ವಿಷಯಕ್ಕೆ ಹೋಗು

ಕರ್ನಾಟಕ ಯುದ್ಧಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕರ್ನಾಟಕ ಯುದ್ಧಗಳು : ಭಾರತಕೋರಮಂಡಲ ತೀರಪ್ರದೇಶ ಮತ್ತು ಅದರ ಹಿನ್ನಾಡಿನಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ನಡುವೆ ೧೮ನೆಯ ಶತಮಾನದಲ್ಲಿ ನಡೆದ ಯುದ್ಧಗಳು. ಇವು ನಡೆದ ಪ್ರದೇಶವನ್ನು ಐರೋಪ್ಯರು ಕರ್ನಾಟಕವೆಂದು (ಕರ್ನಾಟಿಕ್) ಕರೆಯುತ್ತಿದ್ದುದರಿಂದ ಈ ಯುದ್ಧಗಳಿಗೆ ಕರ್ನಾಟಕ ಯುದ್ಧಗಳೆಂದು ಹೆಸರು ಬಂದಿದೆ. ಯುರೋಪಿನಲ್ಲಿ ಫ್ರೆಂಚರಿಗೂ ಇಂಗ್ಲಿಷರಿಗೂ ನಡುವೆ ಯುದ್ಧ ಸಂಭವಿಸಿದಾಗ ಭಾರತದಲ್ಲೂ ಆರಂಭವಾದ ಈ ಯುದ್ಧಗಳ ತತ್ಕ್ಷಣದ ಕಾರಣಗಳೂ ಫಲಗಳೂ ಅತಿ ಕ್ಷುಲ್ಲಕವೆನಿಸಿದರೂ ಇವುಗಳಿಂದ ಅಂತಿಮವಾಗಿ ಭಾರತದಲ್ಲಿ ಇಂಗ್ಲಿಷರ ಸ್ಥಾನ ಭದ್ರವಾಗಿ ಫ್ರೆಂಚರ ಬಲ ಕುಂದಿದ್ದರಿಂದ ಈ ದೇಶದ ಚರಿತ್ರೆಯಲ್ಲಿ ಕರ್ನಾಟಕ ಯುದ್ಧಗಳನ್ನು ಅತ್ಯಂತ ಪ್ರಮುಖ ಘಟನೆಗಳೆಂದು ಪರಿಗಣಿಸಲಾಗಿದೆ.

ಹಿನ್ನೆಲೆ[ಬದಲಾಯಿಸಿ]

ಸುಮಾರು ೧೭೪೦ರ ವೇಳೆಗೆ ಕೋರಮಂಡಲ ತೀರದಲ್ಲಿ ಮದ್ರಾಸ್ ಮತ್ತು ಪುದುಚೇರಿಗಳು ಇಂಗ್ಲಿಷ್ ಮತ್ತು ಫ್ರೆಂಚ್ ಜನರ ಮುಖ್ಯ ವ್ಯಾಪಾರ ಕೇಂದ್ರಗಳಾಗಿದ್ದುವು. ಇವರು ಅಲ್ಲಿ ಭದ್ರವಾದ ಕೋಟೆಗಳನ್ನು ಕಟ್ಟಿಕೊಂಡಿದ್ದರು. ಜೊತೆಗೆ ಪುದುಚೇರಿಗೆ ಸ್ವಲ್ಪ ದಕ್ಷಿಣದಲ್ಲಿ ಇಂಗ್ಲಿಷರಿಗೆ ಫೋರ್ಟ್ ಸೇಂಟ್ ಡೇವಿಡ್ ಎಂಬ ಕೋಟೆಯೊಂದಿತ್ತು. ಇವರು ಈ ಮೂರು ಸ್ಥಳಗಳಲ್ಲೂ ಸಮುದ್ರದ ಮೇಲೆ ಹತೋಟಿ ಹೊಂದಿದ್ದುದರಿಂದ ತಮ್ಮ ದೇಶಗಳಿಂದ ಸರಕುಗಳನ್ನೂ ಅಗತ್ಯವಾದ ನೆರವನ್ನೂ ಪಡೆಯುವುದು ಸುಲಭವಾಗಿತ್ತು. ಸ್ಥಳೀಯ ಅಧಿಕಾರಿಗಳ ಸಂಬಂಧವಾಗಿಯೂ ಇವರದೇ ಮೇಲುಗೈಯಾಗಿತ್ತು. ಏಕೆಂದರೆ ಸ್ಥಳೀಯರಿಗೆ ನೌಕಾಬಲವಾಗಲಿ ಹೊರಗಿನ ನೆರವಾಗಲಿ ದೊರಕುವಂತಿರಲಿಲ್ಲ. ಭೂಸೈನ್ಯದ ವಿಚಾರದಲ್ಲಿ ಕೂಡ ಅವರು ದುರ್ಬಲರಾಗಿದ್ದರು. ಇಡೀ ಕರ್ನಾಟಕ ನೆಲದ ರಾಜಕೀಯವೇ ಆಗ ಅನಿಶ್ಚಿತವಾಗಿತ್ತು. ಇದು ಆಗ ದಖನಿನ ಸುಭಾದಾರನ ಆಶ್ರಯದಲ್ಲಿದ್ದ ಒಂದು ಪ್ರಾಂತ್ಯ. ಇದರ ಅಧಿಪತಿಗೆ ನವಾಬನೆಂಬ ಹೆಸರಿತ್ತು. ಆರ್ಕಾಟ್ ಅವನ ಆಡಳಿತ ಕೇಂದ್ರ.ದಖ್ಖನಿನ ಸುಭಾದಾರನಾಗಿದ್ದ ನಿಜಾಂ ಉಲ್ಮುಲ್ಕ್‌ ತಾನು ಸ್ವತಂತ್ರನೆಂದೇ ವರ್ತಿಸುತ್ತಿದ್ದದರಿಂದ ಅವನ ಆಶ್ರಿತನಾಗಿದ್ದ ಆರ್ಕಾಟ್ ನವಾಬ ಕೂಡ ತಾನು ಯಾರ ಅಧೀನನೂ ಅಲ್ಲವೆಂಬಂತೆಯೇ ನಡೆದುಕೊಳ್ಳುತ್ತಿದ್ದ. ನಿಜಾಂ ಆಗ ಮರಾಠರನ್ನು ಎದುರಿಸಬೇಕಾಗಿದ್ದುದರಿಂದ ಆರ್ಕಾಟಿನ ನವಾಬನ ಮೇಲೆ ತನ್ನ ಅಧಿಕಾರ ಚಲಾಯಿಸಲು ಅವಧಾನವೇ ಇರಲಿಲ್ಲ.

೧೭೪೦ರಲ್ಲಿ ಮರಾಠರು ಕರ್ನಾಟಕದ ಮೇಲೆ ಆಕ್ರಮಣ ನಡೆಸಿ, ಕೊಳ್ಳೆ ಹೊಡೆದು, ಮಂಡಲಾಧಿಪತಿಯಾಗಿದ ನವಾಬ್ ದೋಸ್ತ್‌ ಅಲಿಯನ್ನು ಸಂಹರಿಸಿ, ಅವನ ಅಳಿಯನಾದ ಚಂದಾ ಸಾಹೇಬನನ್ನು ಸೆರೆ ಹಿಡಿದಿದ್ದರು. ದೋಸ್ತ್‌ ಅಲಿಯ ಮಗ ಸಫ್ದರ್ ಅಲಿ ಮರಾಠರಿಗೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಹೇಳಿ ಜೀವ ಉಳಿಸಿಕೊಂಡಿದ್ದ. ಆದರೆ ಅವನ ದಾಯಾದಿಯೊಬ್ಬ ಅವನನ್ನು ಕೊಂದು ಅವನ ವಯಸ್ಸಿನ ಮಗನನ್ನು ನವಾಬನೆಂದು ಘೋಷಿಸಿದ. ಎಲ್ಲೆಲ್ಲೂ ಅಶಾಂತಿ ಅತೃಪ್ತಿಗಳು ಬೆಳೆದುವು. ಆದ್ದರಿಂದ ೧೭೪೩ರಲ್ಲಿ ನಿಜಾಂ-ಉಲ್-ಮುಲ್ಕ್‌ ಕರ್ನಾಟಕಕ್ಕೆ ಬಂದು ಪರಿಸ್ಥಿತಿಯನ್ನು ಸರಿಪಡಿಸಲು ಯತ್ನಿಸಿದ. ತನ್ನ ನೆಚ್ಚಿನ ಅನುಚರನಾಗಿದ್ದ ಅನ್ವರುದ್ದೀನ್ ಖಾನನನ್ನು ನವಾಬನನ್ನಾಗಿ ನೇಮಿಸಿದ. ಆದರೆ ನವಾಬ್ ದೋಸ್ತ್‌ ಅಲಿಯ ಬಂಧುವರ್ಗಕ್ಕೆ ಇದು ಹಿಡಿಸಲಿಲ್ಲ. ಅನೇಕ ಕೋಟೆಗಳು ಇನ್ನೂ ಅವರ ವಶದಲ್ಲೇ ಇದ್ದುವು. ಅನ್ವರುದ್ದೀನ್ ಖಾನ್ ಅವರ ದೃಷ್ಟಿಯಲ್ಲಿ ಒಬ್ಬ ಪ್ರತಿಸ್ಪರ್ಧಿಯಾಗಿದ್ದ.

ಇಂಥ ಪರಿಸ್ಥಿತಿಯಲ್ಲಿ ಇಂಗ್ಲಿಷರೂ ಫ್ರೆಂಚರೂ ಇಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿಕೊಂಡಿದ್ದರು. ವ್ಯಾಪಾರವಷ್ಟೇ ಅವರ ಆಗಿನ ಉದ್ದೇಶ. ತಮ್ಮ ಹಿತಗಳಿಗೆ ಧಕ್ಕೆ ಒದಗಿದಾಗಲಲ್ಲದೆ ಬೇರೆ ಸಂದರ್ಭಗಳಲ್ಲಿ ಅವರು ಸ್ಥಳೀಯ ರಾಜಕಾರಣದಲ್ಲಿ ಕೈ ಹಾಕುತ್ತಿರಲಿಲ್ಲ. ಸ್ಥಳೀಯ ಅಧಿಕಾರಿಗಳೂ ಅವರ ಇರವನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ.

ಒಂದನೆಯ ಕರ್ನಾಟಕ ಯುದ್ಧ[ಬದಲಾಯಿಸಿ]

೧೭೪೦ರಲ್ಲಿ ಯುರೋಪಿನಲ್ಲಿ ಆಸ್ಟ್ರಿಯನ್ ಸಿಂಹಾಸನದ ಉತ್ತರಾಧಿಕಾರದ ವಿಚಾರವಾಗಿ ಏರ್ಪಟ್ಟ ವಿವಾದವೊಂದರಲ್ಲಿ ಫ್ರೆಂಚರಿಗೂ ಇಂಗ್ಲಿಷರಿಗೂ ನಡುವೆ ಯುದ್ಧ ಸಂಭವಿಸಿತು. ತತ್ಫಲವಾಗಿ ಭಾರತದಲ್ಲೂ ಇಂಗ್ಲಿಷ್ ಮತ್ತು ಫ್ರೆಂಚ್ ಕಂಪನಿಗಳು ಪರಸ್ಪರ ಶತ್ರುಗಳಾದ ಹಾಗಾಯಿತು. ಆದರೆ ಯುರೋಪಿನಲ್ಲೂ ಭಾರತದಲ್ಲೂ ಇದ್ದ ಫ್ರೆಂಚ್ ಅಧಿಕಾರಿಗಳು ಭಾರತದಲ್ಲಿ ತಟಸ್ಥ ನೀತಿ ಅನುಸರಿಸಬೇಕೆಂದೇ ಇಚ್ಛಿಸಿದರು. ಪುದುಚೇರಿಯ ರಾಜ್ಯಪಾಲ ಜೋಸೆಫ್ ಪ್ರ್ಯಾಂಕಾಯ್ ಡ್ಯುಪ್ಲೆಕ್ಸ್‌ ಈ ಉದ್ದೇಶದಿಂದ ಇಂಗ್ಲಿಷರೊಂದಿಗೆ ನೇರ ಸಂಧಾನವನ್ನಾರಂಭಿಸಿದ. ಆದರೆ ಇಂಗ್ಲೆಂಡಿನಲ್ಲಿದ್ದ ಅಧಿಕಾರಿಗಳು ಇದಕ್ಕೆ ಒಡಂಬಡಲಿಲ್ಲ. ಆದ್ದರಿಂದ ಭಾರತದಲ್ಲಿದ್ದ ಇಂಗ್ಲಿಷರು ತಟಸ್ಥ ನೀತಿಗೆ ಬದ್ಧರಾಗಿರುವುದು ಸಾಧ್ಯವಾಗಲಿಲ್ಲ. ತಮ್ಮ ಹತೋಟಿಯಲ್ಲಿದ್ದ ಸಮುದ್ರದ ಮೇಲೆ ಫ್ರೆಂಚರ ಹಡಗುಗಳ ಸುರಕ್ಷತೆಯ ಭರವಸೆ ಕೊಡುವುದಾಗಲಿಲ್ಲ.

ಇಂಗ್ಲಿಷರು ಬಾರ್ನೆಟನ ನೇತೃತ್ವದಲ್ಲಿ ಫ್ರೆಂಚರ ಹಡಗುಗಳನ್ನು ಹಿಡಿದುಕೊಂಡರು. ಆಗ ಫ್ರೆಂಚರಿಗೆ ಭಾರತದ ಸಮುದ್ರ ಪ್ರದೇಶದಲ್ಲಿ ಯುದ್ಧ ನೌಕೆಗಳಿರಲಿಲ್ಲ. ಮಾರಿಷಸಿನ ಫ್ರೆಂಚರಿಗೆ ಭಾರತದ ಸಮುದ್ರ ಪ್ರದೇಶದಲ್ಲಿ ಯುದ್ಧ ನೌಕೆಗಳಿರಲಿಲ್ಲ. ಮಾರಿಷಸಿನ ಫ್ರೆಂಚ್ ರಾಜ್ಯಪಾಲ ಲಾ ಬೂರ್ದಾನೆಗೆ ನೆರವಿಗಾಗಿ ಡ್ಯುಪ್ಲೆಕ್ಸನಿಂದ ಪ್ರಾರ್ಥನೆ ಹೋಯಿತು. ಆತ ಹಾಗೂ ಹೀಗೂ ಒಂದು ನೌಕಾ ಪಡೆಯನ್ನು ಸಜ್ಜುಗೊಳಿಸಿಕೊಂಡು ಡ್ಯುಪ್ಲೆಕ್ಸನ ನೆರವಿಗೆ ಬಂದ. ಆದರೆ ಆತ ಆಗಮಿಸಿದಾಗ ಇಂಗ್ಲಿಷ್ ನೌಕೆಗಳು ಮದ್ರಾಸ್ ತೀರಪ್ರದೇಶವನ್ನು ಬಿಟ್ಟು ಹೂಗ್ಲಿಗೆ ಹೊರಟು ಹೋದವು. ಇದರಿಂದ ಪರಿಸ್ಥಿತಿಯೇ ಬದಲಾವಣೆಯಾಯಿತು. ಫ್ರೆಂಚರು ನೆಲಜಲಗಳೆರಡರ ಮೂಲಕವೂ ಮದ್ರಾಸನ್ನು ಮುತ್ತಿದರು. ಒಂದೇ ವಾರದಲ್ಲಿ ಮದ್ರಾಸು ಫ್ರೆಂಚರ ವಶವಾಯಿತು. ಡ್ಯುಪ್ಲೆಕ್ಸನ ಕೈ ತಡೆಯುವವರು ಯಾರೂ ಇರಲಿಲ್ಲ.

ಈ ಸಮಯದಲ್ಲಿ ಸಂಭವಿಸಿದ ಘಟನೆಯೊಂದರಿಂದ ಭಾರತದ ಭವಿಷ್ಯದ ಇತಿಹಾಸದ ದಿಕ್ಕೇ ಬದಲಾಯಿತ್ನೆನ್ನಬಹುದು. ಕರ್ನಾಟಕದ ನೂತನ ನವಾಬ ಅನ್ವರುದ್ದೀನ್ ತನ್ನ ನಾಡಿನಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ. ಮೊದಮೊದಲು ಇಂಗ್ಲಿಷರ ಕೈ ಮೇಲಾಗಿದ್ದಾಗ, ತನ್ನ ಹಡುಗುಗಳಿಗೆ ರಕ್ಷಣೆ ನೀಡಬೇಕೆಂದು ಡ್ಯುಪ್ಲೆಕ್ಸಿನಿಂದ ನವಾಬನಿಗೂ ಪ್ರಾರ್ಥನೆ ಹೋಗಿತ್ತು. ನವಾಬ ನಿರ್ವೀರ್ಯನೆಂಬುದು ಗೊತ್ತಿದ್ದರೂ ಹೆಸರಿಗಾದರೂ ಆತ ಆ ಪ್ರದೇಶದ ಒಡೆಯನಾಗಿದ್ದದ್ದರಿಂದ ಡ್ಯುಪ್ಲೆಕ್ಸ್‌ ಈ ಕ್ರಮ ಕೈಕೊಂಡಿದ್ದ. ಆದರೆ ನವಾಬನ ಅಧಿಕಾರವನ್ನು ಇಂಗ್ಲಿಷರು ಪುರಸ್ಕರಿಸಲಿಲ್ಲವಾದ್ದರಿಂದ ಅವನ ಪ್ರತಿಭಟನೆಗಳನ್ನು ಅವರು ಅಲಕ್ಷಿಸಿದ್ದರು. ಫ್ರೆಂಚರು ಮದ್ರಾಸನ್ನು ಹಿಡಿದುಕೊಂಡಾಗ ಇಂಗ್ಲಿಷರು ನವಾಬನ ರಕ್ಷಣೆ ಬೇಡಿದರು. ಅನ್ವರುದ್ದೀನನಿಗೆ ಒಮ್ಮಿಂದೊಮ್ಮೆಗೇ ತನ್ನ ಸ್ಥಾನಮಹತ್ತ್ವದ ಅರಿವು ಬಂದಿತ್ತು. ಮದ್ರಾಸಿನ ಆಕ್ರಮಣವನ್ನು ತೆರವು ಮಾಡಬೇಕೆಂದು ಅವನು ಡ್ಯುಪ್ಲೆಕ್ಸನಿಗೆ ಕೋರಿಕೆ ಕಳಿಸಿದ. ಹಿಂದೆ ಇಂಗ್ಲಿಷರು ಮಾಡಿದಂತೆ ಆಗ ಫ್ರೆಂಚರು ಅನ್ವರುದ್ದೀನನ ಮಾತನ್ನು ಕಡೆಗಣಿಸಿದರು. ಫ್ರೆಂಚರ ಹಡಗುಗಳನ್ನು ಇಂಗ್ಲಿಷರು ಹಿಡಿದು ಕೊಂಡಿದ್ದಾಗ ಅವನ್ನು ಬಿಡಿಸಲು ನವಾಬನಲ್ಲಿ ನೌಕಾಸೇನೆ ಇದ್ದಿರಲಿಲ್ಲವಾದರೂ ಡ್ಯುಪ್ಲೆಕ್ಸ್‌ ಮದ್ರಾಸನ್ನು ಹಿಡಿದುಕೊಂಡಾಗ ಅದನ್ನು ಬಿಡಿಸಲು ಭೂಸೇನೆ ಕಳಿಸುವುದು ಅನ್ವರುದ್ದೀನನಿಗೆ ಸಾಧ್ಯವಿತ್ತು. ಡ್ಯುಪ್ಲೆಕ್ಸನಿಗೆ ಇದು ಅರ್ಥವಾಯಿತು. ಅನ್ವರುದ್ದೀನನಿಗೆ ಒಪ್ಪಿಸುವ ಉದ್ದೇಶದಿಂದಲೇ ಮದ್ರಾಸನ್ನು ತಾನು ಆಕ್ರಮಿಸಿ ಕೊಂಡುದಾಗಿ ನವಾಬನಿಗೆ ಹೇಳಿದ. ಆದರೆ ನವಾಬ ಇದನ್ನು ನಂಬಲಿಲ್ಲ. ತನ್ನ ಮಾತಿನಂತೆ ಫ್ರೆಂಚರು ನಡೆದುಕೊಳ್ಳದ್ದರಿಂದ ಮದ್ರಾಸಿಗೆ ಮುತ್ತಿಗೆ ಹಾಕಿದ್ದ ಫ್ರೆಂಚರೊಂದಿಗೆ ಯುದ್ಧ ಮಾಡಲು ಸೈನ್ಯ ಕಳಿಸಿದ.

ಫ್ರೆಂಚರ ಸೈನ್ಯ ಚಿಕ್ಕದಾದರೂ ಅಚ್ಚುಕಟ್ಟಾಗಿತ್ತು. ಅದು ಮಾಡಿದ ಪ್ರತಿದಾಳಿಯ ಮುಂದೆ ನವಾಬನ ಸೈನ್ಯ ಚೆಲ್ಲಾಪಿಲ್ಲಿಯಾಯಿತು. ಅದು ಸೇಂಟ್ಥೊಮೆಗೆ ಹಿಮ್ಮೆಟ್ಟಿ, ಬಲ ಕೂಡಿಸಿಕೊಂಡು ಮತ್ತೆ ಬಂದು ಎರಗಿತಾದರೂ ಆ ವೇಳೆಗೆ ಫ್ರೆಂಚರ ಸೇನಾಬಲ ಹೆಚ್ಚಿದ್ದುದರಿಂದ ನವಾಬನ ಸೈನ್ಯಕ್ಕೆ ಸೋಲು ಸಂಭವಿಸಿತು.

ಫ್ರೆಂಚರಿಗೆ ಗೆಲುವಾಗಿ ಅವರ ಗೌರವ ಪ್ರತಿಷ್ಠೆಗಳು ಅಧಿಕಗೊಂಡಿದ್ದರೂ ಅವರವರಲ್ಲೇ ಛಿದ್ರಗಳು ತಲೆದೋರಿದುವು. ಸಾಕಷ್ಟು ಹಣ ಪಡೆದು ಮದ್ರಾಸನ್ನು ಬಿಟ್ಟುಕೊಡಲು ಲಾ ಬೂರ್ದಾನೆ ವಾಗ್ದಾನ ಮಾಡಿದ್ದ. ಆದರೆ ಡ್ಯುಪ್ಲೆಕ್ಸನಿಗೆ ಈ ನೀತಿ ಒಪ್ಪಿಗೆಯಾಗಲಿಲ್ಲ. ಇವರಿಬ್ಬರ ಜಗಳ ದೀರ್ಘಕಾಲ ನಡೆಯಿತು. ಕೊನೆಗೆ ಲಾ ಬೂರ್ದಾನೆಯ ಕ್ರಮಕ್ಕೆ ಡ್ಯುಪ್ಲೆಕ್ಸ್‌ ಒಪ್ಪುವುದರಲ್ಲಿದ್ದ. ಆದರೆ ಅಷ್ಟರಲ್ಲಿ ಮತ್ತೆ ಅನಿರೀಕ್ಷಿತ ಘಟನೆಯೊಂದು ಸಂಭವಿಸಿತು. ಸಮುದ್ರದಲ್ಲಿ ಭೀಕರ ಗಾಳಿಯೆದ್ದು ಫ್ರೆಂಚ್ ನೌಕೆಗಳಿಗೆ ನಷ್ಟವುಂಟಾಯಿತು. ಇದರಿಂದ ಲಾ ಬೂರ್ದಾನೆ ತನ್ನ ಹಡಗುಗಳೊಂದಿಗೆ ನಿರ್ಗಮಿಸಿದ. ಆತ ಮಾಡಿಕೊಂಡಿದ್ದ ಕೌಲನ್ನು ಡುಪ್ಲೆಕ್ಸ್‌ ಕಡೆಗಣಿಸಿ ಮದ್ರಾಸನ್ನು ಕೊಳ್ಳೆ ಹೊಡೆದ.

ಲಾ ಬೂರ್ದಾನೆಯ ನಿರ್ಗಮನದಿಂದ ಸಮುದ್ರದ ಮೇಲೆ ಇಂಗ್ಲಿಷರು ಪ್ರಬಲರಾದರು. ಹದಿನೆಂಟು ತಿಂಗಳ ಕಾಲ ಮುತ್ತಿಗೆ ಹಾಕಿಯೂ ಸೇಂಟ್ ಡೇವಿಡ್ ಕೋಟೆಯನ್ನು ಡ್ಯುಪ್ಲೆಕ್ಸ್‌ ವಶಪಡಿಸಿಕೊಳ್ಳಲಾಗಲಿಲ್ಲ. ರೀರ್ ಆಡ್ಮಿರಲ್ ಬಾಸ್ಕೊಯೆನನ ನೇತೃತ್ವದಲ್ಲಿ ಇಂಗ್ಲೆಂಡಿನಿಂದ ದೊಡ್ಡ ದಳವೊಂದು ಬಂತು. ಇಂಗ್ಲಿಷರು ಪುದುಚೇರಿಯ ಮೆಲೆ ನೆಲಜಲಗಳೆರಡರಿಂದಲೂ ಮುತ್ತಿಗೆ ಹಾಕಿದರು. ಆದರೆ ಅವರ ಪ್ರಯತ್ನಕ್ಕೆ ಯಶಸ್ಸು ದೊರಕಲಿಲ್ಲ. ಮತ್ತೆ ಅವರ ಮೇಲೆ ಆಕ್ರಮಣ ನಡೆಸಬೇಕೆಂದು ಇಂಗ್ಲಿಷರು ಸನ್ನಾಹ ನಡೆಸುತ್ತಿದ್ದ ಸಮಯಕ್ಕೆ ಸರಿಯಾಗಿ ಯುರೋಪಿನಲ್ಲಿ ಯುದ್ಧ ನಿಂತು ಎಕ್ಸ್‌ ಲಾ ಷಾಪೆಲ್ ಕೌಲು ಏರ್ಪಟ್ಟಿತು (೧೭೪೮). ಆ ಕೌಲಿನ ಷರತ್ತಿನಂತೆ ಮದ್ರಾಸನ್ನು ಇಂಗ್ಲಿಷರಿಗೆ ಹಿಂದಕ್ಕೆ ಕೊಡಲಾಯಿತು. ಬಾಸ್ಕೊಯೆನ್ ಸ್ವದೇಶಕ್ಕೆ ಮರಳಿದ. ಹೀಗೆ ಒಂದನೆಯ ಕರ್ನಾಟಕ ಯುದ್ಧ ಕೊನೆಗೊಂಡಿತು.

ಎರಡನೆಯ ಕರ್ನಾಟಕ ಯುದ್ಧ[ಬದಲಾಯಿಸಿ]

ಶಾಂತಿಕೌಲಿನ ಫಲವಾಗಿ ಇಂಗ್ಲಿಷರಿಗೂ ಫ್ರೆಂಚರಿಗೂ ನಡುವೆ ಸಮಾಧಾನವೇನೋ ಏರ್ಪಟ್ಟಿತು. ಆದರೆ ವಾಸ್ತವ ಪರಿಸ್ಥಿತಿ ಮೂಲಭೂತವಾಗಿ ಬದಲಾಗಿತ್ತು. ಸಮುದ್ರದ ಮೇಲೆ ಯಾರು ಹತೋಟಿ ಹೊಂದಿರುತ್ತಾರೋ ಅವರ ಕೈಯೇ ಮೇಲೆಂಬುದನ್ನು ಡ್ಯುಪ್ಲೆಕ್ಸ್‌ ಅರಿತುಕೊಂಡ. ಈ ವಿಚಾರದಲ್ಲಿ ಫ್ರೆಂಚರು ಇಂಗ್ಲಿಷರನ್ನು ಸರಿಗಟ್ಟುವಂತಿರಲಿಲ್ಲ. ಅಲ್ಲದೆ ಫ್ರೆಂಚರ ಚಟುವಟಿಕೆಗಳು ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿದ್ದುವು. ಇಂಗ್ಲಿಷರಿಗಾದರೋ ಬಂಗಾಲ ಮುಂಬಯಿಗಳಲ್ಲೂ ನೆಲೆಗಳಿದ್ದುವು. ಆದರೆ ದೇಶೀಯ ರಾಜರ ಅಶಿಕ್ಷಿತ ಸೈನ್ಯ ಎಷ್ಟೇ ದೊಡ್ಡದಿರಲಿ ಶಿಸ್ತಿನಿಂದ ಕೂಡಿದ ಐರೋಪ್ಯ ಸೈನ್ಯದ ಮುಂದೆ ಅದು ತತ್ತರಿಸುವುದೆಂಬುದು ಅನ್ವರುದ್ದೀನನ ಸೈನ್ಯಕ್ಕಾಗಿದ್ದ ಪರಾಭವದಿಂದ ಡ್ಯುಪ್ಲೆಕ್ಸನಿಗೆ ಗೊತ್ತಾಗಿತ್ತು. ದೇಶೀಯ ರಾಜರು ನೆಲದಾಸೆಗಾಗಿ ತಂತಮ್ಮಲ್ಲೇ ಬಡಿದಾಡುತ್ತಿದ್ದ ಆ ಕಾಲದಲ್ಲಿ ಡ್ಯುಪ್ಲೆಕ್ಸನ ನೆರವನ್ನು ಬಯಸಿ ಅದಕ್ಕಾಗಿ ಏನನ್ನಾದರೂ ಕೊಡಲು ಸಿದ್ಧರಿದ್ದವರೂ ಇಲ್ಲದೆ ಇರಲಿಲ್ಲ. ಈ ಬಗೆಯಿಂದ ದೇಶೀಯರ ಬೆಂಬಲ ಗಳಿಸಿ ಇಂಗ್ಲಿಷರ ಸೊಕ್ಕು ಮುರಿಯಬಹುದೆಂಬುದು ಡ್ಯುಪ್ಲೆಕ್ಸನ ತರ್ಕವಾಗಿತ್ತು.

ಅನ್ವರುದ್ದೀನ್ ಖಾನನನ್ನು ಕರ್ನಾಟಕದ ನವಾಬನನ್ನಾಗಿ ನೇಮಕಮಾಡಿದ್ದರಿಂದ ದೋಸ್ತ್‌ ಅಲಿಯ ಕಡೆಯವರಿಗೆ ಆಗಿದ್ದ ಅಸಮಾಧಾನ ಕಾಲಕ್ರಮೇಣ ಮನಸ್ತಾಪವಾಗಿ ಬೆಳೆಯಿತು. ೧೭೪೧ರಲ್ಲಿ ಮರಾಠರ ಸೆರೆಯಾಳಾಗಿದ್ದ ಚಂದಾ ಸಾಹೇಬ (ದೋಸ್ತ್‌ ಅಲಿಯ ಅಳಿಯ)ಏಳು ವರ್ಷಗಳ ಅನಂತರ ಬಿಡುಗಡೆ ಹೊಂದಿದ. ತನ್ನ ಮಾವನ ಸಿಂಹಾಸನವನ್ನು ಮತ್ತೆ ಪಡೆಯುವುದು ಅವನ ಉದ್ದೇಶವಾಗಿತ್ತು. ದಖನ್ ರಾಜ್ಯಸ್ಥಾಪಕನಾದ ಅಸಫ್ ಜಾ ನಿಜಾಮ್ -ಉಲ್-ಮುಲ್ಕ್‌ ಆ ವೇಳೆಗೆ ಕಾಲವಾದ್ದರಿಂದ (೧೭೪೮) ಆ ಸಿಂಹಾಸನಕ್ಕಾಗಿಯೂ ಸ್ಪರ್ಧೆ ನಡೆದಿತ್ತು. ಅಸಫ್ ಜಾನ ಮಗ ನಾಸಿರ್ ಜಂಗ್ ಅಧಿಕಾರಕ್ಕೆ ಬಂದಿದ್ದನಾದರೂ ಮೊಗಲ್ ಚಕ್ರವರ್ತಿ ತನ್ನನ್ನು ದಖ್ಖನಿನ ಸುಭಾದಾರನನ್ನಾಗಿ ನೇಮಕ ಮಾಡಿದ್ದುದರಿಂದ ತಾನೇ ಸಿಂಹಾಸನವನ್ನೇರಬೇಕೆಂಬುದು ಮೊಮ್ಮಗನಾದ ಮುಜಾಫರ್ ಜಂಗನ ವಾದ. ಈ ವ್ಯಾಜ್ಯಗಳು ಡ್ಯುಪ್ಲೆಕ್ಸನಿಗೆ ಅನುಕೂಲವಾಗಿ ಒದಗಿ ಬಂದುವು. ಚಂದಾಸಾಹೇಬನನ್ನು ಕರ್ನಾಟಕದ ನವಾಬನನ್ನಾಗಿಯೂ ಮುಜಾಫರ್ ಜಂಗನನ್ನು ದಖನಿನ ಸುಭಾದಾರನನ್ನಾಗಿಯೂ ಸ್ಥಾಪಿಸುವುದಾಗಿಯೂ ಅವರೊಂದಿಗೆ ರಹಸ್ಯವಾಗಿ ಕೌಲು ಮಾಡಿಕೊಂಡ. ಮೂವರೂ ಸೇರಿ ಯುದ್ಧಮಾಡಿ, ವೆಲ್ಲೂರಿನ ಬಳಿ ಅಂಬೂರ್ ಕದನದಲ್ಲಿ ಅನ್ವರುದ್ದೀನನನ್ನು ಸೋಲಿಸಿ ಕೊಂದರು (ಆಗಸ್ಟ್‌ ೩, ೧೭೪೯). ಅನ್ವರುದ್ದೀನನ ಮಗ ಮಹಮ್ಮದ್ ಅಲಿ ತಿರುಚಿರಾಪಳ್ಳಿಗೆ ಓಡಿಹೋದ. ಫ್ರೆಂಚ್ ಸೇನೆ ಅಲ್ಲಿಗೂ ಹೋಯಿತು.

ಈ ಘಟನೆ ಸಹಜವಾಗಿಯೇ ಇಂಗ್ಲಿಷರ ಗಮನ ಸೆಳೆಯಿತು. ಫ್ರೆಂಚರ ಪ್ರಾಬಲ್ಯದಿಂದ ತಮ್ಮ ಹಿತಕ್ಕೂ ಅಪಾಯ ಒದಗುವುದೆಂಬುದನ್ನು ಅವರು ಕಂಡುಕೊಳ್ಳದಿರಲಿಲ್ಲ. ಆದರೆ ಡ್ಯುಪ್ಲೆಕ್ಸನ ತಂತ್ರದ ಮುಂದೆ ಅವರು ನಿರುಪಾಯರಾಗಿದ್ದರು. ದಖನಿನ ಸುಭಾದಾರನಾಗಿದ್ದ ನಾಸಿರ್ ಜಂಗನನ್ನು ಯುದ್ಧಕ್ಕೆ ಪ್ರಚೋದಿಸಿದರಲ್ಲದೆ ತಿರುಚಿನಾಪಳ್ಳಿಯ ಕೋಟೆಯಲ್ಲಿ ಫ್ರೆಂಚರ ವಿರುದ್ಧ ರಕ್ಷಣೆ ಪಡೆದುಕೊಂಡಿದ್ದ ಮಹಮ್ಮದ್ ಅಲಿಗೂ ನೆರವು ಕಳುಹಿಸಿದರು. ಆದರೂ ಡ್ಯುಪ್ಲೆಕ್ಸನ ಕೈ ಮೇಲಾಗಿತ್ತು. ನಾಸಿರ್ಜಂಗನಿಗೆ ಮೊದಮೊದಲು ಅಲ್ಪಸ್ವಲ್ಪ ವಿಜಯ ಪ್ರಾಪ್ತವಾಯಿತಾದರೂ ಕೊನೆಗೆ, ೧೭೫೦ರ ಡಿಸೆಂಬರಿನಲ್ಲಿ ಆತ ಯುದ್ಧದಲ್ಲಿ ಮಡಿದ. ಸೆರೆಯಲ್ಲಿದ್ದ ಮುಜಾಫರ್ ಜಂಗನನ್ನು ಫ್ರೆಂಚರು ಬಿಡುಗಡೆ ಮಾಡಿ ದಖನಿನ ಸುಭಾದಾರನೆಂದು ಘೋಷಿಸಿದರು. ಮುಜಾಫರ್ ಜಂಗ್ ಫ್ರೆಂಚರಿಗೆ ನಾನಾ ಬಗೆಯಲ್ಲಿ ತನ್ನ ಕೃತಜ್ಞತೆ ಸೂಚಿಸಿದ. ಕೃಷ್ಣಾ ನದಿಯ ದಕ್ಷಿಣಕ್ಕಿದ್ದ ಮೊಗಲ್ ಪ್ರದೇಶಕ್ಕೆಲ್ಲ ಡ್ಯುಪ್ಲೆಕ್ಸನನ್ನು ರಾಜ್ಯಪಾಲನಾಗಿ (ಗವರ್ನರ್) ನೇಮಿಸಿದನಲ್ಲದೆ ಪುದುಚೇರಿಯ ಬಳಿಯ ಪ್ರದೇಶವನ್ನೂ ಮಚಲಿಪಟ್ಟಣವನ್ನು ಒಳಗೊಂಡ ಒರಿಸ್ಸ ಕರಾವಳಿ ಪ್ರದೇಶವನ್ನೂ ಫ್ರೆಂಚರಿಗೆ ಕೊಟ್ಟ. ಮುಜಾಫರ್ ಜಂಗನ ಅಪೇಕ್ಷೆಯಂತೆ ಡ್ಯುಪ್ಲೆಕ್ಸ್‌ ತನ್ನ ಅತ್ಯಂತ ದಕ್ಷ ಅಧಿಕಾರಿಯೆನಿಸಿಕೊಂಡಿದ್ದ ಬುಸ್ಸಿಯ ಅಧೀನದಲ್ಲಿ ಫ್ರೆಂಚ್ ಸೇನೆಯೊಂದನ್ನು ನಿಜಾಮನ ನೆರವಿಗೆ ಕೊಟ್ಟ. ಇದರಿಂದ ನಿಜಾಮನ ಆಸ್ಥಾನದಲ್ಲಿ ಫ್ರೆಂಚ್ ಪ್ರಭಾವ ಪ್ರಬಲವಾಯಿತು. ಚಂದಾಸಾಹೇಬ ಆರ್ಕಾಟಿನ ಅಧಿಪತಿಯಾಗಿ ಸ್ಥಾಪಿತನಾದ.

ತಿರುಚಿನಾಪಳ್ಳಿಯ ಕೋಟೆಯಲ್ಲಿ ಭದ್ರವಾಗಿ ಕುಳಿತಿದ್ದ ಮಹಮ್ಮದ್ ಅಲಿಯನ್ನೂ ಡ್ಯುಪ್ಲೆಕ್ಸ್‌ ವಿಚಾರಿಸಿಕೊಳ್ಳಬೇಕಾಗಿತ್ತು. ಸೈನ್ಯಬಲದಿಂದ ಅವನನ್ನು ಕದಲಿಸುವುದು ಅಸಾಧ್ಯವೆನಿಸಿದಾಗ ಡ್ಯುಪ್ಲೆಕ್ಸ್‌ ಸಂಧಾನದ ಹಾದಿ ಹಿಡಿದ. ಆದರೆ ಇದು ಫಲಿಸಲು ಇಂಗ್ಲಿಷರು ಅವಕಾಶ ಕೊಡಲಿಲ್ಲ. ಇಂಗ್ಲಿಷರ ಚಿತಾವಣೆಯಿಂದ ಮಹಮ್ಮದ್ ಅಲಿ ಬಿಗಿಯಾದ.

ಅಷ್ಟರಲ್ಲಿ ಇಂಗ್ಲಿಷರ ರಾಜ್ಯಪಾಲನಾಗಿ ಬಂದಿದ್ದ (೧೭೫೦) ಸಾಂಡರ್ಸನ ನಾಯಕತ್ವದಲ್ಲಿ ಇಂಗ್ಲಿಷರು ಹೊಸ ಉತ್ಸಾಹ ತಳೆದರು. ಇಂಗ್ಲೆಂಡಿನ ಸರ್ಕಾರವು ಬೆಂಬಲವಾಗಿ ನಿಂತುಕೊಂಡಿತು. ಯುರೋಪಿನಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ವೈರವಿಲ್ಲದಿದ್ದರೂ ಭಾರತದಲ್ಲಿ ಇವರಿಬ್ಬರ ನಡುವೆ ಯುದ್ಧಸ್ಥಿತಿ ಏರ್ಪಟ್ಟಿತು. ಇಂಗ್ಲಿಷರ ಸೈನ್ಯಸಹಾಯ ಬರುವವರೆಗೂ ಅವರ ಸಲಹೆಯಂತೆ ಮಹಮ್ಮದ್ ಅಲಿ ಡ್ಯುಪ್ಲೆಕ್ಸನೊಂದಿಗೆ ಸಂಧಾನದ ನೆವದಲ್ಲಿ ಕಾಲ ತಳ್ಳಿದ. ೧೭೫೧ರ ಮೇಯಲ್ಲಿ ಇಂಗ್ಲಿಷ್ ಸೇನೆ ತಿರುಚಿನಾಪಳ್ಳಿಯ ಕಡೆಗೆ ಪ್ರಯಾಣ ಬೆಳೆಸಿತು. ಲಾನ ನಾಯಕತ್ವದಲ್ಲಿ ಫ್ರೆಂಚ್ ಸೇನೆ ಅಲ್ಲಿಗೆ ಹೋಯಿತು. ಆ ವರ್ಷದ ಅಂತ್ಯದ ವೇಳೆಗೆ ಮೈಸೂರು ತಂಜಾವೂರುಗಳ ಅರಸರೂ ಮಹಮ್ಮದ್ ಅಲಿಯ ನೆರವಿಗೆ ಬಂದರು.

ಮದ್ರಾಸಿನಲ್ಲಿ ಇಂಗ್ಲಿಷ್ ಕಂಪನಿಯ ನೌಕರನಾಗಿ ಬಂದು ಸೈನ್ಯ ಸೇರಿ ಮುಂದಕ್ಕೆ ಬರುತ್ತಿದ್ದ ರಾಬರ್ಟ್ ಕ್ಲೈವನ (ನೋಡಿ- ಕ್ಲೈವ್, ರಾಬರ್ಟ್) ಉಪಾಯವೊಂದರಿಂದ ಭಾರತದಲ್ಲಿ ಫ್ರೆಂಚರ ಭವಿಷ್ಯ ಮಣ್ಣುಪಾಲಾಯಿತು. ಆರ್ಕಾಟಿನ ಮುತ್ತಿಗೆಗಾಗಿ ಇಂಗ್ಲಿಷರು ಸೈನ್ಯವೊಂದನ್ನು ಕಳಿಸಿದರೆ ಚಂದಾಸಾಹೇಬ ತನ್ನ ಸೈನ್ಯದಲ್ಲಿ ಒಂದು ಭಾಗವನ್ನು ಅತ್ತ ಕಳಿಸಬೇಕಾಗುವುದೆಂದೂ ಆಗ ತಿರುಚಿನಾಪಳ್ಳಿಯ ಮೇಲಣ ಒತ್ತಡ ಕಡಿಮೆಯಾಗುವುದರಿಂದ ಅಲ್ಲಿ ಜಯ ಸಾಧಿಸಬಹುದೆಂದೂ ಕ್ಲೈವ್ ಸಲಹೆ ಮಾಡಿದ. ಮಹಮ್ಮದ್ ಅಲಿಯೂ ಹಿಂದೆಯೇ ಈ ರೀತಿ ಸಲಹೆ ಮಾಡಿದ್ದ. ಸಾಂಡರ್ಸನಿಗೂ ಇದು ಒಪ್ಪಿಗೆಯಾಗಿತ್ತು. ಕೇವಲ ೨೦೦ ಮಂದಿ ಐರೋಪ್ಯರು ಮತ್ತು ೩೦೦ ಮಂದಿ ಸಿಪಾಯಿಗಳೊಂದಿಗೆ ಕ್ಲೈವನೇ ಈ ಸಾಹಸಕಾರ್ಯದಲ್ಲಿ ಕೈಯಿಕ್ಕಿದ. ಅವನ ನಿರೀಕ್ಷೆಯಂತೆ ಚಂದಾಸಾಹೇಬ ದೊಡ್ಡ ಸೈನ್ಯವೊಂದನ್ನು ತಿರುಚಿನಾಪಳ್ಳಿಯಿಂದ ಆರ್ಕಾಟಿನ ಕಡೆಗೆ ತಿರುಗಿಸಿದ. ೫೩ ದಿನಗಳ ಕಾಲ ಕ್ಲೈವ್ ಇದನ್ನು ಎದುರಿಸಿದ. ಕೊನೆಗೂ ಚಂದಾಸಾಹೇಬನ ಸೈನ್ಯ ಹಿಂದಿರುಗಬೇಕಾಯಿತು.

ಇದರಿಂದ ಇಂಗ್ಲಿಷರ ಪ್ರತಿಷ್ಠೆ ಬೆಳೆದು ಫ್ರೆಂಚರಿಗೆ ಮುಖಭಂಗವಾಯಿತು. ತಿರುಚಿನಾಪಳ್ಳಿಯ ಮುತ್ತಿಗೆಯಲ್ಲಿ ನಿರತನಾಗಿದ್ದ ಫ್ರೆಂಚ್ ಸೇನಾನಿ ಲಾ ಗೆ ಧೈರ್ಯ ಕುಗ್ಗಿ ಆತ ಶ್ರೀರಂಗದಲ್ಲಿ ತಲೆ ಮರೆಸಿಕೊಂಡ. ಇಂಗ್ಲಿಷರು ಅದನ್ನೂ ಮುತ್ತಿದರು. ಇನ್ನಷ್ಟು ಫ್ರೆಂಚ್ ಸೇನೆ ಅಲ್ಲಿಗೆ ಧಾವಿಸಿತು. ಆದರೆ ಪ್ರಯೋಜನವಾಗಲಿಲ್ಲ. ೧೭೫೨ರ ಜೂನ್ ೯ ರಂದು ಆ ಸೈನ್ಯ ಇಂಗ್ಲಿಷರಿಗೆ ಶರಣಾಗತವಾಯಿತು. ಮೂರು ದಿನಗಳ ಅನಂತರ ಲಾನೂ ಅವನ ಪಡೆಯೂ ಸೆರೆ ಸಿಕ್ಕಬೇಕಾಯಿತು. ಚಂದಾ ಸಾಹೇಬನೂ ಶರಣಾದ. ತಂಜಾವೂರಿನ ಸೇನಾಧಿಪತಿ ಚಂದಾಸಾಹೇಬನ ತಲೆ ತೆಗೆದ.

ಡ್ಯುಪ್ಲೆಕ್ಸನ ಕನಸು ಮುರಿದು ಬಿತ್ತು. ಇದಕ್ಕೆ ಆತ ನಂಬಿದ್ದ ಸೇನಾಧಿಕಾರಿಗಳ ಅದಕ್ಷತೆಯೇ ಬಹಳ ಮಟ್ಟಿಗೆ ಕಾರಣ. ಆದರೂ ಆತ ಎದೆಗುಂದಲಿಲ್ಲ. ಮುರಾರಿರಾವ್ ಮತ್ತು ಮೈಸೂರಿನ ಅರಸರನ್ನು ಒಲಿಸಿಕೊಂಡ. ತಂಜಾವೂರಿನ ದೊರೆ ತಟಸ್ಥನಾಗಿರುವಂತೆ ಒಪ್ಪಂದ ಮಾಡಿಕೊಂಡ. ತಿರುಚಿನಾಪಳ್ಳಿಯನ್ನೇ ಮತ್ತೆ ಮುತ್ತಿಗೆ ಹಾಕಿದ.

ಆದರೆ ಡ್ಯುಪ್ಲೆಕ್ಸನ ಹಂಚಿಕೆಗಳು ಫ್ರಾನ್ಸಿನಲ್ಲಿದ್ದ ಅಧಿಕಾರಿಗಳಿಗೆ ಒಪ್ಪಿಗೆಯಾಗಲಿಲ್ಲ. ಆತನೇನೋ ಅತ್ಯಂತ ಮೇಧಾವಿಯೇ ಆಗಿದ್ದರೂ ಅವನ ಸಾಹಸಕೃತ್ಯಗಳ ವೈಫಲ್ಯದಿಂದಾಗಿ ಫ್ರೆಂಚರಿಗೆ ಬಹಳ ನಷ್ಟವಾಗಿತ್ತು. ಫ್ರೆಂಚರು ಡ್ಯುಪ್ಲೆಕ್ಸನನ್ನು ಹಿಂದಕ್ಕೆ ಕರೆಸಿಕೊಂಡರು. ಹೊಸ ಫ್ರೆಂಚ್ ಅಧಿಕಾರಿ ಇಂಗ್ಲಿಷರೊಂದಿಗೆ ಸಂಧಾನ ಹೂಡಿ ಕೌಲು ಮಾಡಿಕೊಂಡ (೧೭೫೪). ಎರಡನೆಯ ಕರ್ನಾಟಕ ಯುದ್ಧ ಕೊನೆಗೊಂಡಿತು. ದೇಶೀಯ ರಾಜರ ವ್ಯಾಜ್ಯಗಳಲ್ಲಿ ಕೈ ಹಾಕಬಾರದೆಂದು ಎರಡು ಪಕ್ಷಗಳೂ ಒಪ್ಪಿಕೊಂಡುವು. ಕೌಲು ಮಾಡಿಕೊಂಡ ಸಮಯದಲ್ಲಿ ಯಾರಾಗೆ ಯಾವ ಯಾವ ಪ್ರದೇಶ ಸೇರಿತ್ತೋ ಅದದು ಅವರವರ ವಶದಲ್ಲೇ ಇರತಕ್ಕದ್ದೆಂದೂ ಒಡಂಬಡಿಕೆಯಾಯಿತು. ನಿಜಾಮನ ಆಸ್ಥಾನದಲ್ಲಿ ಫ್ರೆಂಚರ ಪ್ರಭಾವವೂ ಕರ್ನಾಟಕದಲ್ಲಿ ಇಂಗ್ಲಿಷರ ಪ್ರಭಾವವೂ ಮುಂದುವರಿದು ಒಂದು ಬಗೆಯ ಸಮಸ್ಥಿತಿ ಏರ್ಪಟ್ಟಿತೆನ್ನಬಹುದು.

ಮೂರನೆಯ ಕರ್ನಾಟಕ ಯುದ್ಧ[ಬದಲಾಯಿಸಿ]

೧೭೫೬ರಲ್ಲಿ ಯುರೋಪಿನಲ್ಲಿ ಏಳು ವರ್ಷಗಳ ಯುದ್ಧ ಆರಂಭವಾದಾಗ ಫ್ರಾನ್ಸೂ ಇಂಗ್ಲೆಂಡೂ ಪಕ್ಷವಿಪಕ್ಷಗಳಾದುವು. ಭಾರತದಲ್ಲೂ ಈ ಎರಡು ಪಕ್ಷಗಳೂ ಪರಸ್ಪರ ಕದನ ಹೂಡಿದುವು. ಈ ಬಾರಿಯ ಯುದ್ಧ ಕರ್ನಾಟಕದ ಎಲ್ಲೆಯನ್ನೂ ದಾಟಿ ಬಂಗಾಳಕ್ಕೂ ಹಬ್ಬಿತು. ದಖನಿನಂತೆ ಬಂಗಾಳಕ್ಕೂ ಆಗ ಹೆಸರಿಗೆ ಮಾತ್ರ ದೆಹಲಿಯ ಮೊಗಲ್ ಚಕ್ರವರ್ತಿಯ ಅಧೀನದಲ್ಲಿ ನವಾಬ್ ಅಲಿವರ್ದೀಖಾನನೆಂಬ ಸುಭಾದಾರನಿದ್ದ. ಹಿಂದಿನ ನವಾಬ ಸರ್ಪರಾಜ್ó ಖಾನನ ವಿರುದ್ಧ ಬಂಡಾಯ ಹೂಡಿ ಅಧಿಕಾರಕ್ಕೆ ಬಂದಿದ್ದ ಆಲಿವರ್ದೀಖಾನ್ ಸಮರ್ಥ. ಆದರೆ ಪದೇಪದೇ ಆಕ್ರಮಣ ನಡೆಸುತ್ತಿದ್ದ ಮರಾಠರನ್ನೆದುರಿಸುವುದೇ ಅವನ ಪರಿಪಾಟಲಾಗಿತ್ತು. ಆ ವೇಳೆಗೆ ಸಂಭವಿಸಿದ ಎರಡನೆಯ ಕರ್ನಾಟಕ ಯುದ್ಧದಲ್ಲಿ ಇಂಗ್ಲಿಷರ ವರ್ತನೆಯನ್ನರಿತುಕೊಂಡ ಆಲಿವರ್ದೀಖಾನನಿಗೆ ಅವರ ಬಗ್ಗೆಯೂ ಸಂಶಯ ಮೂಡಿತ್ತು. ಗಂಡು ಮಕ್ಕಳಿಲ್ಲದ ಈ ನವಾಬ ೧೭೫೬ರಲ್ಲಿ ತೀರಿಕೊಂಡಾಗ ಇವನ ಕೊನೆಯ ಮಗಳ ಮಗ ಸಿರಾಜುದ್ದೌಲ ನವಾಬನಾದ. ಇಂಗ್ಲಿಷರು ಅಲಿವರ್ದೀಖಾನನ ಇನ್ನೊಬ್ಬ ಮಗಳಾದ ಘಸೀಟಿ ಬೇಗಮಳ ಪಕ್ಷ ವಹಿಸಿ ತನ್ನ ಮೇಲೆ ಯುದ್ಧ ಹೂಡಲು ಸನ್ನಾಹ ಮಾಡುತ್ತಿರವರೆಂದು ಸಿರಾಜುದ್ದೌಲನಿಗೆ ಸಂಶಯ ಮೂಡಿತು. ಇಂಗ್ಲಿಷರ ವರ್ತನೆಯಾದರೂ ಈ ಸಂಶಯ ಪ್ರಬಲವಾಗುವಂತೆಯೇ ಇತ್ತು. ಇಂಗ್ಲಿಷರು ಕಲ್ಕತ್ತದ ಹಳೆಯ ಕೋಟೆಯ ಮೇಲೆ ಫಿರಂಗಿಗಳನ್ನು ಸ್ಥಾಪಿಸಿದ್ದರಲ್ಲದೆ ಹೊಸದಾಗಿ ಕೋಟೆಯೊಂದನ್ನು ಕಟ್ಟತೊಡಗಿದ್ದರು. ಇವನ್ನು ತೆಗೆಯಬೇಕೆಂಬ ಸಿರಾಜುದ್ದೌಲನ ಆಜ್ಞೆಗೆ ಇಂಗ್ಲಿಷರು ಬೆಲೆಕೊಡಲಿಲ್ಲ. ಸಿರಾಜುದ್ದೌಲ ಮಿಂಚಿನಂತೆ ಕಾರ್ಯಪ್ರವೃತ್ತನಾದ. ದೊಡ್ಡಮ್ಮನಾದ ಘಸೀಟಿ ಬೇಗಮಳನ್ನು ತನ್ನ ಅರಮನೆಗೆ ವರ್ಗಾಯಿಸಿದ. ಆಕೆಯೊಂದಿಗೆ ಇಂಗ್ಲಿಷರ ಸಂಪರ್ಕ ಕಡಿದುಬಿತ್ತು. ಕಾಸಿಂ ಬಾಜಾರಿನಲ್ಲಿದ್ದ ಇಂಗ್ಲಿಷರ ಕಾರ್ಖಾನೆಯ ಮೇಲೆರಗಿ ಅದನ್ನು ವಶಪಡಿಸಿಕೊಂಡ. ಕಲ್ಕತ್ತದ ಮೇಲೆಯೂ ಏರಿ ಹೋದ. ಇಂಗ್ಲಿಷರು ಕೋಟೆ ತೊರೆದು ಹಡಗುಗಳ ಮೇಲೆ ಅಡಗಿಕೊಂಡರು. ವಿಲಿಯಂ ಕೋಟೆಯ ಪತನವಾಯಿತು.

ಇಂಗ್ಲಿಷರ ಸೋಲಿನ ಸುದ್ದಿ ಮದ್ರಾಸಿಗೆ ಮುಟ್ಟಿದಾಗ ಕ್ಲೈವನ ನೇತೃತ್ವದಲ್ಲಿ ಇಂಗ್ಲಿಷ್ ಸೈನ್ಯವೊಂದು ಕಲ್ಕತ್ತಕ್ಕೆ ಅಭಿಮುಖವಾಗಿ ಪ್ರಯಾಣ ಬೆಳೆಸಿತು. ಕಲ್ಕತ್ತದ ಇಂಗ್ಲಿಷರು ಸಿರಾಜುದ್ದೌಲನ ಕ್ಷಮಾಭಿಕ್ಷೆ ಬೇಡುತ್ತಿದ್ದಾಗ ಕ್ಲೈವನ ಸೇನೆ ಬಂತು. ಕಲ್ಕತ್ತ ಮತ್ತೆ ಇಂಗ್ಲಿಷರ ವಶವಾಯಿತು. ಸಿರಾಜುದ್ದೌಲನ ಶಾಂತಿಯ ಅಭಿಲಾಷೆಯನ್ನು ಅವರು ಕಡೆಗಣಿಸಿದರು. ಫ್ರೆಂಚರ ಕೇಂದ್ರವಾಗಿದ್ದ ಚಂದ್ರ ನಗರವನ್ನೂ ಗೆದ್ದರು. ಫ್ರೆಂಚರು ಅಲ್ಲಿಂದ ಪಲಾಯನ ಮಾಡಿ ಸಿರಾಜುದ್ದೌಲನಲ್ಲಿ ರಕ್ಷಣೆ ಪಡೆದರು. ಅವರನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಸಿರಾಜುದ್ದೌಲ ಒಪ್ಪಲಿಲ್ಲ. ಇಂಗ್ಲಿಷರು ಮುಂದೆ ಬಗೆಬಗೆಯ ತಂತ್ರ ಹೂಡಿ ಸಿರಾಜುದ್ದೌಲನನ್ನು ಮೋಸಗೊಳಿಸಿ ಪ್ಲಾಸಿ ಕದನದಲ್ಲಿ ಅವನನ್ನು ಸೋಲಿಸಿದರು. (ನೋಡಿ- ಪ್ಲಾಸಿ ಕದನ)

೧೭೫೬ರಲ್ಲಿ ಯುರೋಪಿನಲ್ಲಿ ಆರಂಭವಾಗಿದ್ದ ಯುದ್ಧದ ಫಲವಾಗಿ ಭಾರತದಲ್ಲೂ ಫ್ರೆಂಚರೂ ಇಂಗ್ಲಿಷರೂ ಮತ್ತೆ ಪರಸ್ಪರ ಯುದ್ಧ ನಿರತರಾದರು. ಆದರೆ ಕರ್ನಾಟಕ ಪ್ರದೇಶದಲ್ಲಿ ಯುದ್ಧದ ಬಿಸಿ ತಟ್ಟಿದ್ದು ಬಂಗಾಳದಲ್ಲಿ ಇಂಗ್ಲಿಷರ ಸಾಹಸಕ್ಕೆ ವಿಜಯ ದೊರಕಿದ ಮೇಲೆ ಅದುವರೆಗೂ ಫ್ರೆಂಚರೂ ಹೈದರಾಬಾದಿನಲ್ಲಿದ್ದ ಬುಸ್ಸಿಗೆ ನೆರವು ನೀಡುವುದರಲ್ಲಿ ನಿರತರಾಗಿದ್ದರು. ೧೭೫೮ರಲ್ಲಿ ಇಂಗ್ಲಿಷರೂ ಫ್ರೆಂಚರೂ ಬಿರುಸಿನಿಂದ ಪರಸ್ಪರ ಯುದ್ಧಸನ್ನದ್ಧರಾಗ ತೊಡಗಿದರು. ಬಂಗಾಳಕ್ಕೆ ಹೋಗಿದ್ದ ಇಂಗ್ಲಿಷ್ ನೌಕಾಪಡೆ ವಾಪಸಾಯಿತು. ಫ್ರೆಂಚರ ಪರವಾಗಿ ಯುದ್ಧ ನಿರ್ವಹಿಸಲು ಕೌಂಟ್ ದ ಲಾಲಿ ನಿಯುಕ್ತನಾದ, ಆದರೆ ಫ್ರೆಂಚ್ ನೌಕಾಪಡೆ ಮಾತ್ರ ಡ್ಯಾಷನ ಅಧೀನದಲ್ಲಿತ್ತು. ಇದರಿಂದ ಫ್ರೆಂಚರ ಪಕ್ಷದಲ್ಲಿ ಅನೈಕ್ಯವೂ ದ್ವೇಷಾಸೂಯೆಗಳೂ ಬೆಳೆಯುವಂತಾಯಿತು.

ಕೌಂಟ್ ದ ಲಾಲಿ ಬುದ್ಧಿವಂತ. ಮದ್ರಾಸಿನ ಮೇಲೆ ಏರಿಹೋಗಿ ಅದನ್ನು ಸ್ವಾಧೀನಪಡಿಸಿಕೊಂಡು ಕರ್ನಾಟಕದಲ್ಲಿ ಇಂಗ್ಲಿಷರ ಅಧಿಕಾರದ ಬುಡಕ್ಕೇ ಪೆಟ್ಟು ತಾಕಿಸಬೇಕೆಂಬುದು ಲಾಲಿಯ ಹಂಚಿಕೆ. ಅದರಂತೆ ಆತ ಸೇಂಟ್ ಡೇವಿಡ್ ಕೋಟೆಗೆ ಮುತ್ತಿಗೆ ಹಾಕಿದ. ಆದರೆ ಇಂಗ್ಲಿಷರ ಸಮ್ಮುಖದಲ್ಲಿ ಸೋಲುಂಡು ಅನುಭವ ಪಡೆದಿದ್ದ ಡ್ಯಾಷನಿಂದ ಲಾಲಿಗೆ ಕಡಲ ಪಡೆಯ ನೆರವು ಒದಗಲಿಲ್ಲ. ಇಂಗ್ಲಿಷರ ಜೀವನಾಡಿಯೇ ಕಡಲು. ಬಂಗಾಳದೊಂದಿಗೆ ಸಂಪರ್ಕವಿದ್ದದ್ದೂ ಅವರಿಗೊಂದು ವರವಾಗಿತ್ತು. ಫ್ರೆಂಚರಿಗೆ ಇವೆರಡು ಅನುಕೂಲಗಳೂ ಇಲ್ಲದ್ದರಿಂದ ಲಾಲಿಯ ಪ್ರಯತ್ನಗಳೆಲ್ಲ ವಿಫಲವಾದುವು. ಆತ ಆರ್ಥಿಕ ತೊಂದರೆಗಳಿಗೆ ಸಿಕ್ಕಿಬಿದ್ದ. ತಂಜಾವೂರಿನ ರಾಜ ಫ್ರೆಂಚರಿಗೆ ಕೊಡಬೇಕಾಗಿದ್ದ ಎಪ್ಪತ್ತು ಲಕ್ಷ ರೂಪಾಯಿಗಳನ್ನು ಕೊಡಬೇಕೆಂದು ಲಾಲಿ ಆ ಊರಿಗೆ ಮುತ್ತಿಗೆ ಹಾಕಿದ. ಆದರೆ ಸಾಕಷ್ಟು ಮದ್ದುಗುಂಡುಗಳಿಲ್ಲದ್ದರಿಂದ ಪ್ರಯೋಜನವಾಗಲಿಲ್ಲ. ಅಲ್ಲದೆ ಲಾಲಿ ಶೀಘ್ರ ಕೋಪಿ, ದುರಭಿಮಾನಿ. ಈ ಸ್ವಭಾವ ಸೈನ್ಯದ ಸಿಬ್ಬಂದಿಗೆ ಹಿಡಿಸುತ್ತಿರಲಿಲ್ಲ. ಆದ್ದರಿಂದ ಯುದ್ಧದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಆ ವೇಳೆಗೆ ಇಂಗ್ಲಿಷ್ ನೌಕಾಪಡೆಯಿಂದ ಡ್ಯಾಷನ ನೌಕೆಗಳಿಗೆ ಬಿದ್ದ ಪೆಟ್ಟಿನಿಂದಾಗಿ ಫ್ರೆಂಚ್ ನೌಕಾ ಬೆಂಬಲ ಲಾಲಿಗೆ ಸಿಗುವಂತಿರಲಿಲ್ಲ. ಲಾಲಿ ತಂಜಾವೂರಿನ ಮುತ್ತಿಗೆಯನ್ನು ಹಿಂತೆಗೆದುಕೊಂಡ. ಇದರಿಂದ ಅವನ ಗೌರವಕ್ಕೆ ಭಂಗ ಬಂತು. ಮದ್ರಾಸಿಗೆ ರಕ್ಷಣೆಯಾಗಿ ನಿಂತಿದ್ದ ಇಂಗ್ಲಿಷ್ ನೌಕಾಪಡೆಯನ್ನು ನಿವಾರಿಸಿಕೊಳ್ಳದೆ ಆ ನಗರವನ್ನು ವಶಪಡಿಸಿಕೊಳ್ಳುವುದಂತೂ ಲಾಲಿಗೆ ಅಸಾಧ್ಯವಾಗಿತ್ತು. ಅಲ್ಲಿ ಬಂದರು ಸೌಲಭ್ಯವಿಲ್ಲದ್ದರಿಂದ ಮಳೆಗಾಲದಲ್ಲಿ ಇಂಗ್ಲಿಷ್ ನೌಕೆಗಳು ಅಲ್ಲಿಂದ ಹೊರಹೋಗುವುದನ್ನೇ ಕಾದುಕೊಂಡಿದ್ದು ಆಗ ಆತ ಮದ್ರಾಸಿಗೆ ಮುತ್ತಿಗೆ ಹಾಕಿದ (೧೪ ಡಿಸೆಂಬರ್ ೧೭೫೮). ಇದು ಮರುವರ್ಷದ ಫೆಬ್ರುವರಿ ೧೬ರ ವರೆಗೂ ಮುಂದುವರಿಯಿತು. ಆಗ ಇಂಗ್ಲಿಷ್ ನೌಕಾಬಲ ಮತ್ತೆ ಬಂತು. ಲಾಲಿ ಹಿನ್ನೆಡೆದ.

ಇದು ಫ್ರೆಂಚರಿಗೆ ಬಿದ್ದ ಭಾರಿ ಪೆಟ್ಟು. ಇದರಿಂದ ಭಾರತದಲ್ಲಿ ಅವರ ಭವಿಷ್ಯ ಕುಸಿದು ಬಿತ್ತು. ಇದೇ ಕಾಲಕ್ಕೆ ಲಾಲಿ ಇನ್ನೊಂದು ತಪ್ಪು ಮಾಡಿದ. ಹೈದರಾಬಾದಿನಲ್ಲಿದ್ದ ಬುಸ್ಸಿಯನ್ನು ಕರೆಸಿಕೊಂಡು ಅಲ್ಲಿಯ ಸೈನ್ಯವನ್ನು ಅಸಮರ್ಥ ಅಧಿಕಾರಿಗಳ ವಶಕ್ಕೆ ಬಿಟ್ಟ. ಇದನ್ನು ಗಮನಸಿಸಿದ ಕ್ಲೈವ್ ತತ್ಕ್ಷಣವೇ ಕಾರ್ಯಾಚರಣೆಯಲ್ಲಿ ತೊಡಗಿದ. ಬಂಗಾಳದಿಂದ ಇಂಗ್ಲಿಷ್ ಸೈನ್ಯವೊಂದು ಬಂದು ಉತ್ತರ ಸರ್ಕಾರ್ ಪ್ರದೇಶದಲ್ಲಿ ಫ್ರೆಂಚರನ್ನು ಸೋಲಿಸಿತು. ರಾಜಮಹೇಂದ್ರಿಯೂ ಮಚಲಿಪಟ್ಟಣವೂ ಇಂಗ್ಲಿಷರ ವಶವಾದುವು. ನಿಜಾಮ್ ಸಲಾಬತ್ ಜಂಗನೊಂದಿಗೆ ಇಂಗ್ಲಿಷರು ಕೌಲೊಂದನ್ನು ಮಾಡಿಕೊಂಡರು. ಕರ್ನಾಟಕದಲ್ಲೂ ಫ್ರೆಂಚರಿಗೆ ವ್ಯತಿರಿಕ್ತವಾದ ಪರಿಸ್ಥಿತಿ ಏರ್ಪಟ್ಟಿತು. ಕಾಂಚೀಪುರದ ಬಳಿಯಲ್ಲಿ ಬ್ರಿಟಿಷರಿಗೆ ಸೋಲಾಯಿತಾದರೂ ಆಗ ಪಡೆದ ವಿಜಯದ ಪೂರ್ಣ ಪ್ರಯೋಜನವನ್ನು ಫ್ರೆಂಚರು ಪಡೆದುಕೊಳ್ಳಲಿಲ್ಲ. ಸಂಬಳ ದೊರಕಲಿಲ್ಲವೆಂಬ ಕಾರಣದಿಂದ ಸೈನಿಕರಲ್ಲಿ ಅಸಮಾಧಾನವೂ ಬಂಡಾಯ ಮನೋಭಾವವೂ ಬೆಳೆದುವು. ಫ್ರೆಂಚ್ ನೌಕಾಪಡೆಗೆ ಮತ್ತೊಮ್ಮೆ ಇಂಗ್ಲಿಷರು ಪೆಟ್ಟು ಕೊಟ್ಟರು. ಡ್ಯಾಷ್ ಭಾರತವನ್ನು ಬಿಟ್ಟುಹೋದ. ಭಾರತದ ಕಡಲಿನ ಮೇಲಿನ ಇಂಗ್ಲಿಷರ ಒಡೆತನ ಭದ್ರವಾಯಿತು. ೧೮೫೯ರ ಅಕ್ಟೋಬರಿನಲ್ಲಿ ಜನರಲ್ ಕೂಟ್ ಬಂದಮೇಲೆ ಇಂಗ್ಲಿಷರು ಇನ್ನೂ ತೀವ್ರವಾಗಿ ಕದನ ಮುಂದುವರಿಸಿದರು. ವಾಂಡಿವಾಷಿನ ಕೋಟೆಯನ್ನು ಮುತ್ತಿದ್ದ ಲಾಲಿಯ ಸೈನ್ಯವನ್ನು ಇಂಗ್ಲಿಷರು ನಿರ್ನಾಮ ಮಾಡಿದರು. ಕೂಟ್ ಅಲ್ಲಿಗೇ ಬಿಡಲಿಲ್ಲ. ಆಕ್ರಮಣವನ್ನು ಮುಂದುವರಿಸಿದ. ಜಿಂಜೀ಼ ಪುದುಚೇರಿಗಳನ್ನುಳಿದು ಮಿಕ್ಕೆಲ್ಲ ಫ್ರೆಂಚ್ ಠಾಣ್ಯಗಳೂ ಇಂಗ್ಲಿಷರ ವಶವಾದುವು. ೧೭೬೦ರ ಮೇ ತಿಂಗಳಲ್ಲಿ ಇಂಗ್ಲಿಷರು ಪುದುಚೇರಿಗೆ ನೆಲಜಲಗಳೆರಡರಿಂದಲೂ ಮುತ್ತಿಗೆ ಹಾಕಿದರು. ಕೊನೆಯವರೆಗೂ ಸರ್ವಪ್ರಯತ್ನಗಳನ್ನೂ ಮಾಡಿ ಗೆಲ್ಲಬೇಕೆಂಬ ಸಂಕಲ್ಪದಿಂದ ಲಾಲಿ ಮೈಸೂರಿನ ಹೈದರ್ ಅಲಿಯೊಂದಿಗೆ ಸಖ್ಯ ಬೆಳೆಸಿದ. ಹೈದರನ ಸೇನೆ ಪುದುಚೇರಿಗೆ ಬಂತಾದರೂ ಫ್ರೆಂಚರೊಂದಿಗೆ ಕೂಡಿ ಕಾರ್ಯಾಚರಣೆ ನಡೆಸುವುದು ಹೇಗೆಂಬ ಬಗ್ಗೆ ಸ್ಪಷ್ಟವಾದ ಕಲ್ಪನೆ ಇಲ್ಲದ್ದರಿಂದ ಅದು ಮರಳಿತು. ಫ್ರೆಂಚರಿಗೆ ಹಣದ ಮುಗ್ಗಟ್ಟು ಬೇರೆ ಸಂಭವಿಸಿತು. ಕೊನೆಗೂ ಫ್ರೆಂಚರು ನಿರಾಶರಾದರು. ೧೭೬೧ರ ಜನವರಿ ೧೬ರಂದು ಪುದುಚೇರಿ ಬೇಷರತ್ ಶರಣಾಗತವಾಯಿತು. ವಿಜಯಿ ಇಂಗ್ಲಿಷರು ನಿರ್ದಯೆಯಿಂದ ಪುದುಚೇರಿಯ ಕೋಟೆಕೊತ್ತಲಗಳನ್ನೂ ಮನೆಗಳನ್ನೂ ನೆಲಸಮ ಮಾಡಿದರು. ಜಿಂಜೀ ಮತ್ತು ಮಾಹೆಗಳೂ ಇಂಗ್ಲಿಷರ ವಶವಾದುವು. ಭಾರತದಲ್ಲಿ ಫ್ರೆಂಚರು ತಮ್ಮ ನೆಲೆಗಳನ್ನೆಲ್ಲ ಕಳೆದುಕೊಂಡರು. ಲಾಲಿಯನ್ನು ಇಂಗ್ಲೆಂಡಿನಲ್ಲಿ ಎರಡು ವರ್ಷಗಳ ಕಾಲ ಬಂಧಿಯನ್ನಾಗಿ ಇಡಲಾಗಿತ್ತು. ೧೭೬೩ರಲ್ಲಿ ಅವನನ್ನು ವಿಮೋಚನೆಗೊಳಿಸಿ ಫ್ರಾನ್ಸಿಗೆ ಕಳುಹಿಸಲಾಯಿತು. ಆದರೆ ಫ್ರೆಂಚ್ ಸರ್ಕಾರ ಅವನನ್ನು ಬಂಧಿಸಿ ಎರಡು ವರ್ಷಕಾಲ ಇಟ್ಟಿದ್ದು ಕೊನೆಗೆ ಅವನಿಗೆ ಮರಣ ದಂಡನೆ ವಿಧಿಸಿತು.

ಲಾಲಿ ಬುದ್ಧಿವಂತನಾಗಿದ್ದರೂ ತನ್ನ ಕೆಲವು ಅವಗುಣಗಳಿಂದಾಗಿ ಪರಿಸ್ಥಿತಿಯನ್ನು ಹದಗೆಡಿಸಿದ ನಿಜ, ಆದರೆ ಇಂಗ್ಲಿಷರಿಗೆ ಅನೇಕ ಅನುಕೂಲಗಳಿದ್ದುದರಿಂದ ಎಂಥ ನಾಯಕತ್ವದ ಅಡಿಯಲ್ಲೂ ಫ್ರೆಂಚರು ಅಂತಿಮವಾಗಿ ವಿಜಯ ಸಾಧಿಸುವ ಸಂಭವವೇ ಇರಲಿಲ್ಲವೆಂಬುದು ಇತಿಹಾಸಕಾರರ ಅಭಿಪ್ರಾಯ.