ಕನ್ನಡದಲ್ಲಿ ಕಾವ್ಯ ಮಿಮಾಂಸೆ

ವಿಕಿಪೀಡಿಯ ಇಂದ
Jump to navigation Jump to search

ಕನ್ನಡದಲ್ಲಿ ಕಾವ್ಯಮೀಮಾಂಸೆ :- ಕನ್ನಡದ ಮುನ್ನಡೆಗೆ ಸಹಾಯವಾಗುವಂತೆ ಸಂಸ್ಕೃತದ ಕಾವ್ಯತತ್ತ್ವಗಳನ್ನು ಕನ್ನಡದ ಮೂಲಕ ಪ್ರತಿಪಾದಿಸುವ ಮಹತ್ತ್ವದ ಆದಿಗ್ರಂಥವೆಂದರೆ ಕವಿರಾಜಮಾರ್ಗ.

ಇತಿಹಾಸ[ಬದಲಾಯಿಸಿ]

ಮಹಾಕವಿಗಳನ್ನು ಕವಿರಾಜರೆಂದು ಗ್ರಹಿಸಿ, ಅವರ ಕಾವ್ಯ ಸಂಪ್ರದಾಯವನ್ನೇ ಮಾರ್ಗವೆಂದು ದಂಡಿಯಂತೆ ಇಲ್ಲಿ ಹೆಸರಿಸಿದೆಯೆನಿಸುತ್ತದೆ. ಇದು ದಂಡಿಯ ಕಾವ್ಯಾದರ್ಶದಲ್ಲಿರುವ ಗುಣ, ಮಾರ್ಗ, ದೋಷ, ಅಲಂಕಾರ ಪ್ರಕ್ರಿಯೆಗಳನ್ನೆಲ್ಲ ಕನ್ನಡಕ್ಕೆ ಅನ್ವಯಿಸಿ ಹೇಳಲು ಮುಖ್ಯವಾಗಿ ಹೊರಟಿದ್ದರೂ ಪೀಠಿಕೆಯಾಗಿ ಕನ್ನಡದ ವೈಶಿಷ್ಟ್ಯಗಳನ್ನು ಕೂಡ ಪ್ರತಿಪಾದಿಸಿದೆ. ಬಾಣ, ಕಾಳಿದಾಸ ಮುಂತಾದ ಸಂಸ್ಕೃತ ಮಹಾಕವಿಗಳಂತೆ, ವಿಮಲೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತಾದಿ ಕನ್ನಡ ಗದ್ಯಕಾರರನ್ನೂ ಶ್ರೀವಿಜಯ ಕವೀಶ್ವರ ಪಂಡಿತ ಚಂದ್ರ ಲೋಕಪಾಲಾದಿ ಕನ್ನಡ ಪದ್ಯಕಾರರನ್ನೂ ಲೇಖಕ ಸ್ಮರಿಸಿದ್ದಾನೆ. ಚತ್ತಾಣ, ಬೆದಂಡೆಗಳೆಂಬ ಕನ್ನಡದ ವಿಶಿಷ್ಟ ಕಾವ್ಯಪ್ರಕಾರಗಳನ್ನೂ ಉಲ್ಲೇಖಿಸಿದ್ದಾನೆ. ಕಂದವೃತ್ತಗಳು ಕಡಿಮೆಯಾಗಿ ದೇಶೀಯ ಛಂದೋಜಾತಿಗಳು ಹೆಚ್ಚಾಗಿರುವ ಕಾವ್ಯವೇ ಬೆದಂಡೆ; ಕಂದವೃತ್ತಗಳು ಹೆಚ್ಚಾಗಿ ಚೌಪದಿ, ಗೀತಿಕೆ ತ್ರಿಪದಿಗಳು ಕಡಿಮೆಯಿರುವುದು ಚತ್ತಾಣವೆಂದು ತೋರುತ್ತದೆ.ಕವಿರಾಜಮಾರ್ಗಕಾರ ಶಬ್ದ ಪ್ರಯೋಗದಲ್ಲಿ ಸಂಸ್ಕೃತ ಕನ್ನಡಗಳನ್ನು ಹೆಚ್ಚಾಗಿ ಬೆರೆಸುವುದು ತಪ್ಪೆಂದಿದ್ದಾನೆ. ಉಚ್ಚೈ: ಮುಹುರ್ಮುಹು: ಎಂಬ ಕರ್ಣ ಕರ್ಕಶ ಅವ್ಯಯಗಳ ಬದಲು ಬಹಿರುದ್ಯಾನ ಮುಂತಾಗಿ ಕಿವಿಗಿಂಪಾದ ಅವ್ಯಯ ಪುರ್ವಪದಗಳನ್ನು ಬಳಸಬೇಕೆಂದಿದ್ದಾನೆ. ಅರಸುಕುಮಾರ ಮುಂತಾದ ಅರಿಸಮಾಸಗಳು ತ್ಯಾಜ್ಯವೆಂದಿದ್ದಾನೆ.

ಕನ್ನಡಿಗರ ಮೇಲ್ಮೆಯನ್ನೂ ಕನ್ನಡದ ವಿಶಿಷ್ಟ ದೋಷಗಳನ್ನೂ ನಿರೂಪಿಸಿದ ಮೇಲೆ ದಂಡಿ ಹೇಳುವ ಶ್ರುತಿದುಷ್ಟ. ಯತಿಭಂಗ ಮುಂತಾದ ದೋಷಗಳ ಲಕ್ಷ್ಯ-ಲಕ್ಷಣಪುರ್ವಕ ವಿವೇಚನೆ ಗ್ರಂಥಗಳಲ್ಲಿ ವಿಸ್ತಾರವಾಗಿ ಬಂದಿದೆ. ಇಲ್ಲಿಯೇ ಕಾರಕ, ವಚನ, ಗುರುಲಘು-ವಿಪರ್ಯಯ, ಸಮುಚ್ಚಯ, ವಿಕಲ್ಪ, ಅವಧಾರಣೆ, ವಿಶಂಕ ಮುಂತಾದ ವ್ಯಾಕರಣ ದೋಷಗಳ ಪ್ರತಿಪಾದನೆಯೂ ಸ್ಪಷ್ಟವಾಗಿ ಬರುತ್ತದೆ. ನುಡಿಗಳು ಬಗೆದುದನ್ನು ಬಗೆದಂತೆ ಒಡಮೂಡಿಸುತ್ತಿರಬೇಕು; ಕನ್ನಡ ನಾಣ್ಣುಡಿಯ ಬೆಡಗು ಬೆಳಗುವಂತಿರಬೇಕು; ಕಿವಿಗೆ ಹಿತವಲ್ಲದ ವಿಕಟಾಕ್ಷರಗಳು ಬರಲಾಗದು; ಸಂಸ್ಕೃತ ಪದಾವಲಿ ಹವಣಾಗಿ ಬರಬೇಕು; ಮನೋಹರವಾದ ಹೂಗಳ ಮಾಲೆಯಂತೆ ಕವಿಯ ಶೈಲಿ ಕಂಗೊಳಿಸಬೇಕು-ಎಂದು ಮೊದಲ ಪರಿಚ್ಛೇದದ ಕಡೆಗೆ ತನ್ನ ಸಿದ್ಧಾಂತವನ್ನು ಸಂಗ್ರಹಿಸುತ್ತಾನೆ.

ಶಬ್ದಾಲಂಕಾರಗಳ[ಬದಲಾಯಿಸಿ]

ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರಗಳ ವಿವೇಚನೆ ಬಂದಿದೆ. ಇಲ್ಲಿಯೂ ಕನ್ನಡದ ಶಬ್ದ ಸೌಂದರ್ಯದ ಬಗೆಗೆ ಕವಿಯ ಸ್ವತಂತ್ರ ವಿಚಾರಗಳಿವೆ. ಇಲ್ಲಿಗಿದು ತಕ್ಕುದು ಎಂಬ ವಿವೇಚನೆಯಿಂದ ಮೃದುಪದವಿಡಬೇಕು. ಅರ್ಥಾನುಗುಣ್ಯ ತಪ್ಪಿದರೆ ಮುತ್ತನ್ನೂ ಮೆಣಸನ್ನೂ ಕೋದಂತೆ, ಲಘುವಿನ ಮುಂದೆ ಸಂಯುಕ್ತಾಕ್ಷರ ಬಂದರೆ ಹಿತವಲ್ಲ; ಕೂಸಿನ ತಲೆಯ ಮೇಲೆ ಭಾರ ಹೇರಿದಂತಾಗುತ್ತದೆ; (ಉದಾಹರಣೆ : ಬರಿಸಿ ಕ್ಷಿತಿಪತಿಯಂ), ಅನೇಕ ವಿಶೇಷಣಗಳು ಸರಮಾಲೆಯಂತೆ ಬಂದರೆ ಸಲ್ಲದು, ಗಡ, ಮೇಣ್ ಮುಂತಾದ ಪಾದ ಪುರಣಗಳು ಅತಿಯಾಗಬಾರದು, ಕನ್ನಡದಲ್ಲಿ ಬಗೆಬಗೆಯ ಪ್ರಾಸಗಳೇ ಮೋಹಕ ಮುಂತಾದ ವೈಶಿಷ್ಟ್ಯಗಳನ್ನೇ ಕವಿರಾಜಮಾರ್ಗಕಾರ ಮೊದಲು ಪ್ರತಿಪಾದಿಸಿದ್ದಾನೆ. ಅನಂತರ ಮಾರ್ಗಗಳ ನಿರೂಪಣೆ ಬರುತ್ತದೆ. ವೈದರ್ಭಿಯನ್ನು ದಕ್ಷಿಣ ಮಾರ್ಗವೆಂದೂ ಗೌಡಿಯನ್ನು ಉತ್ತರಮಾರ್ಗವೆಂದೂ ಹೆಸರಿಸಲಾಗಿದೆ. ಸ್ವಭಾವೋಕ್ತಿ ಮೊದಲನೆಯದರ ವೈಶಿಷ್ಟ್ಯ, ವಕ್ರೋಕ್ತಿ ಎರಡನೆಯದರಲ್ಲಿ ಹೆಚ್ಚು, ಸಮ, ಮಧುರ ನಿಬಿಡ, ಕಾಂತ, ಸುಕುಮಾರ, ಸಮೂಹಿತ, ಪ್ರಸನ್ನ, ಉದಾರ, ಅಗ್ರಾಮ್ಯ, ಓಜಸ್ವಿ-ಈ ಹತ್ತು ಗುಣಗಳೂ ಮೊದಲನೆಯದರಲ್ಲಿ ಸಹಜಸುಂದರವಾಗಿ ಮಾರ್ಪೊಳೆಯುತ್ತವೆ. ; ಎರಡನೆಯದರಲ್ಲಿ ಇವುಗಳ ವಿಪರ್ಯಯ ಅಥವಾ ಅತಿಶಯ ಕಲ್ಪನೆಯೇ ಚಮತ್ಕಾರಕ. ದೆಸೆಗಳ್ ವಿಳಾಸಮಾದಂ, ಕೆಸರಿಂ ಪಿಂಗಿತ್ತು ಧರಣಿ, ತಿಳಿದವು ಕೊಳಗಳ್-ಎನ್ನುವುದು ದಕ್ಷಿಣಮಾರ್ಗಕ್ಕೆ ಉದಾಹರಣೆ. ಅದನ್ನೇ ಧವಳ ಜಳಧರ ಕುಳಾಕುಳಮವಿಕಳಮಂಬರತಳಂ ವಿನೀಳಚ್ಛಾಯಂ -ಎಂದರೆ ಉತ್ತರಮಾರ್ಗವಾಗುತ್ತದೆ. ಈ ಗುಣಗಳು ರಸವಿಶೇಷದಲ್ಲಿ ಅನ್ವಯಿಸುವುದು ಹೇಗೆಂಬುದನ್ನೂ ತೋರಿಸಿದ್ದಾನೆ; ಸ್ಫುಟೋಕ್ತಿಯಿಂದ ವೀರರಸ, ಮೃದೂಕ್ತಿಯಿಂದ ಕರುಣರಸ, ನಿಬಿಡೋಕ್ತಿಯಿಂದ ಅದ್ಭುತರಸ, ಸುಕುಮಾರೋಕ್ತಿಯಿಂದ ಶೃಂಗಾರ ರಸ-ಇತ್ಯಾದಿ, ಕಡೆಗೆ ದಂಡಿ ಹೇಳಿರುವ ಯಮಕ, ಚಿತ್ರಕಾವ್ಯ ಭೇದಗಳ ನಿರೂಪಣೆಯಿಂದ ಪರಿಚ್ಛೇದ ಮುಗಿಯುತ್ತದೆ.

ಮೂರನೆಯ ಪರಿಚ್ಛೇದದಲ್ಲಿ ಜಾತಿಯಿಂದ (ಸ್ವಭಾವೋಕ್ತಿ) ಹಿಡಿದು ಭಾವಿಕದವರೆಗೆ 35 ಅರ್ಥಾಲಂಕಾರಗಳನ್ನು ದಂಡಿ ಭಾಮಹರ ಮೇಲ್ಪಂಕ್ತಿಯನ್ನನುಸರಿಸಿ ಲಕ್ಷ್ಯ ಲಕ್ಷಣಪುರ್ವಕವಾಗಿ ವಿವರಿಸಲಾಗಿದೆ. ಧ್ವನಿಯನ್ನು 36ನೆಯ ಅಲಂಕಾರವೆನ್ನಲಾಗಿದೆ. ಕಡೆಗೆ ಗ್ರಂಥಾಂತ್ಯದಲ್ಲಿ ಕಾವ್ಯದ ಅಷ್ಟಾದಶ ವರ್ಣನೆಗಳ ವಿವರಗಳನ್ನು ಕೊಡಲಾಗಿದೆ. ಹೀಗೆ ಕನ್ನಡ ಭಾಷೆಯ ಅಂತಸ್ಸತ್ತ್ವವನ್ನು ಮರೆಯದೆ, ಸಂಸ್ಕೃತದ ಆದರ್ಶಗಳ ಅಗತ್ಯವನ್ನು ತೃಣೀಕರಿಸದೆ, ಮುಂದಿನ ಕವಿಗಳಿಗೂ ಲಾಕ್ಷಣಿಕರಿಗೂ ಮಾರ್ಗದರ್ಶನ ಮಾಡಿದ ಮಹತ್ತ್ವ ಕವಿರಾಜಮಾರ್ಗಕ್ಕೆ ಸಲ್ಲುತ್ತದೆ. ಗ್ರಂಥದಲ್ಲಿ ಕಂದಪದ್ಯಗಳು ಹೆಚ್ಚು. ಅಲ್ಲಲ್ಲಿ ವೃತ್ತಗಳೂ ಇವೆ. ಎಲ್ಲಿಯೂ ಸಾಹಿತ್ಯಗುಣಕ್ಕೆ ಲೋಪವಿಲ್ಲ.

ಛಂದಶ್ಶಾಸ್ತ್ರ ಗ್ರಂಥ[ಬದಲಾಯಿಸಿ]

ಮೊದಲನೆಯ ನಾಗವರ್ಮನ ಛಂದೋಬುಧಿ (ಪ್ರ.ಶ. 10-11ನೆಯ ಶತಮಾನಗಳ ಮಧ್ಯ) ಮುಖ್ಯವಾಗಿ ಛಂದಶ್ಶಾಸ್ತ್ರ ಗ್ರಂಥ. ಅದರಲ್ಲಿ ಸಮವೃತ್ತಗಳು, ಮಾತ್ರಾಗಣ ವೃತ್ತಗಳು, ಕಂದಾದಿಗಳು, ಕರ್ನಾಟವಿಷಯಕ ಜಾತಿ, ಷಟ್ಪ್ರತ್ಯಯಗಳ ವಿವರಣೆ ವಿಸ್ತಾರವಾಗಿ ಬರುವಂತೆ ಕಾವ್ಯದೋಷಗಳ ಉಲ್ಲೇಖವೂ ಬರುತ್ತದೆ ; ಪ್ರಾಸಗಳ ನೂತನ ನಿರೂಪಣೆಯೂ ಇದೆ.

ಎರಡನೆಯ ನಾಗವರ್ಮನ ಕಾವ್ಯಾವಲೋಕನ (ಪ್ರ.ಶ. 12ನೆಯ ಶತಮಾನ) ನಿಜವಾಗಿಯೂ ಮುಂದಿನ ಮಹತ್ತ್ವದ ಗ್ರಂಥವೆನ್ನಬೇಕು. ವಾಮನ, ಉದ್ಭಟ, ರುದ್ರಟ, ರಾಜಶೇಖರರು ಸಂಸ್ಕೃತ ಅಲಂಕಾರಶಾಸ್ತ್ರದಲ್ಲಿ ಮತ್ತಷ್ಟು ಪರಿಷ್ಕರಿಸಿದ್ದ ನೂತನಾಂಶಗಳನ್ನೆಲ್ಲ ಕ್ರೋಡೀಕರಿಸಿಕೊಂಡು ಪಂಪನೇ ಮೊದಲಾದ ಪ್ರಸಿದ್ಧ ಕನ್ನಡ ಕವಿಗಳಿಂದಲೇ ತನ್ನ ಲಕ್ಷ್ಯಗಳನ್ನೆಲ್ಲ ಆಯ್ದುಕೊಂಡು, ಕನ್ನಡ ಕಾವ್ಯಮೀಮಾಂಸೆಯ ಸರ್ವೋತ್ತಮ ಗ್ರಂಥವೆನಿಸುವಂತೆ ತನ್ನ ಗ್ರಂಥವನ್ನು ನಾಗವರ್ಮ ರಚಿಸಿದ್ದಾನೆ. ಮಾರ್ಗದ್ವಯದ ಬದಲು ರೀತಿತ್ರಯವನ್ನು ವಾಮನನಂತೆ ಹೇಳಿದ್ದಾನೆ. ಉದ್ಭಟ ಹೇಳುವ ಕಾವ್ಯವೃತ್ತಿಗಳನ್ನು ಪ್ರಸ್ತಾಪಿಸಿದ್ದಾನೆ. ರುದ್ರಟನಂತೆ ರಸಗಳನ್ನು ವಿವರಿಸಿದ್ದಾನೆ. ರಾಜಶೇಖರನ ರೀತಿಯಲ್ಲಿ ಕವಿಸಮಯಗಳನ್ನು ಮೊಟ್ಟಮೊದಲಿಗೆ ನಿರೂಪಿಸಿದ್ದಾನೆ. ಕಾವ್ಯರಹಸ್ಯದ ಬಗೆಗೂ ನಾಗವರ್ಮನಿಗೆ ರಸವೇ ಜೀವವೆಂಬ ಸ್ಪಷ್ಟ ಕಲ್ಪನೆಯಿದ್ದಿತು. ರುದ್ರಟ ಮಾತ್ರ ಹೇಳಿರುವ ಹತ್ತಾರು ಹೊಸ ಅಲಂಕಾರಗಳನ್ನು ಪ್ರತಿಪಾದಿಸಿದ್ದಾನೆ. ಹೀಗೆ ಕವಿರಾಜಮಾರ್ಗದಲ್ಲಿ ಆರಂಭವಾದ ಕನ್ನಡ ಕಾವ್ಯಮೀಮಾಂಸೆ ಕಾವ್ಯಾವಲೋಕದಲ್ಲಿ ಶಿಖರವನ್ನು ಮುಟ್ಟಿತೆನ್ನಬಹುದು.

ಉದಯಾದಿತ್ಯಾಲಂಕಾರ[ಬದಲಾಯಿಸಿ]

ಅದಕ್ಕೂ ಮುಂದಿನ ಗ್ರಂಥಗಳೆಂದರೆ ಉದಯಾದಿತ್ಯನೃಪನ ಉದಯಾದಿತ್ಯಾಲಂಕಾರ (ಪ್ರ.ಶ. 12ನೆಯ ಶತಮಾನ), ಕವಿಕಾಮನ ಶೃಂಗಾರರತ್ನಾಕರ (ಪ್ರ.ಶ. ಸು. 1200), ಮಾಧವನ ಮಾದವಾಲಂಕಾರ (ಪ್ರ.ಶ. 1500), ಇವಲ್ಲಿ ದಂಡಿಯಿಂದ ಸಂಗೃಹೀತವಾದ ವಿಚಾರವೇ ಹೊರತು ಸಿದ್ಧಾಂತದ ಹೊಸ ವಿವೇಚನೆ ಕಾಣುವುದಿಲ್ಲ. ಬೇರೆ ಉದಾಹರಣೆಗಳಿರುವುದಷ್ಟೇ ವಿಶೇಷ. ಸಾಳ್ವನ ರಸರತ್ನಾಕರ ಮತ್ತು ಶಾರದಾವಿಲಾಸಗಳಲ್ಲಿ (ಪ್ರ.ಶ. 1500) ಮಾತ್ರ ಮಮ್ಮಟಾದಿಗಳ ವಿಸ್ತೃತ ರಸವಿವೇಚನೆ ಕನ್ನಡದಲ್ಲಿ ಮೊದಲಿಗೆ ಬರುತ್ತದೆ ; ಧ್ವನಿಯ ವಿವೇಚನೆಗೂ ಎಡೆ ದೊರೆಯುತ್ತದೆ. ಮಿಕ್ಕ ಗ್ರಂಥಗಳು-ತಿಮ್ಮನ ಅಲಂಕಾರ ರಸಸಂಗ್ರಹ (ಪ್ರ.ಶ. 1600), ತಿರುಮಲಾರ್ಯನ ಅಪ್ರತಿಮ ವೀರಚರಿತ (ಪ್ರ.ಶ. 1650), ಚಾಮೇಂದ್ರನ ಕರ್ನಾಟಕ ಕುವಲಯಾನಂದ (ಪ್ರ.ಶ. 18ನೆಯ ಶತಮಾನ), ಅಳಿಯ ಲಿಂಗರಾಜನ ನರಪತಿಚರಿತ (ಪ್ರ.ಶ. 19ನೆಯ ಶತಮಾನ) ಇವೆಲ್ಲ ವಿದ್ಯಾನಾಥ, ಅಪ್ಪಯ್ಯ ದೀಕ್ಷಿತ ಮುಂತಾದ ಸಂಸ್ಕೃತ ಲಾಕ್ಷಣಿಕರ ಅನುಕರಣಗಳಾದ ಸಂಕಲನ ಗ್ರಂಥಗಳಷ್ಟೇ ಎನ್ನಬೇಕು.[೧]

ಇಪ್ಪತ್ತನೆಯ ಶತಮಾನದಲ್ಲಿ ಎ. ಆರ್. ಕೃಷ್ಣಶಾಸ್ತ್ರಿಗಳ ಕನ್ನಡ ಕೈಪಿಡಿಯ ಅಲಂಕಾರಶಾಸ್ತ್ರ ವಿಭಾಗ, ತೀ. ನಂ. ಶ್ರೀಕಂಠಯ್ಯನವರ ಭಾರತೀಯಕಾವ್ಯ ಮೀಮಾಂಸೆ, ಕೆ. ಕೃಷ್ಣಮೂರ್ತಿಗಳ ಕನ್ನಡ ಧ್ವನ್ಯಾಲೋಕ ಮುಂತಾದ ಗ್ರಂಥಗಳು, ಪ್ರಭುಶಂಕರ ಕನ್ನಡದಲ್ಲಿ ಭಾವಗೀತೆ, ಶಿವರುದ್ರಪ್ಪನವರ ಸೌಂದರ್ಯ ಸಮೀಕ್ಷೆ ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ತೌಲನಿಕ ಕಾವ್ಯಮೀಮಾಂಸೆ ಈ ಮೊದಲಾದವು ಈ ಕ್ಷೇತ್ರದಲ್ಲಿ ಬಂದಿರುವ ಸಮರ್ಥ ಹಾಗೂ ಶಾಸ್ತ್ರೀಯ ನಿರೂಪಣೆಗಳಾಗಿವೆ (

ಉಲ್ಲೇಖಗಳು[ಬದಲಾಯಿಸಿ]