಮಧ್ಯಕಿವಿಯ ಸೋಂಕಿನಿಂದ ಕೆಲವು ಬಾರಿ ಜಟಿಲ ಪರಿಣಾಮಗಳುಂಟಾಗುತ್ತವೆ. ಕಿವಿಯ ಮೇಲ್ಭಾಗದಲ್ಲಿರುವ ತಲೆಯೆಲುಬಿನ ರೋಗ (ಮ್ಯಾಸ್ಟಾಯಿಡ್ ಡಿಸೀಸ್) ತಲೆದೋರಬಹುದು; ಸೋಂಕು ಒಳಕಿವಿಗೂ ಹರಡಿ ಶ್ರವಣಶಕ್ತಿ ಮತ್ತಷ್ಟು ಕುಂದಬಹುದು; ದೇಹದ ಸಮತೋಲನ ಕೆಡಬಹುದು; ಮತ್ತೆ ಕೆಲವು ವೇಳೆ ಇದರಿಂದ ಮಿದುಳಿಗೂ ಸೋಂಕು ತಗಲಬಹುದು. ಮಧ್ಯಕಿವಿಯ ಸೋಂಕಿನಲ್ಲಿ ಕಿವಿಯಲ್ಲಿ ಒಂದೇ ಸಮವಾಗಿ ನೋವಿರುತ್ತದೆ. ಕೆಲವು ವೇಳೆ ದೇಹದ ಸಮತೋಲನಶಕ್ತಿಯೂ ಕುಂದಬಹುದು. ಅಂಥ ಸಮಯದಲ್ಲಿ ತಜ್ಞವೈದ್ಯರಿಂದ ಸಲಹೆ ಪಡೆಯುವುದೊಳ್ಳೆಯದು. ಕೆಲವು ವೇಳೆ ಒಗ್ಗದಿಕೆಯಿಂದ (ಅಲರ್ಜಿ) ಊತವುಂಟಾಗಿ ಯೂಸ್ಟೇಕಿಯನ್ ನಾಳ ಮುಚ್ಚಿಹೋಗುತ್ತದೆ. ಇದರಿಂದ ಸೋಂಕಿನ ಯಾವ ಚಿಹ್ನೆಯೂ ಕಂಡುಬುದಿದ್ದರೂ ಮಧ್ಯಕಿವಿಯಲ್ಲಿ ದ್ರವಶೇಖರಗೊಳ್ಳುತ್ತದೆ. ಶ್ರವಣಶಕ್ತಿ ತುಸು ಕುಂದುವುದಲ್ಲದೆ ಕಿವಿ ಗುಮ್ಮೆನ್ನುತ್ತದೆ. ಕಿವಿತಮಟೆಯಲ್ಲಿ ತೂತುಮಾಡಿ ಈ ದ್ರವವನ್ನು ಹೊರತೆಗೆಯುವುದರಿಂದ ಇದನ್ನು ಗುಣಪಡಿಸಬಹುದು. ಒಗ್ಗದಿಕೆಗೆ ಕಾರಣವಾದ ಅಂಶವನ್ನು ಕಂಡುಹಿಡಿದು ಅದನ್ನು ತಡೆಗಟ್ಟುವುದರಿಂದ ಬೇನೆಯನ್ನು ಶಾಶ್ವತವಾಗಿ ನಿವಾರಿಸಬಹುದು.[೨]

ಪಾಶ್ರ್ವವಾಯು[ಬದಲಾಯಿಸಿ]

ಮುಖದ ನರದ ಕಾರ್ಯಕ್ಕೆ ಅಡಚಣೆಯುಂಟಾದಾಗ ಮುಖಕ್ಕೆ ಪಾಶ್ರ್ವವಾಯು ತಗಲುತ್ತದೆ. ಕಿವಿಯ ಮೂಳೆಯ ಮೂಲಕ ಹಾದುಹೋಗುವ ಈ ನರದ ಭಾಗ ಊದಿಕೊಂಡಾಗಲೂ ಮುಖಕ್ಕೆ ಪಾಶ್ರ್ವವಾಯು ಸಂಭವಿಸುತ್ತದೆ. ಈ ನರದ ಊತ ಸಾಮಾನ್ಯವಾಗಿ ತಾತ್ಕಾಲಿಕ. ಆದರೆ ಕೆಲವು ಬಾರಿ ಇದು ಶಶ್ವಾತವಾಗಿ ಉಳಿಯಬಹುದು. ಪಾಶ್ರ್ವವಾಯುವಿಗೆ ಈಡಾದ ಅನಂತರ ಮುಖದ ಮಾಂಸಖಂಡಗಳ ಶಕ್ತಿ ಮೂರು ನಾಲ್ಕು ವಾರಗಳಲ್ಲಿ ಉತ್ತಮಗೊಳ್ಳದಿದ್ದಲ್ಲಿ ಶಾಶ್ವತವಾದ ಮುಖದ ಪಾಶ್ರ್ವವಾಯುವನ್ನು ತಡೆಗಟ್ಟಲು, ನರದ ಊತವನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆಯ ಮೂಲಕ ನರದ ಒತ್ತಡವನ್ನು ಕಡಿಮೆ ಮಾಡ ಬೇಕಾಗುತ್ತದೆ.ಸ್ಟೇಪಿಸ್ ಮೂಳೆ ಗಟ್ಟಿಯಾಗುವುದರಿಂದ ಸಾಮಾನ್ಯವಾಗಿ ಯುವಕರಲ್ಲಿ ಶ್ರವಣಶಕ್ತಿಗೆ ತೊಂದರೆ ಉಂಟುಮಾಡುತ್ತದೆ. ಇದು ಎರಡು ಕಿವಿಗಳಲ್ಲೂ ನಿಧಾನವಾಗಿ ಹೆಚ್ಚುತ್ತ ಹೋಗುತ್ತದೆ. ಸಾಮಾನ್ಯವಾಗಿ ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುವ ಈ ಬೇನೆ ಹೆಂಗಸರಲ್ಲಿ ಹೆಚ್ಚು. ಸ್ಟೇಪಿಸ್ ಮೂಳೆ ಹೆಚ್ಚು ಹೆಚ್ಚಾಗಿ ಗಟ್ಟಿಯಾದಂತೆಲ್ಲ ಶ್ರವಣಶಕ್ತಿಯೂ ಕುಂದುತ್ತ ಬರುತ್ತದೆ. ಔಷಧಿಗಳಿಂದ ಇದರ ಚಿಕಿತ್ಸೆ ಸಾಧ್ಯವಿಲ್ಲ. ಶಸ್ತ್ರಚಿಕಿತ್ಸೆಯಿಂದ ಶ್ರವಣಶಕ್ತಿಯನ್ನು ಸ್ವಲ್ಪಮಟ್ಟಿಗೆ ಉತ್ತಮಗೊಳಿಸಬಹುದು.

ಒಳಗಿವಿಯ ರಚನೆ[ಬದಲಾಯಿಸಿ]

ತಲೆಸುತ್ತಿಗೆ ಒಳಗಿವಿಯ ರಚನೆಯಲ್ಲುಂಟಾಗುವು ತೊಂದರೆಯೇ ಮುಖ್ಯಕಾರಣ. ಒಳಗಿವಿಯ ದ್ರವದ ಒತ್ತಡ ಹೆಚ್ಚುಕಡಿಮೆಯಾದಾಗ ಮೇನಿಯರ್ ಕಾಯಿಲೆ ತಲೆದೋರುತ್ತದೆ. ಇದರಲ್ಲಿ ತೀವ್ರವಾದ ತಲೆಸುತ್ತು, ಕೆಲವು ಬಾರಿ ವಾಕರಿಕೆ ಮತ್ತು ವಾಂತಿಯುಂಟಾಗುತ್ತವೆ; ಶ್ರವಣಶಕ್ತಿ ಕಡಿಮೆಯಾಗಿ ಕಿವಿಮೊರೆತಗಳು ತಲೆದೋರುತ್ತವೆ. ಒಳಗಿವಿಯ ದ್ರವದ ಒತ್ತಡ ಹೆಚ್ಚುಕಡಿಮೆಯಾಗದಂತೆ ಮಾಡುವುದರಿಂದ ಈ ಕಾಯಿಲೆಯನ್ನು ತಡೆಗಟ್ಟಬಹುದು. ಸಾಮಾನ್ಯವಾಗಿ ಮಧ್ಯಕಿವಿಯ ಭಾಗದ ಸೋಂಕು ಒಳಗಿವಿಗೆ ಹರಡಿ ಒಳಗಿವಿಯುರಿತ ಉಂಟಾಗುತ್ತದೆ. ಇದರಲ್ಲಿ ಥಟ್ಟನೆ ಶ್ರವಣಶಕ್ತಿ ಸಂಪೂರ್ಣವಾಗಿ ನಾಶವಾಗುವುದಲ್ಲದೆ ದೇಹದ ಸಮತೋಲನಕ್ಕೆ ತೊಂದರೆ, ವಾಕರಿಕೆ, ವಾಂತಿ ಮತ್ತು ಕೆಲವು ಸಾರಿ ತೀವ್ರವಾದ ಕಿವಿಮೊರೆತಗಳು ಉಂಟಾಗುತ್ತವೆ. ಮಧ್ಯ ಮತ್ತು ಒಳಕಿವಿಯು ಸೋಂಕನ್ನು ನಿವಾರಿಸಿದಾಗ ಇದು ವಾಸಿಯಾಗುತ್ತದೆ. ಕೆಲವು ವೇಳೆ ಶಸ್ತ್ರ ಚಿಕಿತ್ಸೆಯ ಮೂಲಕ ಈ ಸೋಂಕನ್ನು ತಡೆಗಟ್ಟಬೇಕಾಗುತ್ತದೆ. ಒಳಗಿವಿಗೆ ರಕ್ತವನ್ನೊದಗಿಸುವ ರಕ್ತನಾಳಗಳು ಸಣ್ಣದಾಗಿಯೂ ಸೂಕ್ಷ್ಮವಾಗಿಯೂ ಇವೆ. ಇವು ಸೆಟೆತುಕೊಂಡಲ್ಲಿ ಅಥವಾ ಒಡೆದು ಹೋದಲ್ಲಿ ಒಳಗಿವಿಯ ಪೋಷಣೆಗೆ ಅಡ್ಡಿಯುಂಟಾಗುತ್ತದೆ. ಇದ್ದರಿಂದ ಥಟ್ಟನೆ ಶ್ರವಣಶಕ್ತಿ ಹೊರಟು ಹೋಗುವುದಲ್ಲದೆ ದೇಹದ ಸಮತೋಲನಕ್ಕೆ ಅಡ್ಡಿಯುಂಟಾಗುತ್ತದೆ. ಕಿವಿಮೊರೆತ ತಲೆದೋರುತ್ತದೆ. ತೀವ್ರವಾದ ಔಷಧೋಪಚಾರವನ್ನು ಮೊದಲೇ ಆರಂಭಿಸುವುದರಿಂದ ಒಳಗಿವಿಯ ಕೆಲಸಗಳನ್ನು ಸಂಪೂರ್ಣವಾಗಿ ಸರಿಪಡಿಸಬಹುದು. ಆದರೆ ಸಾಮಾನ್ಯವಾಗಿ ಇಂಥದರಲ್ಲಿ ಶ್ರವಣಶಕ್ತಿ ತುಸು ಕಡಿಮೆಯಾಗಿರುತ್ತದೆ.

ಮಧ್ಯ ಮತ್ತು ಒಳಗಿವಿ[ಬದಲಾಯಿಸಿ]

ಮಧ್ಯ ಮತ್ತು ಒಳಗಿವಿಗಳ ಪ್ರದೇಶದಲ್ಲಿ ಗಂಟುಗಳು ಕಾಣಿಸಿಕೊಳ್ಳಬಹುದು ಇದರಿಂದ ಕ್ರಮೇಣವಾಗಿ ಶ್ರವಣಶಕ್ತಿ ಕಡಿಮೆಯಾಗುತ್ತ ಬಂದು ಕಿವಿಮೊರೆತ ತಲೆಸುತ್ತು, ಮುಖದ ಮಾಂಸಖಂಡಗಳ ದುರ್ಬಲತೆ ಮತ್ತು ತಲೆನೋವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಗಂಟುಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಬೇಕು. ತಲೆಗೆ ಪೆಟ್ಟುಬಿದ್ದಾಗ ತಲೆಮೂಳೆ ಮುರಿದು ಅಥವಾ ಮುರಿಯದೆಯೂ ಒಳಗಿವಿಗೆ ತೊಂದರೆಯುಂಟಾಗಬಹುದು. ಇದರಿಂದ ಶ್ರವಣಶಕ್ತಿ ಇಲ್ಲವಾಗಿ ದೇಹದ ಸಮತೋಲನಕ್ಕೆ ಅಡ್ಡಿಯುಂಟಾಗುವುದಲ್ಲದೆ ಕಿವಿಮೊರೆತ ಕಂಡುಬರುತ್ತದೆ. ಕೆಲವು ಬಾರಿ ಮುಖದ ನರಕ್ಕೂ ಪೆಟ್ಟು ತಗುಲಿ ಮುಖದ ಮಾಂಸಖಂಡಗಳು ದುರ್ಬಲವಾಗುತ್ತವೆ. ಕಿವಿಮೊರೆತ ಕೆಲವು ವೇಳೆ ಶ್ರವಣನರದ ಬಾಧೆಯಿಂದಲೂ ಉಂಟಾಗುತ್ತದೆ. ಸೋಂಕುನರದ ಮೇಲಿನ ಒತ್ತಡ ಅಥವಾ ಅಸಮಗ್ರ ರಕ್ತಚಲನೆಗಳು ಈ ನರದ ಬಾಧೆಗೆ ಕಾರಣವಾಗಬಹುದು.

ಮೂಗಿನ ರೋಗಗಳು[ಬದಲಾಯಿಸಿ]

ಮೂಗು ಮನುಷ್ಯನಲ್ಲಿ ಮತ್ತು ಪ್ರಾಣಿಗಳಲ್ಲಿ ಇರುವ ಘ್ರಾಣೇಂದ್ರಿಯ. ಸೇವಿಸಿದ ಗಾಳಿಯನ್ನು ಇದು ಶುದ್ಧಿಗೊಳಿಸುವುದಲ್ಲದೆ ಉಷ್ಣ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ. ಮೂಗಿಗೆ ಯಾವುದೇ ಬಗೆಯ ರೋಗವುಂಟಾದಲ್ಲಿ ಮುಖ್ಯವಾಗಿ ಉಸಿರಾಡಲು ತೊಂದರೆಯಾಗುತ್ತದೆ. ಮೂಗಿನ ರೋಗಗಳನ್ನು ತೀವ್ರ ಹಾಗೂ ದೀರ್ಘ ಮೂಗುರಿತಗಳೆಂದು ಎರಡು ವಿಧವಾಗಿ ವಿಂಗಡಿಸಬಹುದು. ಮೂಗುರಿತವೆಂದರೆ, ಮೂಗಿನ ಒಳಗಡೆಯಿರುವ ಲೋಳೆಗೂಡಿದ ನಯಚರ್ಮದಲ್ಲಿ ಉರಿತದ ಪ್ರತಿಕ್ರಿಯೆಯುಂಟಾಗುವುದು. ತೀವ್ರ ಮೂಗುರಿತದಲ್ಲಿ ಮೂಗಿನಿಂದ ನೀರಿನೋಪಾದಿಯ ಲೋಳೆ ಹೆಚ್ಚಾಗಿ ಸುರಿಯುವುದಲ್ಲದೆ ಉಸಿರಾಟಕ್ಕೆ ತೊಂದರೆಯುಂಟಾಗುತ್ತದೆ. ತರುವಾಯ ಬೇರೆ ರೀತಿಯ ಸೋಂಕು ತಗುಲದಿದ್ದಲ್ಲಿ ಇದು ಒಂದು ವಾರದೊಳಗೆ ಶಮನವಾಗುತ್ತದೆ ದೂಳು, ರ್ಯಾಗ್‍ವೀಡ್ ಎಂಬ ಒಂದು ಬಗೆಯ ಕಳೆ ಮೊದಲಾದ ಒಗ್ಗದಿಕೆ ಕಾರಕಗಳಿಂದುಂಟಾಗುವ ಒಗ್ಗದಿಕೆ ಮೂಗುರಿತದಲ್ಲಿಯೂ ಇದೇ ಬಗೆಯ ಚಿಹ್ನೆಗಳು ಕಂಡುಬರುತ್ತವೆ. ಇದಕ್ಕೆ ದೂಳುಜ್ವರ ಎಂದು ಹೆಸರು. ಉರಿತಕ್ಕೆ ಕಾರಣವಾದ ವಸ್ತುಗಳನ್ನು ನಿವಾರಿಸುವವರೆಗೂ ರೋಗಲಕ್ಷಣಗಳು ಶಮನವಾಗುವುದಿಲ್ಲ.ತೀವ್ರ ಮೂಗುರಿತ ಪದೇ ಪದೇ ಬಂದಾಗ ದೀರ್ಘ ಮೂಗುರಿತದಲ್ಲಿ ಪರಿಣಾಮಗೊಳ್ಳುತ್ತದೆ. ಇದರ ಮೊದಲ ಹಂತದಲ್ಲಿ ಲೋಳೆಗೂಡಿದ ನಯಚರ್ಮ ಅತಿವೃದ್ಧಿಗೊಂಡು (ಹೈಪರ್ ಟ್ರೊಫಿ) ಉಸಿರಾಟಕ್ಕೆ ತೊಂದರೆಯಾಗುವುದಲ್ಲದೆ ಮೂಗಿನಿಂದ ಗಟ್ಟಿಯಾದ ಮತ್ತು ಜಿಗುಟಾದ ಲೋಳೆ ಸುರಿಯುತ್ತದೆ. ಇದಕ್ಕೆ ಅತಿವೃದ್ಧಿ ಮೂಗುರಿತ ಎಂದು ಹೆಸರು. ಈ ಸ್ಥಿತಿ ಬಹಳ ಕಾಲದವರೆಗೆ ಮುಂದುವರಿದಲ್ಲಿ ಲೋಳೆಗೂಡಿದ ನಯಚರ್ಮ ಕ್ಷಯಿಸುತ್ತ ಬಂದು ಒಣಗಿದ, ದುರ್ವಾಸನೆಯ ಪಿಸರೆಯುಂಟಾಗುತ್ತದೆ. ಇದಕ್ಕೆ ಕ್ಷೀಣಮೂಗುರಿತ ಎಂದು ಹೆಸರು. ಎರಡು ಹೊಳ್ಳೆಗಳನ್ನು ಬೇರ್ಪಡಿಸುವ ಮೂಗಿನ ಮಧ್ಯದ ಗೋಡೆ ಅಸಮವಾಗಿದ್ದಲ್ಲಿ ಅಥವಾ ವಿಕಾರಗೊಂಡಿದ್ದಲ್ಲಿ ಉಸಿರಾಟಕ್ಕೆ ತೊಂದರೆಯುಂಟಾಗುತ್ತದೆ. ಇದು ಸಾಮಾನ್ಯವಾಗಿ ಮೂಗಿಗೆ ಹೊರಗಿನಿಂದ ಪೆಟ್ಟು ಬಿದ್ದಾಗ ಸಂಭವಿಸುತ್ತವೆ. ಮೂಗಿನಲ್ಲಿ ಕೂದಲುಗುಳಿರುವುದರಿಂದ ಮೂಗಿನ ತುದಿ ಮತ್ತು ಹೊಳ್ಳೆಗಳಲ್ಲಿ ಸ್ಟೆಫಿಲೊಕಾಕಸ್ ಸೋಂಕು ತಗಲುತ್ತದೆ. ಸೋಂಕಿನಿಂದ ಹಾಗೂ ಒಗ್ಗದಿಕೆಯಿಂದ ಉಂಟಾದ ದೀರ್ಘಬಾಧೆಯಿಂದ ಮೂಗಿನ ಮಧ್ಯದಲ್ಲಿ ಗಂಟುಗಳುಂಟಾಗುತ್ತವೆ. ಇವು ಗಾತ್ರದಲ್ಲಿ ದೊಡ್ಡವಾದಾಗ ಉಸಿರಾಟಕ್ಕೆ ತೊಂದರೆಯಾಗುತ್ತದೆ.

ಗಂಟಲಿನ ರೋಗಗಳು[ಬದಲಾಯಿಸಿ]

ಬಾಯಿ ಮತ್ತು ಮೂಗಿನ ಪ್ರದೇಶಗಳನ್ನು ಅನ್ನನಾಳ ಮತ್ತು ಧ್ವನಿಪೆಟ್ಟಿಗೆಗಳಿಗೆ ಸೇರಿಸುವ ಮಾರ್ಗಪ್ರದೇಶವೇ ಗಂಟಲು. ಇದು ಆಹಾರಪಾನೀಯಗಳನ್ನು ಅನ್ನನಾಳಕ್ಕೂ ಉಚ್ಛ್ವಸಿತ ಮತ್ತು ನಿಶ್ವಸಿತ ವಾಯುವನ್ನು ಧ್ವನಿಪೆಟ್ಟಿಗೆಗೂ ಒಯ್ಯುವ ದ್ವಾರ. ಇದು ಕಿವಿಗಳೆರಡರ ಮಧ್ಯ ಭಾಗದೊಂದಿಗೆ ಯೂಸ್ಟೇಕಿಯನ್ ನಾಳಗಳ ಮೂಲಕ ಸಂಬಂಧವನ್ನು ಪಡೆದಿರುವುದರಿಂದ ಹೊರಗಿವಿ ಮತ್ತು ಮಧ್ಯಕಿವಿಯನ್ನು ಬೇರ್ಪಡಿಸುವ ಕಿವಿತಮಟೆಯ ಮೇಲೆ ಬೀಳುವ ಗಾಳಿಯ ಒತ್ತಡವನ್ನು ಸಮತೋಲನಗೊಳಿಸಲು ಸಹಾಯಕವಾಗುತ್ತದೆ. ಪಾಶ್ರ್ವವಾಯುವಿನಿಂದ ಗಂಟಲಿನ ಮಾಂಸಖಂಡಗಳ ಮೇಲೆ ದುಷ್ಪರಿಣಾಮವುಂಟಾಗಬಹುದು ಅಥವಾ ಬ್ಯಾಕ್ಟೀರಿಯ, ವೈರಸ್ ಮತ್ತು ಫಂಗೈಗಳಿಂದುಂಟಾಗುವ ಸೋಂಕಿನಿಂದ ಗಂಟಲಿನ ಮೇಲ್ಪದರಗಳಿಗೆ ತೊಂದರೆಯುಂಟಾಗಬಹುದು. ಸ್ಟ್ರೆಪ್ಟೊಕಾಕಸ್ ಬ್ಯಾಕ್ಟೀರಿಯದಿಂದ ಉಂಟಾಗುವ ಸೊಂಕಿನಿಂದ ತೀವ್ರಗಲಗ್ರಂಥಿಯ ಉರಿಯೂತ ಉಂಟಾಗಿ ನೋವು, ಜ್ವರ, ಮತ್ತು ಊತ ಕಾಣಿಸಿಕೊಳ್ಳುತ್ತವೆ. ಈ ಸೋಂಕು ಗಲಗ್ರಂಥಿಯ ಹಿಂಭಾಗಕ್ಕೆ ವ್ಯಾಪಿಸಿದಾಗ ಹುಣ್ಣು ತಲೆದೋರುತ್ತದೆ. ಇದರಿಂದ ಗಲಗ್ರಂಥಿಗಳು ಕೀತುಕೊಂಡು ನೋವು ಹೆಚ್ಚಿ ನುಂಗಲು ತೊಂದರೆಯುಂಟಾಗಿ ಬಾಯ್ದೆರೆಯಲು ಕಷ್ಟವಾಗುತ್ತದೆ. ಸ್ಟ್ರೆಪ್ಟೊಕಾಕಸ್ ಬ್ಯಾಕ್ಟೀರಿಯಾದಿಂದ ಉಂಟಾದ ಗಂಟಲು ಸೋಂಕಿನಿಂದ ಕೆಂಪುಜ್ವರ ಬರುತ್ತದೆ. ಇದರಲ್ಲಿ ಚರ್ಮದ ಮೇಲೆ ಕೆಂಪು ಗಂದೆಗಳು ಕಾಣಿಸಿಕೊಳ್ಳುತ್ತವೆ. ಗಂಟಲಿನ ಈ ಸೋಂಕು ಮೂತ್ರಜನಕಾಂಗ ಮತ್ತು ಹೃದಯಗಳ ಮೇಲೆ ದುಷ್ಪರಿಣಾಮವನ್ನು ಉಂಟುಮಡಬಹುದು. ಆದರೆ ಪೆನಿಸಿಲಿನ್ ಮತ್ತು ಸ್ವಲ್ಪ ಔಷಧಿಗಳು ಬಳಕೆಗೆ ಬಂದಿರುವುದರಿಂದ ಅದರ ಭೀತಿ ಕಡಿಮೆಯಾಗಿದೆ. ಈ ಸೋಂಕು ಪದೇ ಪದೇ ಬಂದಾಗ ಗಲಗ್ರಂಥಿಗಳು ಮತ್ತು ಅಡಿನಾಯ್ಡ್ ಗ್ರಂಥಿಗಳು ದೊಡ್ಡದಾಗಿ ಉಸಿರಾಟಕ್ಕೆ ಮತ್ತು ನುಂಗಲು ಅಡಚಣೆಯುಂಟಾಗುತ್ತದೆ. ಅಡಿನಾಯ್ಡ್ ಗ್ರಂಥಿಗಳ ಊತದಿಂದ ಸಾಮಾನ್ಯವಾಗಿ ಮಕ್ಕಳಲ್ಲಿ ಕಿವುಡು ಸಂಭವಿಸುತ್ತದೆ. ಗಲಗ್ರಂಥಿಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವ ಸಂದರ್ಭದಲ್ಲಿಯೇ ಅಡಿನಾಯ್ಡ್ ಗ್ರಂಥಿಗಳನ್ನೂ ತೆಗೆಯುವುದರಿಂದ ಈ ಕಿವುಡನ್ನು ಹೋಗಲಾಡಿಸಬಹುದು. ಈ ಎರಡು ಗ್ರಂಥಿಗಳೂ ದೇಹಕ್ಕೆ ಉಪಕಾರಿಗಳೇ. ಆದ್ದರಿಂದ ಪದೇ ಪದೇ ಅವುಗಳಿಗೆ ಸೋಂಕು ತಗುಲದ ಹೊರತು ಅವುಗಳನ್ನು ತೆಗೆಯಬಾರದು.

ಡಿಫ್ತೀರಿ ಬ್ಯಾಕ್ಟೀರಿಯ[ಬದಲಾಯಿಸಿ]

ಡಿಫ್ತೀರಿಯ ಎಂಬುದು ನಿರ್ದಿಷ್ಟ ಬ್ಯಾಕ್ಟೀರಿಯಗಳಿಂದ ಉಂಟಾಗುವ ತೀವ್ರವಾದ ಗಂಟಲುಸೋಂಕು. ಮಕ್ಕಳಲ್ಲಿ ಇದಕ್ಕೆ ಅಗತ್ಯವಾದ ರೋಗ ನಿರೋಧಕಗಳನ್ನು ಬಳಸುವುದರಿಂದ ಇದು ವಿರಳವಾಗಿ ಕಂಡುಬರುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಇದನ್ನು ಪತ್ತೆ ಹಚ್ಚಿದಲ್ಲಿ ಜೀವಿರೋಧಕಗಳ ಬಳಕೆಯಿಂದ ಅದನ್ನು ವಾಸಿಮಾಡಬಹುದು. ಇಲ್ಲವಾದಲ್ಲಿ ಅದು ಮಾರಕವಾಗುತ್ತದೆ. ಇತರ ಬಗೆಯ ಗಂಟಲು ಸೋಂಕುಗಳು ವೈರಸ್‍ಗಳಿಂದ ಸಂಭವಿಸಬಹುದು. ಎಕ್ಸ್‍ಕಿರಣಗಳ ದೀರ್ಘಬಳಕೆಯಿಂದ ಮತ್ತು ಕೆಲವು ಔಷಧಿಗಳ ದುಷ್ಪರಿಣಾಮದಿಂದ ದೇಹದಲ್ಲಿರುವ ಬಿಳಿರಕ್ತಕಣಗಳು ಕಡಿಮೆಯಾಗಿ ರೋಗನಿರೋಧಕಶಕ್ತಿ ಕುಂದಿ ಗಂಟಲು ಸೋಂಕುಟಾಗಬಹುದು.

ಗಂಟಲಿನ ಮಾಂಸಖಂಡ[ಬದಲಾಯಿಸಿ]

ಗಂಟಲಿನ ಮಾಂಸಖಂಡಗಳಿಗೆ ಸಂಬಂಧಿಸಿದ ನರಗಳಿಗೆ ವೈರಸ್‍ಗಳಿಂದ ಸೋಂಕು ತಗಲುವುದರಿಂದ, ಡಿಫ್ತೀರಿಯದ ನಂಜಿನಿಂದ, ರಾಸಾಯನಿಕ ವಸ್ತುಗಳಿಂದ (ಸೀಸ, ಮೀಥೈಲ್ ಆಲ್ಕೊಹಾಲ್) ಅಥವಾ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮಿದುಳಿನ ರಕ್ತಚಲನೆಯಲ್ಲುಂಟಾಗುವ ಆಕ್ರಮಗಳಿಂದ ಗಂಟಲಿನ ಮಾಂಸಖಂಡಗಳು ದುರ್ಬಲವಾಗುತ್ತವೆ. ಇಲ್ಲವೆ ಪಾಶ್ರ್ವವಾಯುವಿಗೀಡಾಗುತ್ತವೆ. ಭಾವೋದ್ವೇಗಕ್ಕೆ ಒಳಗಾದಾಗ ಗಂಟಲಿನ ಕೆಳಭಾಗದ ಸಂಪೀಡಕ ಸ್ನಾಯುಗಳು ಸೆಡೆತುಗೊಂಡು ಗಂಟಲಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡಂಥ ಸಂವೇದನೆಯುಂಟಾಗುತ್ತದೆ ಗಂಟಲಿನ ಏಡಿಗಂತಿ ವಿರಳವಾಗಿ ಕಂಡುಬರುತ್ತದೆ. ಇದರಲ್ಲಿ ಮೊದಲು ಗಲಗ್ರಂಥಿಗಳ ಜಾಗದಲ್ಲಿ ನೋವಿಲ್ಲದ ಊತ ಕಾಣಿಸಿಕೊಳ್ಳುತ್ತದೆ. ಆ ಭಾಗದ ಒಂದು ಅಂಶವನ್ನು ತೆಗೆದು ಪರೀಕ್ಷೆಗೊಳಪಡಿಸಿ ನೋಡಿದಾಗ ಈ ರೋಗವನ್ನು ನಿಖರವಾಗಿ ಪತ್ತೆಮಾಡಬಹುದು. ಎಕ್ಸ್‍ಕಿರಣ ಚಿಕಿತ್ಸೆಯಿಂದ ಇದನ್ನು ನಿಯಂತ್ರಿಸಬಹುದು. ಧ್ವನಿಪೆಟ್ಟಿಗೆಗೆ ಸೋಂಕು ತಗುಲಿದಾಗ ಧ್ವನಿ ಒಡಕಾಗುತ್ತದೆ. ಮಕ್ಕಳಲ್ಲಿ ಇದು ಉಸಿರಾಟಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ. ಆವಿಯನ್ನು ಒಳಸೇದುವುದರಿಂದ ಮತ್ತು ಜೀವಿರೋಧಕಗಳನ್ನು ಬಳಸುವುದರಿಂದ ಇದನ್ನು ವಾಸಿಮಾಡಬಹುದು. ಧ್ವನಿಪೆಟ್ಟಿಗೆಯ ಕ್ಷಯವನ್ನು ಔಷಧಿಯಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಕೆಲವುಸಾರಿ ಡಿಫ್ತೀರಿಯದಿಂದ ಉಸಿರಾಟಕ್ಕೆ ತೊಂದರೆಯಾದಾಗ, ಶಸ್ತ್ರಚಿಕಿತ್ಸೆಯ ಮೂಲಕ ಗಾಳಿಯ ಕೊಳವೆಯನ್ನು ತೂತು ಮಾಡಿ ಉಸಿರಾಟಕ್ಕೆ ಅನುಕೂಲಮಾಡಿಕೊಡಬೇಕಾಗಿ ಬರಬಹುದು.

ಸಂಗೀತಗಾರರ ಧ್ವನಿಪೆಟ್ಟಿಗೆ[ಬದಲಾಯಿಸಿ]

ಸಂಗೀತಗಾರರಲ್ಲಿ (ತಮ್ಮ ಧ್ವನಿಪೆಟ್ಟಿಗೆಯನ್ನು ಹೆಚ್ಚಾಗಿ ಬಳಸುವುದರಿಂದ) ಧೂಮಪಾನಿಗಳಲ್ಲಿ ಕಂಡುಬರುವ ಧ್ವನಿಪೆಟ್ಟಿಗೆಯ ಗಂಟುಗಳಿಂದ ಧ್ವನಿ ಒಡಕಾಗಬಹುದು. ಧ್ವನಿಯಲ್ಲಿ ಒಡಕು ಕೇಳಿ ಬರುವುದು. ಧ್ವನಿಪೆಟ್ಟಿಗೆಯ ಏಡಿಗಂತಿ ರೋಗದ ಮೊದಲ ಚಿಹ್ನೆಯೂ ಅಹುದು. ಆದ್ದರಿಂದ ಯಾವುದೇ ವಿಧವಾದ ಧ್ವನಿಯ ಒಡಕು ಎರಡು ವಾರಕ್ಕಿಂತ ಹೆಚ್ಚಾಗಿ ಉಳಿದಲ್ಲಿ ಅದನ್ನು ತಜ್ಞವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು. ಧ್ವನಿಪೆಟ್ಟಿಗೆಯ ಏಡಿಗಂತಿ ರೋಗವನ್ನು ಮೊದಲ ಹಂತದಲ್ಲಿಯೇ ಪತ್ತೆಹಚ್ಚಿದಲ್ಲಿ ವಾಸಿ ಮಾಡಬಹುದು. ಅದು ಹೆಚ್ಚು ವ್ಯಾಪ್ತವಾಗದಿದ್ದಲ್ಲಿ ಎಕ್ಸ್‍ಕಿರಣ ಚಿಕಿತ್ಸೆಯಿಂದ ಅದರ ನಿವಾರಣೆ ಸಾಧ್ಯ. ಆದರೆ ಅದು ಜಾಸ್ತಿಯಾಗಿ ಬೆಳೆದಿದ್ದ ಪಕ್ಷದಲ್ಲಿ ಶಸ್ತ್ರಚಿಕಿತ್ಸೆಯಿಂದ ಧ್ವನಿಪೆಟ್ಟಿಗೆಯನ್ನೇ ತೆಗೆದು ಹಾಕಬೇಕಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. http://kn.vikaspedia.in/health/caaccccb7ccdc9fcbfc95ca4cc6/c87c8eca8ccd200cc9fcbf-c95cbfcb5cbf-caecc2c97cc1-c97c82c9fcb2cc1
  2. "ಆರ್ಕೈವ್ ನಕಲು". Archived from the original on 2016-11-01. Retrieved 2016-10-31. {{cite web}}: |archive-date= / |archive-url= timestamp mismatch (help)