ಕರ್ನಾಟಕ ವೈಭವ

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕ ವೈಭವ : ಮರಾಠಿ ವರ್ಚಸ್ಸಿಗೊಳಗಾಗಿದ್ದ ವಿಜಾಪುರ ಪ್ರದೇಶದಲ್ಲಿ ಕನ್ನಡತನದ ಅರಿವುಂಟುಮಾಡಲು ಮತ್ತು ರಾಷ್ಟ್ರೀಯ ಜಾಗೃತಿಗಾಗಿ ಶ್ರಮಿಸಲು ಸವಣೂರು ಗುಂಡೂರಾಯರು ೧೮೯೨ರಲ್ಲಿ ವಿಜಾಪುರದಲ್ಲಿ ಪ್ರಾರಂಭಿಸಿದ ವಾರಪತ್ರಿಕೆ.

ಹಿನ್ನೆಲೆ[ಬದಲಾಯಿಸಿ]

ಮುಂಬಯಿ ಕರ್ನಾಟಕದಲ್ಲಿ ಮನೆಮಾತಾಗಿದ್ದ ಲೋಕಮಾನ್ಯ ಟಿಳಕರ ‘ಕೇಸರಿ’ ಪತ್ರಿಕೆ, ಕರ್ನಾಟಕ ವೈಭವಕ್ಕೆ ಪ್ರೇರಕ. ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿ ನೀಡುತ್ತಿದ್ದ ಕೇಸರಿಯಂತೆಯೇ ಕರ್ನಾಟಕ ವೈಭವ ಆರಂಭವಾಯಿತು. ಸಾರ್ವಜನಿಕರಿಂದ ‘ಕರ್ನಾಟಕ ವೈಭವ’ಕ್ಕೆ ಹಾಗೂ ಆ ಪತ್ರಿಕೆ ಮುದ್ರಿಸುತ್ತಿದ್ದ ಗ್ರಾಮಾಧಿಕಾರಿ ಮುದ್ರಣಾಲಯಕ್ಕೆ ಸಾರ್ವಜನಿಕರಿಂದ ನಿಧಿ ಕೂಡಿಸಲಾಯಿತು.

ಪತ್ರಿಕೆ ನಡೆದು ಬಂದ ದಾರಿ[ಬದಲಾಯಿಸಿ]

ಸವಣೂರು ಗುಂಡೂರಾಯರು ಸರ್ಕಾರಿ ನೌಕರರಾಗಿದ್ದರೂ ಪತ್ರಿಕೆಯಲ್ಲಿ ರಾಷ್ಟ್ರೀಯ ವಿಚಾರಗಳು ತುಂಬ ಪ್ರಕಟವಾಗುತ್ತಿದ್ದುವು. ೧೯೦೪ ರಿಂದ ೧೯೦೮ರ ವರೆಗೆ ಬಂಗಾಲ ವಿಭಜನೆಯ ಆಂದೋಲನದ ಸಮಯದಲ್ಲಿ ಈ ಪತ್ರಿಕೆ ಅತಿ ಉಗ್ರ ಲೇಖನಗಳನ್ನು ಬರೆಯಿತು. ಆಗ ಭಾರತಕ್ಕೆ ಬಂದಿದ್ದ ಲಂಡನ್ ಟೈಮ್ಸ್‌ ವರದಿಕಾರ ವ್ಯಾಲಂಟೈನ್ ಚಿರೋಲ್ ಇಂಡಿಯನ್ ಅನ್ರೆಸ್ಟ್‌ ಪುಸ್ತಕದಲ್ಲಿ ಕರ್ನಾಟಕ ವೈಭವ ಉಗ್ರ ಕ್ರಾಂತಿಕಾರಿ ಪತ್ರಿಕೆಯೆಂದು ಬರೆದಿದ್ದಾನೆ.

೧೯೨೦ರಲ್ಲಿ ಜಯರಾವ್ ದೇಶಪಾಂಡೆಯವರು ಇದರ ಸಂಪಾದಕತ್ವ ವಹಿಸಿಕೊಂಡರು. ಅಸಹಕಾರ ಚಳವಳಿಯ ಸಮಯದಲ್ಲಿ ಈ ಪತ್ರಿಕೆಯ ಪ್ರಸಾರ ತುಂಬ ಹೆಚ್ಚಿತು. ಶತಮಾನದ ಆರಂಭದ ಮೊದಲಿನ ಮೂರು ದಶಕಗಳಲ್ಲಿ ಈ ಪತ್ರಿಕೆ. ಮೈಸೂರು, ಕೊಡಗು, ಮುಂಬಯಿ, ಮದ್ರಾಸ್, ಹೈದರಾಬಾದ್ ಕರ್ನಾಟಕದಲ್ಲಿ ಜನ ತುಂಬ ಉತ್ಸಾಹದಿಂದ ಈ ಪತ್ರಿಕೆಯನ್ನು ಓದುತ್ತಿದ್ದರು. ಪತ್ರಿಕೋದ್ಯಮದ ದಿಗ್ಗಜರೆಂದು ಪರಿಚಿತರಾದ ಮೊಹರೆ ಹಣಮಂತರಾಯರನ್ನು ಪರಿಚಯಿಸಿದ, ರೂಪಿಸಿದ ಪತ್ರಿಕೆ. ಮೊಹರೆ ಹಣಮಂತರಾಯರು ಆಗ ಇದರಲ್ಲಿ ಸಂಪಾದಕೀಯ ಲೇಖನಗಳನ್ನು ಬರೆಯತೊಡಗಿದ್ದರು. ಅವರು ಬರೆದ ಒಂದು ಅಗ್ರಲೇಖನಕ್ಕಾಗಿ ಸಂಪಾದಕರು ದಂಡ ತೆರಬೇಕಾಯಿತು. ಮುಂದೆ ಹಣಮಂತರಾಯರೇ ಅದರ ಸಂಪಾದಕರಾದರು. ಅವರು ೧೯೨೩ರಲ್ಲಿ ಬರೆದ ಕರ್ನಾಟಕ ವೀರರು ಅಗ್ರಲೇಖನಕ್ಕಾಗಿ ಸೆರೆಮನೆ ವಾಸದ ಶಿಕ್ಷೆ ಅನುಭವಿಸಬೇಕಾಯಿತು. ಆಗ ಎರಡು ವರ್ಷ ಕಾಲ ಕೌಜಲಗಿ ಹಣಮಂತರಾಯರು ಪತ್ರಿಕೆಯ ಸಂಪಾದಕರಾಗಿದ್ದರು. ಹಣಮಂತರಾವ್ ಮೊಹರೆಯವರು ಸೆರೆಮನೆಯಿಂದ ಬಿಡುಗಡೆಯಾಗಿ ಬಂದ ಅನಂತರ ಮತ್ತೆ ಇದರ ಸಂಪಾದಕತ್ವ ವಹಿಸಿಕೊಂಡು, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗುವ ವರೆಗೆ ಇದಕ್ಕಾಗಿ ಶ್ರಮಿಸಿದರು. ಅನಂತರ ಹಲವಾರು ವರ್ಷಗಳ ಕಾಲ ನಾಯಕ ವೆಂಕಟರಾಯರೂ ಎನ್. ಎಚ್. ನಾಯಕರೂ ಸಂಪಾದಕರಾಗಿದ್ದರು. ಈಗ ಇದು ದ್ವಿಸಾಪ್ತಾಹಿಕವಾಗಿದೆ.

ಪತ್ರಿಕೆಯಲ್ಲಿ ಮೊದಮೊದಲು ಕನ್ನಡದಲ್ಲಿ ಮಾತ್ರವೇ ಅಲ್ಲದೆ ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಲೇಖನಗಳು ಪ್ರಕಟವಾಗುತ್ತಿದ್ದುವು. ಕೆರೂರು ವಾಸುದೇವಾಚಾರ್ಯ ಮತ್ತು ಶ್ರೀನಿವಾಸ ರಾಜಪುರೋಹಿತ ಕನ್ನಡದಲ್ಲೂ ನಾನಾಸಾಹೇಬ ದೇಸಾಯ್ ಮತ್ತು ಗುರುನಾಥ ಬೇವೂರ್ ಇಂಗ್ಲಿಷಿನಲ್ಲೂ ಬರೆಯುತ್ತಿದ್ದರು. ಜಿ. ಆರ್. ಕುಲಕರ್ಣಿಯವರ ಲೇಖನಗಳು ತುಂಬ ಉಗ್ರವಾಗಿರುತ್ತಿದ್ದುವು.

ಸಮಾಜಕ್ಕೆ ಕೊಡುಗೆ[ಬದಲಾಯಿಸಿ]

ಕರ್ನಾಟಕ ಏಕೀಕರಣದ ಮೂಲಮಂತ್ರ ಉದ್ಭವವಾದದ್ದು ಕರ್ನಾಟಕ ವೈಭವದಿಂದ.

ಮೊಹರೆ ಹಣಮಂತರಾಯರು ಮತ್ತು ನಾಯಕ ವೆಂಕಟರಾಯರು ಗಂಡು ಭಾಷೆಯ ಕನ್ನಡದಲ್ಲಿ ಬರೆದ ಲೇಖನಗಳೂ ಅಗ್ರಲೇಖನಗಳೂ ವಿಲಕ್ಷಣ ಜನಜಾಗೃತಿಯನ್ನುಂಟುಮಾಡಿದುವು.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: