ಕರುಣರಸ

ವಿಕಿಪೀಡಿಯ ಇಂದ
Jump to navigation Jump to search

ಕರುಣರಸ: ಸಂಸ್ಕೃತಕಾವ್ಯಮೀಮಾಂಸೆಯಲ್ಲಿ ಕಾವ್ಯತತ್ತ್ವವೆಂದು ಪ್ರತಿಪಾದಿತವಾಗಿರುವ ರಸದ ಒಂದು ಪ್ರಕಾರ.

ರಸದ ಪ್ರಕಾರ[ಬದಲಾಯಿಸಿ]

ಭರತಮುನಿ ಹೇಳಿರುವಂತೆ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಎಂಬ ಎಂಟು ರಸಗಳು ಅನುಕ್ರಮವಾಗಿ ರತಿ, ಹಾಸ್ಯ, ಶೋಕ, ಕ್ರೋಧ, ಉತ್ಸಾಹ, ಭಯ, ಜುಗುಪ್ಸಾ, ವಿಸ್ಮಯ ಎಂಬ ಎಂಟು ಸ್ಥಾಯಿಭಾವಗಳ ಅಭಿವ್ಯಕ್ತಿಗಳು. ಅಂದರೆ ಸಹೃದಯರಲ್ಲಿ ಸುಪ್ತವಾಗಿರತಕ್ಕ ಮೇಲ್ಕಂಡ ಒಂದೊಂದು ಭಾವವೂ ಕಾವ್ಯಾದಿಗಳಲ್ಲಿ ಕಾರಣ ಸಾಮಗ್ರಿಗಳೆನಿಸಿಕೊಳ್ಳುವ ವಿಭಾವ. ಅನುಭಾವ, ವ್ಯಭಿಚಾರಿ ಭಾವಗಳ ಸಂಯೋಗದಿಂದ ಆಯಾ ರಸವಾಗುತ್ತದೆ. ಆಯಾ ಸ್ಥಾಯಿಭಾವ, ವಿಭಾವ ಮುಂತಾದವುಗಳ ದೃಷ್ಟಿಯಿಂದ ರಸಕ್ಕೆ ವೈವಿಧ್ಯವೇ ಹೊರತು ರಸಾನುಭವದಲ್ಲಿ ಯಾವ ಪ್ರತ್ಯೇಕತೆಯೂ ಇಲ್ಲ; ಅದು ಅಖಂಡವಾದ ಒಂದು ಆನಂದಾನುಭವವೆಂದು ಆಲಂಕಾರಿಕರ ಮತ. ಕಾವ್ಯಾದಿ ಉತ್ತೇಜಕಗಳಿಂದ ಶೋಕಭಾವ ಕರುಣರಸವಾಗಿ ಆನಂದಮಯವಾಗುತ್ತದೆ.

ಸಾಹಿತ್ಯದಲ್ಲಿ ಕರುಣರಸ[ಬದಲಾಯಿಸಿ]

ರಾಮಾಯಣದಲ್ಲಿ ಪ್ರತಿಪಾದಿತವಾಗಿರುವಂತೆ ಕ್ರೌಂಚಪಕ್ಷಿಯೊಂದನ್ನು ವಧಿಸಿದ ನಿಷಾದನನ್ನು

‘ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ಯತ್ಕ್ರೌಂಚಮಿಥುನಾ ದೇಕಮಧೀಃ ಕಾಮಮೋಹಿತಂ’

ಎಂದು ಶಪಿಸಿದ ವಾಲ್ಮೀಕಿಮುನಿ ಮರುಕ್ಷಣದಲ್ಲಿ ಆಡಿದ

‘ಶೋಕಾರ್ತಸ್ಯ ಪ್ರವೃತೋ ಮೇ ಶ್ಲೋಕೋ ಭವತು ನಾನ್ಯಥಾ’

(ಶೋಕಾರ್ತನಾದ ನನ್ನ ಮೂಲಕ ಬಂದ ಇದು ಶ್ಲೋಕವಾಗಲಿ, ಅನ್ಯಥಾ ಆಗದಿರಲಿ) ಎಂಬ ಮಾತುಗಳು ಈ ಸಂದರ್ಭದಲ್ಲಿ ಗಮನಾರ್ಹವಾಗಿವೆ. ಶೋಕದಿಂದ ಆವಿರ್ಭವಿಸಿದ ಮಾ ನಿಷಾದ ಇತ್ಯಾದಿ ಸೊಗಸಾದ ರಚನೆಯ ನೆನಪಿನಿಂದ ಆನಂದವನ್ನನುಭವಿಸುತ್ತ ಅಂಥ ಒಂದು ವಿಶಿಷ್ಟಾನುಭವದ ಸ್ವರೂಪವನ್ನು ತಿಳಿಯಪಡಿಸಲು ಆ ಮುನಿ ಸೂಚಿಸಿದ ‘ಶ್ಲೋಕೋ ಭವತು’ ಮುಂತಾದ ವಿಚಾರಗಳು ರಸಪಂಥಕ್ಕೆ ಅಂಕುರಗಳೆಂದು ಪ್ರಸಿದ್ಧವಾಗಿವೆ. ಶೋಕಭಾವದ ಆಧಾರವುಳ್ಳ ಮೇಲ್ಕಂಡ ವಿಶಿಷ್ಟಾನುಭವದಲ್ಲಿ (ರಸಾನುಭವ) ಚಿತ್ತವಿದ್ರುತಿ ಬಹು ಮುಖ್ಯವಾದ ಒಂದು ಲಕ್ಷಣ. ಶೋಕಭಾವವಾಗಲಿ, ಉಳಿದ ಯಾವ ಭಾವವಾಗಲಿ ಆಯಾ ರಸವೆನ್ನಿಸಿಕೊಳ್ಳಬೇಕಾದರೆ ಚಿತ್ತವಿದ್ರುತಿ ಅತ್ಯಾವಶ್ಯಕ. ಈ ದೃಷ್ಟಿಯಿಂದ ಕರುಣರಸದ ವಿಚಾರದಲ್ಲಿ ಪಕ್ಷಪಾತ ಬೆಳೆಯಲು ಅವಕಾಶವಾಗಿ ಕೆಲವರು, ಕರುಣ ಒಂದೇ ರಸ ಎಂದು ವಾದಿಸಿದರು. ಹಾಗೆ ಹೇಳುವ ಭವಭೂತಿಯ ಪ್ರಕಾರ

‘ಏಕೋ ರಸಃ ಕರುಣ ಏವ ನಿಮಿತ್ತಭೇದಾತ್, ಭಿನ್ನಃ ಪೃಥಕ್ ಪೃಥಗಿವಾಶ್ರಯತೇ ವಿವರ್ತಾನ್, ಆವರ್ತಬುದ್ಬುದತರಂಗ ಮಯಾನ್ವಿಕಾರನ್, ಅಂಭೋ ಯಥಾ ಸಲಿಲಮೇವ ಹಿ ತತ್ಸಮಸ್ತಂ.

(ರಸ, ಕರುಣ ಒಂದೇ. ಕಾರಣಸಾಮಗ್ರಿಯ ಭೇದದಿಂದ ವ್ಯತ್ಯಾಸಗೊಂಡು ಬೇರೆ ಬೇರೆ ತೋರಿಕೆಗಳನ್ನು ಪಡೆಯುತ್ತದೆ. ಸುಳಿ ಗುಳ್ಳೆ ಅಲೆಗಳಾಗಿ ವಿಕಾರಗಳುಳ್ಳ ನೀರಿನಂತೆ; ಅದೆಲ್ಲವೂ ನೀರಷ್ಟೆ!) ಭವಭೂತಿಯ ಮತದಲ್ಲಿ ರಸವೈವಿಧ್ಯ ತೋರಿಕೆಯದು; ಎಲ್ಲ ರಸಗಳೂ ಕರುಣರಸದಲ್ಲೇ ಪರ್ಯವಸಾನಗೊಳ್ಳುವುದರಿಂದ ರಸ ಅದೊಂದೇ.

ಧ್ವನಿಕಾರನೆಂದು ಪ್ರಸಿದ್ಧನಾಗಿರುವ ಆನಂದವರ್ಧನ ವಿಪ್ರಲಂಭ ಶೃಂಗಾರದಲ್ಲೂ ಕರುಣರಸದಲ್ಲೂ ಮಾಧುರ್ಯಗುಣದ ಪ್ರಕರ್ಷವನ್ನು ಕಾಣುತ್ತಾನೆ. ಅಲ್ಲಿ ಮನಸ್ಸು ಹೆಚ್ಚಾಗಿ ಕರಗುವುದೇ ಅದಕ್ಕೆ ಕಾರಣವೆಂದು ಅವನ ಮತ. ಕರುಣ ಮಧುರತಮ ವೆನ್ನುತ್ತಾನೆ, ಆತ. ಹಾಗೆಯೇ ಶಾಂತ ಒಂದೇ ರಸವೆಂದೂ ಹೇಳುವವರಿದ್ದಾರೆ.

ಒಟ್ಟಿನಲ್ಲಿ ರಸಾನುಭವಕ್ಕೆ ಅತ್ಯಾವಶ್ಯಕವಾದ ಚಿತ್ತವಿದ್ರುತಿ ಎಲ್ಲ ರಸಗಳಲ್ಲೂ ಕಂಡುಬಂದರೂ ಅದು ಶೋಕಭಾವವನ್ನು ಆಧಾರವಾಗಿ ಹೊಂದಿರುವ ಕರುಣದಲ್ಲಿ ಸ್ಪಷ್ಟ ಹಾಗೂ ಸುಲಭವೆಂದು ಹೇಳಬಹುದು. ಆದ್ದರಿಂದ ಅದೊಂದೇ ರಸವೆಂದು ಹೇಳಿಸಿಕೊಳ್ಳುವಷ್ಟು ವೈಶಿಷ್ಟ್ಯ ಕರುಣರಸಕ್ಕೆ ದೊರೆತಿದೆ. ಅಲ್ಲದೆ ಅದು ಸಂಸ್ಕೃತಕಾವ್ಯ ಮೀಮಾಂಸೆಯಲ್ಲಿ ಸುಕುಮಾರತಮವೆಂದು ಶ್ರೇಷ್ಠತೆಯನ್ನು ಪಡೆದಿದೆ; ಸಂಸ್ಕೃತ ಸಾಹಿತ್ಯದಲ್ಲಿ ಹೆಚ್ಚಾಗಿ ಪ್ರತಿಪಾದಿತವಾಗಿರುವ ಪ್ರಧಾನ ರಸಗಳಲ್ಲಿ ಒಂದಾಗಿದೆ.

"https://kn.wikipedia.org/w/index.php?title=ಕರುಣರಸ&oldid=694593" ಇಂದ ಪಡೆಯಲ್ಪಟ್ಟಿದೆ