ಕಂಬುಜದ ಶಾಸನಗಳು
ಕಂಬುಜದ ಶಾಸನಗಳು : ಕಂಬುಜದ ಶಾಸನಗಳು ಸಂಸ್ಕೃತ ಹಾಗೂ ಖ್ಮೆರ್ (ಕಾಂಬೋಡಿಯದ ದೇಶಭಾಷೆ) ಭಾಷೆಗಳಲ್ಲಿ ರಚಿತವಾಗಿವೆ. ಇಲ್ಲಿಯವರೆವಿಗೂ ದೊರೆತಿರುವ ಶಾಸನಗಳು ಪ್ರ.ಶ. 5ನೆಯ ಶತಮಾನದಿಂದ 14ನೆಯ ಶತಮಾನದವರೆವಿಗೂ ಹರಡಿವೆ. ಖ್ಮೆರ್ ಭಾಷೆಯ ಶಾಸನಗಳನ್ನು ಗದ್ಯದಲ್ಲಿ ಬರೆಯಲಾಗಿದೆ. ಅವು ಸಂಸ್ಕೃತ ಶಾಸನಗಳಲ್ಲಿ ನಿರ್ದೇಶಿಸಿದ ದಾನಧರ್ಮಗಳ ವಿವರಗಳನ್ನೂ ಇತರ ಪಾರಿಭಾಷಿಕಾಂಶಗಳನ್ನೂ ತಿಳಿಸುತ್ತವೆ. ಸಂಸ್ಕೃತ ಶಾಸನಗಳನ್ನು ಅನುಷ್ಟುಪ್ ಮತ್ತು ಇತರ ಛಂದಸ್ಸುಗಳಲ್ಲಿ ರಚಿಸಲಾಗಿದೆ. ಅವುಗಳ ಭಾಷೆ ನಿರ್ದಿಷ್ಟವಾದ ಕಾವ್ಯಶೈಲಿಯಲ್ಲಿದ್ದು ಉತ್ತಮ ಸಾಹಿತ್ಯಾಂಶಗಳಿಂದ ಕೂಡಿದೆ. ಸಾಮಾನ್ಯವಾಗಿ ಈ ಶಾಸನಗಳು ರಾಜರ ವಂಶಾವಳಿ, ಪ್ರಶಸ್ತಿ, ಭವ್ಯವಾದ ಸ್ಮಾರಕಗಳ ನಿರ್ಮಾಣ ಹಾಗೂ ಅನೇಕ ವಿಧವಾದ ದಾನಧರ್ಮಗಳನ್ನು ಕುರಿತು ತಿಳಿಸುತ್ತವೆ. ಅಲ್ಲದೆ ಭಾರತದ ಪುರಾಣ, ಇತಿಹಾಸ, ದರ್ಶನ, ರಾಜನೀತಿ ಮತ್ತು ಲಲಿತಕಲೆಗಳ ವಿಷಯವಾಗಿ ಬೆಳಕು ಚೆಲ್ಲುತ್ತವೆ. ಈ ಶಾಸನಗಳಲ್ಲಿ ಪ್ರತ್ಯೇಕವಾಗಿ ರಾಮಾಯಣ, ಭಾರತ, ಮನುಸ್ಮೃತಿ ಮುಂತಾದ ಗ್ರಂಥಗಳ ಉಲ್ಲೇಖವಿದೆ. ಶೈವ, ವೈಷ್ಣವ, ಬೌದ್ಧಧರ್ಮ ತತ್ತ್ವಗಳ, ವರ್ಣಾಶ್ರಮ ಧರ್ಮಗಳ, ಯಜ್ಞಯಾಗಾದಿಗಳ, ವಿದ್ಯಾಶ್ರಮಗಳ ಹಾಗೂ ವೈದ್ಯಶಾಲೆಗಳ ಬಗೆಗೂ ಇವು ವಿಶದವಾದ ಮಾಹಿತಿ ನೀಡುತ್ತವೆ.
ಸಂಸ್ಕೃತ ಶಾಸನ
[ಬದಲಾಯಿಸಿ]ಸಂಸ್ಕೃತದ ಈ ಶಾಸನಗಳನ್ನು ರಚಿಸಿದವರು ನಿಸ್ಸಂದೇಹವಾಗಿ ಭಾರತದಿಂದ ಬಂದ ಪ್ರಸಿದ್ಧ ಪಂಡಿತರು ಮತ್ತು ಕಂಬುಜದ ಸ್ಥಳೀಯ ಪ್ರಬುದ್ಧ ವಿದ್ವಾಂಸರು. ಇವನ್ನು ಕಲ್ಲುಗಳ ಮೇಲೆ ಕೆತ್ತಿದವರೂ ಸಂಸ್ಕೃತತಜ್ಞರೆಂದು ವಿಮರ್ಶಕರು ಅಭಿಪ್ರಾಯಪಟ್ಟಿರುತ್ತಾರೆ. ಇವುಗಳಲ್ಲಿ ಕೆಲವು ಶಾಸನಗಳನ್ನು ಉದಾಹರಿಸಬಹುದಾಗಿದೆ: ಧರ್ಮಶಾಸ್ತ್ರ ಅರ್ಥಶಾಸ್ತ್ರಗಳಲ್ಲಿ ಪರಿಣತರಾದ ವಿದ್ವಾಂಸರನ್ನು ಭವವರ್ಮ ಸಲಹೆಗಾರರನ್ನಾಗಿ ಪಡೆದಿದ್ದನೆಂದು ಆಂಗ್ ಚುಮ್ನಿಕ್ ಶಾಸನ (6ನೆಯ ಶತಮಾನದ ಉತ್ತರಾರ್ಧ) ತಿಳಿಸುತ್ತದೆ. ವಿದ್ಯಾವಿಶೇಷನೆಂಬ ಬ್ರಾಹ್ಮಣನೊಬ್ಬ ವ್ಯಾಕರಣ. ನ್ಯಾಯ ಮತ್ತು ಬೌದ್ಧ ದರ್ಶನಗಳಲ್ಲಿ ಸುವಿಖ್ಯಾತನಾದ ಪಂಡಿತನೆಂದು ಸಾಂಬೊರ್ ಪ್ರಕುಕ್ ಶಾಸನ (627) ತಿಳಿಸುತ್ತದೆ. ದುರ್ಗಸ್ಯಾಮಿ ಎಂಬ ಬ್ರಾಹ್ಮಣ, ರಾಜನಾದ ಈಶಾನವರ್ಮನ (616-35) ಮಗಳನ್ನು ವಿವಾಹವಾಗಿದ್ದನೆಂದೂ ತೈತ್ತಿರೀಯ ಶಾಖೆಯ ಮಂತ್ರ, ಬ್ರಾಹ್ಮಣ ಹಾಗೂ ಸೂತ್ರಗಳಲ್ಲಿ ನಿಷ್ಣಾತನಾಗಿದ್ದನೆಂದೂ ಸಾಂಬೊರ್ ಪ್ರಿಕುಕ್ನ ಮತ್ತೊಂದು ಶಾಸನ ವಿಶದೀಕರಿಸುತ್ತದೆ. ನ್ಡಾಕ್ಕಾಕ್ ಥೊಯ್ ಶಾಸನ (1052) ದೀರ್ಘವಾದ ಸಂಸ್ಕೃತ ಶಾಸನಗಳಲ್ಲಿ ಒಂದಾಗಿದ್ದು ಬಹಳ ಮುಖ್ಯವಾದುದಾಗಿದೆ. ಇದು ದೇವರಾಜ ಧರ್ಮಪದ್ಧತಿಯನ್ನು ತಿಳಿಸುತ್ತದೆ ಮತ್ತು ಎರಡನೆಯ ಜಯವರ್ಮನಿಂದ (802-50) ಆಹ್ವಾನಿತನಾದ ಹಿರಣ್ಯದಾಮನೆಂಬ ಪುರೋಹಿತ ಬೋಧಿಸಿದ ತುಂಬುರು ತಂತ್ರದ ನಾಲ್ಕು ಮುಖಗಳಾದ ಶಿರಚ್ಛೇದ, ವಿನಾಶಿಕ, ಸಮ್ಮೋಹ ಮತ್ತು ನ್ಯಾಯೋತ್ತರಗಳೆಂಬ ನಾಲ್ಕು ಶಾಸ್ತ್ರಗಳನ್ನು ಪ್ರತಿಪಾದಿಸುತ್ತದೆ. ಹೀಗೆ ಕಂಬುಜದ ಶಾಸನಗಳು ವೇದ, ಶಾಸ್ತ್ರ, ದರ್ಶನ, ತಂತ್ರ, ಕಾಮಸೂತ್ರ, ಅರ್ಥಶಾಸ್ತ್ರ, ಮನುಸ್ಮೃತಿ ಮಹಾಭಾಷ್ಯ ಮುಂತಾದವನ್ನು ವಿಪುಲವಾಗಿ ವಿವರಿಸುವುದಲ್ಲದೆ ಕಂಬುಜದಲ್ಲಿ ಭಾರತದ ಸಂಪ್ರದಾಯ, ಆಚಾರ ಮತ್ತು ವ್ಯವಹಾರಗಳ ಅಸ್ತಿತ್ವವನ್ನು ನಿರೂಪಿಸುತ್ತ ಭಾರತೀಯ ಸಂಸ್ಕೃತಿಯ ಅಚ್ಚಳಿಯದ ಪ್ರಭಾವವನ್ನು ಪ್ರತಿಫಲಿಸುತ್ತವೆ.[೧]
ಇತಿಹಾಸ
[ಬದಲಾಯಿಸಿ]6 ಮತ್ತು 8ನೆಯ ಶತಮಾನಗಳ ಮಧ್ಯಕಾಲದ ಕಂಬುಜದ ಶಾಸನಗಳ ಲಿಪಿ, ಶೈಲಿ ಮುಂತಾದವನ್ನು ಸಮಕಾಲೀನವಾದ ದಕ್ಷಿಣ ಭಾರತದ ಪಲ್ಲವ ಹಾಗೂ ಬಾದಾಮಿ ಚಳುಕ್ಯರ ಶಾಸನಗಳೊಡನೆ ಹೋಲಿಸಬಹುದಾಗಿದೆ. ಉದಾ: ಕಂಬುಜದ ಕೋಡಿ ಆಂಗ್ ಚುಮ್ನಿಕ್ ಶಾಸನಕ್ಕೂ (629) ಭಾರತದ ಬಾದಾಮಿಯ ಮಂಗಳೀಶನ ಶಾಸನಕ್ಕೂ (578) ಪಟ್ಟಿದಕಲ್ಲಿನ ಎರಡನೆಯ ವಿಕ್ರಮಾದಿತ್ಯನ ಶಾಸನಗಳಿಗೂ (8ನೆಯ ಶತಮಾನದ ಮಧ್ಯಭಾಗ) ಲಿಪಿ, ಭಾಷೆ ಹಾಗೂ ವ್ಯಾಕರಣ ಪ್ರಕ್ರಿಯೆಗಳಲ್ಲಿ ಹೋಲಿಕೆಯಿದೆ.6-9ನೆಯ ಶತಮಾನದ ಮಧ್ಯಕಾಲದ ಕಂಬುಜದ ಶಾಸನಗಳ ಲಿಪಿಗೂ ಅದೇ ಕಾಲದ ದಕ್ಷಿಣ ಭಾರತದ ಪಲ್ಲವ ಹಾಗೂ ವೇಂಗಿ (ಕೃಷ್ಣಾ ಗೋದಾವರಿಗಳ ಮಧ್ಯದೇಶ) ಲಿಪಿಗಳಿಗೂ ಹೆಚ್ಚಿನ ಅಂತರವಿಲ್ಲವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಯಶೋವರ್ಮನ 9ನೆಯ ಶತಮಾನದ ಶಾಸನಗಳ ಲಿಪಿ ಉತ್ತರ ಭಾರತದ ಆ ಕಾಲದ ನಾಗರೀ ಲಿಪಿಯನ್ನು ಹೋಲುತ್ತದೆಂಬುದು ಪಂಡಿತರ ಅಭಿಪ್ರಾಯ.ಕಂಬುಜದ ಶಾಸನಗಳು 7ನೆಯ ಶತಮಾನದಿಂದ ಸಂಸ್ಕೃತ ಹಾಗೂ ಖ್ಮೆರ್ ಭಾಷೆಗಳಲ್ಲಿ ಏಕಕಾಲದಲ್ಲಿ ರಚಿತವಾದುವು. ಇದೇ ಕಾಲದಲ್ಲಿ ದಕ್ಷಿಣ ಭಾರತದಲ್ಲೂ ಶಾಸನಗಳನ್ನು ಸಂಸ್ಕೃತ ಹಾಗೂ ದೇಶಭಾಷೆಗಳಲ್ಲಿ ಬರೆಯಲಾಯಿತು ಎಂಬುದನ್ನು ಈ ಸಂದರ್ಭದಲ್ಲಿ ಗುರುತಿಸಬಹುದಾಗಿದೆ. ಸಮಾಜದ ಎಲ್ಲ ವರ್ಗಗಳ ಜನರಿಗೂ ಇವು ತಿಳಿಯಲೆಂದು ಬಹುಶಃ ಈ ರೀತಿ ದ್ವಿಭಾಷಾಪದ್ಧತಿಯನ್ನು ಅನುಸರಿಸಲಾಯಿತೆಂದು ಅಭಿಪ್ರಾಯಪಡಲಾಗಿದೆ. ಹೀಗೆ ರಚಿತವಾದ ಖ್ಮೆರ್ ಶಾಸನಗಳಲ್ಲಿ ಸಂಸ್ಕೃತ ಪದಗಳ ಪ್ರಭಾವವನ್ನು ಕಾಣಬಹುದಾಗಿದೆ. ಕಂಬುಜದ ಶಾಸನಗಳನ್ನು ಮೊದಲ ಬಾರಿಗೆ ಬೆಳಕಿಗೆ ತಂದ ಗೌರವ ಎಚ್.ಕೆರ್ನನಿಗೆ ಸಲ್ಲುತ್ತದೆ. ಈತ ಜೂಲ್ಸ್ ಹಾರ್ಮಂಡನಿಂದ ತಯಾರಿಸಲಾದ ಶಾಸನಗಳ ಪಡಿಯಚ್ಚುಗಳನ್ನು ಓದಿ ಪರಿಷ್ಕರಿಸಿದ. ಆದರೆ ಪ್ರಪ್ರಥಮವಾಗಿ ಕ್ರಮಬದ್ಧವಾಗಿ ಕಂಬುಜದ ಶಾಸನಗಳನ್ನು ಸಂಗ್ರಹಿಸಿದವ ಎಂ.ಐಮೋಸರ್. ಎಂ.ಎ.ಬಾರ್ತ್ ಮತ್ತು ಎಂ.ಎ.ಬರ್ಗೇನ್ ಇವನ್ನು ಸಂಪಾದಿಸಿ ಎರಡು ಭಾಗಗಳಲ್ಲಿ ಪ್ರಕಟಿಸಿದರು.
ಕಂಬುಜದ ಖ್ಮೆರ್ ಭಾಷೆಯ ಶಾಸನ
[ಬದಲಾಯಿಸಿ]ಕಂಬುಜದ ಖ್ಮೆರ್ ಭಾಷೆಯ ಶಾಸನಗಳನ್ನು ಎಂ.ಏಮೋನೀರ್ ಎಂಬ ವಿದ್ವಾಂಸಲೆ ಕಾಂಬೋಜ್ ಎಂಬ ಉದ್ಗ್ರಂಥದಲ್ಲಿ ಸಂಗ್ರಹಿಸಿ ಮೂರು ಸಂಪುಟಗಳಲ್ಲಿ ಕ್ರಮವಾಗಿ 1900, 1901 ಮತ್ತು 1904ರಲ್ಲಿ ಪ್ರಕಾಶಪಡಿಸಿದೆ. 20ನೆಯ ಶತಮಾನದ ಪ್ರಾರಂಭದಿಂದ ಹಾನಾಯಿಯ ಎಕೋಲ್ ಫ್ರಾನ್ಸೇಸ್ ಸಂಸ್ಥೆ ಎಂ.ಫಿನೋ ಮತ್ತು ಜಿ.ಸೀಡಸ್ ಎಂಬ ಫ್ರೆಂಚ್ ವಿದ್ವಾಂಸರ ನೇತೃತ್ವದಲ್ಲಿ ಕಾಲಾನುಕ್ರಮದಲ್ಲಿ ಬೆಳಕಿಗೆ ಬಂದ ಹೊಸ ಶಾಸನಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಾ ಬಂದಿದೆ.ಹೀಗೆ ಸಂಗ್ರಹಿಸಿದ ಸಂಸ್ಕೃತ ಹಾಗೂ ಖ್ಮೆರ್ ಶಾಸನಗಳನ್ನು ಅತ್ಯಂತ ಸಮರ್ಪಕವಾದ ರೀತಿಯಲ್ಲಿ ಸಂಪಾದಿಸಿದ ಶ್ರೇಷ್ಠ ತಜ್ಞನಾದ ಜಿ.ಸೀಡೆಸ್, ಇವು ನಾಲ್ಕು ಸಂಪುಟಗಳಲ್ಲಿ ಕ್ರಮವಾಗಿ 1937, 1942, 1951 ಮತ್ತು 1952ರಲ್ಲಿ ಪ್ರಕಾಶಗೊಂಡಿವೆ.ಭಾರತದ ಚರಿತ್ರಕಾರರಲ್ಲೊಬ್ಬನಾದ ಆರ್.ಸಿ. ಮಜುಂದಾರ್ ಕಂಬುಜದ ಶಾಸನಗಳು ಎಂಬ ಹೊತ್ತಿಗೆಯನ್ನು ಸಂಪಾದಿಸಿ ಟಿಪ್ಪಣಿಯೊಡನೆ 1953ರಲ್ಲಿ ದಿ ಏಷಿಯನ್ ಸೊಸೈಟಿ, ಕಲ್ಕತ್ತ ಅವರ ವತಿಯಿಂದ ಪ್ರಕಟಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]