ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ ಹೊಸಗನ್ನಡ ಅರುಣೋದಯದ (೧೯ನೆಯ ಶತಮಾನ) ಆದ್ಯಲೇಖಕರು. ಹೊಸಗನ್ನಡದ ಪ್ರಪ್ರಥಮ ಸಾಮಾಜಿಕ ನಾಟಕ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ಎಂಬ ನಾಟಕದ ಕರ್ತೃ.[೧]

ಬದುಕು[ಬದಲಾಯಿಸಿ]

ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕರ್ಕಿಯವರು. ಸೂರಿ ಎಂಬ ಬಿರುದು ವೈದಿಕ ಕರ್ಮಕಾಂಡಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಇವರ ಮನೆತನಕ್ಕೆ ಶ್ರೀ ಗುರುಪೀಠದಿಂದ ದೊರೆತದ್ದು. ಇವರ ತಂದೆ ವಿಘ್ನೇಶ್ವರ ಶಾಸ್ತ್ರಿಗಳೂ ದೊಡ್ಡ ಪಂಡಿತರು. ವೆಂಕಟರಮಣಶಾಸ್ತ್ರಿಯವರು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕರ್ಕಿಯಲ್ಲಿ ಮುಗಿಸಿ, ಹೊಸನಗರದ ಬಳಿ ಇರುವ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಪಡೆದರು. ಅಲ್ಲಿ ಕಾವ್ಯ, ವ್ಯಾಕರಣ, ಅಲಂಕಾರ, ವೇದಾಂತಗಳನ್ನು ಅಧ್ಯಯನ ಮಾಡಿ ಶ್ರೀಗಳ ಪ್ರೀತಿಗೆ ಪಾತ್ರರಾದರು. ಇವರು ಕೆಲವು ಕಾಲ ಮಠದ ಪಾರುಪತ್ಯಗಾರರಾಗಿಯೂ ಕೆಲಸ ಮಾಡಿದರು. ಮೈಸೂರು ಸಂಸ್ಥಾನದಲ್ಲಿ ಫೌಜುದಾರರಾಗಿ ಅನುಭವ ಪಡೆದ ಇವರು ಯಾವ ಹುದ್ದೆಯಲ್ಲಿಯೂ ಬಹುಕಾಲ ಮುಂದುವರೆಯಲಿಲ್ಲ. ಗೆಳಯ ಬೂದಿ ಮಹಾಬಲಭಟ್ಟರೊಂದಿಗೆ ಸೇರಿ ‘ಶಾಸ್ತ್ರೀ ಕಂಪನಿ’ ಮಾಡಿಕೊಂಡು ಊರೂರು ತಿರುಗಿ ಹವ್ಯಕ ಬಾಂಧವರಿಂದ ನಿಧಿ ಸಂಗ್ರಹಿಸಿಕೊಂಡು ಮುಂಬಯಿಯಲ್ಲಿ ಭಾರತೀ ಛಾಪಖಾನೆಯನ್ನು ಸ್ಥಾಪಿಸಿದರು. ಕನ್ನಡದಲ್ಲಿ ಗ್ರಂಥರಚನೆ, ಗ್ರಂಥ ಸಂಪಾದನೆ ಮತ್ತು ಪ್ರಕಟಣೆ ಅಂದಿನ ಇವರ ಗುರಿಯಾಗಿತ್ತು. ಕರಾವಳಿಯ ಅಕ್ಕಸಾಲಿಗರಿಂದ ಕನ್ನಡ ಅಕ್ಷರಗಳನ್ನು ಕೆತ್ತಿಸಿ ಅನೇಕ ಶಾಸ್ತ್ರ ಗ್ರಂಥಗಳನ್ನೂ ಕಾವ್ಯಗಳನ್ನೂ ಅಚ್ಚು ಹಾಕಿಸಿದರು. ಶಂಕರಸಂಹಿತೆ, ಮನುಸ್ಮೃತಿ, ಯೋಗವಾಸಿಷವಿ, ದುರ್ಗಾಸಪ್ತಶತಿ, ಸಹಸ್ರನಾಮಾವಳಿ, ಪೂಜಾಸಮುಚ್ಚಯ, ತುರಂಗಭಾರತ ಮುಂತಾದವು ಕೆಲವು ಮುಖ್ಯಕೃತಿಗಳು. ಕನ್ನಡದ ಉಪಭಾಷೆಯಾಗಿರುವ ಹವ್ಯಕ ಭಾಷೆಯಲ್ಲಿರುವ ಇವರ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ನಾಟಕವು ಕನ್ನಡದ (ಹವ್ಯಕ ಭಾಷೆಯ) ಮೊದಲ ಸಾಮಾಜಿಕ ನಾಟಕವಾಗಿದೆ.[೨]

ಕೊಡುಗೆಗಳು[ಬದಲಾಯಿಸಿ]

ಹವ್ಯಕರ ಇತಿಹಾಸ, ಧರ್ಮ ಮತ್ತು ಮಠಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಅನೇಕ ಯಕ್ಷಗಾನ ಕೃತಿಗಳನ್ನೂ ಇವರು ಮುದ್ರಿಸಿ ಪ್ರಕಟಿಸಿದರು. ಸ್ವತಃ ಕೆಲವು ಕೃತಿಗಳನ್ನು ರಚಿಸಿದರು. ದಕ್ಷಿಣಯಾತ್ರಾ ಚರಿತ್ರೆ, ಪ್ರಾಚೀನ ನಾಟ್ಯ ಕಥಾರ್ಣವ, ಅನಾರ್ಯವಿವರ (1887) ಇವು ಮುಖ್ಯವಾದವು. ದಕ್ಷಿಣ ಯಾತ್ರಾ ಚರಿತ್ರೆ ಹದಿಮೂರು ಪುಟಗಳ ಒಂದು ಚಿಕ್ಕ ಗ್ರಂಥವಾದರೂ ಐತಿಹಾಸಿಕವಾಗಿ ಕನ್ನಡದ ಪ್ರಥಮ ಪ್ರವಾಸಸಾಹಿತ್ಯ ಕೃತಿಯಾಗಿದೆ. ಹೀಗೆಯೇ ಇವರು ಪ್ರಕಟಿಸಿದ ಕಿಬ್ಬಚ್ಚಲು ಮಂಜಮ್ಮನ ವೇದಾಂತ ತತ್ತ್ವಸರಸಾ ಕನ್ನಡದಲ್ಲಿ ಮುದ್ರಣಗೊಂಡ ಮೊದಲ ಮಹಿಳಾಕೃತಿ.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು" (PDF). Archived from the original (PDF) on 2021-07-28. Retrieved 2020-12-30.
  2. "ಆರ್ಕೈವ್ ನಕಲು". Archived from the original on 2021-05-11. Retrieved 2020-12-30.