ವಿಷಯಕ್ಕೆ ಹೋಗು

ಕರಿಜೇಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕರಿಜೇಡ
Scientific classification
ಸಾಮ್ರಾಜ್ಯ:
ವಿಭಾಗ:
ಉಪವಿಭಾಗ:
ಕೆಲಿಸರೆಟ
ವರ್ಗ:
ಅರ್ಕಿನಿಡ
ಗಣ:
ಅರನಿಯೇ
ಕುಟುಂಬ:
ತೆರಿಡೈಯಿಡೇ
ಕುಲ:
ಲ್ಯಾಟ್ರೊಡೆಕ್ಟಸ್

ಚಾರ್ಲ್ಸ್ ಆಥನೇಸ್ ವಾಲ್ಕನಿಯರ್, 1805[]
ಪ್ರಭೇದ

31 ಪ್ರಭೇದಗಳನ್ನು ವಿವರಿಸಲಾಗಿದೆ ,[] 65 ಪ್ರಭೇದಗಳು ಬದುಕಿವೆ ಎಂದು ಅಂದಾಜಿಸಲಾಗಿದೆ[ಸೂಕ್ತ ಉಲ್ಲೇಖನ ಬೇಕು]

ಕರಿಜೇಡ ತೆರಿಡೈಯಿಡೇ ಕುಟುಂಬದ ಲ್ಯಾಟ್ರೊಡೆಕ್ಟಸ್ ಜಾತಿಯ ಜೇಡ. ಇದನ್ನು ಇಂಗ್ಲೀಶ್‌ನಲ್ಲಿ ವಿಧವೆ ಜೇಡ (ವಿಡೊ ಸ್ಪೈಡರ್) ಎಂದು ಕರೆಯುತ್ತಾರೆ. ಆ ಕುಲದ ಹೆಣ್ಣು ಜೀವಿಗಳು ಲೈಂಗಿಕ ಮಿಲನದ ನಂತರ ತಮ್ಮ ಗಂಡು ಸಂಗಾತಿಯನ್ನು ತಿನ್ನುವ ಕಾರಣಕ್ಕೆ ಈ ಹೆಸರು ಬಂದಿದೆ. ಇವು ಜಗತ್ತಿನಾದ್ಯಂತ ವ್ಯಾಪಿಸಿವೆ ಮತ್ತು ಆಫ್ರಿಕಾದಲ್ಲಿ ಇದನ್ನು ಬಟನ್ ಜೇಡ ಮತ್ತು ಆಸ್ಟ್ರೇಲಿಯದಲ್ಲಿ ಕೆಂಪುಬೆನ್ನಿನ ಜೇಡ ಎಂದು ಕರೆಯುತ್ತಾರೆ.

ಇದರ ಕುಲದ ಹೆಸರು ಲ್ಯಾಟ್ರೊಡೆಕ್ಟಸ್ ಈ ಜೇಡಗಳು ಹೊಂದಿರುವ ನರವಿಷ ಲ್ಯಾಟ್ರೊಟಾಕ್ಸಿನ್‌ನಿಂದ ಬಂದಿದೆ. ಇದರ ಹೆಣ್ಣಿನಲ್ಲಿ ದೊಡ್ಡ ವಿಷದ ಗ್ರಂಥಿಯಿದ್ದು ಮಾನವರಿಗೆ ಅಪಾಯಕಾರಿ ಯಾಗಬಲ್ಲದು. ಈ ಕುಲದ 31 ಪ್ರಭೇದಗಳನ್ನು ಜಗತ್ತಿನಾದ್ಯಂತ ಗುರುತಿಸಲಾಗಿದೆ.

ವಿವರಣೆ

[ಬದಲಾಯಿಸಿ]
ತಳಭಾಗದಲ್ಲಿ ಕೆಂಪು ಬುಡುಬಡುಕೆ ಗುರುತು ತೋರುವ ಲ್ಯಾ. ಜಿಯೊಮೆಟ್ರಿಕಸ್‌

ಪ್ರೌಢ ಹೆಣ್ಣು ಜೇಡ ಸುಳಿ ಉದ್ದವಾಗಿದೆ. ಉದರ ದುಂಡಾಗಿ ದೇಹ ಮಿರುಗುವ ಕಪ್ಪು ಬಣ್ಣದಿಂದ ಕೂಡಿದೆ. ತಳಭಾಗದಲ್ಲಿ ಕಡು ಗೆಂಪು ಬಣ್ಣದ ಬುಡುಬುಡುಕೆ ಆಕಾರದ ಗುರುತಿದೆ. ಕೆಲವು ಅಪ್ರಬುದ್ಧ ಹೆಣ್ಣು ಜೇಡಗಳ ಬೆನ್ನಿನ ಮೇಲೆ ಒಂದು ಸಾಲು ಕೆಂಪು ಬಣ್ಣದ ಚುಕ್ಕೆಗಳಿವೆ ಕೆಲವಕ್ಕೆ ಈ ತರಹ ಚುಕ್ಕೆಗಳು ಇರುವುದಿಲ್ಲ. ಗಂಡು ಜೇಡ ಹೆಣ್ಣಿಗಿಂತ ಚಿಕ್ಕದು. ಇದರಲ್ಲೂ ಉದರದ ತಳ ಭಾಗದಲ್ಲಿ ಬುಡುಬುಡಕ್ಕೆ ಆಕಾರದ ಗುರುತಿದೆ. ಬೆನ್ನಿನ ಮೇಲೆ ವಿವಿಧ ಮಾದರಿಯ ಕೆಂಪು ಚುಕ್ಕೆಗಳೂ ಇವುಗಳ ಪಾಶರ್ವ್‌ದಲ್ಲಿ ಬಿಳಿಯ ಗೆರೆಗಳೂ ಇವೆ.

ಲ್ಯಾ. ಜಿಯೊಮೆಟ್ರಿಕಸ್‌ನ ಮೇಲ್ಬಾಗ (ಬೆನ್ನು)

ಸಂತಾನೋತ್ಪತ್ತಿ

[ಬದಲಾಯಿಸಿ]

ಸಂಯುಕ್ತ ಸಂಸ್ಥಾನಗಳ ಸಮಶೀತೋಷ್ಣ ವಲಯದ ಭಾಗಗಳಲ್ಲಿ ಇದರ ಮರಿಗಳು ಕೋಶಾವಸ್ಥೆ ಘಟ್ಟವನ್ನು ಚಳಿಗಾಲದಲ್ಲಿ ಕಳೆದು, ವಸಂತ ಕಾಲದಲ್ಲಿ ಹೊರಕಾಣಿಸಿಕೊಳ್ಳುತ್ತವೆ. ಪ್ರೌಢ ಜೇಡಗಳು ಏಪ್ರಿಲ್ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅದರೆ ಗಂಡು ಜೇಡಗಳು ಕಣ್ಣಿಗೆ ಬೀಳುವುದು ಅಪರೂಪ. ಗಂಡುಜೇಡ ಏಕಾಂಗಿಯಾಗಿ ಬಲೆಯಲ್ಲಿ ಕುಳಿತು ರೇತಸ್ಸನ್ನು ಸುರಿಸಿ ಎರಡನೆಯ ಉಪಾಂಗವಾದ ಪ್ಯಾಲ್ಟುಗಳಲ್ಲಿನ ಒಂದು ಚೀಲದಲ್ಲಿ ಶೇಖರಿಸಿ ಸಂಭೋಗ ಕಾಲದಲ್ಲಿ ಇದನ್ನು ಒಂದು ಪ್ಯಾಲ್ಟಿನ ಮೂಲಕ ಹೆಣ್ಣು ಜೇಡದ ಜನನೇಂದ್ರಿಯದ ದ್ವಾರದ ಒಳಗೆ ತಳ್ಳುವುದು. ಸಂಭೋಗವಾದ ಅನಂತರ ಹೆಣ್ಣು ಜೇಡ ಗಂಡುಜೇಡವನ್ನು ತಿಂದುಬಿಡುತ್ತದೆ! ಹೆಣ್ಣು ಗರ್ಭಧರಿಸಿದ ಮೇಲೆ 250-750 ಮೊಟ್ಟೆಗಳನ್ನು 0-5" ಅಗಲವುಳ್ಳ ರೇಷ್ಮೆಯಂಥ ಮೃದುವಾದ ಕೋಶದಲ್ಲಿ ಇಟ್ಟು ರಕ್ಷಿಸುತ್ತದೆ. ಈ ಭ್ರೂಣಕೋಶಗಳನ್ನು ಜುಲೈ-ಸೆಪ್ಟೆಂಬರ್ ತಿಂಗಳುಗಳಲ್ಲಿ ಕಾಣಬಹುದು. ಮರಿಗಳು 14-30 ದಿನಗಳ ವರೆಗೆ ಈ ಕೋಶಗಳೊಳಗೇ ಬೆಳೆದು ಒಂದು ಬಾರಿ ಪೊರೆಬಿಟ್ಟು ಅನಂತರ ಹೊರಬರುತ್ತವೆ. ಪ್ರೌಢಾವಸ್ಥೆ ಹೊಂದ ಬೇಕಾದರೆ ಗಂಡುಮರಿ 4-7 ಬಾರಿಯೂ ಹೆಣ್ಣು ಮರಿ 2-9 ಸಲವೂ ಪೊರೆ ಕಳಚುತ್ತದೆ.

ವರ್ತನೆ

[ಬದಲಾಯಿಸಿ]

ಇವು ಪ್ರೌಢಾವಸ್ಥೆಗೆ ಬಂದ ಅನಂತರ ಕೆಲವು ತಿಂಗಳುಗಳಿಂದ ಒಂದೂವರೆ ವರ್ಷಗಳವರೆಗೆ ಜೀವಿಸಿರಬಲ್ಲವು. ಕರಿಜೇಡಗಳು ಮರದ ತೊಗಟೆಯ ಒಳಭಾಗ, ಸಂದುಗಳಲ್ಲಿ ಅಥವಾ ಪೊಟರೆಗಳಲ್ಲಿ ರೇಷ್ಮೆಯಂಥ ಸೂಕ್ಷ್ಮವಾದ ದಾರದಿಂದ ದೃಢವಾದ ಬಲೆಯನ್ನು ನೇಯುತ್ತವೆ. ಇತರ ಕೀಟಗಳು ಬಲೆಯೊಳಗೆ ಸಿಕ್ಕಿಕೊಂಡಾಗ ಅವುಗಳನ್ನು ಹಿಡಿದು ರಂಧ್ರಗಳನ್ನು ಮಾಡಿ, ಮೈ ಒಳಗಿರುವ ರಸವನ್ನು ಹೀರುತ್ತವೆ. ಆದರೆ ಕಣಜಗಳೂ ಇತರ ಕೀಟಭಕ್ಷಕಗಳೂ ಜೇಡಗಳ ಮರಿಗಳನ್ನು ತಿಂದು ಹಾಕುತ್ತವೆ. ಇತರ ಜೇಡಗಳಿಗೆ ಇರುವಂತೆ ಕರೀಜೇಡಕ್ಕೂ ವಿಷಗ್ರಂಥಿಗಳೂ ಅದನ್ನು ದೇಹ ದೊಳಕ್ಕೆ ಹೊಗಿಸುವ ಅಂಗಗಳೂ ಇವೆ. ಇದು ಆತ್ಮರಕ್ಷಣೆಯ ಸಾಧನ. ಕರಿಜೇಡ ಒಮ್ಮೊಮ್ಮೆ ಮನುಷ್ಯನನ್ನು ಕಡಿಯುವುದು ಉಂಟು. ಆಗ ವಿಷದ ಪರಿಣಾಮವಾಗಿ ಮೈನೋವು, ವಾಂತಿ, ವಪೆಯ ಅಸ್ವಸ್ಥತೆ ಇವೆಲ್ಲ ಕಾಣಿಸಿಕೊಳ್ಳುತ್ತವೆ. ಮೂರು ನಾಲ್ಕು ದಿನಗಳವರಗೂ ಈ ನೋವು ಇರುತ್ತದೆ. ಆದರೆ ಸಾವು ಬಹಳ ಅಪರೂಪ.

ಮೂರು ರೀತಿಯ ಈ ಜೇಡಗಳ ಹೆಣೆಯುವ ಬಲದ ದಾರಗಳನ್ನು ಅಳೆದ ಬ್ಲಾಕ್‌ಲೆಡ್ಜ್‌ ಅಧ್ಯಯನವು ಅದರ ಕರ್ಷಕ ಶಕ್ತಿಯನ್ನು (ಟನ್‌ಶೈಲ್ ಸ್ಟ್ರೆಂತ್- ಯಾವುದೇ ದಾರ, ತಂತಿ, ಹಗ್ಗವನ್ನು ಹರಿಯ ಬಲ್ಲ ಶಕ್ತಿ) ಸುಮಾರು 1000 MPa ಎಂದು ಅಂದಾಜಿಸಿದೆ. ಇನ್ನೊಂದು ಜೇಡದ (ನೆಫಿಲ ಎಡುಲಿಸ್) ಕರ್ಷಕ ಶಕ್ತಿಯನ್ನು ಅಧ್ಯಯನಗಳು 1290 ± 160 MPa ಎನ್ನುತ್ತವೆ. ಲ್ಯಾಕ್ಟೊಡೆಕ್ಟಸ್ ಹೆಸ್ಪೆರಸ್‌ನ (ಪಶ್ಚಿಮದ ಕರಿಜೇಡ) ಬಲೆಯ ದಾರದ ಕರ್ಷಕ ಶಕ್ತಿ ಮತ್ತು ಇತರ ಭೌತಿಕ ಗುಣಗಳು ಇತರ ಬಲೆ ನೇಯುವ ಜೇಡಗಳ ದಾರವನ್ನು ಹೋಲುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಜೇಡದ ದಾರದ ಕರ್ಷಕ ಬಲವನ್ನು ಅದೇ ದಪ್ಪದ ಉಕ್ಕಿನ ತಂತಿಯ ಕರ್ಷಕ ಶಕ್ತಿಗೆ ಹೋಲಿಸ ಬಹುದು. ಆದರೆ ಸ್ಟೀಲ್ ತಂತಿಯ ಸಾಂದ್ರತೆ ದಾರಕ್ಕೆ ಹೋಲಿಸಿದಲ್ಲಿ ಆರು ಪಟ್ಟು ಹೆಚ್ಚು. ಹೀಗಾಗಿ ಜೇಡದ ದಾರವು ಅದೇ ತೂಕದ ಸ್ಟೀಲ್‌ ತಂತಿಗಿಂತ ಹೆಚ್ಚು ಶಕ್ತಿಯುತವಾದುದು.

ಪ್ರಭೇದಗಳು

[ಬದಲಾಯಿಸಿ]

ಎಚ್. ಲೆವಿ ಎಂಬ ವಿಜ್ಞಾನಿ ಲ್ಯಾಟ್ರೊಡೆಕ್ಟಸ್, ಕುಲದಲ್ಲಿ ಆಫ್ರಿಕದ ಲ್ಯಾ ಜಿಯೊಮೆಟ್ರಿಕಸ್, ಅಮೆರಿಕದ ಲ್ಯಾ. ಕುರಸವಿಯೆನ್ನಸ್, ಯೆಮನಿನ ಲ್ಯಾ. ಹಿಸ್ಟ್ರಿಕ್ಸ್‌, ಇರಾನಿನ ಲ್ಯಾ. ದಹ್ಲಿ, ಉತ್ತರ ಆಫ್ರಿಕದ ಲ್ಯಾ ಪ್ಯಾಲಿಡಸ್ ಮತ್ತು ಪ್ರಪಂಚದ ಇತರ ಉಷ್ಣವಲಯದಲ್ಲಿ ಜೀವಿಸುವ ಲ್ಯಾ. ಮ್ಯಾಕ್ಟನ್ಸ್‌ ಪ್ರಭೇದಗಳನ್ನು ವಿವರಿಸಿದ್ದಾನೆ. ಅಲ್ಲದೆ ಲೆವಿ 1959ರಲ್ಲಿ ಲ್ಯಾಟ್ರೊಡೆಕ್ಟಸ್ ಕುಲದ ಅಧ್ಯನಯನದಲ್ಲಿ ವಿವರಿಸಿದ ಹಲವು ಪ್ರಭೇದಗಳ ಹೆಣ್ಣಿನ ಜನನಾಂಗಗಳ ಹೋಲಿಕೆಯನ್ನು ಪರಿಗಣಿಸಿ ಬಣ್ಣದ ಆಧಾರದ ಮೇಲೆ ಹಲವು ಪ್ರಭೇದಗಳ ಬದಲು ಅವುಗಳನ್ನು ಉಪಪ್ರಭೇದಗಳಾಗಿ ಈ ಜೇಡಗಳ ಟ್ಯಾಕ್ಸಾನಮಿಯನ್ನು ಮರುರಚಿಸಿದ.

ಉತ್ತರ ಅಮೆರಿಕದಲ್ಲಿ 4 ಪ್ರಭೇದಗಳನ್ನು, ದಕ್ಷಿಣ ಮತ್ತು ಕೇಂದ್ರ ಅಮೆರಿಕದಲ್ಲಿ 9, ಯುರೋಪ್, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಪಶ್ಚಿಮ ಏಶ್ಯಾದಲ್ಲಿ 7, ಕೆಳ ಸಹಾರ ಆಫ್ರಿಕಾ ಮತ್ತು ಮಡಗಾಸ್ಕರಿನಲ್ಲಿ 7, ಆಸ್ಟ್ರೇಲಿಯಾ ಮತ್ತು ಓಶನಿಯಾದಲ್ಲಿ 2 ಪ್ರಭೇದಗಳನ್ನು ಗುರಿಸಿಲಾಗಿದೆ. ಅಲ್ಲದೆ ಜಗತ್ತಿನಾದ್ಯಂತ ಹಲವು ಖಂಡಗಳಲ್ಲಿ ಇರುವ ಲ್ಯಾ. ಜಿಯೊಮೆಟ್ರಿಕಸ್ ಮತ್ತು ದಕ್ಷಿಣ ಮತ್ತು ಪಶ್ಚಿಮ ಏಶ್ಯಾದ 3 ಪ್ರಭೇದಳನ್ನು ಇದಕ್ಕೆ ಸೇರಿಸ ಬಹುದು. ಭಾರತ ಮತ್ತು ಶ್ರೀ ಲಂಕಾದಲ್ಲಿ ಈ ಕುಲದ ಲ್ಯಾ. ಎರಿಥ್ರೊಮೆಲಾಸ್ ಕಂಡುಬರುತ್ತದೆ.

ಆಧಾರ ಮತ್ತು ಉಲ್ಲೇಖಗಳು

[ಬದಲಾಯಿಸಿ]
  • ಇಲ್ಲಿನ ಭಾಗಶಹ ಮಾಹಿತಿಯನ್ನು Wikipedia English Latrodectus retrieved on 2016-10-29, ನಿಂದ ಪಡೆಯಲಾಗಿದೆ.
  1. "Gen. Latrodectus Walckenaer, 1805", World Spider Catalog, Natural History Museum Bern, retrieved 2016-01-28
  2. "Species list for Latrodectus". World Spider Catalog. Natural History Museum Bern. Retrieved 2016-01-28.
"https://kn.wikipedia.org/w/index.php?title=ಕರಿಜೇಡ&oldid=1158940" ಇಂದ ಪಡೆಯಲ್ಪಟ್ಟಿದೆ