ವಿಷಯಕ್ಕೆ ಹೋಗು

ಕಿರಾತ (ಜನಾಂಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿರಾತ ಪ್ರಾಚೀನ ಮಂಗೋಲರ ಬುಡುಕಟ್ಟೆಗೆ ಸೇರಿದ ಒಂದು ಜನಾಂಗ.[೧][೨]

ಭೌಗೋಳಿಕ ಹರಡುವಿಕೆ

[ಬದಲಾಯಿಸಿ]

ಉತ್ತರ ಭಾರತದಲ್ಲಿ ಇವರನ್ನು ಹೆಚ್ಚಾಗಿ ಕಾಣಬಹುದು. ಚೀನ ಟಿಬೆಟ್ಟುಗಳಲ್ಲೂ ಇವರು ವ್ಯಾಪಿಸಿದ್ದಾರೆ. ಸಂಸ್ಕೃತ ಕಾವ್ಯಗಳಲ್ಲಿ ಕಿರಾತರ ಉಲ್ಲೇಖವಿದೆ. ಇತ್ತೀಚೆಗೆ ಕಿರಾತ ಪದವನ್ನು ಗುಡ್ಡಗಾಡುಗಳಲ್ಲಿ ವಾಸಿಸುವ ಜನಾಂಗಕ್ಕೋ ಹಿಮಾಲಯ ತಪ್ಪಲಿನ ಗುಹಾವಾಸಿಗಳಿಗೋ ಬಳಸುತ್ತಿದ್ದಾರೆ. ಬೇಡರಿಗೂ ಸಾಮಾನ್ಯವಾಗಿ ಇದೇ ಹೆಸರಿದೆ.

ಪುರಾಣಗಳಿಲ್ಲಿ ಉಲ್ಲೇಖ

[ಬದಲಾಯಿಸಿ]

ಮಹಾಭಾರತದಲ್ಲಿ ಇವರನ್ನು ವಾಯವ್ಯ ಭಾಗದ ಶುದ್ಧ ಅನಾಗರಿಕ ಜನಾಂಗವೆಂದೂ ರಾಮಾಯಣದಲ್ಲಿ ಹಸೀ ಮೀನುಗಳನ್ನು ತಿನ್ನುವ, ಸ್ವಭಾವದಲ್ಲಿ ಹುಲಿಯ ಕಾಠಿಣ್ಯವುಳ್ಳ ದ್ವೀಪವಾಸಿಗಳೆಂದೂ ವರ್ಣಿಸಲಾಗಿದೆ. ಈ ಜನ ಕೌರವರ ಕಡೆ ಸೇರಿ ಯುದ್ಧ ಮಾಡಿದರೆಂದೂ ಧರ್ಮರಾಯರಾಜಸೂಯ ಯಾಗಕ್ಕೆ ಕಾಣಿಕೆಗಳನ್ನು ತಂದೊಪ್ಪಿಸಿದರೆಂದು ಮಹಾಭಾರತದಿಂದ ತಿಳಿದುಬರುತ್ತದೆ. ಇವರು ಗಿಡಮೂಲಿಕೆಗಳಿಂದ ರಸೌಷಧಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧರಾಗಿದ್ದು ಚಾಪೆ ಮತ್ತು ಚರ್ಮಗಳಿಗಾಗಿ ಅವನ್ನು ಆರ್ಯರಿಗೆ ಮಾರುತ್ತಿದ್ದರೆಂದು ಅಥರ್ವಣ ವೇದದಲ್ಲಿ ಹೇಳಲಾಗಿದೆ. ಮೊನಚಾದ ಮುಡಿಗಂಟು ಹೊಂಬಣ್ಣದ ಕಿರಾತ ಕನ್ಯೆಯರ ಸೌಂದರ್ಯ ಹಾಗೂ ದೇಹಸೌಷ್ಠವಕ್ಕೆ ಮರುಳಾದ ಅನೇಕ ಚಕ್ರವರ್ತಿಗಳು ಅವರನ್ನು ತಮ್ಮ ಅಂತಃಪುರಕ್ಕೆ ಸೇರಿಸಿಕೊಳ್ಳುತ್ತಿದ್ದರೆಂದು ಹೇಳಲಾಗಿದೆ. ಅರ್ಜುನನಿಗೆ ಪಾಶುಪತಾಸ್ತ್ರವನ್ನು ಅನುಗ್ರಹಿಸಲು ಶಿವ ಮತ್ತು ಪಾರ್ವತಿಯರು ಕಿರಾತ ವೇಷದಿಂದ ಬಂದ ಪ್ರಸಂಗವನ್ನು ಮಹಾಭಾರತದಲ್ಲಿ ವರ್ಣಿಸಲಾಗಿದೆ. ಕಿರಾತಾರ್ಜುನೀಯ ಪ್ರಸಂಗದ ಈ ವಸ್ತುವನ್ನೇ ಭಾರವಿ ತನ್ನ ಕಾವ್ಯಕ್ಕೆ ಉಪಯೋಗಿಸಿಕೊಂಡಿದ್ದಾನೆ.

ಪ್ರಸ್ತುತ

[ಬದಲಾಯಿಸಿ]

ಇತ್ತೀಚೆಗೆ ಕಿರಾತರು ಉತ್ತರ ಪ್ರದೇಶ, ಕಾಮರೂಪ (ಅಸ್ಸಾಂ) ಮತ್ತು ನೇಪಾಳಗಳಲ್ಲಿ ಹೆಚ್ಚಾಗಿ ಕಾಣಬರುತ್ತಿದ್ದು ಮುಖ್ಯ ಪಂಗಡಗಳಾಗಿರುವುದನ್ನು ಗುರುತಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Radhakumud Mukharji (2009), Hindu Shabhyata, Rajkamal Prakashan Pvt Ltd, ISBN 978-81-267-0503-0, ... किरात (मंगोल) : द्रविड़ भाषाओं से भिन्न यह भाषाओं में किरात या ...
  2. Shiva Prasad Dabral, Uttarākhaṇḍ kā itihās, Volume 2, Vīr-Gāthā-Prakāshan, ... प्राचीन साहित्य में किरात-संस्कृति, किरात-भूमि ...
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: