ಹಾಸ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹಾಸ್ಯ ಜನರಲ್ಲಿ ವಿನೋದವನ್ನು ಮೂಡಿಸುವ ಯಾವುದೇ ಮನುಷ್ಯ, ವಸ್ತು ಅಥವಾ ಸನ್ನಿವೇಷದ ಸಾಮರ್ಥ್ಯ. ಇದು ಮನುಷ್ಯನಲ್ಲಿ ನಗು ಮೂಡಿಸುವ ಅಥವಾ ಖುಷಿ ಉಂಟುಮಾಡುವ ಮನೋರಂಜನೆಯ ವಿಧ.

 ಕತ್ತೆಗಳ ಲೆಕ್ಕಾಚಾರ-
    ಗೌಡರು ಮಾಮೂಲಿನಂತೆ ಶನಿವಾರ ಸಂಜೆ ತಮ್ಮ ಬ್ರಾಂಡ್ ವಿಸ್ಕಿ ಒಂದು ಪೆಗ್ ಮುಂದೆ ಇಟ್ಟುಕೊಂಡು ಕೂತಿದ್ದರು ತುರೇಮಣೆಗಾಗಿ ಕಾಯುತ್ತಾ.
    ಅಷ್ಟರಲ್ಲಿ ಗೌಡರ ಬಾಲ್ಯದ ಗೆಳೆಯ ಚಂದ್ರು ಮತ್ತು ತುರೇಮಣೆ ಆಗಮನವಾಯ್ತು.
   ಚಂದ್ರು ಈಗ ಮಾರನಗರದಲ್ಲಿ ತಹಸಿಲ್ದಾರನಾಗಿದ್ದಾರೆ. ಗೌಡರು ಕೈಬೀಸಿ ಚಂದ್ರುವನ್ನು ಕರೆದರು. ಚಂದ್ರು ಯಾಕೋ ಚಿಂತೆಯಲ್ಲಿದ್ದಹಾಗಿತ್ತು.
    ’ಯಾಕ್ಲಾ ಬಡ್ಡೆತ್ತುದ್ದೇ ಶನಿವಾರ ಸಾಯಂಕಾಲ ಅಳ್ತಾಕೂತಿದ್ದೀ?’ ಎಂದರು ಗೌಡರು.
    ’ಏನೇಳದು ಗೌಡರೇ ಸೋಮವಾರ ಮದ್ಯಾನ್ನುಕ್ಕೆ ಗಂಬಳೂರಲ್ಲಿ ಗ್ರಾಮಾಂತರ ಜಿಲ್ಲಾ ರೆವ್ಯೂ ಮೀಟಿಂಗದೆ ಸ್ಟಾಟಿಕ್ಸ್ಟಿಕ್ಸು ರೆಡಿಯಾಗಿಲ್ಲ,
    ಕ್ಲಾರ್ಕುಗಳೆಲ್ಲಾ ಹೊಂಟೋಗವರೆ,ನಾಳೆ ಬೇರೆ ರಜಾ ಏನು ಮಾಡದೋ ಗೊತ್ತಾಯ್ತಿಲ್ಲಾ. ಅದೂ ಅಲ್ಲದೇ ಶಾಸಕರು ಒಂದೊಂದು ಸಾರಿ ಏನೇನೋ ಪ್ರಶ್ನೆ ಅನಿರಿಕ್ಷಿತವಾಗಿ ಕೇಳಿಬುಡ್ತರೆ’
     ಅಂತ ಅಲವತ್ತುಕೊಂಡ.
    ’ಮೀಟೀಂಗಿಗೆ ಕದ್ದು ಬುಡು. ಉಷಾರಿಲ್ಲ ನನಗೆ ಎಲ್.ಎಮ್.ಬಿ.ಎಸ್ ಅಂತ ಕಾಯಿಲೆಯಾಗದೆ ಅಂತ ರಜಾ ಹಾಕು.’
    ಗೌಡರು ಸಲಹೆ ಕೊಟ್ಟರು. ತುರೆಮಣೆಗೆ ಮತ್ತೆ ಕೂತೂಹಲವಾಯ್ತು.
    ’ಅಲ್ಲೋ ಗೌಡ ಆದ್ಯಾವುದು ಎಲ್.ಎಮ್.ಬಿ.ಎಸ್. ಹಂಗಂದ್ರೇನು?’ ಅಂತ ಕೇಳಿದರು.
    ’ಬಡ್ಡೆತ್ತವಾ. ನೀವು ಕನ್ನಡದೇಲಿ ನೀರು ಭೇದಿ ಅನ್ನದ ನಾನು ಇಂಗ್ಲೀಷಲ್ಲಿಎಲ್.ಎಮ್.ಬಿ.ಎಸ್ ಅಂದೆ. ಹಂಗಂದ್ರೆ ’ಲೂಸ್ ಮೋಶನ್ ವಿಥ್ ಬ್ಯಾಡ್ ಸ್ಮೆಲ್’
     ಅಂತ ತಿಳಕೋ!’ಅಂದ್ರು ಗೌಡರು. ತುರೇಮಣೆಗೆ ಬಾಯಲ್ಲಿದ್ದ ಗೋಬಿ ಮಂಚೂರಿ ಒಳಗೆ ಹೋಗಲಿಲ್ಲ. ಚಂದ್ರುವಿಗೆ ಚಿಂತೆಯಲ್ಲೂ ನಗು ಬಂತು. 
    ’ನೀವು ಈಗಲೂ ತಮಾಷೆ ಬಿಡಲ್ಲವಲ್ಲಾ ಗೌಡರೇ. ಹಂಗಾಗಲ್ಲ, ಹೋದಸಾರಿ ಮೀಟಿಂಗ್‍ಗೆ ಪನ್ನಚಟ್ಣದ ತಾಸಿಲ್ದಾರ್ ಬಂದಿಲ್ಲ ಅಂತ ಅವನ್ನ ಸಸ್ಪೆಂಡ್ ಮಾಡಿಬುಟ್ರು.
    ನಿಮ್ಮ ಡಿಪಾರ್ಟ್‍ಮೆಂಟ್ ಥರಾ ಅಲ್ಲಾ ನಮ್ಮದು’ ಅಂದ ಚಂದ್ರು.
    ’ಲೇ ನಮ್ಮ ಡಿಪಾರ್ಟ್‍ಮೆಂಟ್ನೇ ಅಲ್ಲಗಳೀತೀಲಾ! ನಾವು ಟ್ಯಾಕ್ಸು ಕಲೆಕ್ಟ್ ಮಾಡಿದ್ರೇ ನಿಮ್ಮ ನೆಮ್ಮದಿ,ಆರಾಧನೆ ಆಗದು.’ ಅಂತ ಛೇಡಿಸಿದರು.
    ’ಅಲ್ಲಾ ಗೌಡರೇ ನಾನು ನಿಮ್ಮತ್ರ ಜಗಳಾಡಕೆ ಬಂದಿಲ್ಲ, ನಿಮ್ಮ ಸಜೆಶನ್ ಕೇಳಕೆ ಬಂದಿದೀನಿ. ಈಗ ನಾನು ಸ್ಟಾಟಿಸ್ಟಿಕ್ಸ್ ಹೆಂಗೆ ಮಾಡದು.ಏನಾರ ಐಡಿಯಾ ಕೊಡಿ’ ಚಂದ್ರು ಗೋಗರೆದ.
    ’ಐಡಿಯಾ ಕೊಡಕೆ ನಾನೆನು ಅಭಿಷೇಕ್ ಬಚ್ಚನ್ನ? ಆದ್ರೂ ನಿನ್ನ ಸಂಕಟ ನೋಡಕಾಗ್ತಿಲ್ಲಾ. ಇರಲಿ ಚಂದ್ರು ನನಗೆ ಕಲ್ಮಾಡಿ ಸಿಂಡ್ರೋಮ್ ಆಗದೆ ಅಂತ ಹೇಳು’ ಅಂದರು ಗೌಡರು. 
    ತುರೇಮಣೆ ಇನ್ನೊಂದು ಹೊಸದು ಏನಿದು ಅಂತ ಅಶ್ಚರ್ಯ ಆಯ್ತು.
    ’ಅಂದ್ರೆ ಗೌಡಾ ಕಲ್ಮಾಡಿ ತರಾ ಜೈಲಿಗೆ ಹೋಗಲಿ ಇವ ಅಂತನಾ ನಿನ್ನ ವಿಚಾರ’ ಚಂದ್ರುವಿನ ಬಗ್ಗೆ ಮರುಕ ತೋರಿಸಿದರು.
    ’ನನ ಮಕ್ಕಳಾ ನೀವು ನೆಟ್ಟಗೆ ಪೇಪರ್ ಓದಲ್ಲಾ, ವಿಷ್ಯಾ ತಿಳಕಳಲ್ಲಾ ಬರೀ ಕೆಲಸಕ್ಕೆ ಬಾರದ್ದ ಮಾತಾಡ್ತೀರಿ’ ಅಂತ ಬೈದು ಮುಂದುವರೆಸಿದರು’ ನೋಡ್ಲಾ ಒಲಂಪಿಕ್ಸ್‍ಗೆ ಅಂತ ಬಂದ ದುಡ್ಡೆಲ್ಲಾ
    ಗುಳಂಪಿಕ್ಸ್ ಮಾಡಿ ಸಾಮಾನು ಸಿಗೇ ಬಿದ್ದ ಮ್ಯಾಲೆ ಕಲ್ಮಾಡಿ ಮಾಡಿದ್ದೇನು. ಅಂದ, ನನಿಗೆಲ್ಲಾ ಮರತು ಹೋಗದೆ. ಶಾಟ್ ಟರ್ಮ್ ಮೆಮೋರಿ ಲಾಸ್ ಆಗದೆ, ಅಂದ.
   ಸಿಬಿಐ ಈಗ ಕಲ್ಮಾಡಿಗೆ ಯಾವಾಗ ಮೆಮೋರಿ ಬತ್ತದೆ ಅಂತ ಕಾಯದೇ ಆಗದೆ. ಬಂತಾ ಮೇಮೋರಿ, ಬಂತಾ ಮೇಮೋರಿ....ಅಂತಾ ಪೋಲಿಸ್‍ನೋರು ಕೇಳಿದಾಗೆಲ್ಲಾ ಕಲ್ಮಾಡಿ
   ನೀವ್ಯಾರು,ನಾನ್ಯಾಕೆ ಇಲ್ಲಿದೀನಿ ಅಂತನಂತೆ. ಪೋಲಿಸ್‍ನೋರು ಇದ್ಯಾವ ಗ್ರಾಚಾರ ಅಂತ ಸುಸ್ತಾಗವರಂತೆ. ನೀನೂ ಮೀಟಿಂಗ್‍ನಾಗೆ ಶಾಸಕರು ಏನಾದರೂ ಕೇಳಿದಾಗ. 
   ನೀವ್ಯಾರು ಮಹಾಸ್ವಾಮಿ? ನಾನ್ಯಾರು? ಅಂತ ಕೇಳು ಸರೋಯ್ತದೇ’ ಅಂದ್ರು ಗೌಡರು. 
    ’ನನ್ನೇನು ಮನೀಗೆ ಕಳಿಸಬೇಕು ಅಂತ ಮಾಡಿದೀರ ಗೌಡರೇ? ಇವನಿಗೆ ಬುದ್ಧಿ ಸರಿಯಿಲ್ಲ ಅಂತ ಅಸ್ಪತ್ರೇಗೆ ಅಡ್ಮಿಟ್ ಮಾಡ್ತಾರೆ.
   ಏನಾದರೂ ಹೇಳಿ ಗೌಡರೇ’ ಅಂತ ಚಂದ್ರು ಬೇಡಿದ. ಗೌಡರ ಮನಸ್ಸು ಕರಗಿತು.
    ’ಆಯ್ತು ಬಡ್ಡಿ ಹೈದ್ನೆ ನಿನ್ನ ತಾವ ಈಗ ಯಾವುದಾರ ಹಳೇ ಮೀಟಿಂಗ್‍ದು ಸ್ಟಾಟಿಸ್ಟಿಕ್ಸ್ ಅದ, ಇದ್ರೆ ಕೊಡಿಲ್ಲಿ’ ಅಂದಾಗ ಚಂದ್ರು ಕೊಟ್ಟ ಫ಼ೈಲ್ ತಗಂಡು ಹಾಗೇ ಕಣ್ಣಾಡಿಸಿದರು.
    ಅದರಲ್ಲಿದ್ದುದು. ನೆಮ್ಮದಿ ಕಾರ್ಯಕ್ರಮಕ್ಕೆ ,ಆರಾಧನೆ ಕಾರ್ಯಕ್ರಮಕ್ಕೆ, ಮಡಿಲು ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಗಿದೆ, ಎಷ್ಟು ಜನ ಫ಼ಲಾನುಭವಿಗಳ ಗುರುತಿಸಿದ್ದೀರಿ ಅನ್ನೋ ಲೆಕ್ಕಾಚಾರ.
    ಹತ್ತು ನಿಮಿಷ ನೋಡಿ ವಾಪಾಸ್ ಕೊಟ್ಟರು.
    ’ಪೇಪರ್ ಪೆನ್ನು ಅದಾ? ನೋಡ್ಲಾ ನಿಮ್ಮದು ಬರಿ ಕರ್ಚಾಗ ಲೆಕ್ಕಾ. ಹೆಚ್ಚು-ಕಮ್ಮಿ ಆದ್ರೂ ಯಾರದು ಪ್ರಾಣ ಹೋಗಲ್ಲ. ಅದಕ್ಕೇ ನೀನು ನಿನ್ನ ಹಳೇ ಮೀಟಿಂಗ್ ಸ್ಟಾಟಿಸ್ಟಿಕ್ಸ್‍ಗೆ ಮೇಕಪ್ ಮಾಡು’ ಅಂದ್ರು.
    ’ಅದೆಂಗೆ ಬಿಡಿಸಿ ಹೇಳಿ ಗೌಡರೆ’ ಅಂತ ಚಂದ್ರು ಉತ್ಸುಕನಾದ.
    ’ನೋಡೋ ಉದಾಹರಣೆಗೆ ನೆಮ್ಮದಿ ಫ಼ಲಾನುಭವಿಗಳು ಹೋದ ತಿಂಗಳು ೧೧೫೦ ಜನ ಇದ್ರಲ್ಲವಾ, ಅದಕ್ಕೆ ೨೦ ಪರ್ಸೆಂಟ್ ಸೇರಿಸು ಆಗ ೧೩೮೦ ಆಯ್ತದೆ. ಆ ೧೩೮೦ ಭಾಗಿಸು ೧೦ ರಿಂದ ಆಗ ೧೩೮ ಬತ್ತದೆ.
   ಆ ನೂರ ಮೂವತ್ತೆಂಟ ೧೫ ರಿಂದ ಗುಣಿಸು ೨೦೭೦ ಬಂತಲ್ಲವಾ. ಆ ೨೦೭೦ ಈ ತಿಂಗಳ ನೆಮ್ಮದಿ ಫ಼ಲಾನುಭವಿಗಳು, ಒಟ್ಟು ೮೦ ಪರ್ಸೆಂಟು ಗ್ರೋತ್ ರೇಟು. ಈ ಫ಼ಾರ್ಮುಲಾವ ಎಲ್ಲಾ ಪ್ರೋಗ್ರಾಮಿಗೂ ಹಾಕು
   ನಿನ್ನ ಈ ತಿಂಗಳ ಸ್ಟಾಟಿಸ್ಟಿಕ್ಸು ಸರಿಯಾಯ್ತದೆ. ಇದರಲ್ಲಿ ತಪ್ಪು ಕಂಡಿಡಿಯಾಕೆ ಯಾವ ಚಿತ್ರಗುಪ್ತನಿಗೂ ಆಗಲ್ಲಾ’ ಅಂದ್ರು ಗೌಡರು. ಚಂದ್ರು ಹದಿನೈದು ನಿಮಿಷ ಲೆಕ್ಕಾಚಾರ ಮಾಡಿ ಕೊಂಡು ಸಂತೋಷದಿಂದ 
   ವಿಸ್ಕಿ ಗ್ಲಾಸಿಗೆ ಎರಡು ಹನಿ ಆನಂದಬಾಷ್ಪ ಬೀಳಿಸಿ ಬಿಕ್ಕಳಿಸುತ್ತಾ’ ಥ್ಯಾಂಕ್ಸ್ ಗೌಡರೇ’ ಅಂದ.
    ’ನಿನ್ನ ಮೀಟಿಂಗ್ ಮುಗಿಸಿ ಸೋಮಾರ ಸಾಯಂಕಾಲ ಇಲ್ಲೆ ಸಿಕ್ಕು ’ ಅಂದ್ರು ಗೌಡರು. ತುರೇಮಣೆ ಗೌಡರಿಗೆ ಏನು ಹೇಳಬೇಕು ಅಂತ ತಿಳೀದೇ ದಂಗಾಗಿದ್ದರು. ಗೌಡರು
   ’ ನಡೀಲಾ ಆಗ್ಲೇ ಎಂಟು ಗಂಡ ಆಯ್ತು’ ಅಂತ ಹೊರಟರು.
    ಸೋಮವಾರ ಬಂತು. ಚಂದ್ರು ಏನಾದ್ನೋ ಅಂತ ತುರೇಮಣೆ ಕಾತರದಲ್ಲಿದ್ದರು. ಎಲ್ಲರಿಗಿಂತ ಮೊದಲೇ ಬಂದು ಬಾರಲ್ಲಿ ಕೂತಿದ್ದರು.ಆರೂಕಾಲಿಗೆ ಗೌಡರ ಆಗಮನವಾಯ್ತು.
    ಇವರು ಒಂದು ಪೆಗ್ ಮುಗಿಸುವ ವೇಳೆಗೆ ಚಂದ್ರು ಬಂದ. ಬಂದವನೇ ’ಗೌಡರೇ ..’ ಅವರ ಅಂತ ಕಾಲು ಹಿಡಿದೇ ಬಿಟ್ಟ.
    ’ಏನಾಯ್ತೋ ಬಡ್ಡಿ ಹೈದ್ನೇ ಮೀಟಿಂಗಲ್ಲಿ.’ ಅಂದ್ರು ಗೌಡರು.ಚಂದ್ರು ವಿವರಿಸಿದ.
    ’ನನ್ನ ಸ್ಟಾಟಿಸ್ಟಿಕ್ಸ್ ನೋಡಿ ಎಲ್ಲಾ ಗಾಬರಿ ಬಿದ್ದೋದರು. ಶಾಸಕರು ಶಾಭಾಸ್ ಅಂದ್ರು ಗೌಡರೇ.
    ಎಲ್ಲಾ ಆಫ಼ೀಸರುಗಳು ಚಂದ್ರು ನೋಡಿ ಕಲೀರಿ ಅಂದ್ರು ಗೌಡರೆ’ಅಂತ ಖುಷಿಯಾಗಿ ವಿವರಿಸಿದ ಚಂದ್ರು. 
    ’ಆಮೇಲೆ ಅಷ್ಟೇಯಾ..’ ಅಂದ್ರು ಗೌಡರು.
    ’ಇಲ್ಲಾ ಗೌಡರೇ ಇನ್ನೂ ಅದೆ. ಆಮೇಲೇ ಶಾಸಕರು ’ನೋಡಿ ಚಂದ್ರು ಹತ್ರಾ ಎಲ್ಲಾ ಸ್ಟಾಟಿಸ್ಟಿಕ್ಸು ಇರ್ತವೆ ಅನ್ನಕ್ಕೆ ಇನ್ನೊಂದು ಉದಾಹರಣೆ ನೋಡೋಣ’ 
    ಅಂತ ’ಚಂದ್ರು ಅವರೆ ನಿಮ್ಮ ತಾಲೂಕಲ್ಲಿ ಎಷ್ಟು ಕತ್ತೆ ಅವೆ? ಸ್ವಲ್ಪ ಹೇಳ್ತೀರಾ ಅಂತ ಕೇಳಿದ್ರು’ ಚಂದ್ರುವಿನ ಮಾತು ತುಂಡರಿಸಿದ ತುರೇಮಣೆ’ ಈಗ ನಿನ್ನ ಬಂಡವಾಳ ಆಚೆ ಬಿತ್ತಾ!’ ಅಂದ್ರು.
    ’ಇಲ್ಲಾ ಸಾರ್ ಏನು ಮಾಡದು ಅಂತ ನನಗೆ ಗೊತ್ತಾಗಲಿಲ್ಲ.ಗೌಡರ ನೆನೆಸಿ ಕೊಂಡು ಕೈಲಿದ್ದ ಪೇಪರ್ ನೋಡಿದೆ ಅಲ್ಲಿ ನಾನೆ ಬರಕಂಡಿದ್ದ ನನ್ನ ಡೇಟ್ ಆಫ಼್ ಬರ್ತ್ ಇತ್ತು
    ಹದಿನಾರು ಮೂರು ಐವತ್ತೆಂಟು ಅಂತ. ಒಂದು ಐಡಿಯಾ ಬಂತು. ತಕ್ಷಣ ಶಾಸಕರಿಗೆ ಹೇಳಿದೆ. ’ಸಾರ್ ನಮ್ಮ ತಾಲೂಕಲ್ಲಿ ಇರೋ ಕತ್ತೆಗಳ ಸಂಖ್ಯೆ
    ಹದಿನಾರು ಸಾವಿರದ ಮುನ್ನೂರ ಐವತ್ತೆಂಟು’ ಅಂತ ನನ್ನ ಡೇಟ್ ಆಫ಼್ ಬರ್ತ್ ಹೇಳೀಬಿಟ್ಟೆ.ಎಲ್ಲಾ ಆಫ಼ಿಸರುಗಳು ಶಾಕಾದರು. ಶಾಸಕರು ಏನೂ ಕೇಳಲಿಲ್ಲ’ಚಂದ್ರು ಖುಷಿಯಾಗಿ ಹೇಳಿದ.
    ’ಅಲ್ರೀ ನಿಮ್ಮ ಡೇಟ್ ಆಫ಼್ ಬರ್ತ್ ಹದಿನಾರು ಮೂರು ಐವತ್ತಾರಲ್ಲವಾ ನನ್ಗೆ ಚೆನ್ನಾಗಿ ನೆನಪೈತಿ ಯಾಕಂದ್ರೆ ನಾನೂ ಅದೇ ತಿಂಗಳು ವರ್ಷದಲ್ಲಿ ಹುಟ್ಟಿದ್ದು ಎರಡು ವರ್ಷ ಕಡಿಮೆ ಯಾಕೆ ಹೇಳೀದ್ರಿ?’ ಅಂದ್ರು ತುರೇಮಣೆ.
    ’ಸಾರ್ ನಮ್ಮಪ್ಪನ ಪ್ರಕಾರ ಐವತ್ತೆಂಟೇ ಸರಿಯಾದ ವರ್ಷ’ಅಂದ ಚಂದ್ರು.
    ’ಹೂ ಕಲಾ ತುರೇಮಣೆ ಆ ಎರಡು ಕತ್ತೆಗಳ ವ್ಯತ್ಯಾಸ ಸರಿಯಾಗಿ ಸೇರಿಸವನೆ. ಅವೆರಡು ಕತ್ತೆಗಳು ಯಾವುದು ಅಂತ ಗೊತ್ತ ನಿನಗೆ? ಮೊದಲನೇ ಕತ್ತೆ ಅವನಿಗೆ ಸ್ತಾಟಿಸ್ಟಿಕ್ಸು ಕಲಿಸಿದ ನಾನು,
    ಎರಡನೇ ಕತ್ತೆ ಅದನ್ನ ಸರಿಯಾಗಿ ಉಪಯೋಗಿಸಿ ಕೊಂಡ ಚಂದ್ರು !’ಅಂದ್ರು ಗೌಡರು ಗಂಭೀರವಾಗಿ. ನಗಲಾರದ ತುರೇಮಣೆಗೆ ಬಾಯಲ್ಲಿದ್ದ ಚಿಲ್ಲಿ ಫ಼ಿಶ್ ಖಾರ ನೆತ್ತಿಗೇರಿ ಕೆಮ್ಮಲಾರಂಭಿಸಿದರು.

ಲೇಖಕ- ಡಿ.ಎಸ್.ಲಿಂಗರಾಜು, ನಾಗರಭಾವಿ, ಬೆಂಗಳೂರು-೭೨.

                         ಕನ್ನಡ ಹನಿಗಳಿಂದ ಆರಿಸಲಾಗಿದೆ

ಅನರ್ಥ ಕೊಶಗಳು

ಡಾಕ್ಟರ್ - ಯಮಧರ್ಮರಾಯನ ಏಜೆಂಟ್

ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್

ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯ

ಸೂರ್ಯ - ಕತ್ತಲಾದಾಗ ಹೊರಬರದ ಹೇಡಿ

ರೆಪ್ಪೆ - ಕಣ್ಣಿನ ಮೇಲೆ ಇರುವ ಭೂತ

ಹಾಲು - ದ್ರವ ರೂಪದ ಹಸುವಿನ ಮಾಂಸ

ಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರ

ಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದ

ಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರು

ಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿ

ತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆ

ಕಳ್ಳ - ಅನ್ಯರ ಆಸ್ತಿಗೆ ಒಡೆಯ

ಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ..

ಜ್ಯೋತಿಷಿ - ಅನ್ಯರ ದುಡ್ಡಿನಿಂದ ತನ್ನ ಭವಿಷ್ಯ ರೂಪಿಸಿ ಕೊಳ್ಳುವವ.

ವಕೀಲ - ನ್ಯಾಯ ದೇಗುಲದಲ್ಲಿ ಅನ್ಯಾಯ ಎತ್ತಿ ಹಿಡಿಯುವ ವ್ಯಕ್ತಿ.

Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು.

Arithmetic(ಅರಿತ ಮೆಟ್ರಿಕ್ ) - ಅರಿತ ಮೇಲೆ ಮೆಟ್ರಿಕ್ ಪಾಸಾಗ ಬಹುದೇನೋ?.

Algebra(ಎಲ್ಲ ಗೊಬ್ರ ) - ಇದು ನಮ್ಮ ಹೊಲಕ್ಕೆ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತೆ.

Geometry(ಗೋ ಮೂತ್ರ ) - ಗೋ ಮೂತ್ರ ತುಂಬಾ ಪವಿತ್ರವಾದುದು. ಅದಕ್ಕೆ ತುಂಬಾ ಔಷಧಿಯ ಗುಣಗಳು ಇರುತ್ತವೆ.

Trignometry (ತಿರಗೋಣು ಮತ್ತೆ ) - ಮತ್ತೆ ಮತ್ತೆ ತಿರುಗಿ ಕಲಿಯೂ ಸೂತ್ರ

Calculas (ಖಾಲಿ ಕೆಲಸ) - ಇದನ್ನು ಕಲಿತ್ತಿದ್ದರೆ ಕೆಲಸ ಖಾಲಿ ಇರಬಹುದು.

physics (ಫಿಸಿಕ್ ) - ಕಟ್ಟು ಮಸ್ತಾದ ದೇಹ(ಯಾರದು ಅಂತ ಕೇಳಬೇಡಿ?).

chemistry(ಕೆಮ್ಮು ಎಷ್ಟುರಿ ?) - ಕದ್ದು ಸೇದುವ ಸಮಯದಲ್ಲಿ ಬರುವ ವ್ಯಾಧಿ.

sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.

biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.

                      ಕನ್ನಡ ಹನಿಗಳಿಂದ ಆರಿಸಲಾಗಿದೆ
"https://kn.wikipedia.org/w/index.php?title=ಹಾಸ್ಯ&oldid=680193" ಇಂದ ಪಡೆಯಲ್ಪಟ್ಟಿದೆ